Thursday, May 19, 2011

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ


                                          ಚಿತ್ರ: ಇಂಟರ್ನೆಟ್ 


ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ. ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು, ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ. ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ. ಗೌರವವಿದೆ. ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ, ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ, ಎಲ್ಲಿಂದೆಲ್ಲಿಗೋ ಲಿಂಕ್ ಕೊಟ್ಟು ಇನ್ನೆಲ್ಲೋ ಶಾಕ್ ಕೊಟ್ಟು ಕೊನೆಗೆ ಅದು ಹ್ಯಾಗೋ circuit complete ಮಾಡೇ ಬಿಡುತ್ತಾರೆ! 
ನಾನು ಕತೆಗಾರನಲ್ಲ.

   ನಾನಾಗ ಐದನೇ ಕ್ಲಾಸು. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ರ ವಿದ್ಯಾರ್ಥಿ. ಸದರಿ ಶಾಲೆಯ system ಸ್ವಲ್ಪ ವಿಚಿತ್ರ ಇತ್ತು. ನಾಲ್ಕನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ತರಗತಿಗಳಿದ್ದ ಈ ಶಾಲೆ ಬೆಳಿಗ್ಗೆ ಏಳರಿಂದ ಮಧ್ಯಾನ್ಹ ಹನ್ನೆರಡರವರೆಗೂ 'ಶಾಲೆ ನಂ.2' ಎಂದು ಕರೆಸಿಕೊಳ್ಳುತ್ತಿತ್ತು. ಮಧ್ಯಾನ್ಹ ಹನ್ನೆರಡರಿಂದ ಸಂಜೆ ಆರರವರೆಗೂ ಇದೇ ಸ್ಕೂಲು 'ಶಾಲೆ ನಂ.14' ಎಂದು ಗುರುತಿಸಲ್ಪಡುತ್ತಿತ್ತು. ಆಗ ಒಂದರಿಂದ  ಮೂರನೇ ತರಗತಿಗಳು ನಡೆಯುತ್ತಿದ್ದವು. 

   ಇಂಥ ಶಾಲೆ ನಂ.2 ರಲ್ಲಿ ನಾನಾಗ ಐದನೇ ಕ್ಲಾಸಿನಲ್ಲಿದ್ದೆ. ಖಡಕ್ ಮೇಷ್ಟ್ರು. ಗಾಂಧೀ ಟೋಪಿ ಮತ್ತು ಪಂಜೆ 
ಧರಿಸುತ್ತಿದ್ದ ಅವರು ನಮ್ಮಷ್ಟೇ ಎತ್ತರವಿದ್ದರೂ ಕೂಡ ನಮ್ಮಲ್ಲೊಂದು ವಿಚಿತ್ರ ಭಯ ಮೂಡಿಸಿದ್ದರು. ಆಗಷ್ಟೇ ನಮಗೆ ಇಂಗ್ಲೀಶ್ syllabus ಶುರುವಾಗಿತ್ತು. ಮನೆಯಲ್ಲಿ ಅಕ್ಕ ನನ್ನ ಒಂದನೇ ಕ್ಲಾಸಿನಿಂದಲೇ ಇಂಗ್ಲೀಶ್ 
ಪಾಠ ಶುರು ಮಾಡಿಬಿಟ್ಟಿದ್ದರಿಂದ ಐದನೇ ಕ್ಲಾಸಿನ ಇಂಗ್ಲೀಷಿನ ಬಗ್ಗೆ ನನಗೊಂಥರಾ ತಾತ್ಸಾರ ಬಂದಂತಿತ್ತು.  
ಆದರೆ ಪಾಪ, ಮೇಷ್ಟ್ರು ಅತ್ಯಂತ ಶ್ರದ್ಧೆಯಿಂದ ನಮಗೆಲ್ಲ ಇಂಗ್ಲೀಶ್ ಕಲಿಸುತ್ತಿದ್ದರು. ಬೆಳಿಗ್ಗೆ ಮೊದಲನೇ 
period ನಿಂದಲೇ "ದಿ ವಿಂಡೋ, ದಿ ಡೋರ್.." ಎಂದು ಆಂಗಿಕವಾಗಿ ತೋರಿಸುತ್ತಲೂ, ಜೊತೆಗೆ ನಿಜವಾದ ಕಿಟಕಿ, ಬಾಗಿಲುಗಳನ್ನು ದರುಶನ ಮಾಡಿಸುತ್ತಲೂ ಇಂಗ್ಲೀಷನ್ನು ಕಲಿಸುತ್ತಿದ್ದರು.

   ಇಲ್ಲೊಂದು ವಿಷಯ ಹೇಳಲೇಬೇಕು: ಮುಂದೆ ಹೈಸ್ಕೂಲ್, ಕಾಲೇಜಿಗೆ ಹೋದಂತೆಲ್ಲ ಪ್ರತಿಯೊಂದು ವಿಷಯಕ್ಕೂ ಬೇರೆ ಬೇರೆ ಮೇಷ್ಟ್ರು, ಬೇರೆ ಬೇರೆ periodಗಳು ಬದಲಾಗುತ್ತಿದ್ದುದನ್ನು ನೋಡಿದ ಬಳಿಕ ನಮ್ಮ ಹಳೆಯ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳ ಆಲ್ ರೌಂಡರ್ ಆಟ ನೋಡಿ ಬೆರಗಾಗಿದ್ದೂ ಉಂಟು. ಯಾಕೆಂದರೆ ನಮಗೆಲ್ಲ ಪ್ರೈಮರಿಯಲ್ಲಿ ಒಂದು ಕ್ಲಾಸಿಗೆ ಒಬ್ಬರೇ ಮೇಷ್ಟ್ರು. ಅವರೇ ಕನ್ನಡ ಕಲಿಸಬೇಕು. ಅವರೇ ಭೂಗೋಳ ಕಲಿಸಬೇಕು. ಅವರೇ ದಿ ವಿಂಡೋ, ದಿ ಡೋರ್ ಅನ್ನಬೇಕು. ಅವರೇ ವಿಜ್ಞಾನದ ಸೂತ್ರ ಕಲಿಸಬೇಕು ಮತ್ತು ಅವರೇ 
ಕೈಯಲ್ಲೊಂದು ಮರದ ಕೋನಮಾಪಕ ಹಿಡಿದು ಲಂಬಕೋನ-ವಿಶಾಲಕೋನ ಅಂತ ರೇಖಾಗಣಿತ ಕಲಿಸಬೇಕು. 
ಬಹುಶಃ ಇದೇ ಕಾರಣಕ್ಕೆ ಏನೋ,ಒಂದರಿಂದ ಏಳನೇ ಕ್ಲಾಸಿನವರೆಗೆ ನನಗೆ ಕಲಿಸಿದ ಎಲ್ಲ ಮೇಷ್ಟ್ರು, ಮಿಸ್ಸುಗಳ ಹೆಸರುಗಳನ್ನು ನಾನಿನ್ನೂ ಮರೆತಿಲ್ಲ. ಆದರೆ ಬಹುತೇಕ ಹೈಸ್ಕೂಲು-ಕಾಲೇಜುಗಳ ಮೇಷ್ಟ್ರುಗಳ ಹೆಸರು ನೆನಪಿಲ್ಲ.

