Showing posts with label ಸಂಬಂಧಗಳು. Show all posts
Showing posts with label ಸಂಬಂಧಗಳು. Show all posts

Wednesday, October 24, 2018

ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 24.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, August 29, 2018

ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಒಂದು ಶೋಕಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 29.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, July 4, 2018

ನಿಮ್ಮ ಹೆಸರಿಗೆ ಇಂಥದೊಂದು ಪತ್ರ ಬಂದಿತ್ತೇ?


ಯಾಕೋ ನಿರಂಜನಮೂರ್ತಿಗಳು ಕೊಂಚ ಭಾವುಕರಾಗಿದ್ದರು. ದಶಕಗಳ ಕಾಲ ಕೆಲಸ ಮಾಡಿದ್ದ 
ಆಫೀಸದು. ಸಣ್ಣ ಊರಿನ ಸಣ್ಣ ಪೋಸ್ಟಾಫೀಸು. ಅಲ್ಲಿ ಪೋಸ್ಟ್ ಮಾಸ್ಟರೂ ಅವರೇ, ಪೋಸ್ಟ್ ಮ್ಯಾನೂ 
ಅವರೇ, ಜವಾನನೂ ಅವರೇ. ಹೀಗಾಗಿ ಊರಿನ ಜನರೇ ಅವರಿಗೊಂದು ಪುಟ್ಟ ಬೀಳ್ಕೊಡುಗೆ ಸಮಾರಂಭ 
ಮಾಡಿದ್ದರು. ಅಲ್ಲಿದ್ದವರೆಲ್ಲ ಮೂರ್ತಿಗಳನ್ನು ಸನ್ಮಾನಿಸಿ ಕೊಂಡಾಡಿದರು. ಯಾರೋ ಮೂರ್ತಿಗಳ 
ಪ್ರಾಮಾಣಿಕತೆಯನ್ನು ಹೊಗಳಿದರು. ಇನ್ಯಾರೋ ಅವರ ಸಹಾಯಗುಣವನ್ನು ವರ್ಣಿಸಿದರು. ಮತ್ಯಾರೋ 
ಮೂರ್ತಿಗಳ ಸಂತೈಸುವ ಪರಿಯನ್ನು ನೆನಪಿಸಿಕೊಳ್ಳುವಷ್ಟರಲ್ಲಿ ನಿರಂಜನಮೂರ್ತಿಗಳು ಕುಂತ  
ಜಾಗದಿಂದ ಎದ್ದು ನಿಂತರು. ಎದುರಿಗಿದ್ದ ಗುಂಪಿಗೆ ಕೈಜೋಡಿಸುತ್ತ ತಮ್ಮ ಎಂದಿನ ಶೈಲಿಯಲ್ಲಿ 
"ನಾನು ಬರೇ ಪತ್ರ ಹಂಚುವವನು ಕಣ್ರಪ್ಪಾ, ನಾನೇ ಪತ್ರ ಅಲ್ಲ" ಅಂತ ಒಂದು ಸಾಲಿನ ಭಾಷಣ ಮುಗಿಸಿ ನಿವೃತ್ತರಾದರು.

   ಗೊಂದಲ ಏನಿಲ್ಲ. ಅಲ್ಲಿದ್ದವರಿಗೆಲ್ಲ ನಿರಂಜನಮೂರ್ತಿಗಳ ಈ ಮಾತುಗಳು ಮಾಮೂಲಿಯಾಗಿ ಹೋಗಿವೆ. ನಾನು ಬರೇ ಪತ್ರ ಹಂಚುವವನು, ನಾನೇ ಪತ್ರ ಅಲ್ಲ ಅಂತನ್ನುವ ಮಾತುಗಳನ್ನು ಅವರೆಲ್ಲ ವರ್ಷಾನುಗಟ್ಟಲೇ ಕೇಳಿಸಿಕೊಳ್ಳುತ್ತ ಬಂದಿದ್ದಾರೆ. ಆದರೂ ಆ ಮಾತುಗಳ ಅರ್ಥ ಏನು ಅಂತ ಯಾರಿಗೂ ಗೊತ್ತಾಗಿಲ್ಲ. ಹಾಗಂತ ಯಾರೂ ಮೂರ್ತಿಗಳಿಗೆ ಕೇಳಲೂ ಹೋಗಿಲ್ಲ. ಇಷ್ಟಕ್ಕೂ ಪತ್ರ ಬಟವಾಡೆ ಮಾಡುವದಕ್ಕೆಂದು ತಮ್ಮ ಇಪ್ಪತ್ತನೇ ವಯಸ್ಸಿಗೆ ಸೈಕಲ್ ಸಮೇತ ಬಂದ ನಿರಂಜನಮೂರ್ತಿಗಳು ಇದೇ ಊರಿನಲ್ಲೇ  ತಮ್ಮ ಇಡೀ ಬದುಕನ್ನು ಸವೆಸಿಬಿಟ್ಟಿದ್ದಾರೆ. ಹೆಂಡರಿಲ್ಲ, ಮಕ್ಕಳಿಲ್ಲ. ಹಾಗಾಗಿ ವರ್ಷಕ್ಕೊಮ್ಮೆ ಜಾತ್ರೆ, ಪ್ರವಾಸ ಅಂತೆಲ್ಲ ಎಲ್ಲಿಗೂ ಹೋಗಲಿಲ್ಲ. ಹೀಗಾಗಿ ಊರಿನ ಯಾವ ಮನೆಯಲ್ಲಿ ಎಷ್ಟು ಜನರಿದ್ದಾರೆ, ಅವರಲ್ಲಿ ಯಾರ್ಯಾರು ಏನೇನು ಕೆಲಸ ಮಾಡಿಕೊಂಡಿದ್ದಾರೆ ಎಂಬುದೆಲ್ಲ ಮೂರ್ತಿಗಳಿಗೆ ಅಂಗೈ ಗೆರೆಯಷ್ಟೇ ಸ್ಪಷ್ಟ. ಒಟ್ಟಿನಲ್ಲಿ ಊರೊಳಗೆ ಯಾರೇ ಕಷ್ಟಕ್ಕೆ ಸಿಲುಕಿಕೊಂಡರೂ ಮೂರ್ತಿಗಳ ಸಂತೈಸುವಿಕೆ ಮತ್ತು ಅವರ ಸಹಾಯಹಸ್ತ ಬೇಕೇಬೇಕು ಎಂಬಂತಾಗಿದೆ. ಹಾಗೆ ಋಣಕ್ಕೆ ಬಿದ್ದವರೆಲ್ಲ ಮೂರ್ತಿಗಳನ್ನು ದೇವಸಮಾನರಾಗಿ ಕಾಣುವಾಗಲೆಲ್ಲ ನಿರಂಜನಮೂರ್ತಿಗಳು ಯಥಾಪ್ರಕಾರ ಕೈಯೆತ್ತಿಬಿಡುತ್ತಾರೆ: 'ನಾನು ಬರೇ ಪತ್ರ ಹಂಚುವವನು ಕಣಯ್ಯಾ, ನಾನೇ ಪತ್ರ ಅಲ್ಲ!'  
                                                                            *
   ಮನೆಯಲ್ಲಿದ್ದ ಒಂದೇ ಒಂದು ಕಿಟಕಿಯಲ್ಲಿ ಇಣುಕುತ್ತ ನಿರಂಜನಮೂರ್ತಿಗಳು ಹೊರಗಿನ ದೃಶ್ಯಗಳನ್ನು ವಿವರಿಸುತ್ತಿದ್ದರು. ಇದ್ದೊಂದು ಮಂಚದಲ್ಲಿ ಮಲಗಿದ್ದ ಹುಡುಗ ಮೂರ್ತಿಗಳ ಮಾತುಗಳನ್ನು ಕೇಳುತ್ತಿದ್ದ. ಮಧ್ಯೆ ಮಧ್ಯೆ ಮಾತುಗಳು ಕೇಳಿಸುತ್ತಿಲ್ಲವೆಂದೂ ಸನ್ನೆ ಮಾಡುತ್ತಿದ್ದ. ಆಗೆಲ್ಲ ಮೂರ್ತಿಗಳು ಹುಡುಗನ ಕಿವಿ ಬಳಿ ಬಂದು ಮತ್ತೊಮ್ಮೆ ಕಿಟಕಿಯ ದೃಶ್ಯಗಳನ್ನು ವಿವರಿಸುತ್ತಿದ್ದರು. ಈತ ಮಂದಸ್ಮಿತನಾಗುತ್ತಿದ್ದ. 

