Wednesday, August 16, 2017

ಆಲಿಕಲ್ಲಿಗೆ ಉಸಿರು ತುಂಬುವ ಬೆಕ್ಕಿನಮರಿ!

ಹೊಸ್ತಿಲಿಗೆ ಬಂದ ಮಳೆ 
ದಿಟ್ಟಿಸುತ್ತಿರುವ ಮರಿಬೆಕ್ಕಿನ ಮುಗ್ಧತೆ
ಕವಿಮನದಲ್ಲಿ ಯಾಕೆ ಮೂಡುವದಿಲ್ಲ?

ಪ್ರಶ್ನೆ ಸರಳವಾಗಿರುವಂಥದ್ದು. ಬಹುಶಃ ಕಿರಿಕಿರಿಯಾಗುವಂಥದ್ದು. ಇಲ್ಲಿನ ಒಟ್ಟಾರೆ ಚಿತ್ರಣ ಹೀಗಿದೆ: 
ಮಳೆಯಾಗುತ್ತಿದೆ. ಆಲಿಕಲ್ಲಿನ ಮಳೆ. ಬಾಗಿಲಸಂದಿಯಲ್ಲಿ ನಿಂತುಕೊಂಡು ಮಳೆ ನೋಡುತ್ತಿರುವ ಈ ಬೆಕ್ಕಿನ ಮರಿಗೋ ಇದೆಲ್ಲ ಹೊಸತು. ಹೀಗಾಗಿ ಅಲ್ಲೊಂದು ಬೆರಗಿದೆ. ಹೊಸ್ತಿಲಾಚೆಯಿಂದ ಪುಟಿದು ಮನೆಯೊಳಗೆ ಬಂದು ಬೀಳುತ್ತಿರುವ ಆಲಿಕಲ್ಲುಗಳೊಂದಿಗೆ ಈ ಮರಿ ಚಿನ್ನಾಟವಾಡುತ್ತಲಿದೆ. ಏನು ಮಾಡಿದರೂ ಕೈಗೆ ಸಿಗದೇ ಕೊನೇಪಕ್ಷ ರೂಹೂ ದಕ್ಕದೇ ಬಿದ್ದ ಮರುಘಳಿಗೆಯಲ್ಲೇ ಜೀವ ಬಿಡುತ್ತಿರುವ ಈ ಆಲಿಕಲ್ಲುಗಳಿಗೆ ತನ್ನ ಚಿನ್ನಾಟದಿಂದಲೇ ಈ ಬೆಕ್ಕಿನಮರಿ ಉಸಿರು ತುಂಬುವ ಪ್ರಯತ್ನ ಮಾಡುತ್ತಿದೆ. ಅಷ್ಟೇ, ಮರಿಗೆ ಇದೊಂದು ಸೋಜಿಗ ಮತ್ತು ಮೋಜು. 

   ಆದರೆ ಕವಿಗೆ ಈ ಅದೃಷ್ಟವಿಲ್ಲ. ಆತ ಈ ಮಳೆಯನ್ನು ಆ ಮರಿಬೆಕ್ಕಿನಂತೆ ನೋಡಲಾರ. ಆತನ ಕವಿತ್ವವೇ ಆತನ ಮೊದಲ ಶತ್ರು. ಇದು ಶಾಪವೋ ವರದಾನವೋ, ಕವಿಗೆ ಯಾವಾಗಲೂ ದೂರದೃಷ್ಟಿ ಇರಬೇಕಂತೆ! ಹೀಗಾಗಿ, ಆತ ಈ ಮಳೆಗೊಂದು ಹಿನ್ನೆಲೆ ಸೃಷ್ಟಿಸತೊಡಗುತ್ತಾನೆ. ಬೆಕ್ಕಿನ ಬೆರಗಿಗೆ ಕಾರಣವಾಗಿದ್ದ ಹೊಸ್ತಿಲ ಆಸುಪಾಸಿಗಷ್ಟೇ ಸೀಮಿತವಾಗಿದ್ದ ಮಳೆಯೊಂದು ಕವಿಯ ಕ್ಯಾನವಾಸಿನಲ್ಲಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಲಿದೆ. ಅಲ್ಲಿ ಮಿಂಚು ಬರುತ್ತದೆ. ಗುಡುಗು ಬರುತ್ತದೆ. ಕಾಮನಬಿಲ್ಲಿನ ಸಮೇತ ಮಯೂರದ ನೃತ್ಯಯೂ ಪ್ರೇಯಸಿಯ ವಿರಹವೂ ಎಲ್ಲ ಬಂದು ಕೊನೆಗೊಮ್ಮೆ ಕಲಸುಮೇಲೋಗರವಾಗುತ್ತದೆ.

ಯಾಕೆಂದರೆ ಆತ ಕವಿ. ಯಾವತ್ತಿಗೂ ದಗ್ದ ಮತ್ತು ಪ್ರಕ್ಷುಬ್ದ. ಕವಿತೆ ಮಾತ್ರ ಆತನನ್ನು ಸಂತೈಸಬಲ್ಲದು. ಪೊರೆಯಬಲ್ಲದು.  
*
   ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮಲ್ಲಿ ಅನೇಕರು ಒಂದು ತಪ್ಪು ಮಾಡುತ್ತಿರುತ್ತೇವೆ. ನಮ್ಮ ಮಾತುಕತೆಗಳಲ್ಲಿ ಯಾರ್ಯಾರನ್ನೋ ಎಳೆದು ತರುತ್ತಿರುತ್ತೇವೆ. ಯಾವುದೋ ಒಂದು ವಿಷಯಕ್ಕೆ ಕುರಿತಂತೆ ನಮ್ಮ ನಮ್ಮ ವಾದಗಳಿಗೆ ಬಲ ತಂದು ಕೊಡುವದಕ್ಕೆಂದು ಅನೇಕ ದಿವ್ಯಚೇತನಗಳ ಲೇಬಲ್ಲುಗಳನ್ನು ಅಂಟಿಸುತ್ತೇವೆ. ನಮ್ಮ ತರಲೆ ಜೋಕುಗಳಲ್ಲಿ ಗಾಂಧೀ ಬರುತ್ತಿರುತ್ತಾನೆ. ಕವಿತೆಗಳಲ್ಲಿ ಬುದ್ಧ ಇಣುಕುತ್ತಿರುತ್ತಾನೆ. ಅಂತೆಯೇ ನಮ್ಮ ನಮ್ಮ ವಾದಕ್ಕೆ ಪುಷ್ಟಿ ಕೊಡಬಲ್ಲ ಯೇಸು, ಅಂಬೇಡ್ಕರ್, ಪರಮಹಂಸ, ರಾಮ. ಕೃಷ್ಣರೂ ಸಂದರ್ಭಾನುಸಾರವಾಗಿ ಯಥೋಚಿತವಾಗಿ ಬರುವದುಂಟು. 

