Wednesday, August 24, 2011

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ಅಂತರ್ಜಾಲ ಚಿತ್ರ 


ದೊಂದು ಕೋಣೆ.ದೇವರ ಕೋಣೆ.
ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ 
ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ 
ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ ಬಾಡಿ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ.
ಪರಶಿವನ ಮುಂದೆ ಕುಳಿತಿರುವ ಆಕೆ ಸುಮ್ಮನೇ ಒಮ್ಮೆ ತಲೆಯೆತ್ತಿ ಮೇಲಕ್ಕೆ ನೋಡುತ್ತಾಳೆ.  
ಸಟ್ಟಂತ ಕಣ್ಣೀರಿನ ಒಂದು ಹನಿ ಆಕೆಯ ಕೆನ್ನೆಗುಂಟ ಕೆಳಕ್ಕೆ ಧುಮಕುತ್ತದೆ.

ಅದು ಈ ಜಗತ್ತು ಕಂಡ ಆಕೆಯ ಮೊಟ್ಟಮೊದಲ ಕಣ್ಣೀರಿನ ಹನಿ! 

ಇಷ್ಟುದಿನ ಆಕೆ ಸುರಿಸುತ್ತಿದ್ದ ಕಣ್ಣೀರನ್ನೆಲ್ಲ ಆಕೆ ಕಟ್ಟಿಕೊಂಡಿದ್ದ ಕಪ್ಪು ಪಟ್ಟಿಯೇ ತಿಂದು ಹಾಕುತ್ತಿತ್ತು.
ಇವತ್ತು ಆ ಪಟ್ಟಿಯನ್ನು ತೆಗೆದುಹಾಕಿದ್ದಾಳೆ.ತಾನು ನಂಬಿದ ಪರಶಿವನ ಮುಂದೆ ಅಸಹಾಯಕಳಾಗಿ 
ಮಾತಿಗಿಳಿದಿದ್ದಾಳೆ.
ಆಕೆ ಗಾಂಧಾರಿ!

"ಹೇ ಪ್ರಭೂ..ನಾನೀಗ ಎಣ್ಣೆ ತೀರಿದ ನಂದಾದೀಪ.ನಿನ್ನ ಹಣೆಗೊಂದು ತಿಲಕವಿಡಬೇಕೆಂದರೂ ಕೂಡ 
ನನ್ನ ಕೈಯಲ್ಲಿರುವ ಕೊರಡಿನಲ್ಲಿ ಗಂಧವಿಲ್ಲ! ನನ್ನವರೆನಿಸಿಕೊಂಡಿದ್ದ ಎಲ್ಲರೂ ಸತ್ತು ಹೋಗಿದ್ದಾಗಿದೆ.
ನಿನ್ನೆ ಮುಗಿದ ಕುರು ಮಹಾಯುದ್ಧ ನನ್ನ ಸಮಸ್ತ ಸಂಕುಲವನ್ನೆಲ್ಲ ತಿಂದು ಕುಳಿತಿದೆ.ಇಳಿಗಾಲದ ಈ 
ವಯಸ್ಸಿನಲ್ಲಿ ಇಂಥದ್ದನ್ನೆಲ್ಲ ನಾನು ನೋಡಬೇಕಾಗಿ ಬಂತೆ?ಎಷ್ಟೊಂದು ಪೂಜಿಸಿದೆನಲ್ಲ ತಂದೆ!
ಎಷ್ಟು ಮಂತ್ರ?ಎಷ್ಟು ಜಪ?ಅದೆಷ್ಟು ಭಜನೆಗಳು...

ನೀನೇ ಹೇಳು,ಈ ಸೌಭಾಗ್ಯಕ್ಕಾಗಿಯೇ ನಾನು ಕಣ್ಣಿದ್ದೂ ಕುರುಡಿಯಾಗಬೇಕಾಯಿತೆ?
ಇರಲಿಬಿಡು ತಂದೆ,ನಿನಗೆ ಗೊತ್ತಿಲ್ಲದ್ದು ಏನಿದೆ?ಪುತ್ರಶೋಕಂ ನಿರಂತರಂ! ಪತೀವ್ರತೆಯ ಈ ಪಟ್ಟ
ನನ್ನ ತಾಯ್ತನವನ್ನೇ ಕೊಂದು ಹಾಕಿತು.ಎಂಥಾ ಪಾಪಿ ನಾನು.ಒಂದು ದಿನವೂ ಮಕ್ಕಳ 
ಬಾಲ್ಯದಾಟ ನೋಡಲಿಲ್ಲ.ದುರ್ಯೋಧನನ ಕೆನ್ನೆ ಹಿಂಡಲಿಲ್ಲ;ದುಶ್ಯಾಸನನ ಜೊಲ್ಲು ಒರೆಸಲಿಲ್ಲ.
ಇನ್ನು ದುರ್ಮುಖ,ದುರ್ಮದ,ದುರಾಧರರೆಲ್ಲ ತಾಯಿಯಿದ್ದೂ ತಬ್ಬಲಿಯಾಗಿಯೇ ಬೆಳೆದರು.
ಹೋಗಲಿ,ನನ್ನ ಕೊನೇ ಮಗಳು ದುಶ್ಯಲೆ?
ಪಾಪದ ಕೂಸದು.ಆಕೆಯ ಮದುವೆಯ ದಿನ ಅವಳ ಕಣ್ಣಿನ ಹೊಳಪನ್ನೂ ಕೂಡ ಈ ಪಾಪಿ ಕಣ್ಣುಗಳು 
ನೋಡಲಿಲ್ಲ.ಇವತ್ತು ಹೀಗೆ ನಿನ್ನ ಮುಂದೆ ಭೋರಿಡುತ್ತಿದ್ದೇನೆ...

ನಂಗೊತ್ತು ದೇವ,ಹೀಗೆ ನಿನ್ನ ಮುಂದೆ ಕುಳಿತು ಮಾತನಾಡುವದನ್ನು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ.
ಆದರೆ ನಿಜ ಹೇಳು:ನನ್ನ ಮಕ್ಕಳು ಅಷ್ಟೊಂದು ಕೆಟ್ಟವರಾ? ಕೃಷ್ಣನ ಪ್ರಕಾರ ದುರ್ಯೋಧನ,ದುಶ್ಯಾಸನರೆಲ್ಲ
ಕಾಮುಕರಂತೆ.ಅಧರ್ಮಿಗಳಂತೆ.ಹಾಗಿದ್ದರೆ ಮೊನ್ನೆಯ ಯುದ್ಧದಲ್ಲಿ ಪಾಂಡವರಿಗೆ ಹೋಲಿಸಿದರೆ ಅದರ   
ಎರಡುಪಟ್ಟು ಸೈನ್ಯ ನನ್ನ ಮಗನ ಪರವಾಗಿ ಯಾಕೆ ನಿಂತಿರುತ್ತಿತ್ತು? ಅಧರ್ಮಿಗಳಾಗಿದ್ದರೆ ಭೀಷ್ಮ,ದ್ರೋಣರೇಕೆ
ದುರ್ಯೋಧನನ ಪಕ್ಕ ನಿಂತಿದ್ದರು?

