Wednesday, August 29, 2018

ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಒಂದು ಶೋಕಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 29.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, August 1, 2018

ಕತೆಯೆಂಬ ಮಂತ್ರವೂ ಕಥನವೆಂಬ ತಂತ್ರವೂ..


ಒಂದು ಕತೆಯ ಆರಂಭಕ್ಕೆ ಹಲವಾರು ದಾರಿಗಳು. ಈ ದಾರಿಯಲ್ಲಿ ಕತೆಗಾರನಿಗೆ ಕತೆ ಎಂಬುದು ಯಾವಾಗಲೂ ಒಂದು ಮಂತ್ರ. ಕಥನವೆಂಬುದು ಬರೀ ತಂತ್ರ. ಸಾಮಾನ್ಯವಾಗಿ ಕತೆ ಹೇಳುವ ಕತೆಗಾರ ಒಂದೊಂದು ರೀತಿಯ ಕಥನತಂತ್ರ ಪ್ರಯೋಗಿಸುತ್ತಾನೆ. ಆದರೆ ಒಮ್ಮೊಮ್ಮೆ ಇದೆಲ್ಲ ತಿರುವುಮುರುವು ಆಗುವದೂ ಉಂಟು. ಕತೆಗಿಂತ ಕಥನವೇ ಮಂತ್ರವಾಗಿ ಕತೆಯೇ ತಂತ್ರವಾಗುವದೂ ಉಂಟು. ಸಿಂಪಿ ಲಿಂಗಣ್ಣನವರು 'ಉತ್ತರ ಕರ್ನಾಟಕದ ಜಾನಪದ ಕಥೆಗಳು' (ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಕೃತಿಯಲ್ಲಿ ಒಂದು ಮಜವಾದ ಚಿತ್ರಣ ಕೊಡುತ್ತಾರೆ. ಹೇಗೆ ಒಂದು ಕುಟುಂಬದಲ್ಲಿ ಕತೆಗಿಂತ ಕಥನವೊಂದು ಮುಖ್ಯವಾಗಿ, ಅದು ಜೀವ-ಜೀವಗಳ ನಡುವೆ ಕೂಡಿಕೆಯ ಮಿಡಿಯಾಗಿ, ಸಹವಾಸದ ಪಾಡಾಗಿ ಕೊನೆಗೊಮ್ಮೆ ಅದು ಸಖ್ಯದ ಫಲವಾಗಿ ಪರಿಣಮಿಸುತ್ತದೆ ಅಂತ  ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. 

