Thursday, July 7, 2011

ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!


ಸುಯ್ಯಂತ ತೇಲಿ ಬರುತ್ತಿದೆ ತಂಗಾಳಿ.
ಸುತ್ತಲೂ ಕಗ್ಗತ್ತಲು.ದೂರದಲ್ಲೆಲ್ಲೋ ಚಂಚಲಲಕ್ಷ್ಮಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆಯಿಡುತ್ತಿರುವಂತೆ ಕೇಳಿಸುತ್ತಿದೆ.
ನಿಜವಾಗಿಯೂ ಅದು ಗೆಜ್ಜೆಯ ನಾದವಾ?ಅಥವಾ ಇನ್ಯಾವುದೋ ಹುಳದ ಸದ್ದಾ?ಅಥವಾ ನನ್ನದೇ ಭ್ರಮೆಯಾ? 
ಥತ್,ಇದೊಂದು ರೌದ್ರನರಕ! ಈ ಜಿರಳೆಗಳು ಮೈಯಲ್ಲಿರುವ ಮೂಳೆಗಳನ್ನೂ ಬಿಡುವುದಿಲ್ಲವೇನೋ.
ಬೆನ್ನಂಚಿನಲ್ಲಿ ಹರಿದಾಡುತ್ತಿರುವ ಹತ್ತಾರು ಜಿರಳೆಗಳನ್ನು ಓಡಿಸುವ ವ್ಯರ್ಥಪ್ರಯತ್ನ ಮಾಡುತ್ತಿದ್ದ ಆ ವಯೋವೃದ್ಧ 
ತನ್ನಷ್ಟಕ್ಕೆ ತಾನೇ ಗೊಣಗಿಗೊಂಡ:
ಕೃಷ್ಣ ಕೃಷ್ಣ..!

***
ಇಲ್ಲಿ ನೋಡಿರಿ:ವೀರವೃದ್ಧ ಮೆಲ್ಲಗೆ ಕದಲುತ್ತಿದ್ದಾನೆ. ಕಳೆದ ಐವತ್ತೆಂಟು ದಿನಗಳಿಂದ ಶರಮಂಚದ ಮೇಲೆ ಜೀವಶ್ಶವವಾಗಿ 
ಮಲಗಿರುವ ಆ ವೃದ್ಧನ ಕಣ್ಣಲ್ಲಿ ಅದ್ಯಾಕೋ ಇವತ್ತು ಬಿಟ್ಟೂ ಬಿಡದಂತೆ ನೀರಿಳಿಯುತ್ತಿದೆ.ಬದುಕೆಂಬ ಸಾಗರದಿಂದ 
ನೆನಪಿನಲೆ ಉಕ್ಕಿ ಬಂತಾ?ಗತಿಸಿಹೋದ ನೂರಿಪ್ಪತ್ತು ವರುಷಗಳ ಲಾಭ ನಷ್ಟದ ಲೆಕ್ಕ ಚುಕ್ತ ಆಯಿತಾ?
ಛೇ,ಏನೆಲ್ಲ ಗಳಿಸಿದೆ;ಎಷ್ಟೆಲ್ಲ ಕಳೆದುಕೊಂಡೆ!

ಜೀವನವಿಡೀ ನೂರಾರು ಅತಿರಥ ಮಹಾರಥರನ್ನು ಅಡ್ಡಡ್ಡ ಮಲಗಿಸಿದ ನನ್ನಂಥ ನನಗೇ ಇವತ್ತು  ಯಕಶ್ಚಿತ್ ಹತ್ತಾರು 
ಜಿರಳೆಗಳು ಬೆನ್ನಲ್ಲಿ ಹರಿದಾಡಿದ್ದಕ್ಕೆ ಕಣ್ಣೀರು ಬಂತೆ?ಅಥವಾ ತೊಡೆ ಸೀಳಿದ ಬಾಣದ ನೋವು ಹಣ್ಣಣ್ಣು ಮಾಡಿತೆ?
ಇಲ್ಲ.ಹಾಗಾಗಲು ಸಾಧ್ಯವೇ ಇಲ್ಲ.

ಈ ಸಾವು,ಈ ನೋವು,ಈ ರಕ್ತ,ಜಿರಳೆ ಬರೀ ನೆಪ.ಇವನ್ನೆಲ್ಲ ನಾನು ಇವತ್ತೇ ಮರೆಯಬಲ್ಲೆ.ಈ ಕ್ಷಣದಿಂದಲೇ ಮಿದುಳ 
ಪುಟದಿಂದ ಅಳಿಸಿ ಹಾಕಬಲ್ಲೆ.ಆದರೆ ನಿನ್ನೆ ಮೊನ್ನೆಯವರೆಗೂ ನನ್ನ ಅಂಗವಸ್ತ್ರದ ಮೇಲೆ ಇನ್ನಿಲ್ಲದ ಮುಗ್ಧತೆಯಿಂದ 
ಉಚ್ಚೆ ಹೊಯ್ಯುತ್ತಿದ್ದ ಪೋರ ದುರ್ಯೋಧನ ಅಷ್ಟೆಲ್ಲ ಜನರೆದುರಿಗೆ ನನ್ನನ್ನು ವಚನ ಭ್ರಷ್ಟನೆಂದು ಜರೆದನಲ್ಲ:
ಅದನ್ನು ಹ್ಯಾಗೆ ಮರೆಯಲಿ?
ಅವನಿಗೇನು ಗೊತ್ತು ಭೀಷ್ಮ ಶಪಥದ ಬಗ್ಗೆ?