   ಯಾವ ಹುಡುಗನೋ ಎಲ್ಲಿಂದ ಬಂದನೋ ಎಲ್ಲಿಗೆ ಹೊರಟಿದ್ದನೋ ಒಂದೂ ಗೊತ್ತಿಲ್ಲ. ಮೂರ್ತಿಗಳು ನಿವೃತ್ತರಾಗಿ ಎರಡು ದಿನ ಕಳೆದಿದ್ದವಷ್ಟೇ. ಊರಿನವನ್ಯಾರೋ ರಾತ್ರಿ ಹೊತ್ತು ಬಂದು ಸುದ್ದಿ ತಲುಪಿಸಿದ್ದರು. ಊರಾಚೆಯಿದ್ದ ಹೆದ್ದಾರಿಯಲ್ಲಿ ಈ ಹುಡುಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಪ್ರಜ್ಞೆಯಿರಲಿಲ್ಲ. ನಾಲ್ಕನೇ ದಿನ ಆಸ್ಪತ್ರೆಯಲ್ಲಿ ಎಚ್ಚರವಾಗಿದ್ದ. ಈ ಪರಿಸ್ಥಿತಿಯಲ್ಲಿ ನಡೆದಾಡುವದು ಹಾಗಿರಲಿ, ಈತನ ನಾಲಿಗೆ ಮತ್ತು ಕಿವಿ ಕೆಲಸ ಮಾಡಿದರೂ ಸಾಕು ಅಂತ ಡಾಕ್ಟರು ಕೈ ಚೆಲ್ಲಿದ್ದರು. ಈ ಹುಡುಗ ನಿರಂಜನಮೂರ್ತಿಗಳ ಮನೆ ಸೇರಿಕೊಂಡಿದ್ದು ಹಾಗೆ. ಮೊದಮೊದಲಿಗೆ ಮಗ್ಗುಲು ಹೊರಳಿಸಲಾಗದೇ ಬಿದ್ದಲ್ಲೇ ಬಿದ್ದುಕೊಂಡು ಶೂನ್ಯನೋಟ ಬೀರುತ್ತಿದ್ದ. ಈಗೀಗ ಅಸ್ಪಷ್ಟವಾಗಿ ತೊದಲತೊಡಗಿದ್ದ. ಸಣ್ಣಗೇ ಕಿವಿ ಕೇಳಿಸತೊಡಗಿತ್ತು. ಮನರಂಜನೆಗೆಂದು ಮೂರ್ತಿಗಳು ಆಗೀಗ ಕಿಟಕಿಯಿಂದ ಹೊರಜಗತ್ತಿನಲ್ಲಿ ನಡೆಯುತ್ತಿದ್ದ ಕ್ರಿಯೆಗಳನ್ನು ವಿವರಿಸುತ್ತಿದ್ದರು. ಈ ವಿವರಣೆಗಳಲ್ಲಿ ಯಾವುದ್ಯಾವುದೋ ಗಂಡಹೆಂಡಿರ ಜಗಳಗಳಿರುತ್ತಿದ್ದವು. ರಸ್ತೆ ತುದಿಯಲ್ಲಿನ ಪಾರ್ಕಿನಲ್ಲಿ ಪಲ್ಲವಿಸುತ್ತಿದ್ದ ಪ್ರೇಮಸಲ್ಲಾಪಗಳಿರುತ್ತಿದ್ದವು. ಬಲಗಡೆ ದೇವಸ್ಥಾನದಲ್ಲಿನ ಭಜನೆಯಿರುತ್ತಿತ್ತು. ಎಡಗಡೆಯಲ್ಲಿದ್ದ ಅರಳಿಕಟ್ಟೆಯ ಇಸ್ಪೀಟು ಆಟದ ಹೊಡೆದಾಟಗಳೂ ಇದ್ದವು.

   ಹುಡುಗ ಎಲ್ಲವನ್ನೂ ಗ್ರಹಿಸುತ್ತಿದ್ದ. ಮೂರ್ತಿಗಳ ಮೂಲಕ ಹೊರಜಗತ್ತನ್ನು ನೋಡುತ್ತಿದ್ದ. ಹೀಗಿರುವಾಗ, ಒಮ್ಮೆ ವೀಕ್ಷಕವಿವರಣೆ ಎಂದಿಗಿಂತಲೂ ರಸವತ್ತಾಗಿತ್ತು. ಮೂರ್ತಿಗಳ ಮನೆಯ ಮುಂದೆ ಒಂದು ಖಾಲಿ ಬಯಲಿತ್ತು. ಸರ್ಕಾರದ ಕೃಪಾಕಟಾಕ್ಷದಿಂದಾಗಿ ಈ ಸಣ್ಣ ಊರಿಗೂ ಒಂದಿಷ್ಟು ಅನುದಾನ ಬಂತು. ಹೀಗಾಗಿ ಸದರಿ ಬಯಲಿನಲ್ಲಿ ಊರಿನವರ ಅನುಕೂಲಕ್ಕಾಗಿ ಬಾವಿಯೊಂದನ್ನು ಕಟ್ಟುವದಕ್ಕಾಗಿ ನೆಲ ಅಗೆಯತೊಡಗಿದರು. ಸತತವಾಗಿ ಎರಡು ತಿಂಗಳು ಅಗೆದ ನಂತರ ಹತ್ತಡಿ ವ್ಯಾಸದ ತೆರೆದ ಬಾವಿ ಸಿದ್ಧವಾಗಿತ್ತು. ಆದರೆ ಐವತ್ತಡಿ ಆಳಕ್ಕೆ ಅಗೆದಿದ್ದರೂ ನೀರು ಬಂದಿರಲಿಲ್ಲ. ಇನ್ನೊಂದಿಷ್ಟು ಅಗೆಯಬೇಕೆನ್ನುವಷ್ಟರಲ್ಲೇ ಅನುದಾನವೆಲ್ಲ ಮುಗಿದುಹೋಗಿ ಈ ಬಾವಿ ನೀರಿಲ್ಲದೇ ಪಾಳುಬಾವಿಯಾಗಿ
ಪರಿವರ್ತನೆಗೊಂಡಿತ್ತು. ಇಂತಿಪ್ಪ ಪರಿಸ್ಥಿತಿಯಲ್ಲಿ ಊರಿಗೆ ಹೊಸದಾಗಿ ಬಂದಿದ್ದ ಯಾರೋ ಒಬ್ಬ ಆಸಾಮಿ ರಾತ್ರಿಹೊತ್ತು ತೆರೆದಬಾವಿ ಕಾಣಿಸದೇ ಬಿದ್ದುಬಿಟ್ಟಿದ್ದ!

   ಮೂರ್ತಿಗಳ ವೀಕ್ಷಕವಿವರಣೆ ಸಾಗುತ್ತಿತ್ತು. ರಾತ್ರಿ ಬಾವಿಯ ಸುತ್ತಲೂ ಜನ ನೆರೆದಿದ್ದರು. ಹಗ್ಗ ಎಸೆಯಲು ಹೋದವರಿಗೆ ಬಾವಿಯ ಒಳಗಿದ್ದವನು ಕಾಣಿಸುತ್ತಿರಲಿಲ್ಲ. ಒಳಗಿದ್ದವನಿಗೆ ಹೊರಗಿದ್ದವರ ಚಟುವಟಿಕೆ ಅಸ್ಪಷ್ಟವಾಗಿ ಕಾಣಿಸುತ್ತಿತ್ತಷ್ಟೇ. ಸುತ್ತಲಿದ್ದವರು ಪೇಚಾಡತೊಡಗಿದ್ದರು. ಕೆಲವರು ಒಳಗಿದ್ದವನಿಗೆ ಧೈರ್ಯ ತುಂಬುತ್ತಿದ್ದರು. ಬಿದ್ದ ವ್ಯಕ್ತಿ ಹತ್ತಡಿ ಏರುತ್ತಿದ್ದ. ಕಾಲುಜಾರಿ ಮತ್ತೇ ತಳ ಕಾಣುತ್ತಿದ್ದ. ಒಮ್ಮೆಯಂತೂ ಅರ್ಧಕ್ಕಿಂತಲೂ ದೂರ ಕ್ರಮಿಸಿ ಮತ್ತೇ ತಳ ಸೇರಿದ. ಸಮಯ ಜಾರುತ್ತಿದ್ದಂತೆ ಇದ್ದಕ್ಕಿದ್ದಂತೆ ಜನರಿಗೇನಾಯಿತೋ ಏನೋ, ಬೆಳಗಾಗುವದರೊಳಗೆ ಈ ಆಸಾಮಿ ಒಂದೋ ಕೈಕಾಲು ಮುರಿದುಕೊಂಡಿರುತ್ತಾನೆಂದೂ ಅಥವಾ ಸತ್ತೇ ಹೋಗಿರುತ್ತಾನೆಂದೂ ಮಾತನಾಡತೊಡಗಿದರು. ಇನ್ನು ಕೆಲವರಂತೂ ಕೈಸನ್ನೆ ಮಾಡುತ್ತ ಬೆಳಕು ಹರಿಯುವವರೆಗೂ ಅಲ್ಲೇ ತೆಪ್ಪಗಿರುವಂತೆಯೂ ಕೂಗತೊಡಗತೊಡಗಿದರು. ಗುಂಪಿಗೆ ಗುಂಪೇ ಆತನ ಕತೆ ಮುಗಿಸಲು ಸಿದ್ಧವಾದಂತಿತ್ತು. ಆದರೆ ಒಳಗಿದ್ದ ಮೊಂಡು ಆಸಾಮಿ ಮಧ್ಯರಾತ್ರಿಯ ವೇಳೆಗೆ ಅದು ಹೇಗೋ ಮೇಲೆ ಹತ್ತಿಕೊಂಡು ಬಂದುಬಿಟ್ಟಿದ್ದ. ಹೋ.. ಎಂದು ಅರಚಿದ ಜನ ಆತನನ್ನು ಅಭಿನಂದಿಸತೊಡಗಿದ್ದರು. ಆದರೆ ಈ ಆಸಾಮಿ ಮಾತ್ರ ತಾನು ಕಿವುಡನೆಂದೂ, ಬಾವಿಗೆ ಬಿದ್ದ ತನ್ನಂಥ ಅಬ್ಬೇಪಾರಿಯನ್ನು ಹುರಿದುಂಬಿಸಿದ ಈ ಊರಿನವರಿಗೆ ನನ್ನ ನಮಸ್ಕಾರಗಳು ಅಂತ ತಣ್ಣಗೇ ಕೈಜೋಡಿಸಿ ನಡೆದುಬಿಟ್ಟನೆಂದೂ ಮೂರ್ತಿಗಳು ನಗಾಡಿಕೊಂಡು ವಿವರಣೆ ನೀಡುತ್ತಿದ್ದರು. 
                                                                            *
   ಇದೆಲ್ಲ ಆಗಿ ಮೂವತ್ತು ವರ್ಷಗಳೇ ಆಗಿವೆ. ನಿರಂಜನಮೂರ್ತಿಗಳ ಮನೆಯಲ್ಲಿ ಅಖಂಡ ಎಂಟು ತಿಂಗಳು ಮಲಗಿದ್ದ ಆ ಹುಡುಗ ಇವತ್ತು ಮಲ್ಟಿನ್ಯಾಷನಲ್ ಕಂಪೆನಿಯೊಂದರ ವೈಸ್ ಪ್ರೆಸಿಡೆಂಟ್. ಇದ್ದಕ್ಕಿದ್ದಂತೆ ತನಗೆ ಬಯಾಗ್ರಫಿ ಬರೆಯುವ ತೆವಲು ಯಾಕೆ ಬಂತು ಅಂತ ಯೋಚಿಸುತ್ತ ಡೈರಿಯಲ್ಲಿ ತನ್ನಷ್ಟಕ್ಕೆ ತಾನೇ ಬರೆದುಕೊಳ್ಳುತ್ತಿದ್ದಾನೆ:

"ಬಹುಶಃ ಈ ನನ್ನ ಕತೆ ಈ ಪುಟಕ್ಕೇ ಕೊನೆಯಾಗಬಹುದು. ಆವತ್ತು ನಿರಂಜನಮೂರ್ತಿಗಳ ಮನೆಯಲ್ಲಿ ಹಾಗೆ ಮಂಚದ ಮೇಲೆ ಮಲಗಿದ್ದಾಗ ಒಂದು ಬೆಳಗಿನ ಜಾವ ನನಗೆ ಅತ್ಯಂತ ಖುಷಿಯಾಗಿತ್ತು. ಯಾಕೆಂದರೆ ನನಗರಿವಿಲ್ಲದಂತೆ ನಾನು ಎದ್ದು ನಡೆಯಬಲ್ಲವನಾಗಿದ್ದೆ. ಅಲ್ಲಿದ್ದ ಕಿಟಕಿಯಾಚೆ ಹಕ್ಕಿಗಳ ಕೂಗು ಕೇಳಿಸತೊಡಗಿತ್ತು. ಮೂರ್ತಿಗಳು ಪಕ್ಕದಲ್ಲೇ ಮಲಗಿದ್ದರು. ಇಷ್ಟು ದಿನ ಜೀವಜಗತ್ತಿನ ಎಲ್ಲ ನಡೆಗಳನ್ನು ಚಿತ್ರಿಸಿಕೊಟ್ಟ ಕಿಟಕಿಯದು. ನಿಧಾನಕ್ಕೆ ಕಿಟಕಿಯತ್ತ ಹೋದೆ. ಆದರೆ ಅಲ್ಲೇನಿತ್ತು? ಬರೀ ಒಂದು ಗೋಡೆ. ಯಾವುದೋ ಗೋದಾಮಿನ ಗೋಡೆ! ಹಾಗಾದರೆ ಇಷ್ಟು ದಿನ ಮೂರ್ತಿಗಳು ವಿವರಿಸುತ್ತಿದ್ದ ರಸ್ತೆಗಳು, ಅರಳಿಕಟ್ಟೆ, ಪಾರ್ಕು, ದೇವಸ್ಥಾನ, ತೆರೆದಬಾವಿ ಎಲ್ಲಿ ಹೋದವು? ನಿರಂಜನಮೂರ್ತಿಗಳು ನನಗೆಂದೇ ಒಂದು ಲೋಕ ಸೃಷ್ಟಿಸಿದರೇ? ಎಂಥ ವಿಚಿತ್ರ ನೋಡಿ: ಇವತ್ತೇನೋ ಈ ಜಗತ್ತು ನನ್ನನ್ನು ಸಕ್ಸೆಸ್ ಫುಲ್ ಮನುಷ್ಯ ಅಂತ ಗುರುತಿಸುತ್ತದೆ. ಆದರೆ ಈ ಜಗತ್ತಿಗೆ ಸಕ್ಸೆಸ್ ಫುಲ್ ಅಂತನಿಸಿಕೊಳ್ಳುವ ಜನರಿಗಿಂತ ಹೆಚ್ಚಾಗಿ ಗಾರುಡಿಗರ ಅವಶ್ಯಕತೆಯಿದೆ. ಶಮನಕಾರರ, ಜಾದೂಗಾರರ ಅವಶ್ಯಕತೆಯಿದೆ. ಮುಖ್ಯವಾಗಿ, ಈ ಜಗತ್ತನ್ನು ಸುಂದರವಾಗಿ ಕಟ್ಟಿಕೊಡಬಲ್ಲ ಕತೆಗಾರರ ಅವಶ್ಯಕತೆಯಿದೆ. 

   ಸುಳ್ಳಲ್ಲ, ನಿರಂಜನಮೂರ್ತಿಗಳಿಗೆ ನಿಜಕ್ಕೂ ಮರುಳತನವಿತ್ತು. ಊರಿನ ಜನ ಅವರನ್ನು ಹೊಗಳಿದಾಗಲೆಲ್ಲ, 'ನಾನು ಬರೇ ಪತ್ರ ಹಂಚುವವನು, ನಾನೇ ಪತ್ರವಲ್ಲ' ಅಂತೆಲ್ಲ ವಿಚಿತ್ರವಾಗಿ ಮಾತನಾಡುತ್ತಿದ್ದರು. ಜನರಿಗೆ ತಲುಪಿಸುತ್ತಿದ್ದ ಪತ್ರಗಳಲ್ಲಿನ ಖುಷಿಯ ಸಂಗತಿಗಳನ್ನು ಅಸಲಿಗೆ ತಾನು ಸೃಷ್ಟಿಸಿದ್ದಲ್ಲ, ಅದನ್ನು ಇನ್ಯಾರೋ ಬರೆದಿದ್ದು, ತಾನು ಬರೇ ವಾಹಕನೇ ಹೊರತು ತಾನೇ ಪತ್ರದೊಳಗಿನ ಖುಷಿಯ ಸಂಗತಿಯಲ್ಲ ಅಂತನ್ನುವ ಮರುಳತನ ಅವರಲ್ಲಿತ್ತು. ಇದೆಲ್ಲ ಇವತ್ತು ನನಗೆ ಗೊತ್ತಾಗುತ್ತಿದೆ. ಆ ಮರುಳತನವೇ ಅವರನ್ನು ಕತೆಗಾರರನ್ನಾಗಿಸಿದ್ದು. ಹಾಗೆ ಪ್ರತಿದಿನ ಕಿಟಕಿ ನೋಡುತ್ತ ನನಗೆ ಕತೆ ಕಟ್ಟಿಕೊಟ್ಟ ನಿರಂಜನಮೂರ್ತಿಗಳು ಬರೇ ಪತ್ರ
ಬಟವಾಡೆ ಮಾಡುವ ಪೋಸ್ಟ್ ಮ್ಯಾನ್ ಆಗಿರಲಿಲ್ಲ. ಈ ಲೋಕ ನನ್ನಂಥವರಿಗೆಂದು ಬರೆದು ಕಳಿಸಿದ ಸುಂದರ ಸಂದೇಶವಿದ್ದಂಥ ಒಂದು ಪತ್ರವೇ ಆಗಿದ್ದರು.."  
                                                                               -
 ತಾಂತ್ರಿಕ ಕಾರಣಗಳಿಂದಾಗಿ ಇ-ಪೇಪರ್ ಲಿಂಕ್ ಕೊಡಲಾಗುತ್ತಿಲ್ಲ, ಮೊಬೈಲ್ ಲಿಂಕ್ ಇಲ್ಲಿದೆ.  
(ವಿಜಯಕರ್ನಾಟಕದಲ್ಲಿ 04.07.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, June 20, 2018

ಕವಿತಾಲೋಕದಲ್ಲಿ ಬದಲಾಗುವ ರೂಪ, ಬದಲಾಗದ ರೂಹು!


ಸಾಕುಪ್ರಾಣಿಗಳ ದುಕಾನು.
ಖರೀದಿಗೆಂದು ಬಂದಿರುವ ಗ್ರಾಹಕನಿಗೆ
ಮೂರು ಕಾಲಿನ ನಾಯಿಯೊಂದು
ಎಂದಿನ ಕಸರತ್ತು ತೋರಿಸಲು 
ಎದ್ದು ನಿಲ್ಲುತ್ತಲಿದೆ..

ಕವಿತೆಯ ಮುಂದೆ ಹಾಗೆ ಎರಡು ಟಿಕ್ಕಿಗಳನ್ನು ಇಡುತ್ತ ಭಟ್ಟರು ಕವಿತೆ ನಿಲ್ಲಿಸಿದರು. ಎದುರಿಗೆ ಕುಳಿತಿದ್ದ ತ್ರಿಪಾಠಿಯನ್ನು ನೋಡಿ ಮುಗುಳ್ನಕ್ಕರು. ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಎರಡು ದಶಕಗಳೇ ಕಳೆದಿವೆ. ಆದರೂ ಭಟ್ಟರ ಉತ್ಸಾಹಕ್ಕೆ ಭಂಗ ಬಂದಂತಿಲ್ಲ. ವರ್ಷಕ್ಕೊಂದು ಫಾರಿನ್ ಟ್ರಿಪ್ ಹೊಡೆಯುತ್ತಾರೆ. ತಿಂಗಳಿಗೆರಡು ಅಂತ ಅವರಿವರ ಪುಸ್ತಕ ಬಿಡುಗಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಳೆಯರೊಂದಿಗೆ ಎಳೆಯರಾಗಿಯೂ ವೃದ್ಧರೊಂದಿಗೆ ವೃದ್ಧರಾಗಿಯೂ ಗುರುತಿಸಿಕೊಳ್ಳುವ ಮಲ್ಹಾರಭಟ್ಟರ ಈ ಕಲೆಯನ್ನು ಬದುಕುವ ಕಲೆ ಅಂತ ಅವರನ್ನು ಮೆಚ್ಚುವವರು ಬಣ್ಣಿಸುತ್ತಾರೆ. ಅವರಿಗಾಗದವರು ಮಾತ್ರ ಒಂಚೂರೂ ಗಾಂಭೀರ್ಯವಿಲ್ಲ ಅಂತ ಭಟ್ಟರನ್ನು ಮನಸೋ ಇಚ್ಛೆಯಿಂದ ಬೈದಾಡಿಕೊಳ್ಳುತ್ತಾರೆ. 

