Monday, April 25, 2011

ಲೈಫು ಇಷ್ಟೇನಾ ಪುರಂದರ ವಿಠಲ


    ಚಿತ್ರ: ಇಂಟರ್ನೆಟ್ 



"ಕೃಪಯಾ ಬ್ಯಾಂಗಲೋರ್ ಕೋ 
ಜಾನೇವಾಲೇ ಪ್ಯಾಸೆಂಜರ್ಸ್.."
-
ಹೈತಾಪೂರವೆಂಬ 
ಕುಗ್ರಾಸ ಹಳ್ಳಿಗೂ 
ದೆಹಲಿಯ 
ನಿಜಾಮುದ್ದೀನ ಸ್ಟೇಶನ್ನಿಗೂ
ಭಾರತೀಯ ರೈಲ್ವೇದು 
ಒಂದೇ ರೀತಿಯ ಸೇವೆ:
ಒಂದೇ ಧ್ವನಿ
ಒಂದೇ ಏರಿಳಿತ.
ಮಿಕ್ಕಂತೆ 
ಎಲ್ಲಾ differs.
ಎಲ್ಲಾ matters.  
-
ಬರೀ ಕುಡುಗೋಲು 
ಮತ್ತು ಸಿಟ್ಟಿಗೆ
ರೂಪಕವಾಗಿದ್ದ 'ಕೆಂಪು' ಬಣ್ಣ 
ಕಿಂಗ್ ಫಿಷರ್ 
ವಿಮಾನದಲ್ಲಿ ಮಾತ್ರ  
ತಾನೇ ತಾನಾಗಿ 
ಅಮಲೇರಿಸಿಕೊಂಡು
ಕರಗಿದ್ದಂತೂ ಸತ್ಯ.
ಎಲ್ಲೂ ಸಿಟ್ಟಿಲ್ಲ
ಸಿಡುಕಿಲ್ಲ.  
-
ರೈಲಿನಲ್ಲಿ ಕುಳಿತ ಮದುಮಗಳಿಗೆ 
ಅಂಗೈಯಲ್ಲಿನ ಮೆಹಂದಿ 
ಯಾಕೆ ಕೆಂಪೇರಿಲ್ಲ 
ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು 
ತಿನ್ನುತ್ತಿರುವ ಮದುಮಗನಿಗೆ 
ಎಂದೋ ನೋಡಿದ್ದ 
ಯಾರದೋ 
ಮೀನಖಂಡದ ಚಿಂತೆ.
ತೊಟ್ಟ ಬಾಣವ 
ಮತ್ತೇ ತೊಡಬಾರದಂತೆ!
-
ಮೇಲಿರುವವನು ಜಾಣ ಕಣ್ರೀ,
ತುಂಟ ಗಾಳಿ 
ಸೃಷ್ಟಿಸುವವನೂ ಅವನೇ
ತೊಟ್ಟ ಫ್ರಾಕು  
ಹಾರಿಸುವವನೂ ಅವನೇ
ಮತ್ತು
ಇದನ್ನೆಲ್ಲ ನೋಡಬಯಸಿದ 
ನೂರಾರು ಕಣ್ಣುಗಳಲ್ಲಿ 
ಧೂಳು ಚಿಮುಕಿಸುವವನೂ ಅವನೇ.
ಯಾರಿಗೆ 
ಯಾರು ಬೇಲಿ?
ಯಾರಿಗೆ ಯಾರೋ   
ಪುರಂದರ ವಿಠಲ!   

---



Thursday, April 14, 2011

"ಆಡೂ.. ಆಟ ಆಡೂ.."


