Wednesday, June 21, 2017

ಏನು ಗೊತ್ತಿಲ್ಲವೋ ಅದನ್ನೇ ನಾವು ಗಟ್ಟಿಯಾಗಿ ನಂಬುತ್ತಿದ್ದೇವೆ

ಣಿಯ ಆರನೇ ಪುಣ್ಯಸ್ಮರಣೆ.
ಸಮಾಧಿಯತ್ತ ಚಲಿಸುತ್ತಿರುವ ಕುಟುಂಬ
ಧಣಿಯ ನಾಯಿ ಮುಂದೆಮುಂದೆ
ಧಣಿಯ ಕುಟುಂಬ ಹಿಂದೆಹಿಂದೆ

   ಅಷ್ಟೇ. ಹಾಯ್ಕು ಅಷ್ಟಕ್ಕೇ ನಿಂತು ಬಿಡುತ್ತದೆ. ಇಲ್ಲಿ ಧಣಿ ಯಾರು, ಆತ ಹೇಗಿದ್ದ, ಯಾಕೆ ಸತ್ತ 
ಅಂತನ್ನುವದನ್ನೆಲ್ಲ ನಾವೇ ಕಲ್ಪಿಸಿಕೊಳ್ಳಬೇಕೇ ಹೊರತು ವಿವರಣೆ ಇಲ್ಲಿ ನಿಷಿದ್ಧ. ಸುಮ್ಮನೇ ಯೋಚಿಸುತ್ತಿದ್ದೇನೆ. ಬಹುಶಃ ಈ ಲೋಕದಲ್ಲಿ ಎಲ್ಲವೂ ಬದಲಾಗುತ್ತದೆ ಅಥವಾ ಏನೂ 
ಬದಲಾಗುವದಿಲ್ಲ ಅಂತ ಈ ಹಾಯ್ಕು ಹೇಳುತ್ತಿದೆಯೇ? ನಿನ್ನೆ ಸ್ನೇಹಿತರೊಬ್ಬರು ಸಿಕ್ಕಿದ್ದರು. 
ಯೋಗದಲ್ಲಿ ಹಲವಾರು ಮೆಟ್ಟಿಲುಗಳನ್ನು ಏರಿದಂಥವರು. ಇತ್ತೀಚೆಗೆ ವಿಧಾನಸೌಧದ ಎದುರಿಗೆ 
ಅರ್ಧನಿಮಿಷಗಳ ಕಾಲ ಶೀರ್ಷಾಸನ ಹಾಕಿ ಗಿನ್ನೆಸ್ ಸಾಧನೆ ಮಾಡಿದ ಎರಡು ಸಾವಿರ 
ಯೋಗಪಟುಗಳಲ್ಲಿ ಇವರೂ ಇದ್ದರು. ಆ ದಿನದ ಫೋಟೋ ತೋರಿಸುತ್ತ ಹೇಗೆ ಇವತ್ತು ಯೋಗ ಅನ್ನುವದು ಕಾಂಡಿಮೆಂಟ್ಸ್,  ಗೂಡಂಗಡಿಗಳಂತೆ ಗಲ್ಲಿಗೊಂದರಂತೆ ತಲೆಯೆತ್ತುತ್ತಿವೆ ಅಂತ ಬೇಸರದಿಂದ ಹೇಳುತ್ತಿದ್ದರು.

   ನಿಜ, ಇಂಥ ಎಷ್ಟೋ ಅಂಗಡಿಗಳನ್ನು ನಾನು ನೋಡಿದ್ದಿದೆ. 'ಯೋಗ ಮತ್ತು ಧ್ಯಾನ ಕೇಂದ್ರ' ಅಂತ ಬೋರ್ಡು ಹಾಕಿಕೊಂಡಿರುತ್ತಾರೆ. ಮಜ ಅಂದರೆ, ಇದೊಂಥರ ಹಣ್ಣಿನಂಗಡಿಯವನು 'ತಾಜಾಹಣ್ಣು ಮತ್ತು ಬಾಳೆಹಣ್ಣಿನ ಅಂಗಡಿ' ಅಂತನ್ನುವ ಫಲಕ ತೂಗುಹಾಕಿದಂತೆ! ಯೋಗ ಅನ್ನುವದೇ ಒಂದು ಆಲದ ಮರ. ಅದಕ್ಕೆ ಎಂಟು ಬಿಳಲುಗಳು. ಅವು ಯೋಗದ ಅಷ್ಟಾಂಗಗಳು. ಧ್ಯಾನ ಅನ್ನುವದೂ ಈ ಅಷ್ಟಾಂಗಗಳ ಪೈಕಿ ಒಂದು. ಮಿಕ್ಕ ಏಳು ಅಂಗಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಮತ್ತು ಸಮಾಧಿ. ಹೀಗಿರುವಾಗ, 'ಧ್ಯಾನ'ವನ್ನು ಯೋಗದಿಂದ ಪ್ರತ್ಯೇಕಿಸಿ ‘ಯೋಗ ಮತ್ತು ಧ್ಯಾನ ಕೇಂದ್ರ' ಅಂತ ಬೋರ್ಡು ಹಾಕಿಕೊಂಡರೆ ಅದು ಎಷ್ಟು ಅಸಂಬದ್ಧ.

   ಬುದ್ಧ ಕೂಡ ಅಸಂಬದ್ಧನೇ. ಆತ ಯೋಗದ ಇನ್ನಿತರ ಮಜಲುಗಳ ಬಗ್ಗೆ ಹೇಳಲಿಲ್ಲ. ಆತನ ಗಮನವಿದ್ದಿದ್ದು ಕೇವಲ ಅಂತರಂಗ ಯೋಗದ ಕಡೆಗೆ. ಧ್ಯಾನದ ಕಡೆಗೆ. ದೇಹದ ಉಸಿರಾಟ ಮತ್ತು ಯೋಚನಾಕ್ರಮದ ಮೇಲೆ ಯಾರು ನಿಯಂತ್ರಣ ಸಾಧಿಸುತ್ತಾರೋ ಅವರೇ ಧ್ಯಾನಿಗಳು ಅಂತ ಬುದ್ಧ ಘೋಷಿಸಿದ. ಚೀನೀಯರು ಈ ಕ್ರಮವನ್ನು ಇನ್ನಷ್ಟು ಉತ್ತಮಗೊಳಿಸಿದರು. ಯಾವುದಕ್ಕೂ ಅಂಟಿಕೊಳ್ಳದೇ 'ಬಂದದ್ದೆಲ್ಲ ಬರಲಿ' ಅಂತನ್ನುವ ಧಾಟಿಗೆ ಹೊಂದಿಕೊಂಡ ಭಾರತದ ಧ್ಯಾನಗುರು ಚೀನಾದಲ್ಲಿ 'ಚಾನ್' ಗುರು ಅನಿಸಿಕೊಂಡ. ಜಾಪಾನಿನಲ್ಲಿ ಜೆನ್ ಗುರು ಅನಿಸಿಕೊಂಡ. 

