Saturday, September 29, 2012

ನನ್ನ ಮೊದಲ ಹನಿಗವನ ಪಕ್ಕಾ ಕದ್ದಮಾಲು!




(ಬರವಣಿಗೆಯ ಹೊಸ್ತಿಲಲ್ಲಿ ನಿಂತಿರುವವರಿಗಾಗಿ ಮಿತ್ರರಾದ ಜೋಗಿಯವರು 'ಹಲಗೆ-ಬಳಪ' ಅನ್ನುವ ಪುಸ್ತಕ
 ಬರೆದಿದ್ದಾರೆ. ಅದರಲ್ಲಿ ಅನೇಕ ಉತ್ತಮ ಲೇಖಕರ ಅನುಭವಗಳಿವೆ. ಅವರೆಲ್ಲ ತಮ್ಮ ಆರಂಭಿಕ ಬರವಣಿಗೆಯ ಹುಟ್ಟು,ಸ್ಫೂರ್ತಿ,ಸವಾಲು,ತಲ್ಲಣ ಮತ್ತು ಆವತ್ತಿನ ತಮ್ಮ ಆತ್ಮವಿಶ್ವಾಸದ ಬಗ್ಗೆ ಹೇಳಿಕೊಂಡಿದ್ದಾರೆ.
ಖುಷಿಯ ಸಂಗತಿ ಏನೆಂದರೆ,ಇಂಥ ದಿಗ್ಗಜರ ನಡುವೆ ನನ್ನ ಬರಹವೂ ಪುಸ್ತಕದಲ್ಲಿ ಜಾಗ ಪಡೆದುಕೊಂಡಿದೆ:
ಹೂವಿನೊಂದಿಗೆ ನಾರೂ ಎಂಬಂತೆ.. ಅದೀಗ ಇಲ್ಲಿದೆ.ಇದಿಷ್ಟು ನಿಮ್ಮ ಅವಗಾಹನೆಗೆ.-RJ)


ಚಿತ್ರ:ಅಂತರ್ಜಾಲ



ನಾನಾಗ ಐದನೇ ಕ್ಲಾಸು.
ಮೇಸ್ಟ್ರು ದೀಪಾವಳಿಯ ಬಗ್ಗೆ ನಿಬಂಧ ಬರೆದುಕೊಂಡು ಬರಲು ಎಲ್ಲ ವಿದ್ಯಾರ್ಥಿಗಳಿಗೆ ಹಿಂದಿನ ದಿನವೇ 
ಹೋಂವರ್ಕ್ ಕೊಟ್ಟಿದ್ದರು.ಹಾಗಾಗಿ ನಾವೆಲ್ಲ ಶ್ರದ್ಧೆಯಿಂದ ಬರೆದುಕೊಂಡು ಬಂದಿದ್ದೆವು. ನನ್ನ ನಿಬಂಧ 
ಓದಿದ ಮೇಸ್ಟ್ರಿಗೆ ಅದು ಎಷ್ಟು ಇಷ್ಟವಾಗಿತ್ತೆಂದರೆ,ನನ್ನನ್ನು ಸೀದಾ ಸ್ಟೂಲ್ ಮೇಲೆ ಹತ್ತಿಸಿ,black board
ಮೇಲೆ ನನ್ನಿಂದಲೇ ಬರೆಸಿ,ಎಲ್ಲ ವಿದ್ಯಾರ್ಥಿಗಳಿಗೆ ಅದನ್ನು ಕಾಪಿ ಮಾಡಿಕೊಳ್ಳಲು ಹೇಳಿದ್ದರು!

ಇದೇ ನನ್ನ ಪಾಲಿಗೆ ಮೊಟ್ಟ ಮೊದಲ ಬಾರಿಗೆ publish ಆದ ಬರಹ. 

ಹಾಗೆ ನೋಡಿದರೆ,ನನ್ನ ಶಾಲಾ-ಕಾಲೇಜುಗಳ ದಿನಗಳಲ್ಲಿ ಪಠ್ಯಪುಸ್ತಕಗಳಿಗಿಂತ ನನ್ನನ್ನು ಜಾಸ್ತಿ 
ಆಕರ್ಷಿಸುತ್ತಿದ್ದುದು ಸುಧಾ,ಪ್ರಜಾಮತ,ಮಯೂರದಂಥ ಪತ್ರಿಕೆಗಳು.ಆ ದಿನಗಳಲ್ಲಿ ನಾನು ಓದಲು
ಬಯಸುತ್ತಿದ್ದ ಕೃತಿಗಳ ಕೃತಿಕಾರನ ಬಗ್ಗೆ ನನಗೆ ಯಾವ ಕುತೂಹಲವೂ ಇರಲಿಲ್ಲ.ಅವರು ಯಾರು?
ಎಂಥವರು? ಅನ್ನುವದು ನನಗೆ ಅಷ್ಟೊಂದು ಮುಖ್ಯವಾಗಿರಲೇ ಇಲ್ಲ.ಒಟ್ಟಿನಲ್ಲಿ ನನಗೆ ಕತೆ ಓದಬೇಕಿತ್ತು.
ಕಾದಂಬರಿ ಓದಬೇಕಿತ್ತು ಅಷ್ಟೇ.ಬಹುಶಃ ಇದರಿಂದ ನನಗೊಂದು ರೀತಿಯ ಅನುಕೂಲವೇ ಆಯಿತು.
ಯಾವೊಂದು ಕೃತಿಕಾರನ ಬಗ್ಗೆ ವಿನಾಕಾರಣ ಪೂರ್ವಾಗ್ರಹಪೀಡಿತನಾಗದೇ,ರಾಗ-ದ್ವೇಷಗಳಿಲ್ಲದೇ
ಸುಮ್ಮನೇ ಕೈಗೆ ಸಿಕ್ಕ ಪುಸ್ತಕಗಳನ್ನು ಓದುವಂತಾಯಿತು.ಗ್ರಹಿಸುವಂತಾಯಿತು.

ಇಲ್ಲೊಂದು ಪ್ರಸಂಗವನ್ನು ಹೇಳಲೇಬೇಕು:ನಾನು ಒಂಭತ್ತನೇ ತರಗತಿಯಲ್ಲಿದ್ದಾಗ ಗದುಗಿನ ಸ್ಥಳೀಯ 
ದಿನಪತ್ರಿಕೆಯೊಂದರಲ್ಲಿ ಅಫೀಶಿಯಲ್ಲಾಗಿ ನನ್ನ ಮೊದಲ ಹನಿಗವನ ಪ್ರಕಟಗೊಂಡಿತು.ತಮಾಷೆಯೆಂದರೆ,
ಅದೊಂದು ಪಕ್ಕಾ ಕದ್ದ ಮಾಲು! ಇವತ್ತಿಗೂ ಅದರ ಮೂಲ ಕೃತಿಕಾರ ಯಾರು ಅಂತ ಗೊತ್ತಿಲ್ಲವಾದರೂ,
ಅದೊಂದು ಸುಮ್ಮನೇ ಬಾಯಿಂದ ಬಾಯಿಗೆ ಹರಡುತ್ತಿದ್ದ,ಆವತ್ತಿನ slam book ಗಳಲ್ಲಿ ಗೀಚಲ್ಪಡುತ್ತಿದ್ದ
ಕವನವದು.ಅವೇ ಸಾಲುಗಳನ್ನು ಹನಿಗವನವನ್ನಾಗಿಸಿ ಪತ್ರಿಕೆಗೆ ಬರೆದುಕೊಟ್ಟಿದ್ದೆ. ಅದಕ್ಕೊಂದು ಕಾವ್ಯನಾಮ ಬೇರೆ! 
ಅದು ಪ್ರಿಂಟೂ ಆಯಿತೆನ್ನಿ. ಕವನ ನೋಡಿದ ಹೈಸ್ಕೂಲಿನ ಕನ್ನಡ ಮೇಸ್ಟ್ರು ತುಂಬ ಖುಷಿಯಿಂದ ಬೆನ್ನು ತಟ್ಟಿದ್ದರು.
ಆದರೆ ನಿಜ ಹೇಳಿದರೆ ಎಲ್ಲಿ ಬೆನ್ನಿಗೆರಡು ಬಾರಿಸುತ್ತಾರೆಂದು ಕೃತಿಚೌರ್ಯದ ಬಗ್ಗೆ ಹೇಳಲೇ ಇಲ್ಲ..

ಇದಾದ ಮೇಲೆ ಮೇಸ್ಟ್ರಿಗೆ ನನ್ನ ಮೇಲೆ ಒಂಥರಾ ಅಭಿಮಾನ ಮೂಡತೊಡಗಿತು. ನಾನೂ ಸುಮ್ಮನೇ 
ಗುಮ್ಮನ ಗುಸುಕನಂತೆ ಬರೆಯುತ್ತ ಹೋದೆ.ತಿದ್ದಿಕೊಳ್ಳುತ್ತ ಹೋದೆ.ನನ್ನನ್ನು ಅಂತರ್ ಶಾಲಾ ಪ್ರಬಂಧ ಸ್ಪರ್ಧೆಗಳಿಗೆ ಕಳಿಸತೊಡಗಿದರು. ಪ್ರಖ್ಯಾತ ಲೇಖಕರೊಬ್ಬರ ಮಗಳೊಬ್ಬಳು ನನಗೆ ಯಾವಾಗಲೂ ಎದುರಾಳಿ. ಅಪ್ಪನ ಕಡೆಯಿಂದ 
ಏನೆಲ್ಲ ಬರೆಸಿಕೊಂಡು ಕಂಠಪಾಠ ಮಾಡಿಕೊಂಡು ಬಂದಾಳೆಂದು ನನಗೆ ದಿಗಿಲಾಗುತ್ತಿತ್ತು. ಆದರೆ ಅನೇಕ ಕಡೆ ಬಹುಮಾನಗಳು ಬಂದವು.ಬರೆಯುವದು ಕೂಡ ಹ್ಯಾಗೆ ಕಿಕ್ ಕೊಡಬಲ್ಲದು ಎಂಬುದು ನಿಧಾನವಾಗಿ ಅರ್ಥವಾಗತೊಡಗಿತು.

ಎಷ್ಟು ಕಾಳಿತ್ತೋ,ಜೊಳ್ಳಿತ್ತೋ-ಆದರೆ ಒಂದಂತೂ ನಿಜ: ಆವತ್ತಿನಿಂದ ಇವತ್ತಿನವರೆಗೂ ನನ್ನೆಲ್ಲ ಬರಹಗಳ ಬಗ್ಗೆ 
ನನಗೆ ಪೂರ್ಣ ಪ್ರಮಾಣದ ಸಮಾಧಾನವಿಲ್ಲ. ಇದೊಂದು ವಿಷಯದಲ್ಲಿ ಮಾತ್ರ ನನ್ನದು ಸದಾ ಅತೃಪ್ತ ಆತ್ಮ! 
ಪತ್ರಿಕೆಗಳಿಗೆ ಬರೆದ ಲೇಖನಗಳಾಗಿರಬಹುದು ಅಥವಾ ನನ್ನದೇ ಬ್ಲಾಗ್ ನಲ್ಲಿ ಪ್ರಕಟ ಮಾಡಿದ 
ಬರಹಗಳಾಗಿರಬಹುದು,air ಮಾಡುವ ಕೊನೆಯ ಕ್ಷಣದವರೆಗೂ "ಎಲ್ಲ ಸರಿಯಿದೆ" ಅಂತ ಅನಿಸಿರುವ ಎಲ್ಲ 
ಬರಹಗಳೂ ನಂತರದ ದಿನಗಳಲ್ಲಿ ನನಗೇ ಸಪ್ಪೆ ಅನಿಸಿವೆ. ಎಲ್ಲೋ ಒಂದು ಕಡೆ ಬೇಡವಾಗಿದ್ದ ತಪ್ಪು ಪದ 
ನುಸುಳಿಕೊಂಡು ಆಯಾ ವಾಕ್ಯಕ್ಕೆ, ಅದರ ಭಾವಕ್ಕೆ ಸಲ್ಲಬೇಕಾಗಿದ್ದ ನ್ಯಾಯ ಒದಗಿಸಲಿಲ್ಲವೇನೋ ಅಂತ ಒದ್ದಾಡುವಂತಾಗಿದೆ. ಅಲ್ಲಿಗೆ-ಪಿಸುಮಾತಿನಲ್ಲಿ ಹೇಳುತ್ತಲೇ ಎಲ್ಲೋ ಒಂದು ಕಡೆ pause ಬಯಸಿದ್ದ 
ಬಿಂಬವೊಂದು blur ಆಗಿ, ಓದುಗರಿಗೆ ಸಿಗಬೇಕಿದ್ದ ನವಿಲುಗರಿಯ ಸ್ಪರ್ಶ ತಪ್ಪಿ ಹೋಗಿದೆ.
ಇದು ಬಹುತೇಕ ಎಲ್ಲ ಬರಹಗಾರರ ಸಮಸ್ಯೆ.

ಇದೇ ಕಾರಣಕ್ಕೆ ಒಮ್ಮೊಮ್ಮೆ ಬರವಣಿಗೆ ಅನ್ನುವದು ಅಷ್ಟು ಸುಲಭವಲ್ಲ ಅಂತ ಅನಿಸಿದೆ. ಹಾಗಂತ ಅದು ಮಹಾಕಷ್ಟದ ಕೆಲಸವಲ್ಲ ಅಂತಲೂ ಹೇಳಬಲ್ಲೆ. ಹಾಗಾದರೆ ಪರಿಹಾರವೆಲ್ಲಿದೆ? ಅಂತ ಹುಡುಕಾಟ ನಡೆಸಿದಾಗ ನನಗೆ 
ಗೋಚರಿಸಿದ್ದು: ಒಬ್ಬ ಒಳ್ಳೆಯ ಓದುಗನಾಗದೇ ಒಬ್ಬ ಒಳ್ಳೆಯ ಬರಹಗಾರನಾಗಲು ಸಾಧ್ಯವೇ ಇಲ್ಲ!
ನಿಜ: ಆದರೆ ಹಾಗೆ ಓದುವಾಗ ಇಂಥದ್ದನ್ನೇ ಓದಬೇಕು,ಇಂಥವರು ಬರೆದಿದ್ದನ್ನೇ ಓದಬೇಕು,ಹಳೆಗನ್ನಡ-ನಡುಗನ್ನಡ ಓದಬೇಕು,ಕವಿತೆ,ಎಡಪಂಥೀಯ,ಬಲಪಂಥೀಯ-ಅಂತೆಲ್ಲ ನಮಗೆ ನಾವೇ ಲಕ್ಷ್ಮಣರೇಖೆ ಎಳೆದುಕೊಳ್ಳುವಂತಿಲ್ಲ. ಜನಪ್ರೀಯವಾದದ್ದು,ಶ್ರೇಷ್ಠತೆಯುಳ್ಳದ್ದು ಅಂತೆಲ್ಲ  ತಲೆಕೆಡಿಸಿಕೊಳ್ಳುವಂತಿಲ್ಲ. ಒಟ್ಟಿನಲ್ಲಿ ಓದಿ.ಕೈಗೆ ಸಿಕ್ಕಿದ್ದನ್ನೆಲ್ಲ ಓದಿ: ರನ್ನ,ಪಂಪ,ಪುರಾಣ,ಜಾಹೀರಾತು,ವಾತ್ಸಾಯನ,ಸರ್ವಜ್ಞ,ಪುರಂದರ,ಪತ್ತೇದಾರಿ,ಸಾಮಾಜಿಕ,ಸಾಂಸಾರಿಕ,
ವೈಚಾರಿಕ,ಪ್ರವಾಸ ಕಥನ,ಪ್ರವಾದಿ ಕಥನ- yes,ಎಲ್ಲವನ್ನೂ ಕಣ್ಣಾಡಿಸಿ. ಪದಬಂಧ ಕೂಡ ಬಿಡಿಸಿ.