   ಹೀಗಿದ್ದ ನಮ್ಮ ಪ್ರೈಮರಿ ಮೇಷ್ಟ್ರುಗಳ ತರಹೇವಾರಿ ಕೆಲಸದ ಮಧ್ಯೆ ಅವರಿಗೆ ಮತ್ತೊಂದು ಕೆಲಸವೂ ಇತ್ತು. 
ಆಗಾಗ ನಮಗೆಲ್ಲ ಅವರು ನೀತಿಪಾಠ ಹೇಳಿಕೊಡಬೇಕಿತ್ತು. ಸಾಲದೆಂಬಂತೆ ನಮ್ಮ ಇನ್ನಿತರ extra curriculum
activities ಬಗ್ಗೆ ಗಮನ ಕೊಡಬೇಕಾಗಿತ್ತು. ಅಂಥ activities ನ ಮುಂದುವರೆದ ಭಾಗವೆಂದರೆ  ಡೈರಿ! ಆಗ ನಾವೆಲ್ಲ ಒಂದು ಡೈರಿ maintainಮಾಡಬೇಕಾಗಿತ್ತು. ಅದರ ಹೆಸರು 'ದಿನಕ್ಕೊಂದು ಒಳ್ಳೆಯ ಕೆಲಸ' ಅಂತ. ಅದರಲ್ಲಿ ಪ್ರತಿದಿನ ನಾವೇನು ಒಳ್ಳೆಯ ಕೆಲಸ ಮಾಡಿದೆವು ಅಂತ ಬರೆದು ಮೇಷ್ಟ್ರಿಗೆ report ಮಾಡಬೇಕಾಗಿತ್ತು ಮತ್ತು ಪ್ರತಿದಿನ ಮೇಷ್ಟ್ರು ಅದನ್ನು ನೋಡಿ ಸಹಿ ಮಾಡಬೇಕಾಗುತ್ತಿತ್ತು.

   ಆದರೆ ಮೇಷ್ಟ್ರಿಗೆ ತಮ್ಮದೇ ಆದ ನಾನಾ ರೀತಿಯ ಕೆಲಸ, ಜಂಜಡಗಳಿದ್ದವಲ್ಲ? ಹೀಗಾಗಿ ಅವರು ನಮ್ಮಂಥ 
ಪಿಳ್ಳೆಗಳ ಒಳ್ಳೊಳ್ಳೆಯ (?) ಕೆಲಸಗಳನ್ನು ಓದುವ ಗೋಜಿಗೆ ಹೋಗದೆ ಕಣ್ಣುಮುಚ್ಚಿ ಸಹಿ ಗೀಚುತ್ತಿದ್ದರು. ಇದೆಲ್ಲದರ ಮಧ್ಯೆ ಡೈರಿ maintain ಮಾಡುವದು ನನಗೆ ಭಯಂಕರ ಕಿರಿಕಿರಿ ಅನಿಸುತ್ತಿತ್ತು. ಮಾಡಲಿಕ್ಕೆ ಯಾವುದೂ ಒಳ್ಳೆಯ ಕೆಲಸ ಸಿಗದೇ ಕಂಗಾಲಾಗುತ್ತಿದ್ದೆ. ಇಷ್ಟಕ್ಕೂ ಏನು ಬರೆಯಬೇಕೆಂದು ನಮಗೂ ಗೊತ್ತಿರಲಿಲ್ಲ. ಹೋಗಲಿ, ಯಾವದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವದೂ ನಮಗೆ ಆಗ ಗೊತ್ತಿತ್ತೋ ಇಲ್ಲವೋ, ಒಟ್ಟಿನಲ್ಲಿ ನಾವು ಡೈರಿ ಬರೆಯುತ್ತಿದ್ದೆವು ಮತ್ತು ಅವರು ಸೈನು ಗೀಚುತ್ತಿದ್ದರು.

   ಒಂದು ದಿನ, ಮೇಷ್ಟ್ರು ಮೂಡು ಚೆನ್ನಾಗಿತ್ತೋ ಅಥವಾ ನನ್ನ ಗ್ರಹಚಾರ ಕೆಟ್ಟಿತ್ತೋ ಗೊತ್ತಿಲ್ಲ; ಆವತ್ತು ಮೇಷ್ಟ್ರಿಗೆ 
ನನ್ನ ಮೇಲೆ ಕೊಂಚ  ಜಾಸ್ತಿಯೇ ಪ್ರೀತಿ ಉಕ್ಕಿ ಹರಿಯಿತು. ಪರಿಣಾಮವಾಗಿ ನನ್ನ ಡೈರಿಯ ಪುಟಗಳನ್ನು 
random ಆಗಿ ಚೆಕ್ ಮಾಡುತ್ತಬಂದರು. ಆಮೇಲೆ ಕಣ್ಣು ಕಿರಿದು ಮಾಡಿಕೊಂಡು ಪ್ರತಿ ಪುಟವನ್ನೂ ಬಿಡದೇ
ಓದುತ್ತ ಬಂದರು. ತಿರುಗಿ ತಿರುಗಿ ಮತ್ತೇ ಮತ್ತೇ ನಸುನಗುತ್ತ ಓದಿದರೂ, ಓದಿದರೂ, ಓದಿದರೂ..
ನಂತರ ರಪರಪನೆ ಬೆನ್ನಿಗೆ ಬಾರಿಸತೊಡಗಿದರು..

"ಲೇ ಭಟ್ಟ! ನಿಮ್ಮ ಮನೇಲಿ ಊಟಕ್ಕೇನು ನೀವು ತಿನ್ನೋದಿಲ್ಲೇನು? ಬರೇ ಬಾಳೆಹಣ್ಣು ತಿಂದು 
ಚಹಾ ಕುಡೀತಿರೇನು..?" ಅನ್ನುತ್ತ ಮತ್ತೆರೆಡು ಬೆನ್ನಿಗೆ ಬಿಟ್ಟರು!

