Wednesday, May 23, 2018

ಚುನಾವಣೆಯ ಗುಂಗು ಮರೆಸಿದ ಹಾಯ್ಕುಗಳು!


ಅಂತೂ ಇಂತೂ ಚುನಾವಣೆ ಮುಗಿಯಿತು. ಕಾಮೆಡಿ, ಫೈಟಿಂಗ್, ಸೆಂಟಿಮೆಂಟ್ ಒಳಗೊಂಡ ಥ್ರಿಲ್ಲರ್ ಸಿನಿಮಾವೊಂದರ ಎಲ್ಲ ರೋಚಕತೆಯನ್ನು ಬಿಂಬಿಸುವಂತಿದ್ದ ಈ ಚುನಾವಣೆಗೆ 'ಶುಭಂ' ಪರದೆ ಬಿತ್ತು. ಆದರೆ ಈ ಚುನಾವಣೋತ್ತರದ ಘಟನಾವಳಿಗಳು ನನಂಥವರ ಮನದಲ್ಲಿ ಹಲವಾರು ಪ್ರಶ್ನೆಗಳನ್ನೂ ಗೊಂದಲಗಳನ್ನೂ ಹುಟ್ಟುಹಾಕುತ್ತ ಹೋದವು. ಅಂಥ ಒಂದಿಷ್ಟು ಪ್ರಶ್ನೆ ಮತ್ತು ಗೊಂದಲಗಳನ್ನು ಸರಳವಾಗಿ ಅರ್ಥ ಮಾಡಿಸಲೆಂದು ನಿಮ್ಮೆದುರಿಗೆ ಒಂದೆರೆಡು ಚಿತ್ರಣ ಇಡುತ್ತಿದ್ದೇನೆ. 
    
ಚಿತ್ರಣ 1: ಇಲ್ಲೊಬ್ಬ ಯುವಕನಿದ್ದಾನೆ. ನಿನ್ನೆ ಮೊನ್ನೆಯವರೆಗೂ ತನ್ನೂರಿನ ಶಾಲಾ ಕಾಲೇಜುಗಳಲ್ಲಿ ವಿಧೇಯ ವಿದ್ಯಾರ್ಥಿಯೆಂದು ಗುರುತಿಸಿಕೊಂಡಂಥವನು. ಈಗಷ್ಟೇ ಬೆಂಗಳೂರಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಸ್ವಂತದ ಬದುಕು ಕಟ್ಟಿಕೊಂಡಿರುವಂಥವನು. ಹೊಸ ಉತ್ಸಾಹ, ಹೊಸ ಧೈರ್ಯದ ಜೊತೆಗೆ ಏನೇನೋ ಕನಸುಗಳು. ಹೊಸ ಊರು ಈತನಿಗೆ ಸಿಗರೇಟು ಕಲಿಸಿದೆ. ಹೀಗಾಗಿ ಕೈಯಲ್ಲಿ ಸಿಗರೇಟಿದೆ. ಹಾಗೆ ಸಿಗರೇಟು ಹಿಡಿದು ನಡೆಯುತ್ತಿರುವ ಈ ಹುಡುಗ ಸೊಂಪು ಮಜದಲ್ಲಿರುವನು. ಈತನ ದುರಾದೃಷ್ಟಕ್ಕೋ ಏನೋ ಈ ಅಪರಿಚಿತ ಊರಿನಲ್ಲಿ ಎಲ್ಲಿಂದಲೋ ಅಕಸ್ಮತ್ತಾಗಿ ಪ್ರೈಮರಿ ಮೇಷ್ಟ್ರು ಎದುರಾಗಿಬಿಟ್ಟಿದ್ದಾರೆ. ವಿಚಲಿತನಾಗಿರುವ ಹುಡುಗ. ಸಿಗರೇಟನ್ನು ಬೆನ್ನ ಹಿಂದೆ ಮಡಚಿಕೊಂಡು ಮೇಷ್ಟ್ರನ್ನು ನೋಡಿದರೂ ನೋಡದವನಂತೆ ಅವಸರವಸರವಾಗಿ ಕಾಲ್ಕಿತ್ತಿದ್ದಾನೆ. ಶಿಷ್ಯನನ್ನು ಗುರುತಿಸಿದ ಮಾಸ್ತರರಿಗೆ ಬೇಸರವಿದ್ದಂತಿಲ್ಲ. ಅವರು ಮನದಲ್ಲೇ ಮುಗುಳ್ನಗುತ್ತಿದ್ದಾರೆ. ಆ ನಗುವಿನಲ್ಲಿ ಏನೆಲ್ಲ ಅಡಗಿರುವಂತಿದೆ. 

ಚಿತ್ರಣ 2: ಅದೇ ಹುಡುಗ. ಅದೇ ರಸ್ತೆ. ಧುತ್ತೆಂದು ಎದುರಾಗಿರುವ ಅದೇ ಮೇಷ್ಟ್ರು. ಈ ಹುಡುಗ ಸಿಗರೇಟನ್ನು ಬಚ್ಚಿಟ್ಟುಕೊಳ್ಳದೇ ಮಾಸ್ತರರ ಮುಂದೆಯೇ ಧೂಮದುಂಗುರ ಸೃಷ್ಟಿಸುತ್ತಿದ್ದಾನೆ. ಅಲ್ಲೊಂದು ಲೆಕ್ಕಾಚಾರವಿದೆ. ತಾನೀಗ ಮಾಸ್ತರರ ವಿದ್ಯಾರ್ಥಿಯಲ್ಲ. ಬದಲಾಗಿ ವಯಸ್ಕ. ಸಿಗರೇಟಿಗೆ ಕೊಟ್ಟ ಹಣವೂ ತನ್ನದೇ. ಇಷ್ಟಕ್ಕೂ ಸರ್ಕಾರವೇನೂ ಸಿಗರೇಟನ್ನು ಬ್ಯಾನ್ ಮಾಡಿಲ್ಲವಲ್ಲ? ಹೆಚ್ಚೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕಾನೂನಿದೆ ಅಷ್ಟೇ. ಹಾಗಂತ ಸರಕಾರ ಎಲ್ಲರ ಮೇಲೆ ಎಷ್ಟೂಂತ ಕಣ್ಣು ನೆಟ್ಟಿಕೊಂಡು ಕೂತಿರುತ್ತದೆ. ಚಲ್ತಾ ಹೈ ಭಾಯ್! ಅರೇ, ಮಾಸ್ತರರು ಯಾಕೆ ನನ್ನನ್ನು ಕಂಡೂ ಕಾಣದಂತೆ ಮುಜುಗರದಿಂದ ಓಡುತ್ತಿದ್ದಾರೆ? 

   ಮೊನ್ನೆ ಆಗಿದ್ದೂ ಥೇಟ್ ಇದೇ. ಪೊಲಿಟಿಕಲಿ ಕರೆಕ್ಟ್ ಅನ್ನುವಂಥ ವಾಕ್ಯ ಬಳಸದೇ ನೇರಾನೇರ ಹೇಳಬಹುದಾದರೆ, ಅಲ್ಲಿ ಎಲ್ಲರ ಬಳಿಯೂ ಆಮಿಷಗಳಿದ್ದವು. ಅದಕ್ಕೆ ತಕ್ಕಂತೆ ಎದುರಾಳಿಗಳ ಬಳಿ ಅಂಕುಶಗಳಿದ್ದವು. ಅವುಗಳ ಪೈಕಿ ಕೆಲವಷ್ಟೇ ಹೊರಜಗತ್ತಿಗೆ ಗೋಚರಿಸಿದರೆ ಮಿಕ್ಕವು ಗೋಚರಿಸಲಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರಕ್ಕಾಗಿ ಏನೆಲ್ಲ ಮಾಡಬಹುದಿತ್ತೋ ಅದೆಲ್ಲವನ್ನೂ ಮಾಡಿತು. ತನ್ನೆಲ್ಲ ತತ್ವ, ಸಿದ್ಧಾಂತಗಳನ್ನು ಮಣ್ಣುಪಾಲು ಮಾಡಿದ್ದಲ್ಲದೇ ನಿಯಮಾವಳಿಗಳನ್ನೆಲ್ಲ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತು. ಇನ್ನು ಕಾಂಗ್ರೆಸ್ ಮತ್ತು ಜನತಾದಳ. ಕಣದಲ್ಲಿರುವಾಗ ರಾಜಕೀಯ ಸ್ಪರ್ಧಿಗಳಿಬ್ಬರು ಎದುರಾಳಿಗಳ ಪಾಲಸಿಗಳ ಬಗ್ಗೆ, ಆಡಳಿತದ ಬಗ್ಗೆ ಪರಸ್ಪರ ಟೀಕಿಸಬಹುದಷ್ಟೇ. ಆದರೆ ಇಲ್ಲಿ ಇವರಿಬ್ಬರೂ ವೈಯಕ್ತಿಕ ಮಟ್ಟದಲ್ಲಿ ಅಪ್ಪ, ಆಣೆ, ಪ್ರಮಾಣ ಅಂತೆಲ್ಲ ಬೀದಿಗಿಳಿದ್ದುಂಟು. ಈ ಸ್ಪರ್ಧಿಗಳನ್ನು ನಂಬಿಕೊಂಡು ಆಯಾ ಪಕ್ಷದ ಕಾರ್ಯಕರ್ತರೂ ವೈಯಕ್ತಿಕ ಜಿದ್ದಿಗೆ ಬಿದ್ದು ಚುನಾವಣೆಯಲ್ಲಿ ಹೊಡೆದಾಡಿರುತ್ತಾರೆ. ಈಗ ಪ್ರಹಸನವೊಂದು ಹೀಗೆ ದಿಢೀರನೇ ಬದಲಾಗಿರುವ ಪ್ರಸಂಗದಲ್ಲಿ ಈ ಎದುರಾಳಿಗಳೇ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ ಈ ಎರಡೂ ಪಕ್ಷಗಳ ಕಾರ್ಯಕರ್ತರ ಗತಿಯೇನು?                                 

   ವಿಪರ್ಯಾಸವೆಂದರೆ, ಇದೆಲ್ಲ ನಡೆದಿದ್ದು ಸಂವಿಧಾನಕ್ಕೆ ಅನುಗುಣವಾಗಿಯೇ. ಅದು ಮೌಲ್ಯಯುತವೋ, ನೈತಿಕವಾದದ್ದೋ ಬೇರೆ ವಿಷಯ. ಆದರೆ ವಿಶ್ಲೇಷಕರ ಪ್ರಕಾರ ಸಾಂವಿಧಾನಿಕವಾಗಿ ಮತ್ತು ಶಾಸನಬದ್ಧವಾಗಿ ಸರಿ ಇರುವಂಥದ್ದು. ಎಲ್ಲಕ್ಕಿಂತ ಹೆಚ್ಚಾಗಿ ವ್ಯವಹಾರಿಕವಾಗಿ ಸರಿ ಇರುವಂಥದ್ದು. ಹೀಗಿರುವಾಗ ಆ ಸಿಗರೇಟಿನ ಹುಡುಗ ತನ್ನ ಹಳೆಯ ಮಾಸ್ತರರನ್ನು ಕಂಡಕೂಡಲೇ ಭಯದಿಂದಲೋ, ಗೌರವದಿಂದಲೋ ತನ್ನ ಮೌಲ್ಯಗಳನ್ನು ಪ್ರತಿಪಾದಿಸಬೇಕಿತ್ತೆಂದು ನಿರೀಕ್ಷಿಸುವದು ಹೇಗೆ ಸಾಧ್ಯ? ಹಾಗಾದರೆ ಸಾಮಾನ್ಯ ಜನತೆಗೆ ಇಂಥ ನಿರೀಕ್ಷೆಗಳು ಇರಲೇಬಾರದೆ? ಇಷ್ಟಕ್ಕೂ ನಮ್ಮಲ್ಲಿನ ವ್ಯವಸ್ಥೆಯೇ ವೈರುಧ್ಯಗಳಿಂದ ಕೂಡಿದೆ. ಅದು ನೈತಿಕತೆಯ ಬಗ್ಗೆ ಯಾವುದನ್ನೂ ನಿಖರವಾಗಿ ಹೇಳುವದಿಲ್ಲ. ಹೆಚ್ಚೆಂದರೆ ಅದು ಸಿಗರೇಟ್ ಪ್ಯಾಕಿನ ಮೇಲೆ ಧೂಮಪಾನದ ಅಪಾಯಗಳ ಬಗ್ಗೆ ಮಾತ್ರ ದೊಡ್ಡದಾಗಿ ಚಿತ್ರಿಸಿ ಕೈತೊಳೆದುಕೊಳ್ಳುತ್ತದಷ್ಟೇ!  

   ಹೀಗಿರುವಾಗ, ಇಲ್ಲಿ ಇನ್ನೊಂದು ರೀತಿಯ ತಮಾಷೆ ನಡೆಯಿತು. ಈ ಸಲದ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಜನತೆಯ ಕಿವಿಯಲ್ಲಿ ನೂರಾರು ಬಾರಿ ಒತ್ತಾಯವಾಗಿ ತೂರಿಸಲ್ಪಟ್ಟ ಒಂದು ಪದವೆಂದರೆ- ಅದು ಸೆಕ್ಯುಲರ್. ಅತ್ಯಂತ ಕ್ಲೀಷೆಯಿಂದ ಬಳಕೆಯಾಗುತ್ತಿರುವ ಈ ಸೆಕ್ಯುಲರ್ ಪದದ ಬಗ್ಗೆ ನಮ್ಮ ಸಂವಿಧಾನದಲ್ಲಿ ಏನು ಹೇಳಲಾಗಿದೆ ಅಂತ ಹುಡುಕುತ್ತಿದ್ದಾಗ ಕುತೂಹಲಕ್ಕೆಂದು ನಿಘಂಟಿನಲ್ಲೂ ಒಮ್ಮೆ ಹುಡುಕಾಡಿದೆ. ಮಜದ ಸಂಗತಿಯೆಂದರೆ, ಸೆಕ್ಯುಲರ್ ಎಂಬ ಪದಕ್ಕೆ ಡಿಕ್ಷನರಿಯಲ್ಲಿ 'ಜಾತ್ಯತೀತ' ಎಂಬ ಅರ್ಥದ ಜೊತೆಜೊತೆಗೆ 'ಐಹಿಕ, ಸಾಂಸಾರಿಕ, ಪಾರಮಾರ್ಥಿಕವಲ್ಲದ' ಎಂಬ ಇನ್ನಿತರ ಅರ್ಥಗಳೂ ಇವೆ ಅಂತ ಗೊತ್ತಾಗುತ್ತಿದ್ದಂತೆಯೇ ಬೇಸ್ತುಬಿದ್ದೆ!

