Wednesday, July 19, 2017

ವಚನಗಳಲ್ಲಿನ ಸಾಂಗತ್ಯ, ಸಂಪ್ರೀತಿ ಮತ್ತು ಮಧುರಾನುಭೂತಿ!

ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ ಕೃಷ್ಣನ ಬಗ್ಗೆ ಚಿತ್ರಣ ಕಟ್ಟುತ್ತಾರೆ. ಈ ಕೃಷ್ಣನೋ ಕಂಡಕಂಡ ಹುಡುಗಿಯರಿಗೆ ಚುಡಾಯಿಸಿದ್ದಲ್ಲದೇ ಅವರ ಮನಸ್ಸನ್ನೂ ತನ್ನೊಂದಿಗೆ ಕರೆದೊಯ್ದಿರುತ್ತಾನೆ. ಹೀಗಾಗಿ ಆ ಹುಡುಗಿಯರ ಅಮ್ಮಂದಿರರಿಗೆ ಕೃಷ್ಣನ ಮೇಲೆ ಸಿಟ್ಟು. ಆದರೆ ಆ ಸಿಟ್ಟಾದರೂ ಎಂಥದ್ದು? ಆ ಸಿಟ್ಟಿನಲ್ಲೂ ಪ್ರೀತಿಯಿದೆ, ಮಮತೆಯಿದೆ. 'ನನ್ನ ಮಗಳನ್ನಷ್ಟೇ ನೀನು ಕದ್ದೊಯ್ಯಬಾರದೇ' ಅನ್ನುವ ಹಪಾಹಪಿಯಿದೆ. ಈ ಅಮ್ಮಂದಿರೆಲ್ಲ ಕೃಷ್ಣನ ತಾಯಿಯ ಬಳಿಗೆ ಬಂದು  ಆತನ ಘನಕಾರ್ಯಗಳ ಬಗ್ಗೆ ದೂರುತ್ತಾರೆ:

ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ 
ಬಡವರ ಮಗನೇನೆ ಹೊಡೆಯಲಿಕ್ಕೆ?
ಅಳಿಯನ ವೇಷದಿ ಮಗಳ ಕರೆಯ ಬಂದ 
ಕಲಹ ಮಾಡಿ ತಾ ಕಳಿಸೆಂದ 
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ 
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ..

   ಕರ್ನಾಟಕದ ದಾಸಸಾಹಿತ್ಯ ಮೆಲುದನಿಯ ಭಕ್ತಿಪಂಥಕ್ಕೆ ಸೇರುವಂಥದ್ದು. ಅಲ್ಲಿ ಕೃಷ್ಣ, ಶ್ರೀರಂಗ ಮುಂತಾದ ವೈಷ್ಣವ ಭಕ್ತಿಯ ಸಾರವೇ ಹರಿದಿದೆ. ಮುಂದೆ ಅದು ಭಾರತೀಯ ಸಂಗೀತ ಪ್ರಾಕಾರದಲ್ಲಿ ಕರ್ನಾಟಕ ಸಂಗೀತವನ್ನು ಮುಂಚೂಣಿಗೆ ತಂದು ನಿಲ್ಲಿಸುತ್ತದೆ. ಈ ಪರಂಪರೆಯಲ್ಲಿ ಹಾಡು ಕಟ್ಟಿ, ರಾಗ ಸಂಯೋಜಿಸಿ. ಸ್ವತಃ ಕೈಯಲ್ಲೊಂದು ವಾದ್ಯ ಹಿಡಿದು ನೃತ್ಯ ಮಾಡುತ್ತ ಭಗವಂತನ ಸನ್ನಿಧಿಯಲ್ಲಿ ಮೈಮರೆತವರೂ ಇದ್ದಾರೆ. ಹಾಗೆಯೇ ಮೀರಾಳಂಥವರು ಭಗವಂತನನ್ನೇ ತನ್ನ ಗಂಡನೆಂದು ಭಾವಿಸಿ ಮೈಮರೆತವರೂ ಉಂಟು. 

   ಅಕ್ಕಮಹಾದೇವಿ ಕೂಡ ಇದಕ್ಕೆ ಹೊರತಲ್ಲ. ದಾಸಸಾಹಿತ್ಯದೊಂದಿಗೆ ಸಮಾನಾಂತರವಾಗಿ ಬೆಳೆದುಬಂದ ವಚನಸಾಹಿತ್ಯದಲ್ಲಿನ ಅಕ್ಕ ಕೂಡ ಚೆನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದೇ ಭಾವಿಸಿ ಕದಳೀವನದಲ್ಲಿ ಕಳೆದುಹೋದವಳು. ಭಕ್ತಿಮಾರ್ಗದಲ್ಲಿ ಹೆಣ್ಣು ಅಂತನ್ನುವದು ಪುರುಷ ಶಕ್ತಿಯನ್ನು ಹುಡುಕುತ್ತ ಹೋಗುವದೇನೋ ಸಹಜ. ಆದರೆ ಒಂದು ಗಂಡು ಇನ್ನೊಂದು ಗಂಡಿನಲ್ಲಿ ಅನುರಕ್ತನಾಗುವದು? ಇದು ಕುತೂಹಲಕರ. ವಚನ ಪರಂಪರೆಯ ಒಂದು ಚಿಕ್ಕ ಘಟಕವಾಗಿ ಈ ವಚನಕಾರರು ತಮ್ಮದೇ ಒಂದು ಭಾವ ಮೂಡಿಸಿದರು. ಅದು 'ಶರಣಸತಿ-ಲಿಂಗಪತಿ' ಅನ್ನುವ ಭಾವ. ಇಲ್ಲಿ ಕೃತಿಕಾರ ಭಕ್ತಿಯ ಮಾರ್ಗದಲ್ಲಿ ಭಗವಂತನನ್ನು ತನ್ನ ಗಂಡನೆಂದೂ, ತಾನು ಆತನ ಹೆಂಡತಿಯೆಂದೂ ಗುರುತಿಸಿಕೊಳ್ಳುತ್ತಾರೆ. ಸ್ವಾರಸ್ಯವೆಂದರೆ, ಹೀಗೆ ತಮ್ಮನ್ನು ತಾವು ಭಗವಂತನ ಹೆಂಡತಿಯೆಂದು ಘೋಷಿಸಿಕೊಂಡವರು ಗಂಡಸರು!  