   ನಾರಾಯಣ ತ್ರಿಪಾಠಿ. ಬಯೋಕೆಮಿಸ್ಟ್ ಹುಡುಗ. ವಯೋಸಹಜ ರೆಬೆಲ್ ಮನಸ್ಸು. ಅಂಥ ತ್ರಿಪಾಠಿಗೂ ಭಟ್ಟರಿಗೂ ಸಂಪರ್ಕ ಕುದುರಿಸಿದ್ದು ಯಕಶ್ಚಿತ್ ಕವಿತೆ. ಯಾರದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಡ್ಡೆ ಹುಡುಗರ ಗುಂಪಿನಲ್ಲಿದ್ದ ಭಟ್ಟರ ಮಾತುಗಳನ್ನು ಗಮನಿಸಿ ಅವರ ಸಂಪರ್ಕಕ್ಕೆ ಬಂದಿದ್ದ. ಯಾವುದೋ ಕವಿಯತ್ರಿಯ ಸೌಂದರ್ಯದ ಬಗ್ಗೆ ಗುಂಪಿನಲ್ಲಿದ್ದ ಯುವಕವಿಯೊಬ್ಬ ಸಾಂಗೋಪಾಂಗವಾಗಿ ವರ್ಣಿಸುತ್ತಿದ್ದಾಗ ಭಟ್ಟರು ಎಲ್ಲೋ ನಿಂತಿದ್ದ ಸದರಿ ಕವಿಯತ್ರಿಯನ್ನು ಅಚಾನಕ್ಕಾಗಿ ಕೂಗಿ ಗುಂಪಿಗೆ ಕರೆಸಿಕೊಂಡು 'ಈಗ ಬೇಕಾದರೆ ಹೊಗಳಯ್ಯ, ಚೆಲುವೆಯೂ ಕೊಂಚ ಖುಷಿಪಡಲಿ!' ಅಂತ ಬಾಂಬ್ ಹಾಕಿದ್ದರು. ಹಾಗೆ ಛೇಡಿಸುತ್ತಲೇ ಇಡೀ ಗುಂಪಿಗೆ ನೇರವಂತಿಕೆಯನ್ನೂ ನಮ್ರನಿವೇದನೆಯನ್ನೂ ಏಕಕಾಲಕ್ಕೆ ಕಲಿಸಿದ್ದರು.  

   ಫಿದಾ ಆಗಿಬಿಟ್ಟಿದ್ದ ತ್ರಿಪಾಠಿ. ಭಟ್ಟರನ್ನು ಭೇಟಿಯಾಗುವ ಯಾವ ಸಂದರ್ಭಗಳನ್ನೂ ತಪ್ಪಿಸಿಕೊಳ್ಳಲಾಗದಷ್ಟು ಅವರನ್ನು ಹಚ್ಚಿಕೊಂಡಿದ್ದ. ಹಾಗೆ ಸುಮಾರು ಭೇಟಿಗಳ ನಂತರ ಇವತ್ತು ಸೀದಾ ಭಟ್ಟರ ಮನೆಗೇ ಬಂದಿದ್ದ. ಕವಿತೆಯನ್ನು ಯಾವಾಗ ನಿಲ್ಲಿಸಬೇಕು? ಕವಿತೆ ಹೇಗೆ ನಿಂತರೆ ಚೆಂದ? ಇವೇ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಬಂದಿದ್ದ. ತ್ರಿಪಾಠಿಯನ್ನು ಹಾಗೆ ಎದುರಿಗೆ ಕೂರಿಸಿಕೊಂಡ ಮಲ್ಹಾರಭಟ್ಟರು ಚಿಕ್ಕದೊಂದು ಹಾಯ್ಕು ಬರೆಯುತ್ತ ಬರೆಯುತ್ತ ಏಕಾಏಕಿ ನಿಲ್ಲಿಸಿದವರೇ ಎರಡು ಟಿಕ್ಕಿ ಇಟ್ಟು ಮುಗುಳ್ನಕ್ಕಿದ್ದರು. 

   "ನೋಡಯ್ಯ, ಕವಿತೆ ಯಾವಾಗಲೂ ನ್ಯಾಷನಲ್ ಹೈವೇ ಥರ. ಅಲ್ಲಿ ದಾರಿ ತೋರಲೆಂದು ಸೂಚನಾ ಫಲಕಗಳೂ ಇರಬೇಕು. ಪಯಣದ ಗುರಿ ಇನ್ನೂ ಎಷ್ಟು ದೂರವಿದೆ ಅಂತ ತೋರಿಸಬಲ್ಲ ಮೈಲುಗಲ್ಲುಗಳೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಿನ್ನ ಗಾಡಿಯಲ್ಲಿ ಇನ್ನೂ ಪೆಟ್ರೋಲಿದ್ದರೂ 'ಪಯಣ ಇಲ್ಲಿಗೇ ಮುಗಿಯಿತು' ಅಂತ ನಿನ್ನ ಕವಿತೆಯೇ ನಿನಗೆ ನಿರ್ಬಂಧ ಹೇರಿಬಿಡಬೇಕು. ಆದರೆ ಈ ಕಲೆಯೇ ಅಪಾಯದ್ದು. ಸೂಕ್ಷ್ಮದ್ದು. ಈ ನಿರ್ಬಂಧ ಅವಧಿಗೂ ಮುನ್ನವೇ ಬರಕೂಡದು. ಯಾಕೆಂದರೆ ಒಮ್ಮೊಮ್ಮೆ ಹೀಗೂ ಆಗುತ್ತಿರುತ್ತದೆ: ನಿನ್ನ ಗಾಡಿ ಹೈವೇನಲ್ಲಿ ಹೋಗುತ್ತಿರುವಾಗಲೇ ದಾರಿ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಯಾವುದೋ ಕಾಡಿನಲ್ಲಿ ಕಾಲುಜಾರುವ ಅಪಾಯವಿರುತ್ತದೆ. ಹಾಗೆ ಜಾರುತ್ತಜಾರುತ್ತ ಕೈಗೆ ಸಿಕ್ಕ ಮುಳ್ಳುಕಂಟಿಯನ್ನು ಆಸರೆಯಾಗಿ ಹಿಡಿಯುವಾಗಲೇ ಧುತ್ತೆಂದು ಜಲಪಾತ ಎದುರಾಗಿರುತ್ತದೆ. ಅದೃಷ್ಟವಿದ್ದರೆ ಯಾರೂ ಮುಟ್ಟದ ಬಂಡೆಗಲ್ಲನ್ನು ನೀನು ನೋಡಿರುತ್ತೀಯ. ಅದೃಷ್ಟ ಇನ್ನೂ ಜಾಸ್ತಿಯಿದ್ದಲ್ಲಿ ಬಂಡೆಯ ಮೇಲೆ ಚದುರಿರುವ ಚದುರೆಯ ವಸ್ತ್ರಗಳನ್ನೂ ನೋಡಿರುತ್ತೀಯ!"
  
   ಭಟ್ಟರು ನಗುತ್ತಲೇ ಇದ್ದರು. ತ್ರಿಪಾಠಿ ಹೈರಾಣಾದಂತಿದ್ದ. ಕವಿತೆಯಿಂದ ಶುರುವಾದ ಮಾತುಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ಭಟ್ಟರು ಇರಾನಿ ಕವಿ ಅಬ್ಬಾಸ್ ಕಿರೊಸ್ತಾಮಿಯನ್ನು ಎಳೆದುತಂದರು. ಆತನ ಪುಟ್ಟ ಕವಿತೆಯಲ್ಲಿ ಎಲೆಯೊಂದು ಮರದಿಂದ ಕಳಚಿಕೊಂಡು ನೆಲದ ಮೇಲಿದ್ದ ತನ್ನದೇ ನೆರಳಿನ ಮೇಲೆ ಸ್ಥಾಪಿತವಾಗುವದನ್ನು ಚಿತ್ರಿಸಿದರು. ಜೀವಂತವಿರುವ ಯಾವ ಎಲೆಯೂ ಹೀಗೆ ನೆಲದ ಮೇಲಿನ ತನ್ನದೇ  ನೆರಳನ್ನು ಅಪ್ಪಿಕೊಳ್ಳುವ ಧೈರ್ಯ ತೋರುವದಿಲ್ಲ. ದೇಹ ಯಾವಾಗ ತನ್ನ ಆತ್ಮದೊಂದಿಗೆ ನಿಜದ ರೀತಿಯಲ್ಲಿ ಒಂದಾಗುತ್ತದೆಯೋ ಅದೇ ಮೋಕ್ಷದ ಸಮಯ ಅಂತೆಲ್ಲ ಕಿರೊಸ್ತಾಮಿಯನ್ನು ವಿವರಿಸಿದರು. ತ್ರಿಪಾಠಿಗೆ ಎಲ್ಲ ಅಯೋಮಯ. ಭಟ್ಟರು ಕವಿತಾ ಜಗತ್ತಿನ ಹೊಸ ಲೆಕ್ಕಾಚಾರ ಬಿಡಿಸತೊಡಗಿದ್ದರು. ಈ ಜಗತ್ತಿನ ಲೆಕ್ಕಾಚಾರ ಎಷ್ಟು ಕರಾರುವಾಕ್ಕಾಗಿದೆ ಅಂದರೆ ಇಲ್ಲಿ ಪ್ರತಿದಿನ ಯಾರೋ ಅದೆಲ್ಲವನ್ನೂ ಟ್ಯಾಲಿ ಮಾಡುತ್ತಲೇ ಇರುತ್ತಾರೆಂದೂ, ಹೀಗಾಗಿ ಯಾವುದೂ ಈ ಜಗತ್ತಿನ ಪೊರೆಯಿಂದ ಹೊರಹೋಗಲು ಸಾಧ್ಯವಿಲ್ಲವೆಂದೂ, ಹೆಚ್ಚೆಂದರೆ ಇವತ್ತಿನ ಮನುಷ್ಯ ಸತ್ತ ಮೇಲೆ ನಾಳೆ ಹುಣಸೇಮರವೋ ಅಥವಾ ಗೌಳಿಗನ ಎಮ್ಮೆಯೋ ಆಗಿ, ಆ ಮೂಲಕ ಕೇವಲ ರೂಪ ಮಾತ್ರ ಬದಲಾಗಿ ರೂಹು ಬದಲಾಗದೇ ಅಲ್ಲಲ್ಲೇ ಸ್ಥಾನಪಲ್ಲಟವಾಗಿ.. 

