Wednesday, April 25, 2018

ಗಂಧದ ಮರದೊಳು ಒಂದಿನಿತೂ ಫಲವಿಲ್ಲ!

ಮೊನ್ನೆ ಸುಮ್ಮನೇ ಹೀಗೇ ಏನನ್ನೋ ಓದುತ್ತಿದ್ದಾಗ ಗಝಲ್ ರೂಪದ ಒಂದಿಷ್ಟು ಸಾಲುಗಳು ಗೋಚರಿಸಿದವು. ಅಸಲಿಗೆ ಇದನ್ನು ಮೂಲದಲ್ಲಿ ಬರೆದವರು ಯಾರೆಂದು ನನಗೆ ಗೊತ್ತಾಗಲಿಲ್ಲವಾದರೂ ಕನ್ನಡಕ್ಕೆ ಇದನ್ನು ರೂಪಾಂತರ ಮಾಡಬಹುದು ಅಂತನಿಸಿತು. ಪರಿಪೂರ್ಣತೆಯನ್ನು ಹುಡುಕುತ್ತ ಹೊರಟ ಈ ಅನಾಮಿಕ ಕವಿಗೆ ಕೊನೆಗೆ ಕಂಡಿದ್ದಾದರೂ ಏನು?     

ಹೊನ್ನಿಗೆ ಪರಿಮಳವಿಲ್ಲ 
ಕಬ್ಬಿಗೆ ಪುಷ್ಪವಿಲ್ಲ
ಗಂಧಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ 
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ 
ದಕ್ಕುವ ಜಾಗವೇ ಬಲು ಮಜವಾಗಿದೆ. 
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ..

   ಅಲ್ಲಿಗೆ ಅದೊಂದು ಮರೀಚಿಕೆ. ಯಾರಿಗೂ ದಕ್ಕದೇ ಇರುವಂಥದ್ದು. ಇಷ್ಟಕ್ಕೂ ಪರ್ಪೆಕ್ಟ್ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ? ನಮ್ಮ ಪೌರಾಣಿಕ ರೋಲ್ ಮಾಡೆಲ್ ಗಳಾದ ರಾಮ ಮರ್ಯಾದಾ ಪುರುಷೋತ್ತಮನಾದ. ಪರಶುರಾಮ ಚಿರಂಜೀವಿಯಾದ. ಕೃಷ್ಣ ಜಗದ್ಗುರುವಾದ. ಆದರೆ ಇವರ್ಯಾರೂ ಪರಿಪೂರ್ಣರಾಗಲಿಲ್ಲ. ಹಾಗಾದರೆ ಪರಿಪೂರ್ಣತೆ ಅನ್ನುವದು ಎಲ್ಲಿ ಸಿಗುತ್ತದೆ?         
    