   ಆದರೆ ಇವರೆಲ್ಲರನ್ನೂ ಉಚ್ಚರಿಸುವ ಮುನ್ನ ನಾವುಗಳು ಒಂದು ಅರ್ಥ ಮಾಡಿಕೊಳ್ಳಬೇಕಿದೆ. ಮಹಾತ್ಮ, ಬುದ್ಧ, ಪರಮಹಂಸ, ಮರ್ಯಾದಾ ಪುರುಷೋತ್ತಮ ಅಂತನ್ನುವದೆಲ್ಲ ಅವರವರ ಅಪ್ಪ ಅಮ್ಮಂದಿರು ಇಟ್ಟ ಹೆಸರುಗಳಲ್ಲ. ಹಾಗೆ ನೋಡಿದರೆ ಅವೆಲ್ಲ ನಾಮಪದಗಳೇ ಅಲ್ಲ. ಅದೊಂದು stage. ಒಂದು ಹಂತ. ಮಾನವೀಯತೆಯಲ್ಲಿಯೋ ಅಥವಾ ಅರಿವಿನಲ್ಲಿಯೋ ಅಥವಾ ಧ್ಯಾನದಲ್ಲಿಯೋ- ಎಲ್ಲೋ ಒಂದು ಕಡೆ ಅತ್ಯಂತ ಎತ್ತರದ ಜಾಗದಲ್ಲಿ ಕುಳಿತುಕೊಂಡ ಮೇಲೆ ನಮ್ಮ ಕೈವಶವಾಗಬಹುದಾದ ಒಂದು ಸ್ಥಿತಿಯದು.

   ಕವಿತೆ ಅನ್ನುವದೂ ಅಂಥದ್ದೇ ಜಾಗದ ಆಸುಪಾಸಿನಲ್ಲೇ ಉದ್ಭವಿಸುವಂಥದ್ದು. ಈ ಕವಿತೆ ಓದುಗರೊಂದಿಗೆ ಅನೇಕ ರೀತಿಯಲ್ಲಿ ಸಂಭಾಷಿಸುತ್ತದೆ. ಒಮ್ಮೊಮ್ಮೆ ಓದುಗನ ಬಳಿಗೆ ನೇರವಾಗಿ ಬಂದು ವಿಷಯ ತಿಳಿಸುತ್ತದೆ. ಒಮ್ಮೊಮ್ಮೆ ತೀರಾ ಹತ್ತಿರ ಬಂದರೂ ಕೈಸನ್ನೆ, ಬಾಯಿಸನ್ನೆ ಮಾಡುತ್ತ 'ಇಲ್ಲಿ ಹೇಳಲಾಗದು, ಅಲ್ಲಿ ಬಾ' ಅಂದು ಹೊರಟು ಹೋಗುತ್ತದೆ. ಅಲ್ಲಿಗೆ ಓದುಗನ ಕತೆ ಮುಗಿದಂತೆ. ಹೀಗಾದಾಗ ಓದುಗ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೀಗೆ ಕಣ್ಣಿಗೆ ಕಾಣಿಸುವ ಅಕ್ಷರಗಳು ತಮ್ಮಲ್ಲೊಂದು ಹಿಡನ್ ಸಂಜ್ಞೆಗಳನ್ನೂ ಇಟ್ಟುಕೊಂಡಿರುತ್ತವೆ. ಬೇಕಾದರೆ ಈ ಪುಟ್ಟ ಹಾಯ್ಕು ನೋಡಿ, 
  
ಮನೆಯತ್ತ ಪಯಣ. 
ರಸ್ತೆಯಂಚಿನ ಗೂಟಕಲ್ಲಿನಲ್ಲಿ 
ಕಿಲೋಮೀಟರ್ ಜೊತೆಗಿದೆ
ಒಂದು ಅಗೋಚರ ಸ್ಮೈಲೀ!

   ಹೀಗೆ ಈ ಲೋಕದ ಎಲ್ಲ ಕವಿತೆಗಳೂ ಒಂದಿಷ್ಟು ಬಗೆಯ ಸೂತ್ರಗಳಲ್ಲಿ ಬಂಧಿತವಾಗಿವೆ. ಹಾಗೆ ಬಂಧಿತವಾಗುವ ಸೂತ್ರಗಳ ಪೈಕಿ ಕೆಲವನ್ನು ಹೆಸರಿಸಬಹುದಾದರೆ ಮೊದಲಿಗೆ ಬಂದು ನಿಲ್ಲುವ ಸೂತ್ರ ಅಲಂಕಾರ. ಒಮ್ಮೊಮ್ಮೆ ಇದು ಸಾಂಕೇತಿಕವಾಗಿದ್ದರೆ, ಒಮ್ಮೊಮ್ಮೆ ಉತ್ಪ್ರೇಕ್ಷೆಯಿಂದ ಕೂಡಿರುತ್ತದೆ. 'ಅವಳನ್ನು ಮುಟ್ಟಿದ ಕೂಡಲೇ ಮೈಯಲ್ಲಿ ಮಿಂಚು ಹರಿದಂತಾಯಿತು' ಅಂತನ್ನುವ ಕವಿಗೆ ತಾನು ಸತ್ಯಕ್ಕಿಂತ ಕೊಂಚ ಹೆಚ್ಚಿನದನ್ನು ಹೇಳುತ್ತಿದ್ದೇನೆ ಅಂತನ್ನುವ ಸ್ಪಷ್ಟ ಅರಿವಿದೆ. ಆದರೆ ಇಲ್ಲಿ ಕೇವಲ ಆತನ ಎಕ್ಸೈಟ್ ಮೆಂಟ್ ಮಾತ್ರ ನೋಡಬೇಕೇ ಹೊರತು ವಿಜ್ಞಾನವನ್ನಲ್ಲ. 