   ಯಾಕೋ ಭಟ್ಟರು ಭಯಾನಕವಾಗಿ ಕೆಮ್ಮತೊಡಗಿದರು. ಗಾಬರಿಗೊಂಡ ತ್ರಿಪಾಠಿ ಭಟ್ಟರ ಕೈಹಿಡಿದು ನೀರು ಕುಡಿಸಿ ಮನೆ ಸೇರಿಕೊಂಡಿದ್ದ. ಆವತ್ತಿಡೀ ರಾತ್ರಿ ಭಟ್ಟರ ಕವಿತಾಶಕ್ತಿಯ ಬಗ್ಗೆ ಗೌರವಭಾವ ಮೂಡಿಸಿಕೊಂಡ. ಹಾಗೆಯೇ ಅವರ ವೈಜ್ಞಾನಿಕ ಅರಿವಿನ ಬಗ್ಗೆ ಕರುಣೆಯನ್ನೂ! ಸ್ವತಃ ಬಯೋಕೆಮಿಸ್ಟ್ ಆಗಿದ್ದ ನಾರಾಯಣ ತ್ರಿಪಾಠಿಗೆ ಮನುಷ್ಯರೂ ಸೇರಿದಂತೆ ಕ್ರಿಮಿಕೀಟಗಳಲ್ಲಿನ ಜೀವತಂತುಗಳ ಬಗ್ಗೆ ಸಾಕಷ್ಟು ಅರಿವಿದ್ದೇ ಇದೆ. ಮರ ಹೇಗೆ ಹುಟ್ಟುತ್ತದೆ, ಮನುಷ್ಯ ಯಾವಾಗ ಸಾಯುತ್ತಾನೆ ಅಂತನ್ನುವ ಜೈವಿಕ ವಿಜ್ಞಾನದ ಬಗ್ಗೆ ತನಗಿರುವ ಅಥೆಂಟಿಸಿಟಿ ಭಟ್ಟರಿಗಿಲ್ಲ. ಆದರೆ ಹಿರಿಯ ಜೀವಕ್ಕೆ ಹೇಗೆ ತಿಳಿಹೇಳುವದು? ಬಹುಶಃ ಭಟ್ಟರಿಗೆ ವಯಸ್ಸು ಹಾಗೆಲ್ಲ ಯೋಚಿಸಲು ಪ್ರೇರೇಪಿಸುತ್ತದಾ? ತಲೆ ಕೊಡವಿದ ತ್ರಿಪಾಠಿ ಗ್ಲಾಸಿಗೆ ಬೀಯರ್ ಸುರುವಿ ಟೀವಿ ಹಚ್ಚಿ ಕುಳಿತ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿದ್ದ ಡಾಕ್ಯೂಮೆಂಟರಿ ಆವತ್ತೇ ಟೀವಿಯಲ್ಲಿ ಬಿತ್ತರವಾಗುತ್ತಿತ್ತು. ಮಳೆ ಹೇಗೆ ಉಂಟಾಗುತ್ತದೆ? ಎಂಬುದೇ ಡಾಕ್ಯೂಮೆಂಟರಿ ವಿಷಯ. ಬೆಟ್ಟದ ಮರಗಳು ಮೋಡಗಳನ್ನು ತಡೆದು ಮಳೆ ಬರಿಸುತ್ತವೆ ಅಂತೆಲ್ಲ ಪ್ರೈಮರಿಯಲ್ಲಿ ಹೇಳಿದ್ದ ಮೇಸ್ಟ್ರು ತ್ರಿಪಾಠಿಗೆ ನೆನಪಾದರು. ಮಳೆಗಾಗಿ ಹೋಮ, ಹವನ, ಪರ್ಜನ್ಯ ಯಜ್ಞಗಳನ್ನು ಮಾಡುತ್ತಿದ್ದರೆಂದು ಹೇಳುತ್ತಿದ್ದ ನೀತಿಕತೆ ಮೇಸ್ಟ್ರು ನೆನಪಾದರು.

   ಅಷ್ಟರಲ್ಲಿ ಚಾನಲ್ ನ ನಿರೂಪಕ ಪರದೆಯಲ್ಲಿ ಮಳೆಯನ್ನು ನಿರೂಪಿಸತೊಡಗಿದ್ದ. ಆತನ ಪ್ರಕಾರ, ಭೂಮಿಯ ಮೇಲೆ ನೀರು ಕೋಟ್ಯಂತರ ವರ್ಷಗಳಿಂದ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸೈಕಲ್ ಹೊಡೆಯುತ್ತಲೇ ಇದೆ. ಆವತ್ತಿನಿಂದ ಇವತ್ತಿನವರೆಗೂ ಇಲ್ಲಿ ಒಂದೇ ಒಂದು ಹನಿ ಹೆಚ್ಚೂ ಆಗಿಲ್ಲ ಕಡಿಮೆಯೂ ಆಗಿಲ್ಲ. ಅಶೋಕನ ದೇಹದಲ್ಲಿದ್ದ ನೀರೇ ಅಕ್ಬರನ ದೇಹದಲ್ಲೂ ಇತ್ತು ಮತ್ತು ಅದು ಈಗ ನಮ್ಮ ದೇಹದಲ್ಲೂ ಇದೆ. ಇಂಥ ನೀರಿನ ಬಗ್ಗೆ, ಮಳೆಯ ಬಗ್ಗೆ ನಮಗೆಷ್ಟು ಗೊತ್ತು? ಭೂಮಿಯ ಮೇಲಿರುವ ನೀರಿನ ಒಂದು ಬಿಂದು ವಾತಾವರಣದಲ್ಲಿನ ಶಾಖದಿಂದ ಆವಿಯಾಗಿ ಆಕಾಶಕ್ಕೇನೋ ಹಾರುತ್ತದೆ. ಅಲ್ಲಿ ಶೂನ್ಯವಾತಾವರಣವಿದೆ. ನಮಗೆಲ್ಲ ಗೊತ್ತಿರುವಂತೆ ಅನಿಲರೂಪದ ಈ ನೀರಿನ ಬಿಂದು ಶೂನ್ಯವಾತಾವರಣಕ್ಕೆ ಸೇರುತ್ತಿದ್ದಂತೆಯೇ ಮಂಜುಗಡ್ಡೆಯ ರೂಪ ಪಡೆಯಬೇಕು. ಆದರೆ ಅಲ್ಲಿ ಹಾಗಾಗುವದಿಲ್ಲ. ಯಾಕೆಂದರೆ ಅಂತರಿಕ್ಷದಲ್ಲಿ ಯಾವುದೇ ಕಲ್ಮಶವಿಲ್ಲ. ಆದರೆ ನಿಸರ್ಗವೇ ಇದಕ್ಕೆ ಪರಿಹಾರ ಹುಡುಕಿಕೊಳ್ಳುತ್ತದೆ. 

   ಸಮುದ್ರದಿಂದ, ಕಾಡಿನ ಕಾಳ್ಗಿಚ್ಚಿನಿಂದ, ಕಾರ್ಖಾನೆಯ ಚಿಮಣಿಗಳಿಂದ, ಮರುಭೂಮಿಯ ಬಿರುಗಾಳಿಗಳಿಂದ ಏಳುವ ಅಸಂಖ್ಯಾತ ಧೂಳಿನ ಕಣಗಳು ಆಕಾಶಕ್ಕೆ ಏರುತ್ತವೆ. ಹಾಗೆ ಏರುತ್ತಲೇ ಅಲ್ಲಿನ ವಾತಾವರಣದಲ್ಲಿ ಮಂಜುಗಡ್ಡೆಯಾಗಲು ತವಕಿಸುತ್ತಿರುವ ಅನಿಲ ಬಿಂದುವಿಗೆ ಆಧಾರವಾಗುತ್ತವೆ. ಆಗ ಅಲ್ಲೊಂದು ನೀರಿನ ಸ್ಪಟಿಕ ತಯಾರಾಗುತ್ತದೆ. ಹೀಗೆ ಧೂಳಿನ ಕಣವನ್ನು ಆಧಾರವಾಗಿಟ್ಟುಕೊಂಡು ಅದರ ಸುತ್ತಲೂ ಮಂಜುಗಡ್ಡೆಯಾಗಿ ಹರಳುಗಟ್ಟುವ ಅನಿಲದ ಬಿಂದು ತನ್ನ ಆಸುಪಾಸಿನಲ್ಲಿರುವ ಮತ್ತೊಂದಿಷ್ಟು ಅನಿಲದ ಬಿಂದುಗಳಿಗೆ ತಾನೇ ಆಧಾರವಾಗುತ್ತದೆ. ಹೀಗೆ ಒಂದಕ್ಕೊಂದು ಸೇರಿಕೊಂಡು ದೊಡ್ಡದಾದ ಮಂಜುಗಡ್ಡೆ ತನ್ನದೇ ಭಾರದಿಂದಾಗಿ ಕೆಳಗೆ ಜಾರತೊಡಗುತ್ತದೆ. ಭೂಮಿಗೆ ಹತ್ತಿರವಾಗುತ್ತಿದ್ದಂತೆಯೇ ವಾತಾವರಣದ ಉಷ್ಣತೆಯಿಂದಾಗಿ ಹರಳು ಕರಗಿ ನೀರಿನ ಹನಿಯಾಗಿ ಮಳೆ ಸುರಿಯುತ್ತದೆ. ಹೀಗೆ ಅನಿಲದ ಬಿಂದುವೊಂದು ಅಂತರಿಕ್ಷದಲ್ಲಿ ಮಂಜುಗಡ್ಡೆಯ ಹರಳಾಗಲು ಧೂಳಿನ ಕಣಗಳಷ್ಟೇ ಆಧಾರಸ್ತಂಭಗಳಾಗುವದಿಲ್ಲ. ಅನೇಕ ಸಲ ಇದೇ ಭೂಮಿಯಿಂದ ಹಾರಿಹೋದ ಕೋಟ್ಯಂತರ ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳೂ ಮಂಜುಗಡ್ಡೆಯ ಸ್ವರೂಪ ತಾಳಲು ಹೆಗಲು ಕೊಡುತ್ತವೆ. ಹೀಗೆ ಈ ಲೋಕದ ಯಾವುದೇ ಜೀವಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಂಡು ಮತ್ತದೇ ಹಳೆಯ ತತ್ವದೊಂದಿಗೆ ಮಣ್ಣಿಗೆ ಹಿಂತಿರುಗುತ್ತದೆ.. 

