Saturday, April 14, 2012

ಕತೆಯಲ್ಲದ ಕತೆಯೊಂದು ಸ್ತಬ್ದಚಿತ್ರವಾಗಿದೆ..


Photo courtesy: Mr.Sharat Sunder Rajeev




ಸುಮಾರು ವರ್ಷಗಳ ಹಿಂದಿನ ಮಾತು.
ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ
ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊಂದಿಗೆ ನಾನು ರಜೆಗೆಂದು ಮನಾಲಿಗೆ 
ಹೊರಟು ನಿಂತಿದ್ದೆ.ವಿಶೇಷವೆಂದರೆ,ಬೆಂಗಳೂರು-ದೆಹಲಿಯ ಕಿಂಗ್ ಫಿಷರ್ ವಿಮಾನದ ಓಡಾಟ ಆವತ್ತೇ ಆರಂಭವಾಗಿತ್ತು.
ನಾವು ಅಂಥದೊಂದು ಪ್ರಥಮ tripನ ಪ್ರಥಮ ಅತಿಥಿಗಳಾಗಿದ್ದೆವು.ಹೀಗಾಗಿ ನಮಗೆಲ್ಲ ಕೊಂಚ ಹೆಚ್ಚೇ ಉಪಚಾರ 
ಮಾಡಿದ್ದರು ಅನ್ನುವದು ನಮ್ಮ ಭ್ರಮೆಯಾಗಿರಲಿಕ್ಕಿಲ್ಲ.ಫ್ಲೈಟು ಚೆನ್ನಾಗಿತ್ತು.ತಿಂಡಿ,ತೀರ್ಥ ಕೂಡ ಚೆನ್ನಾಗಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ತಿಂಡಿಗಾಗಿ ಎಷ್ಟು ತಲೆ ಕೆಡಿಸಿದರೂ ನಗುನಗುತ್ತಲೇ ಸರ್ವೀಸ್ ಕೊಡುತ್ತಿದ್ದ ಈ ಗಗನಸಖಿಯರ ಬಗ್ಗೆ 
ನಮಗೆಲ್ಲ ಸುಳ್ಳುಸುಳ್ಳೇ ಲವ್ವು ಬೇರೆ ಶುರುವಾಗುವ ಅಪಾಯದ ಹಂತ ಮುಟ್ಟುವದರಲ್ಲಿದ್ದೆವು.

ಆದರೆ ತೀರ ಎರಡು,ಎರಡೂವರೆ ಗಂಟೆಗಳಲ್ಲೇ ದೆಹಲಿಗೆ ತಲುಪಿ,ಮಲ್ಯನ ಬೆಲ್ಲದ ಹುಡುಗಿಯರೆಲ್ಲ ಮುಗುಳ್ನಗುತ್ತ 
ನಮ್ಮನ್ನೆಲ್ಲ  ಬೀಳ್ಕೊಡುತ್ತಿರುವಾಗ, ಹುಡುಗಿಯೊಬ್ಬಳು ಮದುವೆಯಾಗಿ ಗಂಡನ ಮನೆಗೆಂದು ಹೊರಟುನಿಂತಾಗ 
ಹ್ಯಾಗೆಲ್ಲ ಅಳುತ್ತಾಳೋ-ಅಷ್ಟೇ ದುಃಖ ನಮಗೂ ಆಗಿತ್ತು!