Courtesy: ರೋನಿ ಸ್ಯಾನ್ 



ಅಂಥದೊಂದು ಹೆಸರಿನ ಆಟ ಜುಹೂ ಬೀಚಿನಲ್ಲಿ ನಡೆಯುತ್ತದೆಯಂತೆ.
ಹಾಗಂತ ಯಾರೋ ಒಂದಿಬ್ಬರು ಹೇಳಿದ್ದು ಮೊನ್ನೆ ಅಲ್ಲಿಗೆ ಹೋದಾಗ ನೆನಪಿಗೆ ಬಂತು.
ವಿಚಿತ್ರವೆಂದರೆ,ಈಜು ಬಾರದ ನನಗೆ ಜುಹೂ ಬೀಚು ಯಾಕೋ ರುದ್ರವಾದಂತೆ,ದರಿದ್ರದಂತೆ 
ಕಾಣಿಸುತ್ತಿತ್ತು.ಮರಳ ದಂಡೆಯ ಮೇಲೆ ಮೈಚಾಚಿ ಮಲಗಿದ್ದ ನೂರೆಂಟು ವಿದೇಶಿ ಲಲನೆಯರು
ನನ್ನಲ್ಲಿದ್ದ ಪೋಲಿ ಮನಸಿಗೆ ಕೊಂಚ ರಮಣೀಯತೆ ತಂದು ಕೊಟ್ಟಿದ್ದೇನೋ ನಿಜ.
ಅಷ್ಟೇ ಅಲ್ಲ, ಅಬ್ಬರಿಸಿ ಬರುತ್ತಿದ್ದ ಸಮುದ್ರದ ತೆರೆಗಳು ನನ್ನನ್ನು ಇನ್ನಿಲ್ಲದಂತೆ ಭಯ ಬೀಳಿಸಿ ಅಲ್ಲಿಂದ ಓಟ ಕೀಳುವಂತೆ 
ಮಾಡುತ್ತಿದ್ದರೂ ಈ ಲಲನೆಯರು ನನ್ನಲ್ಲಿ  ಸುಳ್ಳು ಸುಳ್ಳೇ ಧೈರ್ಯ ಬರುವಂತೆ ಮಾಡಿ ಅಲೆಗಳ ವಿರುದ್ದ ದಾದಾಗಿರಿ 
ಮಾಡಿಸಿದ್ದೂ ಸುಳ್ಳಲ್ಲ..

ಇಂತಿಪ್ಪ  ಆ ಬೀಚಿನ ಒಂದು ಬಂಡೆಯ ಮೇಲೆ ಕುಳಿತಿದ್ದ ಪೋರನೊಬ್ಬ ಪದೇ ಪದೇ ನನ್ನ ಗಮನ ಸೆಳೆಯುತ್ತಿದ್ದ.
ತುಂಬ ಹಸಿದಿದ್ದರಿಂದಲೋ ಏನೋ, ಆತನ ಕಣ್ಣುಗಳೆಲ್ಲ ಬಾಡಿ ಹೋದಂತಿದ್ದವು.ಸುಮ್ಮನೆ ಕುತೂಹಲಕ್ಕೆಂದು 
ಆತನ ಹತ್ತಿರ ಹೋದೆ.ನನ್ನನ್ನು ನೋಡುತ್ತಲೇ ಬಂಡೆಯಿಂದ ಟಣಕ್ಕೆಂದು ಜಿಗಿದ ಪೋರ ಆಸೆಯಿಂದ,
'ಆಟ ನೋಡ್ತೀರಾ ಸಾಬ್,ಸಾವಿನ ಆಟ! ಬರೀ ಹತ್ತು ರೂಪಾಯಿಗೆ ಆಟ ತೋರಿಸ್ತೇನೆ' ಅಂದ.

ಇದೆಂಥ ಆಟ? ಸಾವಿನ ಆಟ? ನನಗ್ಯಾಕೋ ಒಂಥರಾ ದಿಗಿಲಾಯಿತು.ಹೇಳಿಕೇಳಿ ಮುಂಬೈಗೆ ಬಂದಿರುವದೇ ಮೊದಲ ಬಾರಿಗೆ.
ಅಲ್ಲಿನ ಥಳಕು,ಮೋಸ-ವಂಚನೆಗಳನ್ನು ಕೇಳಿ ತಿಳಿದಿದ್ದ ನನಗೆ ಯಾಕೋ ಹುಡುಗನ ಮೇಲೆ ಅನುಮಾನ ಬಂತು.
ತಕ್ಷಣ, 'ಇಲ್ಲಪ್ಪ,ನನಗೆ ಅಂಥದ್ದನ್ನೆಲ್ಲ ನೋಡೋಕೆ ಇಷ್ಟವಿಲ್ಲ..' ಅನ್ನುತ್ತ ಆ ಪೋರನನ್ನು ಆದಷ್ಟು avoid ಮಾಡಿ 
ಮುನ್ನಡೆಯತೊಡಗಿದೆ.