ನೀನು ಏನೇ ಹೇಳು ಭಗವಾನ್,ಆ ವಿದುರ ಪರಮದ್ರೋಹಿ.ತಿಂದ ಮನೆಯ ಗಳ ಹಿರಿಯುವ ಜಾತಿ ಅವನದು.
ಅವನ ನಾಲಿಗೆ ನಮ್ಮದೇ ಅಡುಗೆ ಮನೆಯಲ್ಲಿದ್ದರೂ ಕೂಡ ಆತನ ತಲೆ ಮಾತ್ರ ಯಾವತ್ತೂ ಪಾಂಡವರ 
ಪರವಾಗಿಯೇ  ಕೆಲಸ ಮಾಡುತ್ತಿತ್ತು.ಈ ಪಾಂಡವರೇನು  ಕಡಿಮೆಯೇ? ಹಿಂದೆ ಇದೇ ಪಾಂಡವರು ಅರಗಿನ 
ಅರಮನೆಯಿಂದ ಓಡಿ ಹೋಗುವಾಗ ಅಲ್ಲಿ ಸುಮ್ಮನೆ ಮಲಗಿದ್ದ ಅದ್ಯಾರೋ ಆರು ಜನ ಅಮಾಯಕರ
ಸಮೇತ ಅರಗಿನರಮನೆಯನ್ನು ಸುಟ್ಟು ಹಾಕಿದರಲ್ಲ? ಪಾಪ,ಅವರೇನು ದ್ರೋಹ ಬಗೆದಿದ್ದರು?
ಜೀವ ಕೊಡುವ ತಂದೆ ನೀನು! ಅಂಥಾದ್ದರಲ್ಲಿ ಆ ಅಮಾಯಕರ ಜೀವ ತೆಗೆಯುವ ಹಕ್ಕನ್ನು ಯಾರು ನೀಡಿದರು 
ಈ ಪಂಚರಿಗೆ?

ಇನ್ನು ಹಿರಿಯಜ್ಜ ಭೀಷ್ಮ. ಚಿಕ್ಕವನಿದ್ದಾಗ ಇದೇ ಅರ್ಜುನ ಈ  ಅಜ್ಜನ ಮೇಲೆ ಒಂದಾದ ಮೇಲೊಂದು ಉಚ್ಚೆ 
ಸುರಿಸುತ್ತಿದ್ದಾಗ ಒದ್ದೆ ಪಂಚೆಯಲ್ಲೇ ಈ ಅಜ್ಜ ಆತನಿಗೆ ಮುದ್ದು ಮಾಡುತ್ತಿದ್ದುದು ನನಗಿನ್ನೂ ನೆನಪಿದೆ.
ಅಂಥ  ಅರ್ಜುನ ಏನು ಮಾಡಿದ ನೋಡಿದೆಯಾ? ತುಂಡು ಭೂಮಿಯ ಆಸೆಗಾಗಿ ಸ್ವಂತ ತಾತನನ್ನೇ 
ಬಾಣಗಳ ಮೇಲೆ ಮಲಗಿಸಿಬಿಟ್ಟ! ಆತನ ದುರಾಸೆ ವಿದ್ಯೆ ಕಲಿಸಿದ ಗುರುವಿಗೇ ತಿರುಮಂತ್ರ ಹೇಳಿಸಿತು.
ಈಗ ಹೇಳು ತಂದೆ,ಅಧರ್ಮಿಗಳು ಕೌರವರಾ?ಪಾಂಡವರಾ?

ನಂಗೊತ್ತು,ಇದೆಲ್ಲ ಕೃಷ್ಣನದೇ ಕುತಂತ್ರ.ದೇವಮಾನವನಂತೆ ಈ ಕೃಷ್ಣ.ನನ್ನ ಪಾಲಿಗೆ ಆತ ಮಹಾನ್ ಭ್ರಷ್ಟ!
ಏನೇನೋ ಹೇಳಿ ನನ್ನ ಮಗನ ತಲೆ ಕೆಡಿಸಿ ಕಳಿಸಿಬಿಟ್ಟ.ಆವತ್ತು ದುರ್ಯೋಧನನಿಗೆ ಅದೆಷ್ಟು ಪ್ರೀತಿಯಿಂದ 
ಹೇಳಿದ್ದೆ: ಮಗನೇ,ಇವತ್ತು ನಿನ್ನನ್ನು ಹುಟ್ಟುಡುಗೆಯಲ್ಲಿ ನೋಡುವ ಆಸೆಯಾಗಿದೆ ಬಾ ಅಂತ..
ನಂಗೊತ್ತಿತ್ತು,ಇಷ್ಟುದಿನ ಒಂದೇಸಮ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರಿಂದ ನನ್ನ ಅಕ್ಷಿಗೊಂದು ಅದ್ಭುತಶಕ್ತಿ 
ಬಂದುಬಿಟ್ಟಿತ್ತು.ಅದೊಂದು ವಜ್ರಶಕ್ತಿ.ಮೊಟ್ಟಮೊದಲ ಬಾರಿಗೆ ಕಣ್ಣಿನ ಪಟ್ಟಿ ತೆಗೆದಾಗ ಯಾವ ವಸ್ತುವಿನ 
ಮೇಲೆ ನಿನ್ನ ದೃಷ್ಟಿ ಬೀಳುವದೋ,ಆ ವಸ್ತು ವಜ್ರಕಾಯವಾಗಲಿ! ಹಾಗಂತ ನೀನೇ ವರ ಕೊಟ್ಟಿದ್ದೆಯಲ್ಲ ಸ್ವಾಮೀ..
ಅದಕ್ಕೆಂದೇ ನನ್ನ ಮಗನಿಗೆ ಬೆತ್ತಲೆಯಾಗಿ ನನ್ನೆದುರಿಗೆ ಬಾ ಎಂದಿದ್ದೆ..

ಅಂತೆಯೇ ಆವತ್ತು ನನ್ನ ಮಗ ಬಂದಿದ್ದ.ನನ್ನೆದುರಿಗೆ ನಿಂತಿದ್ದ.ನಾನು ಮಾತ್ರ ಮೊಟ್ಟಮೊದಲ ಬಾರಿಗೆ 
ಕಣ್ಣ ಪಟ್ಟಿ ತೆಗೆಯುತ್ತಲೇ ಹುಚ್ಚಳಂತೆ ಚೀರತೊಡಗಿದ್ದೆ: 
ಅಯ್ಯೋ ಮಗನೇ..ನೀನೊಬ್ಬ ಹಸೀ ದಡ್ಡ.ಹುಂಬ ತಲೆಯ ಒಡ್ಡ! 
ಹೌದು ತಂದೆ,ಆವತ್ತು ನನ್ನ ಮಗ ನನ್ನ ಕೋಣೆಗೆ ಬೆತ್ತಲೆಯಾಗಿಯೇ ಬರುತ್ತಿದ್ದನಂತೆ.ಆದರೆ ಅಷ್ಟೊತ್ತಿಗೆ 
ಕೃಷ್ಣ ಎದುರಾಗಿ ಯಥಾಪ್ರಕಾರ ಶಂಖ ಊದತೊಡಗಿದಂತೆ:
ಇದೇನು ದುರ್ಯೋಧನ?ಅಮ್ಮ ಹೇಳಿದಳು ಅಂತ ನೀನು ಈ ಅವತಾರದಲ್ಲಿ ಹೋಗುತ್ತಿರುವೆ? 
ನಿನ್ನಮ್ಮ ಮಹಾಮುಗ್ಧೆ.ನಿನ್ನನ್ನು ಒಮ್ಮೆಯೂ ನೋಡಿಲ್ಲವಾದ್ದರಿಂದ ನೀನಿನ್ನೂ ಚಿಕ್ಕಮಗುವೆಂದು ತಿಳಿದಿದ್ದಾಳೆ.
ನಿನಗಾದರೂ ಬುದ್ಧಿ ಬೇಡವಾ?ಯಕಶ್ಚಿತ್ ಕೌಪೀನವಾದರೂ ಧರಿಸಿಕೊಂಡು ಹೊಗಬಾರದೇ..? 
ಅಂತೆಲ್ಲ ದುರ್ಯೋಧನನ ತಲೆಕೆಡಿಸಿ ಕಳಿಸಿದನಂತೆ.

