Wednesday, July 18, 2018

ಕಲ್ಲಿನ ಖುಷಿಗೆಂದು ಹೂವ ಕೊಲ್ಲಬಹುದೇ?

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 18.07.2018 ಬುಧವಾರ
ದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, July 4, 2018

ನಿಮ್ಮ ಹೆಸರಿಗೆ ಇಂಥದೊಂದು ಪತ್ರ ಬಂದಿತ್ತೇ?


ಯಾಕೋ ನಿರಂಜನಮೂರ್ತಿಗಳು ಕೊಂಚ ಭಾವುಕರಾಗಿದ್ದರು. ದಶಕಗಳ ಕಾಲ ಕೆಲಸ ಮಾಡಿದ್ದ 
ಆಫೀಸದು. ಸಣ್ಣ ಊರಿನ ಸಣ್ಣ ಪೋಸ್ಟಾಫೀಸು. ಅಲ್ಲಿ ಪೋಸ್ಟ್ ಮಾಸ್ಟರೂ ಅವರೇ, ಪೋಸ್ಟ್ ಮ್ಯಾನೂ 
ಅವರೇ, ಜವಾನನೂ ಅವರೇ. ಹೀಗಾಗಿ ಊರಿನ ಜನರೇ ಅವರಿಗೊಂದು ಪುಟ್ಟ ಬೀಳ್ಕೊಡುಗೆ ಸಮಾರಂಭ 
ಮಾಡಿದ್ದರು. ಅಲ್ಲಿದ್ದವರೆಲ್ಲ ಮೂರ್ತಿಗಳನ್ನು ಸನ್ಮಾನಿಸಿ ಕೊಂಡಾಡಿದರು. ಯಾರೋ ಮೂರ್ತಿಗಳ 
ಪ್ರಾಮಾಣಿಕತೆಯನ್ನು ಹೊಗಳಿದರು. ಇನ್ಯಾರೋ ಅವರ ಸಹಾಯಗುಣವನ್ನು ವರ್ಣಿಸಿದರು. ಮತ್ಯಾರೋ 
ಮೂರ್ತಿಗಳ ಸಂತೈಸುವ ಪರಿಯನ್ನು ನೆನಪಿಸಿಕೊಳ್ಳುವಷ್ಟರಲ್ಲಿ ನಿರಂಜನಮೂರ್ತಿಗಳು ಕುಂತ  
ಜಾಗದಿಂದ ಎದ್ದು ನಿಂತರು. ಎದುರಿಗಿದ್ದ ಗುಂಪಿಗೆ ಕೈಜೋಡಿಸುತ್ತ ತಮ್ಮ ಎಂದಿನ ಶೈಲಿಯಲ್ಲಿ 
"ನಾನು ಬರೇ ಪತ್ರ ಹಂಚುವವನು ಕಣ್ರಪ್ಪಾ, ನಾನೇ ಪತ್ರ ಅಲ್ಲ" ಅಂತ ಒಂದು ಸಾಲಿನ ಭಾಷಣ ಮುಗಿಸಿ ನಿವೃತ್ತರಾದರು.

