Saturday, April 23, 2016

ಮೀನಿಗೊಂದು ಭಾಷೆ, ಊರಿಗೊಂದು ಸಂವಹನ!


"Can we speak in flowers? 
It will be easier for me to understand.."

ಹಾಗಂತ ಮೊನ್ನೆ ಗೆಳತಿಯೊಬ್ಬಳು ಮೆಸೇಜ್ ಕಳಿಸಿದ್ದಳು. ತಕ್ಷಣಕ್ಕೆ ಇದ್ಯಾವದಪ್ಪ ಹೊಸ ಭಾಷೆಅಂತ ಗೊಂದಲವುಂಟಾಗಿತ್ತು. ಆದರೆ ಮರುಕ್ಷಣವೇ 'ವಾಹ್ಅಂತ ಅನಿಸಿತ್ತು. ನಯೀರಾ ವಾಹೀದ್ ಅನ್ನುವ ಕವಿಯಿತ್ರಿಯ ಸಾಲುಗಳು ಜಗತ್ತಿನಲ್ಲಿನ ಮಾತನಾಡುವ ಭಾಷೆಗಳ ಪೈಕಿ ಮಾತನಾಡದ ಭಾಷೆಗಳೂ ಇವೆ ಅಂತ ಸೂಚಿಸಿದ್ದವು. ಮಾತು ಎಷ್ಟು ನಿಜವೋ ಗೊತ್ತಿಲ್ಲ: ಕವಿತೆಗೆ ಮುನ್ನ ಕವಿ ದೃಶ್ಯ ಹಿಡಿಯಬೇಕಂತೆ. ಬರೆದಾದ ಮೇಲೆ ಕವಿಯೇ ಅದೃಶ್ಯವಾಗಿಬಿಡಬೇಕಂತೆ. ಬಹುಶಃ  ನಯೀರಾ ಸಂಕೋಚದ ಹೆಣ್ಣುಮಗಳು ಅಂತ ಕಾಣುತ್ತದೆಯಾಕೆಂದರೆ 
ಒಂದೆರೆಡು ಕವಿತೆ ಬರೆದವರ ಫೋಟೋ ಕೂಡ ಎಲ್ಲೆಂದರಲ್ಲಿ ಸಿಗುವ ಕಾಲವಿದು. ಅಂಥಾದ್ದರಲ್ಲಿ 'Salt' ಅನ್ನುವ ಕವನ ಸಂಕಲನವನ್ನು ಹೊರತಂದು ಜಗತ್ತಿನಲ್ಲೆಡೆ ಸಂಚಲನ ಮೂಡಿಸಿದ ನಯೀರಾಳ ಒಂದೇ ಒಂದು ಫೋಟೋ ಅಥವಾ ಒಂದು ಚಿಕ್ಕ ವಿವರ ಪಡೆಯಲೂ 
ಸಾಕಷ್ಟು ಕಷ್ಟಪಡಬೇಕು. ಆಕೆಯ ಇದೇ ಸಂಕೋಚವನ್ನು ಇಷ್ಟಪಡುವ ಓದುಗರ ಪೈಕಿ ಕೆಲವರು ಆಕೆಯನ್ನು ಆಫ್ರಿಕನ್ ಕವಿಯಿತ್ರಿ ಅಂತ ಹೇಳಿಕೊಂಡರೆಇನ್ನು ಕೆಲವರು ಆಕೆ ನೈಜೀರಿಯನ್ ಅಂತ ಹೇಳುತ್ತಾರೆ. 
                                              *
   ಸಂವಹನ ಕಲೆಯೆಂಬುದು ನಾಗರಿಕತೆ ನಮಗೆ ನೀಡಿರುವ ಬಹುದೊಡ್ಡ ಕೊಡುಗೆ. ಲಿಪಿ ಇಲ್ಲಿ ನೆಪಕ್ಕೆ ಮಾತ್ರ. ತಮಾಷೆ ನೋಡಿ: ಬಹುಶಃ ನಾನು ಆಗ ತಾನೇ ಹೈಸ್ಕೂಲು ಮುಗಿಸಿದ್ದೆ ಅಂತ ಕಾಣುತ್ತದೆ. ಗುಂಡಗಿನ ಅಕ್ಷರ ಬರೆಯುತ್ತಿದ್ದ ನನಗೆ ಕಾಲೇಜಿನಲ್ಲಿ ವಿಚಿತ್ರ ಬೇಡಿಕೆಯಿತ್ತು. ಕ್ಲಾಸಿನ ಅನೇಕ ಪ್ರೇಮಿಗಳಿಗೆ ಪ್ರೇಮಪತ್ರ ಬರೆದುಕೊಡುತ್ತಿದ್ದೆ. ಹುಡುಗಹುಡುಗಿಯರಿಬ್ಬರೂ ತಮ್ಮ ತಮ್ಮ ಪ್ರೇಮಿಗಳಿಗೆಂದು ನನ್ನ ಹತ್ತಿರ ಪತ್ರ ಬರೆಸುತ್ತಿದ್ದರು. ಬೇಡಿಕೆ ಇದ್ದಿದ್ದು ಅಕ್ಷರಗಳಿಗಲ್ಲ. ನನ್ನ ಪತ್ರಗಳಲ್ಲಿರುತ್ತಿದ್ದ ಗೂಢಲಿಪಿಗೆಇಂಕ್ ಪೆನ್ನಿನಲ್ಲಿ ಶಾಯಿಯ ಬದಲಿಗೆ ಈರುಳ್ಳಿಯ ರಸವನ್ನು ತುಂಬಿ ಬರೆಯುತ್ತಿದ್ದೆ. ಮೇಲ್ನೋಟಕ್ಕೆ ಅದೊಂದು ಬರೀ ಬಿಳಿ ಹಾಳೆ. ಪತ್ರ ಪಡೆದ ವ್ಯಕ್ತಿ ಅದೇ ಪತ್ರಕ್ಕೆ ಮೋಂಬತ್ತಿಯ ಉರಿಯಿಂದ ಶಾಖ ಕೊಟ್ಟಾಗ ಬಿಳಿ ಹಾಳೆಯಲ್ಲಿಂದ ಕಂದು ಬಣ್ಣದ ಅಕ್ಷರಗಳು ಎದ್ದು ಬರುತ್ತಿದ್ದವು. ಅದೇ ರೀತಿ ಖಾಲಿ ಪತ್ರವನ್ನು ನೀಟಾಗಿ ಇಸ್ತ್ರಿ ಮಾಡಿದ್ದರೂ ಅಲ್ಲಿಂದ ಪ್ರೇಮ ಜಿನುಗುತ್ತಿತ್ತು. ಆವತ್ತಿಗೆ ನಮಗೆಲ್ಲ ಇದೊಂದು ಸಂವಹನ. ವಾಟ್ಸಾಪ್ಮೇಲ್ಸ್ಕೈಪ್ ಇರದ ದಿನಗಳಲ್ಲಿ ನಮಗೆ ನಾವೇ ಸಿದ್ಧಿಸಿಕೊಂಡಿದ್ದ ಒಂದು encryption. ನೆನೆಸಿಕೊಂಡರೆ ಇವತ್ತು ಅದೆಲ್ಲ ಮಜವಾಗಿ ಕಾಣುತ್ತದೆ. ಪ್ರೇಮದ ಭಾಷೆಗೆ ಲಿಪಿ ಒಂದು ನೆಪ ಮಾತ್ರ ಅನ್ನುವದೊಂದೇ ಸತ್ಯವಾಗಿ ತೋರುತ್ತದೆ.