   ಇದೆಲ್ಲದರ ಮಧ್ಯೆ ಚುನಾವಣೆ ಫಲಿತಾಂಶ ಏನಾಗಬಹುದು ಅಂತೆಲ್ಲ ಕ್ಷಣಕ್ಷಣಕ್ಕೂ ಬ್ರೇಕಿಂಗ್ ಸುದ್ದಿ ಬಿತ್ತರಿಸುತ್ತಿದ್ದ ವಾಹಿನಿಗಳು ಒಂದೆಡೆಯಿದ್ದರೆ, 'ಬಹುಮತ ಸಾಬೀತುಪಡಿಸಿಕೊಳ್ಳಲು ಯೆಡಿಯೂರಪ್ಪನವರು ಹೀಗೆಲ್ಲ ಮಾಡಬೇಕಾಗುತ್ತದೆ' ಅಂತನ್ನುವ ಚಿತ್ರವಿಚಿತ್ರವಾದ ಖತರನಾಕ್ ಐಡಿಯಾಗಳನ್ನು ಇನ್ಯಾರೋ ಪರದೆ ಮೇಲೆ ಪ್ರಚುರಪಡಿಸುತ್ತಿದ್ದರು. 
ಇದೆಲ್ಲದರಿಂದ ರೋಸೆದ್ದು ಹೋದ ನನಗೆ ಕೊಂಚ ತಂಪೆರೆದಿದ್ದು ಇಳಿಸಂಜೆಯ ಮಳೆಯ ಜೊತೆಗೆ ಒಂದಿಷ್ಟು ಹಾಯ್ಕುಗಳು. ಅವೆಲ್ಲ ಮಕ್ಕಳ ಮೇಲೆ ಕಟ್ಟಲಾದ ಹಾಯ್ಕು ಚಿತ್ರಣಗಳು. ಇಂಗ್ಲೀಷ್ ನಲ್ಲಿ ಚಿತ್ರಿಸಲಾದ ಇವೆಲ್ಲ ಕ್ಷಣಗಳನ್ನು ನಾನು ಹಾಯ್ಕುವಿನ ಕೋಮಲ ರೂಪದಲ್ಲಿ ಸೆರೆಹಿಡಿಯಲಾಗದೇ ಹೀಗೆ ಗದ್ಯದ ಮೊರೆಹೋಗುತ್ತಿದ್ದೇನೆ.

   ಒಂದು ಚಿತ್ರಣ ಹೀಗಿದೆ. ಅದೊಂದು ಮಕ್ಕಳ ಕ್ಲಿನಿಕ್. ಅಲ್ಲಿರುವ ವೇಟಿಂಗ್ ರೂಮಿನಲ್ಲಿ ಐದಾರು ಮಕ್ಕಳು ಅವರವರ ಪಾಲಕರೊಂದಿಗೆ ತಮ್ಮ ಪಾಳಿಗಾಗಿ ಕಾಯುತ್ತಲಿವೆ. ಅಲ್ಲಿನ E.N.T ತಜ್ಞ ಇನ್ನೂ ಕ್ಲಿನಿಕ್ಕಿಗೆ ಬಂದಂತಿಲ್ಲ. ವೇಟಿಂಗ್ ರೂಮಿನ ಒಂದು ಮಗು. ಅದರ ಅಪ್ಪನಿಗೆ ಮಗುವಿನ ದೃಷ್ಟಿದೋಷದ ಬಗ್ಗೆ ಗುಮಾನಿ ಬಂದಿದೆ. ಆದರೆ ‘ಎಲ್ಲ ಸರಿಯಿದೆ'  ಅಂತ ಆತನಿಗೆ ತಿಳಿಹೇಳುವವರ್ಯಾರು? ಮಗು ಚಿಕ್ಕದು. ಮಾತು ಬಾರದು. ಹೀಗಾಗಿ ಇಲ್ಲಿಗೆ ದೌಡಾಯಿಸಿದ್ದಾನೆ. ಪಾಳಿಗಾಗಿ ಚಡಪಡಿಸುತ್ತಿದ್ದಾನೆ. ಅಷ್ಟರಲ್ಲೇ ಅಪ್ಪನ ಕಣ್ಣಳತೆಯಿಂದ ಜಾರಿರುವ ಮಗು ತೆವಳುತ್ತ ಹೋಗಿ ಏನು ಮಾಡುತ್ತಲಿದೆ? ಮೂಲೆಯಲ್ಲಿರುವ ಕಣ್ಣು ಪರೀಕ್ಷಿಸುವ ಪುಟ್ಟಯಂತ್ರದ ರಾವುಗಾಜಿನ ಮೇಲೆ ಪೆನ್ಸಿಲ್ ನಿಂದ ಚಿತ್ತುಕಾಟು ಹಾಕುತ್ತಲಿದೆ.                 

   ಅದೇ ಕೋಣೆಯ ಇನ್ನೊಂದು ಮಗು. ಅದರ ಅಪ್ಪನಿಗೆ ಇನ್ನೆಂಥದ್ದೋ ಗುಮಾನಿ. ಹಾಗಾಗಿ ಕ್ಲಿನಿಕ್ಕಿಗೆ ಬಂದಿರುವರು. ಕುಶಾಲಿಗೆಂದು ಗೋಡೆಯ ಮೇಲೆ ತೂಗು ಹಾಕಿರುವ ಗಿಟಾರ್. ಮಗುವಿನ ಗಮನ ಸೆಳೆಯಲೆಂದು ಗಿಟಾರ್ ಹಿಡಿದಿರುವ ಅಪ್ಪ ಒಂದೊಂದಾಗಿ ಸ್ವರ ಮೀಟುತ್ತಿದ್ದಾನೆ. ಮೂರನೇ ತಂತಿಯಲ್ಲಿನ ಸ್ವರ ಹೊರಬರುತ್ತಿದ್ದಂತೆಯೇ ಮಗುವಿನ ಹಸ್ತ ನಿಧಾನವಾಗಿ ತಂತಿಯನ್ನು ಮುಟ್ಟುತ್ತ ಗಿಟಾರಿನ ಸದ್ದನ್ನಡಗಿಸುತ್ತಿದೆ. ಆ ಮೂಲಕ ಅಪ್ಪನ ಸಂದೇಹವನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ. ಸಮಾಧಾನದ ಈ ಹೊತ್ತಿನಲ್ಲಿ ಅಪ್ಪನ ಬೆರಳುಗಳು ತಂತಿಗಳನ್ನು ಅವಿರತವಾಗಿ ಇನ್ನೂ 
ಮೀಟುತ್ತಲೇ ಇವೆ; ಶಬ್ದವೇಧಿ ಮಗು ಹಸ್ತದಿಂದ ಸ್ವರಸ್ತಂಭನ ಮಾಡುತ್ತಲೇ ಇದೆ. 

   ಅಸಲಿ ಮಜ ಇಲ್ಲಿದೆ ನೋಡಿ. ಕ್ಲಿನಿಕ್ಕಿನಿಂದ ಅನತಿ ದೂರದಲ್ಲೇ ಮಸಣವೊಂದು ಇದ್ದಂತಿದೆ. ಅಲ್ಲೀಗ ಯಾವುದೋ ಅಂತ್ಯಕ್ರಿಯೆ ನಡೆಯುತ್ತಿದೆ. ಅಲ್ಲಿರುವ ದೊಡ್ಡವರು ಗಂಭೀರವಾಗಿಯೋ ಶೋಕತಪ್ತರಾಗಿಯೋ ಅಂತ್ಯಕ್ರಿಯೆಯ ಚಟುವಟಿಕೆಯಲ್ಲಿ ವ್ಯಸ್ತರಾಗಿರುವಾಗ ಮಕ್ಕಳ ದಂಡೊಂದು ಅಕ್ಕಪಕ್ಕದ ಗೋರಿಗಳನ್ನು ಬಳಸಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಆಹ್! ಇಲ್ಲಿ ಯಾವುದು ಅರ್ಥಪೂರ್ಣ? ಯಾವುದು ಅರ್ಥಹೀನ?

ಯಾಕೆಂದರೆ ಇಲ್ಲಿ ಈಗ ತಾನೇ ಕಂಡಿದ್ದ ಮುಖ ನಾಳೆ ಮತ್ತೇ ಕಾಣಬಹುದೆನ್ನುವ ಖಾತ್ರಿ ಯಾರಿಗಿದೆ?                 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 23.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, May 9, 2018

ಪೌರಾಣಿಕ ಸಾಹಿತ್ಯವೆಂಬುದು ಅನುಮಾನದ ಹುತ್ತವಾಗಬಾರದಲ್ಲ?


ಮೊನ್ನೆ ಬಹಳ ದಿನಗಳ ನಂತರ ಗೆಳೆಯರೆಲ್ಲ ಸೇರಿದ್ದೆವು. ಯಾವುದೋ ದೇವಸ್ಥಾನದಲ್ಲಿ ಬಾಳೆಹಣ್ಣಿನ ಪ್ರಸಾದ ಹಂಚುವ ಕಾರ್ಯಕ್ರಮ. ನಾವೆಲ್ಲ ಅಲ್ಲಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲೇ ಇದ್ದರೂ ಮೆಟ್ರೋ ರೈಲಿನಲ್ಲಿ ಒಮ್ಮೆಯೂ ಪ್ರಯಾಣಿಸದ ನಮ್ಮ ಬಗ್ಗೆ ನಾವೇ ಖೇದಪಟ್ಟುಕೊಂಡು ಮೆಟ್ರೋದಲ್ಲಿ ಪಯಣಿಸಿದ್ದೆವು. ದೇವಸ್ಥಾನಕ್ಕೆ ಬರುವವರಿಗೆಲ್ಲ ಪ್ರಸಾದ ಹಂಚಿ ಸುಸ್ತಾಗಿದ್ದ ನಾವೆಲ್ಲ ಪ್ರಾಂಗಣದಲ್ಲಿದ್ದ ಮರದಡಿಯಲ್ಲಿ ಕುಳಿತುಕೊಂಡಿದ್ದೆವು. ಕಳೆದ ಎರಡು ದಶಕಗಳಲ್ಲಿ ಬೆಟ್ಟ, ಕಾಡು, ರೆಸಾರ್ಟ್, ಕ್ಲಬ್ಬು, ಪಬ್ಬು, ಬೀಯರು ಅಂತೆಲ್ಲ ಲಿಸ್ಟು ಹಿಡಿದುಕೊಂಡು ಸುತ್ತಾಡಿದ ನಮಗೆ ಮುಂದೊಂದು ದಿನ ಯಾವುದೋ ದೇವಸ್ಥಾನದ ಪ್ರಾಂಗಣದಲ್ಲಿ ಹೀಗೆ ಪ್ರಸಾದವನ್ನೂ ಹಂಚುವ ಮನಸ್ಥಿತಿ ಬಂದೀತೆಂಬ ಕಲ್ಪನೆ ಯಾರಿಗಾದರೂ ಬಂದಿತ್ತೇ? ಅಂತ ನಮ್ಮಷ್ಟಕ್ಕೆ ನಾವೇ ನಗಾಡುತ್ತಿದ್ದೆವು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಗುಂಪಿನ ಮಧ್ಯೆ  ಪ್ರಶ್ನೆಯೊಂದು ತೂರಿಬಂತು.

 'ಆತ್ಮ ಅಂದರೇನು?'

   ನಗೆಯಾಡುತ್ತಿದ್ದ ಎಲ್ಲರೂ ಗಂಭೀರರಾಗಿಬಿಟ್ಟಿದ್ದರು. ತಲೆಗೊಂದರಂತೆ ಉತ್ತರ ಬಂದವು. ಇತ್ತೀಚೆಗೆ ಇಂಗ್ಲೀಷ್ ಲಿಟರೇಚರ್ ಮೂಲಕ ಪುರಾಣಗಳನ್ನು ಓದತೊಡಗಿದ್ದ ಒಬ್ಬನಂತೂ ಕೃಷ್ಣನ ಗೀತೆಯನ್ನು ಸಾದರ ಪಡಿಸತೊಡಗಿದ್ದರೆ, ಇನ್ನೊಬ್ಬರ್ಯಾರೋ ಆತ್ಮಕ್ಕೆ ಹೇಗೆ ಸಾವಿಲ್ಲವೆಂದು ಹೇಳುತ್ತಲೇ ಅದರ ಅಮರತ್ವವನ್ನು ಸಾರತೊಡಗಿದ್ದರು. ಹೀಗೆ ಒಬ್ಬೊಬ್ಬರ ಮೂಲಕ ಒಂದೊಂದು ರೀತಿಯಲ್ಲಿ ಆತ್ಮದ ಬಗ್ಗೆ ಪುಂಖಾನುಪುಂಖ ಚರ್ಚೆಗಳಾಗುತ್ತಿದ್ದಾಗ ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ. ಇಷ್ಟಕ್ಕೂ ಆತ್ಮದ ಬಗ್ಗೆ ಏನೇನೂ ಗೊತ್ತಿರದ ನಾನು ಏನು ಹೇಳಲಿ? ಬಾಲ್ಯದಲ್ಲಿ ನನ್ನ ಗೆಳೆಯನೊಬ್ಬನಿದ್ದ. ಆತ ರಾತ್ರಿ ಹಿತ್ತಿಲಲ್ಲಿ ಉಚ್ಛೆ ಹೊಯ್ಯಲು ಹೋದಾಗ ಬಿಳಿಸೀರೆ ಉಟ್ಟುಕೊಂಡು ತಲೆಕೆದರಿಕೊಂಡು ನಿಂತಿದ್ದ 'ಆತ್ಮ'ವನ್ನು ನೋಡಿ ಮೂರು ದಿನ ಚಳಿ ಜ್ವರ ಬಂದು ಮಲಗಿದ್ದನ್ನು ಗಂಭೀರವಾಗಿ ಹೇಳತೊಡಗಿದ್ದೆ. ಗೆಳೆಯರೆಲ್ಲ ಛೇಡಿಸುತ್ತಲೇ ನನ್ನನ್ನು ಸಮಾ ಬೈದಾಡಿಕೊಂಡಿದ್ದರು! 

   ಪರಮಾತ್ಮನ ಪ್ರಾಂಗಣದಲ್ಲಿ ಆತ್ಮದ ಬಗ್ಗೆ ನನ್ನ ವ್ಯಾಖ್ಯಾನ ಹೀನಾಯವಾಗಿ ಕೊನೆಯುಸಿರೆಳೆದಿದ್ದು ಹೀಗೆ. ತಮಾಷೆಯೆಂದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಪೈಕಿ ಇಂಥ ಸಾಲುಗಳನ್ನು ನೀವೂ ಕೇಳಿಯೇ ಇರುತ್ತೀರಿ. ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದರು ಅಂತನ್ನುವ ಸುದ್ದಿ ಬಂದಿರುತ್ತದೆ. ಭಾಷಾಬಳಕೆಯ ಬಗ್ಗೆ ಕುತೂಹಲ ಇಟ್ಟುಕೊಂಡವರಿಗೆ ಈ 'ಆತ್ಮರಕ್ಷಣೆ' ಎಂಬ ಪದ ಆಗೀಗ ಸತಾಯಿಸುವದುಂಟು. ಅರೇ, ಪೊಲೀಸರೇನೋ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಸಂದರ್ಭ ಉಂಟಾದಾಗ ಗುಂಡು ಹಾರಿಸಿರುತ್ತಾರೆ. ಅಂದರೆ ಅದು ದೇಹರಕ್ಷಣೆ. ಅದಕ್ಕೂ ಹೆಚ್ಚೆಂದರೆ ಪ್ರಾಣರಕ್ಷಣೆ. ದೇಹದ ರೀತಿ ಕಣ್ಣಿಗೆ ಕಾಣಿಸದ, ಪ್ರಾಣದ ರೀತಿ ಅನುಭವಕ್ಕೆ ತಾಗದ ಆತ್ಮವನ್ನು ನೋಡಿದವರು ಯಾರಿದ್ದಾರೆ? ಹಾಗಿರುವಾಗ 'ಆತ್ಮರಕ್ಷಣೆ' ಅನ್ನುವ ಪದ ಎಲ್ಲಿಂದ ಬಂತು? ಅದರ ಪ್ರಯೋಗ ಎಷ್ಟು ಸರಿ ಅಂತನ್ನುವ ಪ್ರಶ್ನೆ ಕಾಡತೊಡಗುತ್ತದೆ. 

