Monday, November 28, 2011

ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?

                                           Photo: Internet


"ಆಜಾ,ಆಜಾ..ಅಬ್ ಕೈಸಾ ಶರ್ಮಾನಾ..."
ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು 'ಆಶಿಕಿ' ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು.
ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ. ಅಡುಗೆ  ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರಬಂದು, "ಎಲ್ಲಾ ನಿನ್ನ ಗುಣಗಳೇ ಬಂದಾವಲ್ಲೋ ಪುಟ್ಟಿಗೆ.." ಅಂತ ತನ್ನ 
ಮಗಳನ್ನು ಕುರಿತು ಹೇಳುತ್ತಿದ್ದಳು. ಶೋಕೇಸ್ ನಲ್ಲಿದ್ದ ಪುಟ್ಟಿಯ ಪ್ರಶಸ್ತಿ, ಫಲಕಗಳನ್ನು ನೋಡುತ್ತ 
ನಾನು ಪುಟ್ಟಿಯತ್ತ ಒಂದು ಕಣ್ಣು ಹೊಡೆದು ತುಂಟ ನಗೆ ಬೀರಿ 'ಹೆಂಗೆ?' ಅಂತಂದು ನನ್ನ ಕಾಲರ್ ಸರಿಪಡಿಸಿಕೊಳ್ಳತೊಡಗಿದೆ.

"ಥೋ ನಿನ್ನ.. ಕಾಲರ್ರು ಆಮೇಲೆ ಎತ್ಕೋ! ನಾಲ್ಕನೇ ಕ್ಲಾಸಿಗೆ ಬಂದರೂ ಪುಟ್ಟಿ ಹಾಸಿಗೆಯಲ್ಲಿ ಉಚ್ಚೆ 
ಹೊಯ್ತಾಳಲ್ಲೋ..." ಅಕ್ಕ ಬೇಜಾರಿನಿಂದ ಹೇಳುತ್ತಿದ್ದಳು. ಹೊಗಳಿಕೆಯ ನಿರೀಕ್ಷೆಯಲ್ಲಿದ್ದವನಿಗೆ 
ಯಾರೋ ಬಂದು ರಪರಪ ಅಂತ ಬಾರಿಸಿದಂತಾಯಿತು. ಅಷ್ಟೊತ್ತು ನನ್ನ ಮುಖದಲ್ಲಿದ್ದ ತುಂಟನಗೆ 
ಈಗ ಪುಟ್ಟಿಯ ಮುಖಕ್ಕೆ ವರ್ಗಾವಣೆಯಾಗಿತ್ತು..

                                                                                      *
ಏನಂತ ಹೇಳೋದು ಹೇಳಿ. ನನ್ನ ಪೈಮರಿ ಮತ್ತು ಹೈಸ್ಕೂಲು ದಿನಗಳಲ್ಲಿ ಕೆಲವೊಂದು ಫೋಬಿಯಾ 
ನನ್ನನ್ನು ಸಿಕ್ಕಾಪಟ್ಟೆ ಕಾಡಿದ್ದವು. ಮನೆಗೆ ಯಾರಾದರೂ ವಯಸ್ಸಾದ ಗೆಸ್ಟುಗಳು ಬಂದುಬಿಟ್ಟರೆ 
ಸಣ್ಣಗೆ ನಡುಕ ಶುರುವಾಗುತ್ತಿತ್ತು. ನಿಜ ಹೇಳಬೇಕೆಂದರೆ, ಆವಾಗೆಲ್ಲ ಎರಡರಿಂದ ಇಪ್ಪತ್ತರವರೆಗಿನ 
ಮಗ್ಗಿಯನ್ನು ಬಾಯಿಪಾಠ ಮಾಡುವದು ನಮಗೆಲ್ಲ mandatory ಆಗಿತ್ತಾದರೂ ಈ ಹದಿನೇಳರ ಮಗ್ಗಿ 
ಮಾತ್ರ ಯಾವಾಗಲೂ ನನಗೆ ಕೈಕೊಡುತ್ತಿತ್ತು. 

ಹಾಗಾಗಿ ಬಂದ ಅತಿಥಿಗಳು ಏನೇ ಕೆಲಸ ಹೇಳಲಿ, ನನ್ನ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಕೇಳಲಿ,
ಆದರೆ 'ಹದಿನೇಳರ ಮಗ್ಗಿ'ಯೊಂದನ್ನು ಮಾತ್ರ ಕೇಳದಿರಲಿ ದೇವರೇ ಅಂತ ಕಾಣದ ಭಗವಂತನಲ್ಲಿ
ಮೊರೆಯಿಡುತ್ತಿದ್ದೆ. ಆದರೆ ಬಹುತೇಕ ಸಲ ಭಗವಂತನಿಗೆ ನನ್ನ ಭಕ್ತಿ ರುಚಿಸುತ್ತಿರಲಿಲ್ಲ. 
ಗುರಿಯಿಟ್ಟು ನೇರವಾಗಿ ತೊಡೆಗೇ ಗದಾಪ್ರಹಾರ ಮಾಡಿದ ಭೀಮನಂತೆ, ಬಂದ ಅತಿಥಿಗಳ ಪೈಕಿ
ಅದರಲ್ಲೂ ವಯಸ್ಸಾದ ಅಜ್ಜಂದಿರು, 
"ಏನಪ ತಮ್ಮ, ಹದಿನೇಳ ಐದಲೇ ಎಷ್ಟು..?" ಅಂತ ಬಾಣ ಹಿಡಿದು ನನ್ನಂಥ ಪಿಳ್ಳೆಯ ಮೇಲೆ 
ಪ್ರಯೋಗಿಸಿಯೇ ಬಿಡುತ್ತಿದ್ದರು! ಆಗೆಲ್ಲ ನಾನು ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡ ಅಭಿಮನ್ಯುವಿನಂತೆ 
ಕಣ್ ಕಣ್ ಬಿಟ್ಟು ಧರಾಶಾಯಿಯಾಗುತ್ತಲಿದ್ದೆ.
ಇಷ್ಟಕ್ಕೂ ಪ್ರಶ್ನಿಸುವದು ಎಷ್ಟು ಸರಳ ಅಲ್ವ?

ಒಂದೆರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕವೆಲ್ಲ ಅತೀವೃಷ್ಟಿಯಿಂದ ನೀರುಪಾಲಾದಾಗ ಅಲ್ಲಿನ 
ಎಂಥದ್ದೋ ಹಳ್ಳಿಯಲ್ಲಿ ಯುವಕನೊಬ್ಬ ಮೂರು ಹಗಲು, ಮೂರು ರಾತ್ರಿ ಹಸಿವೆ, ಭಯದಿಂದ 
ಕಂಗೆಟ್ಟು ಮರದ ಮೇಲೆ ಆಶ್ರಯ ಪಡೆದಿದ್ದ. ಆತನ ಬಂಧುಗಳು ನೀರು ಪಾಲಾಗಿ ಸತ್ತೇ ಹೋಗಿದ್ದರು.
ಹೆಲಿಕಾಪ್ಟರ್ ಸಹಾಯದಿಂದ ಮರದ ಮೇಲಿದ್ದ ಆತನನ್ನು ರಕ್ಷಿಸಲಾಯಿತು.  ಆದರೆ ಮೀಡಿಯಾಗೆ 
ಪ್ರಶ್ನಿಸುವ ಕಾತುರ. ಹೆಲಿಕಾಪ್ಟರ್ ನಲ್ಲಿಯೇ ಮೈಕು ಹಿಡಿದ ವರದಿಗಾರ ಆ ಯುವಕನನ್ನು ಪ್ರಶ್ನಿಸುತ್ತಿದ್ದ:
"ಈಗ ಏನನಿಸುತ್ತಿದೆ?ಹ್ಯಾಗನಿಸುತ್ತಿದೆ..?"    

ಅರೆರೇ,ಪ್ರಶ್ನಿಸುವದು ಎಷ್ಟು ಸರಳ ನೋಡಿ.ಉತ್ತರಿಸೋದೇ ಕಷ್ಟ ಕಷ್ಟ..

ಸರಿ, ಹಾಗಂತ ಕೆಲವೊಂದು ಪ್ರಶ್ನೆಗಳಿಗೆ ನನ್ನಲ್ಲಿ ಸಿದ್ಧ ಉತ್ತರಗಳಿದ್ದವು. ಪ್ರೈಮರಿಯಲ್ಲಿ ನಿಬಂಧ 
ಬರೆಯುವಾಗ ಕೆಲವು ಸಾಲುಗಳು ಎಲ್ಲ ಕಾಲಕ್ಕೂ, ಎಲ್ಲ ಪ್ರಶ್ನೆಗಳಿಗೂ apply ಆಗುತ್ತಿದ್ದವು. ಸಾಮ್ರಾಟ್ ಅಶೋಕನೂ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅಕ್ಬರನೂ ಪ್ರಜೆಗಳನ್ನು ಮಕ್ಕಳೆಂದೇ
ಭಾವಿಸಿದ್ದ. ರಾಣಿ ಚೆನ್ನಮ್ಮಳೂ ಕೂಡ. ಚಕ್ರವರ್ತಿ ಅಶೋಕ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು 
ನಡೆಸಿದರೆ, ಮಿಕ್ಕ ರಾಜರುಗಳು ಮರ ನೆಟ್ಟರು! ಎಲ್ಲ ಆಡಳಿತಗಾರರ ಆರ್ಥಿಕ ಪರಿಸ್ಥಿತಿ ಸಕತ್ತಾಗಿಯೇ
ಇತ್ತು. ಹೀಗೆ ಶುರುವಾಗುತ್ತಿದ್ದ ನಿಬಂಧಗಳಲ್ಲಿ ಬದಲಾಗುತ್ತಿದ್ದ ಸಾಲುಗಳೆಂದರೆ, ಆಯಾ ರಾಜರುಗಳು 
ಹುಟ್ಟಿದ ವರ್ಷ ಮತ್ತು ಸತ್ತ ದಿನಾಂಕ ಮಾತ್ರ.

ಆದರೆ ಆವತ್ತಿಗೆ ನನ್ನ ತಲೆ ತಿನ್ನುತ್ತಿದ್ದ ವಿಷಯಗಳ ಪೈಕಿ ಒಂದು ಮುಖ್ಯ ಪ್ರಶ್ನೆ ಯಾವಾಗಲೂ 
ಕಾಡುತ್ತಿತ್ತು.  ಯಾವ ರಾಜನೂ ಪ್ರಜೆಗಳಿಗಾಗಿ  'ಸಂಡಾಸ ಮನೆ' ಕಟ್ಟಿಸಲಿಲ್ಲವೇ? ಬಹಿರ್ದಸೆಗಾಗಿ 
ನಾನು ಮತ್ತು ನನ್ನ ಗೆಳೆಯರು ಏನೆಲ್ಲ ಸರ್ಕಸ್ ಮಾಡಬೇಕಾಗಿ ಬರುತ್ತಿತ್ತು. ಟಾಯ್ಲೆಟ್ ರೂಮಿನ 
ಸೌಭಾಗ್ಯವಿಲ್ಲದ ನಮಗೆಲ್ಲ ಅದೊಂದು ಕ್ರಿಯೆ ಮಾತ್ರ ದೊಡ್ಡ ತಲೆನೋವಿನ ಕೆಲಸವಾಗಿತ್ತು. 
ಅದೇನೋ ಮಹಾ ಘನಂದಾರಿ ಕೆಲಸವೆಂಬಂತೆ ಅದಕ್ಕೆ 'ಲಂಡನ್ ಪ್ರವಾಸ' ಅಂತ ಹೆಸರಿಟ್ಟಿದ್ದೆವು.
ಹಾಗೆ ಲಂಡನ್ ಗೆ ಹೋದಾಗ ಬೇಗ ಕ್ರಿಯೆ ಮುಗಿಯಲಿ ಎಂಬಂತೆ 'ಆಜಾ, ಆಜಾ, ಅಬ್ ಕೈಸಾ 
ಶರಮಾನಾ..' ಅಂತ ತಿಣುಕಾಡಿ ಹಾಡುತ್ತಿದ್ದೆವು.