   ಇದೇ ರೀತಿ ಕವಿತೆಯ ಒಂದು ಅತಿ ಮುಖ್ಯ ಭಾಗವೆಂದರೆ ಕವಿ ಬಳಸುವ ನಿರೂಪಣಾ ವಿಧಾನ. ಯಾವುದೇ ಕವಿತೆ ತನ್ನ ಒಡೆಯ ಕಟ್ಟಿಕೊಡುತ್ತಿರುವ ಚಿತ್ರಣದ ಮೇಲೆಯೇ ತನ್ನ ಭವಿಷ್ಯವನ್ನು ಕಂಡುಕೊಳ್ಳುತ್ತಿರುತ್ತದೆ. ಹೀಗಾಗಿ ನಿರೂಪಣೆ ಅನ್ನುವದು ಇಡೀ ಕವಿತೆಯ ಅಡಿಪಾಯ. ಕವಿಯ ನೋಟ ಅಥವಾ ಕವಿಯ ರುಚಿ ಅಥವಾ ಕವಿಯ ಪರಿಮಳ- ಈ ಅಡಿಪಾಯಕ್ಕೆ ಒದಗಿಬರುವ ಸಿಮೆಂಟಿನ ಸರಕುಗಳು. ಕವಿತೆ ಓದಿದ ಬಳಿಕ ಇವೆಲ್ಲವೂ ಓದುಗರ ಮನದಲ್ಲಿ ಪ್ರತಿಫಲಿಸಿದಾಗಲೇ ಆಯಾ ಕವಿತೆ ಸಾರ್ಥಕದ ಉಸಿರು ಬಿಡುತ್ತದೆ. ಕವಿ ಕಟ್ಟಿಕೊಡುತ್ತಿರುವ ಈ ಕೆಳಗಿನ ದೃಶ್ಯ ನೋಡಿ:

ನೀರಿಗೆಂದು ಬಂದ ನೀರೆಯರು 
ಚಂದಿರನ ಮೇಲೆ ಮೋಹಿತರು;
ಇಲ್ಲೀಗ ನೂರು ಕೊಡಗಳಲ್ಲೂ 
ನೂರು ಪೂರ್ಣ ಚಂದಿರರು!

   ಹೌದು, ಒಂದು ಕವಿತೆಯನ್ನು ಹೇಗೆ ಓದಬೇಕೆಂದು ನಿರ್ದೇಶಿಸುವದು ಅಲ್ಲಿರುವ ಚಿಹ್ನೆಗಳು. ಓದಿನ ಪಯಣದಲ್ಲಿ ಅವು ಓದುಗರಿಗೆ ಎಲ್ಲಿ ವಿರಮಿಸಬೇಕೆಂದೂ ಎಲ್ಲಿ ವಿಸ್ತರಿಸಗೊಳಿಸಬೇಕೆಂದೂ ಮತ್ತು ಎಲ್ಲಿ ಉನ್ಮಾನದಿಂದ ಕಂಗೊಳಿಸಬೇಕೆಂದೂ ಸೂಚಿಸಬಲ್ಲವು. ಹೀಗೆ ಹಾಡಿನ ಹಾದಿಯಲ್ಲಿ ಈ ಚಿಹ್ನೆಗಳು ತೋರುಫಲಕಗಳಂತೆ ಗೋಚರಿಸಬೇಕೆಂದರೆ ಇಡೀ ಹಾಡು ಒಂದು ನಿಗದಿತ ಶಬ್ದ ಹೊರಡಿಸುತ್ತಿರಬೇಕು. ಆ ಶಬ್ದದಲ್ಲಿ ಒಂದು ಸಂಗೀತದ ಸ್ವರವಿರಬೇಕು. 'ತೂಗಿರೇ ರಾಯರ ತೂಗಿರೇ ಗುರುಗಳ ತೂಗಿರೇ ಯತಿಕುಲ ತಿಲಕರ..' ಅನ್ನುವಂಥ ಜಗನ್ನಾಥದಾಸರ ಕೀರ್ತನೆಯನ್ನು ಓದುವಾಗ ಹೊರಡಬಹುದಾದ ಶಬ್ದ ಮತ್ತು ಸ್ವರಗಳನ್ನು ಗಮನಿಸಿ. ದಾಸ ಸಾಹಿತ್ಯದಲ್ಲಿ ಈ ರೀತಿಯ ಅನೇಕ ಸಂಯೋಜನೆಗಳನ್ನು ಕಾಣಬಹುದು.