ಆಗಿದ್ದಿಷ್ಟೆ: ಮಾಡಲು ಯಾವದೇ ಒಳ್ಳೆಯ ಕೆಲಸ ಸಿಗದೇ ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ alternate  
ದಿನಕ್ಕೊಮ್ಮೆ ಎರಡೇ ಕೆಲಸ ಮಾಡುತ್ತಿದ್ದೆನೆಂದು ಡೈರಿ ಹೇಳುತ್ತಿತ್ತು. ಅದೇನೆಂದರೆ:
1. ಇವತ್ತು ಮನೆಗೆ ಚಹಾಪುಡಿ ತಂದೆ.
2. ದಾರಿಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಕಸದ ತೊಟ್ಟಿಯಲ್ಲಿ ಹಾಕಿದೆ.

ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳಿಗೇ ಯಾಕೆ ಜಾಸ್ತಿ option ಗಳಿವೆ ಅಂತ ಇವತ್ತಿಗೂ ಗೊತ್ತಾಗಿಲ್ಲ.
                                                                    *
ವಾರ್ಷಿಕ ಪರೀಕ್ಷೆಯೆಂದರೆ ನನಗೆ ಯಾವಾಗಲೂ ಭಯ. ಸಾಮಾನ್ಯವಾಗಿ ಎಲ್ಲರೂ ಒಂದೇ ಸಲ ಪರೀಕ್ಷೆ ಬರೆದರೆ 
ನಾನು ಒಂದೇ question ಪೇಪರಿಗೆ ಎರೆಡೆರಡು ಸಲ ಬರೀಬೇಕಿತ್ತು. ಒಮ್ಮೆ ಶಾಲೆಯಲ್ಲಿ ಮತ್ತೊಮ್ಮೆ ಮನೆಯಲ್ಲಿ! 
ಪರೀಕ್ಷೆಯಲ್ಲಿನ ಉಳಿದ ವಿಷಯಗಳನ್ನು ಅಕ್ಕ ನೋಡಿಕೊಂಡರೆ ಗಣಿತ ವಿಷಯವನ್ನು ಮಾತ್ರ ತಂದೆ 
ನೋಡಿಕೊಳ್ಳುತ್ತಿದ್ದರು. ಅಕ್ಕನದೇನೋ ಕಿರಿಕಿರಿಯಿರಲಿಲ್ಲ. "ಪರೀಕ್ಷೆಯಲ್ಲಿ ಸರಿಯಾಗೇ ಬರ್ದಿದೀನಿ, ಇಲ್ಲಿ ಮಾತ್ರ ಏನೋ ಯಡವಟ್ಟು ಆಯಿತು.." ಅಂತ ಅಳುತ್ತ ಹೇಳಿದ ಕೂಡಲೇ ಅಕ್ಕ ಸುಮ್ಮನಾಗುತ್ತಿದ್ದಳು. 

   ಆದರೆ ತಂದೆಯ ಹತ್ತಿರ ಇದ್ಯಾವುದೂ ನಡೆಯುತ್ತಿರಲಿಲ್ಲ. ಯಾಕೆಂದರೆ ಅದು ಗಣಿತ. ಅಲ್ಲಿ end result ಮಾತ್ರ ಮುಖ್ಯ! ಇಷ್ಟಕ್ಕೆ ಅಷ್ಟಾದರೆ ಅಷ್ಟಕ್ಕೆ ಎಷ್ಟು? ಎಂಬ ಧಾಟಿಯ ಪ್ರಶ್ನೆಗಳಿಗೆ ನಾನು  academic formula ಗಳಿಗೆ ಜೋತುಬಿದ್ದು ಲೆಕ್ಕ ಬಿಡಿಸುತ್ತಿದ್ದರೆ, ಅವರು ತಮ್ಮದೇ ಆದ ಇನ್ಯಾವುದೋ street formula 
ಉಪಯೋಗಿಸಿ ವೇಗವಾಗಿ ಉತ್ತರ ತರುತ್ತಿದ್ದರು. ಕೊನೆಗೆ ನೋಡಿದರೆ ಇಬ್ಬರ ಉತ್ತರವೂ ಒಂದೇ ಆಗಿರುತ್ತಿತ್ತು. ನಾನು ಪರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ academic ಫಾರ್ಮುಲಾ ಉಪಯೋಗಿಸಬೇಕೋ ಅಥವಾ ತಂದೆಯ street ಫಾರ್ಮುಲಾ ಉಪಯೋಗಿಸಬೇಕೋ ಎಂದು ತಿಳಿಯದೆ ಗೊಂದಲಕ್ಕೀಡಾಗಿ ಕಣ್ ಕಣ್  ಬಿಡುತ್ತಿದ್ದೆ.

   ಹೀಗೆ ನನ್ನ ಒಂದನೇ ಕ್ಲಾಸಿನಿಂದ ಶುರುವಾದ ಈ ಪರೀಕ್ಷೆ ಎಂಬ ಗುಮ್ಮ ಅಕ್ಕ ಮದುವೆಯಾಗಿ ಅತ್ತೆ ಮನೆ 
ಸೇರುವವರೆಗೂ- ಅಂದರೆ ತೀರ ನನ್ನ ಒಂಭತ್ತನೇ ಕ್ಲಾಸಿನವರೆಗೂ ಕಾಡಿತು. ಆದರೆ ಅದೇಕೋ ಗೊತ್ತಿಲ್ಲ,
ಇವತ್ತಿಗೂ ನನಗೊಂದು ವಿಚಿತ್ರ ಕನಸು ಬೀಳುತ್ತದೆ: ನಾಳೆ ಕಾಲೇಜಿನಲ್ಲಿ digital electronics lab exam ಇದೆ ಅಂತ ಗೊತ್ತಿದ್ದರೂ ಹಿಂದಿನ ರಾತ್ರಿಯ ವರೆಗೂ ನಾನು lab journals ಬರೆದಿರುವದಿಲ್ಲ! ಇಂಥದೊಂದು ಕನಸು ಏನಿಲ್ಲವೆಂದರೂ ನೂರಾರು ಸಲ ಬಿದ್ದಿದೆ. ನಿದ್ರೆಯಲ್ಲೇ ಬೆವತಿದ್ದಿದೆ. ಇದೇ ಕಾರಣಕ್ಕೆ ತೀರ ಒಮ್ಮೊಮ್ಮೆ 
ತಲೆಕೆಡಿಸಿಕೊಂಡು psychiatrist ನನ್ನು ಭೇಟಿ ಮಾಡುವ ಹಂತಕ್ಕೂ ಹೋಗಿ ನಿರ್ಧಾರ ಬದಲಿಸಿದ್ದೇನೆ. 