ಹೀಗಿರುವಾಗ, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನಿಗೆ ಪ್ರವಾಸ ಕುರಿತಂತೆ ವಿಶೇಷ ಸೌಲಭ್ಯವೊಂದು
ಸಿಕ್ಕಿತು. ವರ್ಷಕ್ಕೋ, ಎರಡು ವರ್ಷಕ್ಕೋ ಒಂದುಸಲ ಕುಟುಂಬದ ಜನರೆಲ್ಲ ಬ್ಯಾಂಕಿನ ಹಣದಲ್ಲಿ
ಪ್ರವಾಸ ಕೈಗೊಳ್ಳಬಹುದಿತ್ತು. ಸರಿ, ಬೇಲೂರು-ಹಳೇಬೀಡು-ಶ್ರವಣಬೆಳಗೋಳ ಅಂತೆಲ್ಲ 
ತಿರುಗಾಡಿದ್ದಾಯ್ತು. ಏಳನೇ ಕ್ಲಾಸಿನಲ್ಲಿದ್ದ ನಾನು ಶ್ರವಣಬೆಳಗೋಳದ ಲಾಡ್ಜ್ ಒಂದರಲ್ಲಿ ಟಾಯ್ಲೆಟ್ 
ರೂಮಿಗೆ ಕಾಲಿಟ್ಟಾಗ ಎದೆ ಧಸಕ್ಕೆಂದಿತ್ತು. ಏನಿದೆ ಅಲ್ಲಿ? 
ಮಿರಿಮಿರಿ ಮಿಂಚುತ್ತಿರುವ ಕಮೋಡ್!

ಆಗಾಗ ಸಂಬಂಧಿಕರ ಮನೆಗೆ ಹೋದಾಗ ಅವರಲ್ಲಿನ Indian toilet ನೋಡಿದ್ದೆನಾದರೂ, ಇದ್ಯಾವದಪ್ಪ?
ಇದರಲ್ಲಿ ಹ್ಯಾಗೆ ಕೂತ್ಕೊಬೇಕು ಅನ್ನೋದೇ ಗೊತ್ತಾಗ್ತಿಲ್ವಲ್ಲ? ಯಾರಿಗಾದರೂ ಕೇಳೋಣವೆಂದರೆ ಒಣ 
ಮರ್ಯಾದೆ ಪ್ರಶ್ನೆ. ಆದದ್ದಾಗಲಿ ಎಂದುಕೊಂಡು Indian toilet ಥರಾನೇ ಮೇಲಕ್ಕೆ ಹತ್ತಿ ಪವಡಿಸಿದೆ. 
ಅದ್ಯಾಕೋ ಏನೋ ಈ ಸಲ ಲಂಡನ್ ಪ್ಲೇನು ಹತ್ತಿದಾಗ 'ಆಜಾ,ಆಜಾ..' ಹಾಡು ಬರಲೇ ಇಲ್ಲ!

ಕೊಟ್ಟ ಕುದುರೆ ಏರದವ ಅದ್ಯಾವ ಸೀಮೆಯ ಧೀರ? ಎಲ್ಲೋ ಏನೋ ಎಡವಟ್ಟಾಗಿದೆ ಅಂತ 
ಗೊತ್ತಾಗುತ್ತಿತ್ತು. ಆದರೆ ಎಲ್ಲಿ, ಏನು ಅಂತ ತಿಳಿಯುತ್ತಿಲ್ಲ. ಥತ್, ಹಾಳಾಗಿ ಹೋಗಲಿ ಅಂದುಕೊಂಡು 
ಪ್ಲೇನಿನಿಂದ ಕೆಳಗಿಳಿಯೋಣ ಅಂದುಕೊಂಡರೆ- ಪ್ಲೇನೇ ಅಲ್ಲಾಡುತ್ತಿದೆ!

ತನ್ನ ಜೀವಮಾನವಿಡಿ ಅದೆಷ್ಟೋ ಪ್ರವಾಸಿಗರನ್ನು ಹತ್ತಿ ಇಳಿಸಿದ್ದ ಈ 'ಲಂಡನ್ ಫ್ಲೈಟು' ಮೊದಲೇ 
ನಿತ್ರಾಣಗೊಂಡoತಿತ್ತು. ಅದರಲ್ಲೂ ನಾನು ಹತ್ತಿ ಕುಳಿತ ಭಂಗಿಗೆ ಅದರ ಫೌಂಡೇಶನ್ ಅಲ್ಲಾಡಿದೆ. 
ಪರಿಣಾಮವಾಗಿ ಇಳಿಯಲೆಂದು ಬಲಗಾಲು ಎತ್ತಿದರೆ ಎಡಗಡೆ ವಾಲುತ್ತಿತ್ತು. ಎಡಗಾಲು ಎತ್ತಿದರೆ 
ಬಲಗಡೆ ವಾಲುತ್ತಿತ್ತು. ನನಗಂತೂ ಗಾಬರಿಯಲ್ಲಿ ಬಂದ ಕೆಲಸ ಮರೆತು ಯಾವಾಗ ಇಲ್ಲಿಂದ ಎದ್ದು 
ಹೋದೇನೋ ಅಂತ ಡವಡವ ಶುರುವಾಗಿತ್ತು. ಬರಬರುತ್ತ ನನ್ನ ಎಲ್ಲ ಪ್ರಯತ್ನಗಳೂ ವಿಫಲವಾಗಿ 
ಕೊನೆಗೆ ಒಂದೇಟಿಗೆ ಅಲ್ಲಿಂದ  ಜಿಗಿಯುವದರ ಮೂಲಕ ಲಂಡನ್ ಪ್ರವಾಸ ಮುಕ್ತಾಯಗೊಂಡಿತ್ತು.   

ಹಾಗಂತ ಎಲ್ಲ ಪ್ರವಾಸಗಳೂ ಇಷ್ಟೇ ಸುಲಲಿತವಾಗಿರಲಿಲ್ಲ. ಎಂಟನೇ ಕ್ಲಾಸಿಗೆ ಬಂದಾಗ ಅಕ್ಕನಿಗೆ 
'ಹೆಣ್ಣು ತೋರಿಸುವ' ವಿಚಾರ ಬಂತು. ವರನ ಕಡೆಯವರು ತಂದೆಗೆ ಮೊದಲೇ ಪರಿಚಯವಿದ್ದುದರಿಂದ 
ಅಕ್ಕನ ಜೊತೆ ಗಂಡಿನ ಮನೆಯಿದ್ದ ಬಳ್ಳಾರಿಗೆ ನಾನು ಹೋಗುವದೆಂದು ಮನೆಯಲ್ಲಿ 
ನಿರ್ಧಾರವಾಯಿತು. ಯಾವಾಗ ಈ ಸುದ್ದಿ ನನ್ನ ಕಿವಿಗೆ ಬಿತ್ತೋ- ತಗಳ್ರಪ, ಮೈಯಲ್ಲಿ ಚಳಿಜ್ವರ ಶುರು!

ಎಂಟನೇ ಕ್ಲಾಸಿಗೆ ಬಂದರೂ ರಾತ್ರಿ bed wetting ಮಾಡುವ ಪ್ರಾಣಿಗೆ ಚಳಿಜ್ವರವಲ್ಲದೇ ಇನ್ನೇನು ಆಗಲು 
ಸಾಧ್ಯ? ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಮಾಡುವ ನನ್ನ ಈ  ರೂಟೀನ್ (?) ತಪ್ಪಿಸುವದಕ್ಕಾಗಿ ಮನೆಯಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಹೊರಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಹಾಗೆ 
ಎಬ್ಬಿಸಿದವರ ಮೇಲೆ ಸಿಟ್ಟಾಗಿ ನಿದ್ದೆಗಣ್ಣಲ್ಲಿ ಹೊರಗೆ ಹೋಗದೇ ಅಡುಗೆ ಮನೆಯಲ್ಲಿನ ಪಾತ್ರೆಗಳನ್ನೇ 
ಲಕಲಕ ಹೊಳೆಯಿಸಿ ಮರುದಿನ ಮನೆಯವರಿಂದ ಸಮಾ ಬೈಸಿಕೊಂಡಿದ್ದೂ ಉಂಟು!
ವಿಷಯ ಹೀಗಿರುವಾಗ ಬಳ್ಳಾರಿಗೆ ಹೋಗುವದೆಂದರೆ ಸುಮ್ನೇನಾ?

ಏನೇನೋ ನಾಟಕ ಮಾಡಿದ್ದಾಯ್ತು. ಆದರೆ ಮನೆಮಂದಿಗೆ ನನ್ನ ಡ್ರಾಮಾಬಾಜಿ ಗೊತ್ತಿದ್ದ ವಿಷಯವೇ
ಆಗಿದ್ದರಿಂದ ನನ್ನೆಲ್ಲ ನಾಟಕದ ಮೇಕಪ್ಪು ಉದುರಿ ಹೋಗುತ್ತಿತ್ತು. ಕೊನೆಗೂ ಅಂತೂ ಇಂತೂ
ಬಳ್ಳಾರಿ ಬಂತು. ವರ ಅಕ್ಕನನ್ನು ಒಪ್ಪಿಕೊಂಡಿದ್ದೂ ಆಯ್ತು. ರಾತ್ರಿ ಊಟವೂ ಆಯ್ತು. ಸರಿ,
ಮಲಗೋದಕ್ಕೆ ನಮಗೆ ಮೇಲಿನ ರೂಮಿನಲ್ಲಿ ವ್ಯವಸ್ಥೆ ಮಾಡಿದ್ದರು.

ಅಕ್ಕ ಖುಷಿಯಿಂದ ಮಲಗಿದ್ದಳು. ಆದರೆ ನಾನು? ನನ್ನ ಚಿಂತೆ ನನಗೆ! ಪಕ್ಕದಲ್ಲಿದ್ದ ಗೋಡೆ, ತಲೆ 
ಮೇಲಿದ್ದ ಫ್ಯಾನು, ಗಡಿಯಾರದ ಟಕ್ ಟಕ್.. ಎಷ್ಟೂಂತ ನೋಡೋದು? ಎಷ್ಟೂಂತ ಕೇಳೋದು? 
ಯಾವಾಗ ಮಲಗಿದೆನೋ ಗೊತ್ತಿಲ್ಲ.