   ಕೊನೆಯದಾಗಿ, ಯಾವುದೇ ಒಂದು ಕವಿತೆಯು ಓದುಗನ ಗಮನವನ್ನು ಸೆಳೆಯಲು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಲಯದ ಮೊರೆ ಹೋಗೇಹೋಗುತ್ತದೆ. ಒಂದು ಲಯ ಅಥವಾ ಮೀಟರ್ ಆಯಾ ಕವಿತೆಯ ಬಗ್ಗೆ ಓದುಗನೆಡೆಗೊಂದು ಅಭಯವನ್ನು ಕೊಡುವಂಥದ್ದು. ಅಯ್ಯ, ನಿನ್ನ ಓದಿನ ಓಘಕ್ಕೆ ನಾನು ಜೊತೆ ಕೊಡುತ್ತೇನೆ ಅಂತ ಅಭಯ ನೀಡುತ್ತಿರುತ್ತದೆ. ಹೀಗೆ ಕವಿತೆಯಿಂದ ಗ್ಯಾರಂಟಿ ಪಡೆದುಕೊಂಡ ಓದುಗ ಸದರಿ ಕವಿತೆಯನ್ನು ಓದುವಾಗ ಪ್ರತಿ ಸಾಲಿನಲ್ಲೂ ಒಂದೊಂದು ರಿದಮ್ ಅನುಭವಿಸುತ್ತಾನೆ. ಈ ರಿದಮ್ ಓದುಗನಲ್ಲಿ ಆಕಸ್ಮಿಕವಾಗಿ ಘಟಿಸುವಂಥದ್ದಾದರೂ ಕವಿಯೊಳಗೆ ಮಾತ್ರ ಈ ಲಯ ಪೂರ್ವಯೋಜಿತ. ದ್ವಿಪದಿ, ತ್ರಿಪದಿ, ಷಟ್ಪದಿ, ಸಾನೆಟ್ ಗಳೆಲ್ಲ ನಿರ್ಮಾಣ ಹಂತದ ಮೂಲದಲ್ಲೇ ಒಂದು ಲಯವನ್ನು ಅಳವಡಿಸಿಕೊಂಡಿರುವಂಥವು. ಇನ್ನು ಕೆಲವರು ಕವಿತೆಯಲ್ಲಿನ ಸಾಲುಗಳಲ್ಲಿ ಇಂಥದೊಂದು ಮೀಟರನ್ನು ಕಲ್ಪಿಸುತ್ತಾರೆ. ಯಾವತ್ತೋ ಒಮ್ಮೆ ಕುಶಾಲಿಗೆಂದು ಬರೆದಿದ್ದ ಈ ಕವಿತೆಯಲ್ಲಿ ಅಲ್ಲಲ್ಲಿ ಕಾಣುವ ರಿದಂ ಗಮನಿಸಿ:

ಎಷ್ಟು ದರಿದ್ರ ರಸ್ತೆಯಿದು?
ಕಲ್ಲು ಮುಳ್ಳುಗಳ ಕಡಿದಾದ ದಾರಿ. 
ಒಂದು ಬಸ್ಸಿಲ್ಲ ಟ್ರೈನಿಲ್ಲ ವಿಮಾನವಿಲ್ಲ;
ಸುಡುವ ನೆತ್ತಿಗೆ ನೆರಳಿಲ್ಲ, ಕಣ್ಣಕತ್ತಲೆಗೆ ಬೆಳಕಿಲ್ಲ 
ಟೈಂಪಾಸಿಗೆ ಪದ್ಯವಿಲ್ಲ ಮದ್ಯವಿಲ್ಲ ಚುರೂಟವಿಲ್ಲ.
ಇತ್ತ-ಆರು ಬೆಟ್ಟಗಳ ಮಧ್ಯೆ ಕರೆಂಟು ಕಂಬಗಳಿಲ್ಲ
ಅತ್ತ-ಹೆಗಲಿಗೆ ಕಂಬಹೊರದೇ ಕರೆಂಟು ಹರಿಯುವದಿಲ್ಲ. 
ಇಷ್ಟೆಲ್ಲ ಇಲ್ಲಗಳನ್ನು ದಾಟಿಕೊಂಡು 
ಹೋದಮೇಲೆ ಅಲ್ಲಿ ಸಿಗುವದಾದರೂ ಏನು?
-ಅಂತ ಅಲ್ಲಿನ ಬುದ್ಧನಿಗೆ ಕೇಳೋಣವೆಂದರೆ
ಆತನ ಬಾಗಿಲಿಗೆ ಬರೆಯಲಾಗಿದೆ: ನಾಳೆ ಬಾ!
*

   ಇದೆಲ್ಲ ಹೇಳುತ್ತಿರುವಾಗಲೇ ನನಗೆ ಥಟ್ಟಂತ ಹೊಳೆದಿದ್ದೇನು? ಹಾಗೊಂದು ವೇಳೆ ಇಲ್ಲಿ ಕವಿ 'ಆಲಿಕಲ್ಲಿನ ಮಳೆ' ಎಂಬ ಕವಿತೆ ರಚಿಸುತ್ತಿದ್ದಾನೆ ಅಂದುಕೊಂಡರೆ ಇಲ್ಲಿ ಓದುಗ ಯಾರು?                                                              
ಬಹುಶಃ ಬೆಕ್ಕಿನಮರಿ ಬಳಿ ವಿಚಾರಿಸಿದರೆ ಉತ್ತರ ಸಿಗಬಹುದೇನೋ.. 
                                                                                -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 16.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

Wednesday, August 2, 2017

ಒಂದು ಕಿಲಾಡಿ ಕೃತ್ಯ ಹೆಣೆದ ಬೇಗುದಿಯ ಜಾಲಗಳು

ಹೆಣ್ಣು ಮಿಡತೆಗೆ
ವೈಧವ್ಯ ತಂದಿಟ್ಟ ಬೆಕ್ಕು
ಕಳ್ಳ ನಿದ್ರೆಯಲ್ಲಿದೆ!