ಅದೇ ಗುಂಗಿನಲ್ಲಿ ಈ ಒಡ್ಡ ಲಂಡಚೊಣ್ಣ ಧರಿಸಿಕೊಂಡು ನನ್ನ ಮುಂದೆ ನಿಂತಿದ್ದ.ಪರಿಣಾಮವಾಗಿ ನನ್ನ 
ದೃಷ್ಟಿ ಬಿದ್ದ ಆತನ ಇಡೀ ದೇಹ ವಜ್ರಕಾಯವೇನೋ ಆಯಿತು.ಆದರೆ ತೊಡೆಯವರೆಗೂ ಧರಿಸಿದ್ದ ಆತನ 
ಲಂಗೋಟಿಯನ್ನು ಮಾತ್ರ ನನ್ನ ದೃಷ್ಟಿ ಬೇಧಿಸಲಾಗಲಿಲ್ಲ.ನಿನ್ನೆ ಆ ಕೃಷ್ಣ ಭೀಮನಿಗೆ ಸಂಜ್ಞೆ ಮಾಡಿ ಸರಿಯಾಗಿ 
ಅದೇ ಜಾಗಕ್ಕೆ ಹೊಡೆಸಿದನಂತೆ.ಭ್ರಷ್ಟ ಕೃಷ್ಣ! ಅವನ ಜಾತಿಯೇ ಹಾಗೆ.ಅವನಪ್ಪ ವಸುದೇವನಿಗೆ 
ಹದಿನಾಲ್ಕು ಹೆಂಡಂದಿರು.ಇವನಿಗೆ ಹದಿನಾರು ಸಾವಿರ! ನೀನೇ ಹೇಳು ದೊರೆಯೇ,ಕಾಮುಕ ದುರ್ಯೋಧನನಾ?
ಅಥವಾ ಕೃಷ್ಣನಾ?

ಇಲ್ಲ,ಇಲ್ಲ.ನನ್ನ ನೂರು ಮಕ್ಕಳನ್ನು ಕೊಂದವನು ಕೃಷ್ಣನೇ.
ಭಗವಾನ್,ನಿನ್ನ ಮೇಲಾಣೆ.ನನ್ನ ಪಾತೀವ್ರತದ ಮೇಲಾಣೆ.ಈ ಕೃಷ್ಣ ಹ್ಯಾಗೆ ಕುರುವಂಶದ ದಾಯಾದಿಗಳು 
ತಮ್ಮತಮ್ಮಲ್ಲೇ ಕಚ್ಚಾಡುವಂತೆ ಪ್ರೇರೇಪಿಸಿದನೋ,ಅದೇ ಥರ ಈ ಕೃಷ್ಣನ ಯಾದವೀ ವಂಶವೂ 
ಪರಸ್ಪರ ಗುದ್ದಾಡಿ ಸಾಯುವಂತಾಗಲಿ.ಆ ಕಳ್ಳ ಕೃಷ್ಣನನ್ನು ತೀರ ಸೂತಜಾತಿಯ ಮನುಷ್ಯನೊಬ್ಬ 
ಕೊಲ್ಲುವಂತಾಗಲಿ. ಶಿವನೇ,ನಾನು ದಿನನಿತ್ಯ ನಿನಗೆ ಅರ್ಪಿಸುತ್ತಿದ್ದ ಪೂಜೆಯಲ್ಲಿ ಒಂಚೂರಾದರೂ 
ಕೊಸರಿದ್ದರೆ ಈ ನನ್ನ ಶಾಪ ಸೊರಗಿ ಹೋಗಲಿ..!

ಹಾಗಂತ ಶಪಿಸತೊಡಗಿದ ಗಾಂಧಾರಿ ಹುಚ್ಚಳಂತೆ ಬಡಬಡಿಸತೊಡಗುತ್ತಾಳೆ:
"ಅಯ್ಯೋ ವಿಧಿಯೇ,ಎಂಥ ಪಾಪಿ ನಾನು? ಒಂದು ದಿನವೂ ನನ್ನ ಮಗ 
ದುರ್ಯೋಧನನ ಕೆನ್ನೆ ಹಿಂಡಲಿಲ್ಲ.ದುಶ್ಯಾಸನನ ಜೊಲ್ಲು..."

--- 

35 comments:

Manjunatha Kollegala said...

Different view :)

siddu said...

Typical mother Ghandhari....."Hettavarige heggana muddu anno gade ge pushti kodtidale"

Anonymous said...

ಶಿವನೇ,ನಾನು ದಿನನಿತ್ಯ ನಿನಗೆ ಅರ್ಪಿಸುತ್ತಿದ್ದ ಪೂಜೆಯಲ್ಲಿ ಒಂಚೂರಾದರೂ
ಕೊಸರಿದ್ದರೆ ಈ ನನ್ನ ಶಾಪ ಸೊರಗಿ ಹೋಗಲಿ..!----- ಈ ಸಾಲುಗಳಲ್ಲಿ ಇದ್ದಾಳೆ ಗಾಂಧಾರಿ ಅಲ್ಲ ಮತ್ತ್ಯಾರೂ ಅಲ್ಲ ಒಬ್ಬ ನಿಜವಾದ ತಾಯಿ ಒಂದು adjective ಆಗಿ ಮಾತ್ರ! ತನ್ನದೆಲ್ಲದೆಲ್ಲವನ್ನೂ ಕಳೆದುಕೊಂಡೂ ತನ್ನ ಶಾಪವೂ ಸಂಭವಿಸದೆ ಸೊರಗಿ ಹೋಗಲೀ ಅನ್ನಬಹುದಾದ ಸಾಮರ್ಥ್ಯ ತಾಯಿ ಒಬ್ಬಳಿಗೆ ಮಾತ್ರ ಇರಲು ಸಾಧ್ಯ........ಒಂದು ಒಳ್ಳೆ ಬರಹದ ತರಹ......ನಿಮ್ಮ ಹಾಗಿರುವ ಬರಹಗಾರನ ತರಹ! :-) ಹೂಂ, ಇಷ್ಟ ಆಯ್ತು...... Anjali Ramanna

ರಾಘವೇಂದ್ರ ಜೋಶಿ said...

@ ಮಂಜುನಾಥರೇ,
ಬ್ಲಾಗಿಗೆ ಭೇಟಿ ನೀಡಿ ಕಮೆಂಟಿಸಿದ್ದಕ್ಕೆ ಧನ್ಯವಾದ. :-)

ರಾಘವೇಂದ್ರ ಜೋಶಿ said...

@ ಸಿದ್ದು ಅವರೇ,
ಹೌದು.ಅವಳಿದ್ದ ಪರಿಸ್ಥಿತಿಯಲ್ಲಿ ಆಕೆ ಬೇರೆ ಇನ್ನೇನು
ಮಾಡಬಹುದಿತ್ತು? ಮಕ್ಕಳ ಬಗ್ಗೆ ಆಕೆಗಿದ್ದ ಪ್ರೀತಿ,ಮಮತೆ ಮತ್ತು
ಬಹುಶಃ ಅಭದ್ರತೆ ಇದೆಲ್ಲವನ್ನು ಆಕೆಯಿಂದ ಹೇಳಿಸಿದ್ದಿರಬಹುದು..
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

ರಾಘವೇಂದ್ರ ಜೋಶಿ said...