   ಗೊಂದಲ ಏನಿಲ್ಲ. ಅಲ್ಲಿದ್ದವರಿಗೆಲ್ಲ ನಿರಂಜನಮೂರ್ತಿಗಳ ಈ ಮಾತುಗಳು ಮಾಮೂಲಿಯಾಗಿ ಹೋಗಿವೆ. ನಾನು ಬರೇ ಪತ್ರ ಹಂಚುವವನು, ನಾನೇ ಪತ್ರ ಅಲ್ಲ ಅಂತನ್ನುವ ಮಾತುಗಳನ್ನು ಅವರೆಲ್ಲ ವರ್ಷಾನುಗಟ್ಟಲೇ ಕೇಳಿಸಿಕೊಳ್ಳುತ್ತ ಬಂದಿದ್ದಾರೆ. ಆದರೂ ಆ ಮಾತುಗಳ ಅರ್ಥ ಏನು ಅಂತ ಯಾರಿಗೂ ಗೊತ್ತಾಗಿಲ್ಲ. ಹಾಗಂತ ಯಾರೂ ಮೂರ್ತಿಗಳಿಗೆ ಕೇಳಲೂ ಹೋಗಿಲ್ಲ. ಇಷ್ಟಕ್ಕೂ ಪತ್ರ ಬಟವಾಡೆ ಮಾಡುವದಕ್ಕೆಂದು ತಮ್ಮ ಇಪ್ಪತ್ತನೇ ವಯಸ್ಸಿಗೆ ಸೈಕಲ್ ಸಮೇತ ಬಂದ ನಿರಂಜನಮೂರ್ತಿಗಳು ಇದೇ ಊರಿನಲ್ಲೇ  ತಮ್ಮ ಇಡೀ ಬದುಕನ್ನು ಸವೆಸಿಬಿಟ್ಟಿದ್ದಾರೆ. ಹೆಂಡರಿಲ್ಲ, ಮಕ್ಕಳಿಲ್ಲ. ಹಾಗಾಗಿ ವರ್ಷಕ್ಕೊಮ್ಮೆ ಜಾತ್ರೆ, ಪ್ರವಾಸ ಅಂತೆಲ್ಲ ಎಲ್ಲಿಗೂ ಹೋಗಲಿಲ್ಲ. ಹೀಗಾಗಿ ಊರಿನ ಯಾವ ಮನೆಯಲ್ಲಿ ಎಷ್ಟು ಜನರಿದ್ದಾರೆ, ಅವರಲ್ಲಿ ಯಾರ್ಯಾರು ಏನೇನು ಕೆಲಸ ಮಾಡಿಕೊಂಡಿದ್ದಾರೆ ಎಂಬುದೆಲ್ಲ ಮೂರ್ತಿಗಳಿಗೆ ಅಂಗೈ ಗೆರೆಯಷ್ಟೇ ಸ್ಪಷ್ಟ. ಒಟ್ಟಿನಲ್ಲಿ ಊರೊಳಗೆ ಯಾರೇ ಕಷ್ಟಕ್ಕೆ ಸಿಲುಕಿಕೊಂಡರೂ ಮೂರ್ತಿಗಳ ಸಂತೈಸುವಿಕೆ ಮತ್ತು ಅವರ ಸಹಾಯಹಸ್ತ ಬೇಕೇಬೇಕು ಎಂಬಂತಾಗಿದೆ. ಹಾಗೆ ಋಣಕ್ಕೆ ಬಿದ್ದವರೆಲ್ಲ ಮೂರ್ತಿಗಳನ್ನು ದೇವಸಮಾನರಾಗಿ ಕಾಣುವಾಗಲೆಲ್ಲ ನಿರಂಜನಮೂರ್ತಿಗಳು ಯಥಾಪ್ರಕಾರ ಕೈಯೆತ್ತಿಬಿಡುತ್ತಾರೆ: 'ನಾನು ಬರೇ ಪತ್ರ ಹಂಚುವವನು ಕಣಯ್ಯಾ, ನಾನೇ ಪತ್ರ ಅಲ್ಲ!'  