ಜಾಪಾನಿನ ಕಿಕಾಕು ಎಂಬ ಹಾಯ್ಕುಕವಿ ಈ ಲೋಕದ ಕಪಟತನವನ್ನು ಸಹಜತೆಯೊಂದಿಗೆ 
ಮುಗುಮ್ಮಾಗಿ ತಳಕು ಹಾಕುವದು ಹೀಗೆ. ಕುತೂಹಲವೆಂದರೆ, ಪುರಾತನ ಅರವತ್ನಾಲ್ಕು ಕಲೆಗಳಲ್ಲಿ ಚೋರಮಾರ್ಗವೂ ಬರುತ್ತದೆ. ಪರಶುರಾಮರಲ್ಲಿ ವಿದ್ಯೆ ಕಲಿಯಲು ಕರ್ಣ ಕಳ್ಳದಾರಿ ಬಳಸುತ್ತಾನೆ. 
ಅದೇ ವಿದ್ಯೆ ಕಸಿಯಲು ದ್ರೋಣ ಕಳ್ಳದಾರಿಯಿಂದಲೇ ಶಿಷ್ಯನ ಹೆಬ್ಬೆರಳು ಕತ್ತರಿಸುತ್ತಾನೆ. 
ಮುಂದೊಮ್ಮೆ ಇದೇ ದಾರಿಯನ್ನೇ ಬಳಸಿಕೊಳ್ಳುವ ಧರ್ಮರಾಯ ಅದೇ ದ್ರೋಣನ ಸಾವಿಗೆ 
ಕಾರಣನಾಗುತ್ತಾನೆ. ವಾಲಿಯನ್ನು ಕೊಲ್ಲಲು ರಾಮನೂ ಇದೇ ಕಳ್ಳದಾರಿ ಬಳಸುತ್ತಾನೆಂದರೆ ಇನ್ನು 
ನಮ್ಮಂಥವರ ಪಾಡೇನು?

   ಫೇಸ್ ಬುಕ್ಕಂತೂ ಸರಿಯೇ ಸರಿ. ಇಲ್ಲಿ ಒಬ್ಬರ ಸಾಹಿತ್ಯವನ್ನು ಇನ್ಯಾರೋ ಕದ್ದು ತಮ್ಮದು ಅಂತ ಬರೆದುಕೊಳ್ಳುವದನ್ನು ಆಗೀಗ ನೋಡುತ್ತಿರುತ್ತೇವೆ. ಇದರಿಂದ ಮೂಲಬರಹಗಾರರಿಗೆ ಉಂಟಾಗುವ 
ನೋವು, ಸಿಟ್ಟು ಮತ್ತು ಬೇಸರಗಳನ್ನು ನಾನು ಬಲ್ಲೆ. ಇಷ್ಟಾದರೂ ಇಂಥ ಕಳ್ಳದಾರಿಗಳ ಕುರಿತಂತೆ 
ನನ್ನ ದೃಷ್ಟಿಕೋನ ಕೊಂಚ ಭಿನ್ನವಾಗಿದೆ. ಹೀಗೆ ಇನ್ನೊಬ್ಬರ ಕತೆ, ಕವಿತೆಗಳನ್ನು ಕದಿಯುವವರ ಬಗ್ಗೆ ನನಗೆ ಸಹಾನುಭೂತಿಯಿದೆ. ಯಾಕೆಂದರೆ ಇವರಿಗೆ ಸಾಹಿತ್ಯದ ಬಗ್ಗೆ ಒಲವಿದೆ. ಆದರೆ ಸದ್ಯಕ್ಕೆ ಅವರಿಗೆ ಕವಿತಾರಚನಾ ಸಾಮರ್ಥ್ಯ ಒಲಿದಿಲ್ಲ ಅಷ್ಟೇ. ಇಂಥವರಿಗೆ ಅವಮಾನ ಮಾಡುವದಕ್ಕಿಂತ ಕೊಂಚ ಪ್ರೀತಿಯಿಂದ ತಿಳಿಹೇಳಿದರೆ ಅವರಿಗೂ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಬಹುದು. ಮುಂದೊಮ್ಮೆ ಸಾಹಿತ್ಯ ರಚನೆಯ ಅಮಲು ಅವರಿಗೂ ಅಂಟಬಹುದು.   
                                                           
   ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಪಾಕೆಟ್ ಮನಿ ಅಂತ ಎಂಥದ್ದೂ ಇರಲಿಲ್ಲ. ಕೈಗೆನೋ ಹೊಸ ಸೈಕಲ್ ಬಂದಿತ್ತು. ಗೆಳೆಯರು ಕ್ಯಾಂಟೀನಿನಲ್ಲಿ ಆಗೀಗ ಚಹಾ ಕುಡಿಸುತ್ತಿದ್ದರು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲವಾದ್ದರಿಂದ ನಾನು ಅವರಿಗೆಲ್ಲ ಒಮ್ಮೆಯಾದರೂ ಒಂದು ತೊಟ್ಟು ಚಹಾ ಕುಡಿಸುವದು ಸಾಧ್ಯವೇ ಇರಲಿಲ್ಲ. ಹೀಗಾಗಿ ಗೆಳೆಯರು ಕ್ಯಾಂಟೀನಿಗೆ ಕರೆದಾಗಲೆಲ್ಲ ನಾಲ್ಕು ಸಲ ತಪ್ಪಿಸಿಕೊಳ್ಳುವದು, ಐದನೇ ಬಾರಿ ಏನೋ ಉಪಕಾರ ಮಾಡುತ್ತಿರುವವನಂತೆ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ. 

   ದಿನಗಳು ಉರುಳುತ್ತಿದ್ದವು. ಒಂದು ದಿನ ಸಾಯಂಕಾಲ ಯಥಾಪ್ರಕಾರ ಮನೆಯ ಹತ್ತಿರವಿದ್ದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಗೆಳೆಯನೊಬ್ಬ ಮಾತುಮಾತಿನಲ್ಲೇ ತನ್ನ ಪರ್ಸಿನೊಳಗಿಂದ ಮುದ್ದೆಮುದ್ದೆಯಾಗಿದ್ದ ಐನೂರರ ನೋಟು ಹೊರತೆಗೆದು ನನ್ನ ಕೈಗಿಟ್ಟ. ಮುದ್ದೆ ಬಿಡಿಸಿ ನೋಡಿದರೆ ಏನಿತ್ತು? ಐನೂರು ನೋಟನ್ನು ನೀಟಾಗಿ ಹರಿದು ಹಾಕಲಾಗಿದ್ದ ಐದು ತುಂಡುಗಳು. ಆರನೇ ತುಂಡು ಮಾತ್ರ ಇಲ್ಲ! 'ಅದೇನು ಮಾಡ್ತೀಯೋ ಮಾಡ್ಕೋ!' ಅನ್ನುವ ಶೈಲಿಯಲ್ಲಿ ಆ ಐದೂ ತುಂಡುಗಳನ್ನು ನನ್ನ ಕೈಗಿಟ್ಟು ಹೋಗಿಬಿಟ್ಟಿದ್ದ. ಆವತ್ತು ಊಟ ಮುಗಿಸಿ ಮಲಗಿದವನಿಗೆ ಏನೇನೋ ಯೋಚನೆಗಳು. ಕಳೆದುಹೋಗಿದ್ದ ಆರನೇ ತುಂಡು ದಿಢೀರಂತ ಸಿಕ್ಕಂತೆ, ಐನೂರರ ನೋಟು ಚಲಾವಣೆಯಾದಂತೆ, ಕಾಲೇಜಿನಲ್ಲಿ ಗೆಳೆಯರಿಗೆ ಪಾರ್ಟಿ ಕೊಟ್ಟಂತೆ- ಏನೇನೋ ಕನಸು ಬಿದ್ದು ಸರಿಯಾಗಿ ನಿದ್ರಿಸಲಾಗಿರಲಿಲ್ಲ.  