   ಯಾರೋ ಇಂಥ ಪ್ರಶ್ನೆ ಕೇಳಿದಾಗಲೆಲ್ಲ ನಕ್ಕು ಬಿಡುತ್ತೇವೆ. ಯಾಕೆಂದರೆ ನಾವೆಲ್ಲ ಹುಲುಮಾನವರು. ಒಂದು ಸಂಬಂಧದಿಂದ ಕಳಚಿಕೊಳ್ಳಲು ನಮಗೆ ಜಾಸ್ತಿ ಹೊತ್ತು ಬೇಕಿಲ್ಲ. ನಮ್ಮ ಅಂಗಳದಲ್ಲೊಂದು ಗೆರೆ ಹೊಡೆಯಲು ಸಿಕ್ಕಂಥ ಕಾರಣಗಳೂ ಅಷ್ಟೇ ತಮಾಷೆಯವು. ಇಲ್ಲಿ, ಕೇಳಿದಾಗ ಸಾಲ ಕೊಡಲಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. ಕೊಟ್ಟ ಸಾಲವನ್ನು ವಾಪಸ್ಸು ಕೇಳಿದರು ಅಂತ ಮಾತು ಬಿಟ್ಟವರಿದ್ದಾರೆ. ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಲೈಕ್ ಮಾಡಿ ನನ್ನ ವಾಲಿಗೇ ಬರೋದಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. 'ಕವಿತೆಗೆ ಪ್ರಾಮಾಣಿಕ ಅಭಿಪ್ರಾಯ ಬೇಕು' ಅಂತ ಪೀಡಿಸಿ ಪೀಡಿಸಿ, ಕೊನೆಗೊಮ್ಮೆ ಅಭಿಪ್ರಾಯ 
ಹೇಳಿದ್ದಕ್ಕೂ ಮಾತು ಬಿಟ್ಟವರಿದ್ದಾರೆ! ಹೀಗೆ ಯಾವುದ್ಯಾವುದೋ ಚಿಲ್ಲರೆ ಕಾರಣಗಳಿಗೆ ಮನಸು ಮಾಲಿಂಗ 
ಹೃದಯ ಶಂಭುಲಿಂಗವಾಗಿಬಿಡುವ ಹೊತ್ತಿನಲ್ಲಿ ಊರಿನ ಬಾಲ್ಯದ ಮಿತ್ರ ನೆನಪಾಗುತ್ತಾನೆ. ಆತನಿಗೊಂದು 
ಫೋನಾಯಿಸಿ ಕಾಲೆಳೆಯುತ್ತಿರುತ್ತೇನೆ: 
"ನೀನ್ಯಾವ ಲೋಕದ ಪ್ರಾಣಿ ಮಾರಾಯ, ಒಮ್ಮೆಯೂ ಮಾತು ಬಿಡಲಿಲ್ಲವಲ್ಲ? ಊರಾಚೆಯ ಬಯಲಿಗೆ ಸಂಡಾಸಕ್ಕೆಂದು ಹೋಗುವಾಗ ನಿನಗೆ ಒತ್ತಡವಿಲ್ಲದಿದ್ದರೂ ನನ್ನೊಂದಿಗೆ ಬರುತ್ತಿದ್ದೆ. ಪ್ರತೀ ಬಾರಿಯೂ ಚೊಂಬನ್ನು ನೀನೇ ಹೊರುತ್ತಿದ್ದೆ. ಆ ಹತ್ತಾರು ವರ್ಷ ಯಕಶ್ಚಿತ್ ಖಾಲಿ ತಂಬಿಗೆಯನ್ನಾದರೂ ಒಮ್ಮೆಯೂ ನನಗೆ ದಾಟಿಸಲಿಲ್ಲವಯ್ಯ.."