                                                                            *
   ಮನೆಯಲ್ಲಿದ್ದ ಒಂದೇ ಒಂದು ಕಿಟಕಿಯಲ್ಲಿ ಇಣುಕುತ್ತ ನಿರಂಜನಮೂರ್ತಿಗಳು ಹೊರಗಿನ ದೃಶ್ಯಗಳನ್ನು ವಿವರಿಸುತ್ತಿದ್ದರು. ಇದ್ದೊಂದು ಮಂಚದಲ್ಲಿ ಮಲಗಿದ್ದ ಹುಡುಗ ಮೂರ್ತಿಗಳ ಮಾತುಗಳನ್ನು ಕೇಳುತ್ತಿದ್ದ. ಮಧ್ಯೆ ಮಧ್ಯೆ ಮಾತುಗಳು ಕೇಳಿಸುತ್ತಿಲ್ಲವೆಂದೂ ಸನ್ನೆ ಮಾಡುತ್ತಿದ್ದ. ಆಗೆಲ್ಲ ಮೂರ್ತಿಗಳು ಹುಡುಗನ ಕಿವಿ ಬಳಿ ಬಂದು ಮತ್ತೊಮ್ಮೆ ಕಿಟಕಿಯ ದೃಶ್ಯಗಳನ್ನು ವಿವರಿಸುತ್ತಿದ್ದರು. ಈತ ಮಂದಸ್ಮಿತನಾಗುತ್ತಿದ್ದ. 

   ಯಾವ ಹುಡುಗನೋ ಎಲ್ಲಿಂದ ಬಂದನೋ ಎಲ್ಲಿಗೆ ಹೊರಟಿದ್ದನೋ ಒಂದೂ ಗೊತ್ತಿಲ್ಲ. ಮೂರ್ತಿಗಳು ನಿವೃತ್ತರಾಗಿ ಎರಡು ದಿನ ಕಳೆದಿದ್ದವಷ್ಟೇ. ಊರಿನವನ್ಯಾರೋ ರಾತ್ರಿ ಹೊತ್ತು ಬಂದು ಸುದ್ದಿ ತಲುಪಿಸಿದ್ದರು. ಊರಾಚೆಯಿದ್ದ ಹೆದ್ದಾರಿಯಲ್ಲಿ ಈ ಹುಡುಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಪ್ರಜ್ಞೆಯಿರಲಿಲ್ಲ. ನಾಲ್ಕನೇ ದಿನ ಆಸ್ಪತ್ರೆಯಲ್ಲಿ ಎಚ್ಚರವಾಗಿದ್ದ. ಈ ಪರಿಸ್ಥಿತಿಯಲ್ಲಿ ನಡೆದಾಡುವದು ಹಾಗಿರಲಿ, ಈತನ ನಾಲಿಗೆ ಮತ್ತು ಕಿವಿ ಕೆಲಸ ಮಾಡಿದರೂ ಸಾಕು ಅಂತ ಡಾಕ್ಟರು ಕೈ ಚೆಲ್ಲಿದ್ದರು. ಈ ಹುಡುಗ ನಿರಂಜನಮೂರ್ತಿಗಳ ಮನೆ ಸೇರಿಕೊಂಡಿದ್ದು ಹಾಗೆ. ಮೊದಮೊದಲಿಗೆ ಮಗ್ಗುಲು ಹೊರಳಿಸಲಾಗದೇ ಬಿದ್ದಲ್ಲೇ ಬಿದ್ದುಕೊಂಡು ಶೂನ್ಯನೋಟ ಬೀರುತ್ತಿದ್ದ. ಈಗೀಗ ಅಸ್ಪಷ್ಟವಾಗಿ ತೊದಲತೊಡಗಿದ್ದ. ಸಣ್ಣಗೇ ಕಿವಿ ಕೇಳಿಸತೊಡಗಿತ್ತು. ಮನರಂಜನೆಗೆಂದು ಮೂರ್ತಿಗಳು ಆಗೀಗ ಕಿಟಕಿಯಿಂದ ಹೊರಜಗತ್ತಿನಲ್ಲಿ ನಡೆಯುತ್ತಿದ್ದ ಕ್ರಿಯೆಗಳನ್ನು ವಿವರಿಸುತ್ತಿದ್ದರು. ಈ ವಿವರಣೆಗಳಲ್ಲಿ ಯಾವುದ್ಯಾವುದೋ ಗಂಡಹೆಂಡಿರ ಜಗಳಗಳಿರುತ್ತಿದ್ದವು. ರಸ್ತೆ ತುದಿಯಲ್ಲಿನ ಪಾರ್ಕಿನಲ್ಲಿ ಪಲ್ಲವಿಸುತ್ತಿದ್ದ ಪ್ರೇಮಸಲ್ಲಾಪಗಳಿರುತ್ತಿದ್ದವು. ಬಲಗಡೆ ದೇವಸ್ಥಾನದಲ್ಲಿನ ಭಜನೆಯಿರುತ್ತಿತ್ತು. ಎಡಗಡೆಯಲ್ಲಿದ್ದ ಅರಳಿಕಟ್ಟೆಯ ಇಸ್ಪೀಟು ಆಟದ ಹೊಡೆದಾಟಗಳೂ ಇದ್ದವು.

