Thursday, May 19, 2011

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ


                                          ಚಿತ್ರ: ಇಂಟರ್ನೆಟ್ 


ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ. ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು, ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ. ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ. ಗೌರವವಿದೆ. ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ, ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ, ಎಲ್ಲಿಂದೆಲ್ಲಿಗೋ ಲಿಂಕ್ ಕೊಟ್ಟು ಇನ್ನೆಲ್ಲೋ ಶಾಕ್ ಕೊಟ್ಟು ಕೊನೆಗೆ ಅದು ಹ್ಯಾಗೋ circuit complete ಮಾಡೇ ಬಿಡುತ್ತಾರೆ! 
ನಾನು ಕತೆಗಾರನಲ್ಲ.

   ನಾನಾಗ ಐದನೇ ಕ್ಲಾಸು. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ರ ವಿದ್ಯಾರ್ಥಿ. ಸದರಿ ಶಾಲೆಯ system ಸ್ವಲ್ಪ ವಿಚಿತ್ರ ಇತ್ತು. ನಾಲ್ಕನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ತರಗತಿಗಳಿದ್ದ ಈ ಶಾಲೆ ಬೆಳಿಗ್ಗೆ ಏಳರಿಂದ ಮಧ್ಯಾನ್ಹ ಹನ್ನೆರಡರವರೆಗೂ 'ಶಾಲೆ ನಂ.2' ಎಂದು ಕರೆಸಿಕೊಳ್ಳುತ್ತಿತ್ತು. ಮಧ್ಯಾನ್ಹ ಹನ್ನೆರಡರಿಂದ ಸಂಜೆ ಆರರವರೆಗೂ ಇದೇ ಸ್ಕೂಲು 'ಶಾಲೆ ನಂ.14' ಎಂದು ಗುರುತಿಸಲ್ಪಡುತ್ತಿತ್ತು. ಆಗ ಒಂದರಿಂದ  ಮೂರನೇ ತರಗತಿಗಳು ನಡೆಯುತ್ತಿದ್ದವು. 

   ಇಂಥ ಶಾಲೆ ನಂ.2 ರಲ್ಲಿ ನಾನಾಗ ಐದನೇ ಕ್ಲಾಸಿನಲ್ಲಿದ್ದೆ. ಖಡಕ್ ಮೇಷ್ಟ್ರು. ಗಾಂಧೀ ಟೋಪಿ ಮತ್ತು ಪಂಜೆ 
ಧರಿಸುತ್ತಿದ್ದ ಅವರು ನಮ್ಮಷ್ಟೇ ಎತ್ತರವಿದ್ದರೂ ಕೂಡ ನಮ್ಮಲ್ಲೊಂದು ವಿಚಿತ್ರ ಭಯ ಮೂಡಿಸಿದ್ದರು. ಆಗಷ್ಟೇ ನಮಗೆ ಇಂಗ್ಲೀಶ್ syllabus ಶುರುವಾಗಿತ್ತು. ಮನೆಯಲ್ಲಿ ಅಕ್ಕ ನನ್ನ ಒಂದನೇ ಕ್ಲಾಸಿನಿಂದಲೇ ಇಂಗ್ಲೀಶ್ 
ಪಾಠ ಶುರು ಮಾಡಿಬಿಟ್ಟಿದ್ದರಿಂದ ಐದನೇ ಕ್ಲಾಸಿನ ಇಂಗ್ಲೀಷಿನ ಬಗ್ಗೆ ನನಗೊಂಥರಾ ತಾತ್ಸಾರ ಬಂದಂತಿತ್ತು.  
ಆದರೆ ಪಾಪ, ಮೇಷ್ಟ್ರು ಅತ್ಯಂತ ಶ್ರದ್ಧೆಯಿಂದ ನಮಗೆಲ್ಲ ಇಂಗ್ಲೀಶ್ ಕಲಿಸುತ್ತಿದ್ದರು. ಬೆಳಿಗ್ಗೆ ಮೊದಲನೇ 
period ನಿಂದಲೇ "ದಿ ವಿಂಡೋ, ದಿ ಡೋರ್.." ಎಂದು ಆಂಗಿಕವಾಗಿ ತೋರಿಸುತ್ತಲೂ, ಜೊತೆಗೆ ನಿಜವಾದ ಕಿಟಕಿ, ಬಾಗಿಲುಗಳನ್ನು ದರುಶನ ಮಾಡಿಸುತ್ತಲೂ ಇಂಗ್ಲೀಷನ್ನು ಕಲಿಸುತ್ತಿದ್ದರು.