@ಅಂಜಲಿ ರಾಮಣ್ಣ,
ಒಬ್ಬ ಸಮರ್ಥ ಬರಹಗಾರ್ತಿಯಾಗಿರುವ ನೀವು
ಗಾಂಧಾರಿಯ ಒಳಕೊರಗನ್ನು ಅಷ್ಟೇ ಶಕ್ತಿಶಾಲಿಯಾಗಿ
ಗ್ರಹಿಸಬಲ್ಲಿರಿ.ಬ್ಲಾಗಿಗೆ ಸ್ವಾಗತವಿದೆ.
ಮತ್ತೇ ಸಿಗೋಣ.ಧನ್ಯವಾದ. :-)

ಸಿಮೆಂಟು ಮರಳಿನ ಮಧ್ಯೆ said...

ಜೋಷಿಯವರೆ...
ಬಹಳ ಸುಂದರ ಸ್ವಗತ...

ರಾಜಮನೆತನದಲ್ಲಿ ಬೆಳೆದು..
ಯೌವ್ವನದ ಸಹಜ ಸುಂದರ ಕನಸುಗಳನ್ನು ಕಟ್ಟಿಕೊಂಡಿದ್ದ ಗಾಂಧಾರಿ..
ಹುಟ್ಟು ಕುರುಡನನ್ನು ಮದುವೆಯಾಗಬೇಕಾದಾಗ ಎಷ್ಟು ಹಿಂಸೆ ಅನುಭವಿಸರಬಹುದು?

ಗಂಡನಿಗೆ ಕಣ್ನಿಲ್ಲವೆಂದು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂದರೆ..
ಅವಳ ಸಹಜ ಕನಸುಗಳಿಗೆ ಬಟ್ಟೆ ಕಟ್ಟಿಕೊಳ್ಳಬಹುದಾ?

ಹುಚ್ಚು ಮನಸ್ಸಿಗೆ?

ಇದರ ಬಗೆಗೂ ಬರೆಯಿರಿ..
ನಿಮ್ಮ ಬರವಣಿಗೆಯಲ್ಲಿ ಓದುವಾಸೆ..

ಪ್ರೀತಿಯಿಂದ..

Yatheesha G S said...

Joshiavare,

Gandhaariya Bhaavanegalannu chennagi niroopisiddeeri. Obba taayiya novannu bimbisiddeeri.
Chennagide, Dhanyavadagalu.

PARAANJAPE K.N. said...

ಗಾ೦ಧಾರಿಯ ಸ್ವಗತದಲ್ಲಡಗಿರುವ ಕಟುಸತ್ಯ, ಮಹಾಭಾರತದ ಪಾತ್ರಗಳ ಸ್ಥೂಲ ಚಿತ್ರ, ಕೃಷ್ಣನ ಕುಟಿಲ ನೀತಿಯ ವೈಚಿತ್ರ್ಯ - ಇವೆಲ್ಲವೂ ನಿಮ್ಮ ಬರಹದಲ್ಲಿ ಹರಳುಗಟ್ಟಿದೆ.

Sandhya Rani said...

ದೇವತೆಯಾಗಲು ಹೋಗಿ ಕಡೆಗೆ ಮನುಷ್ಯಳೂ ಆಗದೆ ಉಳಿದ ಸ೦ಕಟ, ಮಕ್ಕಳನ್ನು ಕಳೆದುಕೊ೦ಡ್ ವಿಹ್ವಲತೆ ತು೦ಬಾ ಚನ್ನಗಿ ಬ೦ದಿದೆ... ರಾಮಾಯಣದ ಊರ್ಮಿಳೆಯ೦ತೆ ಮಹಾಭಾರತದ ಗಾ೦ಧಾರಿ ಸಹ ಕಾಡುತಾಳೆ ಅಲ್ಲವ? - ಸ೦ಧ್ಯಾ

ರಾಘವೇಂದ್ರ ಜೋಶಿ said...

@ಸಿಮೆಂಟು ಮರಳಿನ ಪ್ರಕಾಶರೇ,
ಹೌದು.ಇವತ್ತಿನ ನಿಜ ಜೀವನದಲ್ಲಿ ಸಾಧ್ಯವೇ ಆಗದ ಪಾತ್ರ ಗಾಂಧಾರಿಯದು.ಅಂಥದೊಂದು ಪಾತ್ರ ಸೃಷ್ಟಿಸಿದ ವ್ಯಾಸರಿಗೆ ನಮೋ!
ನೀವು ಹೇಳಿದ ಸಂಗತಿಗಳ ಬಗ್ಗೆಯೂ ಗಮನ ಹರಿಸುವೆ.
ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ. :-)

ರಾಘವೇಂದ್ರ ಜೋಶಿ said...

@ಯತೀಶ್ ಜೀ,
ಗಾಂಧಾರಿಯ ಪ್ರಲಾಪ purely ಒಬ್ಬ ತಾಯಿಗೇ ಸಂಬಂಧಿಸಿದ್ದು.ನೀವು ಹೇಳಿದ್ದು ಸರಿ. :-)

ರಾಘವೇಂದ್ರ ಜೋಶಿ said...

@ ಪರಾಂಜಪೆಯವರೇ,
ಕೃಷ್ಣ ಒಂದು ರೀತಿಯಲ್ಲಿ ಸರ್ವಾಂತರಯಾಮಿ.
ಎಲ್ಲ ರೀತಿಯ ಪ್ರೀತಿ,ಹುಡುಕಾಟ,ಕುಟಿಲತೆ,
ನೈಪುಣ್ಯತೆ ಮತ್ತು ಕಠಿಣತೆಗಳಲ್ಲೂ ಕೃಷ್ಣ ತನ್ನ ನಿಲುವು,ನೆಲೆಯನ್ನು ತೋರುತ್ತಾನೆ.
ಕೃಷ್ಣನ ಅಗಾಧತೆಯ ಬಗ್ಗೆಯೂ ಬರೆಯಲು ಪ್ರಯತ್ನಿಸುವೆ.ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ಸಂಧ್ಯಾರಾಣಿಯವರೇ,
ನಮ್ಮ ಎರಡೂ ಪುರಾಣಗಳ ಒಂದೊಂದು ಪಾತ್ರಗಳೂ
ಹೊರನೋಟಕ್ಕೆ ಎಷ್ಟು ಸರಳ ಮತ್ತು ಶ್ರೇಷ್ಠವಾದವುಗಳೋ
ಅಂತರಾಳದಲ್ಲಿ ಅಷ್ಟೇ ಕ್ಲಿಷ್ಟಕರ ಮತ್ತು ನೋವಿನಿಂದ ತೋಯ್ದಿವೆ ಅಂತ ನನ್ನ ಭಾವನೆ.ಬಹುಶಃ ನೀವೂ ಅದನ್ನೇ ಹೇಳುತ್ತಿರಬೇಕು.
ಬ್ಲಾಗಿಗೆ ಸ್ವಾಗತ.ಅನಿಸಿಕೆಗೆ ಥ್ಯಾಂಕ್ಸ್. :-)

sunaath said...