   ವಿಚಿತ್ರವೆಂದರೆ, ಈ ಗುರುವಿಗೆ ಭುಜಕೀರ್ತಿಗಳಿರಲಿಲ್ಲ. ಕ್ಯಾಲೆಂಡರುಗಳಲ್ಲಿನ ತಲೆಯ ಹಿಂದೆ 
ಇರುವಂಥ ಪ್ರಭಾವಳಿಗಳಿರುವದಿಲ್ಲ. ಆತ ಸೀದಾಸಾದಾಮನುಷ್ಯ. ಇಂಥದೇ ಒಬ್ಬ ರೈತ 
ಜಾಪಾನಿನಲ್ಲಿದ್ದ. ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ 
ಆತನ ಪ್ರೀತಿಯ ಕುದುರೆ ಮನೆಬಿಟ್ಟು ಓಡಿಹೋಗುತ್ತದೆ. ಕುದುರೆಯಿಲ್ಲದೇ ಒಬ್ಬನೇ ಹೊಲದಲ್ಲಿ 
ಕೆಲಸ ಮಾಡುತ್ತಿದ್ದಾಗ ಪಕ್ಕದ ಹೊಲದವನು ಬಂದು ಕಳೆದುಹೋದ ಕುದುರೆ ಬಗ್ಗೆ ಮಾತನಾಡುತ್ತ, 
'ನಿನಗೆ ಆಘಾತವಾಗಿರಬೇಕಲ್ಲ?' ಅಂತ ರೈತನಲ್ಲಿ ಸಂತಾಪ ವ್ಯಕ್ತಪಡಿಸುತ್ತಾನೆ. ಅದಕ್ಕೆ ರೈತ, 
'ಹೌದಾ, ಇರಲಿಬಿಡು' ಅಂತ ಉತ್ತರಿಸುತ್ತಾನೆ. ಮೂರು ದಿನ ಬಿಟ್ಟು ನೋಡಿದರೆ, ಕಳೆದುಹೋದ 
ಕುದುರೆ ಮೂರು ಹೊಸ ಕುದುರೆಗಳೊಂದಿಗೆ ಮನೆಗೆ ಮರಳಿರುತ್ತದೆ. ಪಕ್ಕದ ಹೊಲದವನು, 
'ಈ ಸಲ ನಿನಗೆ ಭಾರೀ ಖುಷಿಯಾಗಿರಬೇಕಲ್ವ?' ಅಂತ ಕುದುರೆಗಳನ್ನು ನೋಡುತ್ತ ಕೇಳುತ್ತಾನೆ. 
ಈ ರೈತ ಮಾತ್ರ ತಣ್ಣಗೇ 'ಹೌದಾ, ಇರಲಿಬಿಡು' ಅಂತ ಉತ್ತರಿಸುತ್ತಾನೆ. ಮರುದಿನ ರೈತನ ಮಗ ಹೊಸ 
ಕುದುರೆಯನ್ನೇರಲು ಹೋಗಿ ಬಿದ್ದು ಕಾಲುಮುರಿದುಕೊಳ್ಳುತ್ತಾನೆ. ಪಕ್ಕದ ಮನೆಯವನು ಸಂತಾಪ 
ವ್ಯಕ್ತಪಡಿಸಲು ಹೋದಾಗ ಈ ನಮ್ಮ ರೈತನದು ಮತ್ತದೇ ಉತ್ತರ: 
‘ಹೌದಾ, ಇರಲಿಬಿಡು!’

   ನಾಲ್ಕು ದಿನ ಕಳೆದ ಮೇಲೆ ಊರಿಗೆ ರಾಜಭಟರು ಬರುತ್ತಾರೆ. ಇಷ್ಟವಿದೆಯೋ ಇಲ್ಲವೋ ಅಂತ 
ಕೇಳದೇ ಮನೆಗೊಬ್ಬರಂತೆ ತಲಾ ಒಬ್ಬೊಬ್ಬ ವ್ಯಕ್ತಿಯನ್ನು ಸೈನ್ಯಕ್ಕೆ ಅಂತ ಹೆಸರು ನೊಂದಾಯಿಸಿಕೊಂಡು ಒತ್ತಾಯದಿಂದ ಕರೆದುಕೊಂಡು ಹೋಗುತ್ತಿರುತ್ತಾರೆ. ಆದರೆ ರೈತನ ಮಗ ಕಾಲು ಮುರಿದುಕೊಂಡಿರುವದನ್ನು ನೋಡಿ ಆತನನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಈ ಸಲವೂ ಪಕ್ಕದ ಮನೆಯವನು ಬಂದು ರೈತನನ್ನು ಅಭಿನಂದಿಸುತ್ತ, ಹೇಗೆ ಎಲ್ಲ ಒಳ್ಳೆಯದಾಗುತ್ತಿದೆಯೆಂದು ವಿವರಿಸುತ್ತಿದ್ದಾಗ, ಈ ರೈತ ಎಂದಿನಂತೆ ಮಾಮೂಲಿನಂತೆ ಉತ್ತರಿಸುತ್ತಾನೆ: ಹೌದಾ, ಇರಲಿಬಿಡು!