   ಇಲ್ಲೊಂದು ವಿಷಯ ಹೇಳಲೇಬೇಕು: ಮುಂದೆ ಹೈಸ್ಕೂಲ್, ಕಾಲೇಜಿಗೆ ಹೋದಂತೆಲ್ಲ ಪ್ರತಿಯೊಂದು ವಿಷಯಕ್ಕೂ ಬೇರೆ ಬೇರೆ ಮೇಷ್ಟ್ರು, ಬೇರೆ ಬೇರೆ periodಗಳು ಬದಲಾಗುತ್ತಿದ್ದುದನ್ನು ನೋಡಿದ ಬಳಿಕ ನಮ್ಮ ಹಳೆಯ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳ ಆಲ್ ರೌಂಡರ್ ಆಟ ನೋಡಿ ಬೆರಗಾಗಿದ್ದೂ ಉಂಟು. ಯಾಕೆಂದರೆ ನಮಗೆಲ್ಲ ಪ್ರೈಮರಿಯಲ್ಲಿ ಒಂದು ಕ್ಲಾಸಿಗೆ ಒಬ್ಬರೇ ಮೇಷ್ಟ್ರು. ಅವರೇ ಕನ್ನಡ ಕಲಿಸಬೇಕು. ಅವರೇ ಭೂಗೋಳ ಕಲಿಸಬೇಕು. ಅವರೇ ದಿ ವಿಂಡೋ, ದಿ ಡೋರ್ ಅನ್ನಬೇಕು. ಅವರೇ ವಿಜ್ಞಾನದ ಸೂತ್ರ ಕಲಿಸಬೇಕು ಮತ್ತು ಅವರೇ 
ಕೈಯಲ್ಲೊಂದು ಮರದ ಕೋನಮಾಪಕ ಹಿಡಿದು ಲಂಬಕೋನ-ವಿಶಾಲಕೋನ ಅಂತ ರೇಖಾಗಣಿತ ಕಲಿಸಬೇಕು. 
ಬಹುಶಃ ಇದೇ ಕಾರಣಕ್ಕೆ ಏನೋ,ಒಂದರಿಂದ ಏಳನೇ ಕ್ಲಾಸಿನವರೆಗೆ ನನಗೆ ಕಲಿಸಿದ ಎಲ್ಲ ಮೇಷ್ಟ್ರು, ಮಿಸ್ಸುಗಳ ಹೆಸರುಗಳನ್ನು ನಾನಿನ್ನೂ ಮರೆತಿಲ್ಲ. ಆದರೆ ಬಹುತೇಕ ಹೈಸ್ಕೂಲು-ಕಾಲೇಜುಗಳ ಮೇಷ್ಟ್ರುಗಳ ಹೆಸರು ನೆನಪಿಲ್ಲ.

   ಹೀಗಿದ್ದ ನಮ್ಮ ಪ್ರೈಮರಿ ಮೇಷ್ಟ್ರುಗಳ ತರಹೇವಾರಿ ಕೆಲಸದ ಮಧ್ಯೆ ಅವರಿಗೆ ಮತ್ತೊಂದು ಕೆಲಸವೂ ಇತ್ತು. 
ಆಗಾಗ ನಮಗೆಲ್ಲ ಅವರು ನೀತಿಪಾಠ ಹೇಳಿಕೊಡಬೇಕಿತ್ತು. ಸಾಲದೆಂಬಂತೆ ನಮ್ಮ ಇನ್ನಿತರ extra curriculum
activities ಬಗ್ಗೆ ಗಮನ ಕೊಡಬೇಕಾಗಿತ್ತು. ಅಂಥ activities ನ ಮುಂದುವರೆದ ಭಾಗವೆಂದರೆ  ಡೈರಿ! ಆಗ ನಾವೆಲ್ಲ ಒಂದು ಡೈರಿ maintainಮಾಡಬೇಕಾಗಿತ್ತು. ಅದರ ಹೆಸರು 'ದಿನಕ್ಕೊಂದು ಒಳ್ಳೆಯ ಕೆಲಸ' ಅಂತ. ಅದರಲ್ಲಿ ಪ್ರತಿದಿನ ನಾವೇನು ಒಳ್ಳೆಯ ಕೆಲಸ ಮಾಡಿದೆವು ಅಂತ ಬರೆದು ಮೇಷ್ಟ್ರಿಗೆ report ಮಾಡಬೇಕಾಗಿತ್ತು ಮತ್ತು ಪ್ರತಿದಿನ ಮೇಷ್ಟ್ರು ಅದನ್ನು ನೋಡಿ ಸಹಿ ಮಾಡಬೇಕಾಗುತ್ತಿತ್ತು.

   ಆದರೆ ಮೇಷ್ಟ್ರಿಗೆ ತಮ್ಮದೇ ಆದ ನಾನಾ ರೀತಿಯ ಕೆಲಸ, ಜಂಜಡಗಳಿದ್ದವಲ್ಲ? ಹೀಗಾಗಿ ಅವರು ನಮ್ಮಂಥ 
ಪಿಳ್ಳೆಗಳ ಒಳ್ಳೊಳ್ಳೆಯ (?) ಕೆಲಸಗಳನ್ನು ಓದುವ ಗೋಜಿಗೆ ಹೋಗದೆ ಕಣ್ಣುಮುಚ್ಚಿ ಸಹಿ ಗೀಚುತ್ತಿದ್ದರು. ಇದೆಲ್ಲದರ ಮಧ್ಯೆ ಡೈರಿ maintain ಮಾಡುವದು ನನಗೆ ಭಯಂಕರ ಕಿರಿಕಿರಿ ಅನಿಸುತ್ತಿತ್ತು. ಮಾಡಲಿಕ್ಕೆ ಯಾವುದೂ ಒಳ್ಳೆಯ ಕೆಲಸ ಸಿಗದೇ ಕಂಗಾಲಾಗುತ್ತಿದ್ದೆ. ಇಷ್ಟಕ್ಕೂ ಏನು ಬರೆಯಬೇಕೆಂದು ನಮಗೂ ಗೊತ್ತಿರಲಿಲ್ಲ. ಹೋಗಲಿ, ಯಾವದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವದೂ ನಮಗೆ ಆಗ ಗೊತ್ತಿತ್ತೋ ಇಲ್ಲವೋ, ಒಟ್ಟಿನಲ್ಲಿ ನಾವು ಡೈರಿ ಬರೆಯುತ್ತಿದ್ದೆವು ಮತ್ತು ಅವರು ಸೈನು ಗೀಚುತ್ತಿದ್ದರು.