ಏನು ಮಾಡ್ತೀರಿ? ನಮ್ಮ ಕರ್ಮ:ಮೇಲೇರಿದವನು ಕೆಳಗೆ ಇಳಿಯಲೇಬೇಕಲ್ಲ? ಅಂದುಕೊಂಡು ದೆಹಲಿಯಿಂದ ಬಸ್ಸನ್ನೇರಿ 
ಮನಾಲಿ ಕಡೆಗೆ ಪ್ರಯಾಣಿಸುತ್ತಿದ್ದೆವು.ಹಿಮಾಯದ ಮಿನಿಯೇಚರ್ ನಂತಿದ್ದ ಆ ಪರ್ವತ ಶ್ರೇಣಿಗಳ ನಡುವೆ ಹಾದು 
ಹೋಗುತ್ತಿದ್ದಾಗ ಕೆಳಗೆಲ್ಲೋ ಪ್ರಪಾತದಲ್ಲಿ ಬಿಯಾಸ್ ನದಿ ಅಕ್ಷರಶಃ ಒಂದು thread ನಂತೆ ಗೋಚರಿಸುತ್ತಿತ್ತು.
ಅಂಥ ಹಾದಿಯಲ್ಲಿ ಅನೇಕ ಊರುಗಳು ಬಂದುಹೋದವು.ಕೆಲವೊಮ್ಮೆ ದೊಡ್ಡ ಊರುಗಳು.ಕೆಲವೊಮ್ಮೆ ನಾಲ್ಕೈದು 
ಮನೆಗಳಿದ್ದರೆ ಅದೇ ಒಂದು ಊರು.ಒಮ್ಮೊಮ್ಮೆಂತೂ ಬೆಟ್ಟದ ಮೇಲಿನ ಈ ರಸ್ತೆಗಳು ಎಷ್ಟು ಕಿರಿದಾಗಿರುತ್ತಿದ್ದವೆಂದರೆ,
ತಿರುವಿನಲ್ಲಿ ಸ್ವಲ್ಪ ಎಡವಟ್ಟಾದರೂ ಸಾಕು;ಡ್ರೈವರ್ ಸಾಹೇಬ ಎಲ್ಲಿ ರಸ್ತೆಯಂಚಿನ ಮನೆಯೊಳಗೇ ಬಸ್ಸು ನುಗ್ಗಿಸಿಬಿಟ್ಟಾನೆಂದು 
ಗಾಬರಿಯಾಗುತ್ತಿತ್ತು.

ಅಂಥ ಹತ್ತಾರು ಗಂಟೆಗಳ ಪ್ರಯಾಣದ ಬಳಿಕ ಅಂತೂ ಇಂತೂ ಮನಾಲಿ ತಲುಪಿದ್ದಾಯಿತು.ಆದರೆ ತಲೆಯಿಂದ 'ಕಿಂಗ್ ಫಿಷರ್' 
ಗುಂಗು ಇನ್ನೂ ಇಳಿದಿರಲಿಲ್ಲವಲ್ಲ? ಅದೇ ಜೋಷ್ ನಲ್ಲಿ ಲಕ್ಷುರಿ ಲಾಡ್ಜ್ ಒಂದನ್ನು ಹುಡುಕಿ ರೂಮು ಸೇರಿಕೊಂಡೆವು.
ಫ್ರೆಶ್ಶಾಗಿ ಕಾಲುಗಂಟೆಯಾಗಿತ್ತೋ ಇಲ್ಲವೋ,ಅಷ್ಟರಲ್ಲಿ ರೂಮ್ ಸರ್ವೀಸಿಗೆ ಫೋನು ಮಾಡಿ ಹುಡುಗನನ್ನು ಕರೆಸಿಕೊಂಡು 
ನೀಟಾಗಿ ಕೇಳಿದೆ:"ಏನಪ ತಮ್ಮ, ಏಸಿ ಇಲ್ಲವೋ..?"
ಅಷ್ಟೇ;ರೂಮ್ ಸರ್ವೀಸಿನ ಹುಡುಗ ಗಾಬರಿಯಿಂದ ಕಕ್ಕಾಬಿಕ್ಕಿಯಾಗಿ ನನ್ನನ್ನು ತೀರ ಯಾವುದೋ ಲೋಕದ ಪ್ರಾಣಿಯಂತೆ 
ಮೇಲೆ ಕೆಳಗೆ ನೋಡತೊಡಗಿದ್ದ!