   ಹುಡುಗ ಎಲ್ಲವನ್ನೂ ಗ್ರಹಿಸುತ್ತಿದ್ದ. ಮೂರ್ತಿಗಳ ಮೂಲಕ ಹೊರಜಗತ್ತನ್ನು ನೋಡುತ್ತಿದ್ದ. ಹೀಗಿರುವಾಗ, ಒಮ್ಮೆ ವೀಕ್ಷಕವಿವರಣೆ ಎಂದಿಗಿಂತಲೂ ರಸವತ್ತಾಗಿತ್ತು. ಮೂರ್ತಿಗಳ ಮನೆಯ ಮುಂದೆ ಒಂದು ಖಾಲಿ ಬಯಲಿತ್ತು. ಸರ್ಕಾರದ ಕೃಪಾಕಟಾಕ್ಷದಿಂದಾಗಿ ಈ ಸಣ್ಣ ಊರಿಗೂ ಒಂದಿಷ್ಟು ಅನುದಾನ ಬಂತು. ಹೀಗಾಗಿ ಸದರಿ ಬಯಲಿನಲ್ಲಿ ಊರಿನವರ ಅನುಕೂಲಕ್ಕಾಗಿ ಬಾವಿಯೊಂದನ್ನು ಕಟ್ಟುವದಕ್ಕಾಗಿ ನೆಲ ಅಗೆಯತೊಡಗಿದರು. ಸತತವಾಗಿ ಎರಡು ತಿಂಗಳು ಅಗೆದ ನಂತರ ಹತ್ತಡಿ ವ್ಯಾಸದ ತೆರೆದ ಬಾವಿ ಸಿದ್ಧವಾಗಿತ್ತು. ಆದರೆ ಐವತ್ತಡಿ ಆಳಕ್ಕೆ ಅಗೆದಿದ್ದರೂ ನೀರು ಬಂದಿರಲಿಲ್ಲ. ಇನ್ನೊಂದಿಷ್ಟು ಅಗೆಯಬೇಕೆನ್ನುವಷ್ಟರಲ್ಲೇ ಅನುದಾನವೆಲ್ಲ ಮುಗಿದುಹೋಗಿ ಈ ಬಾವಿ ನೀರಿಲ್ಲದೇ ಪಾಳುಬಾವಿಯಾಗಿ
ಪರಿವರ್ತನೆಗೊಂಡಿತ್ತು. ಇಂತಿಪ್ಪ ಪರಿಸ್ಥಿತಿಯಲ್ಲಿ ಊರಿಗೆ ಹೊಸದಾಗಿ ಬಂದಿದ್ದ ಯಾರೋ ಒಬ್ಬ ಆಸಾಮಿ ರಾತ್ರಿಹೊತ್ತು ತೆರೆದಬಾವಿ ಕಾಣಿಸದೇ ಬಿದ್ದುಬಿಟ್ಟಿದ್ದ!