   ಸರಿ, ಪರಿಸ್ಥಿತಿ ಹೀಗಿದ್ದ ಸಂದರ್ಭದಲ್ಲಿ ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ವಾರ್ಷಿಕ ಪರೀಕ್ಷೆ ಬಂತು. ತಗೊಳ್ರಪ,
dual duty ಶುರು! ಮೊದಲನೇ ಎರಡು ದಿವಸ ಶಾಲೆಯಲ್ಲೂ,ಮನೆಯಲ್ಲೂ exam ಎದುರಿಸಿದ್ದಾಯ್ತು. ಮೂರನೇ ದಿನ ಅದೇನು ತಲೆ ಕೆಟ್ಟಿತೋ ಏನೋ, ಶಾಲೆಯಲ್ಲಿ ಪೇಪರ್ ಬರೆದವನೇ ಸೀದಾ ಮನೆಗೆ ಬಂದು ಅಕ್ಕನ 
ಮುಖಕ್ಕೆ answer sheet ಬೀಸಾಕಿ ಭಂಡ ಧೈರ್ಯದಿಂದ ಹೇಳಿದೆ:
"ಅದೇನು ಚೆಕ್ ಮಾಡ್ಕೋತೀಯೋ ಮಾಡ್ಕ! ಇನ್ನೊಂದು ಸಲ ಮತ್ತೇ ಮನೇಲಿ answer ಬರಿಯೋದಿಲ್ಲ .."
ಅಕ್ಕನಿಗೆ ಒಂದೆಡೆ ಗಾಭರಿ.ಇನ್ನೊಂದೆಡೆ ನಗು. ಕ್ಲಾಸಿನಲ್ಲಿ  ಟೀಚರ್ ಗೆ ಕೊಡಬೇಕಾಗಿದ್ದ answer sheet ನೇರವಾಗಿ ಮನೆಗೇತಂದು ಅಕ್ಕನ ಮುಖಕ್ಕೆ ಹಿಡಿದಿದ್ದೆ..
                                                                   *
ಅದಾಗಿ, ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಕ್ಲೈಂಟು, ಪ್ರತಿದಿನ ಕಾನ್ ಕಾಲ್ಸು, ಪ್ರತಿದಿನ ಶೇವಿಂಗು, ಅದೇ 
ಲ್ಯಾಪ್ ಟಾಪು, ಅದೇ ಆಪರೇಟಿಂಗ್ ಸಿಸ್ಟಮ್ಮು, ಅದೇ ಸರ್ವರ್ರು, ಅದೇ ಶೇರು, ಅವೆರಡರ  ಕ್ರ್ಯಾಶು, ಅವರು ಯಾಕೆ ಮಾತು ಬಿಟ್ಟರು, ಇವರು ಯಾಕೆ ಮರೆತು ಬಿಟ್ರು ಅಂತೆಲ್ಲ ತಲೆಚಿಟ್ಟು ಹಿಡಿದು ಕೊನೆಗೊಮ್ಮೆ ಮನಸು ಮಾಲಿಂಗ, ಮಿದುಳು ಶಂಭುಲಿಂಗ ಅಂತ ಪರಸ್ಪರ ಮುನಿಸಿಕೊಂಡು ಮೈಮನವೆಲ್ಲ ಜರ್ಜರಿತಗೊಂಡಾಗ-
ಹೃದಯ ಮಾತ್ರ ಮೆಲ್ಲಗೇ ಸಂತೈಸತೊಡಗುತ್ತದೆ: ಮುನಿಸೇಕೆ ಮಿತ್ರ? ಬಿಟ್ಟಾಕು ಎಲ್ಲ. ಅಲ್ಲಿದೆ ನೋಡು ಬಾಂಬೆ ಮಿಠಾಯಿ. ಕೆಂಪು ಬಣ್ಣದ ಈ ಬಾಂಬೆ ಮಿಠಾಯಿಗೆ ಶೇವಿಂಗೇ ಬೇಡ! ಬೇಕಾದರೆ ಮೀಸೆ ಹಚ್ಚಿಕೋ. ಮೀಸೆ 
ಬೇಸರವಾದರೆ ಅದನ್ನೇ ವಾಚು ಮಾಡಿಕೋ. ಇನ್ನೂ ಬೇಸರವಾದರೆ ಮಿಠಾಯಿಯನ್ನೇ ಚಪ್ಪರಿಸು. ತಲ್ಲಣಿಸದಿರು ಮಿತ್ರ,ಕೊಂಚ ಹಿಂತಿರುಗಿ ನೋಡು. ಇನ್ನೂ ಅಲ್ಲೇ ಇದೆ ನಮ್ಮೆಲ್ಲರ ಮಾಯಾಲಾಂದ್ರ; ಜೊತೆಗೆ ಅದರ ಬೆಳಕೂ!

ಹಾಗೆ ಕಂಡ ಬೆಳಕಿನಲ್ಲಿ ಮಿದುಳು ಮತ್ತೇ ಕಾಗದದ ದೋಣಿಯಾದಂತೆ, ಮನಸು ಮಳೆನೀರಾದಂತೆ...
                                                                 -

38 comments:

Harish Athreya said...

ಆತ್ಮೀಯ
ಅದ್ಭುತವಾದ ಬರಹ. ಇ೦ದಿನ ಜ೦ಜಾಟಗಳ ಚಿತ್ರಣ. ಅದೇ ಸರ್ವರ್ ಅದೇ ಕ್ಲೈ೦ಟ್ ಮೀಟಿ೦ಗ್. ಹಿ೦ದಿನ ನೆನಕೆಗಳಜೊತೆಗಿನ ಪಯಣ ಸು೦ದರ. ಹ್ಮ್ ಚೆನ್ನಾಗಿದೆ
ಹರಿ

Chamaraj Savadi said...

ರಾಘವೇಂದ್ರ ಅವರೇ,

ತುಂಬ ಸೊಗಸಾಗಿ ಬರೆದಿದ್ದೀರಿ. ಬಾಲ್ಯದ ನೆನಪುಗಳು ಯಾವಾಗಲೂ ಹಸಿರು. ಇವತ್ತಿನ ನಮ್ಮ ಬದುಕಿನ ತಾಯಿಬೇರು ಅದು. ತುಂಬ ಇಷ್ಟವಾಯಿತು.