   ಬಹುಶಃ ಅದೊಂದು ಉತ್ತರ ಕರ್ನಾಟಕದ ಯಾವುದೋ ಊರು. ಈಗಷ್ಟೇ ಮಳೆ ನಿಂತಿರುವ ಇಳಿಸಂಜೆ. ವರಾಂಡದಲ್ಲಿ ಪವಡಿಸಿರುವ ಒಂದು ಜೋಡಿ. ಇಬ್ಬರೂ ಓರಗೆಯವರಲ್ಲ. ಇಬ್ಬರೂ ಸರೀಕರಲ್ಲ. ಒಬ್ಬರ ಬಾಯಲ್ಲಿ ಹಲ್ಲು ಉಳಿದಿಲ್ಲ, ಇನ್ನೊಬ್ಬರ ಬಾಯಲ್ಲಿ ಹಲ್ಲೇ  ಬೆಳೆದಿಲ್ಲ. ಆದರೂ ಒಡನಾಡಿಗಳು. ಒಂದು ಅಜ್ಜಿ, ಒಂದು ಮೊಮ್ಮಗು. ಅಜ್ಜಿಯ ಕೈಹಿಡಿದ ಯಜಮಾನ ಯಾವತ್ತೋ ಕೈಬಿಟ್ಟು ಬಹುದೂರ ಸಾಗಿರುವನು. ಸದ್ಯಕ್ಕೆ ಮೊಮ್ಮಗನ ರೂಪದಲ್ಲೂ ಹೆಸರಿನಲ್ಲೂ ಉದ್ಭವನಾಗಿರುವನು. ಬೊಚ್ಚುಬಾಯಿಯ ಮಗು. ಅದು ಬಾಯನ್ನಗಲಿಸಿ ನಕ್ಕಾಗಲೆಲ್ಲ ಆ ನಗುವಿನಲ್ಲಿ ಯಜಮಾನನನ್ನೇ ಕಾಣುವ ಅಜ್ಜಿ. ಈ ಹಂತದಲ್ಲಿ ಅಜ್ಜಿಗೆ ಮಗು ಒಡನಾಡಿಯೋ, ಮಗುವಿಗೆ ಅಜ್ಜಿ ಒಡನಾಡಿಯೋ ಅಂತ ವಿವರಿಸುವದು ಕಷ್ಟ. ಹೀಗಿರುವಾಗ, ಈ ಇಳಿಸಂಜೆಯ ಕಥಾಸಮಯದಲ್ಲಿ ಒಡನಾಡಿಗಳ ಮಧ್ಯೆ ಅಲ್ಲೊಂದು ಪ್ರಶ್ನೋತ್ತರಮಾಲಿಕೆ ನಡೆಯುತ್ತಿದೆ. ಅಜ್ಜಿ ಕೇಳುತ್ತಿದ್ದಾಳೆ: 
"ಕತೆಕತೆ ಕಬ್ಬು, ಮೈಯೆಲ್ಲ ಜಿಬ್ಬು. ತಿಂದೆಯೋ? ಉಗುಳಿದೆಯೋ?"                 '                
'ಉಗುಳಿದೆ'                                                                                                                              "ಎಲ್ಲಿ ಉಗುಳಿದೆ?"                                                                                                              'ತಿಪ್ಪೆಯಲ್ಲಿ ಉಗುಳಿದೆ'                                                                                                            "ತಿಪ್ಪೆ ಏನು ಕೊಟ್ಟಿತು?"                                                                                                              'ಗೊಬ್ಬರ ಕೊಟ್ಟಿತು'                                                                                                                      "ಗೊಬ್ಬರ ಏನು ಮಾಡಿದೆ?"                                                                                                       'ತೋಟಕ್ಕೆ ಹಾಕಿದೆ'                                                                                                                      "ತೋಟ ಏನು ಕೊಟ್ಟಿತು?"                                                                                                            'ಹೂವು ಕೊಟ್ಟಿತು'                                                                                                                        "ಹೂವು ಏನು ಮಾಡಿದೆ?"                                                                                                              'ದೇವರಿಗೆ ಏರಿಸಿದೆ'                                                                                                                        "ದೇವರೇನು ಕೊಟ್ಟ?"                                                                                                                    'ಗಳಗಂಟೆ ಕೊಟ್ಟ!'  

ಗಳಗಂಟೆ ಅಂತನ್ನುವಾಗ ಚಡ್ಡಿ ಹಾಕಿರದ ಮಗುವಿನ ಮುಖದಲ್ಲಿ ಖೊವ್ವೆನ್ನುವ ತುಂಟ ನಗು! ಅದನ್ನು ನಿಸೂರಾಗಿ ತುಂಬಿದ್ದು ಅಜ್ಜಿ. ಇದು ಕತೆಯೊಂದು ತನ್ನಷ್ಟಕ್ಕೆ ತಾನೇ ಸಿದ್ಧವಾಗುತ್ತಿದ್ದ ರೀತಿ. ಅಥವಾ, ಆಗಷ್ಟೇ ಹೆಣೆಯುತ್ತಿದ್ದ ಕತೆಯನ್ನು ಆಲಿಸಲೆಂದು ಆಕೆ ಶ್ರೋತೃಗಳನ್ನು ಸಿದ್ಧಪಡಿಸುತ್ತಿದ್ದ ರೀತಿ. ಇಂಥದೊಂದು ಪ್ರಶ್ನೋತ್ತರಮಾಲಿಕೆ ಸುರಳೀತವಾಗಿ ನಡೆಯಿತೆಂದರೆ ಆ ಸಂಜೆ ಅಲ್ಲೊಂದು ಹೊಸ ಕತೆ ಹುಟ್ಟಿತೆಂದೇ ಲೆಕ್ಕ. ಮಕ್ಕಳ ಕಥಾಸಮಯದ ಆರಂಭದಲ್ಲಿ ನಡೆಯುತ್ತಿದ್ದ ಈ ರೀತಿಯ 'ಕಥಾವ್ಯಾಯಾಮ' ಇವತ್ತು ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವ್ಯಾಯಾಮ ಜಗತ್ತಿನ ನಾನಾ ಪ್ರಾಂತ್ಯಗಳಲ್ಲಿ ನಾನಾ ರೀತಿಯಲ್ಲಿವೆ.