ಒಟ್ಟಿನಲ್ಲಿ  ನೂರು ಓದಬೇಕು:ಒಂದು ಬರೀಬೇಕು!
ಹಾಗೆ ಬರೆಯುವಾಗ ಆ ನೂರು ಓದುವಿಕೆಯಲ್ಲಿನ ಭಾವ ಈ ಒಂದು ಬರೆಯುವಿಕೆಯನ್ನು influence ಮಾಡದಂತೆ ಎಚ್ಚರವಹಿಸಿ. ಅಷ್ಟಾದರೆ ಸಾಕು:ಕತೆಗಳಿಗೇನು ಧಾಡಿ ನಮ್ಮಲ್ಲಿ? ಹೇಳಿಕೊಳ್ಳಲು ಜಗತ್ತಿನ ಎಲ್ಲರ ಬಳಿಯೂ ಕತೆಗಳಿವೆ. ಕವಿತೆಗಳಿವೆ. ಕೊರತೆಯಿರುವದು,ಪದಗಳಿಗೆ ಮಾತ್ರ;ಲಯಕ್ಕೆ ಮಾತ್ರ. ಎರಡು ವಾಕ್ಯಗಳ ಮಧ್ಯೆ ಸೇತುಬಂಧ ನಿರ್ಮಿಸುವ ಕಲೆ ನಮಗೆ ಒಲಿದಿದ್ದೇ ಆದರೆ,ನಮ್ಮ ಕತೆಯನ್ನು ಈ ಜಗತ್ತಿನಲ್ಲಿ ನಮಗಿಂತ ಚೆನ್ನಾಗಿ ಇನ್ಯಾರೂ ಹೇಳಲಾರರು..

ಉತ್ಪ್ರೇಕ್ಷೆಯೇನಲ್ಲ,ಬರವಣಿಗೆ ಅನ್ನುವದು ನನ್ನ ಪಾಲಿಗೆ ಅತ್ಯಂತ ಪ್ರೀತಿಯ ಕೆಲಸ. ಖುಷಿ ಕೊಡಬಲ್ಲ ಕಾಯಕ.
ಹೀಗಾಗಿ ನನ್ನ ಬರವಣಿಗೆ ಯಾವತ್ತೂ ತನ್ನನ್ನು ತಾನು ತಿದ್ದಿಕೊಳ್ಳುವ,ಸುಧಾರಿಸುವಂಥ ಜಾಗೃತ ಮತ್ತು ವಿನಮ್ರ 
ಸ್ಥಿತಿಯಲ್ಲಿ ಇದ್ದೇ ಇರುತ್ತದೆ ಎಂದು ಮಾತ್ರ ಹೇಳಬಲ್ಲೆ. ಬಹುಶಃ ಇದಕ್ಕೆ ಏನೋ,ಜಗತ್ತಿನ ಯಾವುದೇ ಬರಹಗಳಿಗೆ 
ಹೊಸ ಪದಗಳ,ಹೊಸ ಚಿನ್ನೆಗಳ ಮತ್ತು ಹೊಸ ಭಾವಗಳ ಅಗತ್ಯತೆ ಇದ್ದೇ ಇರುತ್ತದೆ ಅಂತ ನನ್ನ ಭಾವನೆ 
ಮತ್ತು ನಂಬಿಕೆ. ಅಂತೆಯೇ,ಅವೆಲ್ಲ ಸೃಷ್ಟಿಯಾಗದ ಬರಹಗಳು ಯಾವುದೋ ಹೊಸ ಬರಹಗಾರನಿಗಾಗಿ 
ಶಬರಿಯಂತೆಯೋ, ಅಹಲ್ಯೆಯ ಶಾಪಗ್ರಸ್ಥ ಬಂಡೆಯಾಗಿಯೋ ಇನ್ನೂ ಕಾದು ಕುಳಿತೇ ಇವೆ: 
ಒಬ್ಬ ರಾಮನ ಸ್ಪರ್ಶ ಸುಖಕ್ಕಾಗಿ...
-


Saturday, April 14, 2012

ಕತೆಯಲ್ಲದ ಕತೆಯೊಂದು ಸ್ತಬ್ದಚಿತ್ರವಾಗಿದೆ..


Photo courtesy: Mr.Sharat Sunder Rajeev




ಸುಮಾರು ವರ್ಷಗಳ ಹಿಂದಿನ ಮಾತು.
ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ
ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊಂದಿಗೆ ನಾನು ರಜೆಗೆಂದು ಮನಾಲಿಗೆ 
ಹೊರಟು ನಿಂತಿದ್ದೆ.ವಿಶೇಷವೆಂದರೆ,ಬೆಂಗಳೂರು-ದೆಹಲಿಯ ಕಿಂಗ್ ಫಿಷರ್ ವಿಮಾನದ ಓಡಾಟ ಆವತ್ತೇ ಆರಂಭವಾಗಿತ್ತು.
ನಾವು ಅಂಥದೊಂದು ಪ್ರಥಮ tripನ ಪ್ರಥಮ ಅತಿಥಿಗಳಾಗಿದ್ದೆವು.ಹೀಗಾಗಿ ನಮಗೆಲ್ಲ ಕೊಂಚ ಹೆಚ್ಚೇ ಉಪಚಾರ 
ಮಾಡಿದ್ದರು ಅನ್ನುವದು ನಮ್ಮ ಭ್ರಮೆಯಾಗಿರಲಿಕ್ಕಿಲ್ಲ.ಫ್ಲೈಟು ಚೆನ್ನಾಗಿತ್ತು.ತಿಂಡಿ,ತೀರ್ಥ ಕೂಡ ಚೆನ್ನಾಗಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ತಿಂಡಿಗಾಗಿ ಎಷ್ಟು ತಲೆ ಕೆಡಿಸಿದರೂ ನಗುನಗುತ್ತಲೇ ಸರ್ವೀಸ್ ಕೊಡುತ್ತಿದ್ದ ಈ ಗಗನಸಖಿಯರ ಬಗ್ಗೆ 
ನಮಗೆಲ್ಲ ಸುಳ್ಳುಸುಳ್ಳೇ ಲವ್ವು ಬೇರೆ ಶುರುವಾಗುವ ಅಪಾಯದ ಹಂತ ಮುಟ್ಟುವದರಲ್ಲಿದ್ದೆವು.

ಆದರೆ ತೀರ ಎರಡು,ಎರಡೂವರೆ ಗಂಟೆಗಳಲ್ಲೇ ದೆಹಲಿಗೆ ತಲುಪಿ,ಮಲ್ಯನ ಬೆಲ್ಲದ ಹುಡುಗಿಯರೆಲ್ಲ ಮುಗುಳ್ನಗುತ್ತ 
ನಮ್ಮನ್ನೆಲ್ಲ  ಬೀಳ್ಕೊಡುತ್ತಿರುವಾಗ, ಹುಡುಗಿಯೊಬ್ಬಳು ಮದುವೆಯಾಗಿ ಗಂಡನ ಮನೆಗೆಂದು ಹೊರಟುನಿಂತಾಗ 
ಹ್ಯಾಗೆಲ್ಲ ಅಳುತ್ತಾಳೋ-ಅಷ್ಟೇ ದುಃಖ ನಮಗೂ ಆಗಿತ್ತು!

ಏನು ಮಾಡ್ತೀರಿ? ನಮ್ಮ ಕರ್ಮ:ಮೇಲೇರಿದವನು ಕೆಳಗೆ ಇಳಿಯಲೇಬೇಕಲ್ಲ? ಅಂದುಕೊಂಡು ದೆಹಲಿಯಿಂದ ಬಸ್ಸನ್ನೇರಿ 
ಮನಾಲಿ ಕಡೆಗೆ ಪ್ರಯಾಣಿಸುತ್ತಿದ್ದೆವು.ಹಿಮಾಯದ ಮಿನಿಯೇಚರ್ ನಂತಿದ್ದ ಆ ಪರ್ವತ ಶ್ರೇಣಿಗಳ ನಡುವೆ ಹಾದು 
ಹೋಗುತ್ತಿದ್ದಾಗ ಕೆಳಗೆಲ್ಲೋ ಪ್ರಪಾತದಲ್ಲಿ ಬಿಯಾಸ್ ನದಿ ಅಕ್ಷರಶಃ ಒಂದು thread ನಂತೆ ಗೋಚರಿಸುತ್ತಿತ್ತು.
ಅಂಥ ಹಾದಿಯಲ್ಲಿ ಅನೇಕ ಊರುಗಳು ಬಂದುಹೋದವು.ಕೆಲವೊಮ್ಮೆ ದೊಡ್ಡ ಊರುಗಳು.ಕೆಲವೊಮ್ಮೆ ನಾಲ್ಕೈದು 
ಮನೆಗಳಿದ್ದರೆ ಅದೇ ಒಂದು ಊರು.ಒಮ್ಮೊಮ್ಮೆಂತೂ ಬೆಟ್ಟದ ಮೇಲಿನ ಈ ರಸ್ತೆಗಳು ಎಷ್ಟು ಕಿರಿದಾಗಿರುತ್ತಿದ್ದವೆಂದರೆ,
ತಿರುವಿನಲ್ಲಿ ಸ್ವಲ್ಪ ಎಡವಟ್ಟಾದರೂ ಸಾಕು;ಡ್ರೈವರ್ ಸಾಹೇಬ ಎಲ್ಲಿ ರಸ್ತೆಯಂಚಿನ ಮನೆಯೊಳಗೇ ಬಸ್ಸು ನುಗ್ಗಿಸಿಬಿಟ್ಟಾನೆಂದು 
ಗಾಬರಿಯಾಗುತ್ತಿತ್ತು.

ಅಂಥ ಹತ್ತಾರು ಗಂಟೆಗಳ ಪ್ರಯಾಣದ ಬಳಿಕ ಅಂತೂ ಇಂತೂ ಮನಾಲಿ ತಲುಪಿದ್ದಾಯಿತು.ಆದರೆ ತಲೆಯಿಂದ 'ಕಿಂಗ್ ಫಿಷರ್' 
ಗುಂಗು ಇನ್ನೂ ಇಳಿದಿರಲಿಲ್ಲವಲ್ಲ? ಅದೇ ಜೋಷ್ ನಲ್ಲಿ ಲಕ್ಷುರಿ ಲಾಡ್ಜ್ ಒಂದನ್ನು ಹುಡುಕಿ ರೂಮು ಸೇರಿಕೊಂಡೆವು.
ಫ್ರೆಶ್ಶಾಗಿ ಕಾಲುಗಂಟೆಯಾಗಿತ್ತೋ ಇಲ್ಲವೋ,ಅಷ್ಟರಲ್ಲಿ ರೂಮ್ ಸರ್ವೀಸಿಗೆ ಫೋನು ಮಾಡಿ ಹುಡುಗನನ್ನು ಕರೆಸಿಕೊಂಡು 
ನೀಟಾಗಿ ಕೇಳಿದೆ:"ಏನಪ ತಮ್ಮ, ಏಸಿ ಇಲ್ಲವೋ..?"
ಅಷ್ಟೇ;ರೂಮ್ ಸರ್ವೀಸಿನ ಹುಡುಗ ಗಾಬರಿಯಿಂದ ಕಕ್ಕಾಬಿಕ್ಕಿಯಾಗಿ ನನ್ನನ್ನು ತೀರ ಯಾವುದೋ ಲೋಕದ ಪ್ರಾಣಿಯಂತೆ 
ಮೇಲೆ ಕೆಳಗೆ ನೋಡತೊಡಗಿದ್ದ!

Style of living ಅನ್ನುವ ಸೂಕ್ಷ್ಮ ಎಂಥದ್ದು ನೋಡಿ: ಬದುಕಿನಲ್ಲಿ ನೂರು ರೂಪಾಯಿಗಳ ಕಟ್ಟೂ ಕೂಡ  ಸರಿಯಾಗಿ ನೋಡಿರದ 
ಕೆಳಮಧ್ಯಮ ವರ್ಗದ ಹುಡುಗನಿಗೆ ದಿಢೀರಂತ ಕೋಟಿ ರೂಪಾಯಿಗಳ ಲಾಟರಿ ಹೊಡೆಯಿತೆಂದು ಠಾಕುಠೀಕಾಗಿ ಡ್ರೆಸ್ಸು 
ಮಾಡಿಕೊಂಡು ಸೀದಾ ಫೈವ್ ಸ್ಟಾರ್ ಹೋಟೆಲ್ಲಿಗೆ ನುಗ್ಗಿದರೆ ಏನು ಬಂತು? ಅಲ್ಲಿ ಆತ ಊಟದ ಮೆನುವನ್ನು ಹ್ಯಾಗೆ ಆರ್ಡರ್ 
ಮಾಡುತ್ತಾನೆ ಮತ್ತು ಯಾವ order ನಲ್ಲಿ ಆರ್ಡರ್ ಮಾಡುತ್ತಾನೆ ಎಂಬುದನ್ನು ಗಮನಿಸುತ್ತಿದ್ದಂತೆಯೇ ಅಲ್ಲಿನ experienced 
ಮಾಣಿ ಥಟ್ಟಂತ ನಿರ್ಧರಿಸಿಬಿಡುತ್ತಾನೆ:ಐಲಾ! ಹುಡುಗನಿಗೆ ರಾತ್ರೋರಾತ್ರಿ ಲಾಟರಿ ಹೊಡೆದುಬಿಟ್ಟಿದೆ..