   ಇಂಥವರ ಪೈಕಿ ಇಲ್ಲೊಬ್ಬನಿರುವನು. ಈತ 'ನನ್ನ ಗಂಡನು ಅತಿಕಾಮಿ ವಿಪರೀತನು' ಅಂತಲೇ ಜಗತ್ತಿಗೆ ಕೂಗಿ ಹೇಳಿದವನು. ಹೆಸರು ಉರಿಲಿಂಗದೇವ. ಕ್ರಿ.ಶ 1160 ರ ಕಾಲಘಟ್ಟದಲ್ಲಿದ್ದ ಈ ವಚನಕಾರನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸಲೆಂದು ಆ ಕಾಲಘಟ್ಟದ ಅನ್ಯಮತೀಯರು ಈತನ ಗುಡಿಸಲಿಗೆ ಬೆಂಕಿ ಹಚ್ಚಿದರೂ ಈತ ವಿಚಲಿತನಾಗದೇ ಪೂಜಾಕೈಂಕರ್ಯದಲ್ಲಿ ಮಗ್ನನಾಗಿದ್ದ ಅಂತನ್ನುವ ಕತೆಯಿದೆ. ಹೀಗಿದ್ದ ಉರಿಲಿಂಗದೇವ ಹೆಣ್ಣಿನ ಪ್ರತಿಯೊಂದೂ ಭಾವಗಳನ್ನು ತನ್ನೊಳಗೆ ಸ್ಫುರಿಸಿಕೊಂಡು, 'ಉರಿಲಿಂಗದೇವ' ಎಂಬ ಅಂಕಿತದೊಂದಿದೆ ಶಿವನೆಂಬ ಗಂಡನನ್ನು ಕೊಂಡಾಡಿದವನು. ಒಂದು ಹೆಣ್ಣು ತನ್ನ ಸಖಿಯರೊಂದಿಗೆ ದಾಂಪತ್ಯಜೀವನದ ಸರಸ, ಸ್ವಾರಸ್ಯಗಳನ್ನೆಲ್ಲ ಹೇಗೆ ಹೇಳಿಕೊಳ್ಳುತ್ತಾಳೋ, ಅದೇ ಧಾಟಿಯಲ್ಲಿ ಉರಿಲಿಂಗದೇವನೂ ಶಿವನೊಂದಿಗಿನ ದಾಂಪತ್ಯಜೀವನದ ಸ್ವಾರಸ್ಯಗಳನ್ನು ಬರೆದುಕೊಂಡವನು. ಈತನ ವಚನಗಳಲ್ಲಿ ಭಾಷೆಯ ಬಗ್ಗೆ ಭಿಡೆ, ಮುಲಾಜು ಎಂಬುದಿಲ್ಲ. ಆದರೆ ಆ ಮಧುರಭಾವ ಎಷ್ಟು ನೇರವಾಗಿದೆಯೆಂದರೆ,

ಎಮ್ಮ ನಲ್ಲನ ಕೂಡಿದ ಕೂಟವ ಇದಿರಿಗೆ ಹೇಳಬಾರದವ್ವಾ.
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ.
ಉರಿಲಿಂಗದೇವ ಬಂದು ನಿರಿಯ ಸೆರಗ ಸಡಿಲಿಸಲೊಡನೆ
ನಾನೊ ತಾನೊ ಏನೆಂದರಿಯೆನು. 
-ಅಂತ ತನ್ನ 'ಸಂಸಾರ'ದ ಗುಟ್ಟನ್ನು ಬಿಚ್ಚಿಡುತ್ತಾನೆ. ಈತನ ಸ್ವಾಮಿನಿಷ್ಠೆ ಇಷ್ಟಕ್ಕೇ ನಿಲ್ಲುವದಿಲ್ಲ. ತನ್ನ ಗಂಡ(ಶಿವ) ಕಾಮನನ್ನು ಕೊಂದು ಪಟ್ಟಕ್ಕೆ ಬಂದಂಥ ಕಾಮರಾಜ ಅಂತನ್ನುತ್ತಾನೆ. ಆತ ಗಂಡರೆಲ್ಲರನ್ನು ಹೆಂಡಿರನ್ನು ಮಾಡಿಕೊಂಡವನು ಅಂತನ್ನುತ್ತಾನೆ. ಇಂಥ ಕಾಮಿಯು ನನ್ನನ್ನು ಕಾಮಿಸಿ ನನಗೆ ಕಾಮಸಿದ್ಧಿಯನ್ನು ಕರುಣಿಸಿದನು  ಅಂತನ್ನುತ್ತಲೇ, ಈ ನಲ್ಲನ ಬೇಟದ ಕೂಟದ ಪರಿಯನು ಏನೆಂದು ಹೇಳಲಿ? ಈತ ಅತಿಕಾಮಿ ವಿಪರೀತನು- ಅಂತ ಹೇಳಿಬಿಡುತ್ತಾನೆ! 

   ಹೀಗೆ ತಮ್ಮನ್ನು ತಾವು ಸತಿಯರೆಂದು ಘೋಷಿಸಿಕೊಂಡ ವಚನಕಾರರು ಬೆರಳೆಣಿಕೆಯಷ್ಟು. ಸಿದ್ಧರಾಮೇಶ್ವರ, ಉರಿಲಿಂಗದೇವ, ಗಜೇಶ ಮಸಣಯ್ಯ ಮತ್ತು ಘನಲಿಂಗಿದೇವ ಪ್ರಮುಖರು. ಆದರೆ ವಚನಗಳಲ್ಲಿನ ಈ ಸತಿಪತಿ ಭಾವ ನೇರವಾಗಿ ವಚನ ಪರಂಪರೆಯಲ್ಲಿ ಮೈತಾಳಿದ್ದಲ್ಲ. ಬಹುಶಃ ಅದು ತಮಿಳುನಾಡಿನ ನಾಯನ್ಮಾರರ (ತೇವಾರಂ) ಭಕ್ತಿಗೀತೆ ಮತ್ತು ವೈಷ್ಣವ ಆಳ್ವಾರುಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದು, ಅದು ನಮ್ಮಲ್ಲಿನ ವಚನಕಾರರನ್ನು ಪ್ರೇರೇಪಿಸಿದಂತಿದೆ ಅಂತನ್ನುವ ವಾದ 'ವಚನಾನುಶೀಲನ' ಕೃತಿಯಲ್ಲಿ (ಲೇ। ಡಾ. ಎಸ್ ವಿದ್ಯಾಶಂಕರ್) ಗೋಚರಿಸುತ್ತದೆ. 