   ಹೀಗೆ ಪಾರಮಾರ್ಥಿಕ ತತ್ವವೊಂದು ಆಡುಭಾಷೆಯಾಗಿ ಕೊನೆಗೆ ರೂಢಿಗತ ಭಾಷೆಯಾಗಿ ಚಲಾವಣೆಯಾಗುತ್ತಿದ್ದಂತೆ ಈ ರೀತಿಯ ಗೊಂದಲಗಳು ಸಹಜ. ಇಂಥ ಗೊಂದಲಗಳಿಗೆ ಉತ್ತರವಾಗಿ ನಮ್ಮ ಮುಂದೆ ನಿಘಂಟುಗಳಿವೆ. ಅವುಗಳ ಸಹಾಯದಿಂದ 'ಆತ್ಮ'ದ ಸಹಜ ಅರ್ಥವನ್ನೂ ಅಲೌಕಿಕ ವಿವರಣೆಯನ್ನೂ ಗ್ರಹಿಸಬಹುದು. ಇದರ ಮುಂದುವರಿಕೆ ಎಂಬಂತೆ ಆತ್ಮಕತೆ, ಆತ್ಮಗೌರವ, ಆತ್ಮಗತ, ಆತ್ಮವಿಶ್ವಾಸ, ಆತ್ಮರತಿ, ಆತ್ಮಹತ್ಯೆ, ಆತ್ಮಪ್ರಶಂಸೆ ಮುಂತಾದ ಪದಗಳನ್ನು ಗಮನಿಸಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ಆತ್ಮ ಅಂದರೆ ತಾನು, ತನ್ನದು ಎಂಬ ಸಹಜ ಅರ್ಥದೊಂದು ತನ್ನಿಂದ ತಾನೇ ಹೊರಬೀಳಬಲ್ಲದು. ಹೀಗೆ ನಿಜದ ಬದುಕಿನಲ್ಲಿ ಸಹಜವಾಗಿ ಬಳಸುವ ಪದಗಳೇ ಒಮ್ಮೊಮ್ಮೆ ಇಷ್ಟು ಕಠಿಣವಾಗಿಬಿಡುವಾಗ ಇನ್ನು ಪುರಾತನ ಸಾಹಿತ್ಯದಲ್ಲಿ ಬರುವ ಸಾರವನ್ನು ಎಷ್ಟರಮಟ್ಟಿಗೆ ನಾವು ಗ್ರಹಿಸಬಲ್ಲೆವು? ಪೌರಾಣಿಕ ಪಾತ್ರಗಳು, ಅವುಗಳ ಹೆಸರು, ಅದರ ವಿವರಣೆ, ಅಲ್ಲಿನ ದೃಷ್ಟಾಂತಗಳು, ನೀತಿಗಳು, ನಿಯಮಗಳ ಬಗ್ಗೆ ಸಾದ್ಯಂತವಾಗಿ ವಿವರಿಸಬಲ್ಲ ನಿಘಂಟೊಂದು ಇದ್ದಿದ್ದರೆ ಪುರಾತನ ಸಾಹಿತ್ಯವನ್ನು ಗ್ರಹಿಸಲು ಎಷ್ಟು ಅನುಕೂಲವಾಗುತ್ತಿತ್ತು ಅಂತ ನಿಮಗೆ ಅನಿಸಿಲ್ಲವಾ?

   ನಿಜ, ಇವತ್ತು ನಾನು ಮಾತನಾಡಬಯಸಿದ್ದು ಇಂಥದ್ದೇ ಒಂದು ನಿಘಂಟಿನ ಬಗ್ಗೆ. ಹೆಸರು: ಪುರಾಣನಾಮ ಚೂಡಾಮಣಿ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ ಈ ಗ್ರಂಥ ಸಾಮಾನ್ಯ ಅರ್ಥದಲ್ಲಿ ಡಿಕ್ಷನರಿಯೊಂದು ಮಾಡಬಹುದಾದ ಕೆಲಸಕ್ಕಿಂತಲೂ ಹೆಚ್ಚಿನ ಕಾರ್ಯ ಮಾಡುತ್ತದೆ. ಹದಿನೈದು ವರ್ಷಗಳ ಹಿಂದೆ ನಾನು ಖರೀದಿಸಿದ 650 ಪುಟಗಳಷ್ಟಿರುವ ಈ ಬೃಹತ್ ಗ್ರಂಥದ ಮೊದಲ ಆವೃತ್ತಿ ಪ್ರಕಟವಾಗಿದ್ದು 1941ರಲ್ಲಿ. ಇಷ್ಟಕ್ಕೂ ನಮ್ಮ ಪುರಾತನ ಸಾಹಿತ್ಯ ಸೃಷ್ಟಿಯಾಗಿದ್ದು ಸಂಸ್ಕೃತಲ್ಲಿ. ಅದರಲ್ಲಿ ಬರುವ ದೇವತೆಗಳು ನಮ್ಮ ಇತಿಹಾಸದಲ್ಲೂ ಬರುತ್ತವೆ. ಹೀಗೆ ಸಾಹಿತ್ಯ ಮತ್ತು ಇತಿಹಾಸ ಎರಡರಲ್ಲೂ ಗೋಚರಿಸುವ ದೇವರುಗಳು, ಋಷಿಗಳು, ಪುಣ್ಯಕ್ಷೇತ್ರಗಳು, ನದಿ-ಪರ್ವತಗಳು, ನಾನಾ ದೇಶಗಳು, ಅವುಗಳ ರಾಜರುಗಳು, ಅವರವರ ಕಾಲದ ವೈಚಿತ್ರ್ಯಗಳು, ದೃಷ್ಟಾಂತಗಳು, ಮಹತ್ವಗಳ ಬಗ್ಗೆ ಒಂದು ರೀತಿಯ ಅಕಾಡೆಮಿಕ್ ಅಭ್ಯಾಸಕ್ಕಾಗಿ 'ಪುರಾಣನಾಮ ಚೂಡಾಮಣಿ'ಯನ್ನು ರಚಿಸಬೇಕಾಯಿತು ಅಂತ ಲೇಖಕರಾದ ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿಗಳು ಗ್ರಂಥದ ಆರಂಭದಲ್ಲೇ ಅರಿಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಅವರುಗಳು ಶ್ರಮವಹಿಸಿದ್ದು ಹನ್ನೆರೆಡು ವರ್ಷಗಳು. 

   ಇಷ್ಟು ಹೇಳಿದರೆ 'ಚೂಡಾಮಣಿ'ಯ ಅಗಾಧತೆಗೆ ಮೋಸ ಮಾಡಿದಂತೆ. ಇಂಥದೊಂದು ಪುಸ್ತಕವನ್ನು ಸೃಷ್ಟಿಸುವದು ಮಹಾನ್ ಜಟಿಲಕಾರ್ಯ. ಅದು ಅಗಾಧ ಪ್ರಮಾಣದ ಪರಿಶ್ರಮ ಮತ್ತು ಓದುವಿಕೆಯನ್ನು ಬೇಡುತ್ತದೆ. ಯಾಕೆಂದರೆ ಒಂದು ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದ ಭಾಗದಲ್ಲಿ ದಿಢೀರಂತ ಪ್ರತ್ಯಕ್ಷವಾಗುತ್ತದೆ. ಯಾವುದೋ ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದಲ್ಲಿನ ಪಾತ್ರದ ಸಾವಿಗೆ ಕಾರಣವಾಗುತ್ತದೆ. ಯಾವುದೋ ಕಾಲದ ಹೆಸರೊಂದು ಏಕಮೇವಾದ್ವಿತೀಯ ಎಂಬಂತೆ ಮೆರೆಯುತ್ತಿದ್ದಾಗ ಅದೇ ಹೆಸರಿನ ಬೇರೆ ಬೇರೆ ಪಾತ್ರಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿಬಿಡುವ ಸಂಭವ ಇರುತ್ತದೆ. 

   ಈ ಪುಸ್ತಕವು ಅದೆಲ್ಲವನ್ನೂ ಸಮಗ್ರವಾಗಿ ಬೇರೆಬೇರೆಯಾಗಿ ಓದುಗರಿಗೆ ಕಟ್ಟಿಕೊಡುತ್ತದೆ. ಹಾಗೆ ಪ್ರತಿಯೊಂದಕ್ಕೂ ವಿವರಣೆಯನ್ನು ಕೊಡುವಾಗ ಅದು ಯಾವ ಪುರಾಣದ ಎಷ್ಟನೇ ಭಾಗದ ಎಷ್ಟನೇ ಅಧ್ಯಾಯದಲ್ಲಿ ಬರುತ್ತದೆ ಅಂತನ್ನುವ ಪುರಾವೆಯನ್ನೂ ಕೊಡುತ್ತದೆ. ಇದು ಎಷ್ಟು ಶ್ರಮದಾಯಕ ಕೆಲಸವೆಂದರೆ, ಸೀತೆಯನ್ನು ಹೊತ್ತೊಯ್ಯುವ ರಾವಣ ಅವಳನ್ನು ಯಾಕೆ ಬಲಾತ್ಕರಿಸಲಿಲ್ಲ ಅಂತ ವಿವರಿಸುವದಕ್ಕಾಗಿ ಲೇಖಕರು ಇನ್ಯಾವುದೋ ಪುರಾಣದಲ್ಲಿನ ಅಂಶಕ್ಕಾಗಿ ತಡಕಾಡಬೇಕಾಗುತ್ತದೆ. ಅಲ್ಲಿ ಕುಬೇರನ ಮಗನಾದ ನಳಕೂಬರ ಎಂಬ ಯಕ್ಷನನ್ನು ಶೋಧಿಸಬೇಕಾಗುತ್ತದೆ. ಆತನ ಶಾಪವನ್ನು ತೋರಿಸಬೇಕಾಗುತ್ತದೆ. ಅದಕ್ಕಾಗಿ ಲೇಖಕರು ಇನ್ಯಾವುದೋ ಕಾಲಘಟ್ಟಕ್ಕೆ ಹೋಗಬೇಕು. ಅಲ್ಲಿ ರಾವಣ ಪರಮಶಕ್ತಿಶಾಲಿಯಾಗಿ ಮೆರೆಯುತ್ತಿರುವಾಗ ರಂಭೆ ರಾವಣನ ಕಣ್ಣಿಗೆ ಬಿದ್ದಿದ್ದು, ಆತ ಆಕೆಯನ್ನು ಬಲಾತ್ಕರಿಸಿದ್ದು, ಅದರಿಂದ ರಂಭೆಯ ಪ್ರಿಯಕರನಾದ ನಳಕೂಬರ ಕೋಪಗೊಂಡಿದ್ದು, 'ಪರಸ್ತ್ರೀಯನ್ನು ಇನ್ನೊಮ್ಮೆ ಬಲಾತ್ಕರಿಸಿದಲ್ಲಿ ಅದೇ ನಿನಗೆ ಮೃತ್ಯು' ಎಂಬುದಾಗಿ ಆತ ರಾವಣನಿಗೆ ಶಾಪ ಕೊಟ್ಟಿದ್ದು-ಎಲ್ಲವನ್ನೂ ಶೋಧಿಸಿ ವಿವರಿಸಬೇಕಾಗುತ್ತದೆ. ಇದೆಲ್ಲವನ್ನೂ ಲೇಖಕರು ಆಯಾ ಪುರಾಣದ ಆಯಾ ಅಧ್ಯಾಯದ ಭಾಗಗಳನ್ನು ಉಲ್ಲೇಖದಂತೆ ಕಂಸದಲ್ಲಿ ಕೊಡುತ್ತ ಹೋಗಿದ್ದಾರೆ. 

   ಇಲ್ಲೊಂದು ಮಜ ನೋಡಿ: ಮನುಷ್ಯನೊಬ್ಬನನ್ನು ಬಿಟ್ಟು ಮತ್ಯಾರಿಂದಲೂ ಸಾವು ಬರಕೂಡದೆಂಬ ವರವನ್ನು ಬ್ರಹ್ಮನಿಂದ ಗಳಿಸಿರುವ ರಾವಣನಿಗೆ ಯಃಕಶ್ಚಿತ ಮನುಷ್ಯನ ಬಗ್ಗೆ ತಾತ್ಸಾರವಿದ್ದಂತಿದೆ. ಹೀಗಿರುವಾಗ ಸೀತೆಯ ಮೇಲೆ ವಾಂಛೆಯಿದ್ದರೂ ಆಕೆಯನ್ನು ಮುಟ್ಟದೇ ಹೋದ ರಾವಣನ ಪರಾಕ್ರಮದ ಬಗ್ಗೆ ಅನುಮಾನಿಸುವದು ನಮ್ಮದೇ ಚಪಲದಂತೆ ತೋರಿದರೆ, 
ರಾವಣನಿಗೆ ಸೀತೆಯ ಮೇಲೆ ಆಸಕ್ತಿಯೇ ಇರಲಿಲ್ಲವೆಂದೂ ಆತ ಅಪಹರಿಸಿದ್ದು ಶೂರ್ಪನಖಿಯ ಮೇಲಿನ ಮಮತೆಯಿಂದಾಗಿಯೆಂದೂ ಸಮಜಾಯಿಷಿ ಕೊಟ್ಟಿದ್ದು ಕವಿಯ ಹಂಬಲದಂತೆ ತೋರುತ್ತದೆ.  

   ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುರಾಣಪಾತ್ರಗಳನ್ನು ವಿಶ್ಲೇಷಿಸುತ್ತಿದ್ದಂತೆ ಸಾಮಾನ್ಯ ಓದುಗನಿಗೆ ಪೌರಾಣಿಕ ಸಾಹಿತ್ಯವೆಂಬುದು ಒಂದು ಅಸಂಬದ್ಧ ಮತ್ತು ಅನುಮಾನಾಸ್ಪದ ವಿನ್ಯಾಸದಂತೆ ಗೋಚರಿಸುವ ಅಪಾಯವಿದ್ದೇ ಇದೆ. ಪುರಾಣಗಳನ್ನು ಮೌಲ್ಯಗಳ ಮೂಟೆ ಎಂಬಂತೆ ನೋಡುವದರ ಜೊತೆಜೊತೆಗೆ ಅವನ್ನೆಲ್ಲ ಒಂದು ಸಾಹಿತ್ಯವನ್ನಾಗಿಯೂ ನೋಡಬಯಸುವ ನನ್ನಂಥವರಿಗೆ ಈ ಎಲ್ಲ ಕಥನಗಳು ಯಾವುದೋ ತಲೆಕೆಟ್ಟ ಗಾಸಿಪ್ಪುಗಳ ಕಂತೆಯಂತೆ ಭಾಸವಾಗಕೂಡದು. ಯಾಕೆಂದರೆ ಗಾಸಿಪ್ಪುಗಳಲ್ಲಿ ಕೇವಲ ಅನುಮಾನ ಮತ್ತು ಗುಮಾನಿಗಳಿರುತ್ತವೆ. ವಾಸ್ತವ ಚಿತ್ರಣದಲ್ಲಿ ಮಾತ್ರ ಎಲ್ಲ ತಿಳಿಯಪಡಿಸಬಲ್ಲ ಒಂದು ಪೂರ್ಣವಿರಾಮವಿರುತ್ತದೆ. 

   ಬಹುಶಃ ಇಂಥ ನೂರಾರು ಅನುಮಾನ ಮತ್ತು ಗುಮಾನಿಗಳಿಗೆ who's who ಎಂಬಂತೆ ಒಂದು ಕ್ರಮಬದ್ಧ ರೀತಿಯಲ್ಲಿ ಈ ಪುಸ್ತಕ ಉತ್ತರಿಸುತ್ತ ಹೋಗುತ್ತದೆ. ನಮಗೆ ಗೊತ್ತೇ ಇರದ ಹಲವಾರು ದೃಷ್ಟಾಂತಗಳನ್ನು ಧಾತುಗಳೊಂದಿಗೆ 'ಹೈಪರ್ ಲಿಂಕ್'ನಂತೆ ಸಂಯೋಜಿಸುತ್ತ ಹೋಗುವ 'ಪುರಾಣನಾಮ ಚೂಡಾಮಣಿ'ಯು ಭಾರತೀಯ ಪುರಾತನ ಸಾಹಿತ್ಯವನ್ನು ಗ್ರಹಿಸಲು ಪ್ರಚೋದಿಸಬಲ್ಲ ಮಾರ್ಗಸೂಚಿಯಾಗಿದೆ. 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 09.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, April 25, 2018

ಗಂಧದ ಮರದೊಳು ಒಂದಿನಿತೂ ಫಲವಿಲ್ಲ!

ಮೊನ್ನೆ ಸುಮ್ಮನೇ ಹೀಗೇ ಏನನ್ನೋ ಓದುತ್ತಿದ್ದಾಗ ಗಝಲ್ ರೂಪದ ಒಂದಿಷ್ಟು ಸಾಲುಗಳು ಗೋಚರಿಸಿದವು. ಅಸಲಿಗೆ ಇದನ್ನು ಮೂಲದಲ್ಲಿ ಬರೆದವರು ಯಾರೆಂದು ನನಗೆ ಗೊತ್ತಾಗಲಿಲ್ಲವಾದರೂ ಕನ್ನಡಕ್ಕೆ ಇದನ್ನು ರೂಪಾಂತರ ಮಾಡಬಹುದು ಅಂತನಿಸಿತು. ಪರಿಪೂರ್ಣತೆಯನ್ನು ಹುಡುಕುತ್ತ ಹೊರಟ ಈ ಅನಾಮಿಕ ಕವಿಗೆ ಕೊನೆಗೆ ಕಂಡಿದ್ದಾದರೂ ಏನು?     

ಹೊನ್ನಿಗೆ ಪರಿಮಳವಿಲ್ಲ 
ಕಬ್ಬಿಗೆ ಪುಷ್ಪವಿಲ್ಲ
ಗಂಧಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ 
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ 
ದಕ್ಕುವ ಜಾಗವೇ ಬಲು ಮಜವಾಗಿದೆ. 
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ..

   ಅಲ್ಲಿಗೆ ಅದೊಂದು ಮರೀಚಿಕೆ. ಯಾರಿಗೂ ದಕ್ಕದೇ ಇರುವಂಥದ್ದು. ಇಷ್ಟಕ್ಕೂ ಪರ್ಪೆಕ್ಟ್ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ? ನಮ್ಮ ಪೌರಾಣಿಕ ರೋಲ್ ಮಾಡೆಲ್ ಗಳಾದ ರಾಮ ಮರ್ಯಾದಾ ಪುರುಷೋತ್ತಮನಾದ. ಪರಶುರಾಮ ಚಿರಂಜೀವಿಯಾದ. ಕೃಷ್ಣ ಜಗದ್ಗುರುವಾದ. ಆದರೆ ಇವರ್ಯಾರೂ ಪರಿಪೂರ್ಣರಾಗಲಿಲ್ಲ. ಹಾಗಾದರೆ ಪರಿಪೂರ್ಣತೆ ಅನ್ನುವದು ಎಲ್ಲಿ ಸಿಗುತ್ತದೆ?         
    
   ಯಾರೋ ಇಂಥ ಪ್ರಶ್ನೆ ಕೇಳಿದಾಗಲೆಲ್ಲ ನಕ್ಕು ಬಿಡುತ್ತೇವೆ. ಯಾಕೆಂದರೆ ನಾವೆಲ್ಲ ಹುಲುಮಾನವರು. ಒಂದು ಸಂಬಂಧದಿಂದ ಕಳಚಿಕೊಳ್ಳಲು ನಮಗೆ ಜಾಸ್ತಿ ಹೊತ್ತು ಬೇಕಿಲ್ಲ. ನಮ್ಮ ಅಂಗಳದಲ್ಲೊಂದು ಗೆರೆ ಹೊಡೆಯಲು ಸಿಕ್ಕಂಥ ಕಾರಣಗಳೂ ಅಷ್ಟೇ ತಮಾಷೆಯವು. ಇಲ್ಲಿ, ಕೇಳಿದಾಗ ಸಾಲ ಕೊಡಲಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. ಕೊಟ್ಟ ಸಾಲವನ್ನು ವಾಪಸ್ಸು ಕೇಳಿದರು ಅಂತ ಮಾತು ಬಿಟ್ಟವರಿದ್ದಾರೆ. ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಲೈಕ್ ಮಾಡಿ ನನ್ನ ವಾಲಿಗೇ ಬರೋದಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. 'ಕವಿತೆಗೆ ಪ್ರಾಮಾಣಿಕ ಅಭಿಪ್ರಾಯ ಬೇಕು' ಅಂತ ಪೀಡಿಸಿ ಪೀಡಿಸಿ, ಕೊನೆಗೊಮ್ಮೆ ಅಭಿಪ್ರಾಯ 
ಹೇಳಿದ್ದಕ್ಕೂ ಮಾತು ಬಿಟ್ಟವರಿದ್ದಾರೆ! ಹೀಗೆ ಯಾವುದ್ಯಾವುದೋ ಚಿಲ್ಲರೆ ಕಾರಣಗಳಿಗೆ ಮನಸು ಮಾಲಿಂಗ 
ಹೃದಯ ಶಂಭುಲಿಂಗವಾಗಿಬಿಡುವ ಹೊತ್ತಿನಲ್ಲಿ ಊರಿನ ಬಾಲ್ಯದ ಮಿತ್ರ ನೆನಪಾಗುತ್ತಾನೆ. ಆತನಿಗೊಂದು 
ಫೋನಾಯಿಸಿ ಕಾಲೆಳೆಯುತ್ತಿರುತ್ತೇನೆ: 
"ನೀನ್ಯಾವ ಲೋಕದ ಪ್ರಾಣಿ ಮಾರಾಯ, ಒಮ್ಮೆಯೂ ಮಾತು ಬಿಡಲಿಲ್ಲವಲ್ಲ? ಊರಾಚೆಯ ಬಯಲಿಗೆ ಸಂಡಾಸಕ್ಕೆಂದು ಹೋಗುವಾಗ ನಿನಗೆ ಒತ್ತಡವಿಲ್ಲದಿದ್ದರೂ ನನ್ನೊಂದಿಗೆ ಬರುತ್ತಿದ್ದೆ. ಪ್ರತೀ ಬಾರಿಯೂ ಚೊಂಬನ್ನು ನೀನೇ ಹೊರುತ್ತಿದ್ದೆ. ಆ ಹತ್ತಾರು ವರ್ಷ ಯಕಶ್ಚಿತ್ ಖಾಲಿ ತಂಬಿಗೆಯನ್ನಾದರೂ ಒಮ್ಮೆಯೂ ನನಗೆ ದಾಟಿಸಲಿಲ್ಲವಯ್ಯ.."

   ಇಬ್ಬರೂ ನಗುತ್ತಿರುತ್ತೇವೆ. ಇದನ್ನೇ ನಾನು ಹಿತಾನುಭವ ಅಂತ ಕರೆಯುತ್ತೇನೆ. ನಮ್ಮ ಸುತ್ತಲಿನ ಒಂದಿಡೀ ಪರಿಸರ ಇಂಥದೊಂದು ಹಿತಾನುಭವ ಕಂಡುಕೊಳ್ಳಲು ಒಂದು ಸೂತ್ರದ ಅಗತ್ಯ ಇದೆ ಅಂತ ನನಗೆ ಆಗೀಗ ಅನಿಸುತ್ತಿರುತ್ತದೆ. ಆ ಸೂತ್ರದ ಹೆಸರು 'ಫಿಫ್ಟಿ-ಫಿಫ್ಟಿ'. ಮೊದಲ ನೋಟಕ್ಕೆ ಇದೊಂದು ತಮಾಷೆಯ ಮತ್ತು ಜಾಳುಜಾಳಾದ ಸೂತ್ರ ಅಂತನಿಸಬಹುದು. ಬಾಲ್ಯದಲ್ಲಿ ಬಯಲ ಬಹಿರ್ದೆಸೆಗೆಂದು ವರ್ಷಗಟ್ಟಲೇ ನೀರಿನ ತಂಬಿಗೆ ತಾನೊಬ್ಬನೇ ಹೊತ್ತುಕೊಂಡ ಸ್ನೇಹಿತ ನನಗೇನೋ ಅಷ್ಟರಮಟ್ಟಿಗೆ ಹಿತಾನುಭವ ದಯಪಾಲಿಸಿದ. ಆ ಮೂಲಕ ಆ ಘಳಿಗೆಯ ನಮ್ಮಿಬ್ಬರ ಪರಿಸರದಲ್ಲಿ ಸಮಸ್ಯೆಯೊಂದು ಪರಿಹಾರವಾಯಿತು. ಜಗತ್ತಿನಲ್ಲಿ ಥೇಟ್ ಇದೇ ಥರ ಆಯಾ ಕ್ಷಣಕ್ಕೆ ಆಯಾ ಪರಿಸರದ ಸಮಸ್ಯೆ ಪರಿಹಾರವಾಗುತ್ತಿರುತ್ತದೆ. ಕೈಸುಟ್ಟರೂ ಸಮಯಕ್ಕೆ ಸರಿಯಾಗಿ ಗಂಡನ ಲಂಚ್ ಬಾಕ್ಸ್ ಕಟ್ಟುವ ಗೃಹಿಣಿ, ಬಾಸ್ ಒತ್ತಡಕ್ಕೆ ತನ್ನದಲ್ಲದ ಕೆಲಸವನ್ನೂ ಮಾಡುವ ಸಹೋದ್ಯೋಗಿ, ಕಾಲೇಜಿನಲ್ಲಿ ಜಗಳವಾದಾಗ ಸಹಾಯ(?)ಕ್ಕೆಂದು ನಾಲ್ವರನ್ನು ಕರೆತರುವ ಗೆಳೆಯ, ಮ್ಯಾನೇಜರ್ ನ ವಾಂಛೆಯನ್ನು ಧಿಕ್ಕರಿಸುತ್ತಲೇ ಇದ್ದೊಂದು ನೌಕರಿಯನ್ನು ನಾಜೂಕಾಗಿ ನಿಭಾಯಿಸುತ್ತಿರುವ ಹುಡುಗಿ- ಇವರೆಲ್ಲ ಆಯಾ ಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರುತ್ತಾರೆ.  

   ಹೀಗೆ ಎದುರಿಗಿದ್ದವರ ಅವಶ್ಯಕತೆ ಅರ್ಥೈಸಿಕೊಂಡು ಆಯಾ ಸಮಯಕ್ಕೆ ಪರಿಹಾರ ಒದಗಿಸಿದ ವ್ಯಕ್ತಿ 
ಆ ಒಟ್ಟು ಪರಿಸರಕ್ಕೇನೋ ಒಂದು ಹಿತಾನುಭವ ಒದಗಿಸಿದ. ಆದರೆ ಈ ಹಿತಾನುಭವ ಜಗತ್ತಿನ ಕೇವಲ 50% ಜನಕ್ಕೆ ಮಾತ್ರ. ಅಂದರೆ, ಜಗತ್ತಿನ 50% ಸಮಸ್ಯೆ ಮಾತ್ರ ಪರಿಹಾರವಾಗಿದೆ. ಇನ್ನರ್ಧ ಹಾಗೇ ಉಳಿದು ಹೋಗಿದೆ. ಯಾಕೆಂದರೆ ಸರಳವಾದ ಸೂತ್ರವೊಂದನ್ನು ನಾವು ಮರೆತು ಹೋಗಿದ್ದೇವೆ. ಅಸಲಿಗೆ, ನಮಗೇನು ಬೇಕಿದೆ  ಅಂತ ಅರ್ಥೈಸಿಕೊಂಡು ಅದಕ್ಕನುಗುಣವಾಗಿ ತಮ್ಮ ಕೈಲಾದ ಪರಿಹಾರ ಒದಗಿಸಿದವರಿಗೆ ನಾವು ಯಾವತ್ತೂ 'ನಿನಗೇನು ಬೇಕಿದೆ?' ಅಂತ ಕೇಳಲಿಲ್ಲ. ಹಾಗೆ ಕೇಳಿ ಸ್ಪಂದಿಸುವ 
ಮೂಲಕ ಇಡೀ ಲೋಕಕ್ಕೆ 100% ಹಿತಾನುಭವ ಕೊಡುವ ಸರಳ ಲೆಕ್ಕವನ್ನು ನಾವು ಮರೆತುಬಿಟ್ಟೆವಾ? 