ಮನಾಲಿಯಲ್ಲಿ ನನ್ನ ಪರಿಸ್ಥಿತಿಯೂ ಕೂಡ ಇದಕ್ಕಿಂತ ತೀರ ಭಿನ್ನವಾಗೇನೂ ಇರಲಿಲ್ಲ.
ಯಾಕೆಂದರೆ,ಮನಾಲಿಯಲ್ಲಿ AC ಯನ್ನು ಕೇಳುವ ಮುಠ್ಠಾಳ ಕೆಲಸವನ್ನು ಯಾವನೂ ಮಾಡಲಾರ!
ಸರಿ,ಅಷ್ಟಾಯಿತಲ್ಲ?ಮೂರ್ನಾಲ್ಕು ದಿನ ಅಲ್ಲೆಲ್ಲ ಸಿಕ್ಕಂತೆ ತಿರುಗಾಡಿದ್ದಾಯಿತು.ಹಾಗೆ ಅಲ್ಲಿದ್ದ ಸಮಯದಲ್ಲಿ ಮೂರನೇ ದಿನದ ರಾತ್ರಿ
ಹೋಟೇಲಿಗೆ ಹಿಂದಿರುಗಿದಾಗ ರೂಮಿನಲ್ಲೇ ಬಿಟ್ಟುಹೋಗಿದ್ದ ನನ್ನ ಮೊಬೈಲಿಗೆ ಶ್ರೀಯುತರ ಕರೆಯೊಂದು ಬಂದಿತ್ತು.ಆದರೆ 
attend ಮಾಡುವವರು ದಿಕ್ಕಿಲ್ಲದೇ  ಶ್ರೀಯುತರ ಫೋನ್ ಕಾಲು ಮಿಸ್ಡ್ ಕಾಲ್ ಲಿಸ್ಟಿನಲ್ಲಿ ತಣ್ಣಗೆ ಕುಳಿತಿತ್ತು.ಅದನ್ನು 
ನೋಡಿಯಾದ ಮೇಲೆ ನಾನೇ ಅವರಿಗೆ ವಾಪಸ್ಸು ಕರೆ ಮಾಡೋಣ ಅಂತ ಅಂದುಕೊಂಡೆನಾದರೂ ಆವತ್ತಿನ ರೋಮಿಂಗ್ 
ದರಕ್ಕೆ ಭಯಬಿದ್ದು ಅವರಿಗೆ ಕರೆ ಮಾಡಲಿಲ್ಲ.ಇಷ್ಟಕ್ಕೂ ಶ್ರೀಯುತರು ನನಗೆ ತುಂಬ ಪರಿಚಿತರು ಮತ್ತು ಅಂಥ ಏನಾದರೂ 
ತುರ್ತು ಇದ್ದಿದ್ದರೆ ಮತ್ತೇ ಕರೆ ಮಾಡುತ್ತಿದ್ದರು ಅಂತ ನನ್ನಷ್ಟಕ್ಕೆ ನಾನೇ ಸುಳ್ಳು ಸಮಾಧಾನ ಪಟ್ಟುಕೊಂಡೆ.
ಎರಡು ದಿನ ಬಿಟ್ಟು ಬೆಂಗಳೂರಿಗೆ ಮರಳಿದಾಗ ದಿಗ್ಭ್ರಮೆಯಾಗಿತ್ತು.  

ಶ್ರೀಯುತರು ಯಾವುದೋ ದೇವಸ್ಥಾನಕ್ಕೆಂದು ಕುಟುಂಬ ಸಮೇತರಾಗಿ ಹೊರಟಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿತ್ತು. 
ಅವರ ಪತ್ನಿ ಮತ್ತು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.ಆದರೆ ಶ್ರೀಯುತರನ್ನು ಮಾತ್ರ 
ಜವರಾಯ ಬಂಧಿಸಿಬಿಟ್ಟಿದ್ದ.ಅಂಥ ಸಮಯದಲ್ಲೇ ಶ್ರೀಯುತರ ಪತ್ನಿ,ತಮ್ಮ ಪತಿಯ ಮೊಬೈಲಿನಲ್ಲಿ ನನ್ನ ನಂಬರ್ ಹುಡುಕಿ
ಸಹಾಯಕ್ಕೆಂದು ನನ್ನ ಮೊಬೈಲಿಗೆ ಫೋನಾಯಿಸಿದ್ದರಂತೆ.ನಾನು ಸಿಕ್ಕಿರಲಿಲ್ಲ.ಇಲ್ಲಿಗೆ ಬಂದಮೇಲೆ ಯಾವ ಸಬೂಬೂ 
ಹೇಳುವಂತಿರಲಿಲ್ಲ.ಸೀದಾ ಅವರ ಮನೆಗೆ ಹೋಗಿ ಶ್ರೀಯುತರ ಹೆಂಡತಿ ಮತ್ತು ಮಕ್ಕಳ ಜೊತೆ ಕೆಲಹೊತ್ತು ಮೌನವಾಗಿ
ಕಳೆದು ಮನೆಗೆ ವಾಪಸ್ಸಾದೆ.

ದಿನಗಳು ಉರುಳತೊಡಗಿದ್ದವು.ಯಥಾಪ್ರಕಾರ ಕೆಲಸ,ಊಟ,ನಿದ್ದೆ. ಸುಮಾರು ಇಪ್ಪತ್ತು ದಿನಗಳಾಗಿರಬಹುದು.
ಆವತ್ತೊಂದು ದಿನ ಮಧ್ಯಾನ್ಹ ನಾನು ಕೆಲಸ ಮಾಡುವ ಆಫೀಸಿಗೆ ನನ್ನನ್ನು  ಹುಡುಕಿಕೊಂಡು ಆಕೆ ಬಂದಿದ್ದರು;
ಶ್ರೀಯುತರ ಎರಡನೇ ಪತ್ನಿ!

ಹಾಗೆ ನೋಡಿದರೆ,ನನಗಿಂತ ಎರಡು ಪಟ್ಟು ವಯಸ್ಸಿನ ಶ್ರೀಯುತರು ತುಂಬ ಸಜ್ಜನ ವ್ಯಕ್ತಿ. ಹುಡುಗರೊಂದಿಗೆ ಹುಡುಗರಾಗಿ,
ಹಿರಿಯರೊಂದಿಗೆ ಹಿರಿಯರಾಗಿ ಲವಲವಿಕೆಯ ಜೀವನ ಸವೆಸಿದವರು.ಅಂಥ ವ್ಯಕ್ತಿಗೆ ಬದುಕಿನ ಅದ್ಯಾವ ತಿರುವಿನಲ್ಲಿ 
ಎರಡೆರಡು ಮದುವೆಯಾಗುವ ಸಂದರ್ಭ ಅದು ಹ್ಯಾಗೆ ಬಂತೋ ಗೊತ್ತಿಲ್ಲ.ಒಟ್ಟಿನಲ್ಲಿ ಆಗಿಬಿಟ್ಟಿದ್ದರು.ವಿಚಿತ್ರವೆಂದರೆ,
ಈ ಇಬ್ಬರೂ ಸಂಭಾವಿತ ಪತ್ನಿಯರು ಇಷ್ಟು ವರ್ಷಗಳ ಅವಧಿಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗುವ,ಪರಿಚಿತರಾಗುವ
ಸಂದರ್ಭ ಬಂದಿರಲೇ ಇಲ್ಲ;ಇವರೂ ಸೃಷ್ಟಿಸಿಕೊಂಡಿರಲಿಲ್ಲ.ಶ್ರೀಯುತರು ತಿಂಗಳಲ್ಲಿ ಕೆಲದಿನ ಮೊದಲ ಹೆಂಡತಿ ಜೊತೆಗೂ,
ಕೆಲದಿನ ಎರಡನೇ ಪತ್ನಿ ಜೊತೆಗೂ ಇದ್ದು ಜೀವನ ಸಾಗಿಸುತ್ತಿದ್ದರು.ಆಮೇಲೆ ಇಬ್ಬರು ಪತ್ನಿಯರಿಗೂ ಈ ವಿಷಯ ಗೊತ್ತಾದರೂ
ಪರಸ್ಪರ ಭೇಟಿ ಮಾಡಲಿಲ್ಲ ಮತ್ತು ಯಾರಿಗೂ ಹೇಳಿಕೊಳ್ಳುವ ಹಾಗಿರಲಿಲ್ಲ. But they are happy..

ಇವೆಲ್ಲ ವಿಷಯಗಳು ನನಗೆ ಗೊತ್ತಿದ್ದವು.ಆದರೆ ಇವೆಲ್ಲ ನನಗೆ ಗೊತ್ತಿವೆ ಅನ್ನುವ ವಿಷಯ ಮಾತ್ರ ಆ ಇಬ್ಬರು ಪತ್ನಿಯರಿಗೆ
ಗೊತ್ತಿರಲಿಲ್ಲ.ಸುಮ್ಮನೇ ಯಾವುದೋ ಸಂದರ್ಭದಲ್ಲಿ  ಶ್ರೀಯುತರು ತಮ್ಮ ಎರಡನೇ ಪತ್ನಿಯನ್ನು ನನಗೆ ಪರಿಚಯ 
ಮಾಡಿಸಿ ತಮ್ಮ ಎಂಥದೋ ಸಂಬಂಧಿಯೆಂದು ಪರಿಚಯಿಸಿದ್ದರು.ಅಂಥ ಶ್ರೀಯುತರ ಎರಡನೇ ಪತ್ನಿ ದಿಢೀರಂತ ನನ್ನ 
ಎದುರಿಗೇ ಬಂದು ಕುಳಿತಿದ್ದಾರೆ ಮತ್ತು ಕೇಳುತಿದ್ದಾರೆ:
"ನೋಡಿ,ಮೂರು ವಾರ ಆಯಿತು.ಯಾಕೋ ಶ್ರೀಯುತರು ನನ್ನ ಫೋನೇ ಎತ್ತುತ್ತಿಲ್ಲ.ಬ್ಯುಸಿ ಇರಬಹುದೇನೋ ಅಂತ 
ಅಂದುಕೊಂಡೆ.ಆದರೆ ಅವರಾದರೂ ಸ್ವಲ್ಪ ಬಿಡುವು ಮಾಡಿಕೊಂಡು ಫೋನ್ ಆದರೂ ಮಾಡಬೇಕಲ್ವ? ಚಿಂತೆ ಆಗ್ತಿದೆ.
ನಿಮಗೇನಾದರೂ ಅವರು ಸಿಕ್ಕರೆ ಕೊಂಚ ಮಾತನಾಡಲು ಹೇಳ್ತೀರ..?"

ಹಾಗಂತ ಆಕೆ ತನ್ನ ಕಳವಳವನ್ನು ನಿಯಂತ್ರಿಸುತ್ತ,ಅಕ್ಷರಶಃ ಅಂಗಲಾಚುವಂತೆ ಕೇಳುತ್ತಿದ್ದರೆ,ನನಗರಿವಿಲ್ಲದೇ ನಾನು 
ಸಣ್ಣಗೆ ನಡುಗತೊಡಗಿದ್ದೆ.ಏನಂತ ಹೇಳುವದು?ಹ್ಯಾಗೆ ಹೇಳುವದು? 
ಹಾಗೆ ನಾನು ಅದೆಷ್ಟು ಹೊತ್ತು blank ಆಗಿ ಕುಳಿತಿದ್ದೆನೋ,ಅದ್ಯಾವಾಗ ಸಾವರಿಸಿಕೊಂಡು ಅವರಿಗೆ ಏನಂತ ಹೇಳಿ 
ಕಳಿಸಿದೆನೋ ನನಗೆ ಮರೆತುಹೋಗಿದೆ.ಆದರೆ ನಾನು ಹೇಳುತ್ತಿದ್ದುದನ್ನೆಲ್ಲ ಆಕೆ ಸಮಾಧಾನದಿಂದ ಕೇಳಿಸಿಕೊಂಡು,
ತಾನು ಶ್ರೀಯುತರ ಪತ್ನಿ ಎಂಬುದನ್ನು ತೋರಿಸಿಕೊಳ್ಳುವಂಥ ಯಾವ Clue ಕೂಡ ಕೊಡದೇ ಅತ್ಯಂತ ಗಂಭೀರವಾಗಿ
ಎದ್ದು ಹೋದ ಚಿತ್ರ ಮಾತ್ರ ಮಿದುಳಮನೆಯಲ್ಲಿ ಸ್ಥಾಪಿತವಾಗಿ ಹೋಗಿದೆ.ಆವತ್ತು ಆಕೆ ಅಲ್ಲಿಂದ ಎದ್ದು ಹೋಗುತ್ತಿರುವಾಗ
ಆಕೆ ಇಡುತ್ತಿದ್ದ ಹೆಜ್ಜೆ ಮತ್ತು ತೆಗೆದುಕೊಳ್ಳುತ್ತಿದ್ದ ಉಸಿರು-ಇವೆರಡರಲ್ಲಿ ಯಾವುದು ಹೆಚ್ಚು ಭಾರವಾಗಿತ್ತು ಎಂಬುದು 
ನನ್ನಂಥವನಿಗೆ ಲೆಕ್ಕಕ್ಕೇ ಸಿಗದ ಶಬ್ದವಿಲ್ಲದ ಒಂದು ಸ್ತಬ್ದಚಿತ್ರವಾಗಿ ಇವತ್ತಿಗೂ ಉಳಿದುಬಿಟ್ಟಿದೆ...
---

ಕನಸು-ಕನವರಿಕೆ 1st B'day : ಕೋಟಿ ಲಿಂಗಗಳಲ್ಲಿ ಒಂದು ಬೋಡಿಲಿಂಗ! 