   ಒಂದು ದಿನ, ಮೇಷ್ಟ್ರು ಮೂಡು ಚೆನ್ನಾಗಿತ್ತೋ ಅಥವಾ ನನ್ನ ಗ್ರಹಚಾರ ಕೆಟ್ಟಿತ್ತೋ ಗೊತ್ತಿಲ್ಲ; ಆವತ್ತು ಮೇಷ್ಟ್ರಿಗೆ 
ನನ್ನ ಮೇಲೆ ಕೊಂಚ  ಜಾಸ್ತಿಯೇ ಪ್ರೀತಿ ಉಕ್ಕಿ ಹರಿಯಿತು. ಪರಿಣಾಮವಾಗಿ ನನ್ನ ಡೈರಿಯ ಪುಟಗಳನ್ನು 
random ಆಗಿ ಚೆಕ್ ಮಾಡುತ್ತಬಂದರು. ಆಮೇಲೆ ಕಣ್ಣು ಕಿರಿದು ಮಾಡಿಕೊಂಡು ಪ್ರತಿ ಪುಟವನ್ನೂ ಬಿಡದೇ
ಓದುತ್ತ ಬಂದರು. ತಿರುಗಿ ತಿರುಗಿ ಮತ್ತೇ ಮತ್ತೇ ನಸುನಗುತ್ತ ಓದಿದರೂ, ಓದಿದರೂ, ಓದಿದರೂ..
ನಂತರ ರಪರಪನೆ ಬೆನ್ನಿಗೆ ಬಾರಿಸತೊಡಗಿದರು..

"ಲೇ ಭಟ್ಟ! ನಿಮ್ಮ ಮನೇಲಿ ಊಟಕ್ಕೇನು ನೀವು ತಿನ್ನೋದಿಲ್ಲೇನು? ಬರೇ ಬಾಳೆಹಣ್ಣು ತಿಂದು 
ಚಹಾ ಕುಡೀತಿರೇನು..?" ಅನ್ನುತ್ತ ಮತ್ತೆರೆಡು ಬೆನ್ನಿಗೆ ಬಿಟ್ಟರು!

ಆಗಿದ್ದಿಷ್ಟೆ: ಮಾಡಲು ಯಾವದೇ ಒಳ್ಳೆಯ ಕೆಲಸ ಸಿಗದೇ ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ alternate  
ದಿನಕ್ಕೊಮ್ಮೆ ಎರಡೇ ಕೆಲಸ ಮಾಡುತ್ತಿದ್ದೆನೆಂದು ಡೈರಿ ಹೇಳುತ್ತಿತ್ತು. ಅದೇನೆಂದರೆ:
1. ಇವತ್ತು ಮನೆಗೆ ಚಹಾಪುಡಿ ತಂದೆ.
2. ದಾರಿಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಕಸದ ತೊಟ್ಟಿಯಲ್ಲಿ ಹಾಕಿದೆ.

ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳಿಗೇ ಯಾಕೆ ಜಾಸ್ತಿ option ಗಳಿವೆ ಅಂತ ಇವತ್ತಿಗೂ ಗೊತ್ತಾಗಿಲ್ಲ.
                                                                    *
ವಾರ್ಷಿಕ ಪರೀಕ್ಷೆಯೆಂದರೆ ನನಗೆ ಯಾವಾಗಲೂ ಭಯ. ಸಾಮಾನ್ಯವಾಗಿ ಎಲ್ಲರೂ ಒಂದೇ ಸಲ ಪರೀಕ್ಷೆ ಬರೆದರೆ 
ನಾನು ಒಂದೇ question ಪೇಪರಿಗೆ ಎರೆಡೆರಡು ಸಲ ಬರೀಬೇಕಿತ್ತು. ಒಮ್ಮೆ ಶಾಲೆಯಲ್ಲಿ ಮತ್ತೊಮ್ಮೆ ಮನೆಯಲ್ಲಿ! 
ಪರೀಕ್ಷೆಯಲ್ಲಿನ ಉಳಿದ ವಿಷಯಗಳನ್ನು ಅಕ್ಕ ನೋಡಿಕೊಂಡರೆ ಗಣಿತ ವಿಷಯವನ್ನು ಮಾತ್ರ ತಂದೆ 
ನೋಡಿಕೊಳ್ಳುತ್ತಿದ್ದರು. ಅಕ್ಕನದೇನೋ ಕಿರಿಕಿರಿಯಿರಲಿಲ್ಲ. "ಪರೀಕ್ಷೆಯಲ್ಲಿ ಸರಿಯಾಗೇ ಬರ್ದಿದೀನಿ, ಇಲ್ಲಿ ಮಾತ್ರ ಏನೋ ಯಡವಟ್ಟು ಆಯಿತು.." ಅಂತ ಅಳುತ್ತ ಹೇಳಿದ ಕೂಡಲೇ ಅಕ್ಕ ಸುಮ್ಮನಾಗುತ್ತಿದ್ದಳು. 

   ಆದರೆ ತಂದೆಯ ಹತ್ತಿರ ಇದ್ಯಾವುದೂ ನಡೆಯುತ್ತಿರಲಿಲ್ಲ. ಯಾಕೆಂದರೆ ಅದು ಗಣಿತ. ಅಲ್ಲಿ end result ಮಾತ್ರ ಮುಖ್ಯ! ಇಷ್ಟಕ್ಕೆ ಅಷ್ಟಾದರೆ ಅಷ್ಟಕ್ಕೆ ಎಷ್ಟು? ಎಂಬ ಧಾಟಿಯ ಪ್ರಶ್ನೆಗಳಿಗೆ ನಾನು  academic formula ಗಳಿಗೆ ಜೋತುಬಿದ್ದು ಲೆಕ್ಕ ಬಿಡಿಸುತ್ತಿದ್ದರೆ, ಅವರು ತಮ್ಮದೇ ಆದ ಇನ್ಯಾವುದೋ street formula 
ಉಪಯೋಗಿಸಿ ವೇಗವಾಗಿ ಉತ್ತರ ತರುತ್ತಿದ್ದರು. ಕೊನೆಗೆ ನೋಡಿದರೆ ಇಬ್ಬರ ಉತ್ತರವೂ ಒಂದೇ ಆಗಿರುತ್ತಿತ್ತು. ನಾನು ಪರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ academic ಫಾರ್ಮುಲಾ ಉಪಯೋಗಿಸಬೇಕೋ ಅಥವಾ ತಂದೆಯ street ಫಾರ್ಮುಲಾ ಉಪಯೋಗಿಸಬೇಕೋ ಎಂದು ತಿಳಿಯದೆ ಗೊಂದಲಕ್ಕೀಡಾಗಿ ಕಣ್ ಕಣ್  ಬಿಡುತ್ತಿದ್ದೆ.