ಬಾಂಬೆ ಮಿಠಾಯಿ ವಾಚು, ಮೀಸೆ ಮಾಡಿಕೊಳ್ಳದೇ ನಾವ್ಯಾರೂ ದೊಡ್ಡವರಾಗಿಲ್ಲ ಬಿಡಿ. ನಿಮ್ಮ ನೆನಪುಗಳು ನಮ್ಮವೂ ಹೌದು. ನನ್ನದೇ ಬಾಲ್ಯದ ನೆನಪುಗಳು ಮತ್ತೊಮ್ಮೆ ಮನಸ್ಸಿನೆದುರು ಹಾಯ್ದುಹೋದವು.

ಮನಸ್ಸಿನ ತುಂಬ ಬಾಂಬೆ ಮಿಠಾಯಿ ಮತ್ತು ಅದನ್ನು ಮಾರುತ್ತಿದ್ದವ ಹೊರಡಿಸುತ್ತಿದ್ದ ವಿಚಿತ್ರ ಗಂಟೆ ಶಬ್ದ.

ತುಂಬಾ ಥ್ಯಾಂಕ್ಸ್‌ರೀ.

ರಾಘವೇಂದ್ರ ಜೋಶಿ said...

@ಹರೀಶರವರೆ,
ಧನ್ಯವಾದಗಳು.ಎಲ್ಲರೂ ಕೇಳುವ ಪ್ರಶ್ನೆಯೊಂದಿದೆ:
ಟೈಮ್ ಮಶೀನ್ ಅನ್ನೋದು ನಿಜವಾಗಲೂ ಇದೆಯಾ ಅಂತ.
ಇದ್ದರೆ,ಎಲ್ಲರೂ ಬಾಲ್ಯದೊಳಗೆ ಮತ್ತೊಮ್ಮೆ ಜಾರುವವರೇ!
:-)

@ಚಾಮರಾಜರೆ,
ನಿಮಗೂ ಥ್ಯಾಂಕ್ಸ್.ಬಾಂಬೆ ಮಿಠಾಯಿ ಇವಾಗ್ಯಾಕೋ ಬರುತ್ತಿಲ್ಲ.
ಬಾಂಬೆ ಟೂರಿಂಗ್ ಟಾಕೀಸ್ ನೆನಪಾಯ್ತ?
ನಮ್ಮ ಹೊಸ ಪೀಳಿಗೆ ನಿಜಕ್ಕೂ ಏನನ್ನು miss ಮಾಡಿಕೊಳ್ತಾ ಇರುವರೆಂಬ
ಅರಿವು ಅವರಿಗೆ ಗೊತ್ತೇ ಇಲ್ಲ ಅನ್ಸುತ್ತೆ..ಅಲ್ವೇನ್ರೀ..

Anonymous said...

Nijavagiyoo odo baraha.higella madidra nivu?
eshtu olleya maja koduva dinagalu.
Odi tumba khishiyaytu marayare..
Thanks

~Suresh

ರಾಘವೇಂದ್ರ ಜೋಶಿ said...

@ಸುರೇಶ ಅವರೇ,
ಧನ್ಯವಾದಗಳು.
ಹೌದು,ತುಂಬಾ ಖುಷಿಯ ದಿನಗಳು ಅವು.
ನಾವು ಮಾಡುತ್ತಿದ್ದ ಕರಾಮತ್ತುಗಳೂ,
ಮನೆಯಲ್ಲಾಗುತ್ತಿದ್ದ ಮಂಗಳಾರತಿಗಳೂ -ಎಲ್ಲ ಮಜಾ ಇತ್ತು.
;-)

Unknown said...

Hi Sir

Very Nice. Oduttiddanthe Nijavaagiyoo nanna manasu Aaaa dinagalige Jaarithu. Balyada Nenapugalu Yavaagalu Hasiru. Nimma Busy schedulenallooo inthaha barahagalige time meesalittideeralla... Great. Innoo aneka inthaha articles odo avakasha namage sigali.

Thanks & regards
Ambika.RK

ರಾಘವೇಂದ್ರ ಜೋಶಿ said...

@ಅಂಬಿಕಾ ಮ್ಯಾಡಂ,
ನಾನೂ ಈ ಬರಹ ಬರೆಯುವಾಗ ಅಷ್ಟೇ ಖುಷಿ
ಅನುಭವಿಸಿದ್ದೇನೆ.ಎಲ್ಲರ ಬಾಲ್ಯವೂ ಅಷ್ಟೇ ಸುಂದರ
ಮತ್ತು ಸಹಜವಾಗಿರುತ್ತದೆ.ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್!

suresh kota said...

:)

ತುಂಬ ಚೆಂದ ಬರೆದಿದ್ದೀರಿ.
good good!

sunaath said...

RJ,
ನೀವು ಮತ್ತೊಮ್ಮೆ ಬಾಲ್ಯದ ‘ರಾಜಾ ರಾಣಿ ದೇಖೋ’ ತೋರಿಸಿದಿರಿ. ತುಂಬ ಆಪ್ತವಾಗಿ ಹಾಗು ಸೊಗಸಾಗಿ ಬರೆದಿದ್ದೀರಿ. ಮನದ ತಲ್ಲಣವನ್ನು ಹೇಗೆ ಕಳೆಯಬೇಕೆನ್ನುವ ಕಲೆಯನ್ನು ತೋರಿಸಿದ್ದೀರಿ!

Yatheesha G S said...

Joshiji,

Nijavaagiyu nammannu namma primary shaala dinagalannu nenapu maadikottiri. Aa dinagalannu thumbaa mis maadkotteeni. Badukina yaava janjaatavillade kaleda madhura nenapagalu avu.

Chandada baraha......

Dhanyavadagalu,
Yatheesh.

ರಾಘವೇಂದ್ರ ಜೋಶಿ said...

@ಸುರೇಶ ಕೋಟ,
ನಮಸ್ಕಾರ ಸಾರ್,ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ!
:-)

@ ಸುನಾಥ ಸರ್,
ಹೌದು ಸರ್,ನೀವು 'ರಾಜಾ ರಾಣಿ ದೇಖೋ' ಅಂದಮೇಲೆ
ಅದು ಬಾಂಬೆ ಟೂರಿಂಗ್ ಟಾಕೀಸ್ ಅನ್ನೋದು ಜ್ಞಾಪಕಕ್ಕೆ ಬಂತು!
:-)

ರಾಘವೇಂದ್ರ ಜೋಶಿ said...

@ಯತೀಶ್ ಜೀ,
ಎಂತಾ ಮಾಡೋದು ಸರ್,
Those days are gone!
:-(

Gubbachchi Sathish said...

ವೆರಿ ನೈಸ್.

ರಾಘವೇಂದ್ರ ಜೋಶಿ said...