   ಇಲ್ಲಿ ಎಲ್ಲ ಒಳ್ಳೆಯದಾಗಲಿಕ್ಕಿಲ್ಲ. ಆದರೆ ಎಲ್ಲ ಬದಲಾಗುತ್ತದೆ ಎಂದು ಒಬ್ಬ ಧ್ಯಾನ ಗುರುವಿಗೆ 
ಮಾತ್ರ ಗೊತ್ತಿದೆ. ಇಂಥದ್ದೇ ಬದಲಾವಣೆಗಳನ್ನು ಬುದ್ಧನೂ ಗಮನಿಸಿದ್ದ. ಒಂದು ದಿನ ಎಂದಿನಂತೆ 
ಆತ ಪ್ರವಚನದಲ್ಲಿದ್ದಾಗ ಆಸ್ತಿಕನೊಬ್ಬ ತನ್ನ ಸಂದೇಹ ಹೇಳಿಕೊಳ್ಳಲೆಂದು ಎದ್ದುನಿಂತ. 
ಎಂಥ ಸಂದಿಗ್ಧತೆ ನೋಡಿ: ಈ ಆಸ್ತಿಕನೋ ತನ್ನ ಒಂದಿಡೀ ಜೀವಮಾನವನ್ನೆಲ್ಲ ಭಗವಂತನ 
ಸೇವೆಯಲ್ಲಿ ತೊಡಗಿಸಿಕೊಂಡವನು. ಜೀವಮಾನದ ಗಳಿಕೆಯನ್ನೆಲ್ಲ ದೇವರ ಸೇವೆಗೆಂದು 
ಮುಡಿಪಾಗಿರಿಸಿದವನು. ಅಂಥವನಿಗೆ ಇದ್ದಕ್ಕಿದ್ದಂತೆ ಇವತ್ತು ಗುಮಾನಿ ಬಂದುಬಿಟ್ಟಿದೆ. 
ಅಕಸ್ಮಾತ್, ಹಾಗೊಂದು ವೇಳೆ ಜಗತ್ತಿನಲ್ಲಿ ದೇವರೇ ಇಲ್ಲದೇ ಹೋದರೆ?

   ನಿಜಕ್ಕೂ ಭಯಾನಕ. ಪ್ರತಿದಿನ ಪೂಜೆಗೆಂದು ಹತ್ತು ನಿಮಿಷ ಎತ್ತಿಡುವ ಆಸ್ತಿಕನಿಗೆ ಇಂಥದೊಂದು ಅನುಮಾನ ಬಂದರೆ ತೊಂದರೆಯೇನಿಲ್ಲ. ಸಂಕಟಬಂದಾಗ ಮಾತ್ರ ವೆಂಕಟರಮಣ ಅನ್ನುವವನಿಗೂ ಈ ಗುಮಾನಿ ಕಾಡಿದರೆ ಅದೇನೂ ದೊಡ್ಡದಲ್ಲ. ಆದರೆ ಜೀವನಪೂರ್ತಿ ಭಗವಂತನಿಗೆ ಎಲ್ಲವನ್ನೂ ಸಮರ್ಪಣಗೈದವನಿಗೆ ಈ ಅನುಮಾನ ನಿಜಕ್ಕೂ ಭಯಾನಕ. ಅಂತೆಯೇ ಆಸ್ತಿಕ ಬುದ್ಧನಲ್ಲಿ ಸಂದೇಹ ನಿವಾರಿಸಿಕೊಳ್ಳಲೆಂದು ಎದ್ದು ನಿಂತಿದ್ದಾನೆ. 

'ಇಲ್ಲ. ಈ ಲೋಕದಲ್ಲಿ ಭಗವಂತ ಇಲ್ಲವೇ ಇಲ್ಲ!' 
ಹಾಗಂತ ಬುದ್ಧ ಹೇಳುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಗುಸುಗುಸು. ಕೆಲವರಿಗೆ ಸಿಟ್ಟು. ಕೆಲವರಿಗೆ 
ಹತಾಶೆ. ಎದ್ದು ನಿಂತ ಆಸ್ತಿಕನಿಗೋ ಪರಮ ನಿರಾಳತನ. ಆತ ಬುದ್ಧನಿಗೆ ನಮಸ್ಕರಿಸಿ ಎದ್ದು 
ಹೋಗುತ್ತಾನೆ. ಮರುದಿನ ಮತ್ತೊಂದು ಪ್ರವಚನ. ಈ ಸಲ ಚಾರ್ವಾಕನೊಬ್ಬನಿಗೆ ಗುಮಾನಿ ಬಂದಿದೆ. 
ಜೀವನಪೂರ್ತಿ ಭಗವಂತನ ಅಸ್ತಿತ್ವವನ್ನು ಧಿಕ್ಕರಿಸುತ್ತಲೇ ಬಂದಿರುವ ಈ ಚಾರ್ವಾಕನಿಗೆ 
ಇದ್ದಕ್ಕಿದ್ದಂತೆ ಅನುಮಾನ ಕಾಡತೊಡಗಿದೆ: ಅಕಸ್ಮಾತ್ ಭಗವಂತ ಇರುವದೇ ನಿಜವಾದರೆ? 
ಯಾವತ್ತೂ ಬಾರದ ಚಾರ್ವಾಕ ಇವತ್ತು ಸಂಶಯ ನಿವಾರಣೆಗೆಂದು ಪ್ರವಚನಕ್ಕೆ ಬಂದಿದ್ದಾನೆ.