ಫೋಟೋ: ಅಂತರ್ಜಾಲ 

ಪ್ರೀಯರೇ,
'ಕನಸು-ಕನವರಿಕೆ'ಗೆ ಇವತ್ತು (ಎಪ್ರಿಲ್ 14) ಒಂದು ವರ್ಷ.ಒಂದು ಕಡೆ ಇದು ಖುಷಿಯ ಸಂಗತಿಯಾದರೆ ಮತ್ತೊಂದೆಡೆ ಇಷ್ಟಕ್ಕೆಲ್ಲ ಅನೌನ್ಸ್ ಮಾಡಬೇಕಾ ಅನ್ನುವದು ಮುಜುಗರದ ಸಂಗತಿ.
"ಈ ಒಂದು ವರ್ಷ ಹ್ಯಾಗೆ ಕಳೆಯಿತೋ ಗೊತ್ತಾಗಲಿಲ್ಲ.." ಅಂತೆಲ್ಲ ಹೇಳಲಾರೆ.ಒಂದು ವರ್ಷ ಕಳೆಯಲು ಎಷ್ಟು ಸಮಯ ಬೇಕೋ,ಅಷ್ಟೇ ಸಮಯ ಕಳೆದುಹೋಗಿದೆ.ಇನ್ನೂ ಪ್ರಾಮಾಣಿಕವಾಗಿ ಹೇಳುವದಾದರೆ,ಒಂದು ವರ್ಷದಲ್ಲಿ ಏಳು ಕತೆ,ಒಂಭತ್ತು ಕವಿತೆ ಮತ್ತು ಆರು ಪ್ರಬಂಧ ಅಂದರೆ ತುಂಬ impressive result ಅಲ್ಲ.ಹಾಗಾಗಿ ನನ್ನಷ್ಟಕ್ಕೆ ನಾನೇ ನನ್ನ ಬ್ಲಾಗಿಗೆ average rating ಕೊಟ್ಟುಕೊಂಡಿದ್ದೇನೆ.ಆದರೆ ಒಂದಂತೂ ನಿಜ:ಈ ಸಮಯದಲ್ಲಿ ಬರೆದ ಎಲ್ಲ ಬರಹಗಳು ಮತ್ತು ನಿಮ್ಮ ಪ್ರತಿಕ್ರಿಯೆಗಳು ವೈಯಕ್ತಿಕವಾಗಿ ನನಗೆ ಸಾಕಷ್ಟು ಖುಷಿಯನ್ನು ನೀಡಿವೆ.ಎಲ್ಲೋ ಹಾಳೆಯ ಮೂಲೆಯಲ್ಲಿ ಕಳೆದುಹೋಗಬಹುದಾಗಿದ್ದ ಕನಸಿಗೆ ಫ್ರೇಮು ಸಿಕ್ಕಿದೆ.
ಆ ಮೂಲಕ ಕೋಟಿ ಲಿಂಗಗಳಲ್ಲಿ  ಬೋಡಿಲಿಂಗವೂ ಮುಗುಳ್ನಕ್ಕಿದೆ! 
ಬೇರೆ ಏನು ಹೇಳಲಿ? ಬರವಣಿಗೆಯ ಖುಷಿ ಎಲ್ಲಕ್ಕೂ ಮೀರಿದ್ದು.ಪ್ರತೀ ಸಲ ಬ್ಲಾಗಿಗೆ air ಮಾಡುವಾಗ 'ಸರಿ ಇದೆ' ಅನಿಸುವ ಎಲ್ಲ ಬರಹಗಳೂ ನಂತರದ ದಿನಗಳಲ್ಲಿ ನನಗೇ ಸಪ್ಪೆ ಅನಿಸಿವೆ.ಹೀಗಾಗಿ ಪ್ರತಿಸಲ ಇನ್ನಷ್ಟು ಚೆಂದ ಮಾಡಿ ಬರೆಯುವ ಉತ್ಸಾಹ ಜಾರಿಯಿದ್ದೇ ಇರುತ್ತದೆ ಅಂತ ಹೇಳಬಲ್ಲೆ.ನಿಜ,ಬೆಂಗಳೂರು-ಭಾರತವೊಂದೇ ಅಲ್ಲ,ಜಗತ್ತಿನ ಅನೇಕ ದೇಶಗಳಿಂದ ಸ್ನೇಹಿತರು ಸಿಕ್ಕಿದ್ದಾರೆ.ಪ್ರೀತಿಯಿಂದ ಎಲ್ಲರಿಗೆಂದು ಮಾಡಿದ ಮಾಡಿದ ಅಡುಗೆಯನ್ನು ತಾನೊಬ್ಬಳೇ ಕುಳಿತು ತಿನ್ನುತ್ತಿರುವ ಹೆಣ್ಣುಮಗಳ ಪರಿಸ್ಥಿತಿ ಮತ್ತು ಓದುಗರಿಲ್ಲದ ಬ್ಲಾಗು-ಎರಡೂ ಸಮಾನ ದುಃಖಗಳೇ!
I am blessed.ಬ್ಲಾಗಿನಲ್ಲಿರುವ ಎಲ್ಲ ಬರಹಗಳ ಬಗ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ,ಇಂಥದೊಂದು ಬ್ಲಾಗ್ ಬಗ್ಗೆ ಇನ್ನೊಬ್ಬರಿಗೆ ವಿವರ ಹಂಚಿದ,ಹರಡಿದ ಮತ್ತು ಏನನ್ನೂ ಹೇಳದೇ ತಮ್ಮ ಪಾಡಿಗೆ ತಾವು ಮನದಲ್ಲೇ ಓದಿ ಖುಷಿಪಟ್ಟ ಎಲ್ಲ ಓದುಗ ಮನಸುಗಳಿಗೆ ನನ್ನ ಅನಂತ ಪ್ರೀತಿ ಮತ್ತು ಧನ್ಯವಾದಗಳು ಸಲ್ಲುತ್ತವೆ..
-RJ




Thursday, February 16, 2012

ನಂಬಿಕೆಯಿದೆ!



                                          Photo:Internet



ಕೊನೆಯಲ್ಲಿ ಅವರಿಬ್ಬರೂ
ಸುಖವಾಗಿದ್ದರು 
ಎನ್ನುವ ಕತೆಗಳಲ್ಲಿ 
ನನಗೆ ನಂಬಿಕೆ 
ಯಾವತ್ತೂ ಹುಟ್ಟುವದಿಲ್ಲ.
-
ಖಂಡವಿದಿಕೋ,ಮಾಂಸವಿದಿಕೋ
ಗುಂಡಿಗೆಯ ಬಿಸಿರಕ್ತವಿದಿಕೋ
ಎನ್ನುವ ಹುಡುಗಿಗೆ,
ಪುಣ್ಯಕೋಟಿಯ ಹಾಡು 
ಕೇಳುತ್ತಿರುವ ಹುಡುಗ 
ಎಂದೂ ಅರ್ಥವಾಗುವದಿಲ್ಲ.
ಅಡಚಣೆಗಾಗಿ 
ದಯವಿಟ್ಟು ಕ್ಷಮಿಸಿ:
ಉತ್ತರಾಯಣವರೆಗೂ
ಸ್ಥಾನಪಲ್ಲಟವಿಲ್ಲ.
ಧರಣಿಮಂಡಲ ಮಧ್ಯದೊಳಗೆ
ಸದ್ಯಕ್ಕೆ ಉತ್ಖನನವಿಲ್ಲ!
-
ಕಲ್ಲು ಕರಗುವ ಸಮಯದಲ್ಲಿ
ಈಗ ಅವಳು ಶುಭನುಡಿಯುವ 
ಶಕುನದ ಹಕ್ಕಿ!
ಏನೇ ಬಂಗಾರದ  
ಪಂಜರ ಕಟ್ಟಿದರೂ,
ಎಷ್ಟೇ ಬೆಳ್ಳಿಬಟ್ಟಲಲ್ಲಿ  
ಹಾಲಿಟ್ಟರೂ ಅಷ್ಟೇ;
ಹಕ್ಕಿ ತತ್ತರಿಸಿ 
ತತ್ತಿಯಿಡುತ್ತದೆ.
ನಿಜವಿರದ ಮಜವಿರದ  
ಸಂಭ್ರಮ ಕೂಡ 
ವಜನಾದ ಸಜೆಯಾಗುತ್ತದೆ.
ಯಾರೋ ಹೇಳಿದರು-
ಅನುಭವ ಮಾನವ ಕಲ್ಪಿತ;
ಅನುಭಾವ ದೇವ ನಿರ್ಮಿತ.
ಹೀಗಾಗಿ-
ಕೊನೆಗೊಮ್ಮೆ ಅವರಿಬ್ಬರೂ 
ಸುಖವಾಗಿದ್ದರು 
ಎಂದು ನಂಬುವದರಲ್ಲೇ 
ನಮಗೆ ನಂಬಿಕೆಯಿದೆ.
ಹಾಳಾದ್ದು,
ನಂಬಿಕೆ ಎನ್ನುವದು 
ಯಾವತ್ತೂ ಸಾಯುವದೇ ಇಲ್ಲ!
-

Thursday, January 26, 2012

ನಿಜ ಸ್ವಾತಂತ್ರ್ಯದ ಅಸಲಿ ಮಜ ಎಲ್ಲಿದೆ?

                                                        ಚಿತ್ರ:ವಿಕಿಪೀಡಿಯ


ವತ್ತಿನ ಬೆಳಗು ತಥಾಗಥಿತ ಬೆಳಗಿನಂತಿಲ್ಲ . 
ದೂರದ ದೇವಸ್ಥಾನದಲ್ಲಿ ಸುಬ್ಬಲಕ್ಷ್ಮಿಯ "ಕೌಸಲ್ಯ ಸುಪ್ರಜಾ.." ಇವತ್ಯಾಕೋ ಪುಟ್ಟನಿಗೆ ಸುಮಧುರವಾಗಿ ಕೇಳಿಸುತ್ತಿದೆ.ಎಂದಿನ
ನಿದ್ರಾಭಂಗದ ಅವಸ್ಥೆಯಿಂದ ಎದ್ದ ಪುಟ್ಟನಿಗೆ,ಅಮ್ಮ ಅಂಗಳದಲ್ಲಿ ಥಳಿ ಹೊಡೆದು ರಂಗೋಲಿ ಇಡುತ್ತಿರುವ ದೃಶ್ಯ ಕಂಡುಬಂದಿದೆ.
ಮುಖ ತೊಳೆದವನೇ ಚವ್ಹಾಣ್ ಗಟಾರದಲ್ಲಿ ಸಂಡಾಸಕ್ಕೆಂದು ಕೂತಿದ್ದಾನೆ.(ಈ ಗಟಾರದ ಅಂಚಿನಲ್ಲಿ ಚವ್ಹಾಣ್ ಎಂಬುವವರ 
ದೊಡ್ಡ ಮನೆ ಇರುವದರಿಂದ ಮೋರಿಗೆ 'ಚವ್ಹಾಣ್ ಗಟಾರ'ವೆಂದೇ ಹೆಸರು ಬಿದ್ದಿದೆ.) ಕೈಯಲ್ಲಿ ಎರಡು ಬೆಣಚು ಕಲ್ಲುಗಳನ್ನು 
ಹಿಡಿದು ಒಂದಕ್ಕೊಂದು ಕುಟ್ಟುತ್ತ ಕಿಡಿಯೆಬ್ಬಿಸುವ ಪ್ರಯತ್ನದಲ್ಲಿರುವ ಪುಟ್ಟನಿಗೆ,ಬಹಿರ್ದಸೆಗೆ ಕುಳಿತಾಗ ಏನಾದರೊಂದು 
ಕೆಲಸ ಮಾಡುತ್ತಿದ್ದರೆ ಬಂದ ಕೆಲಸ ಬೇಗ ಆಗುತ್ತದೆ ಅಂತ ಯಾರು ಇವನ ತಲೆಯಲ್ಲಿ ತುಂಬಿರುವರೋ ಗೊತ್ತಿಲ್ಲ! 
ನಿಮಿಷಾರ್ಧದಲ್ಲಿ ಕೆಲಸ ಮುಗಿಸಿರುವ ಪುಟ್ಟ ಚೆಡ್ಡಿ ಬಿಟ್ಟುಕೊಂಡೇ ಮನೆಯ ಅಂಗಳಕ್ಕೆ ಬಂದು ಎಂದಿನ ಕೂಗು ಹಾಕಿದ್ದಾನೆ:
"ಕುಂಡೆಗೆ ನೀರೂ..."
***
ಮನೆಯೊಳಗೆ ಎಂದಿನ ಚಟುವಟಿಕೆಗಳು ಭರದಿಂದ ಸಾಗುತ್ತಲಿವೆ.ಕುದಿಯುವ ಬಿಸಿನೀರು ಹಿತ್ತಾಳೆಯ ಹಂಡೆಯಲ್ಲಿ
ಕಾಯುತ್ತಲಿದೆ.ಸೀಗೆಕಾಯಿ ಕೈಯಲ್ಲಿ ಹಿಡಿದ ಅಕ್ಕ ಪುಟ್ಟನಿಗಾಗಿ ಕಾಯುತ್ತಿದ್ದಾಳೆ.ಈತ ಲಗುಬಗೆಯಿಂದ 
ಸ್ನಾನಕ್ಕಿಳಿದಿದ್ದಾನೆ.ಯಾವತ್ತಿನಂತೆ ಅಮ್ಮ ಬಿಸಿನೀರನ್ನು ನಿಯಂತ್ರಣಕ್ಕೆ ತರುವ ಕೆಲಸಕ್ಕೆ ಕೈಹಾಕುತ್ತಿದ್ದಂತೆಯೇ
ಪುಟ್ಟ,"ಇಲ್ಲ,ಇಲ್ಲ..ನಾನೇ ಮಾಡ್ತೀನಿ.." ಅಂತ ಎಲ್ಲರನ್ನೂ ಬಚ್ಚಲು ಮನೆಯಿಂದ ಆಚೆ ಕಳಿಸಿದ್ದಾನೆ.ಅಬ್ಬ,ಒಂದು ಕೆಲಸ
ತಪ್ಪಿತು ಅಂತ ಅಕ್ಕ ಖುಷಿಗೊಂಡಿದ್ದರೆ,ಅಮ್ಮನಿಗೆ ಏನೋ ಕಳೆದುಕೊಳ್ಳುತ್ತಿರುವ ಭಾವ ತುಂಬಿ ಬಂದಂತಿದೆ.
ಒಳಗಿನಿಂದ  ಚಿಲಕ ಹಾಕಿಕೊಳ್ಳಬೇಡ ಎಂದು ಅವಲತ್ತುಕೊಂಡ ಇವರಿಬ್ಬರೂ ಅಲ್ಲಿಂದ ಹೊರನಡೆದಿದ್ದಾರೆ.ಬಚ್ಚಲು
ಮನೆಯ  ತುಂಬೆಲ್ಲ ನೀರಿನ ಉಗಿ ತುಂಬಿಕೊಂಡಂತಾದಾಗ ಸ್ನಾನ ಮುಗಿಸಿದ ಪುಟ್ಟ ಬಾಗಿಲು ತೆಗೆದಿದ್ದಾನೆ.ಅವನೀಗ
ಟಾವೆಲ್ ಸುತ್ತಿಕೊಂಡೇ ದೇವರ ಪಟಗಳಿಗೆ ನಮಸ್ಕರಿಸಬೇಕಿದೆ.
"ಚಿದಂಬರ ನಮಸ್ತೇಸ್ತು ಚಿಂತಿತಾರ್ಥ ಪ್ರದಾಯಿನೇ.."