   ನಾರಾಯಣ ತ್ರಿಪಾಠಿ ದಿಗ್ಗನೇ ಎದ್ದು ಕುಳಿತಿದ್ದ. ಟೀವಿ ನಿರೂಪಕನ ಕೊನೆಯ ಮಾತುಗಳು ಗುಯ್ ಗುಡತೊಡಗಿದ್ದವು. ಯಾಕೋ ಈಗಿಂದೀಗಲೇ ಭಟ್ಟರಿಗೆ ಫೋನು ಮಾಡೋಣ ಅಂದುಕೊಂಡ. ಆದರೆ ಗಡಿಯಾರ ನೋಡಿಕೊಂಡು ಸುಮ್ಮನೇ ಬಿದ್ದುಕೊಂಡ. ಮರುದಿನವೇ ಭಟ್ಟರ ಮರಣವಾರ್ತೆ ಬಂದಿತ್ತು. ಕನಲಿಹೋಗಿದ್ದ ತ್ರಿಪಾಠಿ. ಒಂದಿಡೀ ದಿನ ಯಾರೊಂದಿಗೂ ಮಾತನಾಡಲಿಲ್ಲ. ಕೆಲಸಕ್ಕೂ ಹೋಗಲಿಲ್ಲ. ಸಂಜೆಹೊತ್ತಿಗೆ ಏನೋ ಯೋಚಿಸಿದವನಂತೆ ಮನೆಯ ಮುಂದೆ ಇದ್ದಕ್ಕಿದ್ದಂತೆ ಗುಂಡಿ ತೋಡತೊಡಗಿದ. ಯಾವುದೋ ಬೀಜ ತಂದು ಮಣ್ಣಲ್ಲಿ ಹುಗಿದಿಟ್ಟ. ಇನ್ನೂ ಮೊಳಕೆಯೊಡೆಯದ ಸಸಿಯ ಮುಂದೆ ನಿಂತು 'ಮಲ್ಹಾರ ಮರ' ಅಂತ ಬರೆದಿಟ್ಟ ಬೋರ್ಡು ದಿಟ್ಟಿಸತೊಡಗಿದ!       .    
                                                                             -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 20.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, April 25, 2018

ಗಂಧದ ಮರದೊಳು ಒಂದಿನಿತೂ ಫಲವಿಲ್ಲ!

ಮೊನ್ನೆ ಸುಮ್ಮನೇ ಹೀಗೇ ಏನನ್ನೋ ಓದುತ್ತಿದ್ದಾಗ ಗಝಲ್ ರೂಪದ ಒಂದಿಷ್ಟು ಸಾಲುಗಳು ಗೋಚರಿಸಿದವು. ಅಸಲಿಗೆ ಇದನ್ನು ಮೂಲದಲ್ಲಿ ಬರೆದವರು ಯಾರೆಂದು ನನಗೆ ಗೊತ್ತಾಗಲಿಲ್ಲವಾದರೂ ಕನ್ನಡಕ್ಕೆ ಇದನ್ನು ರೂಪಾಂತರ ಮಾಡಬಹುದು ಅಂತನಿಸಿತು. ಪರಿಪೂರ್ಣತೆಯನ್ನು ಹುಡುಕುತ್ತ ಹೊರಟ ಈ ಅನಾಮಿಕ ಕವಿಗೆ ಕೊನೆಗೆ ಕಂಡಿದ್ದಾದರೂ ಏನು?     

ಹೊನ್ನಿಗೆ ಪರಿಮಳವಿಲ್ಲ 
ಕಬ್ಬಿಗೆ ಪುಷ್ಪವಿಲ್ಲ
ಗಂಧಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ 
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ 
ದಕ್ಕುವ ಜಾಗವೇ ಬಲು ಮಜವಾಗಿದೆ. 
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ..

   ಅಲ್ಲಿಗೆ ಅದೊಂದು ಮರೀಚಿಕೆ. ಯಾರಿಗೂ ದಕ್ಕದೇ ಇರುವಂಥದ್ದು. ಇಷ್ಟಕ್ಕೂ ಪರ್ಪೆಕ್ಟ್ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ? ನಮ್ಮ ಪೌರಾಣಿಕ ರೋಲ್ ಮಾಡೆಲ್ ಗಳಾದ ರಾಮ ಮರ್ಯಾದಾ ಪುರುಷೋತ್ತಮನಾದ. ಪರಶುರಾಮ ಚಿರಂಜೀವಿಯಾದ. ಕೃಷ್ಣ ಜಗದ್ಗುರುವಾದ. ಆದರೆ ಇವರ್ಯಾರೂ ಪರಿಪೂರ್ಣರಾಗಲಿಲ್ಲ. ಹಾಗಾದರೆ ಪರಿಪೂರ್ಣತೆ ಅನ್ನುವದು ಎಲ್ಲಿ ಸಿಗುತ್ತದೆ?         
    
   ಯಾರೋ ಇಂಥ ಪ್ರಶ್ನೆ ಕೇಳಿದಾಗಲೆಲ್ಲ ನಕ್ಕು ಬಿಡುತ್ತೇವೆ. ಯಾಕೆಂದರೆ ನಾವೆಲ್ಲ ಹುಲುಮಾನವರು. ಒಂದು ಸಂಬಂಧದಿಂದ ಕಳಚಿಕೊಳ್ಳಲು ನಮಗೆ ಜಾಸ್ತಿ ಹೊತ್ತು ಬೇಕಿಲ್ಲ. ನಮ್ಮ ಅಂಗಳದಲ್ಲೊಂದು ಗೆರೆ ಹೊಡೆಯಲು ಸಿಕ್ಕಂಥ ಕಾರಣಗಳೂ ಅಷ್ಟೇ ತಮಾಷೆಯವು. ಇಲ್ಲಿ, ಕೇಳಿದಾಗ ಸಾಲ ಕೊಡಲಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. ಕೊಟ್ಟ ಸಾಲವನ್ನು ವಾಪಸ್ಸು ಕೇಳಿದರು ಅಂತ ಮಾತು ಬಿಟ್ಟವರಿದ್ದಾರೆ. ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಲೈಕ್ ಮಾಡಿ ನನ್ನ ವಾಲಿಗೇ ಬರೋದಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. 'ಕವಿತೆಗೆ ಪ್ರಾಮಾಣಿಕ ಅಭಿಪ್ರಾಯ ಬೇಕು' ಅಂತ ಪೀಡಿಸಿ ಪೀಡಿಸಿ, ಕೊನೆಗೊಮ್ಮೆ ಅಭಿಪ್ರಾಯ 
ಹೇಳಿದ್ದಕ್ಕೂ ಮಾತು ಬಿಟ್ಟವರಿದ್ದಾರೆ! ಹೀಗೆ ಯಾವುದ್ಯಾವುದೋ ಚಿಲ್ಲರೆ ಕಾರಣಗಳಿಗೆ ಮನಸು ಮಾಲಿಂಗ 
ಹೃದಯ ಶಂಭುಲಿಂಗವಾಗಿಬಿಡುವ ಹೊತ್ತಿನಲ್ಲಿ ಊರಿನ ಬಾಲ್ಯದ ಮಿತ್ರ ನೆನಪಾಗುತ್ತಾನೆ. ಆತನಿಗೊಂದು 
ಫೋನಾಯಿಸಿ ಕಾಲೆಳೆಯುತ್ತಿರುತ್ತೇನೆ: 
"ನೀನ್ಯಾವ ಲೋಕದ ಪ್ರಾಣಿ ಮಾರಾಯ, ಒಮ್ಮೆಯೂ ಮಾತು ಬಿಡಲಿಲ್ಲವಲ್ಲ? ಊರಾಚೆಯ ಬಯಲಿಗೆ ಸಂಡಾಸಕ್ಕೆಂದು ಹೋಗುವಾಗ ನಿನಗೆ ಒತ್ತಡವಿಲ್ಲದಿದ್ದರೂ ನನ್ನೊಂದಿಗೆ ಬರುತ್ತಿದ್ದೆ. ಪ್ರತೀ ಬಾರಿಯೂ ಚೊಂಬನ್ನು ನೀನೇ ಹೊರುತ್ತಿದ್ದೆ. ಆ ಹತ್ತಾರು ವರ್ಷ ಯಕಶ್ಚಿತ್ ಖಾಲಿ ತಂಬಿಗೆಯನ್ನಾದರೂ ಒಮ್ಮೆಯೂ ನನಗೆ ದಾಟಿಸಲಿಲ್ಲವಯ್ಯ.."