Style of living ಅನ್ನುವ ಸೂಕ್ಷ್ಮ ಎಂಥದ್ದು ನೋಡಿ: ಬದುಕಿನಲ್ಲಿ ನೂರು ರೂಪಾಯಿಗಳ ಕಟ್ಟೂ ಕೂಡ  ಸರಿಯಾಗಿ ನೋಡಿರದ 
ಕೆಳಮಧ್ಯಮ ವರ್ಗದ ಹುಡುಗನಿಗೆ ದಿಢೀರಂತ ಕೋಟಿ ರೂಪಾಯಿಗಳ ಲಾಟರಿ ಹೊಡೆಯಿತೆಂದು ಠಾಕುಠೀಕಾಗಿ ಡ್ರೆಸ್ಸು 
ಮಾಡಿಕೊಂಡು ಸೀದಾ ಫೈವ್ ಸ್ಟಾರ್ ಹೋಟೆಲ್ಲಿಗೆ ನುಗ್ಗಿದರೆ ಏನು ಬಂತು? ಅಲ್ಲಿ ಆತ ಊಟದ ಮೆನುವನ್ನು ಹ್ಯಾಗೆ ಆರ್ಡರ್ 
ಮಾಡುತ್ತಾನೆ ಮತ್ತು ಯಾವ order ನಲ್ಲಿ ಆರ್ಡರ್ ಮಾಡುತ್ತಾನೆ ಎಂಬುದನ್ನು ಗಮನಿಸುತ್ತಿದ್ದಂತೆಯೇ ಅಲ್ಲಿನ experienced 
ಮಾಣಿ ಥಟ್ಟಂತ ನಿರ್ಧರಿಸಿಬಿಡುತ್ತಾನೆ:ಐಲಾ! ಹುಡುಗನಿಗೆ ರಾತ್ರೋರಾತ್ರಿ ಲಾಟರಿ ಹೊಡೆದುಬಿಟ್ಟಿದೆ..

ಮನಾಲಿಯಲ್ಲಿ ನನ್ನ ಪರಿಸ್ಥಿತಿಯೂ ಕೂಡ ಇದಕ್ಕಿಂತ ತೀರ ಭಿನ್ನವಾಗೇನೂ ಇರಲಿಲ್ಲ.
ಯಾಕೆಂದರೆ,ಮನಾಲಿಯಲ್ಲಿ AC ಯನ್ನು ಕೇಳುವ ಮುಠ್ಠಾಳ ಕೆಲಸವನ್ನು ಯಾವನೂ ಮಾಡಲಾರ!
ಸರಿ,ಅಷ್ಟಾಯಿತಲ್ಲ?ಮೂರ್ನಾಲ್ಕು ದಿನ ಅಲ್ಲೆಲ್ಲ ಸಿಕ್ಕಂತೆ ತಿರುಗಾಡಿದ್ದಾಯಿತು.ಹಾಗೆ ಅಲ್ಲಿದ್ದ ಸಮಯದಲ್ಲಿ ಮೂರನೇ ದಿನದ ರಾತ್ರಿ
ಹೋಟೇಲಿಗೆ ಹಿಂದಿರುಗಿದಾಗ ರೂಮಿನಲ್ಲೇ ಬಿಟ್ಟುಹೋಗಿದ್ದ ನನ್ನ ಮೊಬೈಲಿಗೆ ಶ್ರೀಯುತರ ಕರೆಯೊಂದು ಬಂದಿತ್ತು.ಆದರೆ 
attend ಮಾಡುವವರು ದಿಕ್ಕಿಲ್ಲದೇ  ಶ್ರೀಯುತರ ಫೋನ್ ಕಾಲು ಮಿಸ್ಡ್ ಕಾಲ್ ಲಿಸ್ಟಿನಲ್ಲಿ ತಣ್ಣಗೆ ಕುಳಿತಿತ್ತು.ಅದನ್ನು 
ನೋಡಿಯಾದ ಮೇಲೆ ನಾನೇ ಅವರಿಗೆ ವಾಪಸ್ಸು ಕರೆ ಮಾಡೋಣ ಅಂತ ಅಂದುಕೊಂಡೆನಾದರೂ ಆವತ್ತಿನ ರೋಮಿಂಗ್ 
ದರಕ್ಕೆ ಭಯಬಿದ್ದು ಅವರಿಗೆ ಕರೆ ಮಾಡಲಿಲ್ಲ.ಇಷ್ಟಕ್ಕೂ ಶ್ರೀಯುತರು ನನಗೆ ತುಂಬ ಪರಿಚಿತರು ಮತ್ತು ಅಂಥ ಏನಾದರೂ 
ತುರ್ತು ಇದ್ದಿದ್ದರೆ ಮತ್ತೇ ಕರೆ ಮಾಡುತ್ತಿದ್ದರು ಅಂತ ನನ್ನಷ್ಟಕ್ಕೆ ನಾನೇ ಸುಳ್ಳು ಸಮಾಧಾನ ಪಟ್ಟುಕೊಂಡೆ.
ಎರಡು ದಿನ ಬಿಟ್ಟು ಬೆಂಗಳೂರಿಗೆ ಮರಳಿದಾಗ ದಿಗ್ಭ್ರಮೆಯಾಗಿತ್ತು.  