   ಹಾಗೆ ನೋಡಿದರೆ ವಚನಸಾಹಿತ್ಯದ ಮೇರುಧ್ವನಿಗಳಾದ ಪ್ರಭುದೇವ ಮತ್ತು ಅಂಬಿಗರ ಚೌಡಯ್ಯರು ಈ ಕಾನ್ಸೆಪ್ಟನ್ನು ಧಿಕ್ಕರಿಸಿದ್ದುಂಟು. ಪ್ರಭುದೇವ ಕೆಲವೊಂದು ವಚನಗಳಲ್ಲಿ ಈ ಸತಿಪತಿಯ ಭಾವದ ಬಗ್ಗೆ ತಕರಾರು, ಆಕ್ಷೇಪಣೆ ತೆಗೆಯುತ್ತಾನೆ. ಚೌಡಯ್ಯನಂತೂ ಈ ಸತಿಪತಿ ಎಂಬುದನ್ನೇ ‘ಮೋಸದ ವೇಷ’ವೆಂದು ಜರಿಯುತ್ತಾನೆ. ಭಗವಂತನೆಡೆಗೆ ನಮ್ಮ ಅನುಸಂಧಾನ ಹೇಗಿರಬೇಕೆನ್ನುವ ಉದಾಹರಣೆ ಕೊಡುವ ಚೌಡಯ್ಯ, 'ನೀರಿಗೆ ನೀರು ಕೂಡಿ ಬೆರೆತಲ್ಲಿ, ಅದನ್ನು ಭೇದಿಸಿ ಬೇರೆ ಹೇಗೆ ಮಾಡುವಿರಿ?ಸತಿಪತಿಯರೆಂದು ಹೇಗೆ ವಿಭಜಿಸುವಿರಿ' ಅಂತನ್ನುವ ಪ್ರಶ್ನೆ ಎಸೆಯುತ್ತಾನೆ.

   ಆದರೆ ಸತಿಪತಿಯ ಭಾವದಲ್ಲಿರುವ ಸಿದ್ಧರಾಮನೆಂಬ ವಚನಕಾರ ಇದಕ್ಕೆಲ್ಲ ಸೊಪ್ಪು ಹಾಕುವದಿಲ್ಲ. 
‘ಕಪಿಲಸಿದ್ಧಮಲ್ಲಿಕಾರ್ಜುನ’ ಅಂತನ್ನುವ ಅಂಕಿತದಲ್ಲಿ ಬರೆದಿರುವ ಈತ, ಸತಿಯ ಎಲ್ಲ ಕೋಮಲ ಗುಣಗಳನ್ನೂ ಅಂಟಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ, ತನ್ನ ಪತಿಯಾದ ಭಗವಂತನೊಂದಿಗೆ ಮಧುರಭಾವದ ಅನುಸಂಧಾನ ನಡೆಸುತ್ತಾನೆ. ಸಿದ್ಧರಾಮನ ಈ ಅನುಸಂಧಾನ ಎಷ್ಟು ಮಜವಾಗಿದೆಯೆಂದರೆ, ತನ್ನನ್ನು ತವರಿಗೆ ಹೊರಟುನಿಂತ ಹೆಣ್ಣಿಗೆ ಹೋಲಿಸಿಕೊಳ್ಳುತ್ತಾನೆ. ತಾನು ತವರಿಗೆ ಹೊರಟುನಿಂತರೂ ಯಾವ ಪ್ರೇಮವಿರಹವನ್ನೂ ತೋರಿಸದೇ 
ತನ್ನಷ್ಟಕ್ಕೆ ತಾನು ಯಾವುದ್ಯಾವುದೋ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಭಂಡಗಂಡನ ಕಟುಹೃದಯದ ಬಗ್ಗೆ ಸಿದ್ಧರಾಮೇಶ್ವರ ಹುಸಿಮುನಿಸಿನಿಂದ ಬೈದುಕೊಳ್ಳುವದು ಹೀಗೆ:

ಗಂಡ ಬಾರೆನೆನ್ನ ತವರೂರಿಗೆ ಹೋಗುವೆನೆನಲು,
ನೋಡೆ ನೋಡೆಲಗವ್ವಾ,
ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು
ತಾ ಬೇರೆ ಬೇಟೆಕಾರನಾದ. 
-ಅಂತ ಏಕಪ್ರಕಾರವಾಗಿ ಬೈದಾಡಿಕೊಂಡು ತನ್ನ ಮತ್ತು ಭಗವಂತನ ಮೇಳೈಸುವಿಕೆಯ ಕುರಿತು, 'ಹುಚ್ಚನ ಸಂಗ ನಿಶ್ಚಯವಾಯಿತು' ಅಂತ ತನ್ನಷ್ಟಕ್ಕೆ ತಾನೇ ಸಂತೈಸಿಕೊಳ್ಳುತ್ತಾನೆ. ಆದರೆ ಸಿದ್ಧರಾಮನ ಮುನಿಸು ಕ್ಷಣಿಕವಾದದ್ದು. ಯಾವುದೋ ಸಿಟ್ಟಿನ ಭರದಲ್ಲಿ ಗಂಡನ ಗುಣಾವಗುಣಗಳನ್ನು ಸಖಿಯರಲ್ಲಿ ದೂರುವ ಕ್ಷಣದಲ್ಲಿಯೇ, ಎದುರಿಗಿರುವವರು ಎಲ್ಲಿ ತನ್ನ ದೊರೆಯನ್ನು ಕೀಳಾಗಿ ಕಾಣುವರೋ ಅಂತ ಕಳವಳಗೊಂಡು ಥಟ್ಟಂತ ತಮ್ಮ ಪತಿಯ ಪಕ್ಷಕ್ಕೆ ನೆಗೆದುಬಿಡುವ ನಾರಿಯರ ಮನಸ್ಸನ್ನು ಸಿದ್ಧರಾಮನೂ ಆಹ್ವಾನಿಸಿಕೊಂಡಂತಿದೆ. ಹಾಗಾಗಿ ಈ ವಚನಕಾರನ ನುಡಿಯೊಂದು ತನ್ನ ಸ್ವಾಮಿಯ ವಿಶೇಷತೆಯನ್ನು ಬಣ್ಣಿಸುವ ಪರಿ ನೋಡಿ:

ಎಲ್ಲರ ಪರಿಯಲ್ಲ ಅವನ ಪರಿ ಹೊಸತು;
ಕಾಲಾರರಲ್ಲಿ ನಡೆವ, ಕಿವಿಯಲಿ ಉಂಬ,
ಮೂಗಿನಲ್ಲಿ ನೋಡುವ, ಬಾಯಲ್ಲಿ ಭಾವಿಸುವ,
ಕಣ್ಣಿನ್ಲ ಮೂರ್ಛೆಹೋಹ,
ಬಂದುದನತಿಗಳೆವ, ಬಾರದುದ ತನ್ನದೆಂಬ;
ಇಂಥಾ ವಿನೋದವಿಚಿತ್ರನವ್ವಾ.. 
-ಅಂತನ್ನುವ ವಚನಗಳನ್ನು ಓದುವಾಗ ನನಗೆ ದಿಢೀರಂತ ನೆನಪಾಗಿದ್ದು ಶಿಶುನಾಳ ಶರೀಫರು ಮತ್ತು ಅವರ 'ಎಲ್ಲರಂಥವನಲ್ಲ ನನಗಂಡ ಬಲ್ಲಿದನು ಪುಂಡ..'

   ಇನ್ನು, ಗಜೇಶ ಮಸಣಯ್ಯ ಅಂತನ್ನುವ ವಚನಕಾರ ಧಾಟಿ ಬೇರೆಯಿದೆ. ಈತ ಶಿವನೆಂಬ ಪತಿಯ ಗೈರುಹಾಜರಿಯನ್ನು ಅನುಭವಿಸುತ್ತಿರುವ ವಿರಹಿ. ಗಂಡನನ್ನು ಕಾಣದೇ ವಿರಹದಲ್ಲಿರುವ ತನ್ನ ಪರಿಸ್ಥಿತಿಯನ್ನು ವರ್ಣಿಸಲು ಇತರೇ ವಚನಕಾರರಂತೆ ಲೈಂಗಿಕಪ್ರಧಾನ ಪ್ರತಿಮೆಗಳನ್ನು ಬಳಸಿಕೊಳ್ಳುವದಿಲ್ಲ. ಅದರ ಬದಲಿಗೆ ಆತ ಹಾಯ್ಕುಕವಿಗಳಂತೆ ಪ್ರಕೃತಿಯ ಮೊರೆ ಹೋಗುತ್ತಾನೆ. ತನ್ನ ಈ ಪರಿಸ್ಥಿತಿ ನಲಿದು ಹಾಡಿಕೊಂಡಿದ್ದ ಕೋಗಿಲೆಗಳು ಬಿಟ್ಟುಹೋದ ಬನದಂತಾಗಿದೆ ಅನ್ನುತ್ತಾನೆ. ಪರಿಮಳವಿಲ್ಲದ ಪುಷ್ಪದಂತಾಗಿದ್ದೇನೆ ಅನ್ನುತ್ತಾನೆ. ಚಂದ್ರಮನಿಲ್ಲದ ನಕ್ಷತ್ರಗಳಂತಾಗಿದ್ದೇನೆ ಅಂತ ಹಲುಬುತ್ತಾನೆ. ಈತನದ್ದೂ ಕ್ಷಣಿಕ ಪ್ರಲಾಪವೇ. ಯಾಕೆಂದರೆ ಮರುಕ್ಷಣವೇ ಗಜೇಶ ಮಸಣಯ್ಯನ ರಾಗ ಬದಲಾಗುತ್ತದೆ:

ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ.
ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ.
ಅವ್ವಾ ಅವ್ವಾ ಆತನ ಕೈಯ ಹಿಡಿದಡೆ
ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ.
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ
ನಾನಪ್ಪ ಮರೆದೆನಿನ್ನೆಂತವ್ವಾ.          

   ಈ ಲೋಕವೇ ತೀರ ಮಜದ್ದು. ಇಲ್ಲಿ ಭಗವಂತನನ್ನು ಬೈದರು. ಉರಿದೆದ್ದರು. ಕೊನೆಗೆ ಅವನನ್ನೇ ಕೊಂಡಾಡಿದರು. ರಮಿಸಿದರು. ಕೇವಲ ಒಂದು ಸಾಂಗತ್ಯಕ್ಕಾಗಿ. ಒಂದು ಸಂಪ್ರೀತಿಗಾಗಿ.         
                                                                    -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 19.07.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

Wednesday, July 5, 2017

ಭಾವಬಂಧಗಳ ಮುಲಾಜಿನಲ್ಲಿ ಗಣಪನೂ ಬಂದಿ!