   'ಹೌದು, ಭಗವಂತ ಇರುವದು ಸತ್ಯ!' ಹಾಗಂತ ಬುದ್ಧ ಹೇಳುತ್ತಲೇ ಚಾರ್ವಾಕ ನಿರಾಳ ಭಾವದಿಂದ ನಿರ್ಗಮಿಸುತ್ತಾನೆ. ಆದರೆ ಅಲ್ಲಿದ್ದ ಸಭಿಕರಿಗೆ ಕೊಂಚ ಗಲಿಬಿಲಿ, ಕೊಂಚ ಬೇಸರ. ನಿನ್ನೆ ತಾನೇ ಈ ಬುದ್ಧ ದೇವರಿಲ್ಲ ಅಂದಿದ್ದ. ಇವತ್ತು ದೇವರಿದ್ದಾನೆ ಅಂತ ಹೇಳುತ್ತಿದ್ದಾನೆ. ಬುದ್ಧನಿಗೆ ಎಲ್ಲೋ ತಲೆಕೆಟ್ಟಿರಬೇಕು ಅಂತ ಅಲ್ಲಿದ್ದ ಸಭಿಕರಿಗೆ ಹೊಸ ಗುಮಾನಿಯೊಂದು ಏಳುತ್ತಲಿದೆ. ಆದರೆ ಬುದ್ಧ ಆಸ್ತಿಕ ಮತ್ತು ನಾಸ್ತಿಕ ಇಬ್ಬರಲ್ಲೂ ಹೊಸ ಯೋಚನೆಯೊಂದನ್ನು ಹುಟ್ಟುಹಾಕಿ ಆ ಮೂಲಕ ಬದಲಾವಣೆಗೆ ನಾಂದಿ ಹಾಡಿದ್ದ ಅಂತ ಹೇಗೆ ವಿವರಿಸುವದು? ಈ ಲೋಕದಲ್ಲಿ ನಮಗೆ ಏನು ಗೊತ್ತಿಲ್ಲವೋ ಅದನ್ನೇ ನಾವು ಗಟ್ಟಿಯಾಗಿ ನಂಬುತ್ತಿದ್ದೇವೆ ಅಂತ ಹೇಗೆ ಅರ್ಥ ಮಾಡಿಸುವದು? 

   ವಿಚಿತ್ರ ನೋಡಿ. ಭಗವಂತನಿದ್ದಾನೆ ಅಂತ ನಂಬಿದ್ದ ಆಸ್ತಿಕನಿಗೆ ಭಗವಂತನ ಬಗ್ಗೆ ಅನುಮಾನ ಹುಟ್ಟುವದೂ, ದೇವರಿಲ್ಲ ಅಂತ ಜೀವಮಾನವಿಡೀ ಸಾಧಿಸಿದ ನಾಸ್ತಿಕನಿಗೆ ದೇವನ ಇರುವಿಕೆಯ ಬಗ್ಗೆ ಆಶಾಭಾವ ಹುಟ್ಟುವದೂ ಏನನ್ನು ಪ್ರತಿನಿಧಿಸುತ್ತಿದೆ? ಇವರೆಲ್ಲ ತಮಗೆ ಯಾವುದರ ಬಗ್ಗೆ ಸಂಪೂರ್ಣ ಅರಿವು ಇರಲಿಲ್ಲವೋ ಅದೆಲ್ಲದರ ಬಗ್ಗೆ ಇಷ್ಟು ದಿನ ನಂಬಿಕೆ ಇರಿಸಿಕೊಂಡಿದ್ದರು ಅಂತಾಯಿತಲ್ಲ? ಬುದ್ಧ ಇದನ್ನೇ ಪಲ್ಲಟ ಮಾಡಿದ. ಕಣ್ಣುಮುಚ್ಚಿ ಯಾವುದನ್ನೂ ನಂಬಬೇಡಿ ಅಂದ!

   ಸದ್ಗುರು ಹೇಳುತ್ತಿದ್ದ ಈ ದೃಷ್ಟಾಂತವನ್ನು ಗಮನಿಸುತ್ತಿದ್ದಾಗ ಈ ಲೋಕದಲ್ಲಿ ನಡೆಯುವ ಬದಲಾವಣೆಗಳ ಚಿತ್ರಣ ನನ್ನ ಕಣ್ಣಮುಂದೆ ಬರುತ್ತಿದ್ದವು.

   ಇದೆಂಥ ಜೋಡಿಯೋ ಗೊತ್ತಿಲ್ಲ. ಜಗಳವಾಗಿಬಿಟ್ಟಿದೆ. ನಿನ್ನೆ ರಾತ್ರಿ ಯಾವುದೋ ಕಾರಣಕ್ಕೆ ಚಾಪೆ 
ಎತ್ತಿಕೊಂಡು ಇನ್ನೊಂದು ಕೋಣೆಗೆ ಹೋಗಿರುವ ಈ ಹೆಂಗಸು ಬೆಳಗಾದರೂ ಹಸನ್ಮುಖಿಯಾಗಿಲ್ಲ. 
ಈತನ ಯಾವ ಕವಿತಾ ಪ್ರಯತ್ನವೂ ಆಕೆಯನ್ನು ಶಮನ ಮಾಡಿದಂತಿಲ್ಲ. ಹೀಗಾಗಿ ಅವಳು ಏಳುವ 
ಮುನ್ನವೇ ಬಾಲ್ಕನಿಯಲ್ಲೊಂದು ಗುಲಾಬಿ ನೆಟ್ಟು ತಪ್ಪೊಪ್ಪಿಗೆಯನ್ನು ಬಿತ್ತಿ ಹೋಗಿರುವನು. 
ಇದನ್ನೆಲ್ಲ ಗಮನಿಸುತ್ತಿರುವ ಲೋಕವು ದೂರದಲ್ಲೆಲ್ಲೋ ತನ್ನದೇ ಧಾಟಿಯಲ್ಲಿ ಚೋದ್ಯವಾಡುತ್ತಿದೆ. 
ಗಾಳಿಗೆ ಬೆದರಿದ ತುಂಬು ಮೋಡವೊಂದು ಸ್ಥಳಾಂತರವಾಗುತ್ತಿದ್ದರೆ, ಹನಿಗಳಿಗಾಗಿ ಕಾತರಿಸುತ್ತಿರುವ 
ಬಯಲಿನ ಖಾಲಿ ಸೀಸೆಯೊಂದು ಅದೇ ಗಾಳಿಯನ್ನು ಆಧರಿಸಿ ಮೋಡದೆಡೆಗೆ ಶಿಳ್ಳೆ ಹಾಕುತ್ತಲಿದೆ. 