   ಹೀಗೆ ನನ್ನ ಒಂದನೇ ಕ್ಲಾಸಿನಿಂದ ಶುರುವಾದ ಈ ಪರೀಕ್ಷೆ ಎಂಬ ಗುಮ್ಮ ಅಕ್ಕ ಮದುವೆಯಾಗಿ ಅತ್ತೆ ಮನೆ 
ಸೇರುವವರೆಗೂ- ಅಂದರೆ ತೀರ ನನ್ನ ಒಂಭತ್ತನೇ ಕ್ಲಾಸಿನವರೆಗೂ ಕಾಡಿತು. ಆದರೆ ಅದೇಕೋ ಗೊತ್ತಿಲ್ಲ,
ಇವತ್ತಿಗೂ ನನಗೊಂದು ವಿಚಿತ್ರ ಕನಸು ಬೀಳುತ್ತದೆ: ನಾಳೆ ಕಾಲೇಜಿನಲ್ಲಿ digital electronics lab exam ಇದೆ ಅಂತ ಗೊತ್ತಿದ್ದರೂ ಹಿಂದಿನ ರಾತ್ರಿಯ ವರೆಗೂ ನಾನು lab journals ಬರೆದಿರುವದಿಲ್ಲ! ಇಂಥದೊಂದು ಕನಸು ಏನಿಲ್ಲವೆಂದರೂ ನೂರಾರು ಸಲ ಬಿದ್ದಿದೆ. ನಿದ್ರೆಯಲ್ಲೇ ಬೆವತಿದ್ದಿದೆ. ಇದೇ ಕಾರಣಕ್ಕೆ ತೀರ ಒಮ್ಮೊಮ್ಮೆ 
ತಲೆಕೆಡಿಸಿಕೊಂಡು psychiatrist ನನ್ನು ಭೇಟಿ ಮಾಡುವ ಹಂತಕ್ಕೂ ಹೋಗಿ ನಿರ್ಧಾರ ಬದಲಿಸಿದ್ದೇನೆ. 

   ಸರಿ, ಪರಿಸ್ಥಿತಿ ಹೀಗಿದ್ದ ಸಂದರ್ಭದಲ್ಲಿ ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ವಾರ್ಷಿಕ ಪರೀಕ್ಷೆ ಬಂತು. ತಗೊಳ್ರಪ,
dual duty ಶುರು! ಮೊದಲನೇ ಎರಡು ದಿವಸ ಶಾಲೆಯಲ್ಲೂ,ಮನೆಯಲ್ಲೂ exam ಎದುರಿಸಿದ್ದಾಯ್ತು. ಮೂರನೇ ದಿನ ಅದೇನು ತಲೆ ಕೆಟ್ಟಿತೋ ಏನೋ, ಶಾಲೆಯಲ್ಲಿ ಪೇಪರ್ ಬರೆದವನೇ ಸೀದಾ ಮನೆಗೆ ಬಂದು ಅಕ್ಕನ 
ಮುಖಕ್ಕೆ answer sheet ಬೀಸಾಕಿ ಭಂಡ ಧೈರ್ಯದಿಂದ ಹೇಳಿದೆ:
"ಅದೇನು ಚೆಕ್ ಮಾಡ್ಕೋತೀಯೋ ಮಾಡ್ಕ! ಇನ್ನೊಂದು ಸಲ ಮತ್ತೇ ಮನೇಲಿ answer ಬರಿಯೋದಿಲ್ಲ .."
ಅಕ್ಕನಿಗೆ ಒಂದೆಡೆ ಗಾಭರಿ.ಇನ್ನೊಂದೆಡೆ ನಗು. ಕ್ಲಾಸಿನಲ್ಲಿ  ಟೀಚರ್ ಗೆ ಕೊಡಬೇಕಾಗಿದ್ದ answer sheet ನೇರವಾಗಿ ಮನೆಗೇತಂದು ಅಕ್ಕನ ಮುಖಕ್ಕೆ ಹಿಡಿದಿದ್ದೆ..
                                                                   *
ಅದಾಗಿ, ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಕ್ಲೈಂಟು, ಪ್ರತಿದಿನ ಕಾನ್ ಕಾಲ್ಸು, ಪ್ರತಿದಿನ ಶೇವಿಂಗು, ಅದೇ 
ಲ್ಯಾಪ್ ಟಾಪು, ಅದೇ ಆಪರೇಟಿಂಗ್ ಸಿಸ್ಟಮ್ಮು, ಅದೇ ಸರ್ವರ್ರು, ಅದೇ ಶೇರು, ಅವೆರಡರ  ಕ್ರ್ಯಾಶು, ಅವರು ಯಾಕೆ ಮಾತು ಬಿಟ್ಟರು, ಇವರು ಯಾಕೆ ಮರೆತು ಬಿಟ್ರು ಅಂತೆಲ್ಲ ತಲೆಚಿಟ್ಟು ಹಿಡಿದು ಕೊನೆಗೊಮ್ಮೆ ಮನಸು ಮಾಲಿಂಗ, ಮಿದುಳು ಶಂಭುಲಿಂಗ ಅಂತ ಪರಸ್ಪರ ಮುನಿಸಿಕೊಂಡು ಮೈಮನವೆಲ್ಲ ಜರ್ಜರಿತಗೊಂಡಾಗ-
ಹೃದಯ ಮಾತ್ರ ಮೆಲ್ಲಗೇ ಸಂತೈಸತೊಡಗುತ್ತದೆ: ಮುನಿಸೇಕೆ ಮಿತ್ರ? ಬಿಟ್ಟಾಕು ಎಲ್ಲ. ಅಲ್ಲಿದೆ ನೋಡು ಬಾಂಬೆ ಮಿಠಾಯಿ. ಕೆಂಪು ಬಣ್ಣದ ಈ ಬಾಂಬೆ ಮಿಠಾಯಿಗೆ ಶೇವಿಂಗೇ ಬೇಡ! ಬೇಕಾದರೆ ಮೀಸೆ ಹಚ್ಚಿಕೋ. ಮೀಸೆ 
ಬೇಸರವಾದರೆ ಅದನ್ನೇ ವಾಚು ಮಾಡಿಕೋ. ಇನ್ನೂ ಬೇಸರವಾದರೆ ಮಿಠಾಯಿಯನ್ನೇ ಚಪ್ಪರಿಸು. ತಲ್ಲಣಿಸದಿರು ಮಿತ್ರ,ಕೊಂಚ ಹಿಂತಿರುಗಿ ನೋಡು. ಇನ್ನೂ ಅಲ್ಲೇ ಇದೆ ನಮ್ಮೆಲ್ಲರ ಮಾಯಾಲಾಂದ್ರ; ಜೊತೆಗೆ ಅದರ ಬೆಳಕೂ!