ಹಾಗಂತ ಇಷ್ಟದೇವತೆಗಳಿಗೆ ಮಂತ್ರಿಸುತ್ತ (?) ಒಂದು ಕೈಯಲ್ಲಿ ಮಂಗಳಾರತಿ,ಇನ್ನೊಂದು ಕೈಯಲ್ಲಿ ಪುಟ್ಟದಾದ ಗಂಟೆ
ಹಿಡಿದುಕೊಂಡಿರುವ ಪುಟ್ಟನಿಗೆ ಇಷ್ಟು ದಿನವಾದರೂ ಆರತಿಯ ಪ್ರಕ್ರಿಯೆ ಒಗ್ಗಿ ಬಂದಂತಿಲ್ಲ.ಇಲ್ಲಿ ಆರತಿ ಚಕ್ರಾಕಾರವಾಗಿ
ಬೆಳಗಿದರೆ,ಗಂಟೆ ಅಡ್ಡಡ್ಡ ಚಲಿಸಬೇಕು.ಆದರೆ ಪುಟ್ಟನ ಕ್ರಿಯೆಯಲ್ಲಿ ಆರತಿ ಚಕ್ರಾಕಾರವಾಗಿ ಬೆಳಗುತ್ತಿರುವಾಗಲೆಲ್ಲ 
ಎಡಗೈಯಲ್ಲಿರುವ ಗಂಟೆ ಶ್ರುತಿ ತಪ್ಪಿ ಆರತಿಯೊಂದಿಗೆ ತಾನೂ ಚಕ್ರಾಕಾರವಾಗಿ ತಿರುಗತೊಡಗುತ್ತದೆ!
ಆಗೆಲ್ಲ ಪುಟ್ಟನ ಈ ಸಾಹಸದಿಂದಾಗಿ ಅಲ್ಲಿರುವ ಇಷ್ಟದೇವತೆಗಳೆಲ್ಲ ಗಾಬರಿಬಿದ್ದು,ಹ್ಯಾಗಾದರೂ ಮಾಡಿ ಪುಟ್ಟನನ್ನು 
ಈ  ಕಷ್ಟದಿಂದ ಪಾರುಮಾಡಬೇಕಲ್ಲ? ಅಂತ ಚಿಂತಿಸತೊಡಗುತ್ತಾರೆ..
ಹಾಗೆ ವರ್ಷಕ್ಕೆ ಮೂರ್ನಾಲ್ಕು ಬಾರಿ ಈ ಘಟಾನುಘಟಿ ದೇವರುಗಳಿಗೆಲ್ಲ ಮುಲಾಜು ಬರಿಸಿ,ಅವರೆಲ್ಲ ಬೆವರಿಳಿಯುವಂತೆ 
ಮಾಡುವ ಪುಟ್ಟ,ತಾನು ಮಾತ್ರ 'ಎನ್ನಯ ಪಾಡು ಎನಗೆ..' ಎಂಬಂತೆ ತನ್ನ ವರ್ತುಲದೊಳಗೆ ತನ್ನನ್ನು ತಾನು 
ಪ್ರತಿಷ್ಟಾಪಿಸಿಕೊಂಡುಬಿಡುತ್ತಾನೆ. 


ಇವತ್ತಂತೂ ಸರಿಯೇ ಸರಿ.ಯಾಕೆಂದರೆ ಇವತ್ತು ಪಂದ್ರ ಅಗಸ್ಟ್! ಪುಟ್ಟನ ಹುಟ್ಟಿದಹಬ್ಬ.ಒಂದರ್ಥದಲ್ಲಿ ಆತನಿಗೆ ಸ್ವಾತಂತ್ರ್ಯ
ಸಿಕ್ಕ ದಿನ.ಹಾಗಾಗಿ ಇವತ್ತು ಮನೆಯಲ್ಲಿ ಪುಟ್ಟ ಹೇಳಿದ್ದೇ ವೇದವಾಕ್ಯ;ಮಾಡಿದ್ದೇ ರಾಜ್ಯಭಾರ.ಅದಕ್ಕಿಂತ ಹೆಚ್ಚಿನ ಮತ್ತು 
ಮೌಲಿಕದ  ವಿಷಯವೇನೆಂದರೆ,ಇವತ್ತು ಪುಟ್ಟನಿಗೆ ತನ್ನ ಶಾಲೆಯಲ್ಲಿ ತ್ರಿವರ್ಣಧ್ವಜ ಹಾರಿಸಬೇಕಿದೆ.ಅಲ್ಲಿರುವ ಮಾಸ್ತರುಗಳ
ಮುಂದೆ, ತನ್ನ ಸಹಪಾಠಿಗಳ ಎದುರಿಗೆ,ಶಾಲೆಗೆ ಬರಬಹುದಾದ ಅತಿಥಿಗಳಿಗೆ ಎದುರಾಗಿ ನಿಂತುಕೊಂಡು ಈತ ಸ್ಪೇಶಲ್ಲಾಗಿ
ಸೆಲ್ಯೂಟ್  ಒಂದನ್ನು ಬಾರಿಸಬೇಕಾಗಿದೆ.ಹಾಗಂತ ಹೇಳಿ ವಾರದಿಂದೀಚೆಗೆ ಪುಟ್ಟನಿಗೆ ಶಾಲೆಯಲ್ಲಿ ತಯಾರಿ ಹೇಳಿಕೊಡಲಾಗಿದೆ.
***
ಉಪ್ಪಿಟ್ಟಿನ ಕೊನೆಯ ತುತ್ತನ್ನು ಬಾಯಿಗೆ ಇಡುತ್ತಿರುವಾಗಲೇ ಮನೆ ಸಮೀಪದ ಕಾಟನ್ ಮಿಲ್ಲಿನಿಂದ ಎಂಟೂ ಹದಿನೈದರ 
"ಭೊಂಗಾ" ಜೋರಾಗಿ ಕೂಗಿಕೊಂಡಿದೆ."ತಡ ಆಯ್ತು,ತಡ ಆಯ್ತು.." ಅಂತ ಪುಟ್ಟ,ಅಮ್ಮ-ಅಕ್ಕನಿಗೆ ಜೋರು 
ಮಾಡತೊಡಗಿದ್ದಾನೆ.ಇವನ  ಗಡಿಬಿಡಿ ನೋಡಿದ ಅಕ್ಕ ಮಲಗುವ ಕೋಣೆಯತ್ತ ಧಾವಿಸಿದ್ದಾಳೆ.ನಿನ್ನೆ ರಾತ್ರಿ ಅಪ್ಪ ಪುಟ್ಟನ 
ಸಮವಸ್ತ್ರಗಳನ್ನು ಹಿತ್ತಾಳೆ ತಂಬಿಗೆಯಲ್ಲಿ  ಕೆಂಡ ಹಾಕಿ ಇಸ್ತ್ರಿ ಮಾಡಿ ಗಾದಿಯ ಕೆಳಗೆ ಮಡಿಚಿಟ್ಟಿದ್ದು ಆಕೆಗೆ ಜ್ಞಾಪಕಕ್ಕೆ ಬಂದಿದೆ.
ಹಗೂರಕ್ಕೆ ಗಾದಿ ಎತ್ತಿರುವ ಆಕೆ   ಅಚ್ಚಬಿಳಿ ಶರ್ಟು ಮತ್ತು ಕಡುನೀಲಿ ಚೆಡ್ಡಿಯನ್ನು ಮುಟ್ಟಿದರೆ ಮುನಿದುಕೊಂಡಾವು ಎಂಬಂತೆ
ಅಷ್ಟೇ ಹಗೂರಕ್ಕೆ ಎತ್ತಿಕೊಂಡು ಬಂದಿದ್ದಾಳೆ.   

ಪುಟ್ಟನೀಗ ಸಮವಸ್ತ್ರಧಾರಿ.ತಲೆಗೆ ಎಣ್ಣೆ ಹಚ್ಚಿದ ಕೈಯಿಂದ ಪುಟ್ಟನ ಕೆನ್ನೆ ಹಿಡಿದು ಬೈತಲೆ ತೆಗೆದ ಅಮ್ಮ,ಕೆನ್ನೆ ಬಿಟ್ಟಾಗ ಪುಟ್ಟನ 
ಗಲ್ಲದಲ್ಲಿ   ಕೊಬ್ಬರಿ ಎಣ್ಣೆ ಮುಗುಳ್ನಕ್ಕಿದೆ.'ಥೋ..' ಅಂದ ಅಕ್ಕ ಆತನ ಮತ್ತೊಂದು ಸುತ್ತಿನ ಪ್ರಸಾಧನ ಕಾರ್ಯದಲ್ಲಿ 
ತೊಡಗಿದ್ದಾಳೆ.ಪುಟ್ಟನ ಕನವರಿಕೆ ಜಾಸ್ತಿಯಾಗುತ್ತಲೇ ಇದೆ: ತಡ ಆಯ್ತು,ತಡ ಆಯ್ತು..

ಈತನಿಗೀಗ ಶೂ ಧರಿಸಬೇಕಾಗಿದೆ.ನಿನ್ನೆತಾನೆ ಒಗೆದು ಒಣಗಿಸಿಟ್ಟ ಬಿಳಿ ಸಾಕ್ಸುಗಳು ಈಗಷ್ಟೇ ತಂತಿಯಿಂದ ಬಿಡುಗಡೆಗೊಂಡು 
ಸ್ವಾತಂತ್ರ್ಯದ  ಮಜದಲ್ಲಿ ಇದ್ದಂತಿವೆ.ಪುಟ್ಟಪಾದಗಳ ಸೇವೆಗೆಂದು ಸಿದ್ಧವಾಗಿವೆ.ಸ್ಟೂಲಿನ ಮೇಲೆ ಕೂತ ಪುಟ್ಟ ಎರಡೂ 
ಸಾಕ್ಸುಗಳನ್ನು ಧರಿಸುತ್ತಿದ್ದಂತೆಯೇ ಆತನ ಮೊಗದಲ್ಲಿ ಇದ್ದಕ್ಕಿದ್ದಂತೆ ಕಳವಳದ ಛಾಯೆ ಮೂಡತೊಡಗಿದೆ.ಹಿತ್ತಲಿನಲ್ಲಿದ್ದ 
ತಂತಿಯಲ್ಲಿ ಬೇಗ ಒಣಗಲೆಂದು ಎಳೆದೆಳೆದು ಕಟ್ಟಿದ್ದರಿಂದ ಆ ಎರಡು ಸಾಕ್ಸುಗಳ ಪೈಕಿ ಒಂದು ಸಾಕ್ಸು ಅದು ಹ್ಯಾಗೋ ಏನೋ
ತನ್ನ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿದೆ.ಪರಿಣಾಮವಾಗಿ,ಪುಟ್ಟನ ಮೊಣಕಾಲನ್ನು ಭದ್ರವಾಗಿ ಹಿಡಿಯಬೇಕಾಗಿದ್ದ ಆ ಸಾಕ್ಸಿನ 
ಇಲಾಸ್ಟಿಕ್ಕು 'ಇಲ್ಲಿರಲಾರೆ,ಅಲ್ಲಿಗೆ ಹೋಗಲಾರೆ' ಎಂಬಂತೆ ಮೇಲೂ ನಿಲ್ಲದೇ ಕೆಳಗೂ ಇಳಿಯದೇ ಮಧ್ಯದಲ್ಲೇ ತ್ರಿಶಂಕು ಸ್ಥಿತಿ
ಅನುಭವಿಸುತ್ತ ನಿಂತುಬಿಟ್ಟಿದೆ.ವಾರದಲ್ಲಿ ಎರಡು ದಿನ ನಂಬಿಕೆಯ ಹನುಮನಂತೆ ಸಾಥ್ ಕೊಟ್ಟಿದ್ದ ಈ ಸಾಕ್ಸುಗಳ ಪೈಕಿ 
ಈ ಒಂದು ಸಾಕ್ಸು ಮಾತ್ರ ಇವತ್ಯಾಕೋ  'ಮೇಲೆತ್ತಲಾರೆಯಾ ಗೆಳೆಯಾ?' ಎಂದು ಪುಟ್ಟನನ್ನೇ ಬೇಡಿಕೊಳ್ಳುತ್ತಿರುವಂತಿದೆ...