   ನಿರಂತರ ಬದುಕಿನಲ್ಲಿ ಆಗೀಗ ಬದಲಾಗುವ ಪ್ರೇಮ, ಮೌನ, ಮುನಿಸುಗಳ ಮೂಡುಗಳನ್ನು ಝಗಮಗಿಸುವ ಹಿನ್ನೆಲೆಯಲ್ಲಿ ಚಿತ್ರಿಸುವ ಹಾಯ್ಕುಕವಿ, ಮುನಿಸಿಕೊಂಡು ಊಟಕ್ಕೆ ಕುಳಿತಿರುವ ಈ ಗಂಡುಹೆಣ್ಣುಗಳ ಬಗ್ಗೆ ಎಷ್ಟೆಲ್ಲ ಹೇಳುತ್ತಿದ್ದಾನೆ:

ನೀರವ ಮೊಂಬತ್ತಿ ರಾತ್ರಿಯೂಟ.
ನಿನ್ನೆಯವರೆಗೂ ಇಬ್ಬರ ಮಧ್ಯೆ ನೂರಾರು ಉದ್ಗಾರವಾಚಕಗಳು; 
ಸದ್ಯಕ್ಕೆ ಮೇಜಿನ ಹೊದಿಕೆಯಲ್ಲಿ ಎಂಭತ್ತಾರು ಚೌಕಗಳು!          

-     
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 21.06.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)   
 

Wednesday, June 7, 2017

ಗುರುವಿನ ಗುಲಾಮನಾಗುವ ತನಕ..

ರ್ಕಾರಿ ಶಾಲೆಯ ಮೊದಲ ದಿನ. 
ಒಂದು ಮಗು ಮಾತ್ರ 
ದಿಗಿಲು, ಧಾವಂತ ಮತ್ತು ಚಿಂತಾಕ್ರಾಂತ.
ಸಮವಸ್ತ್ರ ಅಳತೆಗೆ ತಕ್ಕಂತಿಲ್ಲ  

ಮೊನ್ನೆಯಿಂದ ಶಾಲೆಗಳು ಮತ್ತೇ ಶುರುವಾಗಿವೆ. ಈ ಚೀನೀ ಹಾಯ್ಕು ಸರ್ಕಾರಿ ಶಾಲೆಯ ಸಂಭ್ರಮ, ಸಡಗರ ಮತ್ತು ಧಾವಂತಗಳನ್ನು ಬಿಡಿಸಿಡುತ್ತಲಿದೆ. ನಿಜ, ನಾವೆಲ್ಲ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಇದ್ದಂಥ ಪರಿಸ್ಥಿತಿ ಈಗಿಲ್ಲ. ಶಾಲೆ ಶುರುವಾದ ಮೊದಲ ಎರಡು ದಿನ ನಾವೇ ಪೊರಕೆ ಹಿಡಿದು ಧೂಳು, ಕಸಗಳನ್ನು ಸ್ವಚ್ಛಗೊಳಿಸಬೇಕಿತ್ತು.  ಪ್ರತಿದಿನ ಇಬ್ಬರು ಹುಡುಗರು ಪಾಳಿಪ್ರಕಾರ ವರ್ಷವಿಡೀ ಕಸಗುಡಿಸುತ್ತಿದ್ದರು. ಬಿಸಿ ಊಟ ಇರಲಿಲ್ಲ. ಚಪ್ಪಲಿ, ಸೈಕಲ್ಲುಗಳಿರಲಿಲ್ಲ. ಇದಕ್ಕೆಲ್ಲ ಕಳಸವಿಟ್ಟಂತೆ ಮಾಸ್ತರುಗಳ ರೂಲು ಕಟ್ಟಿಗೆಯ ಹೊಡೆತಕ್ಕೆ ಭಿಡೆಯೂ ಇರಲಿಲ್ಲ! 

   ಇವತ್ತು ಹಾಗೇನಿಲ್ಲ. ಕಸಗುಡಿಸಲು ಆಯಾಗಳಿದ್ದಾರೆ. ಬಿಸಿಯೂಟಕ್ಕೆ ಆಯಾಗಳಿದ್ದಾರೆ. ತಮ್ಮತಮ್ಮ ಅಕಾಡೆಮಿಕ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಪರಿಣಿತರನ್ನೇ  ಶಿಕ್ಷಕವೃತ್ತಿಗೆ ಆಯ್ದುಕೊಳ್ಳಲಾಗುತ್ತದೆ. ಈ ಮಾಸ್ತರುಗಳು ವಿದ್ಯಾರ್ಥಿಗಳ ಮೇಲೆ ಕೈ ಎತ್ತಲು ಹಿಂದೆಮುಂದೆ ನೋಡುತ್ತಾರೆ. ಸ್ವಲ್ಪ ಹೆಚ್ಚುಕಡಿಮೆ ಆದರೆ ಎಲ್ಲಿ ನೌಕರಿಗೇ ಕುತ್ತು ಬಂದೀತು ಅಂತ ಗಾಬರಿಗೊಳ್ಳುತ್ತಾರೆ. 'ಗುರುಪೂರ್ಣಿಮೆ' ದಿನ ಮಕ್ಕಳಲ್ಲಿ ಗುರುವಿನ ಮಹತ್ವ ತಿಳಿಸಲೆಂದು ಈ ಮಕ್ಕಳ ಕೈಲಿ ತಮ್ಮ ಕಾಲು ತೊಳಿಸಿಕೊಳ್ಳುವಂಥ ಸಾಂಕೇತಿಕ ಆಚರಣೆ ಏನಾದರೂ ಮಾಡಿಬಿಟ್ಟರೆ ಮುಗಿಯಿತು, ಎಲ್ಲಿ ಯಾವ ಹಕ್ಕಿನ ಉಲ್ಲಂಘನೆ ಆಗುತ್ತದೋ ಎಂಬ ಡುಗುಡುಗು.                   