   ಇಬ್ಬರೂ ನಗುತ್ತಿರುತ್ತೇವೆ. ಇದನ್ನೇ ನಾನು ಹಿತಾನುಭವ ಅಂತ ಕರೆಯುತ್ತೇನೆ. ನಮ್ಮ ಸುತ್ತಲಿನ ಒಂದಿಡೀ ಪರಿಸರ ಇಂಥದೊಂದು ಹಿತಾನುಭವ ಕಂಡುಕೊಳ್ಳಲು ಒಂದು ಸೂತ್ರದ ಅಗತ್ಯ ಇದೆ ಅಂತ ನನಗೆ ಆಗೀಗ ಅನಿಸುತ್ತಿರುತ್ತದೆ. ಆ ಸೂತ್ರದ ಹೆಸರು 'ಫಿಫ್ಟಿ-ಫಿಫ್ಟಿ'. ಮೊದಲ ನೋಟಕ್ಕೆ ಇದೊಂದು ತಮಾಷೆಯ ಮತ್ತು ಜಾಳುಜಾಳಾದ ಸೂತ್ರ ಅಂತನಿಸಬಹುದು. ಬಾಲ್ಯದಲ್ಲಿ ಬಯಲ ಬಹಿರ್ದೆಸೆಗೆಂದು ವರ್ಷಗಟ್ಟಲೇ ನೀರಿನ ತಂಬಿಗೆ ತಾನೊಬ್ಬನೇ ಹೊತ್ತುಕೊಂಡ ಸ್ನೇಹಿತ ನನಗೇನೋ ಅಷ್ಟರಮಟ್ಟಿಗೆ ಹಿತಾನುಭವ ದಯಪಾಲಿಸಿದ. ಆ ಮೂಲಕ ಆ ಘಳಿಗೆಯ ನಮ್ಮಿಬ್ಬರ ಪರಿಸರದಲ್ಲಿ ಸಮಸ್ಯೆಯೊಂದು ಪರಿಹಾರವಾಯಿತು. ಜಗತ್ತಿನಲ್ಲಿ ಥೇಟ್ ಇದೇ ಥರ ಆಯಾ ಕ್ಷಣಕ್ಕೆ ಆಯಾ ಪರಿಸರದ ಸಮಸ್ಯೆ ಪರಿಹಾರವಾಗುತ್ತಿರುತ್ತದೆ. ಕೈಸುಟ್ಟರೂ ಸಮಯಕ್ಕೆ ಸರಿಯಾಗಿ ಗಂಡನ ಲಂಚ್ ಬಾಕ್ಸ್ ಕಟ್ಟುವ ಗೃಹಿಣಿ, ಬಾಸ್ ಒತ್ತಡಕ್ಕೆ ತನ್ನದಲ್ಲದ ಕೆಲಸವನ್ನೂ ಮಾಡುವ ಸಹೋದ್ಯೋಗಿ, ಕಾಲೇಜಿನಲ್ಲಿ ಜಗಳವಾದಾಗ ಸಹಾಯ(?)ಕ್ಕೆಂದು ನಾಲ್ವರನ್ನು ಕರೆತರುವ ಗೆಳೆಯ, ಮ್ಯಾನೇಜರ್ ನ ವಾಂಛೆಯನ್ನು ಧಿಕ್ಕರಿಸುತ್ತಲೇ ಇದ್ದೊಂದು ನೌಕರಿಯನ್ನು ನಾಜೂಕಾಗಿ ನಿಭಾಯಿಸುತ್ತಿರುವ ಹುಡುಗಿ- ಇವರೆಲ್ಲ ಆಯಾ ಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರುತ್ತಾರೆ.  

   ಹೀಗೆ ಎದುರಿಗಿದ್ದವರ ಅವಶ್ಯಕತೆ ಅರ್ಥೈಸಿಕೊಂಡು ಆಯಾ ಸಮಯಕ್ಕೆ ಪರಿಹಾರ ಒದಗಿಸಿದ ವ್ಯಕ್ತಿ 
ಆ ಒಟ್ಟು ಪರಿಸರಕ್ಕೇನೋ ಒಂದು ಹಿತಾನುಭವ ಒದಗಿಸಿದ. ಆದರೆ ಈ ಹಿತಾನುಭವ ಜಗತ್ತಿನ ಕೇವಲ 50% ಜನಕ್ಕೆ ಮಾತ್ರ. ಅಂದರೆ, ಜಗತ್ತಿನ 50% ಸಮಸ್ಯೆ ಮಾತ್ರ ಪರಿಹಾರವಾಗಿದೆ. ಇನ್ನರ್ಧ ಹಾಗೇ ಉಳಿದು ಹೋಗಿದೆ. ಯಾಕೆಂದರೆ ಸರಳವಾದ ಸೂತ್ರವೊಂದನ್ನು ನಾವು ಮರೆತು ಹೋಗಿದ್ದೇವೆ. ಅಸಲಿಗೆ, ನಮಗೇನು ಬೇಕಿದೆ  ಅಂತ ಅರ್ಥೈಸಿಕೊಂಡು ಅದಕ್ಕನುಗುಣವಾಗಿ ತಮ್ಮ ಕೈಲಾದ ಪರಿಹಾರ ಒದಗಿಸಿದವರಿಗೆ ನಾವು ಯಾವತ್ತೂ 'ನಿನಗೇನು ಬೇಕಿದೆ?' ಅಂತ ಕೇಳಲಿಲ್ಲ. ಹಾಗೆ ಕೇಳಿ ಸ್ಪಂದಿಸುವ 
ಮೂಲಕ ಇಡೀ ಲೋಕಕ್ಕೆ 100% ಹಿತಾನುಭವ ಕೊಡುವ ಸರಳ ಲೆಕ್ಕವನ್ನು ನಾವು ಮರೆತುಬಿಟ್ಟೆವಾ? 