ಅವಧಿಯಲ್ಲಿ ಪ್ರಕಟವಾದ ಇದೇ ಲೇಖನಕ್ಕೆ ಬಂದ ಅನಿಸಿಕೆಗಳು.

bharathi says:
May 19, 2011 at 1:49 pm
kelsa maadi thale kettittu .. nimma lekhana odi eega kush ! thumba chennagideree ..

Reply
malathi S says:
May 19, 2011 at 3:22 pm
nanagoo bombay miThayee isTaa..eegaloo

ms

Reply
ರಾಘವೇಂದ್ರ ಜೋಶಿ says:
May 19, 2011 at 6:29 pm
Thank you AVADHI for encouraging my writeups.
Even Thanks to readers for appreciating.


-RJ

Reply
Dr.D.M.Sagar says:
May 19, 2011 at 10:48 pm
Good one, even I do get such terrific nightmares during nights. The only 2 nightmares, which is often a mixture of both dream and reality(!), I still haven’t passed my a) maths exam, and b)language exams, [these dreams recur even after finishing my Ph.D!].

Reply
Anu says:
May 20, 2011 at 2:02 pm
Combination of both comedy and enthusiastic.
Goooooood work! Liked it.

Reply
veda says:
May 20, 2011 at 6:36 pm
“ಅದು ಹೇಗೆ ಅವರು ಇದ್ದಕ್ಕಿದ್ದಂತೆ ಕತೆ ಶುರು ಮಾಡಿ,ಎಲ್ಲೆಲ್ಲೋ ಪಾತ್ರಗಳನ್ನು ತಿರುಗಾಡಿಸಿ,ಎಲ್ಲಿಂದೆಲ್ಲಿಗೋ” nangu e kathegarara bagge heege ansutte. Sogasada Lekhana Joshiyavre.N

Reply
K Kotresh says:
May 20, 2011 at 10:45 pm
Prabhandalli nijavad Bhandan Mukati ಕ್ಲಾಸಿನಲ್ಲಿ ಟೀಚರ್ ಗೆ ಕೊಡಬೇಕಾಗಿದ್ದ answer sheet ನೇರವಾಗಿ ಮನೆಗೇತಂದು ಅಕ್ಕನ ಮುಖಕ್ಕೆ ಹಿಡಿದಿದ್ದೆ..
Mottomme Balyad ninpen anglalli suttuvante madiddir,Nera,Saral,sulalit punching, keep it up

Reply

ರಾಘವೇಂದ್ರ ಜೋಶಿ said...

@@ ಗುಬ್ಬಚ್ಚಿ ಸತೀಶ್ ಅವರೇ,
ಧನ್ಯವಾದಗಳು.ಮತ್ತೆ ಸಿಗೋಣ.

gayatri said...

Thumba channagide Sir.......I just loved reading every line of this article....very refreshing....
Thank you.

ರಾಘವೇಂದ್ರ ಜೋಶಿ said...

@ ಗಾಯತ್ರಿ ಮ್ಯಾಡಂ,
ಎಲ್ಲರ ಬಾಲ್ಯದಲ್ಲೂ ಇಂಥ 'ತರಲೆ'ಗಳು ಇರುವಂಥದ್ದೇ.
ಆದರೆ ಅವನ್ನೇ ಈಗ ನೆನಪಿಸಿಕೊಂಡಾಗ ಆಗುವ
ಖುಷಿಯೇ ಬೇರೆ.ಅಲ್ಲವೇ?
:-)

Anonymous said...

ahaaa.......
Nice prabhanda.Keep on writing.

siddu said...

ಬಾಂಬೆ ಮಿಠಾಯಿ this word itself a great flash back joshi, I was quite busy and hence read you your article late but good one..nice flash back

ರಾಘವೇಂದ್ರ ಜೋಶಿ said...

@ಅನಾನಿಮಸ್,
ಬ್ಲಾಗಿಗೆ ಸ್ವಾಗತ ಮತ್ತು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

@ಸಿದ್ದು ಜೀ,
ಹೌದು.ಬಾಂಬೆ ಮಿಠಾಯಿ ಇವತ್ತಿಗೂ ನಮಗೆಲ್ಲರಿಗೆ
ಹಳೆಯ ಸಿಹಿ ನೆನಪುಗಳನ್ನು ಹೊತ್ತು ತರುತ್ತದೆ.
ಹಾಗೆಯೇ ''ಅಲೀಫಾಕ್" ಅಂತ ಶುಂಟಿ ಮಿಠಾಯಿ ಅವಾಗೆಲ್ಲ
ಸಿಗ್ತಾ ಇತ್ತು..ಬರೀ ಬಸ್ ಸ್ಟ್ಯಾಂಡಿನಲ್ಲಿ.
ಈಗ ಅದೂ ಕೂಡ outdated!

ಸಿದ್ಧಾರ್ಥ said...

ತುಂಬಾ ಸೊಗಸಾದ ಲೇಖನ. ನಿಮ್ಮ ಲೇಖನವನ್ನಾ, ನೆನಪುಗಳನ್ನಾ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ಸಿದ್ಧಾರ್ಥ ಅವರಿಗೆ,
ನಿಮಗೂ ಥ್ಯಾಂಕ್ಸ್.
:-)

ಸುಮ said...

ನಿಮ್ಮ ಬರಹ ನಮ್ಮನ್ನೂ ಒಮ್ಮೆ ಬಾಲ್ಯಕ್ಕೆ ಕರೆದೊಯ್ಯಿತು . ಚೆನ್ನಾಗಿದೆ ಲೇಖನ.

ರಾಘವೇಂದ್ರ ಜೋಶಿ said...

@ ಸುಮ ಅವರೇ,
ಲೇಖನದ ಒಟ್ಟಾರೆ ಉದ್ದೇಶವೂ ಅದೇ ಆಗಿತ್ತು.
ಅವರವರ ಬಾಲ್ಯವನ್ನು ನೆನಪಿಸುವದೇ ಆಗಿತ್ತು.
ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸ್ವಲ್ಪ ಮಟ್ಟಿಗೆ ಉದ್ದೇಶ ಈಡೇರಿದೆ.ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಸಂತೋಷ.

Manjunatha Kollegala said...

ಇಂಥ ಪ್ರಬಂಧಕ್ಕೆ ಸಾಮಾನ್ಯವಾಗಿ ಲಲಿತ ಪ್ರಬಂಧ ಅಂತಾರೆ, ನೀವು ಸುಲಲಿತ ಪ್ರಬಂಧ ಅಂದಿದೀರಿ; ತಕ್ಕ ಹೆಸರು. ಬಾಲ್ಯಕಾಲದ ಚಿತ್ರಣ ತುಂಬ ಮುದ್ದಾಗಿ, ಆಪ್ತವಾಗಿ ಮೂಡಿದೆ. ನೀವು ಕಂಡುಕೊಂಡ ಮಾಯಾಲಾಂದ್ರವನ್ನು ನಾನೂ ಕಂಡುಕೊಂಡಿದ್ದೇನೆ.