  'ತತಃ ಕಿಂ? ತತಃ ಕಿಂ?' ಅಂತ ಪ್ರಶ್ನಿಸುತ್ತಾರೆ ಶಂಕರಾಚಾರ್ಯರು. ಇವತ್ತು ನೀವೇನೋ ಆಗಿರಬಹುದು. ಮಟ್ಟಸವಾದ ಶರೀರ, ಸುಂದರ ಹೆಂಡತಿ, ದುಡ್ಡಿನ ಹೊಳೆಯಲ್ಲಿ ಮೀಯುತ್ತಿರುವ ಮಕ್ಕಳು-ಮೊಮ್ಮಕ್ಕಳು. ನಿಮ್ಮ ಜಾನಭಂಡಾರವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಯಾರೇನೇ ಮಾಹಿತಿ ಕೇಳಿದರೂ ಅದೆಲ್ಲ ನಿಮ್ಮ ನಾಲಿಗೆಯ ತುದಿಯಲ್ಲಿದೆ. ಹೀಗೆ ನಿಮ್ಮ ಸುತ್ತಲೂ ಇಂಥದೊಂದು ಪ್ರಭಾವಳಿ ಮೆತ್ತಿಕೊಂಡಿರುವಾಗ ನಿಮ್ಮ ತಲೆ ನಿಮ್ಮ ಗುರುವಿನ ಪಾದದಡಿಯಲ್ಲಿ ಇಲ್ಲದೇ ಹೋದರೆ ಏನುಪಯೋಗ ಅಂತ ಶಂಕರರು ಝಾಡಿಸುತ್ತಾರೆ. ಬಹುಶಃ ಮನುಷ್ಯನ ಬದುಕಿನಲ್ಲಿ ಗುರುವಿನ ಸ್ಥಾನ ಎಂಥದ್ದು ಅನ್ನುವದಕ್ಕೆ ಇದಕ್ಕಿಂತ ಅತ್ಯುತ್ತಮ ರೂಪಕ ಇನ್ನೊಂದು ಇರಲಿಕ್ಕಿಲ್ಲ. 
                                             *
   ಈ ಜಾಪಾನಿನ ಆರು ವರ್ಷದ ಪೋರನಿಗೆ ಜೂಡೋ ಕಲಿಯಲು ತೀವ್ರ ಆಸಕ್ತಿ. ಆದರೆ ಈತನಿಗೋ ಎಡಗೈ ಇಲ್ಲ. ಹುಟ್ಟಿದ ಎರಡನೇ ವರ್ಷಕ್ಕೇ ಅಪಘಾತವೊಂದರಲ್ಲಿ ಎಡಗೈ ಕಳೆದುಕೊಂಡಿದ್ದಾನೆ. ಹೀಗಿರುವ ಮಗನ ಆಸಕ್ತಿಯನ್ನು ತಂದೆತಾಯಿಗಳು ಬೆಂಬಲಿಸುತ್ತಾರಾದರೂ ಅದು ಕೇವಲ ಪ್ರೀತಿ ಅಷ್ಟೇ. ಒಂದು ಕೈ ಇಲ್ಲದ ಈ ಹುಡುಗ ಹೇಗೆ ಜೂಡೋ ಕಲಿಯಬಲ್ಲ? ಆದರೆ ಪೋರನ ಹಠ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ. ವಿಧಿಯಿಲ್ಲದೇ ಅವರು ಜಾಪಾನಿನ ಶ್ರೇಷ್ಠ 'ಸೆನ್ಸೇಯ್' ಬಳಿ ಮಗನನ್ನು ತಂದು ಬಿಡುತ್ತಾರೆ. (ಜಾಪಾನಿನಲ್ಲಿ ಮಾರ್ಷಲ್ ಕಲೆಯನ್ನು ಕಲಿಸುವ ಗುರುವಿಗೆ 'ಸೆನ್ಸೇಯ್' ಅನ್ನುತ್ತಾರೆ) 

   'ಮುಂದೆ ಏನಾಗಬೇಕು ಅಂದುಕೊಂಡಿದ್ದೀಯ?' ಅಂತ ಸೆನ್ಸೇಯ್ ಪೋರನನ್ನು ಕೇಳುತ್ತಾನೆ. 'ಜಗತ್ತಿನ ಶ್ರೇಷ್ಠ ಜೂಡೋಪಟು ಆಗಬೇಕು' ಅಂತ ಪೋರ ಎತ್ತೆತ್ತಲೋ ನೋಡುತ್ತ ಉತ್ತರಿಸುತ್ತಾನೆ. ಹುಡುಗನ ಧ್ವನಿಯಲ್ಲಿ ರೆಬೆಲ್ ಮತ್ತು ಹಠವನ್ನು ಗಮನಿಸಿದ ಗುರು ಮುಗುಳ್ನಗುತ್ತ ಆಶ್ರಮಕ್ಕೆ ಸೇರಿಸಿಕೊಳ್ಳುತ್ತಾನೆ. ತಾಲೀಮು ಶುರುವಾಗುತ್ತದೆ. ಪ್ರತಿದಿನ ಒದೆಯುವದೊಂದೇ ಕೆಲಸ. ಆರು ತಿಂಗಳ ಬಳಿಕ ಹುಡುಗನಿಗೆ ಒಂದು ವಿಷಯದ ಬಗ್ಗೆ ಕಳವಳ ಕಾಡತೊಡಗುತ್ತದೆ. ತನ್ನ ಜೊತೆ ಜೂಡೋ ಕಲಿಯುತ್ತಿರುವ ಇತರೇ ಮಕ್ಕಳು ಜೂಡೋ ಕಲೆಯ ಐದಾರು ಪಟ್ಟುಗಳಲ್ಲಿ ಪರಿಣಿತರಾಗುತ್ತಿದ್ದಾರೆ. ಆದರೆ ಈ ಗುರು ನೋಡಿದರೆ ತನಗೆ ಒಂದೇ 'ಕಿಕ್' ಮಾತ್ರ ಕಲಿಸುತ್ತಿದ್ದಾನಲ್ಲ? ಆ ದಿನ ಅಭ್ಯಾಸ ಮುಗಿಸಿದ ಹುಡುಗ ಸೆನ್ಸೇಯ್ ಬಳಿ ತನ್ನ ಆತಂಕವನ್ನು ತೋಡಿಕೊಳ್ಳುತ್ತಾನೆ. ಆಗ ಗುರು ನಗುತ್ತ 'ಪರವಾಗಿಲ್ಲ, ಇದೊಂದು ಕಿಕ್ಕನ್ನೇ ನೀನಿನ್ನೂ ಸರಿಯಾಗಿ ಕಲಿತಿಲ್ಲ' ಅಂತ ಸಾಗ ಹಾಕುತ್ತಾನೆ. 