ಕುಂಡೆ ಹಿಂದೆ ಕಮಲವ್ವ!
ಊರಲ್ಲಿದ್ದ ಜನ ಆಕೆಯನ್ನು ಕರೆಯುತ್ತಿದ್ದಿದ್ದೇ ಹಾಗೆತೊಂಬತ್ತು ವರ್ಷದ ಮುದುಕಿಬಿಲ್ಲಿನಂತೆ 
ಬಾಗಿದ್ದ ಬೆನ್ನು ಬೆನ್ನಿನ ಹಿಂದೆ ತನ್ನ ಎರಡೂ ಕೈಗಳನ್ನು ಕಟ್ಟಿಕೊಂಡು ಬಾಗಿಕೊಂಡು 
ನಡೆಯುತ್ತಿದ್ದ ಆಕೆಯನ್ನು ಜನ ಕುಂಡೆ ಹಿಂದೆ ಕಮಲವ್ವ ಅಂತಲೇ ಕರೆಯುತ್ತಿದ್ದರು
ಪ್ರತಿದಿನ ಸಂಜೆ ನಮಗೆಲ್ಲ ಕತೆ ಹೇಳುತ್ತಿದ್ದಳುಗಂಧರ್ವ ಕಪ್ಪೆಯಾಗುವದುಯಾವುದೋ 
ರಾಜಕುಮಾರಿ  ಕಪ್ಪೆಯನ್ನು ಚುಂಬಿಸುತ್ತಲೇ ಕಪ್ಪೆ ಮತ್ತೆ ಗಂಧರ್ವನಾಗಿ ರೂಪಾಂತರ 
ಹೊಂದುವದುಕೊನೆಗೆ ಇಬ್ಬರೂ ಸುಖವಾಗಿದ್ದರು ಮುದುಕಿಯ ಬಾಯಿಯಲ್ಲಿ ಒಬ್ಬನೇ 
ರಾಜಕುಮಾರ ಎಷ್ಟು ಸಲ ಕಪ್ಪೆಯಾಗಿಹಾವಾಗಿಕುದುರೆಯಾಗಿಗರುಡನಾಗಿ ತನ್ನ ಪ್ರೇಯಸಿಯಿಂದ 
ಚುಂಬಿಸಲ್ಪಟ್ಟು ಗಂಧರ್ವನಾಗುತ್ತಿದ್ದನೋಪ್ರತಿಬಾರಿಯೂ ನಾವು ಇದನ್ನೆಲ್ಲ ಹೊಸ ಕತೆಯಂತಲೇ 
ಸುಖಿಸುತ್ತಿದ್ದೆವು.

   ಪೌರಾಣಿಕ ಮತ್ತು ಜನಪದರ ಕತೆಗಳಲ್ಲಿ ಇಂಥ ಅನೇಕ ದೃಷ್ಟಾಂತಗಳು ಬರುತ್ತವೆಮಕ್ಕಳಿಗೆ ಇವೆಲ್ಲ 
ಬಲು ಚೆಂದಇಲ್ಲಿನ ಕತೆಗಳಲ್ಲಿ ತರ್ಕವಿಲ್ಲ. ಪ್ರಾಕ್ಟಿಕಲ್ feasibility ಇಲ್ಲ. ಗೀತೆಯೂ ಅಷ್ಟೇ. ಅದು 
ಬೇರೆ ಧರ್ಮಗ್ರಂಥಗಳಂತೆ ಏನನ್ನೂ ನಿರ್ಬಂಧಿಸುವದಿಲ್ಲ. Do's and don'ts ಹೇಳುವದಿಲ್ಲಬದಲಿಗೆ
ನಿಮಗೆ ಏನೇನು ಮಾಡಬೇಕೆನಿಸುತ್ತದೆಯೋ ಅದನ್ನೆಲ್ಲ ಮಾಡಿ ಅಂತ ಹೇಳುತ್ತದೆಸಾಲ 
ಮಾಡುತ್ತೀರಾಜೂಜಾಡುತ್ತೀರಾಕಂಡಕಂಡ ಹೆಣ್ಣನ್ನು ಬಯಸುತ್ತೀರಾಏನೂ ಬಿಡದೇ 
ಎಲ್ಲವನ್ನೂ ಮಾಡಿಆದರೆ ದಿನದ ಅಂತ್ಯಕ್ಕೆ ಲೆಕ್ಕ ಮಾತ್ರ ಚುಕ್ತಾ ಮಾಡಿ ಅನ್ನುತ್ತದೆ ಬ್ಯಾಲೆನ್ಸ್ 
ಶೀಟಿಗೆ 'ಕರ್ಮಅಂತನ್ನುವ ಹೆಡ್ಡಿಂಗ್ ಕೊಡುತ್ತದೆ.

   ಬಿಡಿ, ಕತೆ ಹೇಳುತ್ತಿದ್ದ ಮುದುಕಿ ಈಗ ಸತ್ತು ಹೋಗಿದ್ದಾಳೆಕತೆ ಕೇಳಲು ನಾವೀಗ ಮಕ್ಕಳಾಗಿ 
ಉಳಿದಿಲ್ಲಆದರೆ   ಕತೆಗಳಲ್ಲಿದ್ದ ಕಲ್ಪನೆ ಮತ್ತು ಉಪಸಂಹಾರ ಇವತ್ತು ನನ್ನನ್ನು ತರ್ಕಕ್ಕೆ 
ಒಡ್ಡಿಕೊಳ್ಳುವಂತೆ ಚೋದಿಸುತ್ತವೆಇದೇ ರೀತಿಯ ಚೋದಿಸುವಿಕೆ ಮಕ್ಕಳ ಪಠ್ಯಪುಸ್ತಕದಲ್ಲೂ 
ಇರಬೇಕು ಅಂತ ಸರಕಾರ ಬಯಸುತ್ತದೆಹೀಗಾಗಿ ದಶಕದಿಂದ ಬೋಧಿಸಿಕೊಂಡು ಬಂದಿದ್ದ 
'ಗೋವಿನ ಹಾಡುಕಳೆದ ಮೂರ್ನಾಲ್ಕು ವರ್ಷಗಳಿಂದ ಮಕ್ಕಳ ಪುಸ್ತಕದಿಂದ ಕಾಣೆಯಾಗಿದೆ. ನಿಜಮನುಷ್ಯನಿಗೆ ಸಿದ್ಧಾಂತಗಳು ಬೇಕುತರ್ಕ ಬೇಕುಆದರೆ ಅದೇ ಒಂದಿಡೀ ಬದುಕಲ್ಲವಲ್ಲ
ಹುಲಿ ಮಾಂಸವನ್ನಲ್ಲದೇ ಹುಲ್ಲು ತಿಂದು ಬದುಕಬಲ್ಲದೇ ಅಂತನ್ನುವ ತರ್ಕ ಮತ್ತು 
ಸುಳ್ಳನೆಂದೂ ನುಡಿಯದಿರಿ/ಕೊಟ್ಟ ಮಾತಿಗೆ ತಪ್ಪದಿರಿ ಅಂತನ್ನುವ ತಿಳುವಳಿಕೆ
ಇವೆರಡೂ ಹುಟ್ಟಬಹುದಾದ ಮತ್ತು ಮಥಿಸಬಹುದಾದ ವಯೋಮಿತಿ ಯಾವುದುಬಿತ್ತಿದ 
ಮರುದಿನವೇ ಆಲದ ಬಿಳಲನ್ನು ಕಾಣುವ ಹುಮ್ಮಸ್ಸು ನಮಗೆ ಎಲ್ಲಿಂದ ಬಂತು?