   ಮೂರ್ತಿಗಳ ವೀಕ್ಷಕವಿವರಣೆ ಸಾಗುತ್ತಿತ್ತು. ರಾತ್ರಿ ಬಾವಿಯ ಸುತ್ತಲೂ ಜನ ನೆರೆದಿದ್ದರು. ಹಗ್ಗ ಎಸೆಯಲು ಹೋದವರಿಗೆ ಬಾವಿಯ ಒಳಗಿದ್ದವನು ಕಾಣಿಸುತ್ತಿರಲಿಲ್ಲ. ಒಳಗಿದ್ದವನಿಗೆ ಹೊರಗಿದ್ದವರ ಚಟುವಟಿಕೆ ಅಸ್ಪಷ್ಟವಾಗಿ ಕಾಣಿಸುತ್ತಿತ್ತಷ್ಟೇ. ಸುತ್ತಲಿದ್ದವರು ಪೇಚಾಡತೊಡಗಿದ್ದರು. ಕೆಲವರು ಒಳಗಿದ್ದವನಿಗೆ ಧೈರ್ಯ ತುಂಬುತ್ತಿದ್ದರು. ಬಿದ್ದ ವ್ಯಕ್ತಿ ಹತ್ತಡಿ ಏರುತ್ತಿದ್ದ. ಕಾಲುಜಾರಿ ಮತ್ತೇ ತಳ ಕಾಣುತ್ತಿದ್ದ. ಒಮ್ಮೆಯಂತೂ ಅರ್ಧಕ್ಕಿಂತಲೂ ದೂರ ಕ್ರಮಿಸಿ ಮತ್ತೇ ತಳ ಸೇರಿದ. ಸಮಯ ಜಾರುತ್ತಿದ್ದಂತೆ ಇದ್ದಕ್ಕಿದ್ದಂತೆ ಜನರಿಗೇನಾಯಿತೋ ಏನೋ, ಬೆಳಗಾಗುವದರೊಳಗೆ ಈ ಆಸಾಮಿ ಒಂದೋ ಕೈಕಾಲು ಮುರಿದುಕೊಂಡಿರುತ್ತಾನೆಂದೂ ಅಥವಾ ಸತ್ತೇ ಹೋಗಿರುತ್ತಾನೆಂದೂ ಮಾತನಾಡತೊಡಗಿದರು. ಇನ್ನು ಕೆಲವರಂತೂ ಕೈಸನ್ನೆ ಮಾಡುತ್ತ ಬೆಳಕು ಹರಿಯುವವರೆಗೂ ಅಲ್ಲೇ ತೆಪ್ಪಗಿರುವಂತೆಯೂ ಕೂಗತೊಡಗತೊಡಗಿದರು. ಗುಂಪಿಗೆ ಗುಂಪೇ ಆತನ ಕತೆ ಮುಗಿಸಲು ಸಿದ್ಧವಾದಂತಿತ್ತು. ಆದರೆ ಒಳಗಿದ್ದ ಮೊಂಡು ಆಸಾಮಿ ಮಧ್ಯರಾತ್ರಿಯ ವೇಳೆಗೆ ಅದು ಹೇಗೋ ಮೇಲೆ ಹತ್ತಿಕೊಂಡು ಬಂದುಬಿಟ್ಟಿದ್ದ. ಹೋ.. ಎಂದು ಅರಚಿದ ಜನ ಆತನನ್ನು ಅಭಿನಂದಿಸತೊಡಗಿದ್ದರು. ಆದರೆ ಈ ಆಸಾಮಿ ಮಾತ್ರ ತಾನು ಕಿವುಡನೆಂದೂ, ಬಾವಿಗೆ ಬಿದ್ದ ತನ್ನಂಥ ಅಬ್ಬೇಪಾರಿಯನ್ನು ಹುರಿದುಂಬಿಸಿದ ಈ ಊರಿನವರಿಗೆ ನನ್ನ ನಮಸ್ಕಾರಗಳು ಅಂತ ತಣ್ಣಗೇ ಕೈಜೋಡಿಸಿ ನಡೆದುಬಿಟ್ಟನೆಂದೂ ಮೂರ್ತಿಗಳು ನಗಾಡಿಕೊಂಡು ವಿವರಣೆ ನೀಡುತ್ತಿದ್ದರು. 