   ಎರಡು ವರ್ಷಗಳ ಬಳಿಕ ಪೋರನಿಗೆ ಮತ್ತದೇ ಬೇಸರ. ತನ್ನ ಜೊತೆಗಿದ್ದ ಹುಡುಗರು ಹತ್ತಾರು ಪಟ್ಟುಗಳಲ್ಲಿ ಈಗಾಗಲೇ ಪಾರಂಗತರಾಗಿದ್ದಾರೆ. ತಾನಿನ್ನೂ ಒಂದೇ 'ಕಿಕ್'ನಲ್ಲಿ ಒದ್ದಾಡುತ್ತಿದ್ದೇನೆ. ಸೆನ್ಸೇಯ್ ಬಳಿ ಮತ್ತದೇ ಹಳೆಯ ನೋವನ್ನು ತೋಡಿಕೊಳ್ಳುತ್ತಾನೆ. "ನೀವು ನನ್ನನ್ನು ಜಗತ್ತಿನ ಶ್ರೇಷ್ಠ ಜೂಡೋಪಟು ಮಾಡುವೆ ಅಂತ ಹೇಳಿದ್ದೀರಿ. ಎರಡು ವರ್ಷಗಳಲ್ಲಿ ಒಂದೇ ಒಂದು ಕಿಕ್ ಬಿಟ್ಟು ಮತ್ತೇನನ್ನೂ ನನಗೆ ಕಲಿಸಿಲ್ಲ.." ಅಂತ ಮೊದಲ ಬಾರಿಗೆ ಗುರುವಿನ ಮೇಲೆ ಸಿಟ್ಟಾಗುತ್ತಾನೆ. ಗುರು ಮಂದಹಾಸ ಬೀರುತ್ತಾನೆ. ಹೋಗಿ ತಾಲೀಮು ಮಾಡು ಅಂತ ಕಣದಲ್ಲಿ ದೂಡುತ್ತಾನೆ. ಹತ್ತು ವರ್ಷಗಳು ಕಳೆಯುತ್ತವೆ. ಆಶ್ರಮದ ಎಲ್ಲ ಹುಡುಗರ ವಿದ್ಯಾಭ್ಯಾಸ ಮುಗಿದಿದೆ. ಈಗ ಶ್ರೇಷ್ಠ ವಿದ್ಯಾರ್ಥಿಯನ್ನು ಆಯ್ಕೆ ಮಾಡುವ ಸಮಯ. ಹಾಗಾಗಿ ಅಲ್ಲಿದ್ದ ಎಂಭತ್ತು ಹುಡುಗರ ಮಧ್ಯೆ ಜೂಡೋ ಕಾಳಗ ಏರ್ಪಡಿಸಲಾಗುತ್ತದೆ. ನಮ್ಮ ಹುಡುಗನಿಗೋ ತಳಮಳ. ಎಲ್ಲರೂ ಹಲವಾರು ಪಟ್ಟುಗಳನ್ನು ಅರೆದು ಕುಡಿದವರು. ತಾನೋ ಕಳೆದ ಹತ್ತು ವರ್ಷಗಳಲ್ಲಿ ಒಂದೇ ಕಿಕ್ ಕಲಿತವನು. ಮೇಲಾಗಿ ಎಡಗೈ ಬೇರೆ ಇಲ್ಲ! 

   ಸ್ಪರ್ಧೆ ಆರಂಭವಾಗುತ್ತದೆ. ಹುಡುಗ ಮೊದಲ ಇಬ್ಬರನ್ನು ನಿರಾಯಾಸದಿಂದ ತನ್ನ ಕಿಕ್ ಉಪಯೋಗಿಸಿ ನೆಲಕ್ಕುರುಳಿಸುತ್ತಾನೆ. ಆಮೇಲೆ ತನಗೇ ಅಚ್ಚರಿಯಾಗುವಂತೆ ಸುಮಾರು ಎದುರಾಳಿಗಳ ಅಸಡ್ಡೆಯನ್ನೋ ಉದಾಸೀನವನ್ನೋ ಅವಕಾಶವನ್ನಾಗಿಸಿ ತನ್ನ ಒಂದೇ ಕಿಕ್ ಕಲೆಯನ್ನು ಉಪಯೋಗಿಸಿ ಗೆಲ್ಲುತ್ತ ಹೋಗುತ್ತಾನೆ. ಆದರೆ ಅಂತಿಮ ಪಂದ್ಯದಲ್ಲಿ ತನ್ನ ಎದುರಾಳಿಯನ್ನು ಕಂಡು ಕೊಂಚ ಅಧೀರನಾಗುತ್ತಾನೆ. ಎಲ್ಲ ರೀತಿಯಿಂದಲೂ ತನಗಿಂತ ಶ್ರೇಷ್ಠ ಮಟ್ಟದಲ್ಲಿ ಕಾದಾಡುತ್ತಿರುವ ಎದುರಾಳಿಯನ್ನು ಮಣಿಸಲಾಗದೇ ಹುಡುಗ ಕಂಗೆಡುತ್ತಿರುವಾಗ, ಈತನ ಪ್ರತಿಸ್ಪರ್ಧಿ ಯಾವುದೋ ಹಂತದಲ್ಲಿ ಒಂದು ತಪ್ಪು ನಡೆಯನ್ನು ಚಲಾಯಿಸಿ ಬಿಡುತ್ತಾನೆ. ಇಂಥ ಸಮಯಕ್ಕಾಗಿಯೇ ಕಾಯುತ್ತಿದ್ದ ಈ ಹುಡುಗ ತನ್ನೆಲ್ಲ ಶಕ್ತಿಯನ್ನು ಧಾರೆಯೆರೆದು ತನ್ನ ಶ್ರೇಷ್ಠ ಕಿಕ್ಕನ್ನು ಚಲಾಯಿಸುತ್ತಾನೆ. ಎದುರಾಳಿ ನೆಲಕ್ಕೆ ಬೀಳುತ್ತಿದ್ದಂತೆ, ಈ ಎಡಗೈ ಇಲ್ಲದ ಹುಡುಗ ಶ್ರೇಷ್ಠ ಜೂಡೋ ಪಟುವಾಗಿ ಹೊರಹೊಮ್ಮುತ್ತಾನೆ.