   ಹಾಗೆ ನೋಡಿದರೆ ಭಾಷೆ ಮತ್ತು ಸಂವಹನ ಕಲೆ ಬಗ್ಗೆ ನಾವು ಎಷ್ಟೆಲ್ಲ ಮಾತನಾಡುತ್ತೇವೆ. ಪಟ್ಟುಹಿಡಿದು ಸರ್ವೇ ಮಾಡಿ ಇಡೀ ಜಗತ್ತಿನಲ್ಲಿ ಹತ್ತಿರ ಹತ್ತಿರ ಏಳು ಸಾವಿರ ಭಾಷೆಗಳಿವೆ ಅಂತೆಲ್ಲ ಲೆಕ್ಕ ಹಾಕುತ್ತೇವೆ. ಆದರೆ ಅವೆಲ್ಲ ಭಾಷೆ ಪ್ರಾಪಂಚಿಕ ವ್ಯವಹಾರಕ್ಕೆ ಸಂಬಂಧಿಸಿದ್ದು ಅನ್ನುವದನ್ನೇ ಮರೆತು ಬಿಡುತ್ತೇವೆ. ಯಾಕೆಂದರೆ  ಇಡೀ ಜಗತ್ತಿನ ಮನುಷ್ಯರಿಗೆ ತಮ್ಮ ತಮ್ಮ ಮೂಲಭೂತ ಅವಶ್ಯಕತೆಗಳನ್ನು ತೋರ್ಪಡಿಸಲು ಯಾವುದೇ ಭಾಷೆಯ ಹಂಗು ಬೇಕಿಲ್ಲ. ಡಚ್ ಭಾಷೆಯಲ್ಲಿನ ನಗು ಕನ್ನಡದ ನಗುವಿಗಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ನಗುಅಳುಪ್ರೀತಿಹಸಿವುಸಿಟ್ಟುಕಾಮನೆ, ನಿದ್ರೆಗಳನ್ನು ವ್ಯಕ್ತಪಡಿಸಲು ನಿಸರ್ಗವೇ ಒಂದು ಯೂನಿಕೋಡನ್ನು ತಯಾರಿಸಿ ಕೊಟ್ಟುಬಿಟ್ಟಿದೆ. ಹಾಗಾಗಿ ಇಂಗ್ಲೀಶ್ಫ್ರೆಂಚ್ಕನ್ನಡಹಿಂದಿ, ಜಾವಾಯೂನಿಕ್ಸ್ ಮುಂತಾದ ಭಾಷೆಗಳೆಲ್ಲ ಕೇವಲ ಐಹಿಕ ಪ್ರಪಂಚಕ್ಕೆ ಮಾತ್ರ ಬೇಕಿರುವಂಥದ್ದು.