ರಾಘವೇಂದ್ರ ಜೋಶಿ said...

@ಮಂಜುನಾಥರವರೇ,
ಸರಿಯಾದ ಮಾತು ಹೇಳಿದಿರಿ.
ನಾವೆಲ್ಲರೂ ನಮ್ಮ ನಮ್ಮ ಮಾಯಾಲಾಂದ್ರವನ್ನು
ಹುಡುಕಿ ಸಂತೋಷಪಡುವ ಪರಿಸ್ಥಿತಿಯಲ್ಲಿದ್ದೇವೆ.
ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್. :-)

V.R.BHAT said...

ಸೊಗಸಾಗಿದೆ ನಿಮ್ಮ ಬಾಲ್ಯಲಹರಿ. ಊಟಕ್ಕೆ ರುಚಿಸುವ ಉಪ್ಪಿನಕಾಯಿಯಂತೇ ಸಾಹಿತ್ಯದಲ್ಲಿ ನೆಂಜಿಕೊಳ್ಳಲು ಲಲಿತ ಪ್ರಬಂಧಗಳು ಬೇಕು. ನಿಮ್ಮ ಬರವಣಿಗೆಗೆ ಶುಭಕೋರುತ್ತೇನೆ, ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಬೇಸರಬೇಡ.

ರಾಘವೇಂದ್ರ ಜೋಶಿ said...

@ವಿ ಆರ್ ಭಟ್ ಅವರೇ,
ಹೌದು.ನನಗೂ ಲಲಿತ ಪ್ರಬಂಧಗಳ ಮಹತ್ವ ಗೊತ್ತಿರಲಿಲ್ಲ.
ಆಮೇಲಾಮೇಲೆ ಪ್ರಬಂಧಗಳ ರುಚಿ ಹತ್ತಿತು.
ನೀವು ಕೊಟ್ಟ ಉದಾಹರಣೆ ನಿಜ.Thanks

ಗಿರೀಶ್.ಎಸ್ said...

ಸರ್,
ಲೇಖನ ತುಂಬ ಇಷ್ಟ ಆಯಿತು.. ನನ್ನ ಬಾಲ್ಯದ ನೆನಪುಗಳನ್ನು ತರಿಸಿತು .ನಾನು ಪ್ರೈಮರಿ ಸ್ಕೂಲ್ಅನ್ನು ನನ್ನ ದೊಡ್ಡಪ್ಪನ ಮನೆಯಲ್ಲಿ ಓದಿದ್ದು,ಆಗ ನನ್ನ ಅಕ್ಕಂದಿರು ನಮ್ಮ ಮನೆಯ ಸುತ್ತಮುತ್ತ ಇರುವ ಮಕ್ಕಳಿಗೆ ಮನೆ ಪಾಠ ಮಾಡುತ್ತಿದ್ದರು,ನನಗು ನಿಮ್ಮ ಆಗೇ ಶಿಕ್ಷೆ,ಪರೀಕ್ಷೆಯಲ್ಲಿ ಒಮ್ಮೆ ಬರೆದು,ಮತ್ತೆ ಮನೆಯಲ್ಲಿ ಅವರಿಗೆ ಉತ್ತರ ಒಪ್ಪಿಸಬೇಕಾಗಿತ್ತು..ಆದರೆ ನಿಮ್ಮ ಆಗೇ ಬರೆಯುವ ಪ್ರಮೇಯ ಇರಲಿಲ್ಲ ಅಷ್ಟೇ..ಆದರೆ ಒಂದು ಉತ್ತರ ತಪ್ಪು ಹೇಳಿದರೆ ಮುಗಿಯಿತು ನನ್ನ ಕಥೆ ಅಲ್ಲಿಗೆ..
ಹಳ್ಳಿಗೆ ಹೋದಾಗ ಹಿತ್ತಲಲ್ಲಿ ಸಿಕ್ಕಿದ ಬಾಟಲಿ ಅಥವಾ ಅಲ್ಲಿ ಇಲ್ಲಿ ಹುಡುಕು ನಾಲ್ಕಾಣೆ ಕೊಟ್ಟು ತಿನ್ನುತ್ತಿದ್ದ ಮಿಠಾಯಿ,ಅವನು ಸೈಕಲಿನಲ್ಲಿ ಬಂದು ಮಾರುತ್ತಿದ್ದರು,ಇವನ್ನೆಲ್ಲ ನೆನಪಿಸಿಕೊಂಡರೆ ಎಷ್ಟು ಮಜಾ ಆಗುತ್ತೆ,ಆದರೆ ಈ ಅವಕಾಶ ಈಗಿನ ಮಕ್ಕಳಿಗೆ ಸಿಗಲ್ಲ...ಜೊತೆಗೆ ice candy ತಿನ್ನುತ್ತಿದ್ದದ್ದು..
ಈ ಎಲ್ಲ ನೆನಪುಗಳನ್ನು ಮೆಲುಕು ಆಕಲು ಅವಕಾಶ ಮಾಡಿ ಕೊಟ್ಟಿದ್ದಿರ ಸರ್,ಧನ್ಯವಾದಗಳು..

ರಾಘವೇಂದ್ರ ಜೋಶಿ said...

@ಗಿರೀಶ್ ರವರೆ,
correct! ಅಲ್ಪ ಸ್ವಲ್ಪ ಬದಲಾವಣೆ ಮಾಡಿದರೆ ಅದು ನಮ್ಮೆಲ್ಲರ ಬಾಲ್ಯವೂ ಹೌದು.
ಇಂಥ ಅನೇಕ ಚಿತ್ರಪಟಗಳನ್ನು ಹೆಕ್ಕಿ ತೆಗಿಯೋಣವೆಂದು ಯೋಚಿಸುತ್ತಿದ್ದೇನೆ.ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಖುಷಿ.
ಮತ್ತೇ ಆದಷ್ಟು ಬೇಗ ಸಿಗೋಣ.

Guruprasad . Sringeri said...