   ಹಾಗೆ ಲೆಕ್ಕ ಮರೆತಿದ್ದರಿಂದಲೇ ಇವತ್ತೇನಾಯಿತು? ಜೋರು ಬಾಯಿ ಇರುವ ಮನುಷ್ಯ ಮಾತ್ರ ಎಲ್ಲರಿಗೂ 
ಕಾಣುತ್ತಿದ್ದಾನೆ. ಮೆಲುದನಿಯಲ್ಲಿ ಮಾತನಾಡುವ ವ್ಯಕ್ತಿ ಯಾರಿಗೂ ಕಾಣಿಸುತ್ತಿಲ್ಲ. ಬರವಣಿಗೆಯಿಂದಲೇ 
ಮಾತನಾಡಬೇಕಿದ್ದ ಸಾಹಿತಿಗಳೂ ನಾಲಿಗೆಯಿಂದಲೇ ಕೂಗು ಹಾಕುತ್ತಾರೆ. ಪ್ರಶಸ್ತಿ ಪಡೆಯುವದರಲ್ಲೂ ಪ್ರಶಸ್ತಿ ಹಿಂತಿರುಗಿಸುವದರಲ್ಲೂ ಮಾತಿನದ್ದೇ ಅಬ್ಬರ. ಅದರ ಮುಂದುವರಿಕೆಯಾಗಿ ಒಬ್ಬರಿಗೇ ಹತ್ತಾರು ನಮೂನೆಯ 
ಪ್ರಶಸ್ತಿಗಳು, ಫಲಕಗಳು, ತೂಕದ ಚೆಕ್ಕುಗಳು!

   ಅದೇ ರೀತಿ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿಗಳ ಬಗ್ಗೆಯೂ ನನಗೆ ಅಸಮಾಧಾನವಿದೆ. ಸರ್ಕಾರವೂ 
ಸೇರಿದಂತೆ ನಮ್ಮಲ್ಲಿರುವ ಅನೇಕ ಬಗೆಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಬೇಕೆಂದರೆ ಸಾಹಿತಿಯೊಬ್ಬ ತನ್ನ ಕೃತಿಗಳನ್ನು ಆಯಾ ಸಂಘಟಕರಿಗೆ ಕಳುಹಿಸಿಕೊಡಬೇಕು. ನೀವು ಕೊಡಮಾಡುವ ಪುರಸ್ಕಾರಕ್ಕೆ ನನ್ನ ಕೃತಿಯನ್ನೂ ಪರಿಗಣಿಸಿ ಅಂತೆಲ್ಲ ಅರ್ಜಿ ಸಲ್ಲಿಸಬೇಕು. ಸಂಕೋಚ ಮತ್ತು ಮುಜುಗರಗಳನ್ನೇ ಇಂಧನವಾಗಿಸಿಕೊಳ್ಳಬೇಕಿದ್ದ ಸಾಹಿತಿ ಹೀಗೆ ಭಿಡೆಯಿಲ್ಲದೇ ಅರ್ಜಿ ಗುಜರಾಯಿಸುವದನ್ನು ನೋಡಿ  ಪೆಚ್ಚಾಗಬೇಕೋ ಅಥವಾ ಪಿಚ್ಚೆನ್ನಬೇಕೋ? 

   ಹೀಗಾಗಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಬಗ್ಗೆ, ಅದರ ಅಧ್ಯಕ್ಷರುಗಳ ಬಗ್ಗೆ ಎಷ್ಟೇ ಗೌರವ, ಹೆಮ್ಮೆಗಳಿದ್ದರೂ ಒಂದು ಸಣ್ಣ ಅಸಮಾಧಾನವಿದೇ. ಬಹುಶಃ ನನಗಿರುವ ಈ ಆಸೆ ದುಬಾರಿಯಾಗಿರುವಂಥದ್ದು. "ಸಮ್ಮೇಳನದ ಅಧ್ಯಕ್ಷನಾಗಿ ಈ ಸಾರೋಟು, ಕಾರು, ತೇರು, ಎತ್ತಿನಬಂಡಿ, ತೆರೆದ ಜೀಪುಗಳಲ್ಲಿ ಹಾರ ಹಾಕಿಸಿಕೊಂಡು ಕೈ ಬೀಸುತ್ತ ಊರೆಲ್ಲ ಮೆರವಣಿಗೆ ಮಾಡಿಸಿಕೊಳ್ಳುವದೆಂದರೆ ಪ್ರಾಣ ಹೋದಂತಾಗುತ್ತೆ ಕಣ್ರೀ, ಸಾಹಿತ್ಯದ ಭಾಷಣ, ನಿರ್ಣಯ, ಠರಾವುಗಳೇನೋ ಓಕೆ, ಆದರೆ ಇದೊಂದು ಮುಜುಗರದ ಕೆಲಸಕ್ಕೆ ಮಾತ್ರ ನನ್ನನ್ನು ಒತ್ತಾಯಿಸಬೇಡಿ.." ಅಂತ ಸಂಘಟಕರಿಗೆ ರೋಪು ಹಾಕುವ ಅಧ್ಯಕ್ಷರನ್ನು ನೋಡುವಾಸೆಯಿದೆ! 

   ಒಟ್ಟಿನಲ್ಲಿ ಕೃತಿಯನ್ನು ಆಸ್ವಾದಿಸುವದರೊಂದಿಗೆ ಅದರ ಕರ್ತೃವನ್ನೂ ಹೆಗಲಿಗೇರಿಸಿಕೊಳ್ಳುವಷ್ಟು ಓದುಗನನ್ನು ಸಹೃದಯಿಯನ್ನಾಗಿಸಿದ್ದು ಸಾಹಿತ್ಯದ ಮೇರುಗುಣ. ಆದರೆ ಅದೇ ಸಾಹಿತ್ಯ ಅಂಥದೊಂದು ಹೆಗಲನ್ನು ನಯವಾಗಿ ನಿರಾಕರಿಸುವಂತೆ ಕರ್ತೃವಿಗೆ ಸೂಚಿಸದೇ ಹೋದದ್ದು ವ್ಯಂಗ್ಯ.

   ಹೀಗಿರುವಾಗ ಗದುಗಿನ ಶಿಕ್ಷಕರೊಬ್ಬರು ನೆನಪಾಗುತ್ತಿದ್ದಾರೆ. ಹೆಸರು: ಬಿ.ಜಿ. ಅಣ್ಣಿಗೇರಿ. ಎಂಭತೈದಕ್ಕೂ 
ಮೀರಿ ವಯಸ್ಸಾಗಿರಬೇಕು ಅವರಿಗೆ. ಗದುಗಿನ 'ಮಾಡೆಲ್ ಹೈಸ್ಕೂಲ್' (ಇವತ್ತಿನ ಸಿ.ಎಸ್. ಪಾಟೀಲ್ 
ಪ್ರೌಢಶಾಲೆ)ನಲ್ಲಿ ನಾನು ಒಂಭತ್ತನೇ ತರಗತಿ ಓದುತ್ತಿದ್ದಾಗಲೇ ಅವರು ಅದೇ ಶಾಲೆಯ ಹೆಡ್ ಮಾಸ್ಟರ್ 
ಆಗಿ ನಿವೃತ್ತರಾದರು. ಅದಕ್ಕೂ ಸುಮಾರು ಇಪ್ಪತೈದು ವರ್ಷ ಮೊದಲೇ ಅವರು ಗದುಗಿನ ಸುತ್ತಲಿದ್ದ 
ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆಂದು ಆಶ್ರಮ ತೆರೆದವರು. ಅಲ್ಲಿ ಉಚಿತವಾಗಿ ವಿದ್ಯೆಯ ಜೊತೆಗೆ ಊಟ, 
ವಸತಿಯನ್ನೂ ನೀಡಿದವರು. ನಾನು ಹೈಸ್ಕೂಲ್ ಮುಗಿಸಿಯೇ ಹತ್ತತ್ತಿರ ಮೂರು ದಶಕಗಳಾಗಿವೆ. 
ಅವಿವಾಹಿತ ಅಣ್ಣಿಗೇರಿ ಮೇಷ್ಟ್ರು ಇವತ್ತಿಗೂ ಟ್ಯುಷನ್ನು, ಕ್ಲಾಸು ಅಂತ ಛಡಿ ಹಿಡಿದು ನಿಂತೇ ಇದ್ದಾರೆ. 

   ಶಿಕ್ಷಕ ವೃತ್ತಿಯಲ್ಲಿದ್ದಾಗ ಸಂಪೂರ್ಣ ಸಂಬಳವನ್ನೂ, ಈಗ ಪಿಂಚಣಿ ಹಣವನ್ನೂ ಆಶ್ರಮದ 
ವಿದ್ಯಾರ್ಥಿಗಳಿಗೆ ಎತ್ತಿಟ್ಟಿರುವ ಅಣ್ಣಿಗೇರಿಯಂಥ ಸಂತ ಶಿಕ್ಷಕರಿಗೆ ಎಲ್ಲಿದೆ ಸಾರೋಟು? ಎಲ್ಲಿದೆ ತೆರೆದ 
ಜೀಪಿನ ಮೆರವಣಿಗೆ? ಹೆಚ್ಚುಕಡಿಮೆ ಮೂರು ಪೀಳಿಗೆಯ ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ವಿದ್ಯೆ ಹಂಚಿ 
ಆಶ್ರಯ ಕೊಟ್ಟ ಈ ಮೇಷ್ಟ್ರ ಮುಖ ಎಷ್ಟು ಟೀವಿ ಚಾನಲ್ಲುಗಳಲ್ಲಿ ಬಂದಿದೆ? ಆರಂಭದ ಅನಾಮಿಕ ಕವಿಯ ಮತ್ತದೇ ಕವಿತೆಯನ್ನು ಗುನುಗುಡುವದಾದರೆ,  

ಹೊನ್ನಿಗೆ ಪರಿಮಳವಿಲ್ಲ, 
ಕಬ್ಬಿಗೆ ಪುಷ್ಪವಿಲ್ಲ,
ಗಂಧಮರದೊಳು ಒಂದಿನಿತೂ ಫಲವಿಲ್ಲ.. 

ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?    
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, April 11, 2018

ಪುಕ್ಕಟೆ ಜಾತ್ರೆಯಲ್ಲಿ ಒಂದು ಸೊಬಗನ್ನು ತೋರಿದವನು..


"ಚುನಾವಣೆಗಳಿಗೂ ಮಠಗಳಿಗೂ ಏನು ಸಂಬಂಧ?" 
ಮೊನ್ನೆ ಹಿರಿಯ ಸ್ನೇಹಿತರೊಬ್ಬರು ಕೇಳುತ್ತಿದ್ದರು. ಅವರ ಪ್ರಶ್ನೆಯಲ್ಲಿ ಅರ್ಧ ಗೇಲಿಯಿತ್ತು, ಅರ್ಧ ಸಿಟ್ಟಿತ್ತು. ನಮಗೆಲ್ಲ ಗೊತ್ತಿದೆ: ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಎಲ್ಲ ಪಕ್ಷಗಳ ಧುರೀಣರು ಹತ್ತಾರು ಮಠಗಳತ್ತ ದೌಡಾಯಿಸುವದು, ಅಲ್ಲಿನ ಹಿರಿ, ಕಿರಿ ಸ್ವಾಮೀಜಿಗಳ ಕಾಲಿಗೆ ಬೀಳುವದು, ಒಂದಿಷ್ಟು ಹಾರ-ಶಾಲುಗಳ ವಿನಿಮಯ ಮತ್ತು ಇವೆಲ್ಲದರ ಕುರಿತಂತೆ ಮರುದಿನ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿ. 

   ಸ್ನೇಹಿತರ ಪ್ರಶ್ನೆ ತಾತ್ವಿಕವಾಗಿತ್ತು. ಇಷ್ಟಕ್ಕೂ ಈ ಹಿರಿಯರೇನೂ ಮುಗ್ಧರಲ್ಲ. ಅವರು ಒಂದು ಸಮತೋಲಿತ ಸಮಾಜದ ನಿರ್ಮಾಣದಲ್ಲಿ ಮಠ, ಮಂದಿರ, ಮಸೀದಿಗಳ ಅವಶ್ಯಕತೆಗಳನ್ನು ಅರಿತವರು. ದೇಗುಲಗಳಲ್ಲಿರಬಹುದಾದ ‘ಹೀಲಿಂಗ್ ಪವರ್ 'ನ್ನು ಮನಗಂಡವರು. ಲೌಕಿಕವಾದ ಮನುಷ್ಯನ ಶ್ರಮಕ್ಕೆ ಒಮ್ಮೊಮ್ಮೆ ಬೆಲೆ ಸಿಗದೇ ಹೋದಾಗ ಆತ ಅಲೌಕಿಕ ಪವಾಡಗಳನ್ನು ನಿರೀಕ್ಷಿಸುತ್ತಾನಂತೆ. ಆತನಿಗೆ ಅದೊಂದು ತಾತ್ಕಾಲಿಕ ಶಮನವಷ್ಟೇ. ಅಷ್ಟಕ್ಕೇ ಅದನ್ನು ಮೂಢನಂಬಿಕೆ ಅಂತ ಕರೆದರೆ ಆ ಮನುಷ್ಯನ ಶ್ರಮವನ್ನು ಅವಮಾನಿಸಿದಂತೆ.

   ಹೀಗಿರುವಾಗ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ವಾಮೀಜಿ, ಸಂತರೆನಿಸಿಕೊಂಡವರು ಇಂತಿಂಥ ಅಭ್ಯರ್ಥಿ ಮತ್ತು ಇಂತಿಂಥ ಪಕ್ಷವನ್ನೇ ಬೆಂಬಲಿಸಬೇಕೆಂದು ಸಮಾಜಕ್ಕೆ ನೇರಾನೇರವಾಗಿ ಕರೆ ಕೊಡತೊಡಗುತ್ತಾರೆ. ಇಲ್ಲಿ ಚುನಾವಣಾ ಅಭ್ಯರ್ಥಿಯನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಆತ ಗೆಲ್ಲಲೆಂದು ಎಲ್ಲ ದಾರಿಗಳನ್ನೂ ಬಳಸಿಕೊಳ್ಳುತ್ತಾನೆ.

   ಆದರೆ ಸಂತರು, ಸ್ವಾಮೀಜಿಗಳು ಹಾಗಲ್ಲವಲ್ಲ? ಅವರು ಒಂದರ್ಥದಲ್ಲಿ ಎಲ್ಲವನ್ನೂ ತ್ಯಜಿಸಿದವರು. ಇನ್ನೊಂದರ್ಥದಲ್ಲಿ ಎಲ್ಲರನ್ನೂ ಅಪ್ಪಿಕೊಂಡವರು. ಒಂದು ಸ್ವಾರ್ಥದ್ದು; ಇನ್ನೊಂದು, ನಿರ್ವ್ಯಾಜ ಪ್ರೇಮದ್ದು. ಇದು ಅವರ ಪರಂಪರೆ. ಹಾಗಂತ ಭಾವಿಸಿಕೊಂಡೇ ಸಂತನ ಸನ್ನಿಧಿಗೆ ಕಾಲಿಡುವ ಭಕ್ತನಿಗೆ ಭಾರತದಂಥ ದೇಶದಲ್ಲಿ ಚುನಾವಣೆ ಎಂಬುದು ಎಷ್ಟು ಮುಖ್ಯ,  ಅದರಲ್ಲೂ ಓಟು ಮಾರಿಕೊಳ್ಳದೇ ಪ್ರತಿಯೊಬ್ಬರೂ ಮತ ಹಾಕುವಂಥ ಪ್ರಕ್ರಿಯೆ ಎಷ್ಟು ಮುಖ್ಯ ಅನ್ನುವ ತಿಳುವಳಿಕೆ ಮೂಡಿಸಬೇಕಿದ್ದ ನಮ್ಮ ಮಠ, ದೇಗುಲಗಳು ನಿರ್ದಿಷ್ಟ ಚುನಾವಣಾ ಅಭ್ಯರ್ಥಿಗಳ ಬೆಂಬಲಿಗರಂತೆ ಹೇಳಿಕೆ ಕೊಡುವದು ಎಂಥ ವಿಪರ್ಯಾಸ. 