ಕುರುಕುಲದ ಉದ್ಧಾರಕ್ಕೆ,ಅದರ ಸುರಕ್ಷತೆಗಾಗಿ ಏನೆಲ್ಲ ನೋಡಬೇಕಾಗಿ ಬಂತು.ಅಪ್ಪನ ಮದುವೆಗಾಗಿ ಹೊಟ್ಟೆಯೊಳಗಿನ 
ಕಾಮ ಬಸಿದಿಟ್ಟೆ.ರಜಸ್ವಲೆಯಾಗಿದ್ದ ಪಾಂಚಾಲಿಯ ವಸ್ತ್ರಾಪಹರಣ ನೋಡಿದೆ;ಕುರುಡನಂತೆ ವರ್ತಿಸಿದೆ.ಇನ್ಯಾರದೋ 
ವಂಶೋದ್ಧಾರಕ್ಕಾಗಿ ಧರ್ಮವನ್ನೇ ಅನೈತಿಕವಾಗಿ ಬಳಸಿದೆ.ಪಾಪದ ಪಾಂಡವರು:ಅವರ ವನವಾಸ,ಅಜ್ಞಾತವಾಸ,ಸಕಲ
ಅವಮಾನಗಳ ಮುಂದೆ ಅಮಾಯಕನಂತೆ ವರ್ತಿಸಿದೆ.
ತಪ್ಪು ತಪ್ಪು.ಘೋರ ತಪ್ಪು!

ಆದರೆ ನಾನು ತಾನೇ ಏನು ಮಾಡಬಲ್ಲವನಾಗಿದ್ದೆ?ಎಲ್ಲವನ್ನೂ ಮರೆತೇನು.ಯಾರೂ ನನ್ನನ್ನು ಹೆದರಿಸಲಾರರು.ಯಾವುದೂ 
ನನ್ನ ಬ್ರಹ್ಮಚರ್ಯದ ಶಪಥಕ್ಕೆ,ಕುರುಕುಲದ ಸುರಕ್ಷತೆಗೆ ಅಡ್ಡಿಯಾಗಲಾರದು.ಆದರೆ ಆ ಕಣ್ಣುಗಳು?
ಅವೆರಡು ಮಿಂಚುನೇತ್ರಗಳನ್ನು ಹ್ಯಾಗೆ ಮರೆಯಲಿ?ಬದುಕಿನ ಮೂರುಮುಕ್ಕಾಲು ಆಯುಸ್ಸನ್ನು ಹಗಲೂ ರಾತ್ರಿ ನನ್ನನ್ನು 
ಭಯಭೀತಗೊಳಿಸಿದ ಆಕೆಯನ್ನು ಮರೆಯೋದುಂಟಾ.ಆಕೆಯ ಕಣ್ಣುಗಳಲ್ಲಿದ್ದ ರೋಷ,ಅವಮಾನ,ಅಭದ್ರತೆಗಳನ್ನು ನನ್ನಂಥ 
ನೂರಾರು ಭೀಷ್ಮರು ಬಂದರೂ ನಿವಾರಿಸಲಾರರು.
ಕ್ಷಮಿಸು ಅಂಬೆ!

ತಮ್ಮಂದಿರರಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರಿಗಾಗಿ ಸ್ವತಃ ನಾನೇ ಹೊತ್ತುಕೊಂಡು ಬಂದ ಮೂವರು ಕನ್ಯೆಯರಲ್ಲಿ 
ಈ ಅಂಬೆಯೂ ಒಬ್ಬಳು.ಆದರೆ ನಾನು ಹಾಗೆ ಅಪಹರಿಸುವ ಮೊದಲೇ ಇನ್ನೊಬ್ಬನ್ಯಾವನನ್ನೋ ಪ್ರೀತಿಸಿದ್ದಳು.
ತುಸು ಅವಸರದ ಹುಡುಗಿ! ಅಂಥ ಅಂಬೆ ನನ್ನ ತಮ್ಮಂದಿರ ಮುಖ ಕೂಡ ನೋಡಲಿಲ್ಲ.ತನ್ನದೇ ಹಳೆಯ ಪ್ರೇಮಿಗಾಗಿ 
ರಚ್ಚೆ ಹಿಡಿದಳು.ಹುಚ್ಚಿಯಾದಳು.ಕೊನೆಕೊನೆಗೆ ಹೆದರಿ ಒದ್ದೆಯಾದ ಗುಬ್ಬಚಿಯೇ ಆಗಿ ಹೋದಳು.