ವಾಹ್... ಇಂಥದೊಂದು ಒಳ್ಳೆಯ ಬ್ಲಾಗ್ ಇದೆ ಎಂದು ಗೊತ್ತಿರಲಿಲ್ಲ... ಬರವಣಿಗೆ ತುಂಬಾ ಹಿಡಿಸಿತು.... ನಮ್ಮ ವಿದ್ಯಾರ್ಥಿ ಜೀವನವೂ ನೆನಪಾಯಿತು ಟೀಚರ್ ಐದನೇ ತರಗತಿಯಲ್ಲಿ ವಿಂಡೋ ಅಂದ್ರೆ ಕಿಟಕಿ ಡೋರ್ ಅಂದ್ರೆ ಬಾಗಿಲು... ಎಂದೆಲ್ಲಾ ಹೇಳಿಕೊಟ್ಟಿದ್ದು ... ಬರವಣಿಗೆ ಅದ್ಭುತವಾಗಿದೆ ಸಾರ್.... ಮುಂದುವರಿಸಿ... ನನ್ನ ಬ್ಲಾಗ್ ಗೆ ಬಂದಿದ್ದನ್ನು ನೋಡಿ ಸಂತೋಷವಾಯಿತು...

ರಾಘವೇಂದ್ರ ಜೋಶಿ said...

@ಗುರುಪ್ರಸಾದರೆ,
ನಮಸ್ಕಾರ.ಬ್ಲಾಗ್ ಗೆ ಬಂದು ಬರಹ ಮೆಚ್ಚಿಕೊಂಡಿದ್ದಕ್ಕೆ.
ಮತ್ತೇ ಸಿಗೋಣ.. :-)

Savitha SR said...

ನಮಸ್ಕಾರ ರಾಘವೇಂದ್ರ ಜೋಶಿಯವರೆ :)
ಲೇಖನ ಓದಿ ಚೆಂದನಿಸಿತು. ನನ್ನ 'ದಿನಕ್ಕೊಂದು ಒಳ್ಳೆಯ ಕೆಲಸ' ಪುಸ್ತಕದಲ್ಲಿ ಕೂಡಾ ಪುನರಾವರ್ತನೆಯಾಗುವ ಎರಡೇ ಸಾಲುಗಳಿದ್ವು... :)
೧. ಈವತ್ತು ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿದೆ.
೨. ಕಸ ಗುಡಿಸಿದೆ.

ಇವೆರಡನ್ನ ಬಿಟ್ಟರೆ
ನಾನು ಊಟ ಮಾಡಿದೆ, ನಿದ್ದೆ ಮಾಡಿದೆ, ಓದಿದೆ, ಬರೆದೆ ಇವ್ಯಾವೂ ಒಳ್ಳೇ ಕೆಲಸಗಳಲ್ವೇ?!! ಅನ್ನೋ ಪ್ರಶ್ನೆಗಳು ನನ್ನನ್ನ ಬಹಳ ವರ್ಷಗಳವರೆಗೆ ಕಾಡಿದವು :)
ಸವಿತ ಎಸ್ ಆರ್

ರಾಘವೇಂದ್ರ ಜೋಶಿ said...

@ ಸವಿತಾ ಅವರೇ,
ನಮಸ್ಕಾರ.ಹೌದಲ್ವ?ಬಹುಶಃ ಓದೋದು ಮತ್ತು ಬರಿಯೋದು ಅವತ್ತು mandatory ಕೆಲಸಗಳ ಪಟ್ಟಯಲ್ಲಿ ಸೇರಿರಬಹುದೇನೋ..
ಹಾಗಾಗಿ ಅದೂ ಒಂದು ಒಳ್ಳೇ ಕೆಲಸ ಅಂತ ನಮ್ಮ ಮೇಸ್ಟ್ರುಗಳು ಭಾವಿಸಿರಲೇ ಇಲ್ಲ ಅನ್ಸುತ್ತೆ..ನಿಮ್ಮ "ದಿನಚರಿ" ಕೂಡ ನಗು ಮೂಡಿಸಿತು ನನ್ನಲ್ಲಿ. :-)

ಓ ಮನಸೇ, ನೀನೇಕೆ ಹೀಗೆ...? said...

ಬಾಲ್ಯದ ನೆನಪೇ ಒಂಥರಾ ಗ್ಲುಕೋಸ್ ಇದ್ದಂಗೆ.....ನಮ್ಮ ಮನಸು ಎಷ್ಟೇ ದಣಿದಿದ್ದರೂ ಎಷ್ಟು ಬೇಗ ನಮ್ಮ ಮನಸಲ್ಲಿ ನಗೆ ಮೂಡಿಸಿಬಿಡುತ್ತವೆ ಈ ಬಾಲ್ಯದ ನೆನಪಿನ ಸುರುಳಿಗಳು....ನಂಗೂ ನನ್ನ ಒಳ್ಳೆ ಕೆಲಸದ ಪಟ್ಟಿ ನೆನಪಾಯ್ತು...ಆದ್ರಲ್ಲಿ ಜಾಸ್ತಿ ಇರ್ತೀದ್ದುದ್ದು "ನಾನು ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಕಲ್ಲನ್ನು ತೆಗೆದು ಬದಿಗೆ ಹಾಕಿದೆ" ಎಷ್ಟು ಸುಲಭದ ಒಳ್ಳೆ ಕೆಲಸ ಅಲ್ವಾ ಇದು.ಬರಹ ತುಂಬಾ ಇಷ್ಟವಾಯ್ತು.

Unknown said...

ಜೋಶಿಗಳೆ, ನಿಮ್ಮ ಬ್ಲಾಗುಗಳ ಓದುತ್ತ ನಿಮ್ಮ Fan ಆಗಿಬಿಟ್ಟೆ. ಏನ್ ಚಂದ ಬರೀತಿರಾ ಸಾರ್. ತುಂಬಾ ಖುಷಿ ಕೊಡುತ್ತೆ ಓದು.

ದೀಪಾ ಜೋಶಿ said...

ತುಂಬಾ ಸೊಗಸಾಗಿ ಮೂಡಿಬಂದಿದೆ. ಬೊಂಬೆ ಮಿಠಾಯಿಯಿಂದ ಬದುಕಿಗೆ ಬಣ್ಣವೀವ ಪರಿ ಸುಂದರವಾಗಿದೆ.

ದೀಪಾ ಜೋಶಿ said...

ತುಂಬಾ ಚೆನ್ನಾಗಿ ಬರೆದಿದ್ದೀರಿ. ಎಲ್ಲವೂ ಗೋಜಲು ಗೋಜಲಾಗಿ ಕಾಡುತ್ತಿರುವಾಗ ಬೊಂಬೆ ಮಿಠಾಯಿ ಸಂತೈಸಿದ ಪರಿ ಅದ್ಭುತ.