                                                                            *
   ಇದೆಲ್ಲ ಆಗಿ ಮೂವತ್ತು ವರ್ಷಗಳೇ ಆಗಿವೆ. ನಿರಂಜನಮೂರ್ತಿಗಳ ಮನೆಯಲ್ಲಿ ಅಖಂಡ ಎಂಟು ತಿಂಗಳು ಮಲಗಿದ್ದ ಆ ಹುಡುಗ ಇವತ್ತು ಮಲ್ಟಿನ್ಯಾಷನಲ್ ಕಂಪೆನಿಯೊಂದರ ವೈಸ್ ಪ್ರೆಸಿಡೆಂಟ್. ಇದ್ದಕ್ಕಿದ್ದಂತೆ ತನಗೆ ಬಯಾಗ್ರಫಿ ಬರೆಯುವ ತೆವಲು ಯಾಕೆ ಬಂತು ಅಂತ ಯೋಚಿಸುತ್ತ ಡೈರಿಯಲ್ಲಿ ತನ್ನಷ್ಟಕ್ಕೆ ತಾನೇ ಬರೆದುಕೊಳ್ಳುತ್ತಿದ್ದಾನೆ:

"ಬಹುಶಃ ಈ ನನ್ನ ಕತೆ ಈ ಪುಟಕ್ಕೇ ಕೊನೆಯಾಗಬಹುದು. ಆವತ್ತು ನಿರಂಜನಮೂರ್ತಿಗಳ ಮನೆಯಲ್ಲಿ ಹಾಗೆ ಮಂಚದ ಮೇಲೆ ಮಲಗಿದ್ದಾಗ ಒಂದು ಬೆಳಗಿನ ಜಾವ ನನಗೆ ಅತ್ಯಂತ ಖುಷಿಯಾಗಿತ್ತು. ಯಾಕೆಂದರೆ ನನಗರಿವಿಲ್ಲದಂತೆ ನಾನು ಎದ್ದು ನಡೆಯಬಲ್ಲವನಾಗಿದ್ದೆ. ಅಲ್ಲಿದ್ದ ಕಿಟಕಿಯಾಚೆ ಹಕ್ಕಿಗಳ ಕೂಗು ಕೇಳಿಸತೊಡಗಿತ್ತು. ಮೂರ್ತಿಗಳು ಪಕ್ಕದಲ್ಲೇ ಮಲಗಿದ್ದರು. ಇಷ್ಟು ದಿನ ಜೀವಜಗತ್ತಿನ ಎಲ್ಲ ನಡೆಗಳನ್ನು ಚಿತ್ರಿಸಿಕೊಟ್ಟ ಕಿಟಕಿಯದು. ನಿಧಾನಕ್ಕೆ ಕಿಟಕಿಯತ್ತ ಹೋದೆ. ಆದರೆ ಅಲ್ಲೇನಿತ್ತು? ಬರೀ ಒಂದು ಗೋಡೆ. ಯಾವುದೋ ಗೋದಾಮಿನ ಗೋಡೆ! ಹಾಗಾದರೆ ಇಷ್ಟು ದಿನ ಮೂರ್ತಿಗಳು ವಿವರಿಸುತ್ತಿದ್ದ ರಸ್ತೆಗಳು, ಅರಳಿಕಟ್ಟೆ, ಪಾರ್ಕು, ದೇವಸ್ಥಾನ, ತೆರೆದಬಾವಿ ಎಲ್ಲಿ ಹೋದವು? ನಿರಂಜನಮೂರ್ತಿಗಳು ನನಗೆಂದೇ ಒಂದು ಲೋಕ ಸೃಷ್ಟಿಸಿದರೇ? ಎಂಥ ವಿಚಿತ್ರ ನೋಡಿ: ಇವತ್ತೇನೋ ಈ ಜಗತ್ತು ನನ್ನನ್ನು ಸಕ್ಸೆಸ್ ಫುಲ್ ಮನುಷ್ಯ ಅಂತ ಗುರುತಿಸುತ್ತದೆ. ಆದರೆ ಈ ಜಗತ್ತಿಗೆ ಸಕ್ಸೆಸ್ ಫುಲ್ ಅಂತನಿಸಿಕೊಳ್ಳುವ ಜನರಿಗಿಂತ ಹೆಚ್ಚಾಗಿ ಗಾರುಡಿಗರ ಅವಶ್ಯಕತೆಯಿದೆ. ಶಮನಕಾರರ, ಜಾದೂಗಾರರ ಅವಶ್ಯಕತೆಯಿದೆ. ಮುಖ್ಯವಾಗಿ, ಈ ಜಗತ್ತನ್ನು ಸುಂದರವಾಗಿ ಕಟ್ಟಿಕೊಡಬಲ್ಲ ಕತೆಗಾರರ ಅವಶ್ಯಕತೆಯಿದೆ. 