   ಮೊನ್ನೆ ಒಂದು ಪುಟ್ಟ ಪೋಸ್ಟರ್ ನೋಡಿದೆಕಪ್ಪು ಬಣ್ಣದ ಕ್ಯಾನ್ವಾಸಿನಲ್ಲಿ ಬಿಳಿ ಬಣ್ಣದ ಅಕ್ಷರಗಳು.
'I saw that.'
    -Karma
ಏನಿದರ ಅರ್ಥಯಾರು ನಮ್ಮನ್ನು ಗಮನಿಸುತ್ತಿದ್ದಾರೆಯಾರಿಗೂ ಗೊತ್ತಿರದಯಾರೂ 
ಗುರುತಿಸಲಾರದ ಊರಿನಲ್ಲಿ ಏನೆಲ್ಲ ಅನುಭವಿಸಲು ಬಂದಿರುವ ಯಾರಿಗೋ  ಕರ್ಮದ ಬೋರ್ಡು 
ಪದೇ ಪದೇ ನೆನಪಾಗಿ ಕಾಡತೊಡಗಿದರೆ ಅದು ವ್ಯಾಸರ ತಪ್ಪೇ? ಅನುಮಾನವೇ ಬೇಡವಿದೇಶಿಯರೂ 
ನಕ್ಕಿದ್ದರುನಾವೂ ಕೂಡತಮಾಷೆ ನೋಡಿ ಪಾಪಪುಣ್ಯಪುನರ್ಜನ್ಮಗಳ ಕಲ್ಪನೆಯೂ ಇರದಿದ್ದ ಪಶ್ಚಿಮದವರಿಗೆ  'ಕರ್ಮ' ಡೆಫಿನಿಷನ್ ಆದರೂ ಹೇಗೆ ಸಿಕ್ಕೀತುಅದಕ್ಕೊಂದು ಸಮಾನಾರ್ಥಕ 
ಪದವಾದರೂ ಹೇಗೆ ಸಿಕ್ಕೀತುಹೀಗಾಗಿಇವತ್ತು ಅವರು ನಮ್ಮ ಕರ್ಮವನ್ನು ಅವರವರದೇ 
ಭಾಷೆಯಲ್ಲಿ 'ಕರ್ಮಅಂತಲೇ ಸಂಬೋಧಿಸುತ್ತಾರೆ.

   ಹೀಗಾಗಿನನಗೆ ಗೀತೆಯಲ್ಲಿ ಕಾಣುವದು ಕರ್ಮ ಒಂದೇಸಾಮಾಜಿಕ ಜಾಲತಾಣಗಳದ್ದೂ ಒಂದು 
ಅದ್ಭುತ ಪ್ರಪಂಚ. ಮಹಾಭಾರತದಲ್ಲಿ ಎಷ್ಟು ನಮೂನೆಯ ಪಾತ್ರಗಳು ಇರಬಹುದೋಅಷ್ಟೂ 
ಪಾತ್ರಗಳು ಇಲ್ಲಿವೆಮಹಾಭಾರತದಲ್ಲಿನಿನ್ನೆ ರಾಜನಾಗಿದ್ದವನು ನಾಳೆ ಮೊಸಳೆಯೋ ಮತ್ತೊಂದೋ 
ಆಗುತ್ತಾನೆಹಾಗಾಗಲು ನಿನ್ನೆ ಮತ್ತು ನಾಳೆಯ ಮಧ್ಯದ ದಿನವಾದ ಇವತ್ತು ಅಲ್ಲಿ ಇನ್ನೇನೋ 
ಘಟಿಸಿರುತ್ತದೆಫೇಸ್ ಬುಕ್ಕಿನಲ್ಲೂ ಅಷ್ಟೇಇಲ್ಲೊಬ್ಬ ಧರ್ಮರಾಯಅಲ್ಲೊಬ್ಬ ಕರ್ಣಇನ್ನೆಲ್ಲೋ 
ದುರ್ಯೋಧನಮತ್ತೆಲ್ಲೋ ಕುಂತಿತೊಟ್ಟಬಾಣವ ತೊಡದವರುಹಕ್ಕಿಯ ಕಣ್ಣಷ್ಟೇ ಕಂಡವರು
ರಕ್ತಕ್ಕಾಗಿ ತುರುಬು ಬಿಚ್ಚಿದವರುಪಗಡೆಯಾಟವ ಗೆಲ್ಲಲೆಂದೇ ದಾಳ ಉರುಳಿಸಿದವರುಉಂಗುರ 
ಕಳೆದುಕೊಂಡವರುಹಾಗಂತ ಡಂಗುರ ಸಾರಿದವರುಭಂಗುರದ ಕ್ಷಣಕ್ಕಾಗಿ ಕಾದು ನಿಂದವರು-
ವ್ಯಾಸರೇನಿಮ್ಮ ಕತೆ ಎಲ್ಲಿಗೆ ಬಂತು?
                                                                                        