   ಒಟ್ಟಿನಲ್ಲಿ ಸಮಾಜದ ಮನಸ್ಥಿತಿಯನ್ನು ತನ್ನದೇ ಆದ ಒಂದು ಅಲೌಕಿಕ ಸೂತ್ರದಡಿ ಮುನ್ನಡೆಸಬೇಕಿದ್ದ ಮಠ, ಮಂದಿರಗಳು ಹೀಗೆ ಚುನಾವಣಾ ಭರಾಟೆಯಲ್ಲಿ ತಾವೂ ಒಂದು ಭೌತಿಕ ಪ್ರಚಾರ ಸಾಮಗ್ರಿಯಂತೆ ಪ್ರಚುರಪಡಿಸಿಕೊಳ್ಳುತ್ತಿರುವಾಗ, ಈ ನಮ್ಮ ರಾಜಕೀಯ ಪಕ್ಷಗಳು ಅದು ಹೇಗೆ ಗಂಭೀರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಲ್ಲವು? ಮೊದಲೆಲ್ಲ ರಾಜಕಾರಣಿಗಳಿಗೆ ಸಣ್ಣಸಣ್ಣ ದುರಾಸೆಗಳಿದ್ದವು. ಹೆಚ್ಚೆಂದರೆ, ಒಂದು ಪಕ್ಷದಲ್ಲಿ ನೆಲೆ ಸಿಗಲಿಲ್ಲವೆಂದರೆ ಆತ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುತ್ತಿದ್ದ. ಹಾಗೆ ಮತ್ತೊಂದು ಪಕ್ಷಕ್ಕೆ ಕಾಲಿಡುತ್ತಲೇ ವರ್ಷದ ಹಿಂದಷ್ಟೇ ಸಮಾ ಬೈದಾಡಿಕೊಂಡಿದ್ದ ವ್ಯಕ್ತಿಗೇ ಒಂಚೂರೂ ಮುಜುಗರವಿಲ್ಲದೆ ಹಾರ ಹಾಕುತ್ತಿದ್ದ. 

   ಇವತ್ತು ಕಾಲ ಬದಲಾಗಿದೆ. ಯುದ್ಧವೂ ಬದಲಾಗಿದೆ. ಹಾಗಾಗಿ ಇಲ್ಲಿ ಹೊಸತೊಂದು ಧರ್ಮ ಹುಟ್ಟಲು ಯಾರಿಗೂ ಸಾಕ್ಷಾತ್ಕಾರವಾಗಬೇಕಿಲ್ಲ. ಪ್ರಾಂತೀಯ ಅಸ್ಮಿತೆಯನ್ನು ಜಾಗ್ರತಗೊಳಿಸಲು ಯಾವ ಟ್ರಿಗರಿಂಗ್ ಸಂದರ್ಭವೂ ಬೇಕಿಲ್ಲ. ಒಂದೇ ಒಂದು ಚುನಾವಣಾ ಘೋಷಣೆ ಸಾಕು: ಅದು ಇಬ್ಬರ ಮಧ್ಯೆ ನವಿರಾಗಿ ಪಲ್ಲವಿಸುತ್ತಿದ್ದ ಪ್ರೇಮವನ್ನು ಹೊಡೆದುಹಾಕುತ್ತದೆ. ಧರ್ಮವನ್ನು ಒಡೆದುಹಾಕುತ್ತದೆ. ಇದರ ಮುಂದುವರಿಕೆಯಾಗಿ, ಕನ್ನಡವನ್ನು ಎತ್ತಿ ಹಿಡಿಯುವೆ ಅಂತೆಲ್ಲ ಒಂದಿಡೀ ಪುಟ ಜಾಹಿರಾತು ಕೊಡುವ ಅಭ್ಯರ್ಥಿಗೆ ಅಲ್ಲೇ ಇಪ್ಪತ್ತೆಂಟು ವ್ಯಾಕರಣ ದೋಷಗಳಿರುವದು ಕಾಣಿಸುವದೇ ಇಲ್ಲ. ಇದೆಲ್ಲದರ ಮಧ್ಯೆ ಪುಕ್ಕಟೆ ಸಾಮಾನುಗಳ ಜಾತ್ರೆ ಬೇರೆ! 

   ಇಷ್ಟಕ್ಕೂ ಉದ್ಯೋಗ, ಶ್ರಮ, ಅನ್ನ ಮತ್ತು ಜೀರ್ಣವಾಗುವಿಕೆ ಅನ್ನುವದೆಲ್ಲ ಮನುಷ್ಯನ ಜೀವನಚಕ್ರ. ಅದು ಆತನ ಜೀವಂತಿಕೆಯ ಕುರುಹು. ಅದನ್ನು ಮರೆತವರು ಮಾತ್ರ ಪುಕ್ಕಟೆ ಸಾಮಾನು ಕೊಡುವ ಪ್ರಣಾಳಿಕೆ ಕೊಡಬಲ್ಲರು. ಇಂಥ ಅಭ್ಯರ್ಥಿಗಳಿಗೆ ಕಳಶವಿಟ್ಟಂತೆ ಮೊನ್ನೆ (ವಿಕ ವರದಿ: ಏಪ್ರಿಲ್ 7) ಸ್ವತಂತ್ರ ಅಭ್ಯರ್ಥಿಯೊಬ್ಬ 'ನಾನ್ಯಾಕೆ ಎಂಎಲ್ಲೆ ಆಗಬಾರದು?' ಅಂತನ್ನುವ ಹೆಡ್ಡಿಂಗ್ ಕೊಟ್ಟು ಸಿದ್ಧಪಡಿಸಿದ್ದ ಆತನ ಪ್ರಣಾಳಿಕೆಯಲ್ಲಿದ್ದ ಬಾಣಗಳನ್ನು ಗಮನಿಸಿ: ಕ್ಷೇತ್ರದ ಮಹಿಳೆಯರಿಗೆ ಪುಕ್ಕಟೆಯಾಗಿ ಹವೀಜ, ಖಾರದಪುಡಿ ಮತ್ತು ಉಪ್ಪಿನಕಾಯಿ. ಎಲ್ಲರಿಗೂ ವಾರಕ್ಕೆರಡು ಸಲ ಮಾಂಸ ಸೇರಿದಂತೆ ದಿನಕ್ಕೆ ಮೂರೊತ್ತು ಊಟ, ಎರಡೊತ್ತು ಕಾಫಿ/ಟೀ. ವಯಸ್ಕರಿಗೆ ತಿಂಗಳ ಲೆಕ್ಕದಲ್ಲಿ ಮದ್ಯ ಫ್ರೀ, ಹಬ್ಬಗಳಿಗೆ ಬಟ್ಟೆ ಫ್ರೀ, ಬಸ್ ಟಿಕೆಟ್ ಫ್ರೀ, ಜೊತೆಗೆ ಮೊಬೈಲ್ ಕರೆಯೊಂದಿಗೆ ಡೇಟಾ ಫ್ರೀ! 

   ಇಂಥವೇ ಪುಕ್ಕಟೆಗಳ ಪ್ರಣಾಳಿಕೆ ಹಿಡಿದು ಬರುವ ಪಕ್ಷಗಳಿಗೆ ನಾವು ಪ್ರಶ್ನಿಸಲೇಬೇಕಿದೆ: ಅಲ್ಲ ಸ್ವಾಮೀ, ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯೇನೋ ಕಟ್ಟಿಸುತ್ತೀರಿ. ಆದರೆ ರೋಗವೇ 
ಬರದಂತೆ ಮಾಡಲು ಏನಾದರೂ ಯೋಜನೆ ಇದೆಯಾ? ಒಂದಾದರೂ ಸರ್ಕಾರಿ ಜಿಮ್? ಸರ್ಕಾರಿ ಗರಡಿಮನೆ? ಒಂದಿಷ್ಟು ಸುಗಮ ಸಂಚಾರ? ಉಸಿರಾಡಲು ಒಂದಿಷ್ಟು ಶುದ್ಧಗಾಳಿ? ನಿಮ್ಮದೇ ಸ್ಕೂಲಿನ ಮಕ್ಕಳಿಗೆ ಆಟವಾಡಲೆಂದು ಒಂದೆರೆಡು ಚೆಂಡು? ಅಲ್ಲ ಸ್ವಾಮೀ, ಊರಾದರೂ ಅಷ್ಟೇ ರಬ್ಬರಾದರೂ ಅಷ್ಟೇ, ಹಿಗ್ಗುವಿಕೆಗೆ ಒಂದು ಮಿತಿಯುಂಟಲ್ಲವಾ? ಇರುವ ಒಂದು ಬೆಂಗಳೂರನ್ನೇ ಎಷ್ಟು ಅಂತ ಹಿಗ್ಗಿಸುವದು? ದೂರದ ಗುಲ್ಬರ್ಗ, ರಾಯಚೂರು, ಹುಬ್ಬಳ್ಳಿಯ ಹುಡುಗನಿಗೆ ತಾನು ಕಲಿತ ವಿದ್ಯೆಗೆ ತಕ್ಕಂತೆ ತನ್ನೂರಿನಲ್ಲೇ ಕೆಲಸ ಸಿಗುವದಾದರೆ ಬೆಂಗಳೂರಿಗಾದರೂ ಯಾಕೆ ಬಂದಾನು? ನಿಮ್ಮ ಜೋಳಿಗೆಯಲ್ಲಿ ಇದಕ್ಕೇನಾದರೂ ಜಾಗವುಂಟೋ? ಬಹುಶಃ ಇಂಥವೇ 
ತಕರಾರುಗಳಿಗೆ ನಮ್ಮ ಪಕ್ಷಗಳಲ್ಲಿ ಉತ್ತರವಿಲ್ಲ. ಅಷ್ಟರಮಟ್ಟಿಗೆ ಅವು ಕೆಟ್ಟು ಹೋದಂತಿವೆ.

   ಇಂಥವರ ಮಧ್ಯೆ ಊರಿನ ಚುನಾವಣಾ ತಮಾಷೆ ನೆನಪಾಗುತ್ತಿದೆ. ಊರಲ್ಲಿ ಮುನ್ಸಿಪಾಲ್ಟಿ ಅಥವಾ ವಿಧಾನಸಭಾ ಚುನಾವಣೆಯಿರಲಿ, ಘೋಷಣೆಯಾಗುತ್ತಿದ್ದಂತೆ  ಒಬ್ಬ ಆಸಾಮಿ ತಪ್ಪದೇ ಸ್ಪರ್ಧೆಗೆ ನಿಲ್ಲುತ್ತಿದ್ದ. ಕೇವಲ ನಾಲ್ಕಡಿ ಎತ್ತರವಿದ್ದ ಆತ ಸ್ವತಂತ್ರ ಅಭ್ಯರ್ಥಿಯಾಗಿರುತ್ತಿದ್ದ. ಹಿಂದೆಮುಂದೆ ಹಿಂಬಾಲಕರನ್ನು ಕಟ್ಟಿಕೊಂಡು ಓಡಾಡುವ ಶಕ್ತಿ ಇರದ ಈ ನಮ್ಮ ಆಸಾಮಿ ಧೋತರ ಕಟ್ಟಿಕೊಂಡು ಒಬ್ಬನೇ ಪ್ರಚಾರ ಮಾಡುತ್ತಿದ್ದ. ರಾತ್ರಿಯಾದರೆ ಸಾಕು, ತನ್ನ ಹೆಸರನ್ನು ಕೊರೆಯಲಾಗಿದ್ದ ತಗಡಿನ ಶೀಟ್ ಮತ್ತು ಇದ್ದಿಲಿನ ಪುಡಿಯನ್ನು ಹಾಕಿದ ನೀರಿನ ಬಕೆಟ್ ಹಿಡಿದುಕೊಂಡು ಒಬ್ಬನೇ ಮುಗುಮ್ಮಾಗಿ ತಿರುಗುತ್ತಿದ್ದ. ಬೆಳಗೆದ್ದು ನೋಡಿದರೆ ಸುಣ್ಣ ಹೊಡೆಸಿಕೊಂಡ ನೂರಾರು ಮನೆಗಳ 
ಗೋಡೆ, ಕಾಂಪೌಂಡುಗಳ ಮೇಲೆಲ್ಲ ಈ ಪುಣ್ಯಾತ್ಮ ಇದ್ದಿಲು ಪುಡಿಯನ್ನೂ ತಗಡಿನ ಶೀಟನ್ನೂ ಬಳಸಿ ತನ್ನ ಮತವನ್ನು ಯಾಚಿಸಿರುತ್ತಿದ್ದ! ಎರಡು ಸಲ ನೀರು ಹಾಕಿದರೆ ತೊಳೆದುಹೋಗುತ್ತಿದ್ದ ಈತನ ಪ್ರಚಾರಕಾರ್ಯದ ಬಗ್ಗೆ ಜನ ಬಿದ್ದುಬಿದ್ದು ನಗುತ್ತಿದ್ದರು. ಕುಶಾಲಿಗೆಂದು  ತಮ್ಮತಮ್ಮ ಏರಿಯಾಗಳಿಗೆ ಕರೆಸಿ, ಮಲ್ಲಿಗೆಮಾಲೆ ಹಾಕುತ್ತಿದ್ದರು. ತನಗೆಂದು ಹಾಕಿದ್ದ ಕುರ್ಚಿಯ ಮೇಲೇರಿ ಸಿಕ್ಕಸಿಕ್ಕಂತೆ ಭಾಷಣ ಮಾಡುತ್ತಿದ್ದ. ಗಾಂಧೀ ಟೋಪಿ ಧರಿಸುತ್ತಿದ್ದ ಈ ನಾಲ್ಕಡಿ ಆಸಾಮಿ ಭಾಷಣ ಮಾಡುತ್ತಿದ್ದಾಗಲೇ ಯಾರೋ ತಲೆಯ ಮೇಲೆ ನೀರು ಸುರಿದಾಗಲೂ ಧೃತಿಗೆಡದೇ ಮುಂದುವರೆಯುತ್ತಿದ್ದ. ಹುಚ್ಛೆದ್ದ ಜನರ ಕರತಾಡನ. 