ಶ್ರೀಯುತರು ಯಾವುದೋ ದೇವಸ್ಥಾನಕ್ಕೆಂದು ಕುಟುಂಬ ಸಮೇತರಾಗಿ ಹೊರಟಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿತ್ತು. 
ಅವರ ಪತ್ನಿ ಮತ್ತು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.ಆದರೆ ಶ್ರೀಯುತರನ್ನು ಮಾತ್ರ 
ಜವರಾಯ ಬಂಧಿಸಿಬಿಟ್ಟಿದ್ದ.ಅಂಥ ಸಮಯದಲ್ಲೇ ಶ್ರೀಯುತರ ಪತ್ನಿ,ತಮ್ಮ ಪತಿಯ ಮೊಬೈಲಿನಲ್ಲಿ ನನ್ನ ನಂಬರ್ ಹುಡುಕಿ
ಸಹಾಯಕ್ಕೆಂದು ನನ್ನ ಮೊಬೈಲಿಗೆ ಫೋನಾಯಿಸಿದ್ದರಂತೆ.ನಾನು ಸಿಕ್ಕಿರಲಿಲ್ಲ.ಇಲ್ಲಿಗೆ ಬಂದಮೇಲೆ ಯಾವ ಸಬೂಬೂ 
ಹೇಳುವಂತಿರಲಿಲ್ಲ.ಸೀದಾ ಅವರ ಮನೆಗೆ ಹೋಗಿ ಶ್ರೀಯುತರ ಹೆಂಡತಿ ಮತ್ತು ಮಕ್ಕಳ ಜೊತೆ ಕೆಲಹೊತ್ತು ಮೌನವಾಗಿ
ಕಳೆದು ಮನೆಗೆ ವಾಪಸ್ಸಾದೆ.

ದಿನಗಳು ಉರುಳತೊಡಗಿದ್ದವು.ಯಥಾಪ್ರಕಾರ ಕೆಲಸ,ಊಟ,ನಿದ್ದೆ. ಸುಮಾರು ಇಪ್ಪತ್ತು ದಿನಗಳಾಗಿರಬಹುದು.
ಆವತ್ತೊಂದು ದಿನ ಮಧ್ಯಾನ್ಹ ನಾನು ಕೆಲಸ ಮಾಡುವ ಆಫೀಸಿಗೆ ನನ್ನನ್ನು  ಹುಡುಕಿಕೊಂಡು ಆಕೆ ಬಂದಿದ್ದರು;
ಶ್ರೀಯುತರ ಎರಡನೇ ಪತ್ನಿ!

ಹಾಗೆ ನೋಡಿದರೆ,ನನಗಿಂತ ಎರಡು ಪಟ್ಟು ವಯಸ್ಸಿನ ಶ್ರೀಯುತರು ತುಂಬ ಸಜ್ಜನ ವ್ಯಕ್ತಿ. ಹುಡುಗರೊಂದಿಗೆ ಹುಡುಗರಾಗಿ,
ಹಿರಿಯರೊಂದಿಗೆ ಹಿರಿಯರಾಗಿ ಲವಲವಿಕೆಯ ಜೀವನ ಸವೆಸಿದವರು.ಅಂಥ ವ್ಯಕ್ತಿಗೆ ಬದುಕಿನ ಅದ್ಯಾವ ತಿರುವಿನಲ್ಲಿ 
ಎರಡೆರಡು ಮದುವೆಯಾಗುವ ಸಂದರ್ಭ ಅದು ಹ್ಯಾಗೆ ಬಂತೋ ಗೊತ್ತಿಲ್ಲ.ಒಟ್ಟಿನಲ್ಲಿ ಆಗಿಬಿಟ್ಟಿದ್ದರು.ವಿಚಿತ್ರವೆಂದರೆ,
ಈ ಇಬ್ಬರೂ ಸಂಭಾವಿತ ಪತ್ನಿಯರು ಇಷ್ಟು ವರ್ಷಗಳ ಅವಧಿಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗುವ,ಪರಿಚಿತರಾಗುವ
ಸಂದರ್ಭ ಬಂದಿರಲೇ ಇಲ್ಲ;ಇವರೂ ಸೃಷ್ಟಿಸಿಕೊಂಡಿರಲಿಲ್ಲ.ಶ್ರೀಯುತರು ತಿಂಗಳಲ್ಲಿ ಕೆಲದಿನ ಮೊದಲ ಹೆಂಡತಿ ಜೊತೆಗೂ,
ಕೆಲದಿನ ಎರಡನೇ ಪತ್ನಿ ಜೊತೆಗೂ ಇದ್ದು ಜೀವನ ಸಾಗಿಸುತ್ತಿದ್ದರು.ಆಮೇಲೆ ಇಬ್ಬರು ಪತ್ನಿಯರಿಗೂ ಈ ವಿಷಯ ಗೊತ್ತಾದರೂ
ಪರಸ್ಪರ ಭೇಟಿ ಮಾಡಲಿಲ್ಲ ಮತ್ತು ಯಾರಿಗೂ ಹೇಳಿಕೊಳ್ಳುವ ಹಾಗಿರಲಿಲ್ಲ. But they are happy..