   ಬೆಳಿಗ್ಗೆ ಏಳುತ್ತಿದ್ದಂತೆ ತಲೆಯಲ್ಲಿ ಏನೇನೋ ಅಸ್ಪಷ್ಟ ಕಲ್ಪನೆಗಳು. ತಕ್ಷಣ ಇನ್ನೊಬ್ಬ ಗೆಳೆಯನ 
ಮನೆಯತ್ತ ಧಾವಿಸಿ ಆತನಿಗೆ ಐನೂರರ ನೋಟಿನ ವಿಷಯ ತಿಳಿಸಿದೆ. ಇಬ್ಬರ ತಲೆಯಲ್ಲೂ ಭಯಂಕರ ಐಡಿಯಾ. ಈ ಗೆಳೆಯನ ಬಂಧುವೊಬ್ಬ ಯಾವುದೋ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿದ್ದ. ಹೀಗಾಗಿ ಆತನ ಬಳಿ ಸಾಕಷ್ಟು ಪಿಗ್ಮಿ ಹಣ ಯಾವಾಗಲೂ ಇದ್ದೇ ಇರುತ್ತಿತ್ತು. ಏನೇನೋ ಕಾರಣ ಹೇಳಿ ಆತನಿಂದ ಐನೂರರ ಹೊಸ ನೋಟೊಂದನ್ನು ಸಾಲ ಪಡೆದು ಇಬ್ಬರೂ ಮನೆಗೆ ಹಿಂದಿರುಗಿದೆವು. ನಂಬಿದರೆ ನಂಬಿ ಬಿಟ್ಟರೆ ಬಿಡಿ:  ಪಿಗ್ಮಿಯಿಂದ ಬಂದಿದ್ದ ಆ ಐನೂರರ ನೋಟನ್ನು ಎದುರಿಗಿಟ್ಟುಕೊಂಡು, ನಮ್ಮಲ್ಲಿದ್ದ ಐದು ತುಂಡುಗಳನ್ನು ಅಂಟಿನಿಂದ ಜೋಡಿಸಿ, ಕಳೆದುಹೋಗಿದ್ದ
ಆರನೇ ತುಂಡಿನಲ್ಲಿ ಏನೇನು ಇರಬೇಕಿತ್ತೋ ಅದೆಲ್ಲವನ್ನೂ ಬಿಳಿಹಾಳೆಯ ಮೇಲೆ ಕೇವಲ ಬಣ್ಣದ ಪೆನ್ಸಿಲ್ ನಿಂದ ಡ್ರಾಯಿಂಗ್ ಬಿಡಿಸಿ, ಅದನ್ನು ಆರನೇ ತುಂಡು ಕೂರುವ ಜಾಗದಲ್ಲಿ ಕೂರಿಸಿ- ಮೊದಲ ನೋಟಕ್ಕೆ ಒಂಚೂರೂ ಅನುಮಾನ ಬಾರದ ಹಾಗೆ ಕೇವಲ ಎರಡು ಗಂಟೆಗಳಲ್ಲಿ ಹೊಸ ನೋಟು ಉದ್ಭವವಾಗಿತ್ತು. 

   ಅಷ್ಟು ಅದ್ಭುತವಾಗಿ ಚಿತ್ರ ಬಿಡಿಸಿದ್ದ ಗೆಳೆಯನಿಗೆ ನಾನದನ್ನು ಏನು ಮಾಡುವೆನೆಂಬ ಕಲ್ಪನೆಯೂ ಇರಲಿಕ್ಕಿಲ್ಲ. ಅವನಿಗೆ ಅಂತಲ್ಲ, ಸ್ವತಃ ನನಗೇ ಈ ಐನೂರರ ನೋಟನ್ನು ಏನು ಮಾಡುವದೆಂದು ಗೊತ್ತಿರಲಿಲ್ಲ. ಎರಡು ದಿನ ಅದು ಸುಮ್ಮನೇ ನನ್ನ ಪುಸ್ತಕದ ಮಧ್ಯೆ ಮಲಗಿತ್ತು. ಮೂರನೇ ದಿನ ಯಾವಾಗ ಮನೆಯಲ್ಲಿ ಔಷಧಿ, ಮಾತ್ರೆ ತರಲೆಂದು ಐವತ್ತು ರೂಪಾಯಿ ಕೈಗಿಟ್ಟರೋ, ಅಲ್ಲಿಂದ ಶುರುವಾಯಿತು ಎದೆಯಲ್ಲಿ ಡವಡವ. ನನ್ನ ಈ ದಂಡಯಾತ್ರೆಯ 
ಕಳ್ಳಮಾರ್ಗದಲ್ಲಿ ಒಂದು ಅಡೆತಡೆಯಿತ್ತು. ನನ್ನದೇ ಹೊಸ ಸೈಕಲ್ಲು ಇತ್ತಾದರೂ ಅದನ್ನು ಈ ಘನಕಾರ್ಯಕ್ಕೆ ಬಳಸುವಂತಿರಲಿಲ್ಲ. ಗ್ಯಾರೇಜಿನಲ್ಲಿ ಪೇಂಟು ಹೊಡೆಯುತ್ತಿದ್ದ ಗೆಳೆಯನೊಬ್ಬನ ಚಾಕಚಕ್ಯತೆ ಪರೀಕ್ಷಿಸಲೆಂದು ನನ್ನ ಸೈಕಲ್ಲಿಗೆ ಅರ್ಧ ಹಳದಿ, ಇನ್ನರ್ಧ ಕೆಮ್ಮಣ್ಣು ಬಣ್ಣವನ್ನು ಹೊಡೆಸಿದ್ದೆ. ಹ್ಯಾಂಡಲ್ಲಿಗೆ ಕ್ಯಾಸೆಟ್ಟಿನ ಟೇಪ್ ಎಳೆಗಳನ್ನು ಗೊಂಚಲುಗೊಂಚಲಾಗಿ ಎಳೆಬಿಟ್ಟಿದ್ದೆ. ಸೈಕಲ್ ಮಧ್ಯದ ಟ್ರಯಾಂಗಲ್ ಬಾರ್ ಗಳ ಮೇಲೆ ಅದೆಂಥದೋ ಚೀನೀ ಅಕ್ಷರಗಳನ್ನು ರೇಡಿಯಂ ಸ್ಟಿಕ್ಕರ್ ನಿಂದ ಅಂಟಿಸಿ, ಯಾರಾದರೂ ಕೇಳಿದರೆ 'ಅದು ನನ್ನದೇ ಹೆಸರು ಮಾರಾಯ' ಅಂತ ಪುಂಗಿ ಬಿಡುತ್ತಿದ್ದೆ. ಹೀಗಿದ್ದ ನನ್ನ ಈ ವಾಹನಕ್ಕೆ 'ಗೌಳೇರ ಎಮ್ಮೆ' ಅಂತ 
ಹೆಸರಿಟ್ಟಿದ್ದೆ!  