ಹಾಗೆ ಕಂಡ ಬೆಳಕಿನಲ್ಲಿ ಮಿದುಳು ಮತ್ತೇ ಕಾಗದದ ದೋಣಿಯಾದಂತೆ, ಮನಸು ಮಳೆನೀರಾದಂತೆ...
                                                                 -

Wednesday, May 4, 2011

ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!


             ಚಿತ್ರ: ಜೋಶಿ


ಬೆಳಗಿನ ಜಾವದ ಎರಡನೇ ಪ್ರಹರವಿರಬೇಕು.
ಭರ್ರೆನ್ನುವ ಗಾಳಿ.ಇತ್ತ ಗುಡಿಸಲೂ ಅನ್ನಲಾಗದ ಅತ್ತ ಅರಮನೆಯಂದೂ ಕರೆಯಲಾಗದಂಥ ಮನೆಯದು.
ಆ ಮನೆಯ ಪ್ರತಿಯೊಂದು ಕಿಟಕಿಗಳಿಗೆ ರೇಷ್ಮೆಯ ಪರದೆಗಳನ್ನು ಇಳಿಬಿಡಲಾಗಿದೆ.ಅವುಗಳ ಕೆಳಅಂಚಿಗೆ
ಚಿಕ್ಕ ಚಿಕ್ಕ ಬೆಳ್ಳಿ ಲೋಹದ ಗಂಟೆಗಳನ್ನು ಸೇರಿಸಿ ಕಸೂತಿ ಮಾಡಲಾಗಿದೆ.ಅದಕ್ಕೆ ಇರಬೇಕು:ಅವೆಲ್ಲ 
ಗಾಳಿಯ ಹೊಡೆತಕ್ಕೆ ಪಟಪಟ ಅಂತ ಹೊಡೆದುಕೊಳ್ಳುತ್ತಿಲ್ಲ.ಬದಲಾಗಿ ರಾಜ ಗಾಂಭೀರ್ಯದಿಂದ ತಲೆ
ಅಲ್ಲಾಡಿಸುತ್ತಿವೆ.ಅಂಥದೊಂದು ಮನೆಯೊಡತಿಯಾದ ಆ ಸ್ಫುರದ್ರೂಪಿ ಹೆಂಗಸು ತನ್ನ ಶಯ್ಯಾಗೃಹದಲ್ಲಿ 
ಒಂದೇ ಸಮ ಶತಪಥ ಹಾಕುತ್ತಿದ್ದಾಳೆ; ಅತೃಪ್ತ ಆತ್ಮದಂತೆ.
ಆಕೆ ಪಾಂಚಾಲಿ!

* * * 
"ರಾಣೀ..ರಾಣೀ.."
ಏದುಸಿರಿನಿಂದ ಒಂದೇ ಸಮ ಕಿರುಚುತ್ತ ಓಡಿ ಬರುತ್ತಿದ್ದ ಚಿತ್ರಸೇನೆ ಎಂಬ ದಾಸಿಯ ಕೂಗು ಕೇಳುತ್ತಲೇ 
ಪಾಂಚಾಲಿಯ ಕಾಲುಗಳು ಸ್ತಬ್ದಗೊಳ್ಳುತ್ತವೆ.ಎದೆಯೆಲ್ಲ ಡವಡವ.ಅದೆಂಥ ಸುದ್ದಿ ತಂದಿರಬಹುದು ಈ ಚಿತ್ರಸೇನೆ?
ಮಹಾಭಾರತ ಯುದ್ಧವಂತೂ ಮೊನ್ನೆಯೇ ಮುಗಿದುಹೋಗಿದೆ.ಕೌರವರ ಪೈಕಿ ಒಂದೇ ಒಂದು ನರಪಿಳ್ಳೆಯೂ ಕೂಡ
ಬದುಕಿಲ್ಲ.ಇನ್ನು ಬದುಕುಳಿದಿರಬಹುದಾದ ದುಷ್ಟ ದುರ್ಯೋಧನ ಯುದ್ಧರಂಗದಿಂದಲೇ ಓಡಿ ಹೋಗಿದ್ದಾನೆ.
ಇಲ್ಲದಿದ್ದರೆ ಇಷ್ಟೊತ್ತಿಗೆ ಆ ಕೆಟ್ಟ ಹುಳವನ್ನು ನನ್ನ ಭೀಮ ಯಾವಾಗಲೋ ನೊರೆದು ಹಾಕಿರುತ್ತಿದ್ದ.

"ರಾಣೀ..ರಾಣೀ.."