ಹುಡುಗ ಜಪ್ಪಯ್ಯ ಅಂದರೂ ಬಿಡುವಂತೆ ಕಾಣಲಿಲ್ಲ.ಆತನದು ಮತ್ತದೇ ಗೋಗರೆತ:
"ಸಾಬ್,ಬೆಳಿಗ್ಗೆಯಿಂದ ಏನೂ ತಿಂದಿಲ್ಲ.ಕತ್ತಲಾಗುತ್ತ ಬಂತು.ಆಟ ನೋಡಿ ಸಾಬ್,ಬರೀ ಹತ್ತು ರೂಪಾಯಿಗೆ ಸಾವಿನ ಆಟ.." ಅಂದ.
ಥೋ,ಇವನ್ಯಾಕೋ ಬಿಡೋ ಆಸಾಮಿಯಲ್ಲ ಅಂದುಕೊಂಡು ಅಲ್ಲೇ ಹತ್ತಿರವಿದ್ದ ರಾತ್ರಿ ಬೀಟ್ ಪೊಲೀಸನಿಗೆ ಸನ್ನೆ ಮಾಡಿ ಕರೆದೆ.
"ನೋಡಿ..ಈ ಹುಡುಗ ಸುಮ್ನೆ ಆಗ್ಲಿಂದ ಕಾಡ್ತಿದಾನೆ.ಬರೀ ಹತ್ತು ರೂಪಾಯಿಗೆ ಅದೇನೋ ಸಾವಿನ ಆಟ ತೋರಿಸ್ತಾನಂತೆ.." 
ಎಂದು ಅಸಹನೆ ವ್ಯಕ್ತಪಡಿಸಿದೆ.

ಪೋಲೀಸಪ್ಪ ಆ ಹುಡುಗನನ್ನು ಮೇಲಿನಿಂದ ಕೆಳಕ್ಕೊಮ್ಮೆ ಕೆಕ್ಕರಿಸಿ ನೋಡಿದ.
"ಥತ್ತೇರಿ..ಬೆಳಿಗ್ಗೆಯಿಂದ ಇವನದು ಬರೀ ಇದೇ ಆಗೋಯ್ತು. ಇಲ್ಲಿಗೆ ಬರೋ ಟೂರಿಸ್ಟುಗಳ ತಲೆಯೆಲ್ಲ ತಿಂತಾನೆ ಸಾರ್..
ಇಂಥೋರನ್ನ ಸುಮ್ನೆ ಬಿಡಬಾರ್ದು.ಹಿಡ್ಕೊಂಡು ನಾಲ್ಕು ಒದೀಬೇಕು.ಏಯ್,ಹರಾಮ್ ಖೋರ್.." ಅನ್ನುತ್ತ ಪೋಲೀಸಪ್ಪ 
ಆ ಹುಡುಗನತ್ತ ತಿರುಗಿದಾಗ ಪೋರ ಅದ್ಯಾವಾಗಲೋ ಅಲ್ಲಿಂದ ಮಾಯವಾಗಿದ್ದ.
'ಭಾಗ್ ಗಯಾ ಸಾಲಾ..' ಅಂದುಕೊಳ್ಳುತ್ತ ಪೋಲಿಸು ಕೂಡ ಅಲ್ಲಿಂದ ಕಣ್ಮರೆಯಾದ.
ನಾನು ಮಾತ್ರ ನಿಶ್ಚಿಂತೆಯಿಂದ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಪೋರ ದಿಢೀರ್ ಅಂತ ಮತ್ತೇ ಹಾಜರ್!