   ಇಷ್ಟಕ್ಕೂ  ಸಂವಹನ ಕಲೆ ಒಬ್ಬೊಬ್ಬರಿಗೆ ಒಂದು ರೀತಿಯಲ್ಲಿ ಸಿದ್ಧಿಸಿರುತ್ತದೆ. ಅದರಂತೆ ಸಂವಹನದ ಭಾಷೆ ಕೂಡ ತನ್ನದೇ ಆದ ರೀತಿಯಲ್ಲಿ ಜಗತ್ತಿನೊಂದಿಗೆ ಸ್ಪಂದಿಸುತ್ತದೆ. ಈಗ ತಾನೇ ಹುಟ್ಟಿದ ಮಗು ಎಂಥೆಂಥ ಭಾಷೆಯಲ್ಲಿ ಮಾತನಾಡುತ್ತದೋಎರಡು ಮೋಡಗಳ ಮೌನ ಸಂವಾದದಿಂದ ಹುಟ್ಟುವ ನದಿ ಎಲ್ಲೆಲ್ಲೋ ಹರಿಯುತ್ತ ಸಾಗರ ಸೇರುವದರೊಳಗಾಗಿ ಎಷ್ಟು ಭಾಷೆಗಳನ್ನು ಕಲಿತಿರಬಹುದೋ ಗೊತ್ತಿಲ್ಲ. ಇಲ್ಲಿ ನದಿಗೂ ಸುತ್ತಲಿನ ಜಗತ್ತಿಗೂ ಯಾವುದೇ ಐಹಿಕ ವ್ಯವಹಾರವಿಲ್ಲ. ಹೀಗಾಗಿ ನದಿ ತನ್ನ ಪಯಣದಲ್ಲಿ ತನ್ನದೇ ಭಾಷೆ ಮಾತನಾಡುತ್ತದೆ. ಇಳಿಜಾರಿನಲ್ಲಿ ಧುಮುಕುತ್ತದೆ, ಕಂದರದಲ್ಲಿ ಭೋರ್ಗರೆಯುತ್ತದೆ, ಸಮತಟ್ಟಿನಲ್ಲಿ ಪ್ರಶಾಂತವಾಗುತ್ತದೆ.  

