Monday, October 28, 2013

ನಿಂತ ನೀರಿಗೆ ಸುಖವಿಲ್ಲ!

ಚಿತ್ರ:ಅಂತರ್ಜಾಲ



ಅತ್ತ,
ಮಾತಿಗೆ
ಮಾತು
ಮಥಿಸಿ
ಮಳೆ ತರಿಸಿದೆವು
ಅಂತ
ಎರಡು ಮೋಡಗಳು
ಮಾತನಾಡಿಕೊಳ್ಳುತ್ತಿದ್ದರೆ-

ಇತ್ತ,
ಅಂಗಳದಲ್ಲಿ
ಹರಿಯುತ್ತಿದ್ದ ನೀರಿನಲ್ಲಿ
ಕಾಗದದ ದೋಣಿ
ತಯಾರಿಸುತ್ತಿರುವ
ಪೋರನ
ಅವಸರದ ಬಗ್ಗೆ
ಮಳೆರಾಯನಿಗೆ
ಕೆಟ್ಟ ಕುತೂಹಲವಿದೆ.

ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ
ಅಲ್ಲಿಂದಲೇ ವಿಪ್ಲವ ಶುರು.
 
ನೀರಿನಲ್ಲಿ
ಅಲೆಯ ಉಂಗುರ
ಹುಡುಕಲು ಹೊರಟವನಿಗೆ
ಶಕುಂತಳೆಯ
ಉಂಗುರ ದಕ್ಕಿದರೆ
ನುಂಗಲಾಗದ
ಮೀನಿನ ತಪ್ಪೇ?
ಗುರಿಯಿಡಬಹುದೇ ಕಣ್ಣಿಗೆ?
ಗುರಿಯಿಡಬಹುದೇ ಹೆಣ್ಣಿಗೆ?
   
ಅತ್ತ ಇತ್ತಗಳ
ಮಧ್ಯೆಯೇ
ಈ ಕವಿತೆಗೊಂದು
ಉಪಸಂಹಾರ ಮಾಡಿಬಿಡಿ.
ಸದ್ಯಕ್ಕೆ
ಕಪ್ಪೆಯಾಗಿರುವ
ಶಪಿತ ಸುಂದರಿಗೊಂದು 
ಧ್ವನಿವರ್ಧಕ ಕೊಟ್ಟುಬಿಡಿ:
ಇಲ್ಲೀಗ
ಎಷ್ಟು ಶಾಪಗಳೋ
ಅಷ್ಟೇ ವಿಮುಕ್ತಿಗಳು..
-

Thursday, October 10, 2013

ಮಾಹೆಯಾನ



Photo: Internet


ಬೆಳಗಿನ ಆರೂವರೆ. 
ಗಡಿಯಾರದ 
ಅಲಾರಾಂ
ನಿಲ್ಲಿಸುತ್ತಿದ್ದಂತೆ
ಮೇಲಿನ ಮನೆಯಲ್ಲಿ 
ಕೊಬ್ಬರಿ ಕುಟ್ಟುವ ಸದ್ದು.

ಏಳು ಪಿಳ್ಳೆಗಳೊಂದಿಗೆ
ಠೀವಿಯಿಂದ 
ರಸ್ತೆಗಿಳಿದ
ಕೋಳಿಯ ಪುಕ್ಕ
ಇದ್ದಕ್ಕಿದ್ದಂತೆ
ಬೆದರಿ ನಿಮಿರಿವೆ.

Hold on,
ಶಿಖರದಲ್ಲಿರುವ 
ಕೋಗಿಲೆ 
ಅಳಬುರಕ ಪಕ್ಷಿಯಲ್ಲ;
ಗೊಂದಲವಿರುವದು
ಸಂಶಯದ ಅನುರಣನದಲ್ಲಿ.

ಪರಾಗಸ್ಪರ್ಶ,ಪ್ರಸರಣ
ಮತ್ತು ಪ್ರಜನನ 
ಎಲ್ಲವೂ ಎಷ್ಟು 
ಸ್ಪಷ್ಟ,ಸರಳ,ನೇರ.
ಒಂದು ಮಾತಿಲ್ಲ
ಕತೆಯಿಲ್ಲ
ಮುಖಾಮುಖಿಯಿಲ್ಲ.
ಆದರೂ, 
ತುತ್ತತುದಿ ಎಲೆಗೂ 
ಪಾತಾಳದ ಬೇರಿಗೂ
ವರ್ಣತಂತುಗಳ ಮುಲಾಜಿದೆ.

ಹುಷಾರು,
ಇಲ್ಲಿನ ಬೆಂಕಿಯಿಂದ 
ಏಳುವ ಕಿಡಿಗಳಿಗೆ
ಮಡಿಯಿಲ್ಲ,ಮೈಲಿಗೆಯಿಲ್ಲ.
ವ್ಯರ್ಥ ವಾದದಿಂದ
ದೂರವಿರುವದೂ ಒಂದು ಕಲೆ. 

ತನ್ನ ಸುತ್ತಲೂ 
ಮೋಹದ 
ವರ್ತುಲ ಹೆಣೆಯುವ 
ಹುಡುಗಿಗೆ ಈಗ 
ತಿಂಗಳ ಮಾಹೆಯಾನ. 
ಹುಷಾರು ತಪ್ಪಿ
ನೀರಲ್ಲಿ ನೆನೆಸಿಟ್ಟ 
ಶರಟಿನೊಳಗೆ ಪೆನ್ನಿದೆ 
ಅದರೊಳಗೂ ಕಲೆಯಿದೆ.

ಬಹುಶಃ 
ಇವತ್ತಲ್ಲ ನಾಳೆ  
ಲಿಟ್ಮಸ್ ಟೆಸ್ಟು ಮುಗಿಯಬಹುದು..
-