"ಸಾಬ್ ಸಾಬ್,ಸಾವಿನ ಆಟ..ಬರೀ ಏಳೂವರೆ ರೂಪಾಯಿಗೆ!" ಅಂತ ಕುಂಡೆ ತುರಿಸಿಕೊಳ್ಳುತ್ತಾ ಹಲ್ಕಿರಿದ.       
ನನಗಂತೂ ತಲೆಕೆಟ್ಟುಹೋಯಿತು.
"ತಗೋ ಮಗನೇ..ಅದೇನು ಕಿಸಿತೀಯೋ ಕಿಸಿ!" ಅನ್ನುತ್ತ ಏಳೂವರೆ ಬೀಸಾಕಿದೆ.
ಹುಡುಗನ ಕಣ್ಣಲ್ಲಿ ಸಣ್ಣದೊಂದು ಮಿಂಚು.ಗಬಕ್ಕೆಂದು ಹಣ ಎತ್ತಿಕೊಂಡವನೇ ಅಲ್ಲೇ ದೂರದಲ್ಲಿ ಕುಡಿಯುತ್ತ ಕುಳಿತಿದ್ದ 
ಕುಡುಕನೊಬ್ಬನಿಗೆ ಕೊಟ್ಟುಬಂದ.ಅವನ್ಯಾರು? ಅಂತ ಕೇಳಿದ್ದಕ್ಕೆ 'ಮೇರಾ ಬಾಪ್ ಸಾಬ್,ದಿನವೆಲ್ಲಾ 
ಕುಡೀತಾನೆ..' ಅನ್ನುತ್ತ ಎದುರುಗಡೆಯಿದ್ದ ಬೃಹತ್ ಬಂಡೆಯ ಕಡೆಗೆ ಓಡತೊಡಗಿದ. 
ನನಗಂತೂ ಹುಡುಗನ ವರ್ತನೆ,ಅದರ ತಳಬುಡ ಒಂದೂ ಅರ್ಥವಾಗಲಿಲ್ಲ. ಜೊತೆಗೆ ವಿಪರೀತ 
ಸಿಟ್ಟೂ ಬಂತು. ಹುಡುಗನನ್ನು ಹಿಡಿದು ನಾಲ್ಕು ತದುಕಲಾ ಅಂತ ನೋಡಿದರೆ,ಆತ ಅದ್ಯಾವ ಮಾಯದಲ್ಲೋ 
ಆ ಬೃಹತ್ ಬಂಡೆಯನ್ನೇರಿ ಕುಳಿತುಬಿಟ್ಟಿದ್ದ.

"ಹೊಯ್, ಆಟ ತೋರಿಸ್ತೀನಂತ ಹಣ ತಗೊಂಡು ಅಲ್ಲೇನು ಮಾಡ್ತಿದೀಯಾ ಮಗನೇ.." ಅಂತ ಕೂಗಿದೆ.
ಪೋರ ನನ್ನ ಸಿಟ್ಟಿಗೆ ಕೊಂಚ ದಿಗ್ಭ್ರಮೆಗೊಂಡವನಂತೆ  ಕಂಡುಬಂದ. ತಕ್ಷಣ ಸುಧಾರಿಸಿಕೊಂಡು ಮೈಮೇಲಿದ್ದ 
ಚಿಂದಿ ಬಟ್ಟೆ ಕಳಚಿ ಎಚ್ಚರಿಕೆಯಿಂದ ನಿಧಾನವಾಗಿ ಹೆಜ್ಜೆಯಿಡುತ್ತ ಬಂಡೆ ಅಂಚಿಗೆ ಬಂದು ನಿಂತು ಕೂಗು ಹಾಕಿದ:

"ತೋರಿಸ್ತೀನಿ ಸಾಬ್,ಸಾವಿನ ಆಟ ತೋರಿಸ್ತೀನಿ.ಮೋಸ ಮಾಡಲ್ಲ.ನೀವ್ಯಾವತ್ತೂ ಮರೆಯೋದಿಲ್ಲ.ಅಂಥಾ ಆಟ 
ತೋರಿಸ್ತೀನಿ.ಈಗ ನೋಡಿ,ಮೇಲಿಂದ ಜಿಗೀತೇನೆ.ನಂಗೆ ಈಜು ಬರೋಲ್ಲ ಸಾಬ್,ಆದರೂ ಜಿಗೀತೇನೆ.ನಾನು ಮೂರನೇ 
ಸಲ ಮುಳುಗಿದಾಗ ನಮ್ಮಪ್ಪನ್ನ ಕರೀರಿ.ಪ್ರತಿಸಲ ಅವನೇ ಬರೋದು..ಅವನಿಗೆ ಈಜು ಬರುತ್ತೆ.ನೆನಪಿರಲಿ ಸಾಬ್,
ಮೂರನೇ ಸಲ ಮುಳುಗಿದಾಗ ಮರೀಬೇಡಿ. ತಾಲಿಯಾ..ತಾಲಿಯಾ.." ಅಂದವನೇ ಬಂಡೆಯ ಮೇಲಿಂದ ಜಿಗಿದೇ ಬಿಟ್ಟ!