   ಇಂಥ ಪುರಾಣದ ಸಂಗತಿಗಳನ್ನು ಓದುವಾಗ ಅನೇಕ ಸಲ ಅನಿಸುತ್ತಿರುತ್ತದೆಸಾಹಿತ್ಯಕ್ಕೆ 
ಸಂಬಂಧಿಸಿದಂತೆ ಏನೂ ಓದಬಾರದುಮೂರನೆಯವರು ಬರೆದ  ಕೃತಿಗಳನ್ನು ನೋಡಬಾರದು
ಕತೆಯ ಎಳೆಸ್ಫೂರ್ತಿ ಮುಂತಾದ ಯಾವ ಸುಡುಗಾಡನ್ನು ತೆಗೆದುಕೊಳ್ಳಬಾರದುಏನನ್ನೂ 
ಓದದೇವಿಮರ್ಶಿಸದೇಹೊರಗಿನ ಸಾಹಿತ್ಯದ ಪರಿಮಳವನ್ನೂ ಆಸ್ವಾದಿಸದೇ ಕೇವಲ ನಮ್ಮ 
ಅನುಭವದ ಆಧಾರದ ಮೇಲೆ ನಮ್ಮೊಳಗಿನ ಕತೆ ಹೇಳುತ್ತ ಹೋದರೆ ಅದು ಸ್ಥಿರವಾಗಿ 
ನಿಲ್ಲಬಹುದೇನೋ ಅಂತ.

   ಯಾಕೆಂದರೆ ಕ್ರೌಂಚ ಪಕ್ಷಿಗಳನ್ನು ನೋಡಿ ವಲ್ಮೀಕನೆಂಬ ಬೇಡ ರಾಮಾಯಣದಿಂದಲೇ 
ಮಹರ್ಷಿಯಾದಇನ್ಯಾರದೋ ಸಹಾಯದಿಂದ ಮಹಾಭಾರತ ಬರೆದ ವ್ಯಾಸನ ಕತೆ ಇನ್ನೂ 
ಪರಿಷ್ಕೃತವಾಗುತ್ತ ತನ್ನ ಅಸ್ತಿತ್ವನ್ನು ನಿರೂಪಿಸುತ್ತಲೇ ಇದೆಯಾವುದೋ ಒಂದು ಘಟನೆ 
ವಲ್ಮೀಕನನ್ನು ರಾಮಾಯಣ ಬರೆಯುವಂತೆ ಪ್ರೇರೇಪಿಸಿತು ಅನ್ನುವ ಮಾತಿದ್ದರೂ ವರ್ಷಗಳ 
ಕಾಲ ವಲ್ಮೀಕ ಅದರ ಬಗ್ಗೆ ಧೇನಿಸಿದ್ದ ಅಂತಲೇ ನಾನು ಭಾವಿಸುತ್ತೇನೆವ್ಯಾಸನಿಗೂ ಇದೇ ಮಾತು 
ಅನ್ವಯಅಂದರೆ, ಇವರೆಲ್ಲ ವರ್ಷಗಟ್ಟಲೇ ಯೋಚಿಸಿದರುಪ್ರೂಫ್ ತಿದ್ದಿಕೊಂಡರುಚೌಕಟ್ಟು 
ಹಾಕಿಕೊಂಡು ಧೇನಿಸಿದರುಮತ್ತು ಒಂದನ್ನು ಬರೆದಾದ ಮೇಲೆ ಮತ್ತೇನನ್ನೂ ಬರೆಯಲೇ ಇಲ್ಲ!

   ಹೀಗೆ ಧೇನಿಸುತ್ತಲೇ ಇವರು ಏನೆಲ್ಲ ಸೆರೆ ಹಿಡಿದರುಒಂದು ಮನೆಒಂದು ಸಮಾಜಒಂದು ದೇಶ 
ಮತ್ತು ಒಂದು ಬ್ರಹ್ಮಾಂಡವನ್ನು ಆಳಬೇಕೆಂದರೆ ನಿಮ್ಮಲ್ಲಿ ಏನೆಲ್ಲ ಇರಬೇಕೋಅದೆಲ್ಲವನ್ನೂ 
ತಮ್ಮ ಕೃತಿಯೊಳಗೆ ಎಳೆದು ತಂದರುಒಂದು ಪಾತ್ರವೊಂದನ್ನು ಅತ್ಯುನ್ನತವಾಗಿ ಚಿತ್ರಿಸುವಾಗ 
ಎಷ್ಟು ಸೂಕ್ಷ್ಮ ವಿಷಯಗಳನ್ನು ಸೆರೆ ಹಿಡಿದರುಇವತ್ತು ಯಾವುದೇ ಸಾಹಿತಿಯ ಕಾದಂಬರಿಯನ್ನು 
ನೋಡಿಅಲ್ಲಿ ಸಿಗಬಹುದಾದ ಪಾತ್ರಗಳ ಸಂಖ್ಯೆ ಇಪ್ಪತ್ತು ಅಥವಾ ಮೂವತ್ತುಮನೆಕಚೇರಿಯ ಜೊತೆಗೆ ಒಂದಿಷ್ಟು ಪರಿಸರಗಳು.

   ಇಲ್ಲಿ ನೋಡಿಕೃಷ್ಣನಿಗೆ ಹದಿನಾರು ಸಾವಿರ ಹೆಂಡಿರಷ್ಟೇಅವರಲ್ಲಿ ಎಂಟು ಜನ ಅಷ್ಟ 
ಮಹಿಷಿಯರುಒಬ್ಬೊಬ್ಬರಿಗೆ ಹತ್ತು ಮಕ್ಕಳಂತೆ  ಎಂಟು ಜನ ಫೆವರಿಟ್ ಪತ್ನಿಯರಿಗೆ ಒಟ್ಟು 
ಎಂಭತ್ಮೂರು ಮಕ್ಕಳು ಎಂಟು ಜನ ಹೆಂಡಂದಿರ ಹೆಸರುಮಕ್ಕಳ ಹೆಸರುಇವರ ಅಜ್ಜ 
ಅಜ್ಜಿಯರು (ತಾಯಿಯ ಮಾತಾಪಿತರು), ಅವರ ದೇಶ ಯಾವುದು ಅಂತೆಲ್ಲ ವಿವರಣೆಯನ್ನು 
ಕೃತಿಕಾರ ಕೊಡುತ್ತಾನೆಹೀಗಾಗಿ ನಾನು ಪುರಾಣದ ಕತೆಗಳಲ್ಲಿ ತರ್ಕ ಹುಡುಕುವದಿಲ್ಲನಾನು ಅಲ್ಲಿ 
ಗಮನಿಸುವದು ಕೃತಿಕಾರನ ಕುಶಲವಾದ ಕಸೂತಿ ಕ್ರಿಯೆಬ್ರಾಝಿಲ್  ಹೆಂಗಳೆಯರ ಸಾಂಬಾ ನೃತ್ಯ 
ಗಮನಿಸುವಾಗ ಪುರಾಣದ ಕಿನ್ನರಕಿಂಪುರಷರಗಂಧರ್ವರ ವಿವರಣೆ ನೆನಪಿಗೆ ಬರುತ್ತದೆಟರ್ಕಿಯ 
ಬೆಲ್ಲಿ ಡಾನ್ಸ್ ಆಸ್ವಾದಿಸುವಾಗ ರಂಭೆಮೇನಕೆಯರ ಸೃಷ್ಟಿ ನೆನಪಿಗೆ ಬರುತ್ತದೆ.