ಪುಟ್ಟನಿಗೆ ಒಂದು ಕಡೆ ತಡವಾಗುತ್ತಿದೆಂಬ ಧಾವಂತ.ಇನ್ನೊಂದೆಡೆ ಸಿಟ್ಟು.ಧ್ವಜಾರೋಹಣಕ್ಕೆ ಹದಿನೈದು ನಿಮಿಷವಷ್ಟೇ
ಬಾಕಿಯಿದೆ.ಹತ್ತು ನಿಮಿಷ ಮೊದಲೇ ನೀನಿರಬೇಕು ಅಂತ ಮಾಸ್ತರರು ನಿನ್ನೆಯೇ ಅಜ್ಞಾಪಿಸಿದ್ದಾರೆ.
ಎಂತ ಮಾಡೋದು?ನಾನಿಲ್ಲದೇ,ನನ್ನ ಸೆಲ್ಯೂಟ್ ಇಲ್ಲದೇ,ಧ್ವಜ ಹಾರದೇ,ಎಲ್ಲ ಸ್ತಬ್ದವಾಗಿ ನಿಂತೇ ಬಿಟ್ಟರೇ... 
ಅಯ್ಯೋ ದೇವರೇ,ಈ ಸಾಕ್ಸಿಗೆ ಒಂಚೂರು ಶಕ್ತಿ ಕೊಡು!
ಹಾಗಂತ ಪುಟ್ಟ ತಮ್ಮನ್ನು ಜ್ಞಾಪಿಸಿಕೊಳ್ಳುತ್ತಿರುವದನ್ನು ನೋಡಿದ ಇಷ್ಟದೇವತೆಗಳು ತಾವಿದ್ದ ಜಾಗದಲ್ಲೇ ಗಡಗಡ ನಡುಗಿ 
ಮತ್ತೊಮ್ಮೆ ಚಿಂತಾಕ್ರಾಂತರಾಗಿರುವಾಗಲೇ-

ದಿಢೀರಂತ ಪುಟ್ಟನಿಗೆ ಏನೋ ನೆನಪಾಗಿದೆ.ಬಿಟ್ಟ ಬಾಣದಂತೆ ಮಲಗುವ ಕೋಣೆಯತ್ತ ಓಡಿದ್ದಾನೆ.ಅಮ್ಮ,ಅಕ್ಕನಿಗೆ ಏನೂ 
ಅರ್ಥವಾಗದೇ ಅವನನ್ನೇ ಹಿಂಬಾಲಿಸಿದ್ದಾರೆ.ಅಲ್ಲೇನು ನಡೆಯುತ್ತಿದೆ?ಅಕ್ಕನ ಪ್ರಸಾಧನ ಸಾಮಗ್ರಿಗಳಿದ್ದ ಮರದ ಪೆಟ್ಟಿಗೆಯನ್ನು
ಆತ ಜಾಲಾಡತೊಡಗಿದ್ದಾನೆ.ಬಾಚಣಿಕೆ,ಟಿಕಳಿ,ಕುಂಕುಮ ಡಬ್ಬಿ,ಪಿನ್ನು,ಟಾಚಣಿ,ರಿಬ್ಬನ್ನು,ಪ್ಲಾಸ್ಟಿಕ್ ಬಳೆಗಳು,ಪೌಡರ್ ಡಬ್ಬಿ...
ತುರ್ತಿನ ಮಥನಕಾರ್ಯದಲ್ಲಿ ಹಾದಿಗೆ ಅಡ್ಡ ಬಂದ ಇವೆಲ್ಲ ವಸ್ತುಗಳು ಒಂದೊಂದಾಗಿ ಹೊರಜಗತ್ತಿಗೆ ಹಾರಿವೆ.ಕ್ಷಣಾರ್ಧದಲ್ಲಿ
ಘಟಿಸಿಹೋದ ಸಮುದ್ರಮಂಥನದಲ್ಲಿ ಕಟ್ಟಕಡೆಗೆ ಅಮೃತವೊಂದು ಸಿಕ್ಕಾಗ ಪುಟ್ಟನ ಬಾಯಿಂದ ನೆಮ್ಮದಿಯ ಉಸಿರೊಂದು 
ತಾನೇತಾನಾಗಿ ಬಿಡುಗಡೆಗೊಂಡಿದೆ.
ಡಿಸ್ಕೋ ರಬ್ಬರ್!

ಅಕ್ಕನ ಜಡೆ ಹಿಡಿದಿಡುವ ರಬ್ಬರ್ ಬ್ಯಾಂಡುಗಳ ಪೈಕಿ ಕೊಂಚ stylish ಮತ್ತು ತುಸುಗಟ್ಟಿಯಾಗಿರುವ,ಚಪ್ಪಟೆಯಾಕಾರದ 
ಎರಡು ಡಿಸ್ಕೋ ರಬ್ಬರುಗಳನ್ನು ಕೈಯಲ್ಲಿಡಿದು ಹೊರಗೆ ಬಂದಿದ್ದಾನೆ.ನಿಶ್ಯಕ್ತಿಯಿಂದ ಕುಸಿದುಬಿದ್ದಿದ್ದ ಸಾಕ್ಸನ್ನು ಮೇಲಕ್ಕೆತ್ತಿ
ಧೈರ್ಯ ತುಂಬಿದ್ದಾನೆ.ಮತ್ತೇ ಕೆಳಗಿಳಿದೀತು ಎಂಬ ಮುನ್ನೆಚ್ಚರಿಕೆಯಲ್ಲಿ ಸಾಕ್ಸಿನ ಕಂಠಕ್ಕೆ ರಬ್ಬರನ್ನು ಬಿಗಿದು ದಿಗ್ಬಂಧಿಸಿ
ಬಿಟ್ಟಿದ್ದಾನೆ. ಆ ಮೂಲಕ ಡಿಸ್ಕೋ ರಬ್ಬರಿನ ಉಪಸ್ಥಿತಿಯ ಹೊಸ ಆಯಾಮವೊಂದನ್ನು,ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾನೆ.
ಇಷ್ಟಾದರೂ ಪುಟ್ಟನ ಮನಸಿಗೆ ನೆಮ್ಮದಿ ಸಿಕ್ಕಿಲ್ಲ.ಹೊರಜಗತ್ತಿಗೆ ರಬ್ಬರ್ ಬ್ಯಾಂಡು ಎದ್ದು ಕಾಣುತ್ತಿರುವದರಿಂದ ಸಾಕ್ಸಿನ 
ಮೇಲಂಚನ್ನು ತುಸುವೇ ಬಾಗಿಸಿ ರಬ್ಬರು ಕಾಣದಿರುವಂತೆ ಕವರು ಮಾಡಿದ್ದಾನೆ.
ಹತ್ತುನಿಮಿಷ ಮಾತ್ರ ಉಳಿದಿದೆ.

ಸ್ವಾತಂತ್ರ್ಯದ ಧ್ವಜ ಹಾರಿಸಲು ಹೊರಟ ಪುಟ್ಟಯೋಧನಿಗೆ ತಿಲಕವಿಟ್ಟ ಮನೆಯ ಸದಸ್ಯರೆಲ್ಲ ಈತನನ್ನು ಬೀಳ್ಕೊಟ್ಟಿದ್ದಾರೆ.
ದಾರಿಯುದ್ದಕ್ಕೂ ಠೀವಿಯಿಂದ ಹೊರಟ ಪುಟ್ಟನಿಗೆ ಅಚಾನಕ್ಕಾಗಿ ಬೇಡದ ಅವಘಡವೊಂದು ಎದುರಾಗಿಬಿಟ್ಟಿದೆ.
ಅದು-ಪರೇಡ್ ಗೆಂದು ಹೊರಟಿರುವ ದಪ್ಪ ಮೀಸೆಯ ದಢೂತಿ ಪೊಲೀಸ್ ಮಾಮ! ಮೊದಲೇ ಇವನೆಂದರೆ ಪುಟ್ಟನಿಗೆ 
ವಿಚಿತ್ರ ಭಯವಿದೆ.ಮನೆಯಲ್ಲಿ ಆಗಾಗ ತಂಟೆ ಮಾಡಿದಾಗ ಜೈಲಿಗೆ ಹಾಕಿಸುತ್ತೇನೆಂದು ಹೆದರಿಸುವ ಅಮ್ಮನ 
'ನಿಗೂಢ ಆಪತ್ಬಾಂಧವ' ಇವತ್ತು ಸೀದಾ ಎದುರಿಗೇ ಬಂದು ಬಿಟ್ಟಿದ್ದಾನೆ.ಈಗೇನು ಮಾಡುವದು? ಈತನೇನಾದರೂ
ಈಗಲೇ ತನ್ನನ್ನು ಎತ್ತಿಕೊಂಡು ಸೀದಾ ಜೈಲಿಗೇ ಹಾಕಿಬಿಟ್ಟರೆ? ಸ್ಕೂಲು..? ಸೆಲ್ಯೂಟ್ಟು..?  

ಹತ್ತಾರು ಯೋಚನೆಗಳ ಮಿಸಾಳ್ ಭಾಜಿಯಲ್ಲಿ ಮಿಂದೆದ್ದ ಪುಟ್ಟ ಅದ್ಯಾವ ಮಾಯದಿಂದಲೋ ಏನೋ,
ರೆಪ್ಪೆ ಮಿಟುಕಿಸುವದರೊಳಗಾಗಿ ತನಗರಿವಿಲ್ಲದೇ ಖಡಕ್ಕಾದ ಸೆಲ್ಯೂಟ್ ಒಂದನ್ನು ಹೊಡೆದುಬಿಟ್ಟಿದ್ದಾನೆ! 

ಗಾಬರಿಯಾಗುವ ಸರದಿ ಈಗ ಪೊಲೀಸ್ ಮಾಮನದು.ಪ್ರತಿನಿತ್ಯ ಯಾವುದ್ಯಾವುದೋ ಆಫೀಸರುಗಳಿಗೆ,ರಾಜಕಾರಣಿಗಳಿಗೆ,
ಮತ್ತವರ ಬಾಲಂಗೋಚಿಗಳಿಗೆ ಸೆಲ್ಯೂಟ್ ಹೊಡೆದೂ ಹೊಡೆದೂ ಸುಸ್ತಾಗಿರುವ ಪೊಲೀಸ್ ಮಾಮ ಸದ್ಯದ ಅನಿರೀಕ್ಷಿತ,
ಅಕಸ್ಮಾತ್ ಬೆಳವಣಿಗೆಯಿಂದ ವಿಚಲಿತನಾಗಿಹೋಗಿದ್ದಾನೆ.ಖುಷಿಯಿಂದ ರೋಮಾಂಚನಗೊಂಡು ಪುಟ್ಟನ ಸಲಾಮು 
ಸ್ವೀಕರಿಸಲಾಗದೇ ಆತ ಕ್ಷಣಕಾಲ ಚಿತ್ತಾಗಿ ಹೋದಂತಿದೆ.ಮರುಕ್ಷಣ ಹ್ಯಾಗೋ ಸಾವರಿಸಿಕೊಂಡು ಮರುಸೆಲ್ಯೂಟ್ ಗಾಗಿ
ಆತ ಕೈ ಎತ್ತಿದಾಗ,ಪುಟ್ಟ ದೂರದಲ್ಲೆಲ್ಲೋ ಓಡುತ್ತಿರುವದು ಪೊಲೀಸ್ ಮಾಮನ ತುಂಬಿಬಂದ ಕಣ್ಣುಗಳಿಗೆ ಮುಸುಕು
ಮುಸುಕಾಗಿ ಕಾಣಿಸುತ್ತಲಿದೆ...
***
ಪುಟ್ಟನ ಸವಾರಿ ಶಾಲೆಯ ಆವರಣ ಪ್ರವೇಶಿಸಿಯಾಗಿದೆ.ಚಿಕ್ಕ ಮೈದಾನದಲ್ಲಿ ಅಲ್ಲಲ್ಲಿ ಬೂದಿಯಿಂದ ಗೆರೆಗಳನ್ನು ಎಳೆಯಲಾಗಿದೆ.
ಅತಿಥಿಗಳಿಗಾಗಿ ಮತ್ತು ಮಾಸ್ತರುಗಳಿಗಾಗಿ ಒಂದು ಸಾಲಿನ ಗೆರೆ,ಮಕ್ಕಳಿಗಾಗಿ ಸಾಲುಸಾಲಿನ ಗೆರೆಗಳು.ಅತಿಥಿಗಳಿಗೆ ಎದುರಾಗಿ
ನಿಂತು ಸೆಲ್ಯೂಟ್ ಹೊಡೆಯಬೇಕಾಗಿರುವ ಪುಟ್ಟನಿಗೆಂದೇ ಒಂದು ವಿಶೇಷವಾದ ಆಯತವೊಂದನ್ನು ಬಿಡಿಸಲಾಗಿದೆ.ಈಗ ಎಲ್ಲ 
ಮಕ್ಕಳೂ ಸಾಲುಸಾಲಾಗಿ ಗೆರೆಯಲ್ಲಿ ನಿಂತಿದ್ದಾರೆ.ಹಾಗೆಯೇ ಮಾಸ್ತರುಗಳೊಂದಿಗೆ ಅತಿಥಿಗಳೂ.ಪುಟ್ಟ ಯಾರಿಂದಲೋ 
ನಿರ್ದೇಶನಕ್ಕೊಳಪಟ್ಟವನಂತೆ ತನ್ನ ಆಯತದಿಂದ ಹೊರ ಬಂದು ಅತಿಥಿಗಳಿಗೆ ಸೆಲ್ಯೂಟ್ ಹೊಡೆದು ತನ್ನ ಕಾರ್ಯಕ್ರಮ ಮುಗಿಸಿ
ಬಿಟ್ಟಿದ್ದಾನೆ.ಈಗ ಅತಿಥಿಗಳಿಂದ ಧ್ವಜಾರೋಹಣ!

ಅತಿಥಿಗಳು ಸಾವಕಾಶವಾಗಿ ಅವರಿಗೇ ಅಪರಿಚಿತವಾದ ಘನಗಾಂಭೀರ್ಯದಿಂದ ಧ್ವಜಗಂಬದತ್ತ ಮುನ್ನೆಡೆದಿದ್ದಾರೆ.ಕಂಬದ ತುತ್ತ
ತುದಿಯಲ್ಲಿರುವ ಧ್ವಜವನ್ನೊಮ್ಮೆ ನೋಡಿ ಹಗ್ಗ ಎಳೆದಿದ್ದಾರೆ. ಒಂದು..ಎರಡು..ಮೂರು..! ಅರೆರೇ,ಮೂರುಸಲ ಹಗ್ಗ ಜಗ್ಗಿದರೂ
ಧ್ವಜದ ಗಂಟೇ ಬಿಡಿಸಲಾಗುತ್ತಿಲ್ಲ.ಅತಿಥಿಗಳು ಮತ್ತೆರಡು ಸಲ ಪ್ರಯತ್ನಿಸಿದ್ದಾರೆ.ಹಗ್ಗ ಜಗ್ಗಿಯೇ ಜಗ್ಗುತ್ತಿದ್ದಾರೆ.ಅವರ ಮುಖವೀಗ
ಸಿಟ್ಟು,ಅಸಹಾಯಕತೆಗಳ ಮಿಶ್ರಣವಾಗಿ ಮಾರ್ಪಡುತ್ತಲಿದೆ.ಧ್ವಜ ಮಾತ್ರ ಗಂಟುಮೋರೆ ಹಾಕಿಕೊಂಡು ಯಾರಿಗೆ ಬಂತು?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಅಂತ ಪ್ರಶ್ನಿಸುತ್ತಿರುವಂತಿದೆ..