ತೀರ ಕೊನೆಗೆ ಹಳೇ ಪ್ರೇಮಿಯ ಮಿಲನಕ್ಕೆಂದು ನಾನೇ ಅವಳನ್ನು ಕಳಿಸಿ ಕೊಡಬೇಕಾಯಿತು.ಆದರೇನು,ಆಕೆ ಕೆಲವೇ 
ದಿನಗಳಲ್ಲಿ ವಾಪಸು ಬಂದಿದ್ದಳು;ಪ್ರಿಯತಮನ ತಿರಸ್ಕಾರಕ್ಕೆ ಒಳಗಾಗಿ.ಹಾಗೆ ಬಂದವಳ ಕಣ್ಣುಗಳಲ್ಲಿ ನೀರಿರಲಿಲ್ಲ:
ರಕ್ತವಿತ್ತು!
ಅಲ್ಲೀಗ ರೋಷ ಮಡುಗಿತ್ತು.ಸೇಡು ಚಿಮ್ಮುತ್ತಿತ್ತು.ಭರಿಸಲಾಗದ ವೇದನೆ ಮತ್ತು ಬದುಕಿನ ಅಭದ್ರತೆ ಪ್ರತಿಫಲಿಸುತ್ತಿತ್ತು.
ಆವತ್ತೇ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಭಯಗೊಂಡಿದ್ದೆ.ನಾಚಿಕೆಯಿಂದ ತಲೆತಗ್ಗಿಸಿದ್ದೆ.ತೀರ ಕೊನೆಗೊಮ್ಮೆ 
ಆಕೆ,ನೀನೇ ನನ್ನ ಮದುವೆಯಾಗು ಅಂದಾಗ ನನ್ನ ಶಪಥ ನನಗೇ ಷಂಡನಾಗಿ ಕಾಡಿತ್ತು!
ಇವತ್ತು ಮತ್ತೇ ಮತ್ತೇ ಕಾಡುತ್ತಿದೆ.

ಯಾಕೆಂದರೆ ಮೊನ್ನೆ ತಾನೇ ನನ್ನೆದುರು ಯುದ್ಧಕ್ಕೆ ನಿಂತ ಶಿಖಂಡಿಯೆಂಬ ಯೋಧನಲ್ಲಿ ಅಂಬೆಯ ಕಣ್ಣುಗಳನ್ನು ಕಂಡೆ. 
ಅದೇ ರೋಷ.ಅದೇ ಸೇಡು.ನಂಗೊತ್ತಿದೆ,ಈ ಸಲ ಮಾತ್ರ ಈಕೆ ನನ್ನ ಪಾಲಿಗೆ ಯಮನಂತೆ ಕಾಡುತ್ತಾಳೆ.
ಆಕೆ ಅರ್ಜುನನ ಮುಂದೆ ನಿಂತಿರುವುದೇ ಅದಕ್ಕಾಗಿ!

ಇರಲಿ.ಬದುಕಿನುದ್ದಕ್ಕೂ ಲಕ್ಷಾಂತರ ಯೋಧರೊಂದಿಗೆ ಸೆಣಸಿದೆ.ಗೆದ್ದೆ.ಆದರೆ ಇವತ್ತು ನನ್ನೆಲ್ಲ ಭುಜಕೀರ್ತಿಗಳನ್ನು 
ಬದಿಗಿಟ್ಟು ಅತ್ಯಂತ ವಿನಮ್ರನಾಗಿ ನುಡಿಯುತ್ತಿದ್ದೇನೆ: ಅಂಥ ಅಂಬೆಯೆಂಬ ಹೆಂಗಸಿನ ಪರವಾಗಿ ವಾದಿಸಲು ಬಂದ 
ಸ್ವತಃ ಪರಶುರಾಮನಂಥ ಅಪ್ರತಿಮ ವಿಪ್ರೋತ್ತಮನನ್ನೇ ಸೋಲಿಸಿದ ನನಗೆ ಅಂಬೆಯಂಥ ಎಳಸು ಹುಡುಗಿಯ 
ಮುಂದೆ ತಲೆಬಗ್ಗಿಸಿ ಸೋಲೊಪ್ಪಿಕೊಳ್ಳುವದರಲ್ಲಿ ಯಾವ ನಾಚಿಕೆಯೂ ಇಲ್ಲ.
ಆಕೆಯ ಛಲ,ಸಿಟ್ಟು,ಧರ್ಮ,ಸೇಡುಗಳ ಮುಂದೆ ನಾನು ನೀರ್ವಿರ್ಯನಾಗುತ್ತಿದ್ದೇನೆ.
ಇದೆ ಸತ್ಯ.ಪರಮಸತ್ಯ.

ಆವತ್ತಿಗೂ,ಇವತ್ತಿಗೂ,ಯಾವತ್ತಿಗೂ...

***