  ಅಷ್ಟು ಸರಳವಲ್ಲ  ಕ್ರಿಯೆಒಂದು ಲೋಕ ರಚಿಸಿಅದನ್ನು ಸೃಷ್ಟಿಸ್ಥಿತಿ ಮತ್ತು ಲಯಗಳೆನ್ನುವ 
ಹಿಡಿತದಲ್ಲಿರಿಸಿಅಲ್ಲಿರುವ ಜನರಿಗೆ ಮನರಂಜನೆ ಒದಗಿಸುತ್ತಕಾಲಾನುಕಾಲಕ್ಕೆ ಇವರೆಲ್ಲರಿಗೂ 
ಕಾಮ,ಕ್ರೋಧಲೋಭಮೋಹಮದಮತ್ಸರಗಳನ್ನು ಹುಟ್ಟಿಸಿಗಾಯನಕ್ಕೆ ಗಂಧರ್ವರೆಂದು 
ನಿಯಮಿಸಿಕುದುರೆ ಮುಖ ಧರಿಸಿದ ಮನುಜರಿಗೆ ಕಿನ್ನರರೆಂದು ಕರೆದುಮನುಷ್ಯನ ಮುಖ ಧರಿಸಿದ 
ಕುದುರೆಗಳಿಗೆ ಕಿಂಪುರುಷರೆಂದು ಕರೆದುದುವ ಶಂಖಕ್ಕೂ ಠೇಂಕರಿಸುವ ಬಿಲ್ಲಿಗೂ ಒಂದೊಂದು 
ಹೆಸರಿಟ್ಟು,ಯಾವುದ್ಯಾವುದೋ ಪರಿಸರದಲ್ಲಿ ಯಾರ್ಯಾರಿಗೋ ಶಾಪ ಕೊಟ್ಟುಇನ್ಯಾವ 
ಕಾಲದಲ್ಲೋ ಇನ್ನೆಲ್ಲೋ ಅವರೆಲ್ಲರ ವಿಮೋಚನೆಯನ್ನೂ ಮಾಡಿ ಮೂಲಕ ಇಡೀ ಕತೆಯ 
ಸರ್ಕ್ಯೂಟ್ ಬ್ರೇಕ್ ಆಗದಂತೆ ಕೃತಿಯೊಂದನ್ನು ಹೆಣೆಯುವದು ಸಣ್ಣ ಮಾತೇ?

   ಉಂಹೂ, ಇದನ್ನೆಲ್ಲ ನಾವು ಅಭಿನಂದಿಸಲಾರೆವುಒಪ್ಪಲಾರೆವುಸ್ವದೇಶಿ ನಿರ್ಮಿತ ರಾಕೆಟ್ 
ಉಡಾಯಿಸುವ ಹಂತಕ್ಕೇರಿದ ಮೇಲೂ ರಾಕೆಟ್ಟಿನ ಪುಟ್ಟ ಪ್ರತಿಬಿಂಬವನ್ನು ತಿರುಪತಿಯಲ್ಲಿ ಅರ್ಚನೆ 
ಮಾಡಿದ್ಯಾಕೆ ಅಂತ ಗೇಲಿ ಮಾಡಬಲ್ಲೆವು. ವಿಜ್ಞಾನದ ಪರಿಧಿಯಲ್ಲಿಯೇ ರೋಗಿಯನ್ನು 
ಗುಣಪಡಿಸುವ ಆಸ್ಪತ್ರೆಗಳ ಹಜಾರದಲ್ಲಿ ಗಣೇಶನ ಮೂರ್ತಿ ಯಾಕಿದೆ ಅಂತ ಲೇವಡಿ ಮಾಡಬಲ್ಲೆವು.

   ಆದರೆ ತರ್ಕ ಬಿಟ್ಟು ಅಂತಃಕರಣದಿಂದ ಗಮನಿಸುವವರಿಗೆ ಇಲ್ಲಿ ಬೇರೆಯದೇ ಜಗತ್ತು 
ಗೋಚರಿಸುತ್ತದೆಜಗದ ಆಸ್ಪತ್ರೆಯ ಗಣಪನ ಮೂರುತಿಯ ಮುಂದೆ ಎಲ್ಲರೂ ಒಂದಿಲ್ಲೊಂದು 
ಭಾವಗಳಲ್ಲಿ ಬಂದಿಮೂರ್ತಿಯ ಮುಂದೆ ನಿಂತಿರುವ ರೋಗಿಯ ಸಂಬಂಧಿ ಕ್ಷಣದ ಆತಂಕದಲ್ಲಿ 
ಬಂದಿ. ಅದನ್ನು ಗೇಲಿ ಮಾಡುತ್ತಿರುವವ ಕ್ಷಣದ ಆತುರದಲ್ಲಿ ಬಂದಿ. ಇವರಿಬ್ಬರ ಭಾವಕ್ಕೂ 
ಕ್ಷಣದ outlet ಆಗಬೇಕಿರುವ ಸಂದರ್ಭದ ಮುಲಾಜಿನಲ್ಲಿ ಗಣಪನೂ ಬಂದಿ!

-  
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 05.07.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)