ಅದ್ಭುತ ಕನಸು. ಯಾವುದೋ ಹೊಸ ಲೋಕಕ್ಕೆ ಬಂದಿದ್ದೇನೆ. ಎಲ್ಲರೂ ನನ್ನ ಮಾರ್ಕ್ಸ್ ಕಾರ್ಡ್ 
ನೋಡಿ ಬೆನ್ನು ತಟ್ಟುತ್ತಿದ್ದಾರೆ. ಮನೆಯಲ್ಲಿ ಸಂಭ್ರಮ. ಮನೆಗೆ ಬಂದಿರುವ ಯಾವ ಅತಿಥಿಯೂ 
ನನಗೆ ಹದಿನೇಳರ ಮಗ್ಗಿ ಕೇಳುತ್ತಿಲ್ಲ. ನಾನು ಎದೆಯುಬ್ಬಿಸಿಕೊಂಡು ಟೆಬಿರಿನಿಂದ
ಕೂತುಕೊಂಡಿದ್ದೇನೆ. ಅಕ್ಕ ನಿಧಾನವಾಗಿ ನನ್ನ ಹೆಸರು ಹಿಡಿದು ಯಾವುದೋ ಕೆಲಸಕ್ಕೆಂದು
ಕರೆಯುತ್ತಿದ್ದಾಳೆ. ನಾನು ಬೇಕಂತಲೇ ಕೇಳಿಸಿಕೊಳ್ಳುತ್ತಿಲ್ಲ. ಎಲ್ಲ ಸುಂದರವಾಗಿ ಕಾಣುತ್ತಿದೆ.
ಮನೆಯಲ್ಲಿ ಓಡಾಡುತ್ತಿರುವ ಅತಿಥಿಗಳ ಧ್ವನಿ. ಅವರ ಓಡಾಟ. ಅಕ್ಕ ಬಿಡುತ್ತಿಲ್ಲ; ನಾನು
ಕೇಳಿಸಿಕೊಳ್ಳುತ್ತಿಲ್ಲ. ತಲೆಕೆಟ್ಟ ಆಕೆ ಸಿಟ್ಟಿನಿಂದ ನನ್ನ ಕೈ ಹಿಡಿದು ಅಲ್ಲಾಡಿಸಿ ಕರೆಯುತ್ತಿದ್ದಾಳೆ..

ಥತ್, ದಿಢೀರಂತ ಎಚ್ಚರಗೊಂಡೆ. ಅಕ್ಕ ನಿಜವಾಗಿಯೂ ಕೈ ಹಿಡಿದು ಪ್ರೀತಿಯಿಂದ ಎಬ್ಬಿಸುತ್ತಿದ್ದಾಳೆ. 
ಎದ್ದು ಕುಳಿತು ನೋಡಿದೆ: ಹಾಸಿಗೆಯಲ್ಲಿ ತೇವ ತೇವ!

ಶಿವ ಶಿವಾ.. ಹೆಣ್ಣು ತೋರಿಸಲು ಬಂದವರ ಮನೆಯಲ್ಲೂ ಇದು ನಡೆದು ಹೋಯಿತಾ? ನನಗೆ 
ಅಳುವುದೊಂದೇ ಬಾಕಿಯಿತ್ತು. ಹೇಗಾದರೂ ಮಾಡಿ ನನ್ನ ಮರ್ಯಾದೆ ಉಳಿಸುವೆಯಾ ಅಂತ
ಅಕ್ಕನೆಡೆಗೆ ನೀರು ತುಂಬಿದ ಕಣ್ಣುಗಳು ಬೇಡಿಕೊಳ್ಳುತ್ತಿದ್ದವು. ಅಕ್ಕನಿಗೆ ಸಿಟ್ಟಿರಲಿಲ್ಲ. ಬೇಜಾರಿರಲಿಲ್ಲ.
ನನ್ನ ತಲೆಗೂದಲಲ್ಲಿ ಬೆರಳಾಡಿಸಿ, ಇಲ್ಲೇ ಇರು ಅಂತ ಹೇಳಿ ಕೆಳಗಿಳಿದು ಹೋದಳು. ಕೆಲವೇ ಹೊತ್ತಿನಲ್ಲಿ
ಬಂದವಳ ಕೈಯಲ್ಲಿ ಕುಡಿಯುವ ನೀರಿನ ತಂಬಿಗೆಯಿತ್ತು. ಅದರಲ್ಲಿದ್ದ ಅರ್ಧ ನೀರನ್ನು ಹಾಸಿಗೆಯಲ್ಲಿ
ಚೆಲ್ಲಿದಂತೆ ಮಾಡಿ, ಕೆಳಗಿಳಿದು ಹೋದಳು..

ಸ್ವಲ್ಪ ಹೊತ್ತಿನಲ್ಲಿ ಕೆಳಗೆ ಹಾಲ್ ನಲ್ಲಿ ಅಕ್ಕ, ಅಲ್ಲಿದ್ದವರಿಗೆ ಏನೋ ಅನಾಹುತವಾದಂತೆ 
ಹೇಳುತ್ತಿದ್ದುದು ನಿಧಾನವಾಗಿ ಕೇಳಿಸುತ್ತಿತ್ತು:
"ನನ್ನ ತಮ್ಮನಿಗೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡೀಬೇಕು. ಹಾಗಾಗಿ ನೀರು ತಗೊಂಡು ಕೊಟ್ಟೆ. 
ನಿದ್ದೆಗಣ್ಣಲ್ಲಿ ಕುಡಿಯುವಾಗ ಕೈತಪ್ಪಿ ಹಾಸಿಗೆಯ ಮೇಲೆ ನೀರು ಬಿದ್ದೋಗಿದೆ. ಬೇಜಾರು ಮಾಡ್ಕೋಬೇಡ್ರಿ.."

ನನಗೆ ಹೋದ ಜೀವ ಬಂದಂತಿತ್ತು. ಕುಣಿದಾಡಿ ಹಾಡುವುದೊಂದೇ ಬಾಕಿಯಿತ್ತು. ವಾಪಸ್ಸು ಬಂದ 
ಅಕ್ಕನ ಮುಖದಲ್ಲಿನ ಮುಗುಳ್ನಗೆ 'ಹೆಂಗೆ?' ಅಂತ ಕೇಳಿದಂತಿತ್ತು...

                                                                                       ---


64 comments:

sandhya said...

ನಿಜ ನೀವು ಬರೆದಿರುವುದು, ಪ್ರಶ್ನೆ ಕೇಳುವುದು ಎಷ್ಟು ಸುಲಭ... ಅ೦ದಿಗೂ ಇ೦ದಿಗೂ... ಕಾಲ ಸರಿದ೦ತೆ ಪ್ರಶ್ನೆ ಕೇಳುವವರು ಬದಲಾಗುತ್ತಾರೆ, ಪ್ರಶ್ನೆಗಳು ಬದಲಾಗುತ್ತವೆ ಆದರೆ ನಿಲ್ಲುವುದಿಲ್ಲ... ಒಳ್ಳೆಯ ಲಲಿತತೆ ಇರುವ ಬರಹ, ಫ಼ೇಸ್ ಬುಕ್ ನಿ೦ದ ಆಗಾಗ ರಜೆ ತಗೊ೦ಡರೂ ಅಡ್ಡಿಯಿಲ್ಲ!
-ಸ೦ಧ್ಯಾ ರಾಣಿ

Rakesh S Joshi said...

ರಾಘವೇಂದ್ರರವರೆ ಲೇಖನ ಚೆನ್ನಾಗಿದೆ. ಲಂಡನ್ ಪ್ರವಾಸ , ಕಮೋಡ ಜೊತೆಗಿನ ಮೊದಲನೇ ಭೇಟಿ ಎಲ್ಲ ಸುಪೆರೋ ಸೂಪರ್. :) ನಿಮ್ಮ ಹಾಗೆ ನಂಗು ೧೯ನೇ ಮಗ್ಗಿ ಕೊನೆವರೆಗೂ ಬರ್ಲಿಲ್ಲ. :) ಒಂದು ರೌಂಡ್ ಬಾಲ್ಯಕ್ಕೆ ಮರಳಿ ಹೋಗಿ ಬಂದೆ ರೀ.

gayatri said...

Oh what a subject 'childhood memories...' Thumba channgide sir...Nanage Jagajith Singji's famous gazal nenepayithu..
Yeh Daulat Bhi Lelo, Yeh Shohrat Bhi Lelo,
Bhale Cheenlo Mujhse Meri Yeh Jawani, Magar Mujh Ko Lauta Do, bachpan ka Sawan,
Who Kagaz Ki Kashtii, Who Barish Ka Pani…(http://www.youtube.com/watch?v=zqDTZJYf5bM )

Manjunatha Kollegala said...

ಹಹಾ... ಸಕ್ಕತ್ ಬರಹ. ಲಂಡನ್ ಫ್ಲೈಟ್ ಪ್ರವಾಸವಂತೂ ಓದಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿ ಹೋಯ್ತು. ಅದಿರಲಿ ಸ್ವಾಮಿ, ಕಮೋಡಿನ ಮೇಲೆ ಕೂಡುವುದು ಬಿಟ್ಟು ಪವಡಿಸಿದರೆ ಅದು ಅಲ್ಲಾಡದೇ ಇನೇನು ಮಾಡುತ್ತೆ ;) ಮತ್ತೆ ಅಕ್ಕನಿಗೆ ’ಹೆಣ್ಣು ತೋರಿಸುವುದು’?! ಗಂಡು ತೋರಿಸುವುದಲ್ಲವಾ ;) ;) ತಮಾಷೆಗೆ ಹೇಳಿದೆ, ನಮ್ಮಲ್ಲೂ ಅಕ್ಕನಿಗೆ ’ಹೆಣ್ಣು ತೋರಿಸುವುದು’ ಅಂತ್ಲೇ ಅನ್ನೋದು.

ತುಂಬಾ ಚೆನ್ನಾಗಿದೆ ಬರಹ. Enjoyed it thoroughly

sunaath said...

RJ,
ತುಂಬ ಸುಂದರವಾದ ಲೇಖನ. ಎದರು ಬದರಿಗೆ ಕುಳಿತು ಹರಟೆ ಹೊಡೆದ ಹಾಗೆ ಸರಾವಾಗಿ ಹಾಗು ಆಪ್ತವಾಗಿ ಬರೆದಿದ್ದೀರಿ. ನಮ್ಮ ಬಾಲ್ಯವನ್ನು ನೆನಪಿಸಿಕೊಂಡು ನಗುವದು ಈಗ ಚೆನ್ನಾಗಿರುತ್ತದೆ. ಆಗ??? ಕೊಟ್ಟ (ಎಡವಟ್ಟು) ಕುದುರೆ ಹತ್ತೋದು ಕಷ್ಟದ ಕೆಲಸವೇ ಅಲ್ಲವೆ?

armanikanth said...

jo...17 ra maggi helri ondu sarti....
tappu helibitre matte tiddikondre aaytu!!!
bahala chendada baraha...ista aaytu...Manikanth.

Anitha Naresh Manchi said...

ಅನುಭವಿಸುವಾಗ ಇದೆಲ್ಲ ಹಿಂಸೆ ಅನ್ನಿಸಿದರೂ, ಈಗ ಅದು ಬರಿ ನೆನಪುಗಳಾಗಿ, ನಾವೇ ನಮ್ಮ ಬಗೆಗೆ ನಗುವಂತಾಗುವುದು ದೊಡ್ದವರಾಗಿದ್ದೀವಿ ಅನ್ನೋ ಲಕ್ಷಣನಾ :))

ರಾಘವೇಂದ್ರ ಜೋಶಿ said...