   ಹೀಗೆ ವರಾಂಡದಲ್ಲಿ ಕತೆಯೊಂದು ತನ್ನಷ್ಟಕ್ಕೆ ತಾನೇ ತಯಾರಾಗಿ ಜಿನುಗುತ್ತಿರುವಾಗಲೇ ಒಳಮನೆಯ ಜೀವವೊಂದು ಮಂದಹಾಸ ಬೀರುತ್ತಲಿದೆ. ಇಡೀ ದಿನ ಕೆಲಸ ಮಾಡಿ ದಣಿದಿರುವ ಸೊಸೆ. ಕಾಲು ಚಾಚಿ ವಿಶ್ರಮಿಸುತ್ತಿರುವ ತುಂಬು ಗರ್ಭಿಣಿ. ಅವಳೊಳಗೆ ಏನೇನು ಕತೆಗಳಿವೆಯೋ?                                                                                                                 
                                                                ***                                                                                                                                                                  ಆಕೆ ಕಾಲು ಚಾಚಿ ವಿಶ್ರಮಿಸುತ್ತಿದ್ದಂತೆಯೇ ಹೊಟ್ಟೆಯೊಳಗೆ ಸಣ್ಣಗೆ
ಮಿಸುಕಾಟ. ಇದ್ದಕ್ಕಿದ್ದಂತೆ ಗರ್ಭದೊಳಗಿನ ಎರಡು ಭ್ರೂಣಗಳು ಸಕ್ರಿಯವಾದಂತೆ. ಹೆಣ್ಣೋ ಗಂಡೋ, ಆಸ್ತಿಕವೋ ನಾಸ್ತಿಕವೋ, ಫೆಮಿನಿಷ್ಟೋ ಸೋಶಲಿಷ್ಟೋ ಆಗಿರಬಹುದಾದ ಭ್ರೂಣಗಳು. ಎರಡೂ ಭ್ರೂಣಗಳಿಗೆ ಅಪರಿಮಿತ ಉತ್ಸಾಹವಿದ್ದಂತಿತ್ತು. ಹಾಗಾಗಿ ಅಲ್ಲೊಂದು ವಾಗ್ವಾದ ಶುರುವಾದಂತಿತ್ತು.  