   ಸುಳ್ಳಲ್ಲ, ನಿರಂಜನಮೂರ್ತಿಗಳಿಗೆ ನಿಜಕ್ಕೂ ಮರುಳತನವಿತ್ತು. ಊರಿನ ಜನ ಅವರನ್ನು ಹೊಗಳಿದಾಗಲೆಲ್ಲ, 'ನಾನು ಬರೇ ಪತ್ರ ಹಂಚುವವನು, ನಾನೇ ಪತ್ರವಲ್ಲ' ಅಂತೆಲ್ಲ ವಿಚಿತ್ರವಾಗಿ ಮಾತನಾಡುತ್ತಿದ್ದರು. ಜನರಿಗೆ ತಲುಪಿಸುತ್ತಿದ್ದ ಪತ್ರಗಳಲ್ಲಿನ ಖುಷಿಯ ಸಂಗತಿಗಳನ್ನು ಅಸಲಿಗೆ ತಾನು ಸೃಷ್ಟಿಸಿದ್ದಲ್ಲ, ಅದನ್ನು ಇನ್ಯಾರೋ ಬರೆದಿದ್ದು, ತಾನು ಬರೇ ವಾಹಕನೇ ಹೊರತು ತಾನೇ ಪತ್ರದೊಳಗಿನ ಖುಷಿಯ ಸಂಗತಿಯಲ್ಲ ಅಂತನ್ನುವ ಮರುಳತನ ಅವರಲ್ಲಿತ್ತು. ಇದೆಲ್ಲ ಇವತ್ತು ನನಗೆ ಗೊತ್ತಾಗುತ್ತಿದೆ. ಆ ಮರುಳತನವೇ ಅವರನ್ನು ಕತೆಗಾರರನ್ನಾಗಿಸಿದ್ದು. ಹಾಗೆ ಪ್ರತಿದಿನ ಕಿಟಕಿ ನೋಡುತ್ತ ನನಗೆ ಕತೆ ಕಟ್ಟಿಕೊಟ್ಟ ನಿರಂಜನಮೂರ್ತಿಗಳು ಬರೇ ಪತ್ರ
ಬಟವಾಡೆ ಮಾಡುವ ಪೋಸ್ಟ್ ಮ್ಯಾನ್ ಆಗಿರಲಿಲ್ಲ. ಈ ಲೋಕ ನನ್ನಂಥವರಿಗೆಂದು ಬರೆದು ಕಳಿಸಿದ ಸುಂದರ ಸಂದೇಶವಿದ್ದಂಥ ಒಂದು ಪತ್ರವೇ ಆಗಿದ್ದರು.."  
                                                                               -
 ತಾಂತ್ರಿಕ ಕಾರಣಗಳಿಂದಾಗಿ ಇ-ಪೇಪರ್ ಲಿಂಕ್ ಕೊಡಲಾಗುತ್ತಿಲ್ಲ, ಮೊಬೈಲ್ ಲಿಂಕ್ ಇಲ್ಲಿದೆ.  
(ವಿಜಯಕರ್ನಾಟಕದಲ್ಲಿ 04.07.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)