ಇವೆಲ್ಲ ವಿಷಯಗಳು ನನಗೆ ಗೊತ್ತಿದ್ದವು.ಆದರೆ ಇವೆಲ್ಲ ನನಗೆ ಗೊತ್ತಿವೆ ಅನ್ನುವ ವಿಷಯ ಮಾತ್ರ ಆ ಇಬ್ಬರು ಪತ್ನಿಯರಿಗೆ
ಗೊತ್ತಿರಲಿಲ್ಲ.ಸುಮ್ಮನೇ ಯಾವುದೋ ಸಂದರ್ಭದಲ್ಲಿ  ಶ್ರೀಯುತರು ತಮ್ಮ ಎರಡನೇ ಪತ್ನಿಯನ್ನು ನನಗೆ ಪರಿಚಯ 
ಮಾಡಿಸಿ ತಮ್ಮ ಎಂಥದೋ ಸಂಬಂಧಿಯೆಂದು ಪರಿಚಯಿಸಿದ್ದರು.ಅಂಥ ಶ್ರೀಯುತರ ಎರಡನೇ ಪತ್ನಿ ದಿಢೀರಂತ ನನ್ನ 
ಎದುರಿಗೇ ಬಂದು ಕುಳಿತಿದ್ದಾರೆ ಮತ್ತು ಕೇಳುತಿದ್ದಾರೆ:
"ನೋಡಿ,ಮೂರು ವಾರ ಆಯಿತು.ಯಾಕೋ ಶ್ರೀಯುತರು ನನ್ನ ಫೋನೇ ಎತ್ತುತ್ತಿಲ್ಲ.ಬ್ಯುಸಿ ಇರಬಹುದೇನೋ ಅಂತ 
ಅಂದುಕೊಂಡೆ.ಆದರೆ ಅವರಾದರೂ ಸ್ವಲ್ಪ ಬಿಡುವು ಮಾಡಿಕೊಂಡು ಫೋನ್ ಆದರೂ ಮಾಡಬೇಕಲ್ವ? ಚಿಂತೆ ಆಗ್ತಿದೆ.
ನಿಮಗೇನಾದರೂ ಅವರು ಸಿಕ್ಕರೆ ಕೊಂಚ ಮಾತನಾಡಲು ಹೇಳ್ತೀರ..?"