"ಅಬ್ಬಾ, ಅಂತೂ ಇಂತೂ ಅವತರಿಸಿಬಿಟ್ಟೆವು. ನಮಗಾಗಿ ಎಷ್ಟೊಂದು ಜೀವಗಳು ಸತ್ತು ಹೋದವು. ನಾವೇ ಗ್ರೇಟ್ ಅಲ್ವಾ?" ಅಂತ ಭ್ರೂಣವೊಂದು ಹೇಳುತ್ತಿದ್ದರೆ ಇನ್ನೊಂದು ಸುಮ್ಮನೇ ತಲೆಯಾಡಿಸುತ್ತಿತ್ತು. ಹುಟ್ಟಿದಾಗಿನಿಂದಲೂ ಹೀಗೇ. ಒಂದು ಭ್ರೂಣ ಸಿಕ್ಕಾಪಟ್ಟೆ ಉತ್ಸಾಹಿ. ಅದಕ್ಕೆ ಎಲ್ಲದರಲ್ಲೂ ಕುತೂಹಲ. ಹೊರಜಗತ್ತಿನ ಎಲ್ಲ ಚಟುವಟಿಕೆಗಳ ಬಗ್ಗೆ ತನ್ನದೇ ಆದ ಪ್ರತಿಕ್ರಿಯೆಗಳ ಮೂಲಕ ಸ್ಪಂದಿಸುತ್ತಿತ್ತು. ಎರಡನೇಯದು ಸ್ವಲ್ಪ ನಿಧಾನಿ. ಅದು ಎಲ್ಲವನ್ನೂ ಗ್ರಹಿಸುವತ್ತ ಗಮನ ಹರಿಸುತ್ತಿತ್ತೇ ಹೊರತು ಪ್ರತಿಕ್ರಿಯೆ ನೀಡುತ್ತಿರಲಿಲ್ಲ.    

   "ನೀನ್ಯಾಕೆ ಮಾತನಾಡುತ್ತಿಲ್ಲ? ಯಾವಾಗ ನೋಡಿದರೂ ಅದೇನೋ ಯೋಚನೆ ಮಾಡ್ತಾ ಇರ್ತೀಯ.." ಉತ್ಸಾಹಿ ಭ್ರೂಣ ಸಿಟ್ಟಿನಿಂದ ಕಿರುಚಿತು. ಎರಡನೇಯದು ಶಾಂತವಾಗಿತ್ತು. ಅದು  ನಿಧಾನವಾಗಿ, "ನಿಂಗೊತ್ತಿಲ್ಲ, ಇಷ್ಟು ದಿನ ನೀನು ಖುಷಿಖುಷಿಯಾಗಿದ್ದೆ. ಯಾಕೆಂದರೆ ಇಲ್ಲಿರುವದು ಒಂದೇ ಲೋಕ ಅಂತ ನೀನು ಭಾವಿಸಿದ್ದೆ. ಆದರೆ ನಾವು ಹೊರಹೋಗುವ ಸಮಯ ಬರುತ್ತಲಿದೆ. ಅದೊಂದು ವಿಚಿತ್ರ ಲೋಕ.." ಅಂತ ಅನ್ನುವಷ್ಟರಲ್ಲಿ ಉತ್ಸಾಹಿ ಭ್ರೂಣದ ಕುತೂಹಲ ಗರಿಗೆದರತೊಡಗಿತ್ತು. ಏನೂ..? ಇನ್ನೊಂದು ಲೋಕವಾ? ಹೇಗಿದೆ ಆ ಲೋಕ? ಏನೇನಿದೆ ಅಲ್ಲಿ? ಅಂತೆಲ್ಲ ಪ್ರಶ್ನೆಗಳ ಮಳೆಯನ್ನೇ ಸುರಿಸಿತು. ಇತ್ತ, ನಿಧಾನಿ ಭ್ರೂಣ ಕೊಂಚ ಚಿಂತಾಕ್ರಾಂತವಾಗಿತ್ತು. ಅದಕ್ಕೆ ತನ್ನ ಒಡನಾಡಿಯ ಭವಿಷ್ಯದ ಬಗ್ಗೆ ಚಿಂತೆ. 