   ನಮ್ಮ ಪಯಣದಲ್ಲಿ ನಾವು ಏನೆಲ್ಲ ಮಾಡುತ್ತೇವೆ. ಕಾರು ಹೊಂದಿಸುತ್ತೇವೆ. ಪೆಟ್ರೋಲ್ ಹೊಂದಿಸುತ್ತೇವೆ. ಮಧ್ಯೆ ಪಂಕ್ಚರ್ ಆದರೆ ಇರಲೆಂದು ಸ್ಟೆಪ್ನಿ ಇಡುತ್ತೇವೆ. ಮಾರ್ಗದ ಮಧ್ಯೆ ಒಂಚೂರು ಸೆಕೆ ಆದರೂ ಕಳವಳ, ಮಳೆ ಬಂದರೂ ಕಳವಳ. ಅಯ್ಯೋಎಷ್ಟು ರಂಪಾಟ ಸ್ವಾಮೀ. ಇಲ್ಲಿ ನೋಡಿ ಬ್ರಹ್ಮಾಂಡದಲ್ಲಿ ಏನೆಲ್ಲ ಶಿಸ್ತುಬದ್ಧವಾಗಿ ನಡೆಯುತ್ತದೆ. ಸೂರ್ಯ ಪ್ರತಿದಿನ ನಿಗದಿತ ಸಮಯದಲ್ಲಿ ಏಳುತ್ತಾನೆನಿಗದಿತ ಜಾಗದಲ್ಲಿ ಬೀಳುತ್ತಾನೆ. ಎಲ್ಲಿಂದಲೋ ಬಂದು ಭೂಮಿಯ ಪಕ್ಕದಲ್ಲೇ ಸವರಿಕೊಂಡು ಹೋಗುವ ಕ್ಷುದ್ರ ತುಣುಕೊಂದು ಸುತ್ತಲಿನ ಜಗತ್ತಿಗೆ ಮುಜುಗರವಾಗದಂತೆ ಒಂದು ಶಿಸ್ತಾದ ಅಂತರವನ್ನು ಕಾಪಾಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಮುದುಡುವ ಮರಬೇಸಿಗೆಯ ಮುನ್ನವೇ ಸಡಗರಗೊಳ್ಳುತ್ತದೆ. ಇದು ನಿಸರ್ಗದ ಭಾಷೆ. ಪ್ರತಿ ಊರಿಗೂ ಇಂಥದ್ದೊಂದು ಭಾಷೆಯನ್ನು ನಿಸರ್ಗವೇ ಕಲಿಸುತ್ತದೆ. ಬೆಂಗಳೂರಿಗೂ ತನ್ನದೇ ಆದ ಒಂದು ಮೋಹಕ ಭಾಷೆಯಿದೆ. ಅದು ಬೆಂಗಳೂರು ತಾನು ಹುಟ್ಟುವಾಗಲೇ ಕಲಿತಿರುವಂಥದ್ದು. ಮಧ್ಯೆ ನಾವು ನಮ್ಮ ಪ್ರಾಪಂಚಿಕ ಭಾಷೆಯನ್ನು ಬೆಂಗಳೂರಿಗೆ ಕಲಿಸಿದೆವು. ಮರ ಕಡಿದು ಸೇತುವೆ ಕಟ್ಟಿ, ಕೆರೆ ಹುಲ್ಲಿನ ಮೇಲೆ ಸಿಮೆಂಟು ಹಾಸಿಹೊರಗಡೆಯಿದ್ದ ವಾತಾನುಕೂಲವನ್ನು ಮನೆಯೊಳಗೇ ತಂದಿಟ್ಟುಕೊನೆಗೂ ಬೆಂಗಳೂರಿಗೆ ನಮ್ಮ ಭಾಷೆಯನ್ನು ಕಲಿಸಿಯೇ ಬಿಟ್ಟೆವು. ಈಗ ನಮ್ಮದು ಎಲ್ಲದಕ್ಕೂ ಕಾತರ. ಎಲ್ಲದಕ್ಕೂ ತಳಮಳ.