ಹಾಗಂತ ಆಕೆ ತನ್ನ ಕಳವಳವನ್ನು ನಿಯಂತ್ರಿಸುತ್ತ,ಅಕ್ಷರಶಃ ಅಂಗಲಾಚುವಂತೆ ಕೇಳುತ್ತಿದ್ದರೆ,ನನಗರಿವಿಲ್ಲದೇ ನಾನು 
ಸಣ್ಣಗೆ ನಡುಗತೊಡಗಿದ್ದೆ.ಏನಂತ ಹೇಳುವದು?ಹ್ಯಾಗೆ ಹೇಳುವದು? 
ಹಾಗೆ ನಾನು ಅದೆಷ್ಟು ಹೊತ್ತು blank ಆಗಿ ಕುಳಿತಿದ್ದೆನೋ,ಅದ್ಯಾವಾಗ ಸಾವರಿಸಿಕೊಂಡು ಅವರಿಗೆ ಏನಂತ ಹೇಳಿ 
ಕಳಿಸಿದೆನೋ ನನಗೆ ಮರೆತುಹೋಗಿದೆ.ಆದರೆ ನಾನು ಹೇಳುತ್ತಿದ್ದುದನ್ನೆಲ್ಲ ಆಕೆ ಸಮಾಧಾನದಿಂದ ಕೇಳಿಸಿಕೊಂಡು,
ತಾನು ಶ್ರೀಯುತರ ಪತ್ನಿ ಎಂಬುದನ್ನು ತೋರಿಸಿಕೊಳ್ಳುವಂಥ ಯಾವ Clue ಕೂಡ ಕೊಡದೇ ಅತ್ಯಂತ ಗಂಭೀರವಾಗಿ
ಎದ್ದು ಹೋದ ಚಿತ್ರ ಮಾತ್ರ ಮಿದುಳಮನೆಯಲ್ಲಿ ಸ್ಥಾಪಿತವಾಗಿ ಹೋಗಿದೆ.ಆವತ್ತು ಆಕೆ ಅಲ್ಲಿಂದ ಎದ್ದು ಹೋಗುತ್ತಿರುವಾಗ
ಆಕೆ ಇಡುತ್ತಿದ್ದ ಹೆಜ್ಜೆ ಮತ್ತು ತೆಗೆದುಕೊಳ್ಳುತ್ತಿದ್ದ ಉಸಿರು-ಇವೆರಡರಲ್ಲಿ ಯಾವುದು ಹೆಚ್ಚು ಭಾರವಾಗಿತ್ತು ಎಂಬುದು 
ನನ್ನಂಥವನಿಗೆ ಲೆಕ್ಕಕ್ಕೇ ಸಿಗದ ಶಬ್ದವಿಲ್ಲದ ಒಂದು ಸ್ತಬ್ದಚಿತ್ರವಾಗಿ ಇವತ್ತಿಗೂ ಉಳಿದುಬಿಟ್ಟಿದೆ...
---

ಕನಸು-ಕನವರಿಕೆ 1st B'day : ಕೋಟಿ ಲಿಂಗಗಳಲ್ಲಿ ಒಂದು ಬೋಡಿಲಿಂಗ! 