@ಸಂಧ್ಯಾರಾಣಿಯವರೇ,
ಹೌದು.ಪ್ರಶ್ನಿಸುವದು ತುಂಬ ತುಂಬ ಸರಳ.ಒಂದು ಪುಸ್ತಕದಲ್ಲಿ ಸತ್ಯಕಾಮರು ಆಟೋಗ್ರಾಫ್ ಹಾಕುತ್ತ ಬರೆದ ಒಂದು ಸಾಲು ನೆನಪಾಯಿತು:ಕೇಳುವದು ಸುಲಭ.ಕೊಡುವದೇ ಕಷ್ಟ!
:-)

ರಾಘವೇಂದ್ರ ಜೋಶಿ said...

@ರಾಕೇಶ್ ಜೋಶಿಯವರೇ,
ಚಿಂತಿಸದಿರಿ.ನಿಮ್ಮೊಡನೆ ನಾನಿದ್ದೇನೆ.actually,17 ರ ಜೊತೆಗೆ 19 ರ ಮಗ್ಗಿಯೂ ನನಗೆ ಕಂಟಕವಾಗಿತ್ತು!
ಹಾಗಾಗಿ ನಾವಿಬ್ಬರೂ ಸಮಾನ ದುಃಖಿಗಳು! :-)

ರಾಘವೇಂದ್ರ ಜೋಶಿ said...

@ಗಾಯತ್ರಿಯವರೇ,
ಸಬ್ಜೆಕ್ಟು ಹಾಗಿದೆ.ಎಂತ ಮಾಡೋದು ಹೇಳಿ,ಎಲ್ಲಾ ನಮ್ ನಮ್ ಕರ್ಮ!ತಮಾಷೆಗಂದೆ.ಥ್ಯಾಂಕ್ಸ್. :-)

ರಾಘವೇಂದ್ರ ಜೋಶಿ said...

@ಮಂಜುನಾಥರೇ,
ಆವತ್ತಿನ ಮಜ ನೆನಸಿಕೊಂಡ್ರೆ ಇವತ್ತು ಕೂಡ ನಗು ಬರುತ್ತೆ.
ಇವತ್ತಿಗೂ ಮನೆಯಲ್ಲಿ ಯಾವುದೋ ಸಂದರ್ಭದಲ್ಲಿ ನೆಂಟರು ಎಲ್ಲರೂ ಸೇರಿದಾಗ ಅಕ್ಕ ಇದನ್ನೆಲ್ಲ ಹೇಳಿ ಹೇಳಿ
ನಗ್ತಾ ಇರ್ತಾಳೆ.. ಬರಹದ ಖುಷಿ ನಿಮಗೆ ಸಿಕ್ಕಿದ್ದಕ್ಕೆ.. :-)

Bhairav Kodi said...

ಬಾಲ್ಯದ ನೆನಪನ್ನ ಸೋಗಾಸಾಗಿ ಕಟ್ಟಿಕೊಟ್ಟಿದ್ದೀರಿ ತುಂಬಾನೇ ಖುಷಿಯಾಯ್ತು ಜೊತೆಗೆ ನನ್ನನ್ನು ಒಂದು ಸುತ್ತು ಬಾಲ್ಯದ ಕಡೆಗೆ ಗಿರಕಿ ಹೊಡೆಯೋ ಹಾಗೆ ಮಾಡಿದ್ರಿ ಅದಕ್ಕಾಗಿ ತುಂಬು ಧನ್ಯವಾದಗಳು, ಕೊಟ್ಟ ಕುದುರೆ......?ಗಿಂತಲೂ 'ಲಂಡನ್ ಪ್ರವಾಸ' ಅಂತ ನಿಮ್ಮೀ ಲಹರಿಗೆ ಶೀರ್ಷಿಕೆ ಕೊಟ್ಟಿದ್ರೆ ಚೆಂದ ಇತ್ತೇನೋ ಗೊತ್ತಿಲ್ಲ? ಒಂದು ಸುಂದರ ಹಿಟ್ ಗೀತೆನಾ ನೀವೂ ಬಳಸಿಕೊಳ್ತಿದ್ದ ಸಂದರ್ಭ ಸರಿನಾ? ಅಡಿಗೆ ಮನೆ ಪಾತ್ರೆಗಳನ್ನ ಈವಾಗಲು ಲಕಲಕ ಅಂತ ಹೊಳೆಸ್ತಾ ಇದ್ದೀರಾ ಏನು? ಬಹುಷಃ 17 ನೇರ ಮಗ್ಗಿ ಕಂಠಪಾಠವಾಗಿರಬೇಕು ಅಂದ್ಕೊತೇನೆ? ಸುಂದರ ಸುಳ್ಳೆಳಿ ತಮ್ಮನ ಮಾನ ಮರ್ಯಾದೆ ಕಾಪಾಡಿದ ಅಕ್ಕನಿಗೊಂದು ಸಲಾಮ್ ತಿಳಿಸಿಬಿಡಿ.

B.A.Viveka Rai said...

ಬರಹ ಚೆನ್ನಾಗಿದೆ.ಬಾಲ್ಯದ ನೆನಪುಗಳ ಮರುನೆನೆದುಕೊಳ್ಳುವಿಕೆ ಇಂದಿನ ಬದುಕಿಗೆ ಹೊಸ ನೋಟವನ್ನು ಕೊಡಬಲ್ಲುದು.ಅಂದಿನ ಲವಲವಿಕೆ ಇಂದು ಇಲ್ಲವಾದಾಗ ಅಲ್ಲಿನ ಸುಖದ ಕಿಂಡಿಗಳು ಹೊಸ ಬೆಳಕು ಕೊಡಬಲ್ಲವು.ಈಗ ಕುದುರೆಯನ್ನು ಕೊಡುವವರೇ ಇಲ್ಲ.ಆದ್ದರಿಂದ ಹಳೆಯೇ ಕುದುರೆಗಳಿಗೆ ಮತ್ತೆ ಜೀನು ಸಿಕ್ಕಿಸಿ ಸವಾರಿಮಾಡಬೇಕು.ಹುಡುಗಾಟಿಕೆ -ಕ್ರಿಯಾಶೀಲತೆಯ ಮುಖ್ಯ ಗುಣ.

ರಾಘವೇಂದ್ರ ಜೋಶಿ said...

@ಸುನಾಥ್ ಸರ್,
ಹೌದು ಸರ್.ಆವತ್ತು ಅದು ಎಡವಟ್ಟು ಕುದುರೇನೆ ಸರಿ.ಇವತ್ತು ಪರವಾಗಿಲ್ಲ,ಪಳಗಿದ ಕುದುರೆಯಾಗಿದೆ.
ಥ್ಯಾಂಕ್ಯೂ!

ರಾಘವೇಂದ್ರ ಜೋಶಿ said...

@ಮಣಿಕಾಂತ್,
ಸುಮ್ಮನಿರಿ ಸ್ವಾಮೀ,ಯಾಕೆ ಹರಾಜು ಹಾಕ್ತೀರಿ.
ಓದಿ ಕಮೆಂಟಿಸಿದ್ದಕ್ಕೆ ಧನ್ಯಾವಾದಗಳು. :-)

ರಾಘವೇಂದ್ರ ಜೋಶಿ said...

@ಭೈರವ ಕೋಡಿಯವರೇ,
ನಿಜ.'ಲಂಡನ್ ಪ್ರವಾಸ'ವೆಂಬ ಶೀರ್ಷಿಕೆಯೂ ಹೊಂದುತ್ತಿತ್ತು.ಆದರೆ ಸ್ವಲ್ಪ catchy title ಇರಲೆಂದು ಹೀಗೆ ಮಾಡಿದೆ.ಹದಿನೇಳರ ಮಗ್ಗಿ ಇವತ್ತಿಗೂ ಊಹುಂ.ಆದರೆ ಮನೆಯಲ್ಲಿ ಪಾತ್ರೆಗಳನ್ನು ಹೊಳೆಯಿಸೋದು-ಊಹುಂ!
Ofcourse,ಅಕ್ಕಳಿಗೆ ನನ್ನ ಸಲಾಂ-ಸೆಲ್ಯೂಟ್ ಇದ್ದೇ ಇರುತ್ತೆ.ಬ್ಲಾಗಿಗೆ ಬಂದು ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ನಿಮಗೂ ಸಲಾಂ. :-)

ರಾಘವೇಂದ್ರ ಜೋಶಿ said...

@ಅನಿತಾ ಅವರೇ,
ಹ್ಮ್..ದೊಡ್ಡವರಾಗಿದ್ದೀವಿ ಅನ್ನೋದನ್ನು ಮರೆಯಲೆಂದೇ ಇಷ್ಟೆಲ್ಲ ಪೋರಪಾಟ.ಚಿಕ್ಕವರಾಗಿ ಇರೋಣವೆಂದೇ ಇಷ್ಟೆಲ್ಲ ರಂಪಾಟ.ಅಲ್ವ? :-)

ರಾಘವೇಂದ್ರ ಜೋಶಿ said...

@ವಿವೇಕ್ ರೈ ಸರ್,
"ಹುಡುಗಾಟಿಕೆ -ಕ್ರಿಯಾಶೀಲತೆಯ ಮುಖ್ಯ ಗುಣ".ಸತ್ಯವಾದ ಮಾತಿದು.ಬ್ಲಾಗಿಗೆ ಬಂದು,ಓದಿ,ಕಮೆಂಟಿಸಿದ್ದಕ್ಕಾಗಿ ಧನ್ಯವಾದಗಳು.

Keshav.Kulkarni said...

ತುಂಬ ಚೆನ್ನಾಗಿದೆ ಬರಹ.

ನಾವು ಕೂಡ ಅದಕ್ಕೆ ’ಲಂಡ’ನ್ ಪ್ರವಾಸ ಅಂತಲೇ ಕರೆಯುತ್ತಿದ್ದೆವು.

Anonymous said...

ಇದೆಲ್ಲಾ ಬರೆಯೋವಾಗ ಮತ್ತೊಮ್ಮೆ ಬಾಲ್ಯಕ್ಕೆ ಹೋಗಿದ್ದ್ರಲ್ಲಾ, ಅಲ್ಲಿ ನಾನೂ ಇದ್ದೇ ಅಲ್ಲ್ವಾ?!....ಹೌದು, ನನಗೆ ಗೊತ್ತು ಅಲ್ಲೇ ಅದೇ ಮೂಲೆಯಲ್ಲಿ, ಮಧ್ಯದಲ್ಲಿ, ಪಕ್ಕದಲ್ಲಿ, ಅಲ್ಲಿ, ಇಲ್ಲಿ ನಾನಿದ್ದೆ!.....:-)ಅದಕ್ಕೆ ಇದು ಬಲು ಇಷ್ಟ ಆಯ್ತು...:-)

Anonymous said...

ಇದೆಲ್ಲಾ ಬರೆಯೋವಾಗ ಮತ್ತೊಮ್ಮೆ ಬಾಲ್ಯಕ್ಕೆ ಹೋಗಿದ್ದ್ರಲ್ಲಾ, ಅಲ್ಲಿ ನಾನೂ ಇದ್ದೇ ಅಲ್ಲ್ವಾ?!....ಹೌದು, ನನಗೆ ಗೊತ್ತು ಅಲ್ಲೇ ಅದೇ ಮೂಲೆಯಲ್ಲಿ, ಮಧ್ಯದಲ್ಲಿ, ಪಕ್ಕದಲ್ಲಿ, ಅಲ್ಲಿ, ಇಲ್ಲಿ ನಾನಿದ್ದೆ!.....:-)ಅದಕ್ಕೆ ಇದು ಬಲು ಇಷ್ಟ ಆಯ್ತು...:-)
Anjali Ramanna

ರಾಘವೇಂದ್ರ ಜೋಶಿ said...