RJ,
ತಾಯಿಹೃದಯದ ಮರಗು ಹಾಗು ಗಾಂಧಾರಿಯ ದೃಷ್ಟಿಕೋನ ಈ ಲೇಖನದಲ್ಲಿ ತುಂಬ ಚೆನ್ನಾಗಿ ಮೂಡಿ ಬಂದಿವೆ. ಮಹಾಭಾರತವನ್ನು ಬರೆದಾತ ಬಹುಶ: ಗಾಂಧಾರಿಯ ನೋವಿಗೂ ಕುರುಡಾಗಿದ್ದನೇನೊ! ಮಹಾಭಾರತದಲ್ಲಿಯ ಅನೇಕ ಪಾತ್ರಗಳ ಮಾನವೀಯ ಮರುಸೃಷ್ಟಿಯನ್ನು ಮಾಡುತ್ತಿರುವ,ಆ ಪಾತ್ರಗಳ ಅಂತರಂಗವನ್ನು ಅರಿತುಕೊಳ್ಳುವ ನಿಮ್ಮ ಪ್ರಯತ್ನ ಪ್ರಶಂಸನೀಯವಾಗಿದೆ.

ರಾಘವೇಂದ್ರ ಜೋಶಿ said...

@ಸುನಾಥ್ ಸರ್,
ಹೌದು ಸರ್,ನಾನು ನೋಡಿದ ಹಾಗೆ ವ್ಯಾಸರು
ಗಾಂಧಾರಿಯ ಬಗ್ಗೆ ಯಾಕೆ ಎಲ್ಲೂ ಮರುಕ ವ್ಯಕ್ತಪಡಿಸಿಲ್ಲ.
ನಿಮ್ಮ ಕಾಮೆಂಟ್ ಗಳು ಯಾವಾಗಲೂ ನನ್ನಲ್ಲಿ
ಒಂದು ರೀತಿಯ ಎಚ್ಚರ ಮತ್ತು ಉತ್ಸಾಹ ಮೂಡಿಸುತ್ತವೆ.
ನಮಸ್ಕಾರ ಮತ್ತು ಪ್ರೀತಿ. :-)

bharathi said...

ಬರಹ ಚೆನ್ನಾಗಿದೆ ಜೋಷಿಯವರೇ .. ನನಗೆ ಕೂಡಾ ಈ ರೀತಿಯ ಪಾತ್ರಗಳ ತುಮುಲಗಳು ಈ ರೀತಿ ಇದ್ದಿರಬಹುದಾ ಅನ್ನೋ ಕುತೂಹಲ ಯಾವಾಗಲೂ ಕಾಡುತ್ತೆ .. ಬರಹ ಇಷ್ಟವಾಯ್ತು

Anitha Naresh Manchi said...

ತನ್ನ ಮಕ್ಕಳ ಶವಗಳನ್ನು ನೋಡದ ಆಕೆ ಒಂದು ರೀತಿಯಲ್ಲಿ ಭಾಗ್ಯವಂತಳು ಆಗಿರಬಹುದಲ್ಲ್ಲ.. ಎಲ್ಲವನ್ನು ತನ್ನರಿವಿಗೆ ತಿಳಿವಷ್ಟೇ ಒಳಗಣ್ಣಿನಿಂದಲೇ ನೋಡುವ ಪ್ರಯತ್ನ.. ಅವಳೊಳಗಿನ ನೋವು ನಿಮ್ಮೊಳಗೂ ಇಳಿದು ಹೊರಹೊಮ್ಮಿದ್ದು ಇಷ್ಟವಾಯ್ತು

Anonymous said...

ಮಹಾಭಾರತವನ್ನು ಬರೆದವರು ಗಾಂಧಾರಿಯ ನೋವಿಗೂ ಕುರುಡಾಗಿದ್ದರೇ?!.....ಯಾಕೋ ನನಗೆ ಈ ಮಾತು ಒಪ್ಪಲಾಗುತ್ತಿಲ್ಲ. ಗಾಂಧಾರಿ, ಊರ್ಮಿಳೆ, ಕರ್ಣ, ದುಷ್ಯಂತ ಪಾತ್ರಗಳು ಹೀಗೆ ಸಂಪೂರ್ಣತೆಯ ನಿರ್ಜೀವ ಪಾತ್ರಗಳಾಗಿ ನಮ್ಮೆದುರು ನಿಂತಿರದಿದ್ದರೆ, ನಮ್ಮ ನಿಮ್ಮ ಒಳಗಣ್ಣುಗಳನ್ನು ಆವರಿಸುತ್ತಿತ್ತು ಕುರುಡು! ಈ ಕಾಲಘಟ್ಟದಲ್ಲಿ ಇಂತಹ ಪಾತ್ರಗಳಿಗೆ ಹೊಸ ಹೊರಹು ನೀಡುತ್ತಿವೆ ಸೂಕ್ಷ್ಮ ಮನಸ್ಸುಗಳು ಅಂದಮೇಲೆ ಆ ಪಾತ್ರಗಳ ಸೃಷ್ಟಿಕರ್ತರ ಸಾಮಾಜಿಕ ಕಳಕಳಿಯನ್ನು ಮೆಚ್ಚಬೇಕಲ್ಲ್ವೇ! Honestly I feel expression of sensitivity over sensibility binds the soceity. Anjali Ramanna

ರಾಘವೇಂದ್ರ ಜೋಶಿ said...

@ಭಾರತಿಯವರೇ,
ಮಹಾಭಾರತ ಅತ್ಯಂತ ನಿಗೂಢತೆಗಳನ್ನು ಹೊಂದಿರುವ ಕಥಾನಕವೆಂದು ನಾನು ಭಾವಿಸುತ್ತೇನೆ.ಕಲ್ಪನೆಗಿಂತಲೂ ವಾಸ್ತವ ತುಂಬ ಭೀಕರ ಮತ್ತು ರಮ್ಯವಾಗಿರುತ್ತದೆಂಬ ಸತ್ಯವನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ.ನಿಮ್ಮ ಅನಿಸಿಕೆ ನೋಡಿ ಖುಷಿಯಾಯ್ತು.
ಧನ್ಯವಾದಗಳು. :-)

ರಾಘವೇಂದ್ರ ಜೋಶಿ said...

@ಅನಿತಾ ಅವರೇ,
ಮಕ್ಕಳು ಟೀವಿ ಒಡೆದು ಹಾಕಿದರು ಅಂತ ಯಾವ ತಾಯಿಯೂ ತನ್ನ ಮಗುವನ್ನು ಮನೆಯಿಂದ ಆಚೆ ಹಾಕಲಾರಳು.ಆ ಕ್ಷಣದ ಸಿಟ್ಟಿಗೆ ಒಂದೆರಡು ಬೈದು,ಹೆಚ್ಚೆಂದರೆ ನಾಲ್ಕು ಬಾರಿಸಿ ಸುಮ್ಮನಾಗಬಹುದಷ್ಟೇ!
:-)
ಈ ನಿಟ್ಟಿನಲ್ಲಿ ಗಾಂಧಾರಿಯೂ ಒಬ್ಬ ಆರ್ಡಿನರಿ ಹೆಣ್ಣುಮಗಳಾಗಿ ಏನು ಮಾಡಬಹುದೋ ಅದನ್ನು ತೋರಿಸುವ ಪುಟ್ಟ ಪ್ರಯತ್ನವಿದು..
ಬ್ಲಾಗಿಗೆ ಭೇಟಿ ನೀಡಿ ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್.

ಬಾಲು said...

ವಿಬಿನ್ನ ದೃಷ್ಟಿಕೋನ ಹಾಗು ಅದನ್ನು ಅತ್ಯಂತ ಸುಂದರವಾಗಿ ಅಕ್ಷರ ರೂಪಕ್ಕೆ ಇಳಿಸಿದ್ದಿರಿ.
ಇಷ್ಟ ಆಯಿತು.