ಚಿತ್ರಸೇನೆಯ ಮತ್ತೊಂದು ಸುತ್ತಿನ ಕೂಗು ಪಾಂಚಾಲಿಯ ಯೋಚನಾ ಲಹರಿಯನ್ನು ಕತ್ತರಿಸುತ್ತದೆ. 
ಆಕೆ ಅಸಹನೆಯಿಂದ ತಲೆ ಕೊಡವಿಕೊಳ್ಳುತ್ತ  ದಾಸಿಯೆಡೆಗೆ ಏನು ಎಂಬಂತೆ ನೋಡುತ್ತಾಳೆ.

"ಘಾತವಾಯಿತು ರಾಣೀ..ಘಾತವಾಯಿತು.. ಯುದ್ಧರಂಗದಿಂದ ಓಡಿ ಹೋಗಿದ್ದ ದುರ್ಯೋಧನ ಮತ್ತು ಭೀಮಸೇನರ 
ಮಧ್ಯೆ ಭೀಕರ ಯುದ್ಧವಾಗುತ್ತಿದೆ.ಕೃಷ್ಣ ಹಾಗೂ ಪಾಂಡವರ ಬೈಯ್ಗುಳ,ಹೀಯಾಳಿಕೆ ಸಹಿಸಲಾಗದೇ 
ಆ ದುರ್ಯೋಧನ ವೈಶಂಪಾಯನ ಸರೋವರದಿಂದ ಮೇಲೆದ್ದು ಬಂದನಂತೆ. ಆತನ ಮುಖದಲ್ಲೀಗ ಸಾವಿನ 
ಭೀತಿಯೇ ಕಾಣಿಸುತ್ತಿಲ್ಲ. ಹೊಡೆತ ಬಿದ್ದಷ್ಟೂ ಆತ ಹೆಚ್ಚೆಚ್ಚು ಉತ್ಸಾಹಿತನಾಗುತ್ತಿದ್ದಾನೆ. ಅವರಿಬ್ಬರ ಸುತ್ತಲೂ 
ಕದನಧೂಳು ಆವರಿಸಿರುವದರಿಂದ ಏನೂ ಸರಿಯಾಗಿ ಕಾಣಿಸುತ್ತಿಲ್ಲ.ಭೀಮಸೇನರು ಯಾಕೋ ಕೊಂಚ 
ಬಳಲಿದಂತೆ ಕಾಣಿಸುತ್ತಿದ್ದಾರೆ.."  

ದಾಸಿಯ ಕೊನೆಯ ಮಾತು ಕೇಳುತ್ತಿದ್ದಂತೆಯೇ ಪಾಂಚಾಲಿ ಕ್ರೋಧಿತಳಾಗುತ್ತಾಳೆ. ಆಕೆಯ ಮಾತಿನಲ್ಲಿ 
ದುರ್ಯೋಧನನ ಬಗ್ಗೆ ಕೊಂಚ ಒಲವಿರುವದನ್ನು ಸಹಿಸಲಾಗದೇ ರಪ್ಪಂತ ಚಿತ್ರಸೇನೆಯ ಕೆನ್ನೆಗೆ 
ಬಾರಿಸುತ್ತಾಳೆ.
"ರಂಡೇ, ನನ್ನ ಮನೆಯ ಅನ್ನ ತಿಂದು ಶತ್ರುವಿನ ಸ್ತುತಿ ಮಾಡಲು ನಾಚಿಕೆಯಾಗುವದಿಲ್ಲವೇ? ತೊಲಗಾಚೆ
ಇಲ್ಲಿಂದ.."

ದಾಸಿ ಅಲ್ಲಿಂದ ಹೋದ ಬಳಿಕ ಪಾಂಚಾಲಿಗೆ ಅವಳ ಬಗ್ಗೆ ಪಿಚ್ಚೆನ್ನಿಸುತ್ತದೆ. ಛೇ,ಎಷ್ಟು ಒಳ್ಳೆಯ ಹುಡುಗಿ ಈ ಚಿತ್ರಸೇನೆ!
ಚಿಕ್ಕಂದಿನಿಂದ ನನ್ನೊಂದಿಗೇ ಬೆಳೆದವಳು. ಕೇವಲ ನನಗಾಗಿ ಅಪ್ಪ ದ್ರುಪದನ ಆಸ್ಥಾನದಿಂದ ಓಡೋಡಿ ಬಂದವಳು.
ಸುಖಾಸುಮ್ಮನೆ ಅವಳನ್ನು ಬೈದುಬಿಟ್ಟೆ. ಇನ್ನು ನನ್ನ ಭೀಮನಿಗೆಂಥ ಭಯ? ಆತನ ವೀರ್ಯ ಎಂಥದೆಂಬುದು 
ನನಗೆ ಗೊತ್ತಿಲ್ಲವಾ? 
ಓಹ್ ಭೀಮ..ನನ್ನ ಭೀಮ!