   ಹಾಗೆ ಲೆಕ್ಕ ಮರೆತಿದ್ದರಿಂದಲೇ ಇವತ್ತೇನಾಯಿತು? ಜೋರು ಬಾಯಿ ಇರುವ ಮನುಷ್ಯ ಮಾತ್ರ ಎಲ್ಲರಿಗೂ 
ಕಾಣುತ್ತಿದ್ದಾನೆ. ಮೆಲುದನಿಯಲ್ಲಿ ಮಾತನಾಡುವ ವ್ಯಕ್ತಿ ಯಾರಿಗೂ ಕಾಣಿಸುತ್ತಿಲ್ಲ. ಬರವಣಿಗೆಯಿಂದಲೇ 
ಮಾತನಾಡಬೇಕಿದ್ದ ಸಾಹಿತಿಗಳೂ ನಾಲಿಗೆಯಿಂದಲೇ ಕೂಗು ಹಾಕುತ್ತಾರೆ. ಪ್ರಶಸ್ತಿ ಪಡೆಯುವದರಲ್ಲೂ ಪ್ರಶಸ್ತಿ ಹಿಂತಿರುಗಿಸುವದರಲ್ಲೂ ಮಾತಿನದ್ದೇ ಅಬ್ಬರ. ಅದರ ಮುಂದುವರಿಕೆಯಾಗಿ ಒಬ್ಬರಿಗೇ ಹತ್ತಾರು ನಮೂನೆಯ 
ಪ್ರಶಸ್ತಿಗಳು, ಫಲಕಗಳು, ತೂಕದ ಚೆಕ್ಕುಗಳು!

   ಅದೇ ರೀತಿ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿಗಳ ಬಗ್ಗೆಯೂ ನನಗೆ ಅಸಮಾಧಾನವಿದೆ. ಸರ್ಕಾರವೂ 
ಸೇರಿದಂತೆ ನಮ್ಮಲ್ಲಿರುವ ಅನೇಕ ಬಗೆಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಬೇಕೆಂದರೆ ಸಾಹಿತಿಯೊಬ್ಬ ತನ್ನ ಕೃತಿಗಳನ್ನು ಆಯಾ ಸಂಘಟಕರಿಗೆ ಕಳುಹಿಸಿಕೊಡಬೇಕು. ನೀವು ಕೊಡಮಾಡುವ ಪುರಸ್ಕಾರಕ್ಕೆ ನನ್ನ ಕೃತಿಯನ್ನೂ ಪರಿಗಣಿಸಿ ಅಂತೆಲ್ಲ ಅರ್ಜಿ ಸಲ್ಲಿಸಬೇಕು. ಸಂಕೋಚ ಮತ್ತು ಮುಜುಗರಗಳನ್ನೇ ಇಂಧನವಾಗಿಸಿಕೊಳ್ಳಬೇಕಿದ್ದ ಸಾಹಿತಿ ಹೀಗೆ ಭಿಡೆಯಿಲ್ಲದೇ ಅರ್ಜಿ ಗುಜರಾಯಿಸುವದನ್ನು ನೋಡಿ  ಪೆಚ್ಚಾಗಬೇಕೋ ಅಥವಾ ಪಿಚ್ಚೆನ್ನಬೇಕೋ? 

   ಹೀಗಾಗಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಬಗ್ಗೆ, ಅದರ ಅಧ್ಯಕ್ಷರುಗಳ ಬಗ್ಗೆ ಎಷ್ಟೇ ಗೌರವ, ಹೆಮ್ಮೆಗಳಿದ್ದರೂ ಒಂದು ಸಣ್ಣ ಅಸಮಾಧಾನವಿದೇ. ಬಹುಶಃ ನನಗಿರುವ ಈ ಆಸೆ ದುಬಾರಿಯಾಗಿರುವಂಥದ್ದು. "ಸಮ್ಮೇಳನದ ಅಧ್ಯಕ್ಷನಾಗಿ ಈ ಸಾರೋಟು, ಕಾರು, ತೇರು, ಎತ್ತಿನಬಂಡಿ, ತೆರೆದ ಜೀಪುಗಳಲ್ಲಿ ಹಾರ ಹಾಕಿಸಿಕೊಂಡು ಕೈ ಬೀಸುತ್ತ ಊರೆಲ್ಲ ಮೆರವಣಿಗೆ ಮಾಡಿಸಿಕೊಳ್ಳುವದೆಂದರೆ ಪ್ರಾಣ ಹೋದಂತಾಗುತ್ತೆ ಕಣ್ರೀ, ಸಾಹಿತ್ಯದ ಭಾಷಣ, ನಿರ್ಣಯ, ಠರಾವುಗಳೇನೋ ಓಕೆ, ಆದರೆ ಇದೊಂದು ಮುಜುಗರದ ಕೆಲಸಕ್ಕೆ ಮಾತ್ರ ನನ್ನನ್ನು ಒತ್ತಾಯಿಸಬೇಡಿ.." ಅಂತ ಸಂಘಟಕರಿಗೆ ರೋಪು ಹಾಕುವ ಅಧ್ಯಕ್ಷರನ್ನು ನೋಡುವಾಸೆಯಿದೆ! 

   ಒಟ್ಟಿನಲ್ಲಿ ಕೃತಿಯನ್ನು ಆಸ್ವಾದಿಸುವದರೊಂದಿಗೆ ಅದರ ಕರ್ತೃವನ್ನೂ ಹೆಗಲಿಗೇರಿಸಿಕೊಳ್ಳುವಷ್ಟು ಓದುಗನನ್ನು ಸಹೃದಯಿಯನ್ನಾಗಿಸಿದ್ದು ಸಾಹಿತ್ಯದ ಮೇರುಗುಣ. ಆದರೆ ಅದೇ ಸಾಹಿತ್ಯ ಅಂಥದೊಂದು ಹೆಗಲನ್ನು ನಯವಾಗಿ ನಿರಾಕರಿಸುವಂತೆ ಕರ್ತೃವಿಗೆ ಸೂಚಿಸದೇ ಹೋದದ್ದು ವ್ಯಂಗ್ಯ.

   ಹೀಗಿರುವಾಗ ಗದುಗಿನ ಶಿಕ್ಷಕರೊಬ್ಬರು ನೆನಪಾಗುತ್ತಿದ್ದಾರೆ. ಹೆಸರು: ಬಿ.ಜಿ. ಅಣ್ಣಿಗೇರಿ. ಎಂಭತೈದಕ್ಕೂ 
ಮೀರಿ ವಯಸ್ಸಾಗಿರಬೇಕು ಅವರಿಗೆ. ಗದುಗಿನ 'ಮಾಡೆಲ್ ಹೈಸ್ಕೂಲ್' (ಇವತ್ತಿನ ಸಿ.ಎಸ್. ಪಾಟೀಲ್ 
ಪ್ರೌಢಶಾಲೆ)ನಲ್ಲಿ ನಾನು ಒಂಭತ್ತನೇ ತರಗತಿ ಓದುತ್ತಿದ್ದಾಗಲೇ ಅವರು ಅದೇ ಶಾಲೆಯ ಹೆಡ್ ಮಾಸ್ಟರ್ 
ಆಗಿ ನಿವೃತ್ತರಾದರು. ಅದಕ್ಕೂ ಸುಮಾರು ಇಪ್ಪತೈದು ವರ್ಷ ಮೊದಲೇ ಅವರು ಗದುಗಿನ ಸುತ್ತಲಿದ್ದ 
ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆಂದು ಆಶ್ರಮ ತೆರೆದವರು. ಅಲ್ಲಿ ಉಚಿತವಾಗಿ ವಿದ್ಯೆಯ ಜೊತೆಗೆ ಊಟ, 
ವಸತಿಯನ್ನೂ ನೀಡಿದವರು. ನಾನು ಹೈಸ್ಕೂಲ್ ಮುಗಿಸಿಯೇ ಹತ್ತತ್ತಿರ ಮೂರು ದಶಕಗಳಾಗಿವೆ. 
ಅವಿವಾಹಿತ ಅಣ್ಣಿಗೇರಿ ಮೇಷ್ಟ್ರು ಇವತ್ತಿಗೂ ಟ್ಯುಷನ್ನು, ಕ್ಲಾಸು ಅಂತ ಛಡಿ ಹಿಡಿದು ನಿಂತೇ ಇದ್ದಾರೆ. 