   "ನೋಡು, ಇಷ್ಟು ದಿನ ಹೇಗೋ ಏನೋ ಬೆಚ್ಚನೆಯ ಗರ್ಭದಲ್ಲಿದ್ದೆವು. ಹೊರಗೆ ಎಂತೋ ಏನೋ. ನಾವಂತೂ ಮನುಷ್ಯರ ಮುಖವನ್ನೇ ನೋಡಿಲ್ಲ. ಯಾಕೆಂದರೆ ನಮಗೆ ಕಣ್ಣೇ ಇನ್ನೂ ಬಂದಿಲ್ಲ. ಹೀಗಾಗಿ ಯಾರು ಹೇಗೆ ಅಂತ ಬರೀ ಅವರವರ ಧ್ವನಿಯ ಮೂಲಕ ಗುರುತಿಸುವದನ್ನು ರೂಢಿಸಿಕೊಂಡಿದ್ದೇವೆ. ಆದರೆ ಈ ಮನುಷ್ಯರೋ ಭಲೇ ಕಿಲಾಡಿಗಳು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕಾಗಿ ಯಾವನೋ ಒಬ್ಬ ಗೆದ್ದ ವ್ಯಕ್ತಿಗೆ ಜೋರಾಗಿ ಅಭಿನಂದನೆ ಹೇಳುತ್ತಿರುತ್ತಾನೆ. ಆದರೆ ಆ ಜೋರು ಹೇಳಿಕೆಯಲ್ಲಿ ಅಸಹನೆಯ ಸಣ್ಣ ಧ್ವನಿಯೂ ಮಿಳಿತವಾಗಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಇನ್ನೊಂದೆಡೆ, ಯಾರೋ ಸತ್ತರೆಂದು ಇನ್ಯಾರೋ ಸಂತಾಪ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಆ ಸಂತಾಪದೊಳಗೇ ಸಣ್ಣದೊಂದು ಸಂತಸವೂ ಧ್ವನಿಸುತ್ತಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಹೀಗಿರುವಾಗ, ಕೇವಲ ಧ್ವನಿಯನ್ನು ನಂಬಿರುವ ನಾವು ಮನುಷ್ಯರನ್ನು ಗುರುತಿಸುವದಾದರೂ ಹೇಗೋ?"

   ನಿಧಾನಿ ಭ್ರೂಣದ ಮಾತುಗಳನ್ನು ಕೇಳುತ್ತಲೇ ಉತ್ಸಾಹಿ ಭ್ರೂಣದ ಕೋಪ ನೆತ್ತಿಗೇರತೊಡಗಿತು. ಅದಕ್ಕೀಗ ಹೊರಜಗತ್ತಿನ ನಿಯಮಾವಳಿ ಬಗ್ಗೆ ಗೊಂದಲವಾದಂತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಒಡನಾಡಿ ಎಂದಿಗೂ ತನ್ನೊಂದಿಗೆ ಒಳಗೊಂದು ಹೊರಗೊಂದು ಎಂಬಂತೆ ಕಣ್ಣಾಮುಚ್ಚಾಲೆಯಾಡಿಲ್ಲವೆಂದೂ ತಿಳಿದು ಸಂತಸಪಟ್ಟಿತು. ತಕ್ಷಣವೇ ಸಿಟ್ಟಿನಿಂದ, "ಹೌದೋ, ಅಲ್ಲಿ ಹಾಗೆಲ್ಲ ಉಂಟೋ? ಹಾಗಾದರೆ ನಮ್ಮ ಲೋಕದಿಂದ ಹೊರಗೆ ಹೋದವರ ಪೈಕಿ ಒಬ್ಬರೂ ನಮಗೆ ಇಂಥ ಸಂಗತಿಗಳ ಬಗ್ಗೆ ಹೊರಗಿನಿಂದ ಎಚ್ಚರಿಸಲಿಲ್ಲವಲ್ಲ.." ಅಂತೆಲ್ಲ ತನ್ನ ಹಿರಿಯರ ಬಗ್ಗೆ ಕೆಂಡ ಕಾರಿತು. 