ಹಾಗಂತ ಯೋಚಿಸುತ್ತಿದ್ದ ಪಾಂಚಾಲಿಗೆ ಇದ್ದಕ್ಕಿದ್ದಂತೆ ಭೀಮನ ಮೇಲಿನ ಪ್ರೀತಿ ಇಮ್ಮಡಿ,ನೂರ್ಮಡಿಯಾಗುತ್ತಿರುವಂತೆ 
ಭಾಸವಾಗುತ್ತದೆ. ಇಲ್ಲ,ಇಲ್ಲ.ಆತನಿಗೇನೂ ಆಗುವದಿಲ್ಲ.ಯಾಕೆಂದರೆ ಅವನೇ ತಾನೇ ನನ್ನ ನಿಜವಾದ ಗಂಡಸು?
ಉಳಿದವರೆಲ್ಲ ನನ್ನ ಪಾಲಿಗೆ ಕೇವಲ ಗಂಡಂದಿರು.ಆ ಮಾತನ್ನು ಕೃಷ್ಣನೆದುರಿಗೆ ಯಾವತ್ತೋ ಹೇಳಿದ್ದೆ:ಆವತ್ತು 
ಈ ಕೃಷ್ಣ ಎಂಥದೋ ನಗೆ ಬೀರಿ ಹೊರಟು ಹೋಗಿದ್ದ. ಇಷ್ಟಕ್ಕೂ ನಾನು ಹಾಗೆ ಹೇಳಿದ್ದರಲ್ಲಿ ತಪ್ಪೇನಿದೆ?
ದಿನದ ಮೂರೂ ಹೊತ್ತು ಇಡೀ ಲೋಕಕ್ಕೆಲ್ಲ ಧರ್ಮಬೋಧನೆ ಮಾಡುವ ಈ ಧರ್ಮರಾಯನಿಗೆ ಜೂಜಾಟದಲ್ಲಿ
ಸ್ವಂತ ಹೆಂಡತಿಯನ್ನೇ ಪಣಕ್ಕಿಡುವದು ಶುದ್ಧ ಅಧರ್ಮವೆಂದು ಯಾಕೆ ಗೊತ್ತಾಗಲಿಲ್ಲ? ಕೌರವನ ತುಂಬಿದ 
ಆಸ್ಥಾನದಲ್ಲಿ ಹಾಡುಹಗಲೇ ನನ್ನನ್ನು ವೇಶ್ಯೆಯನ್ನಾಗಿಸಲು ಕುಮ್ಮಕ್ಕು ನೀಡಿದ ಈ ಧರ್ಮರಾಯನನ್ನು ನಾನು ಅದ್ಯಾವ 
ಮುಖದಿಂದ ಸ್ವಾಗತಿಸಬಹುದಿತ್ತು? ಆವತ್ತು ಅದೆಂಥ ಸಿಟ್ಟಿತ್ತು ಈ ಭೀಮನ ಕಣ್ಣುಗಳಲ್ಲಿ. ಅದುರುತ್ತಿದ್ದ ತುಟಿಗಳನ್ನು
ಕಚ್ಚಿಹಿಡಿದು ಸ್ವಂತ ಅಣ್ಣನ ಕೈಗಳನ್ನೇ ಕತ್ತರಿಸಲು ಮುಂದಾಗಿದ್ದ!
ಆದರೆ ಅರ್ಜುನ ಅಡ್ಡ ಬಂದಿದ್ದ.ಎಷ್ಟಾದರೂ ಧರ್ಮರಾಯನ ಪಡಿಯಚ್ಚು ತಾನೇ?ಯಾವಾಗ ನೋಡಿದರೂ ಕನ್ಯೆಯರ 
ಹಿಂದೆ ಓಡುತ್ತಲೋ,ತನ್ನ ಶತ್ರುಗಳ ನೈಪುಣ್ಯತೆಯ ಬಗ್ಗೆ ಮತ್ಸರ ಕಾರುತ್ತಲೋ ಅರ್ಧಜೀವನ ಮುಗಿಸಿದ ಈ ಅರ್ಜುನ 
ಯಾವತ್ತು ತನ್ನೊಂದಿಗೆ ಪ್ರೀತಿಯ ಮಾತುಗಳನ್ನಾಡಿದ್ದ?
ಇನ್ನು ನಕುಲ-ಸಹದೇವರೆಂಬ ಅವಳಿಗಳೋ:ಹೆಂಡತಿಯೊಂದಿಗೆ ಪ್ರೇಮಿಸಬೇಕೆಂದರೂ ಕೂಡ,
"ಅಣ್ಣ,ನಮಗೆ ಆಶೀರ್ವದಿಸು.." ಎಂದು ಬೇಡಿಕೊಳ್ಳುವಂಥ ಶೂರಾಗ್ರರು!

ಅದ್ಯಾವ ಪಾಪ ಮಾಡಿದ್ದೆನೋ, ಈ ಕುಂತಿಯೆಂಬ ಮಹಾತಾಯಿ ಇವರೆಲ್ಲರಿಗೂ ನನ್ನನ್ನು ಸೀರೆಯಂತೆ ಹರಿದು ಹಂಚಿಬಿಟ್ಟಳು.
ಆದರೆ ನನ್ನ ಪುಣ್ಯ,ಕೌರವರಂತೆ ಇವರೂ ನೂರು ಜನರಿದ್ದರೆ ಆ ಇಡೀ ಗುಂಪನ್ನೆಲ್ಲ ನನ್ನ ತಲೆಗೆ ಕಟ್ಟುತ್ತಿದ್ದಳೋ  ಏನೋ..
ಆದರೆ ಒಂದಂತೂ ನಿಜ:ಇವತ್ತಿಗೂ ಇವರೆಲ್ಲರ ಪೈಕಿ ನಾನು ಅಷ್ಟಿಷ್ಟು ಗೌರವಿಸುವ ಮನುಷ್ಯನೆಂದರೆ ಅದು ಅರ್ಜುನ ಮಾತ್ರ.
ಯಾಕೆಂದರೆ ಆವತ್ತು ಇದೇ ಅರ್ಜುನ ಮತ್ಸ್ಯಯಂತ್ರ ಹೊಡೆದು ಉರುಳಿಸಿದ್ದರಿಂದಲೇ ತಾನೇ ಈವತ್ತು ಭೀಮನಂಥ ಗಂಡ ನನಗೆ 
ದೊರಕಿದ್ದು?ಹಾಗೆಯೇ ಧರ್ಮರಾಯ,ನಕುಲ-ಸಹದೇವ ಮತ್ತು ಕುಂತಿಯರನ್ನು ಈ ರೀತಿಯ ಒಂದಿಲ್ಲೊಂದು ವಿಚಿತ್ರ 
ಕಾರಣಗಳಿಗಾಗಿಯೇ ಪ್ರೀತಿಸುತ್ತಿದ್ದೇನೆ. ಆದರೆ ಸತ್ಯವಾಗಿಯೂ ಪ್ರೇಮಿಸಿದ್ದು ಮಾತ್ರ ಭೀಮನನ್ನೇ!   
ಓಹ್ ಭೀಮ..ನನ್ನ ಭೀಮ!