Anonymous said...

ನೀವು ಬರೆದಿರುವ ಭಾವದಲ್ಲಿ ಗಾಂಧಾರಿ ಒಬ್ಬ ಅಸಾಧಾರಣ ಹೆಣ್ಣಾಗಿ ಹೊರಹೊಮ್ಮುತ್ತಾಳೆ ನನ್ನ ದೃಷ್ಟಿಯಲ್ಲಿ.....ಆದರೆ ನ್ನಿಮ್ಮದೇ commentನಲ್ಲಿ ಅವಳು ಒಬ್ಬ ordinary ಹೆಣ್ಣಮಗಳು ಎಂದು ಬಿಂಬಿಸಿದ್ದೀರ.....ಇದು ಒಬ್ಬ ಬರಹಗಾರನ ಮತ್ತು ಓದುಗನ ದ್ವಂದ್ವ??? Anjali Ramanna

sunaath said...
This comment has been removed by the author.
sunaath said...

"ಮಹಾಭಾರತವನ್ನು ಬರೆದಾತ ಬಹುಶ: ಗಾಂಧಾರಿಯ ನೋವಿಗೂ ಕುರುಡಾಗಿದ್ದನೇನೊ!"
ಮೇಲಿನ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅಂಜಲಿ ರಾಮಣ್ಣನವರು ಒಂದು ತರ್ಕಬದ್ಧ ಪ್ರತಿಪಾದನೆಯನ್ನು ಮಂಡಿಸಿರುತ್ತಾರೆ. ಅವರಿಗೆ ಮೊದಲಿಗೆ ವಂದನೆಗಳು. ಮಹಾಭಾರತದ ಪಾತ್ರಗಳೆಲ್ಲ ವ್ಯಾಸನಿಗೆ ಸಂಬಂಧಿಗಳೇ. ಅವರ ನೋವು ಇವನ ನೋವೂ ಹೌದು. ವೈಯಕ್ತಿಕವಾಗಿ ಗಾಂಧಾರಿಯ ನೋವು ವ್ಯಾಸನನ್ನು ತಟ್ಟಿರಬಹುದು. ಆದರೆ ನಮ್ಮ ಮುಂದಿರುವ ಪ್ರಶ್ನೆ: ‘ಮಹಾಭಾರತ’ ಕಾವ್ಯದಲ್ಲಿ ಗಾಂಧಾರಿಯ ಅಳಲಿಗೆ ಅಭಿವ್ಯಕ್ತಿ ಸಿಕ್ಕಿದೆಯೆ, ಎನ್ನುವದು.
ವ್ಯಾಸರು ಗಾಂಧಾರಿಯನ್ನು ಮಹಾಪತಿವ್ರತೆ ಎಂದು ಬಣ್ಣಿಸುತ್ತಾರೆ. ಆದರೆ ಅವಳ ಕೊರಗನ್ನು ಅವರು ನಿರ್ಲಕ್ಷಿಸಿದ್ದಾರೆ. ಆ ಕೊರಗಿನ ಚಿತ್ರಣ ಸಿಗುವದು ‘ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ’ ಎನ್ನುವ ಈ ಲೇಖನದಲ್ಲಿಯೇ!

ಗಾಂಧಾರಿಗಷ್ಟೇ ಇಂತಹ ಅನ್ಯಾಯವಾಗಿದೆ ಎಂದಲ್ಲ. ಅಂಬೆ, ಅಂಬಿಕೆ ಹಾಗು ಅಂಬಾಲಿಕೆಯರನ್ನು ಭೀಷ್ಮ ‘ಗೆದ್ದುಕೊಂಡು ಬಂದ’. ದ್ರೌಪದಿಯನ್ನು ಅವಳ ಗಂಡ ಜೂಜಿನಲ್ಲಿ ಸೋತ. ಅವಳನ್ನು ಗೆದ್ದವರು ತುಂಬಿದ ಸಭೆಯಲ್ಲಿ ಅವಳ ಮಾನಹರಣ ಮಾಡಿದರು. ಮಹಾಭಾರತದ ತುಂಬೆಲ್ಲ ಇರುವದು ಸ್ತ್ರೀಶೋಷಣೆ!

ವ್ಯಾಸರನ್ನು ನಾನು ದೂಷಿಸುವದಿಲ್ಲ. ಅವರು ಕೇವಲ ಇತಿಹಾಸಕಾರರು. ಮಹಾಭಾರತದ ಕಾಲವು ಪುರುಷಪ್ರಧಾನ ವ್ಯವಸ್ಥೆಯು ಶಿಖರದಲ್ಲಿದ್ದ ಕಾಲ. ಭೂಮಿ,ಗೋವು ಹಾಗು ಹೆಣ್ಣು ಇವು ಆ ಕಾಲದಲ್ಲಿ ಪುರುಷನ ‘ಆಸ್ತಿ’ಯಾಗಿದ್ದವು. ‘ಆಸ್ತಿ’ಗೆ ಭಾವನೆಗಳಿರುವದಿಲ್ಲ!

ಎರಡನೆಯದಾಗಿ, ಮಹಾಭಾರತದಂತಹ ಮಹಾಕಾವ್ಯದಲ್ಲಿ ಒಂದು themeಗೆ ಹೆಚ್ಚಿನ ಒತ್ತು ಕೊಡಬೇಕಾಗುವದೇ ಹೊರತು ಓರ್ವ ವ್ಯಕ್ತಿಯ (ಗಂಡೇ ಇರಲಿ, ಹೆಣ್ಣೇ ಇರಲಿ) ಭಾವನೆಗಳಿಗಲ್ಲ. ಮಹಾಭಾರತದಲ್ಲಿ ಮತ್ತೆ ಮತ್ತೆ ಮರುಕಳಿಸುವ theme ಎಂದರೆ: ‘ಯಾವುದು ಧರ್ಮ? ಯಾವುದು ಅಧರ್ಮ?’ ಈ ಧರ್ಮಜಿಜ್ಞಾಸೆಯಲ್ಲಿ ಮುಳುಗಿದ ವ್ಯಾಸರಿಗೆ ಗಾಂಧಾರಿಯ ಕೊರಗು ನಗಣ್ಯ.

ಏನೇ ಆದರೂ ಅಂಜಲಿ ರಾಮಣ್ಣನವರು ನಾಣ್ಯದ ಮತ್ತೊಂದು ಮುಖವನ್ನು ತೋರಿಸಿದ್ದಾರೆ. ಅವರಿಗೆ ವಂದನೆಗಳು.

Anonymous said...

ಮಹಾಭಾರತದ ಪಾತ್ರಗಳೆಲ್ಲ ವ್ಯಾಸನಿಗೆ ಸಂಬಂಧಿಗಳೇ. ಅವರ ನೋವು ಇವನ ನೋವೂ ಹೌದು.....ಪಾತ್ರಗಳ ನೋವುಸೃಷಿಕರ್ತನ ನೋವು ಮಾತ್ರ ಆಗಿರದೆ ಸೃಷ್ಟಿಕರ್ತನ ಜಿಞಾಸೆಯೂ ಅದೀತು.