@ಕೇಶವ ಕುಲಕರ್ಣಿಯವರೇ,
ಥ್ಯಾಂಕ್ಸ್.ಬರೆಯುವಾಗ 'ಲಂಡನ್ ಪ್ರವಾಸ' ಅಂತ ಹೇಳಿದೆನಾದರೂ ಆ ಸಮಯದಲ್ಲಿ ಅದು ನಿಮ್ಮ 'interpretation' ಗೆ ತಕ್ಕಂತೆ ಇತ್ತು ಅನ್ನುವದರಲ್ಲಿ ಎರಡು ಮಾತಿಲ್ಲ. ;-)

ರಾಘವೇಂದ್ರ ಜೋಶಿ said...

@ಅಂಜಲಿಯವರೇ,
So sweet of you.ನಿಜ,ಇಲ್ಲಿರುವ ಬಾಲ್ಯವು ಎಲ್ಲರ ಬಾಲ್ಯವೂ ಆಗಿರುವದರಿಂದ ನಾವೆಲ್ಲರೂ ಯಾವುದೋ ಒಂದು ಹಂತದಲ್ಲಿ ಎಲ್ಲ ಕಡೆಯೂ ಉಪಸ್ಥಿತರಾಗಬಲ್ಲೆವು.ನಿಮ್ಮ ಹೃದಯದಾಳದ ಅನಿಸಿಕೆಗೆ ಜೈ! :-)

Ashok Shettar (ಅಶೋಕ ಶೆಟ್ಟರ್) said...

ಮಜವಾಗಿದೆ.ನಾವು ಓದುವ ಕೇಳುವ ನೋಡುವ ವಿಷಯ-ವಸ್ತುಗಳ ಗಹನತೆಯ ಮಧ್ಯೆ ಇಂಥ ’ಹುಲು’ವಿಷಯಗಳ ಕುರಿತೂ ಯಾರಾದರೂ ಬರೆದಾಗಲೇ ಅಲ್ವೆ ವಾಸ್ತವವೆನ್ನುವದು ಅರಿವಿಗೆ ತಟ್ಟುವದು.ಲಲಿತ ಪ್ರಬಂಧವೆಂಬ ಅಳಿವಿನಂಚಿನಲ್ಲಿರುವ ಸಾಹಿತ್ಯ ಪ್ರಕಾರವೊಂದಕ್ಕೆ ನೀವು ಜೀವ ತುಂಬಬಹುದು

Jayalaxmi said...

ಸುನಾಥ್ ಕಾಕಾ ಹೇಳಿದ್ದು ಸೋಳಾ ಆಣೆ ಖರೆ. ನೀವು ಎದುರಿಗೇ ಕೂತು ಮಾತಾಡಿದಂಥ ಅನುಭವ ಓದುವಾಗ. ನಕ್ಕೂ ನಕ್ಕೂ ಸಾಕಾಯ್ತು. ಕಮೋಡ್ ನಮ್ಮ ಜನರೇಶನ್ನಿನ ಮಕ್ಕಳಿಗೆಲ್ಲ ಒಂದಲ್ಲ ಒಂದು ಸಲ ಕಮಂಗಿಗಳನ್ನಾಗಿ ಮಾಡಿದ್ದೂ ಸೋಳಾ ಆಣೆ ಖರೆ. :) :)

ರಾಘವೇಂದ್ರ ಜೋಶಿ said...

@ಅಶೋಕ ಶೆಟ್ಟರ್ ಸರ್,
ಸರಿಯಾಗಿ ಹೇಳಿದ್ರಿ.ಯಾವುದೋ ಘಟ್ಟದಲ್ಲಿ ನಡೆದುಹೋದ ಕೆಲವೊಂದು ಘಟನೆಗಳು ಆವತ್ತಿಗೆ ನಮಗೆಲ್ಲ ಸಣ್ಣ ಸಂಗತಿಗಳೇ.ಅವುಗಳನ್ನೆಲ್ಲ ಒಂದು ಕುತೂಹಲದಿಂದ,ತಮಾಷೆಯಿಂದ ನೋಡಿದರೆ ಇನ್ನೇನೋ ಸಿಗಬಹುದು.ಇಂಥದ್ದನ್ನೆಲ್ಲ 'ಸುಲಲಿತ ಪ್ರಬಂಧ'ವೆಂಬ ಹೆಸರಿನಲ್ಲಿ ವಿಂಗಡಿಸಿದ್ದೇನೆ.'ಲಲಿತ ಪ್ರಬಂಧ'ವೆನ್ನುವದು ನಿಜವಾಗಿಯೂ ಹೀಗೇ ಇರುತ್ತದಾ?Don't know.. ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ಜಯಲಕ್ಷ್ಮಿ ಪಾಟೀಲರೇ,
ಏನ್ ಕೇಳ್ತೀರಿ ನೀವು.ಈ ಕಮೋಡು ಮಾಡಿದ ಭಾನಗಡಿ ಒಂದೆರಡಲ್ರಿ...ಮೊದ್ಲ ಅದು ಭಾಳ ಕಡೆ ಮಂಗ್ಯಾ ಮಾಡೇದ. ಈಗೀಗ ಅದೂ ಸುಧಾರಿಸೇದ, ಹಂಗ ನಾವೂ! :-)

Prashanth Naik Karki said...

:):))))))) THUMPS UP! 1000 LIKES:)

VidyaShankar Harapanahalli said...

ಚಿಕ್ಕ ವಯಸ್ಸಿನ ಹಿಂಜರಿಕೆನ್ನು... ಮೀರುವ ಪ್ರಯತ್ನವನ್ನು ದೊಡ್ಡವರು ಅರ್ಥವೇ ಮಾಡಿಕೊಳ್ಳದಿರುವುದು ಒಂದು ದುರಂತ... ಹಾಸ್ಯ ದಾಟಿಯಲ್ಲಿದ್ದರು ದುರಂತದ ಎಳೆ ಇದೆ

V.R. BHAT said...

ಜೋಶಿಯವರೇ ನೀವು ಕೊಟ್ಟ ಕುದರೆ ಏರಿದೀರಿ ಬಿಡ್ರಿ , ಹಾಸಿಗೆ ಒದ್ದೆ ಆದರೂ NEEVU ಮಾತ್ರ ಗೆದ್ದ್ರಿ! ಮಜವಾಗಿದೆ.

Ratna Jayanth said...

ಬರಹ ಸೊಗಸಾಗಿದೆ. ಬಾಲ್ಯ ಮತ್ತೆ ನೆನಪಾಯ್ತು. ಧನ್ಯವಾದಗಳು..

ರಾಘವೇಂದ್ರ ಜೋಶಿ said...

@ಪ್ರಶಾಂತ್ ಕರ್ಕಿಯವರೇ,
ಬ್ಲಾಗಿಗೆ ಸ್ವಾಗತ.ಅಭಿಪ್ರಾಯಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ವಸಂತ ಕೋಡಿಹಳ್ಳಿಯವರೇ,
ಹಹಹ..ಆವಾಗ ಅಳುವದು,ಇವಾಗ ನಗುವದು..ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಖುಷಿಯಾಯ್ತು.ಥ್ಯಾಂಕ್ಸ್.

ರಾಘವೇಂದ್ರ ಜೋಶಿ said...

@ವಿದ್ಯಾಶಂಕರ್ ಹರಪನಹಳ್ಳಿ,
ಹೌದು,ಖಂಡಿತ ಇದು ಆವತ್ತಿನ ಹಿಂಜರಿಕೆ,complex,ಅರಿವಿನ ಕೊರತೆ-ಇವೆಲ್ಲವನ್ನು ಮೀರುವ ಒಂದು ಪ್ರಯತ್ನವೆಂದೇ ಹೇಳಬಹುದು.ಥ್ಯಾಂಕ್ಯು.. :-)

ರಾಘವೇಂದ್ರ ಜೋಶಿ said...

@V R Bhat ಅವರೇ,
ಈಗ ಕುದುರೆ ಪಳಗಿದ್ದರಿಂದ ಖಂಡಿತ ಏರಬಹುದು.ಹಹಹ.ಬರಹವನ್ನು ಮೆಚ್ಚಿಕೊಂಡಿದ್ದಕ್ಕೆ ನನಗೂ ಖುಷಿ.:-)

ರಾಘವೇಂದ್ರ ಜೋಶಿ said...

@Ratna Jayanth ಅವರೇ,
ನಿಮ್ಮ ಕಮೆಂಟಿಗೆ ಧನ್ಯವಾದಗಳು.ಮತ್ತೇ ಸಿಗೋಣ.

Shrinivas kulkarni said...

Nice one. I also used to use commode same way as you did for first time

bm haneef said...

ಬಿ.ಎಂ.ಹನೀಫ್

ಪಾಟೀಲರೆ, ನೀವು ಬರೆದದ್ದನ್ನು ಓದುವ ಖುಷಿ ಕಡಿಮೆಯದ್ದಲ್ಲ.
ನಿಮ್ಮ ಬರಹ ಓದಿ ನನ್ನ ಬಾಲ್ಯವೂ ನೆನಪಾಯಿತು. ಬಾಲ್ಯದಲ್ಲಿ ಸಂಬಂಧಿಕರ ಮನೆಗೆ ಬೆಳಿಗ್ಗೆ ಎದ್ದು ಅಪ್ಪನ ಜತೆ ಹೋಗಿ ಮಧ್ಯಾಹ್ನ ಗಡದ್ದು ಬಿರಿಯಾನಿ ಹೊಡೆದೆ. ಒಂದ.. ಅಲ್ಲ, ಎರಡಾ.! ಎರಡೆರಡ್ಲಿ ನಾಕು.. ಅಂತ ಮನೆಯಿಡೀ ಸುತ್ತು ಹೊಡೆದರೂ ಆ ಮನೆಯಲ್ಲಿ ಟಾಯ್ಲೆಟ್ ಸಿಗಲಿಲ್ಲ. ತಡೆಯಲಾಗದೆ ಕೊನೆಗೆ ಮನೆಯ ಹಿಂದೆ ಹೋಗಿ ಆಚೀಚೆ ಯಾರೂ ಇಲ್ಲದ್ದನ್ನು ನೋಡಿ ತೆಂಗಿನ ಮರದ ಬುಡವನ್ನೇ 'ಲಂಡನ್' ಮಾಡಿಕೊಂಡೆ. ನೀರಿಲ್ಲದೆ ಹಾಗೇ ಚಡ್ಡಿ ಏರಿಸಿಕೊಂಡು ಬಸ್ ಹತ್ತಿ ಸಂಜೆ ವೇಳೆಗೆ ಊರಿಗೆ ಬಂದು ಮನೆಯಲ್ಲಿ ತೊಳೆದುಕೊಂಡಿದ್ದೆ.
ಈಗಲೂ ನಾನು ರಾತ್ರಿ ಪ್ರಯಾಣಕ್ಕೆ ಬಸ್ ಹತ್ತುವುದಿಲ್ಲ. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ನನಗೆ 'ಲಂಡನ್ನಿ'ಗೆ ಹೋಗಲೇಬೇಕು. ಹಾಗಾಗಿ ಎಷ್ಟೇ ಕಷ್ಟವಾದರೂ ರೈಲು ಹುಡುಕುತ್ತೇನೆ.
ನೀವು ಹೇಳಿದಂತೆ ಬಹಳಷ್ಟು ಲಾಡ್ಜುಗಳಲ್ಲಿ ಲಂಡನ್ ಈಗಲೂ ಅಲ್ಲಾಡುತ್ತಿರುತ್ತದೆ. ಬೆಂಗಳೂರಿನ ಎಲ್ಲಾ ಸ್ಟಾರ್ ಹೋಟೆಲ್ ಗಳಲ್ಲಿ ಒರೆಸುವುದೇ ಗತಿ- ನೀರಿಲ್ಲ!