   ಶಿಕ್ಷಕ ವೃತ್ತಿಯಲ್ಲಿದ್ದಾಗ ಸಂಪೂರ್ಣ ಸಂಬಳವನ್ನೂ, ಈಗ ಪಿಂಚಣಿ ಹಣವನ್ನೂ ಆಶ್ರಮದ 
ವಿದ್ಯಾರ್ಥಿಗಳಿಗೆ ಎತ್ತಿಟ್ಟಿರುವ ಅಣ್ಣಿಗೇರಿಯಂಥ ಸಂತ ಶಿಕ್ಷಕರಿಗೆ ಎಲ್ಲಿದೆ ಸಾರೋಟು? ಎಲ್ಲಿದೆ ತೆರೆದ 
ಜೀಪಿನ ಮೆರವಣಿಗೆ? ಹೆಚ್ಚುಕಡಿಮೆ ಮೂರು ಪೀಳಿಗೆಯ ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ವಿದ್ಯೆ ಹಂಚಿ 
ಆಶ್ರಯ ಕೊಟ್ಟ ಈ ಮೇಷ್ಟ್ರ ಮುಖ ಎಷ್ಟು ಟೀವಿ ಚಾನಲ್ಲುಗಳಲ್ಲಿ ಬಂದಿದೆ? ಆರಂಭದ ಅನಾಮಿಕ ಕವಿಯ ಮತ್ತದೇ ಕವಿತೆಯನ್ನು ಗುನುಗುಡುವದಾದರೆ,  

ಹೊನ್ನಿಗೆ ಪರಿಮಳವಿಲ್ಲ, 
ಕಬ್ಬಿಗೆ ಪುಷ್ಪವಿಲ್ಲ,
ಗಂಧಮರದೊಳು ಒಂದಿನಿತೂ ಫಲವಿಲ್ಲ.. 

ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?    
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

Badarinath Palavalli said...

ಹಾರ ತುರಾಯಿಗಳ ಅಬ್ಬರದ ಕನವರಿಕೆಯಲ್ಲಿ ಶಿಫಾರಸ್ಸಿಗೆ ಮಹಂಬಲಿಸುವ ಅಲ್ಪ ದಾನಿ ಮಹಾ ಪ್ರಾಣಿಗಳ ನಡುವೆ ಈ ನಿಮ್ಮ ಅಣ್ಣಿಗೇರಿ ಮಾಸ್ತರರು ನಿಜವಾದ unsung heroಗಳಾಗುತ್ತಾರೆ. ಅಸಲು ಈವತ್ತಿಗೆ ನಾವೆಲ್ಲ ನೆಮ್ಮದಿಯಿಂದ ಬದುಕುತ್ತೀವೆಂದರೆ ಇಂತಹ ನಿಸ್ವಾರ್ಥ ಭಗವತ್ ಸ್ವರೂಪಿಗಳಿಂದ ಮಾತ್ರ.