   ನಿಧಾನಿ ಭ್ರೂಣ ಮುಗುಳ್ನಗುತ್ತಿತ್ತು. ಅದಕ್ಕೆ ಉತ್ಸಾಹಿ ಒಡನಾಡಿಯ ಬಗ್ಗೆ ಇನ್ನಿಲ್ಲದ ಪ್ರೀತಿ. ಕೊನೆಗೂ ಏನು ಹೇಳುವದೆಂದು ಗೊತ್ತಾಗದೇ  ಆದಷ್ಟೂ ಸರಳ ರೀತಿಯಲ್ಲಿ ಹೇಳತೊಡಗಿತು: ನೋಡೋ, ನಮ್ಮದು ಒಂಥರಾ ವಿಚಿತ್ರ ಭಾಷೆ. ಇಲ್ಲಿ ಮಾತುಕತೆ
ಬರೇ ಧ್ವನಿಯ ಮೂಲಕ ಆಗುವದಿಲ್ಲ. ನಮ್ಮಮ್ಮ ಹಿಡಿದಿರುವ ಚಾಕು ಈರುಳ್ಳಿಯನ್ನು ಕತ್ತರಿಸಿತೋ ಅಥವಾ ಅವಳ ಬೆರಳನ್ನು ಕತ್ತರಿಸಿತೋ ಅಂತ ಅವಳು ಹೇಳುವದಕ್ಕಿಂತ ಮೊದಲೇ ನಮಗೆ ಗೊತ್ತಾಗಿರುತ್ತದೆ. ಹೀಗಾಗಿ ನಮಗೆ ಭಾಷೆಯ ಅಗತ್ಯವೇ ಬೀಳದು. ಹೀಗಿರುವಾಗ, ಇಲ್ಲಿಂದ ಹೊರಗೆ ಹೋದವರು ಅಲ್ಲಿನ ನಿಯಮಾವಳಿ ಬಗ್ಗೆ ನಮಗ್ಯಾಕೆ ತಿಳಿಸುವದಿಲ್ಲ ಅಂತ ತಕರಾರು  ಎತ್ತುತ್ತೀಯಲ್ಲ? ನಿನಗೆ ಗೊತ್ತಾ, ನೀನು ಇಲ್ಲಿಂದ ಹೊರಬಿದ್ದ ಮೇಲೆ ನಿನಗೆ ಮಾತು ಬರುವವರೆಗೂ ಒಳಗಿರುವ ನನ್ನೊಂದಿಗೆ ಮಾತನಾಡಬಹುದು. ಆದರೆ ಯಾವಾಗ ನೀನು ಹೊರಗಿನ ಭಾಷೆ ಮಾತನಾಡತೊಡಗುತ್ತೀಯೋ, ಈ ನಮ್ಮ ಒಳಗಿನ ಭಾಷೆ ನಿನಗೆ ಮರೆತು ಹೋಗಿರುತ್ತದೆ. ಎಲ್ಲ ನಿಯಮಾವಳಿ ಗೊತ್ತಾದ ಬಳಿಕ ನೀನು ಮತ್ತೇ ಒಳಗೆ ಬರಲಾರೆ. ಒಳಗಿನವರೊಂದಿಗೆ ಮಾತನಾಡಲಾರೆ..

-ಅಂತೆಲ್ಲ ಹೊರ ನಿಯಮಾವಳಿಗಳ ಬಗ್ಗೆ  ಹೇಳುತ್ತಿದ್ದ ನಿಧಾನಿ ಭ್ರೂಣ ತನ್ನ ಉತ್ಸಾಹಿ ಒಡನಾಡಿಯನ್ನು ಸಂತೈಸುತ್ತಿರುವಂತೆ ಹಿತಾನುಭವ ಪಡೆಯುತ್ತಿದ್ದ ಗರ್ಭಿಣಿ ಸೊಸೆ ವರಾಂಡದಲ್ಲಿ ಇಣುಕುತ್ತಾಳೆ. ಬಹುಶಃ ಊಟ ಮುಗಿಸಿದ್ದ ಅಜ್ಜಿ ಮತ್ತು ಮೊಮ್ಮಗು ನಿದ್ದೆ ಹೋದಂತಿತ್ತು.
                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 01.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)