   ಖಂಡಿತವಾಗಿಯೂ ಊರಲ್ಲಿ ಅಷ್ಟು ಅಸಡ್ಡಾಳ ಬಣ್ಣ ಹೊಡೆಸಿಕೊಂಡು ವಿಚಿತ್ರ ಅಲಂಕಾರ 
ಮಾಡಿಸಿಕೊಂಡಿದ್ದ ಸೈಕಲ್ಲು ನನ್ನೊಬ್ಬನದೇ ಆಗಿತ್ತೇನೋ. ಹೀಗಾಗಿ ನನ್ನ ದಂಡಯಾತ್ರೆಗೆ ಈ 
'ಎಮ್ಮೆ'ಯನ್ನು ಕರೆದೊಯ್ಯುವಂತಿರಲಿಲ್ಲ. ನೋಟಿನ ಚಿತ್ರ ಬಿಡಿಸಿದ್ದ ಗೆಳೆಯನ ಬಳಿ ಸೈಕಲ್ 
ಪಡೆದು ಪೆಡಲ್ ತುಳಿಯತೊಡಗಿದೆ. ಆಗಷ್ಟೇ ಹೊಸದಾಗಿ ಶುರುವಾಗಿದ್ದ ಔಷಧಿ ಅಂಗಡಿಯದು. 
ಸಿಕ್ಕಾಪಟ್ಟೆ ರಿಯಾಯಿತಿ ಕೊಡುತ್ತಿದ್ದುದರಿಂದ ಆ ಅಂಗಡಿ ಯಾವಾಗಲೂ ಹತ್ತು ಹದಿನೈದು 
ಗಿರಾಕಿಗಳಿಂದ ಗಿಜಿಗಿಡುತ್ತಿತ್ತು. ಕೆಲಸಗಾರ ಮತ್ತು ಮಾಲೀಕ ಎರಡೂ ಒಬ್ಬನೇ ಆಗಿದ್ದ ಆಸಾಮಿ 
ಅವಸರವಸರವಾಗಿ ಅತ್ತಂದಿತ್ತ ಓಡಾಡುತ್ತಿದ್ದ. ನಿಧಾನಕ್ಕೆ ಗುಂಪಿನಲ್ಲಿ ಸೇರಿಕೊಂಡ ನಾನು ಔಷಧಿ 
ಚೀಟಿ ತೋರಿಸುತ್ತ ಕೊಂಚ ಜೋರಾಗಿ ಕಿರುಚಿದ್ದೆ. ಪಾಪ, ಅವಸರದಲ್ಲಿದ್ದ ಆತ ನನ್ನ ಚೀಟಿ ನೋಡಿದವನೇ ಎಲ್ಲ ಔಷಧಿಗಳನ್ನು ತಂದಿಟ್ಟು ಹಣ ಕೇಳಿದ್ದಕ್ಕೆ, ಜೇಬಿನಲ್ಲಿದ್ದ ನವವಧುವಿನ ಮುಖ ಕಾಣಿಸದ ಹಾಗೆ ಸೀದಾ ಆತನ ಮುಖಕ್ಕೆ ಹಿಡಿದಿದ್ದೆ. ಓಡುತ್ತಲೇ ತನ್ನ ಗಲ್ಲಾಪೆಟ್ಟಿಗೆಯತ್ತ ಹೋದ ಆಸಾಮಿ ನೀಟಾಗಿ ನಾನೂರಾ ಐವತ್ತಕ್ಕೂ ಹೆಚ್ಚಿನ ಮೊತ್ತವನ್ನು ನನ್ನ ಕೈಗಿಟ್ಟಿದ್ದ! 