ನಾನು ನಿಜಕ್ಕೂ ಹುಚ್ಚನಾಗಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಹೇಡಿಯಾಗಿದ್ದೆ. ಕೆಲನಿಮಿಷಗಳ ಹಿಂದಷ್ಟೇ ಕಂಡಿದ್ದ ಫಾರಿನ್  
ಲಲನೆಯರು ಯಾಕೋ ನನ್ನತ್ತ ಕೈತೋರಿಸಿ ತೋರಿಸಿ thumb down ಮಾಡಿದಂತೆ ಭ್ರಮೆ.
ಆ ಪೋರ ಅದೆಷ್ಟು ಸಲ ಸಮುದ್ರದ ನೀರಲ್ಲಿ ಮುಳುಗು ಹಾಕಿದನೋ,ಸೂರ್ಯಾಸ್ತದ ಆ ಕತ್ತಲಲ್ಲಿ ಕಾಣಿಸಲೇ ಇಲ್ಲ!
ಆತನನ್ನು ಅಲ್ಲಿಂದ ಎತ್ತಬೇಕಾಗಿದ್ದ ಅವನಪ್ಪ ಮಾತ್ರ ದೂರದಲ್ಲೆಲ್ಲೋ ಕುಡಿದು ವಾಂತಿ ಮಾಡಿಕೊಳ್ಳುತ್ತಿದ್ದ. 
ಅದೇ ಹಳೇ ಪೋಲೀಸು ಆ ಕುಡುಕನಿಗೆ ರಪರಪ ಬಾರಿಸುತ್ತ ಬಯ್ಯುತ್ತಿದ್ದ:
"ಬೋಳಿಮಕ್ಳಾ..ಕುಡಿದು ಕುಡಿದು ಟೂರಿಷ್ಟು ಜಾಗ ಗಲೀಜು ಮಾಡ್ತಿರಾ.. ನಾಲ್ಕು ಒದೀಬೇಕು ನಿಮಗೆಲ್ಲಾ..."

--  

 (ಟಿಪ್ಪಣಿ: ಬಹುಶಃ ಒಂದೂವರೆ ದಶಕದ ಹಿಂದೆ ದೂರದರ್ಶನದಲ್ಲಿ ನೋಡಿದ ಯಾವುದೋ ಡಾಕ್ಯುಮೆಂಟರಿ ಚಿತ್ರದ 
ಸ್ಪೂರ್ತಿಯಿಂದ ಬರೆದಿದ್ದಿದು.ಸುಮಾರು ವರ್ಷಗಳ ಹಿಂದೆಯೇ 'ಹಾಯ್' tabloid ನಲ್ಲಿ ಪ್ರಕಟಗೊಂಡಿದೆ.)

ತಲೆಕೆಟ್ಟ ಹಾಯ್ಕುಗಳು


ಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ
ಅಸಹ್ಯಪಡಬೇಡ.
Perhaps,
ಗಾಳಿ ಬಂದಾಗ ತೂರಿಕೋ.
-
ಝೆನ್ ಕಥೆಗಳೆಂದರೆ
ನನಗೆ ಪ್ರಾಣ..
ಹಾಗಾಗಿ ನಾನು
ಯಾವತ್ತೂ
ಅವುಗಳನ್ನು
ಪೂರ್ತಿ ಮುಗಿಸೋದೇ ಇಲ್ಲ!
Suppose,
ಅರ್ಥವಾಗಿ ಬಿಟ್ಟರೆ?
-
ಅಲ್ಲಿದೆ ನಮ್ಮನೆ
ಇಲ್ಲಿ ಬಂದೆ ಸುಮ್ಮನೆ
ಬಂದ ಮೇಲೆ ಅನಿಸಿತು
ಹಳೇಮನೆ ಚೆನ್ನಾಗಿತ್ತು.
ನಡೆದೂ ನಡೆದೂ
ಕಾಲು ಕೊಳೆತಿದೆ
ಕೈಯಿಂದ ಮುಂದೆ
ನಡೆಯಲಾಗದು
ಹಿಂದೆಯೂ ನಡೆಯಲಾಗದು
ಸುಮ್ಮನಿರಲಾಗದು..
-
ಭೂಮಿ ಸುಂದರವಾಗಿದೆ ಅಂದರು
ಗುಂಡಗಿದೆ ಅಂದರು
ಚಪ್ಪಟೆಯಾಗಿದೆ ಅಂದರು
ಅಲ್ಲಿ ನೀರಿದೆ
ಹಸಿರಾಗಿದೆ
ಬಿಸಿಯಾಗಿದೆ
ಮಾಲಿನ್ಯವಾಗಿದೆ
ಬಿರುಕುತ್ತಿದೆ ಸಿಡಿಯುತ್ತೆ ಅಂದರು.
ಒಂದಿನ, ಅವಳು
ನಾನೇ ಭೂಮಿ ಅಂದಳು.
ಅದೂ ನಿಜ.
---