ಬಿ.ಎಂ.ಹನೀಫ್

ರಾಘವೇಂದ್ರ ಜೋಶಿ said...

@ಶ್ರೀನಿವಾಸ ಕುಲಕರ್ಣಿಯವರೇ,
Mostly,ಮೊದಲ ಬಾರಿಗೆ ಕಮೋಡ್ ನೋಡಿದವರ ಅನುಭವ ಹೆಚ್ಚುಕಮ್ಮಿ ಇದೇ ರೀತಿ ಇರಬಹುದೇನೋ.. :-) ಥ್ಯಾಂಕ್ಸ್.

ರಾಘವೇಂದ್ರ ಜೋಶಿ said...

@ಬಿ.ಎಂ.ಹನೀಫ್ ಅವರೇ,
ಬ್ಲಾಗಿಗೆ ಸ್ವಾಗತ.ಹಹಹ..ನಿಮ್ಮ ಬಾಲ್ಯದ ಅನುಭವ ಮತ್ತು ಅನಿಸಿಕೆಗಳನ್ನು ನೋಡಿ ನಗ್ತಾ ಇದ್ದೇನೆ.. :-)
ಹೌದು,ಅವರವರ ಫಜೀತಿ,ಮುಂದೊಮ್ಮೆ ಅವರವರಿಗೇ ನಗುವಿನ ಮೂಲವಂತೆ!
ಹೌದು,ಯಾರಿದು?"ಪಾಟೀಲರೇ" ಅಂತ ಸಂಬೋಧಿಸಿ ಬರೆದಿದ್ದೀರಲ್ಲ?ಇನ್ನೂ ಅಫಿಡವಿಟ್ಟು ಮಾಡಿಸಿಲ್ಲ ಮಾರಾಯರೇ..
ತಮಾಷೆಗಂದೆ,ಬಹುಶಃ ಅವಸರದಲ್ಲಿ ಹೆಸರಿನ ಬಗ್ಗೆ ಗೊಂದಲವಾಗಿದೆ.ಇಷ್ಟಕ್ಕೂ what's there in name?ಅಲ್ವ? :-) ಮತ್ತೇ ಸಿಗೋಣವಂತೆ.ಧನ್ಯವಾದಗಳು.

suresh kota said...

Wish you all the best for your next London trip! :)

Arunkumar S. M. said...

Hai Raghu I like ur landon trip. I have not seen london. but, today onwords I enjoy evwry day london trip. and during london trip the song "ajja ajja aab kaisa sharamana " is very beautiful.

ಚಾರ್ವಾಕ ವೆಂಕಟರಮಣ ಭಾಗವತ said...

ನಕ್ಕು ನಕ್ಕು ಸುಸ್ತಾಯಿತು. ಅಂದಹಾಗಿ ನಿಮ್ಮ ಲಂಡನ್ ವೀಸ multiple entry ವೀಸಾನಾ?

AnandaTeertha Pyati said...

ಸರ್,
'ಕನಸು- ಕನವರಿಕೆ'ಯಲ್ಲಿ ಬರಹ "ಕೊಟ್ಟ ಕುದುರೆ ಏರಲಾಗದವ" ಚೆನ್ನಾಗಿತ್ತು.
ಅದರಲ್ಲಿ ಬರುವ 'ಯಾವ ರಾಜನೂ ಪ್ರಜೆಗಳಿಗೆ ಸಂಡಾಸ್ ಮನೆ' ಕಟ್ಟಿಸಲಿಲ್ಲವೇ? ಎಂಬ ಪ್ರಶ್ನೆ ಕುತೂಹಕಲಕರ. ಈಚೆಗೆ ಕನ್ಯಾಕುಮಾರಿ ಪ್ರವಾಸಕ್ಕೆ ಹೋಗಿದ್ದಾಗ, ಮಾರ್ಗ ಮಧ್ಯೆ ಪದ್ಮನಾಭಪುರಂ ಅರಮನೆ ನೋಡಿದೆ. ಅದರಲ್ಲಿ ರಾಜಕುಟುಂಬದ ಸದಸ್ಯರಿಗೆಂದೇ ಶೌಚಾಲಯ ಕಟ್ಟಲಾಗಿದೆ; ಮತ್ತು ಅದು ಈಗಿನ ಶೈಲಿಯಲ್ಲೇ ಇದೆ!
ನಮ್ಮೂರಿನ (ಕೊಪ್ಪಳ) ಸಮೀಪ ಬಹದ್ದೂರ್ ಬಂಡಿ ಎಂಬ ಗ್ರಾಮದ ಹೊರಗೆ ಕೋಟೆಯಿದೆ. ಅಲ್ಲಿ ಸಹ ಕೋಟೆ ಗೋಡೆಯೊಳಗೆ ಶೌಚಾಲಯಗಳಿವೆ. ಪ್ರಾಯಶಃ ಈ ಬಗ್ಗೆ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕು ಎಂಬುದು ನನ್ನ ಅನಿಸಿಕೆ.
ಅಂದ ಹಾಗೆ, ನುಣುಪಾದ ಕಲ್ಲಿನಿಂದ ಕಟ್ಟಿದ ಶೌಚಾಲಯದ ಫೋಟೋ ಕಳಿಸುತ್ತಿದ್ದೇನೆ ನೋಡಿ; ಇದು 300 ವರ್ಷಗಳ ಹಿಂದೆಯೇ ಕಟ್ಟಿದ್ದಂತೆ (ಪದ್ಮನಾಭಪುರಂ ಅರಮನೆಯಲ್ಲಿರುವುದು)...!

ವಂದನೆಗಳು

--
regards
AnandaTeertha Pyati
- - - - - - - - - - - - - -
Sr. Reporter, 'Prajavani'

ರಾಘವೇಂದ್ರ ಜೋಶಿ said...

@ಸುರೇಶ ಕೋಟ,
ಥ್ಯಾಂಕ್ಯೂ ಸೋಓಓಓ ಮಚ್! :-)

ರಾಘವೇಂದ್ರ ಜೋಶಿ said...

@ಅರುಣ್ ಕುಮಾರ್ SM,
ಬ್ಲಾಗಿಗೆ ಬಂದು ಬರಹ ಓದಿ,ಕಮೆಂಟಿಸಿದ್ದಕ್ಕೆ ಖುಷಿಯಾಯ್ತು.
ಥ್ಯಾಂಕ್ಸ್.

ರಾಘವೇಂದ್ರ ಜೋಶಿ said...

@ಚಾರ್ವಾಕ ವೆಂಕಟರಮಣ ಭಾಗವತರೇ,
ಈ ಲಂಡನ್ ಪ್ರವಾಸಕ್ಕೆ multiple ವೀಸಾ ಬೇಕಾಗಿಲ್ರಿ,
ಅದಕ್ಕೆಂದೇ ಡೈಲಿ pass ತಗೊಂಡಿದೀನಿ..ಹಹಹ :-)

Rankusa said...

LOLz!

well, it requires courage to make confessions like this one in public. 'fun' if it is written out of imagination; and 'guts' (hope you know the other synonym which unfortunately, can't be used here) if it really happens to be a chapter in your autobiography!

well, the article truncates without saying anything about the "current condition" of your bed---whether it is dry, wet, or it is wet due to the spillage of water from a mug! lol

good fun! and your honesty is much appreciated!

regards,
-r

ಶಾನಿ said...

ಸಿಕ್ಕಾಪಟ್ಟೆ ಸ್ಟ್ರೆಸ್‌ನಿಂದಾಗಿ ತಲೆ ಸಿಡಿಯುತ್ತಾ ಇನ್ನೇನು ಎರಡು ಹೋಳಾಗಿ ಒಂದು ಹೋಳು ಇತ್ತ ಗೋಡೆ ಸೀಳಿ ಪಕ್ಕದ ಕಾಂಪೌಂಡಿಗೂ, ಇನ್ನೊಂದು ಅತ್ತ ಕಾರ್‌ಪಾರ್ಕಿಂಗ್‌ಗೂ ಹಾರುವಂತಿತ್ತು. ಅಷ್ಟರಲ್ಲಿ ಅಚಾನಕ್ ಕಣ್ಣಿಗೆ ಬಿದ್ದ ಟಾಯ್ಲೆಟ್ಟಿಗೆ ಪ್ರವೇಶಿಸಿದಾಗ ಕುದುರೆ ಎದುರಾಯಿತು. ಸವಾರಿ ಮಾಡಿದ್ದೇ, ಸ್ಟ್ರೆಸ್ ಠುಸ್ ಆಗಿ, ತಾಜಾತನ ಮರಳಿತು. ಒಂದು ಖುಷಿಯ ಓದಿಗೆ ಆಹಾರವಾದ ನಿಮ್ಮ ಕುದುರೆಗೂ, ಲಂಡನ್‌ಗೂ, 17ರ ಮೊನೆ ಮಗ್ಗಿಗೂ, ಪ್ರಶ್ನೆ ಕೇಳುತ್ತಿದ್ದ ವಯಸ್ಸಾದ ಅಜ್ಜಂದಿರಿಗೂ, 'ಹೆಣ್ಣು' ನೋಡಿದ ಅಕ್ಕನಿಗೂ, ಇಂಥಹ ಒಂದು ಪ್ರಥಮ ಅನುಭವ ನೀಡಿದ ಪ್ರವಾಸಕ್ಕೂ, ಅದಕ್ಕೆ ಅನುಕೂಲ ಕಲ್ಪಿಸಿದ ಬ್ಯಾಂಕಿಗೂ......... ಸಾರಾಸಗಟಾಗಿ ಥ್ಯಾಂಕ್ಸ್ ಹೇಳದೆ ವಿಧಿ ಇಲ್ಲದಂತಾಗಿದೆ. ಇನ್ನು ಬಿಡ್ರಿ, ನನ್ನ ಬ್ಲಾಗ್ ನೆಂಟರ ಪೈಕಿ ನೀವೂ ಒಬ್ಬರು.
ಅಂದ ಹಾಗೆ ಇನ್ನೊಂದು ವಿಷಯ; ಯಾರಿಗೂ ಹೇಳಬೇಡಿ ಮತ್ತೆ, ನಂಗೂ, 17, 18, 19ರ ಮಗ್ಗಿ ಎಂದರೆ ಸ್ವಲ್ಪ ಅಷ್ಟಕ್ಕಷ್ಟೆ - ಆಗಲೂ ಮತ್ತು ಈಗಲೂ ಸಹ. ಅದಕ್ಕಾಗೇ ಕೈ-ಕಾಲುಗಳ ತುದಿಯಲ್ಲೆಲ್ಲ ಬೆರಳುಗಳು ಇವೆ ಮತ್ತು ಇವುಗಳು ಇರುವುದು ಆಪತ್ಕಾಲದಲ್ಲಿ ಎಣಿಸಿಕೊಳ್ಳಲೆಂದೇ ಎಂಬುದಾಗಿ ಈಗಲೂ ಬಲವಾಗಿ ನಂಬಿದ್ದೇನೆ!