ಕವಿಯು ಕವನವನ್ನು ಓದಿಸಲು ಹಪಹಪಿಸುವುದು ಮತ್ತು ಅದನ್ನು ಓದುಗರಿಗೆ ತಲುಪಿಸುವಲ್ಲಿ ಸೋಲುವುದು ಅವನಿಗೆ ಮರಣಯಾತನೆ ಕೊಡುವ ಕರ್ಮ! ಯಾವುದೋ ಕವಿತೆಯ ಹೆಸರಿನ ಕಸದ ಸಾಲುಗಳು ಜನಜನಿತವಾದಾಗ ಅವನು ಅದೆಷ್ಟು ನೊಂದುಕೊಳ್ಳುವನೋ?

ನೀವು ನಿರೂಪಿಸಿದ ಫಿಫ್ಟಿ ಫಿಪ್ಟಿ ಸೂತ್ರವು ನನಗೆ ಹಿಡಿಸಿತು. ನಮಗೂ ಹಿತಾನುಭವವಾಗಲೆಂದು ಹಾರೈಸಿ.

ಉತ್ತಮ ಅಂಕಣ ಬರಹಕ್ಕಾಗಿ ಧನ್ಯವಾದಗಳು.

sunaath said...

ಅಣ್ಣಿಗೇರಿ ಗುರುಗಳಿಗೆ ಹಾಗು ಆ ಮಹಾನ್ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. ನನ್ನ ಶಾಲಾದಿನಗಳಲ್ಲಿಯೂ ಸಹ ನನಗೆ ಕೆಲವು great ಗುರುಗಳು ದೊರೆತಿದ್ದರು. ಅಂಥವರು ನಮ್ಮ ನೆನಪಿನಿಂದ ಮರೆಯಾಗುವದಿಲ್ಲ. (To Sir, with love!)
ನಿಮ್ಮ ಅಂಕಣಬರಹಗಳ ಮೂಲಕ ನಮಗೆ ಹಿತಾನುಭವ ಮಾಡುತ್ತಿರುವ ನಿಮಗೆ ಮತ್ತೊಮ್ಮೆ ಧನ್ಯವಾದಗಳು!

ರಾಘವೇಂದ್ರ ಜೋಶಿ said...

ಬದರೀನಾಥರೇ,
Unsung heroಗಳ ಬಗ್ಗೆ ನೀವು ಹೇಳಿದ್ದು ಸರಿ. ಜಗತ್ತಿನ ಅತ್ಯುತ್ತಮ ವ್ಯಕ್ತಿ ಅಥವಾ ಜ್ಞಾನಿ ಅಥವಾ ಕವಿ ಅಥವಾ ಮನುಷ್ಯ ಯಾವಾಗಲೂ ಅನಾಮಿಕನಾಗಿಯೇ ಇರುತ್ತಾನೆ ಅಂತ ಹೇಳುವದುಂಟು! ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಜ ಸಾರ್, ಗ್ರೇಟ್ ಗುರುಗಳನ್ನು ಮರೆಯಲು ಸಾಧ್ಯವಾಗುವದಿಲ್ಲ. ಅದರಲ್ಲೂ ಪ್ರೈಮರಿಯ ಮೇಷ್ಟ್ರುಗಳು. ಬಹುಶಃ ಇದೇ ಕಾರಣಕ್ಕೆ ಏನೋ ನನಗೆ ಒಂದರಿಂದ ಏಳನೇ ತರಗತಿಯವರೆಗೆ ಕಲಿಸಿದ ಎಲ್ಲ ಮೇಷ್ಟ್ರುಗಳು ಹೆಸರುಗಳು ನೆನಪಿವೆ. ಆಮೇಲಿನ ಹೈಸ್ಕೂಲು, ಕಾಲೇಜಿನ ಮೇಷ್ಟ್ರುಗಳ ಹೆಸರುಗಳು ನೆನಪೇ ಇಲ್ಲ! :-)
ನಿಮ್ಮ ಕಮೆಂಟಿಗೆ ಧನ್ಯವಾದಗಳು.