ಕೆಟ್ಟತಲೆಯ ನಾಲ್ಕು ಘಟ್ಟಗಳು


ಪಾಠ ಒಂದು:
ಅ-ಅಗಸ
ಆ-ಆನೆ
ಈತ ಗಣಪ ಆತ ಈಶ
ಈಶನ ಮಗ ಗಣಪ
ಕಮಲಳ ಲಂಗ ಥಳಥಳ
ಸೂರ್ಯನ ಬೆಳಕು ಫಳಫಳ..
ವ್ಹಾ! ಎಂಥ ಸರಳರೇಖೆ.
ಪಾಠ ಎರಡು:
ಜಲಜನಕವು
ಆಮ್ಲಜನಕದೊಂದಿಗೆ
ವರ್ತಿಸುತ್ತಿರುವಾಗ-
ಅವನು
ಅವಳ ಹೆಸರನ್ನು
ನೀಲಿ ಹೃದಯದೊಂದಿಗೆ
ಡೆಸ್ಕಿನಲ್ಲಿ ದಟ್ಟವಾಗಿ
ಕೆತ್ತುತ್ತಿದ್ದ.
ಮುಂದಿನ ಪಿರಿಯಡ್ಡು
ಅಭಿಜ್ಞಾನ ಶಾಕುಂತಲ.
ಹುಡುಗನ ಪೆನ್ನಲ್ಲಿ
ಹನಿ ಇಂಕಿಲ್ಲ.
-
ಮುಂಜಾನೆಯ ಕನಸು
ಯಾವತ್ತೂ ನಿಜವಾಗದು.
ಕನಸು ನನಸಾಗುವ
ಅವಸರದಲ್ಲಿ
ಕನಸು
ಕನವರಿಕೆಯಾಗುವ
ಗೊಂದಲವೇ ಹೆಚ್ಚು
ಸುಂದರ ಮತ್ತು
ಅಪೇಕ್ಷಣೀಯ.
ಸದ್ಯ,
ಮುಂಜಾನೆಯ ಕನಸು
ಬರೀ ಸಿಹಿನಿದ್ದೆ
ಮಾತ್ರ ತರಬಲ್ಲದು.
-
ಎಲ್ಲ ಮರೆಯಬೇಕಿದೆ
ಹಿಂದೆ ಸಾಗಬೇಕಿದೆ.
ಕಮಲಳ ಲಂಗವನ್ನು
ಮತ್ತೊಮ್ಮೆ ಥಳಥಳಿಸಬೇಕಾಗಿದೆ
ಶಕುಂತಲೆಯ ಕತೆ
ಸರಿಯಾಗಿ ಬರೆಯಬೇಕಿದೆ
ಅಕಟಕಟಾ,
ಎಷ್ಟು ಬೈದರೂ
ಬರಲಾರ ದೂರ್ವಾಸ
ಕೊಡಲಾರ
ಮರೆವಿನ ಶಾಪ.
-
ಅವರು ಅಂತಾರೆ:
ಮಾನವನಿಗೆ
ಏಳೇ ಜನ್ಮ.
ಮುಗಿಸಿಯಾಗಿದೆ
ಏಳೇಳು ಜನ್ಮ.
ಆದರೂ
ಮತ್ತೊಮ್ಮೆ ಹುಟ್ಟುವಾಸೆ
at least,
ಅವಳ ಮನೆಯ
ಎಮ್ಮೆ ಕಟ್ಟುವ
ಗೂಟವಾಗಿ!
---