   ಅಷ್ಟೇ, ಹೋಗುವಾಗ ಮನೆಯಿಂದ ಕೇವಲ ಐದು ನಿಮಿಷದ ಹಾದಿಯಾಗಿದ್ದ ಕಳ್ಳದಾರಿ, ಅಲ್ಲಿಂದ 
ಹಿಂತಿರುಗಿ ಬರುವಾಗ ಅರ್ಧಗಂಟೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಔಷಧಿ ಅಂಗಡಿಯಿಂದ ಹೊರಡುವಾಗ ಆ ಆಸಾಮಿಗೆ ಇದ್ದಕ್ಕಿದ್ದಂತೆ ನನ್ನ ಕರಾಮತ್ತು ಗೊತ್ತಾಗಿ ದಿಢೀರಂತ ಯಾವುದಾದರೂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದುಬಿಟ್ಟರೇ? ಹಾಗಾಗಿ ಅಂಗಡಿಯಿಂದ ಸೀದಾ ಮನೆಗೆ ಹೋಗದೇ ಯಾವುದ್ಯಾವುದೋ ಸಂದಿಯಲ್ಲಿ ಸಾಗುತ್ತ ಇಡೀ ಊರನ್ನು ಸುತ್ತು ಹೊಡೆದು ಕೊನೆಗೆ ಹೇಗೋ ಮನೆ ತಲುಪಿದ್ದೆ. ಅದೊಂದು ಅದ್ಭುತ ಸಾಯಂಕಾಲವಾಗಿತ್ತು. ಕುಶಾಲಿಗೆಂದು ಹರಿದ ನೋಟು ಕೊಟ್ಟಿದ್ದ ಗೆಳೆಯನನ್ನು ಹುಡುಕಾಡಿ ವಗ್ಗರಣೆ ಗಿರಮಿಟ್ಟು, ಎರಡು ಮಿರ್ಚಿಬಜಿ ಕೊಡಿಸಿದ್ದೆ. ಆತನಿಗೆ ಅಚ್ಚರಿ. 'ಏನಾತಪೋ, ವಗ್ಗರಣಿ ಗಿಗ್ಗರಣಿ ಕೊಡಿಸ್ತಾ ಇದೀಯಲ್ಲ?' ಅಂತ ಕೇಳಿದವನಿಗೆ, 'ಏನಿಲ್ಲಪ, ಸುಮ್ಮನೇ ಬ್ಯಾಸರ ಆತು' ಅಂತ ಮುಗುಮ್ಮಾಗಿ ಹೇಳಿ ಆತನನ್ನು ಇನ್ನಷ್ಟು ಕಂಗಾಲು ಮಾಡಿದ್ದೆ. 

   ಅದೆಲ್ಲ ಆಗಿ ಇಷ್ಟು ವರ್ಷಗಳಾದ ಬಳಿಕ ಮೊನ್ನೆ ಪುರಾತನ ಗೆಳೆಯನಿಗೆ ಫೋನು ಮಾಡಿದೆ. ಆತನಿಗೆ 'ಹೀಗೀಗೆ' ಅಂತ ಹಳೆಯ ಕತೆಯನ್ನೆಲ್ಲ ಹೇಳಿದೆ. ಗೆಳೆಯ ಬಿದ್ದುಬಿದ್ದು ನಗುತ್ತಿದ್ದ. ನಿನ್ನ ಅಕೌಂಟಿಗೆ ಐನೂರು ರೂಪಾಯಿ ಹಾಕುತ್ತಿರುವದಾಗಿಯೂ, ಅದನ್ನು ಆ ಅಂಗಡಿಯವನಿಗೆ ತಲುಪಿಸಿ, ನನ್ನ ಕತೆಯನ್ನೆಲ್ಲ ಹೇಳಿ, ಆತ ಅದನ್ನೆಲ್ಲ ನಂಬಿದ್ದೇ ಆದಲ್ಲಿ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿಸಬೇಕೆಂದೂ, ನಾನು ಆತನಲ್ಲಿ ಕ್ಷಮೆ ಕೇಳುವದಾಗಿಯೂ ವಿನಂತಿಸಿಕೊಂಡೆ. ಈ ಗೆಳೆಯನಿಗೆ ಏನನಿಸಿತೋ, ತಕ್ಷಣ "ಹಂಗಾದ್ರೆ ನಾನೂ ಅರ್ಧ ಕೊಡ್ತೀನಿ, ಯಾಕೆಂದರೆ ಡ್ರಾಯಿಂಗ್ ಬಿಡಿಸಿದವನು ನಾನು" ಅಂದುಬಿಟ್ಟ. ಇಷ್ಟು ವರ್ಷಗಳಾದರೂ ಗೆಳೆಯನಿಗೆ ನಾನು ಆ ನೋಟನ್ನು ಎಲ್ಲಿ ಚಲಾಯಿಸಿದ್ದೆ ಅಂತ ಹೇಳಿರಲಿಲ್ಲ. ಈಗ ನೆನಪಿಸಿಕೊಂಡು ಆ ಅಂಗಡಿಯ ಜಾಗ, ಹೆಸರು ಹೇಳಿದೆ. 'ಅಯ್ಯೋ ಮಾರಾಯ, ಆತ ಅಂಗಡಿ ಮುಚ್ಚಿ ಸುಮಾರು ವರ್ಷಗಳಾದವು. ಎಲ್ಲಿ ಹೋದ ಗೊತ್ತಿಲ್ಲ' ಅಂತ ಕೈಯೆತ್ತಿದ.

   ಸದ್ಯಕ್ಕಂತೂ ಆ ಐನೂರು ನನ್ನ ಬಳಿಯೇ ಇದೆ. ಜೊತೆಗೊಂದು ಜಿಜ್ಞಾಸೆ ಕೂಡ. ಅಕಸ್ಮಾತ್ 
ಈ ದುಡ್ಡು ಹಿಂತಿರುಗಿಸಿದ್ದರೆ ಆಗ ದೊರಕುತ್ತಿದ್ದ ಸಮಾಧಾನ ದೊಡ್ಡದಾಗಿರುತ್ತಿತ್ತೋ ಅಥವಾ ಹಣ 
ಹಿಂದಿರುಗಿಸಲಾಗದೇ ಈಗ ನನ್ನೊಳಗೆ ಶಾಶ್ವತವಾಗಿ ಉಳಿದುಹೋಗಲಿರುವ ಅಸಮಾಧಾನ ದೊಡ್ಡದೋ?  
                                                                  -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 02.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)