   ಎದುರಾಳಿಗಳು ಈ ಭೂಪನನ್ನ ಕಡೆಗಣಿಸುವಂತಿರಲಿಲ್ಲ. ಎಲ್ಲಿ ಮತಗಳನ್ನು ಒಡೆಯುತ್ತಾನೋ ಎಂಬ ಭಯದಲ್ಲಿ ಅವರಿಂದ ಧಮ್ಕಿಯೋ ವಿನಂತಿಯೋ ಬರುತ್ತಿತ್ತು. ಅಷ್ಟೇ! ಸರಿಯಾಗಿ ನಾಮಪತ್ರ ಹಿಂತೆಗೆಯುವ ದಿನದಂದು ನಾಮಪತ್ರ ಹಿಂತೆಗೆದುಕೊಳ್ಳುತ್ತಿದ್ದ. ಮರುದಿನ ಯಥಾಪ್ರಕಾರ 
ಮಾರ್ಕೆಟ್ಟಿನ ಜನಜಂಗುಳಿಯ ಮಧ್ಯೆ ತನ್ನದೊಂದು ಛತ್ರಿಯನ್ನು ತಲೆಕೆಳಗಾಗಿ ಹರವಿ, ಅದರಲ್ಲೊಂದಿಷ್ಟು ಪಾಕೀಟುಗಳನ್ನು ಇಟ್ಟುಕೊಂಡು ಎಂದಿನಂತೆ ಕೂಗು ಹಾಕುತ್ತಿದ್ದ: 
'ತಗೋರೀ, ತಗೋರೀ, ತಿಗಣೆಪುಡಿ, ಜಿರಳೆಪುಡಿ, ಇಲಿ ಪಾಶಾಣ..'                
            
   ಹೀಗೆ ತನ್ನ ಅಸಡ್ಡಾಳ ವರ್ತನೆಗಳಿಂದ ಕಂಗೊಳಿಸುತ್ತಲೇ ನಮ್ಮಂಥ ಅಬ್ಬೇಪಾರಿಗಳಿಗೆ ಆತ ತೋರಿಸಿಕೊಟ್ಟಿದ್ದು ಪ್ರಜಾಪ್ರಭುತ್ವದ ಸೊಬಗು ಮತ್ತು ಶಕ್ತಿಗಳನ್ನು ಮಾತ್ರ. ಚುನಾವಣೆ ಎಂಬುದು ಇಂಥ ತಮಾಷೆಗಳಿಂದ ಹಿಡಿದು ಇವತ್ತಿನ ಪುಕ್ಕಟೆ ಜಾತ್ರೆಯವರೆಗೂ ತೇಲಿ ಬಂದಿದೆ. ಇಲ್ಲೀಗ ಬಹುತೇಕರು ತಮ್ಮತಮ್ಮ ಜಾತಿ-ಧರ್ಮದ ಸಮೇತ ಒಂದಿಲ್ಲೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿರುವಾಗ ದೇಶದ ಜನತೆ ಒಂದು ನದಿಯಂತೆ ಯೋಚಿಸಬೇಕಿದೆ. ನದಿಯಂತೆ ವರ್ತಿಸಬೇಕಿದೆ. ಹೀಗಿರುವಾಗ, ಸಂದರ್ಭಕ್ಕೆ ಒಪ್ಪುತ್ತದೋ ಬಿಡುತ್ತದೋ, ಹಳೆಯ ಕವಿತೆಯೊಂದನ್ನು ನಿಮಗೆ ತೋರಿಸಬೇಕೆನಿಸುತ್ತಿದೆ:
                                                  
ಎಲ್ಲೋ ಬೆಟ್ಟದ ನೆಲ್ಲಿಕಾಯಿ ಬುಡದಲ್ಲಿ
ಹುಟ್ಟುವ ನದಿಗೆ ಭಾಷೆ ಬಾರದು.
ತೊದಲುತ್ತಲೇ ಇಳಿಜಾರಿನಲ್ಲಿ ಧುಮುಕುವ 
ಜಲಪಾತಕ್ಕೆ ಹದಿಹರೆಯದ ಗುಂಗು. 

ಭೋರ್ಗರೆದು ಪ್ರಪಾತಕ್ಕಿಳಿದ ಮೇಲೆ ಕಂಡಿದ್ದೇನು:
ಯೌವನದ ಶಾಂತ ಮನಸೇ?
ಮಿಥುನ ತಂದಿಟ್ಟ ನಿಷ್ಕ್ರೀಯತೆಯೇ?
ಅಂಕುಡೊಂಕಾಗಿ ಅತ್ತಿಂದಿತ್ತ ಹರಿದಾಡುವ 
ನದಿಗೆ ಗೊತ್ತು ಗುರಿಯಿಲ್ಲ
-ಅಂತ ಹೇಳಿದವರೇ ಇಲ್ಲಿ ಅವಶೇಷವಾದರು. 

ಮುಠ್ಠಾಳರಾ, ನದಿ ಯಾವಾಗಲೂ ಒಂದು
ಅಗೋಚರ ಸೆಳೆತಕ್ಕಾಗಿ ನಡೆಯುತ್ತಲೇ ಇರುತ್ತದೆ;
ಒಂದೋ ಆಕಾಶದಡೆಗೆ ಅಥವಾ ಸಾಗರದೆಡೆಗೆ.
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 11.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, March 28, 2018

ಸದಾ ಎಚ್ಚರದಲ್ಲಿರುವ ನಾಯಿಯೇ ತಥಾಗತ


      ದೇಕೋ ಏನೋ ನನಗೆ ನಾಯಿಗಳನ್ನು ಕಂಡರೆ ತುಸು ಭಯ. ಬಹುಶಃ ಬಾಲ್ಯದಲ್ಲಿ ಬೀದಿನಾಯಿಯೊಂದು ಅಂಡಿಗೆ ಕಚ್ಚಿದ್ದು ಕಾರಣವಿರಬೇಕು. ಹೀಗಾಗಿ ರಸ್ತೆಯಲ್ಲಿ ಹೋಗುವಾಗ ಎದುರಿಗೆ ಯಾರಾದರೂ ನಾಯಿ ಹಿಡಿದುಕೊಂಡು ಬಂದಾಗಲೆಲ್ಲ ನಾನು ಅಷ್ಟುದ್ದ ದೂರ ಸರಿದು ಸಾಗುತ್ತಿರುತ್ತೇನೆ. ಆಗೆಲ್ಲ ಆ ನಾಯಿಯ ಮಾಲೀಕರು ನನ್ನನ್ನು ನೋಡಿ ನಸುನಗುತ್ತ, "ಅಯ್ಯೋ, ನನ್ನ ನಾಯಿ ಏನೂ ಮಾಡೋದಿಲ್ಲ, ಅದ್ಯಾಕೆ ಅಷ್ಟೊಂದು ದೂರ ಓಡ್ತೀರಾ.." ಅಂತ ಹೇಳುತ್ತಿರುತ್ತಾರೆ. ಕೆಲವೊಮ್ಮೆ ಯಾರದೋ ಮನೆಗೆ ಹೋದಾಗ ಗೇಟಿನ ಬಳಿ ಈ ನಾಯಿ ಗುರ್ರೆಂದು ಭಯಂಕರವಾಗಿ ಗುರಾಯಿಸುತ್ತಿದ್ದರೂ ಮಾಲೀಕರದು ಮಾತ್ರ ಯಥಾಪ್ರಕಾರ ಶಾಂತಿಮಂತ್ರ. 'ಅದೇನೂ ಮಾಡೋಲ್ಲ, ಅದೇನೂ ಮಾಡೋಲ್ಲ..' ಅಂತ ಧೈರ್ಯ ಕೊಡುತ್ತಿರುತ್ತಾರೆ!

   ಆಗೆಲ್ಲ ಮಾಲೀಕರ ಈ ಥರದ ಸುಮಾರು ಡೈಲಾಗುಗಳಿಗೆ ನನ್ನ ಉತ್ತರ ಒಂದೇ: ಹೌದು ಸ್ವಾಮೀ, ನಿಮ್ಮ ನಾಯಿ ಏನೂ ಮಾಡೋದಿಲ್ಲ ಅಂತ ನಿಮಗೇನೋ ಗೊತ್ತಿದೆ. ಆದರೆ ತಾನೇನೂ ಮಾಡಬಾರದು ಅಂತ ಈ ನಾಯಿಗೆ ಗೊತ್ತಿರಬೇಕಲ್ಲ?

   ತುಂಬ ವರುಷಗಳ ಹಿಂದೆ ಕೇಳಿದ ತಮಾಷೆಯಿದು. ಒಂದೂರಿನಲ್ಲಿ ಒಂದು ನಾಯಿ ಇತ್ತಂತೆ. ಬಲು ಚೂಟಿ ಮತ್ತು ಚತುರ ನಾಯಿ. ಅದು ತನ್ನ ಯಜಮಾನನ ಬಹುತೇಕ ಕೆಲಸಗಳನ್ನು ಮಾಡುತ್ತಿತ್ತು. ಮನೆಗೆ ತರಕಾರಿ ತರುವದು, ಬಟ್ಟೆ ಒಗೆದು ಒಣ ಹಾಕುವದು, ಇಸ್ತ್ರೀ ಮಾಡುವದು ಇತ್ಯಾದಿ ಇತ್ಯಾದಿ. ಹೀಗಿರುವಾಗ, ಒಂದು ದಿನ ಯಜಮಾನ ಕೊಟ್ಟ ಸಾಮಾನುಗಳ ಪಟ್ಟಿ ಇಟ್ಟುಕೊಂಡು, ಕೊರಳಿಗೆ ಒಂದು ಚೀಲ ನೇತು ಹಾಕಿಕೊಂಡು ಸೂಪರ್ ಮಾರ್ಕೆಟ್ಟಿಗೆ ಹೊರಟಿತ್ತು. 
ದಾರಿ ಮಧ್ಯೆ ಟ್ರಾಫಿಕ್ ಸಿಗ್ನಲ್ ಬಂದಾಗ ನಿಂತುಕೊಂಡು, ಸ್ಟಾಪಿನಲ್ಲಿ ಬಸ್ ಹತ್ತಿಕೊಂಡು, ಪರಿಚಯದ ಕಂಡಕ್ಟರ್ ಹತ್ತಿರ ಟಿಕೆಟ್ ತೆಗೆದುಕೊಂಡು ಸೂಪರ್ ಮಾರ್ಕೆಟ್ ತಲುಪಿತು. ಅಲ್ಲಿದ್ದ ಸೇಲ್ಸ್ ಹುಡುಗನಿಗೆ ಲಿಸ್ಟ್ ತೋರಿಸಿ ಬ್ರೆಡ್ ಮತ್ತು ಮೊಟ್ಟೆಗಳನ್ನು ಚೀಲಕ್ಕೆ ಹಾಕಿಸಿಕೊಂಡು ಮನೆಯತ್ತ ಹೊರಟಿತು. ಆದರೆ ಆರಂಭದಿಂದಲೂ ಈ ನಾಯಿಯ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಿಕ್ಕಾಪಟ್ಟೆ ಅಚ್ಚರಿ. ಧತ್ತೇರಿ, ಇದ್ಯಾವ ನಾಯಿ? ಸಿಗ್ನಲ್ಲಲ್ಲಿ ನಿಂತುಕೊಂಡು, ಸ್ಟಾಪಲ್ಲಿ ಬಸ್ ಹತ್ತಿದ್ದಲ್ಲದೇ ಮಾರ್ಕೆಟ್ಟಿಗೂ ಹೋಗಿ ಸಾಮಾನು ತರುತ್ತಲ್ಲಪ್ಪ ಅಂತ ಹೆಜ್ಜೆಹೆಜ್ಜೆಗೂ ಅಚ್ಚರಿಗೊಳಗಾಗುತ್ತಿದ್ದ ಆ ವ್ಯಕ್ತಿ ಈ ನಾಯಿಯನ್ನೇ ಹಿಂಬಾಲಿಸುತ್ತಿದ್ದ. 
                    
   ಕೊನೆಗೊಮ್ಮೆ ನಾಯಿ ತನ್ನ ಮನೆ ತಲುಪಿ ಕರೆಗಂಟೆ ಒತ್ತತೊಡಗುತ್ತದೆ. ಏಳೆಂಟು ಸಾರಿ ಒತ್ತಿದರೂ ಯಜಮಾನ ಬಾಗಿಲು ತೆರೆಯದೇ ಹೋದಾಗ ಈ ನಾಯಿ ಕಿಟಕಿ ಬಳಿ ಬಂದು ಜೋರಾಗಿ ಬೊಗಳತೊಡಗುತ್ತದೆ. ಸ್ವಲ್ಪ ಸಮಯದ ಬಳಿಕ ಬಾಗಿಲು ತೆರೆದ ಯಜಮಾನ ಸಿಟ್ಟಿನಿಂದ ನಾಯಿಗೆ ಬಾರಿಸತೊಡಗುತ್ತಾನೆ. ಅಷ್ಟೊತ್ತಿಗೆ ಈ ನಾಯಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಗೆ ಯಜಮಾನನ ವರ್ತನೆ ನೋಡಿ ಸಿಟ್ಟು ಬರುತ್ತದೆ. ಆತ ಯಜಮಾನನ ಬಳಿ ಬಂದು, "ಏನ್ರೀ, ನಿಮ್ಮ ನಾಯಿ ಎಷ್ಟೆಲ್ಲಾ ಕೆಲಸ ಮಾಡುತ್ತೆ. ಬಸ್ ಹತ್ತುತ್ತೆ, ಟಿಕೆಟ್ ತಗೊಳ್ಳತ್ತೆ, ಸಾಮಾನನ್ನೂ ತರುತ್ತೆ. ಅಯ್ಯಯ್ಯಪ್ಪ.. ಇಂಥಾ ನಾಯಿಗೆ ಅದೇನು ತಪ್ಪು ಮಾಡಿತು ಅಂತ ಹೊಡಿತಿದೀರಾ?" ಅಂತ ನಾಯಿಯ ಪರ ವಕಾಲತ್ತು ಮಾಡುತ್ತಾನೆ. ಯಜಮಾನನಿಗೆ ಮೊದಲೇ ತಲೆಕೆಟ್ಟಿತ್ತು ಅಂತ ಕಾಣುತ್ತದೆ. ಆತ ಈ ವ್ಯಕ್ತಿಯನ್ನು ದುರುಗುಟ್ಟುತ್ತ ಸಿಟ್ಟಿನಿಂದ ಒದರಾಡತೊಡಗಿದ:

"ಯೋವ್, ಹೋಗಯ್ಯ ನಿಂದೊಂದು.. ನಿದ್ದೆ ಎಲ್ಲ ಹಾಳಾಯಿತು. ಎಷ್ಟು ಸಲ ಹೇಳಿದೀನಿ ಈ ನಾಯಿ ಮುಂಡೇದಕ್ಕೆ. ಹೊರಗೆ ಹೋಗುವಾಗ ಮನೆ ಕೀಲಿಕೈ ತೆಗೆದುಕೊಂಡು ಹೋಗು ಅಂತ. ಮರೆತು ಸುಮ್ಮನೇ ಕಿಟಕಿ ಹತ್ತಿರ ಬೊಗಳ್ತಾ ಇರ್ತದೆ.."                       