ದಿನಬೆಳಗಾದರೆ,ತನ್ನ ದೊಡ್ಡ ದನಿಯಿಂದ ಅವಾಚ್ಯವಾಗಿ ಬಯ್ಯುವ,ಪೌರಕಾರ್ಮಿಕರನ್ನು ಶೋಷಿಸುತ್ತಲೇ ಬಂದಿರುವ ಈ ಧಾಡಸಿ
ಮನುಷ್ಯ,ಶಾಲೆಗೆ ಇವತ್ತು ಅತಿಥಿಯಾಗಿ ಬಂದಿದ್ದಾನೆ ಮತ್ತು ಹಗ್ಗ ಜಗ್ಗುತ್ತಲೇ ಇದ್ದಾನೆ.ಆತನ ಎಂದಿನ ದರ್ಪ,ದೌಲತ್ತುಗಳೆಲ್ಲ
ಧ್ವಜದ ಗಂಟಿನ ಮುಂದೆ,ಸುತ್ತಲಿನ ಭಾವೀ ಸಮಾಜದ ಮುಂದೆ ತೀರ ಅಸಹಾಯಕನಾಗಿರುವಂತೆ,ವಿನೀತನಾಗಿರುವಂತೆ 
ಮಾಡಿಬಿಟ್ಟಿರುವ ಸಂದರ್ಭವೊಂದು ವಿಚಿತ್ರವಾಗಿ ಒಡಮೂಡಿಬಿಟ್ಟಿದೆ.ಆತ ನಿಶ್ಯಕ್ತಿಯಿಂದ ಲಜ್ಜಿತಗೊಂಡವನಂತೆ ಕುಬ್ಜನಾಗಿ 
ಕೊನೆಯಬಾರಿಗೆ ಎಂಬಂತೆ ಹಗ್ಗ ಎಳೆಯಲಾಗಿ ಧ್ವಜದ ಗಂಟು ಸುಸೂತ್ರವಾಗಿ ಅರಳಿಬಿಟ್ಟಿದೆ!
ಧ್ವಜದೊಳಗೆ ಅಡಗಿಕುಳಿತಿದ್ದ ಹೂಗಳಿಗೆ ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಸಿಕ್ಕು ಅಲ್ಲೊಂದು ಕ್ಷಣಭಂಗುರದ ಪುಷ್ಪವೃಷ್ಟಿ 
ಸೃಷ್ಟಿಯಾಗಿಹೋಗಿದೆ.ಅದಕ್ಕೆ ಸರಿಯಾಗಿ ಹಿಮ್ಮೆಳವೊಂದು ತೇಲಿಬಂದಿದೆ:
"ಏರುತಿಹುದು,ಹಾರುತಿಹುದು,ನೋಡು ನಮ್ಮಯ ಬಾವುಟ.."
***
ಶಾಲೆಯ ಅವರಣವೀಗ ಖಾಲಿಖಾಲಿಯಾಗಿದೆ.ಆದರೆ ಸ್ವಾತಂತ್ರ್ಯದ ಮಜ ಈ ಎಲ್ಲ ಪುಟ್ಟ ಹುಡುಗ,ಹುಡುಗಿಯರ 
ಉತ್ಸಾಹದೊಂದಿಗೆ ತಾನೇತಾನಾಗಿ ಪರಾಗಸ್ಪರ್ಶಗೊಳ್ಳುತ್ತ ಅವರವರ ಮನೆಯವರೆಗೂ ಹಿಂಬಾಲಿಸಿದೆ.
ಇದಕ್ಕೆಲ್ಲ ಸಾಕ್ಷಿಯಾಗಿ,ಹಾಡು ಮುಗಿದ ಎಷ್ಟೋ ಹೊತ್ತಿನವರೆಗೂ ಅದರ ಇಂಪು ಶಾಲೆಯ ಆವರಣದೊಳಗೆ 
ಅನುರಣಿಸುತ್ತಲೇ ಇದೆ.ಅದಕ್ಕೆ ಸಂಗಾತಿಯಾಗಿ ಧ್ವಜ  ಪಟಿಪಟಿಸುತ್ತಲಿದೆ.

ಬಹುಶಃ  ನಿಜ ಸ್ವಾತಂತ್ರ್ಯದ ಅಸಲೀ ಮಜ ಇಲ್ಲಿಂದಲೇ ಉದ್ಭವಗೊಂಡಿದೆ..

-


Sunday, January 1, 2012

"ಗುಮ್ಮನ ಕರೆಯದಿರೆ.."


                    
ಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು. ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ ಡೀಸೆಂಟ್ ಹೆಸರೊಂದು ಈ ಟಾಕೀಸಿಗಿತ್ತಾದರೂ ಗದುಗಿನಲ್ಲಿ ಯಾರೊಬ್ಬರೂ
ಅದನ್ನು ಅದರ ನಿಜನಾಮಧೇಯದಿಂದ ಗುರುತಿಸುತ್ತಿರಲಿಲ್ಲ. ಅವರಿಗೆಲ್ಲ 'ಡಬ್ಬಾ ಟಾಕೀಸ್' ಅಂದರೆ ಮಾತ್ರ ಗೊತ್ತಾಗುತ್ತಿತ್ತು. 
ಇಂಥದೊಂದು ಟಾಕೀಸಿನ interior ದೃಶ್ಯ ನಿಜಕ್ಕೂ ನೋಡುವಂತಿರುತ್ತಿತ್ತು.

ಸಿನೆಮಾ ನೋಡುತ್ತಿರುವಾಗ ಹುಚ್ಚಾಗಿಯೋ, ಥ್ರಿಲ್ಲಾಗಿಯೋ ಪ್ರೇಕ್ಷಕ ಮಹಾಶಯ ತೂರಿಬಿಟ್ಟ ಪೇಪರ್ ರಾಕೆಟ್ಟುಗಳು 
ಟಾಕೀಸಿನ ಸೀಲಿಂಗಿಗೆ ವರ್ಷಗಟ್ಟಲೇ ಅಂಟಿಕೊಂಡಿದ್ದರೆ, ಎಲೆಅಡಿಕೆಯ ಪ್ರೋಕ್ಷಣೆಯಿಂದ ನೆಲವೆಲ್ಲ ರೆಡ್ಡುರೆಡ್ದಾದ 
ಕಾರ್ಪೆಟ್ಟಿನಂತೆ ಕಂಗೊಳಿಸುತ್ತಿತ್ತು. ಅಪರೂಪಕ್ಕೊಮ್ಮೆ ಪ್ರದರ್ಶಿಸುತ್ತಿದ್ದ ದೆವ್ವದ ಸಿನೆಮಾ ನೋಡಲು ಬಂದ ಪ್ರೇಕ್ಷಕರ ಕಾಲಡಿ
ಇಲಿ,ಜಿರಳೆಗಳು ಸದ್ದಿಲ್ಲದೇ ಹರಿದಾಡಿ ಆ ಇಡೀ ಹಾರರ್ ಸೀನಿಗೆ ಡಬಲ್ ಕಿಕ್ ಕೊಡುತ್ತಿದ್ದವು. ಯಾವತ್ತಾದರೊಮ್ಮೆ ಹಿಟ್ಟಾದ
ಸಿನೆಮ ಬಂದುಬಿಟ್ಟರೆ ಟಿಕೆಟ್ಟುಗಳನ್ನು ಸಿಕ್ಕಂತೆ ಸೇಲು ಮಾಡಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲೂ ಸೀಟು ಸಿಗದೇ ತಗಡಿನ ಕುರ್ಚಿ,
ಮರದ ಕುರ್ಚಿ, ಕೊನೆಗೆ ಬೆಂಚೂ ಕೂಡ ಹಾಕಲಾಗುತ್ತಿತ್ತು. ಅದು ಬಿಡಿ, ಥೇಟರ್ ನೊಳಗೆ pillar ಗಳಿರುವದನ್ನು ಎಲ್ಲಾದರೂ
ಕೇಳಿದ್ದೀರಾ? ಇಲ್ಲಿ ಪ್ರೇಕ್ಷಕ ಮತ್ತು ಪರದೆಯ ಮಧ್ಯೆ ಅಲ್ಲಲ್ಲಿ ಐದಾರು ಕಂಬಗಳಿದ್ದು, ಅಂಥ ಕಂಬಗಳ ಹಿಂದೆ ಕುಳಿತುಕೊಳ್ಳುವದು
ಯಾರಿಗೂ ಇಷ್ಟವಿರಲಿಲ್ಲವಾದ್ದರಿಂದ ಸೀಟಿಗಾಗಿ ಆಗಾಗ ಸಣ್ಣಪುಟ್ಟ ಯುದ್ಧಗಳಾಗುತ್ತಿದ್ದವು.

ಇಷ್ಟಾದರೂ ಡಬ್ಬಾ ಟಾಕೀಸು ಎಲ್ಲರ ಮನದಲ್ಲಿ ನೆಲೆಯೂರಿತ್ತು. ಯಾಕೆಂದರೆ, ಆ ಟಾಕೀಸಿನವರ ಪ್ರಾಮಾಣಿಕತೆಯ ಪರಾಕಾಷ್ಟತೆ
ಎಷ್ಟಿತ್ತೆಂದರೆ, ಜನರೇಟರ್ ಸೌಲಭ್ಯವಿಲ್ಲದ ಈ ಥೇಟರ್ ನಲ್ಲಿ ಕರೆಂಟು ಕೈಕೊಟ್ಟರೆ ಸಿನೆಮಾ ಅಲ್ಲಿಗೇ ಶುಭಂ! 
ಹಾಗೆ ಸಿನೆಮಾ ಅರ್ಧಕ್ಕೆ ಬಿಟ್ಟು ಮನೆಗೆ ಹೊರಟ ಪ್ರೇಕ್ಷಕರಿಗೆ ಅವರವರ ಟಿಕೆಟ್ಟಿನಲ್ಲಿ ಮಾರ್ಕ್ ಮಾಡಿ ಮರುದಿನ ಅದೇ ಸಿನೆಮ
ಮತ್ತೊಮ್ಮೆ ನೋಡಲು ಅವಕಾಶ ಕಲ್ಪಿಸಲಾಗುತ್ತಿತ್ತು.

ಇಂತಿಪ್ಪ ಡಬ್ಬಾ ಟಾಕೀಸು ನನ್ನ ಬಾಲ್ಯದ ಮಲ್ಟಿಪ್ಲೆಕ್ಸ್ ಆಗಿತ್ತು. ಆವತ್ತಿನ ಅತ್ಯುತ್ತಮ ಸಂದೇಶವುಳ್ಳ ಚಿತ್ರಗಳನ್ನು ನಾನು 
ನೋಡಿದ್ದು ಇಲ್ಲಿಯೇ. ಈ ಟಾಕೀಸಿನಲ್ಲಿ ನನಗೆ free entry ಅಷ್ಟೇ ಅಲ್ಲ, wild card entry ಥರ ನಾನು ಯಾವಾಗ 
ಬೇಕಾದರೂ ನುಗ್ಗಿ ಹೊರಬರಬಹುದಿತ್ತು. ಯಾಕೆಂದರೆ, ನಮ್ಮಜ್ಜ ಇಲ್ಲಿ projector operator ಆಗಿದ್ದ! ನನ್ನ ಸೋದರಮಾವ
ಟಿಕೇಟು ಹರಿದುಕೊಡುತ್ತಿದ್ದ. ಹೀಗಾಗಿ ಟಾಕೀಸಿಗೆ ಬರುವ ಎಲ್ಲ ಸಿನೆಮಾಗಳಿಗೂ ನಮ್ಮ ಇಡೀ ಕುಟುಂಬಕ್ಕೆ ಎಂಟ್ರಿ ಫ್ರೀ ಇತ್ತು.
ಹಾಗಂತ ನನ್ನದೇನೂ ಖುಷಿಪಡುವ ಪರಿಸ್ಥಿತಿ ಇರಲಿಲ್ಲ. ಮನೆಮಂದಿಯೆಲ್ಲ ಎಂಥ ಸಿನೆಮಾಗೆ ಹೋಗಬೇಕು ಎಂಬುದನ್ನು
ಅಜ್ಜ ಸೆನ್ಸಾರ್ ಮಾಡುತ್ತಿದ್ದ. ಹಾಗಾಗಿ ನಾವೆಲ್ಲ ನೋಡಿದ್ದು ಸತಿ ಸಕ್ಕೂಬಾಯಿ, ಚಂದ್ರಹಾಸ, ಕೃಷ್ಣದೇವರಾಯ, ಲವಕುಶ,
ದೇವರ ಮಕ್ಕಳು, ಮಕ್ಕಳ ಸೈನ್ಯ- ಬರೀ ಇಂಥ ಚಿತ್ರಗಳನ್ನೇ! ಹಾಗೆ ಸಿನೆಮಾ ನೋಡಲು ಹೋದಾಗ ನಮಗೆಲ್ಲ ಬಾಲ್ಕನಿ
ಸೀಟಿನ ಎತ್ತರದ row ಒಂದನ್ನು ಕಾಯ್ದಿರಿಸಲಾಗುತ್ತಿತ್ತು. ಮತ್ತು ಇದೇ ಸೀಟು ನನ್ನಲ್ಲಿ ಒಂಥರಾ ಸಿಟ್ಟು ತರಿಸುತ್ತಿತ್ತು.

ಜಾಸ್ತಿ ದುಡ್ಡು ಕೊಟ್ಟು ಸಿನೆಮಾ ನೋಡುವವರಿಗೆ ಪರದೆಯ ಎದುರಿಗೇ ಕೂಡಿಸುತ್ತಾರೆಂದೂ, ಕಡಿಮೆ ದುಡ್ಡು ಕೊಟ್ಟವರಿಗೆ
ಹಿಂದಿನ ಬಾಲ್ಕನಿ ಸೀಟು ಕೊಡುತ್ತಾರೆಂದೂ ಮತ್ತು ನಮ್ಮಂಥ 'ಫ್ರೀ' ಗಿರಾಕಿಗಳಿಗೆ ಎಲ್ಲಕ್ಕಿಂತ ಹಿಂದೆ ಜಾಗ 
ಕೊಡುತ್ತಾರೆಂದೂ ನನ್ನ ನಂಬಿಕೆಯಾಗಿತ್ತು. ಹಾಗಾಗಿ ಪ್ರತೀಬಾರಿ ಪಿಕ್ಚರ್ ಗೆ ಹೋದಾಗಲೂ ಮುಂದಿನ ಸೀಟಾದ 
'ಗಾಂಧೀಕ್ಲಾಸ್' ಗೆ ಹೋಗುತ್ತೇನೆಂದು ಮನೆಯವರಿಗೆ ಗಂಟು ಬೀಳುತ್ತಿದ್ದೆ. ಅಕ್ಕನಿಗೆ ಏನು ಹೇಳಬೇಕೆಂಬುದು ಗೊತ್ತಾಗದೆ
ತಲೆ ತಲೆ ಚಚ್ಚಿಕೊಳ್ಳುತ್ತಿದ್ದಳು..
ಹೀಗಿದ್ದಾಗ, ಅದೊಮ್ಮೆ ಬಹುಶಃ ನಾನು ಮೂರೋ, ನಾಲ್ಕೋ ಕ್ಲಾಸಿನಲ್ಲಿರಬೇಕು. 'ಸಂಪೂರ್ಣ ರಾಮಾಯಣ' ಅಂತ ಪಿಕ್ಚರ್ರು ಬಂತು. 
ದೇವರ ಸಿನೆಮಾ ಅಂದಮೇಲೆ ಕೇಳಬೇಕೆ? ಸಿನೆಮಾಗೆ ಹೋಗಲು ಮನೆಯಲ್ಲಿ ತಯಾರಿ ನಡೆಯತೊಡಗಿತು. ಆದರೆ ನನ್ನ
ಕರ್ಮ, ಯಾವುದ್ಯಾವುದೋ ಕಾರಣಗಳಿಂದಾಗಿ ಮನೆಯಲ್ಲಿ ಸಿನೆಮಾ ನೋಡುವದು postpone ಆಗತೊಡಗಿತು.
ನನಗೋ, ಒಳಗೊಳಗೇ ತಳಮಳ; ನಾವುಗಳು ನೋಡದೇ 'ರಾಮಾಯಣ' ಎತ್ತಂಗಡಿಯಾಗಿ ಬಿಟ್ಟರೇ?