ಫೋಟೋ: ಅಂತರ್ಜಾಲ 

ಪ್ರೀಯರೇ,
'ಕನಸು-ಕನವರಿಕೆ'ಗೆ ಇವತ್ತು (ಎಪ್ರಿಲ್ 14) ಒಂದು ವರ್ಷ.ಒಂದು ಕಡೆ ಇದು ಖುಷಿಯ ಸಂಗತಿಯಾದರೆ ಮತ್ತೊಂದೆಡೆ ಇಷ್ಟಕ್ಕೆಲ್ಲ ಅನೌನ್ಸ್ ಮಾಡಬೇಕಾ ಅನ್ನುವದು ಮುಜುಗರದ ಸಂಗತಿ.
"ಈ ಒಂದು ವರ್ಷ ಹ್ಯಾಗೆ ಕಳೆಯಿತೋ ಗೊತ್ತಾಗಲಿಲ್ಲ.." ಅಂತೆಲ್ಲ ಹೇಳಲಾರೆ.ಒಂದು ವರ್ಷ ಕಳೆಯಲು ಎಷ್ಟು ಸಮಯ ಬೇಕೋ,ಅಷ್ಟೇ ಸಮಯ ಕಳೆದುಹೋಗಿದೆ.ಇನ್ನೂ ಪ್ರಾಮಾಣಿಕವಾಗಿ ಹೇಳುವದಾದರೆ,ಒಂದು ವರ್ಷದಲ್ಲಿ ಏಳು ಕತೆ,ಒಂಭತ್ತು ಕವಿತೆ ಮತ್ತು ಆರು ಪ್ರಬಂಧ ಅಂದರೆ ತುಂಬ impressive result ಅಲ್ಲ.ಹಾಗಾಗಿ ನನ್ನಷ್ಟಕ್ಕೆ ನಾನೇ ನನ್ನ ಬ್ಲಾಗಿಗೆ average rating ಕೊಟ್ಟುಕೊಂಡಿದ್ದೇನೆ.ಆದರೆ ಒಂದಂತೂ ನಿಜ:ಈ ಸಮಯದಲ್ಲಿ ಬರೆದ ಎಲ್ಲ ಬರಹಗಳು ಮತ್ತು ನಿಮ್ಮ ಪ್ರತಿಕ್ರಿಯೆಗಳು ವೈಯಕ್ತಿಕವಾಗಿ ನನಗೆ ಸಾಕಷ್ಟು ಖುಷಿಯನ್ನು ನೀಡಿವೆ.ಎಲ್ಲೋ ಹಾಳೆಯ ಮೂಲೆಯಲ್ಲಿ ಕಳೆದುಹೋಗಬಹುದಾಗಿದ್ದ ಕನಸಿಗೆ ಫ್ರೇಮು ಸಿಕ್ಕಿದೆ.
ಆ ಮೂಲಕ ಕೋಟಿ ಲಿಂಗಗಳಲ್ಲಿ  ಬೋಡಿಲಿಂಗವೂ ಮುಗುಳ್ನಕ್ಕಿದೆ! 
ಬೇರೆ ಏನು ಹೇಳಲಿ? ಬರವಣಿಗೆಯ ಖುಷಿ ಎಲ್ಲಕ್ಕೂ ಮೀರಿದ್ದು.ಪ್ರತೀ ಸಲ ಬ್ಲಾಗಿಗೆ air ಮಾಡುವಾಗ 'ಸರಿ ಇದೆ' ಅನಿಸುವ ಎಲ್ಲ ಬರಹಗಳೂ ನಂತರದ ದಿನಗಳಲ್ಲಿ ನನಗೇ ಸಪ್ಪೆ ಅನಿಸಿವೆ.ಹೀಗಾಗಿ ಪ್ರತಿಸಲ ಇನ್ನಷ್ಟು ಚೆಂದ ಮಾಡಿ ಬರೆಯುವ ಉತ್ಸಾಹ ಜಾರಿಯಿದ್ದೇ ಇರುತ್ತದೆ ಅಂತ ಹೇಳಬಲ್ಲೆ.ನಿಜ,ಬೆಂಗಳೂರು-ಭಾರತವೊಂದೇ ಅಲ್ಲ,ಜಗತ್ತಿನ ಅನೇಕ ದೇಶಗಳಿಂದ ಸ್ನೇಹಿತರು ಸಿಕ್ಕಿದ್ದಾರೆ.ಪ್ರೀತಿಯಿಂದ ಎಲ್ಲರಿಗೆಂದು ಮಾಡಿದ ಮಾಡಿದ ಅಡುಗೆಯನ್ನು ತಾನೊಬ್ಬಳೇ ಕುಳಿತು ತಿನ್ನುತ್ತಿರುವ ಹೆಣ್ಣುಮಗಳ ಪರಿಸ್ಥಿತಿ ಮತ್ತು ಓದುಗರಿಲ್ಲದ ಬ್ಲಾಗು-ಎರಡೂ ಸಮಾನ ದುಃಖಗಳೇ!
I am blessed.ಬ್ಲಾಗಿನಲ್ಲಿರುವ ಎಲ್ಲ ಬರಹಗಳ ಬಗ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ,ಇಂಥದೊಂದು ಬ್ಲಾಗ್ ಬಗ್ಗೆ ಇನ್ನೊಬ್ಬರಿಗೆ ವಿವರ ಹಂಚಿದ,ಹರಡಿದ ಮತ್ತು ಏನನ್ನೂ ಹೇಳದೇ ತಮ್ಮ ಪಾಡಿಗೆ ತಾವು ಮನದಲ್ಲೇ ಓದಿ ಖುಷಿಪಟ್ಟ ಎಲ್ಲ ಓದುಗ ಮನಸುಗಳಿಗೆ ನನ್ನ ಅನಂತ ಪ್ರೀತಿ ಮತ್ತು ಧನ್ಯವಾದಗಳು ಸಲ್ಲುತ್ತವೆ..
-RJ