ಮಹಾಭಾರತದಂತಹ ಮಹಾಕಾವ್ಯದಲ್ಲಿ ಒಂದು themeಗೆ ಹೆಚ್ಚಿನ ಒತ್ತು ...... ಅನುಮಾನವೇ ಇಲ್ಲದೆ ಒಪ್ಪಬೇಕಾದ ಮಾತು. ಕಾವ್ಯಗಳುಮಹಾನ್ ಎನಿಸಿಕೊಳ್ಳುವುದೇ ವ್ಯಕ್ತಿ ಚಿತ್ರಣವನ್ನು ಮೀರಿ ಕಾಲಘಟ್ಟದ themeಗೆ ಒತ್ತುಕೊಟ್ಟು ಅದನ್ನು ಸಾರ್ವರ್ತ್ರಿಕ ಎನಿಸಿದಾಗ ಆದ್ದರಿಂದ ಪಾತ್ರಗಳ ಅಳಲಿಗೆ ಪೂರ್ಣ ಪ್ರಮಾಣದ ಅಭಿವ್ಯಕ್ತಿ ಸಿಕ್ಕಿಬಿಟ್ಟರೆ ಕಾವ್ಯವು ಮಹಾನ್ ಆಗಿ ಹೊರಹೊಮ್ಮುವ ಸಾಧ್ಯತೆಯೂ ತಪ್ಪಿಹೋಗಬಹುದಲ್ಲವೇ?!

........ಮಹಾಭಾರತದ ತುಂಬೆಲ್ಲ ಇರುವದು ಸ್ತ್ರೀಶೋಷಣೆ! ...... ಇಲ್ಲಿ I beg to differ, ಕಾರಣ ನನ್ನ ದೃಷ್ಟಿಯಲ್ಲಿ ಎರಡು ಅತೀ ಮಹತ್ತ್ವದ ಕಾವ್ಯಗಳೆಂದು ಗುರುತಿಸಿಕೊಳ್ಳುವ ರಾಮಾಯಣ ಮತ್ತು ಮಹಭಾರತಗಳಲ್ಲಿ ನಡೆದಿರುವುದು ಸ್ತ್ರೀ ಶೋಷಣೆಯಲ್ಲ. ತ್ರಿಜಟೆ, ಗಾಂಧಾರಿ, ಮಂಥರೆ, ಮಾದ್ರಿಯಿಂದ್ಹಿಡಿದು ಸೀತೆ ದೌಪದಿಯವರೆಗೂ ಸ್ತ್ರೀಯ ಅಂತಃಸತ್ವದ ಅಸೀಮತೆಯನ್ನು ತೆರೆದಿಟ್ಟದ್ದು ಈ ಕಾವ್ಯಗಳು. ಹೆಣ್ಣಿಗೆ ತನ್ನ ಪರಿಚಯ ಮಾಡಿಸಿಕೊಡಲು ಎಲ್ಲೋ ಪುರುಷನನ್ನೇ ಕೈಗೊಂಬೆಯಾಗಿ ಬಳಸಿಕೊಳ್ಳಲಾಗಿದೆಯೇ? ಎನ್ನುವ ಅನುಮಾನವೂ ನನ್ನಲ್ಲಿ ತರಿಸಿದ ಕೃತಿಗಳು ಇವು!

ಕ್ಷಮೆಯಿರಲಿ. ಉತ್ತಮೋತ್ತಮರ ನಡುವೆ ನಾನು ಯಃಕಶ್ಚಿತ್. ಇದು ನನ್ನ ವೈಯಕ್ತಿಕ ಅಭಿಪ್ರಾಯ supported by ನನ್ನದೇ ವ್ಯಾಖ್ಯಾನ! Anjali Ramanna

Shrinivas kulkarni said...

I really started liking your articles. Very nicely written.. Too good

ರಾಘವೇಂದ್ರ ಜೋಶಿ said...

@ಸುನಾಥ ಸರ್ ಮತ್ತು ಅಂಜಲಿ ರಾಮಣ್ಣ,
ಇಲ್ಲಿ ತಮ್ಮ ತಮ್ಮ ಅನಿಸಿಕೆಗಳ ಮೂಲಕ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳ ಪಾತ್ರ ಮತ್ತು ಆಳಗಳ ಬಗ್ಗೆ ವ್ಯಾಖ್ಯಾನಗಳನ್ನು ಮಾಡಿರುವ ಸುನಾಥ್ ಸರ್ ಮತ್ತು ಅಂಜಲಿ ರಾಮಣ್ಣ ಅವರಿಗೆ ನನ್ನ ಅಭಿನಂದನೆಗಳು.

@ಅಂಜಲಿ ರಾಮಣ್ಣ,
ಈಗಾಗಲೇ ನಿಮ್ಮ ಪ್ರತಿಕ್ರಿಯೆಗೆ ಸುನಾಥರವರು ವಿಸ್ತಾರವಾಗಿ ಮರು ಪ್ರತಿಕ್ರಿಯೆ ನೀಡಿದ್ದಾರೆ.ಆದರೂ-ಇನ್ನೂ ಉಳಿದಿರಬಹುದಾದ ನಿಮ್ಮ ಸಂಶಯಗಳಿಗೆ ಉತ್ತರಿಸುವದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.
"ಗಾಂಧಾರಿ ಒಬ್ಬ ಆರ್ಡಿನರಿ ಹೆಣ್ಣುಮಗಳೇ?"
ಖಂಡಿತ ಹೌದು ಮತ್ತು ಅಲ್ಲ!
ಕೇವಲ ಗಂಡನ ಮೇಲಿನ ಪ್ರೀತಿಗಾಗಿ ಜೀವನಪೂರ್ತಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಆಕೆ ಯಾವ ವಿಧದಲ್ಲೂ ನನಗೆ ಆರ್ಡಿನರಿ ಹೆಣ್ಣು ಮಗಳಾಗಿ ಕಾಣಿಸುವದಿಲ್ಲ.ಆದರೆ ಎಲ್ಲ ಮುಗಿದಾದ ಮೇಲೆ ಪರಶಿವನ ಮುಂದೆ ಮಾತಿಗೆ ಕುಳಿತ ಆಕೆ ತನ್ನ ಮಕ್ಕಳನ್ನು ಸಮರ್ಥಿಸಿಕೊಳ್ಳುವದರಲ್ಲಿ,
ಕೃಷ್ಣನನ್ನು ಶಪಿಸುವದರಲ್ಲಿ ಮತ್ತು ಅನೇಕ ಹಿರಿತಲೆಗಳನ್ನು supporting document ಥರ ಉಪಯೋಗಿಸಿಕೊಳ್ಳುವದರ ಮೂಲಕ ತನ್ನ 'ಆರ್ಡಿನರಿ'ತನವನ್ನು ತೋರ್ಪಡಿಸಿಕೊಳ್ಳುತ್ತಾಳೆ. ಆದರೆ ಇಲ್ಲಿ "ಆರ್ಡಿನರಿ" ಎಂಬುದು ನನ್ನ ಪಾಲಿಗೆ ಡಿಕ್ಷನರಿ ಶಬ್ದವಲ್ಲ;ಅದೊಂದು ಭಾವ!