ತ್ರೈಮಾಶಿಕ ಲೆಕ್ಕ


ಷ್ಟೊಂದು ಕೋಳಿಗಳು
ಕೂಗುತ್ತವೆ
ಒಂದೇ ಒಂದು ಸೂರ್ಯನ
ಆಗಮನ ಸಾರಲು
-
ಎಷ್ಟೊಂದು ಮರಗಳು
ಉರುಳುತ್ತವೆ
ಒಂದೇ ಒಂದು
ಕವನ ಬರೆಯಲು
-
ಎಷ್ಟೊಂದು ಕಣ್ಣುಗಳು
ಹರಿದಾಡುತ್ತವೆ
ಒಂದೇ ಒಂದು
ಮುಗ್ಧೆ ತತ್ತರಿಸಲು
-
ಎಷ್ಟೊಂದು ಕೈಗಳು
ಬೇಡುತ್ತವೆ
ಒಂದೇ ಒಂದು
ಪರೀಕ್ಷೆ ಪಾಸಾಗಲು
-
ಎಷ್ಟೊಂದು ಕಾಲುಗಳು
ನೆಲಕ್ಕೊರಗುತ್ತವೆ
ಒಂದೇ ಒಂದು
ಗಮ್ಯ ತಲುಪಲು
-
ಎಷ್ಟೊಂದು ನಾಲಿಗೆಗಳು
ಜೊಲ್ಲಿಸುತ್ತವೆ
ಒಂದೇ ಒಂದು
ಕ್ಲಿಪ್ಪಿಂಗ್ ನೋಡಲು
-
ಎಷ್ಟೊಂದು ಸೀಶೆಗಳು
ಬರಿದಾಗುತ್ತವೆ
ಒಂದೇ ಒಂದು
ನೋವ ನೀಗಿಸಲು
-
ಎಷ್ಟೊಂದು ವೀರ್ಯಾಣು
ಕದನಕ್ಕಿಳಿಯುತ್ತವೆ
ಒಂದೇ ಒಂದು
ಕಂದನ ಸೃಷ್ಟಿಸಲು
-
ಎಷ್ಟೊಂದು?
ಎಷ್ಟೊಂದು?
ಚಿಕ್ಕಂದಿನಲ್ಲಿ ಅಕ್ಕ
ಹೇಳುತ್ತಿದ್ದ
ತ್ರೈಮಾಶಿಕ ಲೆಕ್ಕದ ನೆನಪು:
ಇಷ್ಟಕ್ಕೆ ಅಷ್ಟಾದರೆ
ಅಷ್ಟಕ್ಕೆ ಎಷ್ಟು???
---

ಹೀಗೇನೆ…



(ಕೃಪೆ: ಅವಧಿ ಬ್ಲಾಗ್ )
ಧ್ಯರಾತ್ರಿಯಲ್ಲಿ
ಎದ್ದುಹೋದ ಬುದ್ಧ,
ಗೆದ್ದರೂ ಕ್ಷಣದಲ್ಲಿ
ಬಿದ್ದುಹೋದ ಗೊಮ್ಮಟ.
ಆಕಾಶ ನೋಡಲು
ದುರ್ಬೀನು ಬೇಕೇ?
ಬಟ್ಟಬಯಲಲ್ಲಿ
ಖಾಲಿಖಾಲಿಯಾಗುವದೆಂದರೆ ಹೀಗೇನೆ..
*
ಅಪ್ಪನ ಕೈಯಿಂದ
ಗಾಳಿಯಲ್ಲಿ ಹಾರಿದ ಮಗು.
ಮತ್ತೇ ಹಿಡೀತಾನೆ ಬಿಡು
ಅಂತ ನಗುತ್ತಿತ್ತು.
ಗಾಳಿಗೂ ವಿಚಿತ್ರ
ಮುಲಾಜು.
ಸತ್ತು ಹೋಗುವಷ್ಟು
ನಂಬುವದೆಂದರೆ ಹೀಗೇನೆ..
*
ತೇಲಿಸಿದಳು ಕುಂತಿ

ತೆಪ್ಪದಲಿ ಮಗನನ್ನು;
ತುಪ್ಪದ ಭಾಂಡಲೆಯಲ್ಲಿ
ನೂರೊಂದು ಮಕ್ಕಳು.
ಹುಟ್ಟಿಸಿದ ದೇವರು
ಹುಲ್ಲು ಮೇಯುತ್ತಿದ್ದ.
ಕತ್ತಲೂ ಕೂಡ ಮಿಂಚುವದೆಂದರೆ ಹೀಗೇನೆ..
*
ಸುತ್ತಲೂ ಕರ್ಕಶ

ಆದರೂ ಕೇಳಿಸದು.
ಎಲ್ಲೋ ನಿಡುಸುಯ್ಯುತ್ತಿರುವ
ಲಬ್ ಡಬ್‘ ಅವಳದೇನಾ?
ಆದಷ್ಟು ಬೇಗ
ವೈದ್ಯರನ್ನು ಕಾಣಬೇಕು.
ಶಬ್ದದೊಳಗೆ
ನಿಶ್ಶಬ್ದವಾಗುವದೆಂದರೆ ಹೀಗೇನೆ..
*

ಸಡಗರದಿ ನಾರಿಯರು
ಹಡೆಯುವಾಗ ಸೂಲಗಿತ್ತಿ;
ಅಡವಿಯೊಳಗೆ ಹೆರುವ
ಮೃಗವ ಹಿಡಿದು
ರಕ್ಷಿಸುವರ್ಯಾರು?
ಯಾರು?
ಗೊತ್ತಿಲ್ಲ.
ಆದರೆ 
ದಾಸರು ನೆನಪಾಗುವದೆಂದರೆ ಹೀಗೇನೆ…
---