   ಹುಡುಗನಿಗೆ ಅಚ್ಚರಿ. ತಾನೇನೋ ಸಣಕಲು ಸಾಧಾರಣ ವ್ಯಕ್ತಿ. ಅದು ಹೇಗೆ ತಾನು ಶ್ರೇಷ್ಠನಾದೆ ಅಂತ ಚಕಿತನಾಗುತ್ತಾನೆ. ಅದನ್ನೇ ಗುರುವಿನ ಬಳಿ ಹೇಳಿಕೊಳ್ಳುತ್ತಾನೆ. ಗುರು ಹೇಳುತ್ತಾನೆ: ನೀನು ನನ್ನನ್ನು ನಂಬಿದೆ. ಹೇಳಿದ್ದನ್ನಷ್ಟೇ ಮಾಡಿದೆ. ನಿನಗೆ ಗೊತ್ತಿಲ್ಲ, ನೀನು ಕಲಿತಿದ್ದು ಜಗತ್ತಿನ ಸರ್ವಶ್ರೇಷ್ಠ ಕಿಕ್. ಅದನ್ನೇ ನೀನು ಲಕ್ಷ ಬಾರಿ ತಾಲೀಮು ಮಾಡಿದೆ. ನಿಜ ಹೇಳಬೇಕೆಂದರೆ, ನಿನ್ನ ಈ ಕಿಕ್ಕಿಗೆ ಪ್ರತಿದಾಳಿ ಇಲ್ಲ. ಯಾಕೆಂದರೆ, ಇಂಥ ಪ್ರಹಾರಕ್ಕೆ ತಡೆಯೊಡ್ಡಬೇಕೆಂದರೆ ಎದುರಿಗಿರುವವರು ನಿನ್ನ ಎಡಗೈ ಹಿಡಿದು ನಿನ್ನನ್ನು ಬಗ್ಗಿಸಬೇಕು. ಆದರೆ ನಿನಗೆ ಎಡಗೈಯೇ ಇಲ್ಲ. ಹಾಗಾಗಿ ನಿನಗಿದ್ದ ದೈಹಿಕ ನ್ಯೂನತೆಯನ್ನೇ ನಿನ್ನ ಅಸ್ತ್ರವಾಗಿಸಬೇಕೆಂದು ನಿನಗೆ ಅದೊಂದೇ ಕಿಕ್ ಕಲಿಸಿದೆ..
                                             *
   ಮೊನ್ನೆ ಭಾನುವಾರ ಬೆಳ್ ಬೆಳಿಗ್ಗೆ ಚಹಾಗೆಂದು ಹತ್ತಿರದ ಹೋಟೆಲಿಗೆ ಹೋಗಿದ್ದೆ. ಪರಿಚಯದ ಹುಡುಗರಿಬ್ಬರು ಬಂದಿದ್ದರು. ನಾಲ್ಕೈದು ವರುಷದವರು. ಅದರಲ್ಲಿ ಒಬ್ಬ ಶ್ರೀಮಂತ. ಇನ್ನೊಬ್ಬ ಅಷ್ಟೇನೂ ಸ್ಥಿತಿವಂತನಲ್ಲದ  ಹುಡುಗನೆಂಬುದು ನನಗೆ ಗೊತ್ತು. ಸಿರಿವಂತ ಹುಡುಗ ಒಂದು ಹಾಟ್ ಬಾಕ್ಸ್ ಹಿಡಿದುಕೊಂಡು ಇಡ್ಲಿಗೆಂದು ಬಂದಿದ್ದ. ಇನ್ನೊಬ್ಬ ಸುಮ್ಮನೇ ಆತನ ಜೊತೆಗೆಂದು ಬಂದವನು. ಇಬ್ಬರೂ ಮೊದಲ ಬಾರಿಗೆ ಸ್ವತಂತ್ರವಾಗಿ ತಿಂಡಿ ಖರೀದಿಗೆ ಬಂದಿದ್ದರೇನೋ ಅಂತ ನನ್ನ ಅಂದಾಜು.

    "ಎರಡು ಇಡ್ಲಿಗೆ ಎಷ್ಟಾಗುತ್ತದೆ?" ಅಂತ ಸಿರಿವಂತ ಹುಡುಗ ಹೋಟೆಲಿನವರಿಗೆ ಕೇಳುತ್ತಿದ್ದ. 'ಹದಿನೈದು ರೂಪಾಯಿ' ಅಂತ ಹೋಟೆಲಿನ ಮಾಲೀಕ ಹೇಳುತ್ತಿದ್ದ. ಸುತ್ತಲಿನ ಜಗತ್ತಿನಲ್ಲಿ ಈ ಹುಡುಗರು ಎಲ್ಲೆಲ್ಲಿ ಏನೇನು ಗಮನಿಸಿರುತ್ತಾರೋ ಏನೋ, ಸಿರಿವಂತ ಹುಡುಗ ಇನ್ನೇನು ಜೇಬಿನಿಂದ ಹದಿನೈದು ರೂಪಾಯಿ ತೆಗೆಯಬೇಕು ಅನ್ನುವಷ್ಟರಲ್ಲಿ ಜೊತೆಗಿದ್ದ ಪೋರ ಥಟ್ಟನೇ ಮಾಲೀಕನಿಗೆ ಆವಾಜ್ ಹಾಕಿದ:

"ಹತ್ತು ರೂಪಾಯಿ ಮಾಡಿಕೊಡಿ ಅಂಕಲ್!"

ಹತ್ತು ವರ್ಷಗಳ ಬಳಿಕ ಈ ನಮ್ಮ ರೆಬೆಲ್ ಪೋರ ಯಾವುದೋ ‘ಕಿಕ್'ನಲ್ಲಿ ಸಾಮ್ರಾಟನಾಗಬಹುದು. ಗುರು ಸಿಗಬೇಕಷ್ಟೇ!           

-          
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 07.06.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)