   ಹೀಗೆ ಎದುರಿಗೆ ಸಿಕ್ಕ ಲೋಕಕ್ಕೆಲ್ಲ ನಮ್ಮದೇ ಭಾಷೆ ಕಲಿಸುತ್ತ ಸಾಗುತ್ತಿರುವ ಹೊತ್ತಿನಲ್ಲೇ ಊರಾಚೆ ಅಲ್ಲೊಂದು ಫಲವತ್ತಾದ ಹೊಲ ಕಾಣಿಸುತ್ತದೆ. ಸದ್ಯಅದಕ್ಕಿನ್ನೂ ನಾವು ನಮ್ಮ ಭಾಷೆಯನ್ನು ಕಲಿಸಿಲ್ಲ. ಹೀಗಾಗಿ ಹೊಲದ ತುಂಬ ಸೂರ್ಯಕಾಂತಿಯ ಬೆಳೆಯಿದೆ. ಪ್ರತಿದಿನ ಸೂರ್ಯಕಾಂತಿಯ ಹೂಗಳು ಸೂರ್ಯನೊಂದಿಗೆ ಮಾತಿಗಿಳಿಯುತ್ತವೆ. ಚಂದ್ರನೊಂದಿಗೆ ಮುನಿಸು ತೋರುತ್ತವೆ. ಹೀಗಿರುವಾಗ ಅಪರೂಪಕ್ಕೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ. ಸುತ್ತಲೂ ಕತ್ತಲು ಕವಿಯುತ್ತದೆ. ಸರಿಯಾದ ಅದೇ ಸಮಯಕ್ಕೆ ಯಾವನೋ ಅಬ್ಬೇಪಾರಿ ಪುಟ್ಟದೊಂದು ಸೂರ್ಯಕಾಂತಿ ಹೂವಿನ ದಂಟನ್ನು ಮುರಿದು ಹೋಗಿದ್ದಾನೆ. ಗ್ರಹಣದ ಬಳಿಕ ಹೂಗಳಿಗೂ ಸೂರ್ಯನಿಗೂ ಯಥಾಪ್ರಕಾರ ಸಂವಾದ ನಡೆಯಬೇಕು. ಆದರೆ ಸೊಂಟ ಮುರಿದುಕೊಂಡಿರುವ  ಪುಟ್ಟ ಹೂವಿನ ಗತಿ ಏನುಪ್ರಕೃತಿಯ ಭಾಷೆಯನ್ನು ಅಷ್ಟಿಷ್ಟು ಕಲಿತಿರುವ ಹಾಯ್ಕು ಕವಿ ಮೆಲ್ಲನೇ ಹಾಯ್ಕು ಕಟ್ಟತೊಡಗುತ್ತಾನೆ:

ಖಗ್ರಾಸ ಸೂರ್ಯಗ್ರಹಣ. 
ನೂರಾರು ಸಖಿಯರ ಮಧ್ಯೆ 
ಸೂರ್ಯಕಾಂತಿಯೊಂದು 
ದಿಕ್ಕುತಪ್ಪಿ ಕಳವಳಗೊಂಡಿದೆ.. 

   ಭೂಮಿಯ ಮೇಲಿನ ಹೂವಿನ ಭಾಷೆ ಥರದ್ದಾದರೆ ಸಾಗರದಡಿಯ ಮೀನಿನ ಭಾಷೆ ಇನ್ನೊಂದು ರೀತಿಯದ್ದು. ಒಂದು ಮೀನು ಚುಂಬನದ ಮೂಲಕ ಮಾತುಕತೆ ನಡೆಸಿದರೆ, ಇನ್ನೊಂದು ಮೀನು ಬಣ್ಣ ಬದಲಿಸುವದನ್ನೇ ತನ್ನ ಸಂವಹನ ಕಲೆಯನ್ನಾಗಿಸಿಕೊಳ್ಳುತ್ತದೆ. ಪ್ರೀತಿಗಾಗಿ ಬಣ್ಣ ಬದಲಿಸುವಿಕೆದ್ವೇಷಕ್ಕಾಗಿ ಬಣ್ಣ ಬದಲಿಸುವಿಕೆಯನ್ನು ಕೇವಲ ನಾವಷ್ಟೇ ಅಲ್ಲ, ನಿಜದ ಅರ್ಥದಲ್ಲಿ ಮೀನುಗಳೂ ಮಾಡುತ್ತವೆ. ಸಾಮಾನ್ಯವಾಗಿ ನೀರಿನಲ್ಲಿನ ಜೀವಿಗಳು ಆಹಾರಕ್ಕಾಗಿ ಚಿಕ್ಕಪುಟ್ಟ ಮೀನುಗಳನ್ನು ಕಬಳಿಸುತ್ತವೆ. ಪುಟ್ಟ ಮೀನಿನ ಕಣ್ಣಿನ ಭಾಗದ (ಅಂದರೆ, front side) ಕಡೆಯಿಂದ ಮೀನನ್ನು ನುಂಗಲು ಬರುತ್ತವೆ. ಹೀಗೆ ನುಂಗಲು ಬರುವ ವೈರಿಯಿಂದ ಪಾರಾಗಲೆಂದು 'ಪ್ಯಾರಟ್' ಹೆಸರಿನ ಮೀನಿಗೆ ನಿಸರ್ಗವೇ ನಿಗೂಢ 
ಭಾಷೆಯೊಂದನ್ನು ಕಲಿಸುತ್ತದೆ. ವೈರಿ ತನ್ನೆದುರಿಗೆ ಬರುತ್ತಿದೆ ಅಂತನಿಸುತ್ತಲೇ  ಪ್ಯಾರಟ್ ಮೀನು ತನ್ನ ಬಾಲದ ಮೇಲೊಂದು ಕಪ್ಪುಬಣ್ಣದ ಕೃತಕ ಕಣ್ಣೊಂದನ್ನು ಸೃಷ್ಟಿಸಿಕೊಳ್ಳುತ್ತದೆ. ಕೃತಕ ಕಣ್ಣನ್ನು ನೋಡಿದ ವೈರಿ, "ಓಹ್, ಇದರ ಬಾಯಿ ಇಲ್ಲಿದೆ.." ಅಂತ ಬಾಲದ ಕಡೆಯಿಂದ ಬಾಯಿ ಹಾಕಲೆಂದು ಅತ್ತ ಧಾವಿಸುತ್ತಿದ್ದಂತೆಯೇ ಪ್ಯಾರೆಟ್ ಮೀನು ಮುಂದಿನಿಂದ ಪರಾರಿಯಾಗಿರುತ್ತದೆ. ಇದು ಮೀನಿನ ಭಾಷೆ.