ನನಗೊಬ್ಬಳು ಹೆಂಡತಿಯಿದ್ದಳು


ಕಲೆ: ಸುಘೋಷ್ ನಿಗಳೆ

ನನಗೊಬ್ಬಳು ಹೆಂಡತಿಯಿದ್ದಳು
ಎಲ್ಲರಿಗಿರುವಂತೆ.
ನನಗೊಬ್ಬಳು ಮಗಳಿದ್ದಳು
ಎಲ್ಲರಿಗಿರುವಂತೆ.
-
ಮೊದಮೊದಲು
ಭುಜದೊಳಗೆ ತಂಪಿತ್ತಾ
ತಂಪಿದ್ದುದರಿಂದ ಭುಜಬಲವಿತ್ತಾ
ಗೊತ್ತಿಲ್ಲ;
ಮಜವಂತೂ ಗಜವಾಗಿತ್ತು.
ಒಂದೇ ಒಂದು ಕೊಸರಿತ್ತು
ಮಕ್ಕಳಿಲ್ಲದ ಕೊರತೆಯಿತ್ತು
ಮತ್ತು
ನಂಬಿಕೆಯಿತ್ತು;
ತಮಸೋಮ ಜ್ಯೋತಿರ್ಗಮಯದೊಳಗೆ
-
ಎಂಟೂ ಮುಕ್ಕಾಲು ವರ್ಷ
ಬೆಟ್ಟವನೇರಿ ಕಣಿವೆಯಿಳಿದು
ಬೆವರಿಳಿಸಿ ಸುಸ್ತಾಗಿ
ಕೊನೆಗೊಮ್ಮೆ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ
ಜೋಡಿ ನಾಗರಗಳ ಗಂಟು
ನೋಡಿದ ಬಳಿಕ
ಮಗಳು ಸ್ವಯಂಭೂ!
-
ಸಿಟ್ಟಿತ್ತು ಹೆಂಡತಿಗೆ
ನನ್ನ ಹುಚ್ಚಾಟಗಳ ಬಗ್ಗೆ.
ಹೆಂಡತಿಯ ಹೆಸರೂ ಒಂದೇ
ಮಗಳದೂ ಅದೇ.
ಇದೇ ಕಾರಣಕ್ಕೆ
ಅವಳಿಗೆ ಅಸಹನೆಯಿತ್ತು
ಜಗತ್ತಿನ ಕುಹಕದ ಮಾತಿಗೆ,ನೋಟಕ್ಕೆ.
-
ಕಿರಿಕಿರಿಯಿತ್ತು ಅವಳಿಗೆ
ಮಗಳ ಬಗೆಗಿನ ನನ್ನ ಪ್ರೀತಿಗೆ.
ಅನುಮಾನವಿತ್ತು ತನ್ನದೇ
ಸ್ನಿಗ್ಧ ಚೆಲುವಿನ ಬಗ್ಗೆ.
ಆದರೂ ಆಕೆ ಯಾವತ್ತೂ
ಬೊಗಸೆ ಮುಚ್ಚಿಕೊಂಡವಳಲ್ಲ;
ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ.
-
ಮೊನ್ನೆ ವಿಮಾನ ಪತನಗೊಂಡಾಗ
ಸುಟ್ಟು ಹೋದಳು
ಬೊಗಸೆ ಮುಚ್ಚಿತ್ತು
ನನಗೆ ಅಳಲಾಗಲಿಲ್ಲ ಕಿರುಚಲಾಗಲಿಲ್ಲ.
ಕಣ್ಣೆದುರಿಗೆ ನಿಂತ ನಿಜದ
ಚಿತ್ರಪಟ ನೋಡಿ ಸಂಕಟಗೊಂಡೆ.
ಹೌದು,ಇಷ್ಟುದಿನ ಅವಳು ನನಗೆ
ಬರೇ ಹೆಂಡತಿಯಾಗಿರಲಿಲ್ಲ;
ಚೊಕ್ಕಟ ಮಗಳಾಗಿದ್ದಳು..
---
(ಟಿಪ್ಪಣಿ: 'ಅವಧಿ' ಬ್ಲಾಗ್ ನಲ್ಲಿ ಪ್ರಕಟಗೊಂಡಿದೆ.)