ದೊರೆಯೇ,ನನಗಾಗಿ ನೀನು ಎಷ್ಟೆಲ್ಲ ಕಷ್ಟಪಟ್ಟೆ.ನನಗೋಸ್ಕರ ಯಾರನ್ನೆಲ್ಲ ಕೊಂದೆ.
ನಿಜ,ನೀನು ಒರಟ.ನೀನು ಹುಂಬ.ಆದರೆ ಅಷ್ಟೇ ಮುಗ್ಧ.ನಮ್ಮಿಬ್ಬರಲ್ಲಿ ಇದ್ದ ವಿಚಿತ್ರ ಸಲುಗೆಯಿಂದಲೇ ನನ್ನ ಕಷ್ಟಗಳನ್ನೆಲ್ಲ 
ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ.ಪ್ರತೀ ಸಾರಿಯೂ ನನ್ನ ಶೀಲಕ್ಕೆ ನೀನೇ ರಕ್ಷಕನಾಗುತ್ತಿದ್ದೆ.ಜೀವನವಿಡೀ ನೀನೊಬ್ಬನೇ 
ನನ್ನ ಸಂತೈಸಬಾರದೇಕೆ ಎಂದು ಎಷ್ಟೋ ಸಲ ಹಂಬಲಿಸಿದ್ದಿದೆ.
ಭೀಮಸೇನ,ನೀನೇ ನಿಜವಾದ ಗಂಡಸು.ಉಳಿದವರಂತೆ ನೀನು ಕೇವಲ ಅಣ್ಣನ ಆಜ್ಞಾವರ್ತಿಯಾಗಲಿಲ್ಲ.
ಉಳಿದವರಂತೆ ಕೇವಲ ತಾಯಿಯನ್ನು ಪೂಜಿಸುತ್ತ ಕೂರಲಿಲ್ಲ.ಬದಲಾಗಿ ನಿನ್ನದೇ ಆದ ಮೊಂಡುದಾರಿ ಹಿಡಿದೆ.
ತಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡೆ;ನನ್ನನ್ನು ಎದೆಯೊಳಗೆ ಬಚ್ಚಿಟ್ಟುಕೊಂಡೆ!

ಕಳೆದ ಸಾರಿಯ ಹುಣ್ಣಿಮೆಯಿರಬೇಕು. ನನ್ನ ಬಿಚ್ಚಿದ ಕೂದಲಿನಲ್ಲಿ ಕೈಯಾಡಿಸುತ್ತ ಕುಳಿತಿದ್ದ ನೀನು ಇದ್ದಕ್ಕಿದ್ದಂತೆ 
ಗದ್ಗದಿತನಾಗಿ "ಪಾಲೀ, ಬಿಚ್ಚಿದ ಕೂದಲಿಗೆ ಇದೋ ನನ್ನ ಕೊನೆ ಮುತ್ತು..!" ಎಂದು ಹೇಳಿ ಹೊರಟು ಹೋಗಿದ್ದೆ..
ಪಾಲೀ!
ಎಂಥ ವಿಚಿತ್ರ ಹೆಸರು.ನೀನು ಕರೆಯುತ್ತಿದ್ದುದೇ ಹಾಗಲ್ಲವೇ?ಅದೇಕೋ ನಿನ್ನ ಆ ಕೊನೆಯ ಮುತ್ತು ಎನ್ನುವ ಮಾತು 
ನನ್ನಲ್ಲಿ ಭಯ ಹುಟ್ಟಿಸುತ್ತಿದೆ.ನೀನಲ್ಲಿ ದುರ್ಯೋಧನನೊಂದಿಗೆ ಕಾದಾಡುತ್ತಿರುವೆ.ನಾನಿಲ್ಲಿ ಹೇಳಿಕೊಳ್ಳಲಾಗದಂಥ
ತಳಮಳ ಭರಿಸುತ್ತಿದ್ದೇನೆ. ನೆನಪಿಸಿಕೋ:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ.ನೆನಪಿಡು:ಅಲ್ಲಿ ನಿನಗೇನಾದರೂ 
ಆಗಿದ್ದೇ ಆದಲ್ಲಿ ನಾನು ದ್ರುಪದನ ಮಗಳೇ ಅಲ್ಲ..
* * *
ಹಾಗಂತ ಸ್ವಗತದಲ್ಲಿ ಹೇಳಿಕೊಳ್ಳುತ್ತಿರುವಾಗಲೇ ರಪ್ಪೆಂದು ಹೊಡೆದ ಗಾಳಿಯ ಹೊಡೆತಕ್ಕೆ ಪಾಂಚಾಲಿಯ ಬಿಚ್ಚಿದ 
ಕೂದಲು ಆಕೆಯ ಕಿವಿಯಲ್ಲಿನ ಆಭರಣಕ್ಕೆ ಸಿಕ್ಕಿಕೊಳ್ಳುತ್ತದೆ. ನೋವಾಗದಂತೆ ಹುಷಾರಾಗಿ ಅದನ್ನು ಬಿಡಿಸಿಕೊಳ್ಳುತ್ತಿರುವಾಗಲೇ 
ಮುಂಬಾಗಿಲಿನಲ್ಲಿ ಬಳಲಿ ಬೆಂಡಾಗಿರುವ ಭೀಮನ ಮುಖ ಕಾಣಿಸುತ್ತದೆ.ಆತನ ಬೊಗಸೆ ತುಂಬ ದುರ್ಯೋಧನನ
ಹಸೀ ರಕ್ತ!
ಪಾಂಚಾಲಿ ಆನಂದಭಾಷ್ಪ ಸ್ಫುರಿಸುತ್ತಲೇ ಕನವರಿಸತೊಡಗುತ್ತಾಳೆ:
ಓಹ್ ಭೀಮ..ನನ್ನ ಭೀಮ!
***