ರಾಘವೇಂದ್ರ ಜೋಶಿ said...

@Rankusa ಅವರೇ,
ನಿಜ,ಬರಹದಲ್ಲಿ ಬರೆದಿದ್ದೆಲ್ಲವೂ ನನ್ನ ನಿಜಬದುಕಿನ ಪುಟಗಳೇ ಹೌದು.ಆ ಹೊತ್ತಿನಲ್ಲಿ ನನಗಿದ್ದ ಕಾಂಪ್ಲೆಕ್ಸು,ಭಯ,ಹಿಂಜರಿಕೆ ಎಲ್ಲವೂ ಹಾಗೇ ಮೂಡಿದೆ ಇಲ್ಲಿ.
Of course,ನನಗೆ ನೆನಪಿದ್ದಂತೆ,ನನಗಿಂತ ಸುಮಾರು ಹತ್ತನ್ನೆರಡು ವರ್ಷ ದೊಡ್ದಳಾಗಿದ್ದ ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋಗುವದರೊಂದಿಗೆ ನನ್ನ bedwetting ಕಿರಿಕಿರಿಯೂ ಹೊರಟು ಹೋಯಿತು..:-)
ಬ್ಲಾಗಿಗೆ ಬಂದು ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ಶಾನಿಯವರೇ,
ಚಿಂತಿಸದಿರಿ.17 ರ ಮಗ್ಗಿ ಕುರಿತಂತೆ ನಮ್ಮ ಜೊತೆ ಅನೇಕ ಸಮಾನ ದುಃಖಿಗಳು ಇಲ್ಲಿದ್ದಾರೆ.
ಬ್ಲಾಗಿನ ಬರಹ ನಿಮ್ಮಲ್ಲಿ ಲವಲವಿಕೆ ತರಿಸಿತು ಎನ್ನುವ ಸಂಗತಿಯೇ ನನಗೆ ಖುಷಿ ತರುವ ಸಂಗತಿ.
ಮತ್ತೇ ಸಿಗುವ.ಥ್ಯಾಂಕ್ಸ್.

ಸಿಂಧು sindhu said...

ಜೋಷಿಯವರೆ,

ನಿಮ್ಮ ಸುಲಲಿತ ಪ್ರಬಂಧ ಓದಿ ನಕ್ಕೂ ನಕ್ಕೂ ಸುಸ್ತಾಯಿತು. ಅಂದರೆ ಇದು ಬರೆಯಲು ಸುಲಲಿತವಾದ ಪ್ರಬಂಧ ಅಂತ ಅಲ್ಲವಾ;-) ಓದಿ ನಕ್ಕು ಸುಸ್ತಾದರೂ ಮನಸ್ಸು ಮುದವಾಗಿದೆ.

ನಿಮ್ಮ ಕುದುರೆ ಸವಾರಿಯ ಲಂಡನ್ ಪ್ರವಾಸ ಸೂಪರ್ರಾಗಿದೆ.
ಮಗ್ಗಿ ಕತೆ ಅಂಜಲಿ ಬರೆದ ಹಾಗೆ ನಮ್ಮೆಲ್ಲರ ಬಾಲ್ಯದ ಸೊಲ್ಲು. :)

ಒಳ್ಲೆಯ ಓದು ಕೊಟ್ಟಿದ್ದ್ಕಕ್ಕೆ ತುಂಬಾ ಧನ್ಯವಾದಗಳು.

ಪ್ರೀತಿಯಿಂದ,
ಸಿಂಧು

Yatheesha said...

Joshiavare,

Nimma baalyada dinagala ottadada paristhiti mattu london pravaasada anubhava thumbaa chennagide. Rajara kaalada Sandas bagge tilisi kottiruvudakke dhanyavaadagalu.

Prabandha thumba chennagi odisikondu hoguttade.

Dhanyavaadagalu.
Yatheesh

ರಾಘವೇಂದ್ರ ಜೋಶಿ said...

@ಸಿಂಧು ಅವರೇ,
ಬ್ಲಾಗಿಗೆ ಸ್ವಾಗತ.ನಿಜ,ಎಲ್ಲರ ಬಾಲ್ಯವೂ ಇದರಲ್ಲಡಗಿದೆ.ಬಹುಶಃ ಅದಕ್ಕೆಂದೇ ಬರಹ ಎಲ್ಲರಿಗೂ ಇಷ್ಟವಾಗಿದೆ.
ಧನ್ಯವಾದಗಳು.

@ಯತೀಶ್ ಜೀ,
ಸಮಯ ಹೊಂದಿಸಿಕೊಂಡು ಇತ್ತಕಡೆ ಬಂದಿದ್ದಕ್ಕೆ ಥ್ಯಾಂಕ್ಸ್.
:-)

Rankusa said...

your response has trigged some googy thoughts! living up to my name and reputation, i've deduced a mathematical equation only to irritate you, based purely on assumptions ;-) here we go buddy:

* you said your sister is elder to you by 10 or 12 years. for all practical purposes let's consider her to be elder to you by 10 years only (if no one else, i can bet that this assumption will certainly make her happy!) --------> equation (1)

* as you've mentioned in your article, the 'ಹೆಣ್ಣು ತೋರಿಸುವ' ritual took off when you were in 8th std. i.e. when you were apprx 13 years old. and i assume she got married a year later? which will make her of 24yrs old and you to be 14 at the time of her wedding. correct? let’s assume that she must have had a baby when she was 26. --------> equation (2)

* now she's got a 9yr old daughter (studying in 4th std). so, her current age is 26 + 9 = 35yrs. --------> equation (3)

* therefore, your current age is: 35 - 10 = 25years! --------> equation (4)

* here is the most important assumption: going by your writing style (and picture of course!), you certainly don't look like a 25yr old kid! :P this makes anyone assume that you're of at least 30 years old now.--------> equation (5)

* therefore, again for all practical purposes, the only way to make eq (4) and eq (5) feasible is to "reduce" the age gap between you and your sister (because increasing your sister's age in order to make you 30 doesn't look all that great, and also, it will really flare her up!). therefore let's keep your sister's age as is i.e. 35yrs and consider your age to be 30years as of now. so the age gap between you and your sister happens to be 5 years --------> equation (6)

* let's travel back in time. she got married when she was 24. so per eq (6), at the time of her marriage, you were of 19 years old (24-5=19)! --------> equation (7)

* and as per your own words---"ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋಗುವದರೊಂದಿಗೆ ನನ್ನ bedwetting ಕಿರಿಕಿರಿಯೂ ಹೊರಟು ಹೋಯಿತು"...that means you did continue bedwetting until she got married. and when she got married, you were of 19yrs old! per eq (7)

* the proof is therefore, “you did continue bedwetting until you were 19 years old!!!" :D

this theorem is just for fun, and not to hurt anyone! i know it is full of crap lol ;-)

cheers!
-R

ರಾಘವೇಂದ್ರ ಜೋಶಿ said...

@ ಪ್ರಿಯ Rankusa,
ನಿಮ್ಮ equations ನನ್ನಲ್ಲಿ ಒಂದು ಮೆಚ್ಚುಗೆಯನ್ನೂ ಜೊತೆಗೆ ನಗುವನ್ನೂ ತರಿಸಿತು.ನಿಮ್ಮ ಆಸಕ್ತಿ ಕುರಿತಂತೆ ನಾನು ನಗುತ್ತಲೇ ಅಭಿನಂದನೆ ಸಲ್ಲಿಸುತ್ತೇನೆ.ನಿಮ್ಮ confusions ನನಗೆ ಅರ್ಥವಾಗುತ್ತವೆ.ಆದರೆ ಸತ್ಯ ಯಾವಾಗಲೂ odourless ,colourless ಮತ್ತು tasteless ಆಗಿರುತ್ತದೆ.Once again,i willstick on to my words.ಇಲ್ಲಿ ಹೇಳಿದ್ದೆಲ್ಲವೂ ಸತ್ಯವೇ! ಇಷ್ಟಕ್ಕೂ ಸತ್ಯ ಅಂದರೆ ಏನಿಲ್ಲಿ? ಬಾಲ್ಯದಲ್ಲಿ ನಾನು ಟಾಯ್ಲೆಟ್ಟಿಗಾಗಿ ಪರಿತಪಿಸಿದ್ದು,'ಲಂಡನ್ ಪ್ರವಾಸ' ಅಂತ ಹೆಸರಿಟ್ಟಿದ್ದು,ಕುದುರೆ ಏರಿದ್ದು,bedwetting,ಅಕ್ಕನ ಮದುವೆ ವಿಚಾರ,ಗಂಡಿನ ಮನೆಯಲ್ಲಿ ಕೂಡ ಉಚ್ಚೆ ಮಾಡಿದ್ದು-yes,ಎಲ್ಲವೂ ಸತ್ಯ..
Coming to the point,ಬಹುಶಃ ನನಗೆ ತಿಳಿದಂತೆ ಬರಹದ ಮೊದಲ ಎರಡು ಪ್ಯಾರಾ ನಿಮ್ಮ ತಲೆ ಕೆಡಿಸಿದೆ.ಅದರಲ್ಲಿ ಪುಟ್ಟಿಯ ಕುರಿತು ಬರೆಯಲಾಗಿದೆ ಮತ್ತು ಅದು ನಿನ್ನೆ,ಮೊನ್ನೆ ಆದ ಘಟನೆಯಂತೆ ಬರೆದಂತಿದೆ.ಮತ್ತೇ,ಇದೇ ಒಂದು ವಿಚಾರ ನಿಮ್ಮ ತಲೆ ಕೆಡಿಸಿದೆ.ಪುಟ್ಟಿಯನ್ನು ಕುರಿತಂತೆ ಅಕ್ಕ ಹೇಳಿದ್ದು ನಿಜವಿತ್ತಾದರೂ ನೀವು ಇಡೀ ಘಟನೆಯನ್ನು ನಿನ್ನೆ ಮೊನ್ನೆ ಆದಂತೆ ಕಲ್ಪಿಸಿಕೊಂಡಿದ್ದೀರಿ..

Rankusa said...

lol..

i said its just for fun. its neither logical, nor rational. there r a million loopholes in the assumptions; not only your niece's age ;) n i nevr said that wtever u wrote is all a cock and bull story.

delete the comment if you don't like it. no hard feelings ;)

cheers!
-r

ರಾಘವೇಂದ್ರ ಜೋಶಿ said...

@ಪ್ರಿಯ Rankusa,
1. ನಿಮ್ಮ ಪ್ರತಿಕ್ರಿಯೆಯನ್ನು ತಮಾಷೆಯಾಗಿ ತೆಗೆದುಕೊಂಡೇ ನಾನು ತಮಾಷೆಯಿಂದಲೇ ಉತ್ತರಿಸಿದ್ದೇನೆ.
2. ತಮಾಷೆಯಿದ್ದರೂ,ಬರಹದ ಬಗೆಗಿದ್ದ ನಿಮಗಿದ್ದ ಆಸಕ್ತಿ ಮತ್ತು ಕುತೂಹಲ ನನ್ನನ್ನು ಮರುಪ್ರತಿಕ್ರಿಯಿಸಲು ಪ್ರೇರೇಪಿಸಿತು.
3. ನಿಮ್ಮ ಪ್ರತಿಯೆಯನ್ನು ಅಳಿಸುವ ಮಾತೆಲ್ಲಿಂದ ಬಂತು ಅಂತ ಅರ್ಥವಾಗಲಿಲ್ಲ.
ನಿಮ್ಮನ್ನೂ ಸೇರಿದಂತೆ ನಮಗೆಲ್ಲರಿಗೂ ನಮ್ಮದೇ ಆದ ಸಮಸ್ಯೆಗಳು ನೂರಾರಿವೆ.ಅವೆಲ್ಲ ಕ್ಷಣ ಕಾಲ ಮರೆತು ಒಂದಿಷ್ಟು ನಗಲು,ಕಾಲೆಳೆಯಲು,ಖುಷಿಪಡಲು ಒಂದು ಬರಹ ಕಾರಣವಾದರೆ ಅದನ್ಯಾಕೆ ಬೇಡ ಅನ್ನೋಣ?ಅಲ್ವೇ?
It was nice to hear from you.ಮತ್ತೇ ಸಿಗುವ.ಥ್ಯಾಂಕ್ಸ್! :-)

minchulli said...