ಇನ್ನುಳಿದಂತೆ,ನನಗೆ ತಿಳಿದಮಟ್ಟಿಗೆ,ರಾಮಾಯಣ ಮತ್ತು ಮಹಾಭಾರತಗಳು ಎರಡು very different ಆದಂಥ ಕಾಲಘಟ್ಟದಲ್ಲಿ ನಡೆದು ಹೋದ ಘಟನೆಗಳು.
ರಾಮಾಯಣದಲ್ಲಿ ಆದರ್ಶ ಮತ್ತು ಮೌಲ್ಯಗಳು ಬಿಂಬಿತಗೊಂಡಿದ್ದರೆ ಮಹಾಭಾರತದಲ್ಲಿ ಹೆಜ್ಜೆಹೆಜ್ಜೆಗೂ conspiracy,ವಿಕೃತೆ ಮತ್ತು ಇವತ್ತಿನ real time
ಜೀವನಾನುಭಾವಗಳು ಮೈದಳೆದಿವೆ.ಹೀಗಾಗಿ ಯಾರದೋ ಮಾತು ಕೇಳಿ ಗರ್ಭಿಣಿಯಾದ ಸೀತೆಯನ್ನು ಮತ್ತೊಮ್ಮೆ ಕಾಡಿಗೆ ಅಟ್ಟುವ ರಾಮನನ್ನೂ ನಾವು
ಮರ್ಯಾದಾಪುರುಷೋತ್ತಮನೆಂದು ಪೂಜಿಸುತ್ತೇವೆ.ಕೇವಲ ತಮ್ಮ ಗೆಲುವಿಗಾಗಿ ಅನೇಕ ಕೆಟ್ಟ ಕಾರ್ಯಗಳನ್ನು ಮಾಡಿದ ಪಾಂಡವರಿಗೆ ಜೈ ಅನ್ನುತ್ತೇವೆ.
ಸ್ತ್ರೀ ಶೋಷಣೆ ಎರಡರಲ್ಲೂ ಇವೆ.ಮತ್ತು ಹಾಗೆ ಶೋಷಿಸಿಕೊಂಡೂ ಗೆಲುವನ್ನು ತಮ್ಮ ಪಾದದಡಿಗೆ ಕರೆತರುವ ಮೂಲಕ ಆಯಾ ಪಾತ್ರಗಳು ತಾವೆಷ್ಟು ಸಮರ್ಥರು ಎನ್ನುವದನ್ನು ನಿರೂಪಿಸುತ್ತವೆ.ಇದರರ್ಥ ಏನು? ಸೀತೆ ಅಷ್ಟೆಲ್ಲ ಕಷ್ಟ ಪಡದಿದ್ದರೆ ನಮಗೆ ದೇವತೆ ಎನಿಸುತ್ತಿದ್ದಳೇ? ದ್ರೌಪದಿ ಅಷ್ಟೊಂದು harassment ಎದುರಿಸದಿದ್ದರೆ
ಗಟ್ಟಿಗಿತ್ತಿ ಎನಿಸುತ್ತಿದ್ದಳೇ?
ವಾಲ್ಮೀಕಿ ಮತ್ತು ವ್ಯಾಸರು ಮಹಾಜಾಣರು.ಎಲ್ಲಿ ಎಷ್ಟು ಹೇಳಬೇಕೋ ಅಷ್ಟು ಹೇಳಿ,ಯಾರಿಗೆ ಎಷ್ಟು ಕಷ್ಟ ಕೊಡಬೇಕೋ ಅಷ್ಟು ಕಷ್ಟ ಕೊಟ್ಟು ಸುಮ್ಮನೇ ತಮ್ಮ ಪಾಡಿಗೆ ತಾವು ಎದ್ದು ಹೋಗಿಬಿಡುತ್ತಾರೆ."ಹಿಡಿದರೆ ಮುಷ್ಠಿ;ಚೆಲ್ಲಿದರೆ ಮನೆತುಂಬ.." ಎಂಬಂತೆ ಅವರ un told ಸೂಚನೆಗಳನ್ನು,ಸಂಜ್ಞೆಗಳನ್ನು ನಾವೇ ಅರ್ಥೈಸಿಕೊಳ್ಳಬೇಕು.
ನನ್ನ ಸ್ಪಷ್ಟನೆ ತಮಗೆ ಸರಿ ಎಂದು ಕಂಡು ಬಂದಿದ್ದಲ್ಲಿ ಸಂತೋಷ.
ಮಿಕ್ಕಂತೆ,ಸಾಗರ ದೊಡ್ಡದಿದೆ ಮಂಥನಕ್ಕೆ...
ಮತ್ತೊಮ್ಮೆ ಅಭಿನಂದನೆಗಳು. :-)

ರಾಘವೇಂದ್ರ ಜೋಶಿ said...

@ ಬಾಲು ಅವರೇ,
ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಆಭಾರಿ.
:-)

@ ಶ್ರೀನಿವಾಸ ಕುಲಕರ್ಣಿ ಅವರೇ,
ಥ್ಯಾಂಕ್ಸ್,ನಿಮ್ಮ ಮೆಚ್ಚಿಕೊಂಡಿದ್ದು ಕೇಳಿ ಸಿಕ್ಕಾಪಟ್ಟೆ ಖುಷಿಯಾದೆ.
ನಿಮ್ಮ ಕಾಮೆಂಟೇ ಅದನ್ನು ಎತ್ತಿ ತೋರಿಸುತ್ತಿದೆ.
ಥ್ಯಾಂಕ್ಯೂ ಸೊ ಮಚ್! :-)

Shrinivas kulkarni said...

Frankly speaking I am eagerly waiting for ur next one

Mallikarjuna Barker said...

joshi, tumba chennage barita eddira, mahabharatvanna nenapisuttiravadakke tumba thanks Bye

ಗುಬ್ಬಚ್ಚಿ ಸತೀಶ್ said...

nice writing, sir.

ರಾಘವೇಂದ್ರ ಜೋಶಿ said...

@ಶ್ರೀನಿವಾಸ ಕುಲಕರ್ಣಿಯವರೇ,
ಖಂಡಿತ.ಇಷ್ಟರಲ್ಲೇ ಮತ್ತೊಮ್ಮೆ ಸಿಗೋಣ.ಧನ್ಯವಾದಗಳು.

@ ಮಲ್ಲಿಕಾರ್ಜುನರವರೇ,
ನಿಮಗೂ ಧನ್ಯವಾದಗಳು.ಸಿಗ್ತಾ ಇರಿ. :-)

@ಗುಬ್ಬಚ್ಚಿ ಸತೀಶರೆ,
Thanks for your appreciations. :-)

ಮುರಳೀಧರ ಸಜ್ಜನ said...

ಮಹಾಭಾರತದ ಪಾತ್ರಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿ, ಅವೇ ಪಾತ್ರಗಳಿಗೆ ಮತ್ತು ಅವೇ ಕಥೆಗಳಿಗೆ ಹೊಸತನದ ಮೂಲಕ ಜೀವತುಂಬಿ ನಳನಳಿಸುವಂತೆ, ಧನಾತ್ಮಕವಾಗಿ ಆಲೋಚನೆಗೈಯಲು ಪ್ರೇರೆಪಿಸುವ, ನಮ್ಮ ಭಾವನೆಗಳನ್ನು ಅಲುಗಾಡಿಸುವ ತಮ್ಮ ಬರಹಗಳು ಸುಂದರ ಮತ್ತು ವಿಭಿನ್ನ. ನೀವು ವರ್ಣಿಸಿರುವ ಗಾಂಧಾರಿ ಪಾತ್ರ ಅಧ್ಭುತ ಊಹೆ. ನಮ್ಮನ್ನು ಆನಂದತುಂದಿಲವಾಗಿಸುತ್ತದೆ.

ರಾಘವೇಂದ್ರ ಜೋಶಿ said...

@ಮುರಳೀಧರ ಸಜ್ಜನರೆ,
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಖುಷಿ.
ಇದು ನನ್ನಂಥವನಿಗೆ ಮತ್ತಷ್ಟು ಚೆಂದ ಮಾಡಿ ಬರೆಯಲು
ಪ್ರೇರೇಪಿಸುತ್ತದೆ.ಧನ್ಯವಾದಗಳು.