   ಹೀಗೆ ನೀರಿನಿಂದ ಹೊರ ಬರುತ್ತಿದ್ದಂತೆಯೇ ಬೆಂಗಳೂರಿನ ಬೇಸಿಗೆಗೆ ಗಂಟಲು ಒಣಗುತ್ತದೆ. ಕರೆಂಟು ಹೋದ ನಡುರಾತ್ರಿಯಲ್ಲಿ ಗಾಳಿಗೆಂದು 
ಬಾಲ್ಕನಿಯಲ್ಲಿ ನಿಂತಾಗ ನಕ್ಷತ್ರ ಕಾಣಿಸುವದಿಲ್ಲ. ಚಿಕ್ಕವರಿದ್ದಾಗ ಫಳಫಳಿಸುತ್ತಿದ್ದ  ತಾರೆಗಳು ಎಲ್ಲಿ ಹೋದವು ಅಂತೆಲ್ಲ ಇಲ್ಲದ ದುಃಖ ತೋರ್ಪಡಿಸುವ ಹೊತ್ತಿನಲ್ಲೇ ಬೇಸಿಗೆ, ನೀರಡಿಕೆ ಮತ್ತು ತಾರೆಗಳ ಕುರಿತಂತೆ ಓದಿದ್ದ ಜಾಪಾನಿ ಹಾಯ್ಕುವೊಂದು ಕಣ್ಣೆದುರಿಗೆ ಬಂದು ನಿಲ್ಲುತ್ತಿದೆ: 

ಒಂದು ಬೇಸಿಗೆಯ ರಾತ್ರಿ.
ಬಾಯಾರಿದ ನಕ್ಷತ್ರಗಳು 
ಬಾವಿಗಿಳಿದಿವೆ!   

ಬೆಂಗಳೂರಿನಲ್ಲೀಗ ಬಾವಿಗಳೂ ಇಲ್ಲ, ನಕ್ಷತ್ರಗಳೂ ಇಲ್ಲ. ಇರುವದೆಂದರೆ ದಾಹವೊಂದೇ. 

(ವಿಜಯಕರ್ನಾಟಕದಲ್ಲಿ 23.04.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
ಪತ್ರಿಕೆಯಲ್ಲಿನ page layoutನಲ್ಲಿ ಉಂಟಾದ ತಾಂತ್ರಿಕ ಅಡಚಣೆಯ ಕಾರಣಕ್ಕಾಗಿ ಕಾಲಂ ಫೋಟೋ ಮತ್ತು ಲಿಂಕ್ ಕೊಡಲು ಸಾಧ್ಯವಾಗದೇ ಲೇಖನವನ್ನೇ ಇಲ್ಲಿ ಪೋಸ್ಟ್ ಮಾಡಿದ್ದೇನೆ.