   ನಿರೀಕ್ಷೆಗಳೇ ಹಾಗೆ. ಒಮ್ಮೊಮ್ಮೆ ಮಿತಿಮೀರುತ್ತವೆ. ಇಂಥ ಎಡವಟ್ಟು ನಿರೀಕ್ಷೆಗಳ ನಡುವೆಯೂ ಜಗತ್ತಿನಲ್ಲೆಡೆ ಅನೇಕರು ನಾಯಿಯ ಬಗ್ಗೆ ತಮ್ಮದೇ ರೀತಿಯಲ್ಲಿ ಪ್ರೀತಿ, ಸಿಟ್ಟು ಮತ್ತು ಭಯದಿಂದ ವ್ಯಾಖ್ಯಾನಿಸಿರುವದುಂಟು. ನಮ್ಮಲ್ಲಿನ ಕತೆ, ಕವಿತೆಗಳಲ್ಲೂ ಈ ನಾಯಿಗೊಂದು ಪಾತ್ರವುಂಟು. ರಾಜರತ್ನಂರವರ ಸುಪ್ರಸಿದ್ಧ 'ನಾಯಿಮರಿ, ನಾಯಿಮರಿ ತಿಂಡಿಬೇಕೇ?' ಅನ್ನುವ ಶಿಶುಗೀತೆಯನ್ನು ಕೇಳದೆ ನಮ್ಮ ಬಾಲ್ಯ ಮುಂದಕ್ಕೆ ಸಾಗುವದಿಲ್ಲ. ಅಷ್ಟೇ ಯಾಕೆ? ಮಹಾಭಾರತದ ಯುದ್ಧವೆಲ್ಲ ಮುಗಿದು ಪಾಂಡವರೆಲ್ಲ ಸಶರೀರವಾಗಿ ಸ್ವರ್ಗಕ್ಕೆ ಹೋಗಬೇಕು ಅಂದುಕೊಂಡಿದ್ದಾಗ ಕೊನೆಗೂ ಧರ್ಮರಾಯನೊಂದಿಗೆ ಸ್ವರ್ಗದ ಬಾಗಿಲು ತಟ್ಟಿದ್ದು ಒಂದು ನಾಯಿ.  

    ಹೀಗೆ ದೇಶ-ಕಾಲದ ಹಂಗಿಲ್ಲದೇ ನಾಯಿಯೊಂದು ನಿಯತ್ತು, ನಿಷ್ಠೆ, ಭಯ, ಅಭಯ  ಮತ್ತು ಪ್ರೀತಿಗೆ ರೂಪಕವಾಗಬಲ್ಲದು. ಹಾಗಿರುವಾಗ ತನ್ನ ಪಂಥದ ಪ್ರಸರಣಕ್ಕೆಂದು ಲೋಕದ ಎಲ್ಲ ಚರಾಚರಗಳನ್ನೂ ಒಂದೊಂದು ಉಪಕರಣವೆಂದೇ ಭಾವಿಸುವ ಝೆನ್, ನಾಯಿಯ ವಿಷಯದಲ್ಲಿ ಹೇಗೆ ತಾನೇ ಹಿಂದೆ ಬೀಳಬಲ್ಲದು? ಹೀಗಾಗಿ ಝೆನ್ ಎಂಬುದು ಸೀದಾ ಬುದ್ಧನನ್ನೇ ನಾಯಿಯೊಂದಿಗೆ ಸಮೀಕರಿಸುತ್ತದೆ. ಕೇವಲ ಎರಡೇ ಸಾಲುಗಳ ಝೆನ್ ಕತೆಯೊಂದು ಸಾಮಾನ್ಯ ನಾಯಿಯನ್ನು ಎಲ್ಲಿಂದ ಎಲ್ಲಿಗೆ ಜಿಗಿಸಿಬಿಟ್ಟಿದೆ ನೋಡಿ:

 "ಬುದ್ಧನೆಂದರೆ ಯಾರು?"
"ಬುದ್ಧನೆಂದರೆ ಒಂದು ನಾಯಿ!"

ಅಷ್ಟೇ, ಕತೆ ಅಲ್ಲಿಗೇ ಸಮಾಪ್ತಿ. ಎಂಥ ಸಮಯದಲ್ಲೂ ಸದಾಕಾಲ ಮಹಾನ್ ಎಚ್ಚರದಲ್ಲಿರುವವನೇ ನಿಜವಾದ ಬುದ್ಧ! ತಮಾಷೆ ನೋಡಿ: 'ನಾಯಿ ಮುಂಡೇದೆ', 'ನಾಯಿ ನನ್ಮಗನೇ' ಅಂತೆಲ್ಲ ನಾಮಪದ ಹಿಡಿದುಕೊಂಡು ಜಗಳಕಾರುವ ನಮಗೆ, ಅದೇ ನಾಮಪದವನ್ನು ಅದರ ಕ್ರಿಯಾಪದದ ಸಮೇತ ಎತ್ತಿಹಿಡಿಯುವ ಝೆನ್ ಬಗ್ಗೆ ಕೊಂಚ ಗಮನ ಹರಿಸುವದು ಒಳ್ಳೆಯದೆನಿಸುತ್ತದೆ.                        

   ಕುತೂಹಲದ ವಿಷಯವೆಂದರೆ, ಹೀಗೆ ಸದಾಕಾಲ ಎಚ್ಚರದ ಸ್ಥಿತಿಯಲ್ಲಿರಲೆಂದು ಸ್ವತಃ ತಾನೇ ಒಂದು ನಾಯಿಯ 
ರೂಪಕವಾಗಿ ಮಾರ್ಪಟ್ಟ ಬುದ್ಧ ತನ್ನನ್ನು ಯಾವತ್ತಿಗೂ ಬುದ್ಧನೆಂದು ಕರೆದುಕೊಳ್ಳಲಿಲ್ಲ. ಆತನಿಗೆ ಆ ಪದವಿ ಬಂದಿದ್ದು ಆತನ ಅನುಯಾಯಿಗಳಿಂದ. ಪಾಲಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದ ಬುದ್ಧ ತನ್ನನ್ನು ತಾನು 'ತಥಾಗತ'ನೆಂದು ಕರೆದುಕೊಳ್ಳುತ್ತಿದ್ದ. ಇಂಥ 'ತಥಾಗತ'ವನ್ನು ಒಡೆದು ನೋಡಿದಾಗ ತಥಾ ಮತ್ತು ಗತ ಪದಗಳು ಹೊರಹೊಮ್ಮಬಹುದು. ಇಲ್ಲಿ ಅವುಗಳ ಮೂಲ ಹಿಡಿದು ಹೊರಟರೆ ಅರ್ಥವೊಂದು ಅನರ್ಥಕ್ಕೊಳಗಾಗುವ ಅಪಾಯವೇ ಹೆಚ್ಚು. ಲೌಕಿಕ ಬದುಕಿನ ಎಲ್ಲ ಮೋಹಗಳನ್ನು ತ್ಯಜಿಸಿ ನಿರ್ಮೋಹದತ್ತ ವಾಲಿಹೋದ ಬುದ್ಧನ ನಿರ್ವಾಣವನ್ನು ಅವಲೋಕಿಸಿದಾಗ 'ತಥಾಗತ'ಕ್ಕೆ ಒಂದು ಸರಳವಾದ ಅರ್ಥ ಕಲ್ಪಿಸಬಹುದು:

ಅಲ್ಲಿಗೆ, ಬುದ್ಧನೆಂಬುವನು ತಥಾಗತ. ಅಂದರೆ, (ಎಲ್ಲಿಂದ) ಹೇಗೆ ಬಂದನೋ (ಅಲ್ಲಿಗೆ) ಹಾಗೆಯೇ ಹೋದವನು..                 
*
ಇಂಥ ಚಿತ್ರಣಗಳನ್ನು ನೀವೂ ಗಮನಿಸಿರುತ್ತೀರಿ. ನಾಯಿಯೊಂದು ರಸ್ತೆಯಲ್ಲಿ ಸಾಗುತ್ತಿರುವ ಕಂಡಕಂಡ ಕಾರು, ಬೈಕುಗಳ ಬೆನ್ನೆತ್ತಿ ಬೊಗಳುವದು ಯಾಕೆ? ಹಾಗೆ ನೋಡಿದರೆ ಈ ವಾಹನ ಸವಾರರು ಈ ನಾಯಿಗೆ ಹಿಂದೆಂದೂ ಅಪಘಾತ ಮಾಡಿದವರಲ್ಲ. ಅದರ ಮೇಲೆ ದಂಡೆತ್ತಿ ಹೋದವರೂ ಅಲ್ಲ. ಹಾಗಾದರೆ ನಾಯಿಗೇಕೆ ಸವಾರರ ಮೇಲೆ ಈ ಪರಿ ದ್ವೇಷ?    

   ನಾನು ಅಲ್ಲಲ್ಲಿ ಓದಿದ ವಿಷಯಗಳನ್ನು ನಂಬುವದಾದರೆ, ಈ ಎಲ್ಲ ನಾಯಿ ಅಥವಾ ನಾಯಿಗುಂಪಿಗೆ ಒಂದೊಂದು ಸೀಮಾರೇಖೆ ಅಂತನ್ನುವದು ಇರುತ್ತದೆ. ಆಯಾ ಸೀಮಿತ  ಪ್ರದೇಶದೊಳಗೆ ಆಯಾ ನಾಯಿ ಅಥವಾ ಅವುಗಳ ಗುಂಪು ಮಾತ್ರ ಆಡಳಿತ ನಡೆಸುತ್ತಿರುತ್ತವೆ. ಸದರಿ ಪ್ರದೇಶದೊಳಗೆ ಇನ್ಯಾವುದೋ ಅಪರಿಚಿತ ನಾಯಿ ಕಾಲಿಡುವಂತಿಲ್ಲ. ಹಾಗೇನಾದರೂ ಕಾಲಿಟ್ಟರೆ ಸದರಿ ಪ್ರದೇಶದ ನಾಯಿಗಳೆಲ್ಲ ಸೇರಿ ಈ ಹೊಸ ವಲಸೆ ನಾಯಿಯನ್ನು ಬೆನ್ನಟ್ಟಿ ಬೊಗಳಿ ಹೊರಗೆ ಅಟ್ಟುತ್ತವೆ. 

   ಈಗ ನೀವು ನಿಮ್ಮ ಕಾರನ್ನು ಎಲ್ಲೋ ನಿಲ್ಲಿಸಿರುತ್ತೀರಿ. ಅಲ್ಲಿನ ನಾಯಿಯೊಂದು ಬಂದು ನಿಮ್ಮ ಕಾರಿನ ಚಕ್ರದ ಮೇಲೆ ಕಾಲೆತ್ತುತ್ತದೆ. ಹಾಗೆ ನಾಯಿಯ ಉಚ್ಛೆಯಿಂದ ಪ್ರೋಕ್ಷಣೆಗೊಳಗಾದ ಕಾರು ಇನ್ಯಾವುದೋ ಪ್ರದೇಶದಲ್ಲಿ ಸಾಗುತ್ತಿರುವಾಗ ಅಲ್ಲಿದ್ದ ನಾಯಿಗಳೆಲ್ಲ ನಿಮ್ಮ ಕಾರನ್ನು ಬೊಗಳುತ್ತ ಬೆನ್ನಟ್ಟುತ್ತವೆ. ಯಾಕೆಂದರೆ ಅವುಗಳ ಘ್ರಾಣ ಶಕ್ತಿ ಅಷ್ಟು ಮಜಬೂತಾಗಿದೆ. ತಮ್ಮತಮ್ಮ ಗಡಿಪ್ರದೇಶಗಳಲ್ಲಿನ ತಮ್ಮದೇ ಗುಂಪಿನ ನಾಯಿಗಳ ಉಚ್ಛೆ ವಾಸನೆ ಕೂಡ ಅವಕ್ಕೆ ಗೊತ್ತು. ತಮ್ಮ ಪ್ರದೇಶದೊಳಕ್ಕೆ ಹೊಸದೊಂದು ವಾಸನೆಯನ್ನು ಹೊತ್ತುತಂದ ವಾಹನವನ್ನು ತಮ್ಮ ಅಸ್ಮಿತೆಗೆ ಒಡ್ಡಿದ್ದ ಸಂಚಕಾರವೆಂದೇ ಅವು ಭಾವಿಸುತ್ತವೆ. ಹೀಗಾಗಿ ಯಾವುದೋ ಹೊಸ ನಾಯಿಯೊಂದು ತಮ್ಮ ಸೀಮೆಯನ್ನು ಆಕ್ರಮಿಸುತ್ತಿದೆ ಅಂತ ಭಾವಿಸಿ ಸದರಿ ವಾಹನವನ್ನು ಬೆನ್ನಟ್ಟುತ್ತವೆ.   

   ಹೀಗೆ ಪೆದ್ದ ನಾಯಿಯಂತೆ ಆಡಬೇಡ ಅಂತ ಝೆನ್ ಗುರು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ. "ಝೆನ್ ಸಿದ್ಧಾಂತದ ಸೂತ್ರಗಳೆಲ್ಲ ವಿಚಿತ್ರವಾಗಿವೆ. ನನಗೂ ಅವುಗಳಿಗೂ ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ.." ಅಂತ ಸಮಸ್ಯೆ ಹೇಳಿಕೊಂಡು ಬಂದ ಶಿಷ್ಯನಿಗೆ ಸೂತ್ರಗಳನ್ನೆಲ್ಲ ಗಾಳಿಗೆ ತೂರು ಅಂತ ಗುರು ಹೇಳುತ್ತಿದ್ದಾನೆ. ‘ಮತ್ತೇನು ಮಾಡಲಿ?’ ಅಂತ ಶಿಷ್ಯ ಗಂಟು ಬೀಳುತ್ತಾನೆ. ಸಮುದ್ರದ ದಂಡೆಯಲ್ಲಿ ನಿಂತಿರುವ ಗುರು ತನ್ನ ಊರುಗೋಲಿನಿಂದ ಮರಳಿನ ಮೇಲೆ 'ಧ್ಯಾನ' ಅಂತ ಬರೆಯುತ್ತಾನೆ. ಶಿಷ್ಯನಿಗೆ ಏನೂ ಅರ್ಥವಾಗುವದಿಲ್ಲ. ತಕ್ಷಣ ಆತ "ಇದೇನು ಇಷ್ಟು ಚಿಕ್ಕದಾಗಿ ಎರಡೇ ಅಕ್ಷರಗಳಲ್ಲಿ ಪರಿಹಾರವೇ? ಕೊಂಚ ವಿಸ್ತರಿಸಿ ದೀರ್ಘವಾಗಿ ಹೇಳಬಹುದೇ?" ಅಂತ ಮತ್ತೇ ಗಂಟು ಬೀಳುತ್ತಾನೆ. ಗುರು ಮತ್ತದೇ ಊರುಗೋಲಿನಿಂದ 'ಧ್ಯಾನ' ಅಂತ ಬರೆಯುತ್ತಾನೆ. 

ಈ ಸಲ ದೊಡ್ಡ ಅಕ್ಷರಗಳಲ್ಲಿ ಬರೆದಿರುತ್ತಾನಷ್ಟೇ!
-                          

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 28.03.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)