ಇದಂತೂ ಅದ್ಭುತವಾಗಿತ್ತು... ನಾವುಗಳು ಕೂಡ ಚಿಕ್ಕಂದಿನಲ್ಲಿ "ಲಂಡನ್" ಅಂತಲೇ ಹೇಳುತ್ತಿದ್ದೆವು. ಒಂದು ಬಾರಿ ಅಜ್ಜಿ ಬಂದಾಗ ನಾನು ತಮ್ಮನ ಜತೆ ಲಂಡನ್ ಗೆ ಹೋಗಿ ಬರ್ತೇನೆ ಅಂತ ಹೇಳಿದ್ದೆ. ಅದನ್ನು ಕೇಳಿಸಿಕೊಂಡ ಅವರು ಗುಟ್ಟಾಗಿ ಕೇಳಿದ್ದರಂತೆ.. "ಏನು ವಿಲಾಯತಿಗೆ ಹೋಗೋದು ಅಂದ್ರೆ ಕಮ್ಮಿ ಮಾತಾ? ಶಾಲೆಯಿಂದ ಏನಾದರೂ ಸ್ಪರ್ಧೆ ಮುಂತಾದ್ದು ಇದೆಯಾ ? ಆದರೂ ಹುಡುಗೀರನ್ನ ಅಲ್ಲೆಲ್ಲ ಕಳ್ಸೋದು ಯಾಕೋ ಸರಿಯಿಲ್ಲ" ಅಂತ.. ಹೀಗೆ ಹಳೆಯ ನೆನಪುಗಳೆಲ್ಲ ಉಕ್ಕಿ ಬಂದು ಮನಸೆಲ್ಲ ಖುಷ್..... Thank You

" ಪ್ರಶ್ನೆ ಕೇಳುವುದು ಎಷ್ಟು ಸುಲಭ... ಅ೦ದಿಗೂ ಇ೦ದಿಗೂ... "

ರಾಘವೇಂದ್ರ ಜೋಶಿ said...

@ಮಿಂಚುಳ್ಳಿಯವರೇ,
ಯಾರಿಗೆ ಏನೆಲ್ಲ ನೆನಪುಗಳಿರ್ತಾವೆ ನೋಡಿ.
ನಿಮ್ಮ ಅಜ್ಜಿಯ ಮುಗ್ಧತೆಗೆ ಸಲಾಂ!
ನಿಮಗೊಂದು ಥ್ಯಾಂಕ್ಸ್. :-)

siddu said...

I am speechless after reading this......oh my goodness....It's me and lotz of my childhood friends in this story.

ರಾಘವೇಂದ್ರ ಜೋಶಿ said...

@sidduji,

Thank you very much for your
compliments. :-)

angadiindu said...

ಮೊದಲಿಗೆ ನಿಮ್ಮ ಬ್ಲಾಗ್ ಓದಲು ಪ್ರೇರೇಪಿಸಿದ " ವಿಜಯ ಕರ್ನಾಟಕ" ಕ್ಕೆ ಧನ್ಯವಾದಗಳು.
ಹದಿನೇಳರ ಮಗ್ಗಿವರೆಗೆ ಬರುತ್ತಿದ್ದ ನಾವು-ನೀವು ವಾಸಿ ಅನಿಸ್ತೈತಿ. ಯಾಕಂದ್ರ SSLCಯೊಳಗ ನೂರಕ್ ತೊಂಬತ್ತು, ತೊಂಬತ್ತೆಂಟು ಮಾರ್ಕ್ಸ್ ತೊಗೊಳ್ಳ ಈಗಿನ ಹುಡುಗರಿಗೆ ಬರೀ ನಾಕ್ ಆರ್ಲೆ ಎಷ್ಟಲೇ ಅಂತಾ ಕೇಳಿ ನೊಡ್ರಿ. ಫೋರ್ ಒನ್ ಝಾ ಫೋರ್, ಫೋರ್ ಟೂ ಝಾ ಏಟ್...ಅಂತಾ ಎಣಿಸಿಗೋತ ಫೋರ್ ಸಿಕ್ಷ್ಝಾ ಟ್ವೆಂಟಿಫೋರ್ ಅಂತಾರು.
ನಿಮ್ಮ ಲಂಡನ್ ಪ್ರವಾಸ ,ಕಮೋಡ್ ಸಮಾಚಾರ ಕೇಳಿ, ನನಗ ನಮ್ಮ ಕಾಲೇಜ್ ದಿನಾ ನೆನಪು ಬಂದ್ವು. ಬಿವಿಬಿ ಕಾಲೇಜ್ನಿಂದ,ಶಿರಹಟ್ಟಿಗೆ ಥರ್ಡ್ ಯಿಯರ್ ಎಲ್ಲಾರೂ ಸೇರಿ ಶಿರಹಟ್ಟಿಗೆ ಪ್ರೊಜೆಕ್ಟ್ ವರ್ಕ್ ಅಂತಾ ಹೋಗಿದ್ವಿ.ಐದು ದಿವಸ,ದಬಾಲಿ ಹೈಸ್ಕೂಲ್ ನೊಳಗ ಎಲ್ಲರೂ ವಸ್ತಿ ಮಾಡಿದ್ವಿ. ಜಳಕಾ ಅಂತೂ ಭಾವೀ ನೀರು ಸೇದಿ,ಒಂದು ಕೊಡದಾಗ ಇಬ್ಬಿಬ್ರು-ಮೂರು ಜನ ಸೇರಿ ಮಾಡಿದ್ವಿ. ಅದಕ್ಕಿಂತ ಮೊದಲು, ಒಂದ ತಂಬಿಗಿ ತೊಗೊಂಡು ಹೈಸ್ಕೂಲ್ ಹಿಂದಗಡೆ ಇದ್ದ ಜೋಳದ ಹೊಲದಾಗ ಲಂಡನ್ ಗೆ ಅಂತಾ ಹೋಗಬೇಕಾಗಿತ್ತು.ಒಂದ ತಂಬಿಗಿ ಯೊಳಗಿಂದಾ ಒನ್ ಬೈ ಟು, ಒನ್ ಬೈ ತ್ರೀ ಮಾಡಬೇಕಾಗಿತ್ತು.ಆ ಫಜೀತಿ ನೆನಸಿಗೊಂಡರ ಇವತ್ಗೂ ನಗಿ ಬರ್ತೈತಿ. ಇದು ಮುವತ್ತು ವರ್ಷದ ಹಿಂದಿನ ಮಾತು.
ಬೇಸರದ ಸಂಗತಿ ಅಂದ್ರ,ಗದಗ ಜಿಲ್ಲಾ ದೊಳಗ ಇರೋ ನನ್ನ ಹಳ್ಳಿಯೊಳಗ ಈಗ್ಲೂ ಎಲ್ಲಾರಿಗೂ ಸಂಡಾಸ್ ಇಲ್ಲಾ.ಬಸ್ ನೊಳಗ ಹೋಗಬೇಕಾರ,ಯಾವ್ದರ ಹಳ್ಳಿ ಬಂತ ಅಂದರ, ರಸ್ತೆ ಮಗ್ಗಲನಾಗೆ ಸಂಡಾಸ್ ಗೆ ಕುಂತ ಹೆಣ್ಣುಮಕ್ಕಳು "ಜನ ಗಣ ಮನ" ಹಾಡೋವಾಗ್ ಏಳ್ತಾ ರಲ್ಲಾ ಹಂಗ ಎದ್ದು ನಿಲ್ತಾರ.
ಹೊಸದಾಗಿ ಮದುವೆಯಾಗಿದ್ದಾಗ, ನನ್ನ ಹೆಂಡತಿಯೊಂದಿಗೆ ,ಬೆಂಗಳೂರಿನಲ್ಲಿ ಮನೆ ಮಾಡಿದ್ದೆ. ಜಾತ್ರಿಗೆ ನಮ್ಮ ಹಳ್ಳಿಗೆ ಕರೆಯಲು ನಮ್ಮ ಅಣ್ಣ (ದೊಡ್ಡಪ್ಪನ ಮಗ)ಬಂದಿದ್ದನು.ಅವನಿಗೆ ನನ್ನ ಹೆಂಡತಿ ,ನಿಮ್ಮ ಮನೆಯಲ್ಲಿ ಸಂಡಾಸ್ ಕಟ್ಟಿಸಿದರೆ ಮಾತ್ರ ನಾನು ಅ ಹಳ್ಳೀಗೆ ಕಾಲಿಡುವದು ಎಂದು ಹೇಳಿದ್ದಳು.ಅಣ್ಣ ಊರಿಗೆ ಬಂದು ನಿಂತ ಕಾಲ್ ಮ್ಯಾಲೆ ,ಊರ ಮುಂದಿನ ಕಣದಲ್ಲಿ, ಸಂಡಾಸ್ ಕಟ್ಟಿಸಿ, ನಮ್ಮನ್ನು ಕರೆದನು.
ಇದನು ಖಚಿತಪಡಿಸಿಕೊಂಡೇ ನನ್ನ ಹೆಂಡತಿ ನನ್ನ ಹಳ್ಳಿಗೆ ಕಾಲಿಟ್ಟಿದ್ದು. ಯಾಕೆ ಹೀಗೆ ಹಠ ಮಾಡಿದೆ ಎಂದು ನಾನು ಕೇಳಿದಾಗ, ನನಗಾದ ಗತಿ ಈ ಮನೆಗೆ ಮುಂದೆ ಬರುವ ಸೊಸೆಯಂದಿರಿಗೆ ಆಗಬಾರದು ಎಂದು ನಾನು ಹಠ ಮಾಡಬೇಕಾಯಿತು ಎಂದು ಹೇಳಿದಳು.

Unknown said...

ಆಫಿಸಿನಲ್ಲಿ ಕೂತ್ಕೊಂಡು ಜೋರ್ ಜೋರಾಗಿ ನಗ್ತಾ ಇದ್ದೀನಿ. ಇದನ್ನ ಓದಿ. ಎಂಥ ಅವಸ್ಥೆ. ಸೂಪರ್ ನಿಮ್ಮದು.. ಹಾಸಿಗೆ ಒದ್ದೆ ಮಾಡಿಕೊಳ್ಳೊ ರೋಗ ನನಗೆ ೫ ನೇ ಕ್ಲಾಸಿನ ತನಕ ಇತ್ತು. ಪುಣ್ಯಕ್ಕೆ ಅಲ್ಲಿಗೇ ಮುಗೀತು. ತುಂಬಾ ಖುಷಿ ಕೊಟ್ಟ ಓದು.