ಲೆಕ್ಕಾಚಾರ ಸರಳವಾಗಿತ್ತು. ಅಷ್ಟೊತ್ತಿಗಾಗಲೇ ನಮ್ಮ ಬಾಲ್ಯಕಾಲದ ಆಟಗಳಾದ ಗೋಲಿ, ಬುಗುರಿ, ಚಿಣಿಪಣಿ ಎಲ್ಲ ಒಂದು ರೌಂಡು
ಮುಗಿಸಿ ಬೋರುಹೊಡೆದು ರಾಮಾಯಣದ ಬಿಲ್ಲಿಗೆ ಬಂದು ನಿಂತಿದ್ದೆವು. ಮರದ ಟೊಂಗೆಯ ಬಿಲ್ಲು ನಮ್ಮ ಹೈಟಿಗೆ 
ನಿಲುಕುತ್ತಿರಲಿಲ್ಲವಾದ್ದರಿಂದ ತೆಂಗಿನಗರಿಯ ಪೊರಕೆಕಡ್ಡಿ ಬಿಲ್ಲಿಗೇ ತೃಪ್ತಿಯಾಗಿದ್ದೆವು. ಈಗ 'ಸಂಪೂರ್ಣ ರಾಮಾಯಣ'ದ 
ಪೋಸ್ಟರಿನ ಹೊಳೆಯುವ ಬಿಲ್ಲನ್ನು ನೋಡಿ ಹ್ಯಾಗಾದರೂ ಮಾಡಿ ಅಂಥದೇ ಬಿಲ್ಲು ತಯಾರಿಸಬೇಕೆಂಬ ಪ್ಲಾನು ತಲೆಯಲ್ಲಿ
ಅರಳತೊಡಗಿತ್ತು. ಇಲ್ಲಿ ನೋಡಿದರೆ, ಮನೆಯಲ್ಲಿ ಯಾವುದ್ಯಾವುದೋ ಸುಡುಗಾಡು ಕಾರಣಗಳಿಂದಾಗಿ ಸಿನೆಮಾಗೆ 
ಹೋಗುವದನ್ನೇ ಮುಂದೂಡುತ್ತಿದ್ದಾರೆ.

ನಾನಾದರೂ ಎಷ್ಟು ದಿನ ಅಂತ ಕಾಯೋದು? ನೋಡೋವರೆಗೂ ನೋಡಿದೆ: ಆಮೇಲೆ ನನಗಿಂತ ಚಿಕ್ಕವನಾಗಿದ್ದ 
ಕಸಿನ್ ನೊಬ್ಬನನ್ನು ಜೊತೆಯಾಗಿಸಿಕೊಂಡು ಮನೆಯಲ್ಲಿ ಹೇಳದೇ ಕೇಳದೆ ಸೀದಾ ಥೇಟರ್ ಗೆ ನುಗ್ಗಿದೆ.
ಅಜ್ಜನಿಗೆ ಈ ವಿಷಯ ಗೊತ್ತಿಲ್ಲ; ಸೋದರಮಾವನಿಗೂ ಗೊತ್ತಿಲ್ಲ. ಸಿದ್ಧ ಕವಲೂರಿಗೆ ಕೈಬೀಸಿಗೊಂಡು ಹೋದಂತೆ,
ಥೇಟರ್ ನೊಳಗೆ ನುಗ್ಗುತ್ತಿದ್ದ ನಮ್ಮಿಬ್ಬರನ್ನು ಅಲ್ಲಿದ್ದ ಗೇಟ್ ಕೀಪರ್, "ಯಾರ್ರಲೇ ನೀವು? ಟಿಕೀಟು ಎಲ್ಲಿದಾವೆ..?"
ಅಂತ ಹಾಕ್ಕೊಂಡು ಉಗಿಯತೊಡಗಿದ.
ಗಾಬರಿಬಿದ್ದ ನಾನು, "ರೀ, ನಾನು ರೀಲು ಬಿಡೋವ್ರ ಮೊಮ್ಮೊಗ ರೀ.." ಅಂತೆಲ್ಲ ತಡಬಡಿಸತೊಡಗಿದೆ. ಅಷ್ಟರಲ್ಲಿ
ನಮ್ಮ ಮನೆಗೆ ಆಗಾಗ ಬರುತ್ತಿದ್ದ (ಇದೇ ಟಾಕೀಸಿನಲ್ಲಿದ್ದ) ಅಜ್ಜನ ಗೆಳೆಯರೊಬ್ಬರು ನಮ್ಮನ್ನು ನೋಡಿ ಬಳಿಗೆ ಬಂದು
ಗೇಟ್ ಕೀಪರ್ ಗೆ, "ರಾಯರ ಮೊಮ್ಮೊಗ ಬಿಡಪ್ಪಾ.." ಅಂತ ಒಳಗೆ ಕಳಿಸಿದರು.
ಅಂತೂ ಇಂತೂ ನನ್ನ ಬಹುದಿನದ ಆಸೆ ನೆರವೇರಿತ್ತು. ಕಾತರಿಸಿ ಕಾಯುತ್ತಲಿದ್ದ ಪರದೆ ಮುಂದಿನ ಗಾಂಧಿಕ್ಲಾಸಿನ 
ಮೊಟ್ಟ ಮೊದಲನೇ ಸೀಟಿನಲ್ಲಿ ಪದ್ಮಾಸನ ಹಾಕಿದೆ..

ಸರಿ,'ಸಂಪೂರ್ಣ ರಾಮಾಯಣ' ಶುರುವಾಯಿತು. ರಾಮ ಹುಟ್ಟಿ, ಬೆಳೆದು, ದೊಡ್ಡವನಾಗಿ, ಸೀತೆಯನ್ನು ಮದುವೆಯಾಗಿ, 
ರಾವಣ ಅವಳನ್ನು ಕಿಡ್ನಾಪ್ ಮಾಡಿದ್ದೂ ಆಯಿತು. ರಾಮ, ಲಕ್ಷ್ಮಣನೊಂದಿಗೆ ಸೀತೆಗಾಗಿ ಕಾಡಿನಲ್ಲಿ ಹುಡುಕಾಡುತ್ತಿದ್ದಾನೆ. 
ರಾತ್ರಿಯಾಗಿದೆ. ಕಗ್ಗತ್ತಲಿನಲ್ಲಿ ಎಲ್ಲೋ ನರಿಯೊಂದು ಕರ್ಕಶವಾಗಿ ಊಳಿಡುತ್ತಿದೆ. ಸುತ್ತಲೂ ಚಿತ್ರವಿಚಿತ್ರವಾದ ಸದ್ದುಗಳು. 
ಆಗಾಗ ರಾಮನ ಮೇಲೆ ಬೀಳುವ ಫ್ಲಾಶ್ ನ ಬೆಳಕು, ಗುಡುಗಿನ ಶಬ್ದ ಇಡೀ ಸೀಕ್ವೆನ್ಸ್ ಗೆ ಒಂದು ಭಯಂಕರವಾದ 
ಹಾರರ್ ಥೀಮನ್ನು ತಂದುಕೊಟ್ಟಿವೆ. ಆಗ ಬಂದಳು ನೋಡಿ!
ದೊಡ್ಡ ಮೂಗಿನ ಕಪ್ಪುವರ್ಣದ ದೇಹ. ತನ್ನ ಕೆಂಪು ಕಣ್ಣುಗಳನ್ನು ತಿರುಗಿಸುತ್ತ, ವಿಕಾರಮುಖದ ತಾಟಕಿ ರಾಕ್ಷಸಿ ಗಹಗಹಿಸಿ 
ನಗುತ್ತ ಎದುರಿಗಿದ್ದ ಸೈಜುಗಲ್ಲೊಂದನ್ನು ಅನಾಮತ್ತಾಗಿ ಎತ್ತಿ ರಾಮನ ಮೇಲೆ ಎಸೆದೇಬಿಟ್ಟಳು..

"ಅಯ್ಯಯ್ಯಪೋ..ಸತ್ವಿ.." ಅಂತ ಕಿರುಚಿದ ನಾವು, ನಮ್ಮ ತಲೆ ಮೇಲೇ ಕಲ್ಲು ಬಿತ್ತು ಅಂತ ಮನೆ ಕಡೆ ಓಟ ಕಿತ್ತಿದ್ದೆವು!
ಮರ್ಯಾದೆ ಯಾರಪ್ಪನ ಮನೆಯದು ನೋಡಿ: ಭಯಬಿದ್ದ ವಿಷಯ ಯಾರಲ್ಲೂ ಬಾಯ್ಬಿಡಲಿಲ್ಲ. ಅಷ್ಟೇ ಅಲ್ಲ, ಪ್ರತೀಬಾರಿಯೂ ಈ ಸಲ
ಗಟ್ಟಿಧೈರ್ಯ ಮಾಡಿ ಪೂರ್ತಿ ಸಿನೆಮಾ ನೋಡೇಬಿಡೋಣ ಅಂದುಕೊಂಡು ಗದುಗಿನ ವೀರನಾರಾಯಣನ ಅಂಗಾರ ಹಣೆಗೆ ಮೆತ್ತಿಕೊಂಡು ರಘುಕುಲತಿಲೋತ್ತಮರಂತೆ ಟಾಕೀಸಿಗೆ ಹೋಗುತ್ತಿದ್ದ ನಮಗೆ ತಾಟಕಿಯ ದರುಶನವಾಗುತ್ತಿದ್ದಂತೆ ನಮ್ಮ ರಾಮಾಯಣ ಅಲ್ಲಿಗೇ ಸಂಪೂರ್ಣವಾಗುತ್ತಿತ್ತು. ಕೊನೆಗೂ ನನಗೆ "ಸಂಪೂರ್ಣ ರಾಮಾಯಣ" ಪೂರ್ಣವಾಗಿ ನೋಡಲಾಗಲೇ ಇಲ್ಲ!

ಎಷ್ಟು ನಿಜ?ಭಯವೊಂದಿದ್ದೊಡೆ ಹಗ್ಗವೂ ಹಾವಾಗಿ ಕಾಡಿತ್ತು ನೋಡಾ..

ಈ ಭಯ ಅನ್ನುವದು ಒಮ್ಮೊಮ್ಮೆ ಎಷ್ಟೊಂದು ಸುಂದರ ಮತ್ತು ಭಯಂಕರ. ಬಾಲ್ಯದಲ್ಲಿ ತಾಟಕಿಗೆ ಭಯಬಿದ್ದು ಓಡಿದೆವು. 
ಆಮೇಲೆ ಎಕ್ಸಾಮ್ ರಿಸಲ್ಟಿಗಾಗಿ ಭಯಬಿದ್ದೆವು. ಮುಂದೆ ಬೆಳೆದಂತೆಲ್ಲ adult ಸಿನೆಮಾಗಳ interval ನಲ್ಲಿ 
ಯಾರಾದರೂ ಪರಿಚಯದವರು ನೋಡಿಯಾರೆಂದು ಭಯಬಿದ್ದೆವು. ಅದೇ ಭಯದಲ್ಲಿ ಸುಳ್ಳುಸುಳ್ಳೇ ನೆಗಡಿಯ ನೆಪಮಾಡಿ 
ಕರ್ಚಿಫ್ ನಿಂದ ಮುಖ ಮುಚ್ಚಿಕೊಂಡೆವು. ಪ್ರೇಮ ಸಫಲವಾಗಲಿಲ್ಲವೆಂದು ಭಯಬಿದ್ದೆವು; ಕಾಮ ವಿಫಲವಾದಾಗಲೂ ಭಯಬಿದ್ದೆವು.
ಮತ್ತು ಇದೇ ಭಯದಿಂದಾಗಿ ಒಮ್ಮೊಮ್ಮೆ ಎಂಥೆಂಥದೋ ಕೆಟ್ಟಕೆಲಸಗಳನ್ನು ಆದಷ್ಟು ಮುಂದೂಡುತ್ತ ಬಂದೆವು.
Fine. No regrets!

ಆದರೇನು ವೈಚಿತ್ರ್ಯವೋ, ದುರಂತವೋ- ಕೊನೆಗೊಮ್ಮೆ ಎಲ್ಲ ಭಯಗಳನ್ನು ಮೆಟ್ಟಿನಿಂತ ಮೇಲೆ ಎಲ್ಲವನ್ನೂ ಮರೆತುಬಿಟ್ಟೆವು.
ಹಾಗಾಗಿ ಇವತ್ತು, ಊಟ ಮಾಡದ ಮಗುವಿಗೆ, ತಂಟೆ ಮಾಡುವ ಕಂದಮ್ಮಗಳಿಗೆ ಶೂನ್ಯದಲ್ಲಿ ಬೆರಳು ತೋರಿಸುತ್ತ 
"ದೆವ್ವ ಬರ್ತದೆ ನೋಡು.." ಅಂತಲೋ, "ಗುಮ್ಮ ಬರ್ತಾನೆ ನೋಡೂ.." ಅಂತಲೋ, ಮಗುವಿನ ಮುಗ್ಧ ತಲೆಯೊಳಗೆ 
ರೂಪಿಲ್ಲದ, ರೂಹಿಲ್ಲದ, ಅಸಲಿಗೆ ಅಸ್ತಿತ್ವದಲ್ಲೇ ಇರದ entity ಬಗ್ಗೆ ವಿಚಿತ್ರ ಹೆದರಿಕೆ ತುಂಬುತ್ತಿರುವ ಈ ಘಳಿಗೆಯಲ್ಲಿ-
ಊಹುಂ,ನಮಗೆ ಯಾವ ಭಯವೂ ಕಾಡುತ್ತಿಲ್ಲ...

---    
(ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.)