   ಇಬ್ಬರೂ ನಗುತ್ತಿರುತ್ತೇವೆ. ಇದನ್ನೇ ನಾನು ಹಿತಾನುಭವ ಅಂತ ಕರೆಯುತ್ತೇನೆ. ನಮ್ಮ ಸುತ್ತಲಿನ ಒಂದಿಡೀ ಪರಿಸರ ಇಂಥದೊಂದು ಹಿತಾನುಭವ ಕಂಡುಕೊಳ್ಳಲು ಒಂದು ಸೂತ್ರದ ಅಗತ್ಯ ಇದೆ ಅಂತ ನನಗೆ ಆಗೀಗ ಅನಿಸುತ್ತಿರುತ್ತದೆ. ಆ ಸೂತ್ರದ ಹೆಸರು 'ಫಿಫ್ಟಿ-ಫಿಫ್ಟಿ'. ಮೊದಲ ನೋಟಕ್ಕೆ ಇದೊಂದು ತಮಾಷೆಯ ಮತ್ತು ಜಾಳುಜಾಳಾದ ಸೂತ್ರ ಅಂತನಿಸಬಹುದು. ಬಾಲ್ಯದಲ್ಲಿ ಬಯಲ ಬಹಿರ್ದೆಸೆಗೆಂದು ವರ್ಷಗಟ್ಟಲೇ ನೀರಿನ ತಂಬಿಗೆ ತಾನೊಬ್ಬನೇ ಹೊತ್ತುಕೊಂಡ ಸ್ನೇಹಿತ ನನಗೇನೋ ಅಷ್ಟರಮಟ್ಟಿಗೆ ಹಿತಾನುಭವ ದಯಪಾಲಿಸಿದ. ಆ ಮೂಲಕ ಆ ಘಳಿಗೆಯ ನಮ್ಮಿಬ್ಬರ ಪರಿಸರದಲ್ಲಿ ಸಮಸ್ಯೆಯೊಂದು ಪರಿಹಾರವಾಯಿತು. ಜಗತ್ತಿನಲ್ಲಿ ಥೇಟ್ ಇದೇ ಥರ ಆಯಾ ಕ್ಷಣಕ್ಕೆ ಆಯಾ ಪರಿಸರದ ಸಮಸ್ಯೆ ಪರಿಹಾರವಾಗುತ್ತಿರುತ್ತದೆ. ಕೈಸುಟ್ಟರೂ ಸಮಯಕ್ಕೆ ಸರಿಯಾಗಿ ಗಂಡನ ಲಂಚ್ ಬಾಕ್ಸ್ ಕಟ್ಟುವ ಗೃಹಿಣಿ, ಬಾಸ್ ಒತ್ತಡಕ್ಕೆ ತನ್ನದಲ್ಲದ ಕೆಲಸವನ್ನೂ ಮಾಡುವ ಸಹೋದ್ಯೋಗಿ, ಕಾಲೇಜಿನಲ್ಲಿ ಜಗಳವಾದಾಗ ಸಹಾಯ(?)ಕ್ಕೆಂದು ನಾಲ್ವರನ್ನು ಕರೆತರುವ ಗೆಳೆಯ, ಮ್ಯಾನೇಜರ್ ನ ವಾಂಛೆಯನ್ನು ಧಿಕ್ಕರಿಸುತ್ತಲೇ ಇದ್ದೊಂದು ನೌಕರಿಯನ್ನು ನಾಜೂಕಾಗಿ ನಿಭಾಯಿಸುತ್ತಿರುವ ಹುಡುಗಿ- ಇವರೆಲ್ಲ ಆಯಾ ಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರುತ್ತಾರೆ.  

   ಹೀಗೆ ಎದುರಿಗಿದ್ದವರ ಅವಶ್ಯಕತೆ ಅರ್ಥೈಸಿಕೊಂಡು ಆಯಾ ಸಮಯಕ್ಕೆ ಪರಿಹಾರ ಒದಗಿಸಿದ ವ್ಯಕ್ತಿ 
ಆ ಒಟ್ಟು ಪರಿಸರಕ್ಕೇನೋ ಒಂದು ಹಿತಾನುಭವ ಒದಗಿಸಿದ. ಆದರೆ ಈ ಹಿತಾನುಭವ ಜಗತ್ತಿನ ಕೇವಲ 50% ಜನಕ್ಕೆ ಮಾತ್ರ. ಅಂದರೆ, ಜಗತ್ತಿನ 50% ಸಮಸ್ಯೆ ಮಾತ್ರ ಪರಿಹಾರವಾಗಿದೆ. ಇನ್ನರ್ಧ ಹಾಗೇ ಉಳಿದು ಹೋಗಿದೆ. ಯಾಕೆಂದರೆ ಸರಳವಾದ ಸೂತ್ರವೊಂದನ್ನು ನಾವು ಮರೆತು ಹೋಗಿದ್ದೇವೆ. ಅಸಲಿಗೆ, ನಮಗೇನು ಬೇಕಿದೆ  ಅಂತ ಅರ್ಥೈಸಿಕೊಂಡು ಅದಕ್ಕನುಗುಣವಾಗಿ ತಮ್ಮ ಕೈಲಾದ ಪರಿಹಾರ ಒದಗಿಸಿದವರಿಗೆ ನಾವು ಯಾವತ್ತೂ 'ನಿನಗೇನು ಬೇಕಿದೆ?' ಅಂತ ಕೇಳಲಿಲ್ಲ. ಹಾಗೆ ಕೇಳಿ ಸ್ಪಂದಿಸುವ 
ಮೂಲಕ ಇಡೀ ಲೋಕಕ್ಕೆ 100% ಹಿತಾನುಭವ ಕೊಡುವ ಸರಳ ಲೆಕ್ಕವನ್ನು ನಾವು ಮರೆತುಬಿಟ್ಟೆವಾ? 

   ಹಾಗೆ ಲೆಕ್ಕ ಮರೆತಿದ್ದರಿಂದಲೇ ಇವತ್ತೇನಾಯಿತು? ಜೋರು ಬಾಯಿ ಇರುವ ಮನುಷ್ಯ ಮಾತ್ರ ಎಲ್ಲರಿಗೂ 
ಕಾಣುತ್ತಿದ್ದಾನೆ. ಮೆಲುದನಿಯಲ್ಲಿ ಮಾತನಾಡುವ ವ್ಯಕ್ತಿ ಯಾರಿಗೂ ಕಾಣಿಸುತ್ತಿಲ್ಲ. ಬರವಣಿಗೆಯಿಂದಲೇ 
ಮಾತನಾಡಬೇಕಿದ್ದ ಸಾಹಿತಿಗಳೂ ನಾಲಿಗೆಯಿಂದಲೇ ಕೂಗು ಹಾಕುತ್ತಾರೆ. ಪ್ರಶಸ್ತಿ ಪಡೆಯುವದರಲ್ಲೂ ಪ್ರಶಸ್ತಿ ಹಿಂತಿರುಗಿಸುವದರಲ್ಲೂ ಮಾತಿನದ್ದೇ ಅಬ್ಬರ. ಅದರ ಮುಂದುವರಿಕೆಯಾಗಿ ಒಬ್ಬರಿಗೇ ಹತ್ತಾರು ನಮೂನೆಯ 
ಪ್ರಶಸ್ತಿಗಳು, ಫಲಕಗಳು, ತೂಕದ ಚೆಕ್ಕುಗಳು!

   ಅದೇ ರೀತಿ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿಗಳ ಬಗ್ಗೆಯೂ ನನಗೆ ಅಸಮಾಧಾನವಿದೆ. ಸರ್ಕಾರವೂ 
ಸೇರಿದಂತೆ ನಮ್ಮಲ್ಲಿರುವ ಅನೇಕ ಬಗೆಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಬೇಕೆಂದರೆ ಸಾಹಿತಿಯೊಬ್ಬ ತನ್ನ ಕೃತಿಗಳನ್ನು ಆಯಾ ಸಂಘಟಕರಿಗೆ ಕಳುಹಿಸಿಕೊಡಬೇಕು. ನೀವು ಕೊಡಮಾಡುವ ಪುರಸ್ಕಾರಕ್ಕೆ ನನ್ನ ಕೃತಿಯನ್ನೂ ಪರಿಗಣಿಸಿ ಅಂತೆಲ್ಲ ಅರ್ಜಿ ಸಲ್ಲಿಸಬೇಕು. ಸಂಕೋಚ ಮತ್ತು ಮುಜುಗರಗಳನ್ನೇ ಇಂಧನವಾಗಿಸಿಕೊಳ್ಳಬೇಕಿದ್ದ ಸಾಹಿತಿ ಹೀಗೆ ಭಿಡೆಯಿಲ್ಲದೇ ಅರ್ಜಿ ಗುಜರಾಯಿಸುವದನ್ನು ನೋಡಿ  ಪೆಚ್ಚಾಗಬೇಕೋ ಅಥವಾ ಪಿಚ್ಚೆನ್ನಬೇಕೋ? 

   ಹೀಗಾಗಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಬಗ್ಗೆ, ಅದರ ಅಧ್ಯಕ್ಷರುಗಳ ಬಗ್ಗೆ ಎಷ್ಟೇ ಗೌರವ, ಹೆಮ್ಮೆಗಳಿದ್ದರೂ ಒಂದು ಸಣ್ಣ ಅಸಮಾಧಾನವಿದೇ. ಬಹುಶಃ ನನಗಿರುವ ಈ ಆಸೆ ದುಬಾರಿಯಾಗಿರುವಂಥದ್ದು. "ಸಮ್ಮೇಳನದ ಅಧ್ಯಕ್ಷನಾಗಿ ಈ ಸಾರೋಟು, ಕಾರು, ತೇರು, ಎತ್ತಿನಬಂಡಿ, ತೆರೆದ ಜೀಪುಗಳಲ್ಲಿ ಹಾರ ಹಾಕಿಸಿಕೊಂಡು ಕೈ ಬೀಸುತ್ತ ಊರೆಲ್ಲ ಮೆರವಣಿಗೆ ಮಾಡಿಸಿಕೊಳ್ಳುವದೆಂದರೆ ಪ್ರಾಣ ಹೋದಂತಾಗುತ್ತೆ ಕಣ್ರೀ, ಸಾಹಿತ್ಯದ ಭಾಷಣ, ನಿರ್ಣಯ, ಠರಾವುಗಳೇನೋ ಓಕೆ, ಆದರೆ ಇದೊಂದು ಮುಜುಗರದ ಕೆಲಸಕ್ಕೆ ಮಾತ್ರ ನನ್ನನ್ನು ಒತ್ತಾಯಿಸಬೇಡಿ.." ಅಂತ ಸಂಘಟಕರಿಗೆ ರೋಪು ಹಾಕುವ ಅಧ್ಯಕ್ಷರನ್ನು ನೋಡುವಾಸೆಯಿದೆ! 

   ಒಟ್ಟಿನಲ್ಲಿ ಕೃತಿಯನ್ನು ಆಸ್ವಾದಿಸುವದರೊಂದಿಗೆ ಅದರ ಕರ್ತೃವನ್ನೂ ಹೆಗಲಿಗೇರಿಸಿಕೊಳ್ಳುವಷ್ಟು ಓದುಗನನ್ನು ಸಹೃದಯಿಯನ್ನಾಗಿಸಿದ್ದು ಸಾಹಿತ್ಯದ ಮೇರುಗುಣ. ಆದರೆ ಅದೇ ಸಾಹಿತ್ಯ ಅಂಥದೊಂದು ಹೆಗಲನ್ನು ನಯವಾಗಿ ನಿರಾಕರಿಸುವಂತೆ ಕರ್ತೃವಿಗೆ ಸೂಚಿಸದೇ ಹೋದದ್ದು ವ್ಯಂಗ್ಯ.

   ಹೀಗಿರುವಾಗ ಗದುಗಿನ ಶಿಕ್ಷಕರೊಬ್ಬರು ನೆನಪಾಗುತ್ತಿದ್ದಾರೆ. ಹೆಸರು: ಬಿ.ಜಿ. ಅಣ್ಣಿಗೇರಿ. ಎಂಭತೈದಕ್ಕೂ 
ಮೀರಿ ವಯಸ್ಸಾಗಿರಬೇಕು ಅವರಿಗೆ. ಗದುಗಿನ 'ಮಾಡೆಲ್ ಹೈಸ್ಕೂಲ್' (ಇವತ್ತಿನ ಸಿ.ಎಸ್. ಪಾಟೀಲ್ 
ಪ್ರೌಢಶಾಲೆ)ನಲ್ಲಿ ನಾನು ಒಂಭತ್ತನೇ ತರಗತಿ ಓದುತ್ತಿದ್ದಾಗಲೇ ಅವರು ಅದೇ ಶಾಲೆಯ ಹೆಡ್ ಮಾಸ್ಟರ್ 
ಆಗಿ ನಿವೃತ್ತರಾದರು. ಅದಕ್ಕೂ ಸುಮಾರು ಇಪ್ಪತೈದು ವರ್ಷ ಮೊದಲೇ ಅವರು ಗದುಗಿನ ಸುತ್ತಲಿದ್ದ 
ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆಂದು ಆಶ್ರಮ ತೆರೆದವರು. ಅಲ್ಲಿ ಉಚಿತವಾಗಿ ವಿದ್ಯೆಯ ಜೊತೆಗೆ ಊಟ, 
ವಸತಿಯನ್ನೂ ನೀಡಿದವರು. ನಾನು ಹೈಸ್ಕೂಲ್ ಮುಗಿಸಿಯೇ ಹತ್ತತ್ತಿರ ಮೂರು ದಶಕಗಳಾಗಿವೆ. 
ಅವಿವಾಹಿತ ಅಣ್ಣಿಗೇರಿ ಮೇಷ್ಟ್ರು ಇವತ್ತಿಗೂ ಟ್ಯುಷನ್ನು, ಕ್ಲಾಸು ಅಂತ ಛಡಿ ಹಿಡಿದು ನಿಂತೇ ಇದ್ದಾರೆ. 

   ಶಿಕ್ಷಕ ವೃತ್ತಿಯಲ್ಲಿದ್ದಾಗ ಸಂಪೂರ್ಣ ಸಂಬಳವನ್ನೂ, ಈಗ ಪಿಂಚಣಿ ಹಣವನ್ನೂ ಆಶ್ರಮದ 
ವಿದ್ಯಾರ್ಥಿಗಳಿಗೆ ಎತ್ತಿಟ್ಟಿರುವ ಅಣ್ಣಿಗೇರಿಯಂಥ ಸಂತ ಶಿಕ್ಷಕರಿಗೆ ಎಲ್ಲಿದೆ ಸಾರೋಟು? ಎಲ್ಲಿದೆ ತೆರೆದ 
ಜೀಪಿನ ಮೆರವಣಿಗೆ? ಹೆಚ್ಚುಕಡಿಮೆ ಮೂರು ಪೀಳಿಗೆಯ ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ವಿದ್ಯೆ ಹಂಚಿ 
ಆಶ್ರಯ ಕೊಟ್ಟ ಈ ಮೇಷ್ಟ್ರ ಮುಖ ಎಷ್ಟು ಟೀವಿ ಚಾನಲ್ಲುಗಳಲ್ಲಿ ಬಂದಿದೆ? ಆರಂಭದ ಅನಾಮಿಕ ಕವಿಯ ಮತ್ತದೇ ಕವಿತೆಯನ್ನು ಗುನುಗುಡುವದಾದರೆ,  

ಹೊನ್ನಿಗೆ ಪರಿಮಳವಿಲ್ಲ, 
ಕಬ್ಬಿಗೆ ಪುಷ್ಪವಿಲ್ಲ,
ಗಂಧಮರದೊಳು ಒಂದಿನಿತೂ ಫಲವಿಲ್ಲ.. 

ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?    
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, March 28, 2018

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 28.02.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, January 17, 2018

ಧಾವಂತಗಳ ಮಧ್ಯೆ ಕಂಡ ಸಂಕ್ರಾಂತಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 17.01.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
ಟಿಪ್ಪಣಿ: ಕಳೆದ ವಾರದ ಅಂಕಣದಲ್ಲಿ ಕೆಂಪು, ಹಸಿರು, ನೀಲಿಗಳನ್ನು ಮೂಲಬಣ್ಣಗಳೆಂದು ಹೇಳಿದ್ದೆ. ಆದರೆ ಟೀವಿಪರದೆಯಂಥ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾತ್ರ ಇದು ಅನ್ವಯ. ಮಿಕ್ಕಂತೆ ನೈಸರ್ಗಿಕವಾಗಿ ಕೆಂಪು, ಹಳದಿ ಮತ್ತು ನೀಲಿಗಳು ಮೂಲಬಣ್ಣಗಳಾಗಿವೆ- ಲೇ.                                                                                                        

Wednesday, November 22, 2017

ಪ್ರೇಮ, ವಿರಹ, ವೈರಾಗ್ಯದ ತಿರುಗಣೆ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 22.11.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, October 25, 2017

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Tuesday, October 24, 2017

ಕೊಟ್ಟ ಕುದುರೆ ಏರಲಾಗದ ಕೆಟ್ಟ ಪ್ರಸಂಗವು..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 11.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, September 27, 2017

ಗಾಂಧೀಯ ಸರಳತೆಯೂ ಹಾಯ್ಕುವಿನ ಭವ್ಯತೆಯೂ!

ಅಂತ್ಯದಲ್ಲಿ ಬರಹಕ್ಕೊಂದು ಮೆಸೇಜ್ ಇರಲೇಬೇಕಾ?  ನನಗಂತೂ ಯಾವತ್ತೂ ಹಾಗೆ ಅನಿಸಿಲ್ಲ. ಯಾಕೆಂದರೆ ಕನವರಿಸಿ ಹುಡುಕಿಕೊಂಡು ಹೋದ ಕಾಡಿನ ಮಧ್ಯೆ ಕಾಲುದಾರಿಗಾಗಿ ಹುಡುಕಾಟ ನಡೆಸುತ್ತಿರುವಾಗ ದಿಢೀರಂತ ಹೈವೇ ಕಂಡುಬಿಟ್ಟರೆ ಅದಕ್ಕಿಂತ ನಿರಾಸೆ ಮತ್ತೊಂದಿಲ್ಲ. ಅರೇ, ಇಷ್ಟೊತ್ತೂ ತಿರುಗಾಡಿದ್ದು, ಗಾಬರಿಯಾಗಿದ್ದು, ಪುಳಕಗೊಂಡಿದ್ದು, ಕಾಡಿನ ಘಮ, ಆ ನೀರವತೆ ಎಲ್ಲ ಸುಳ್ಳು ಅಂತನಿಸಿಬಿಡುತ್ತದೆ. ಅಲ್ಲಿಗೆ ಅದೊಂದು ವ್ಯರ್ಥ ಪಯಣ.  

   ಬರಹಗಳ ಅಂತ್ಯದಲ್ಲಿ ಪ್ರಯತ್ನಪೂರ್ವಕವಾಗಿ ಹೇರಲ್ಪಡುವ ಸಂದೇಶಗಳೂ ಹೀಗೆಯೇ. 'ರಾಮನು 
ಬಾಳೆಹಣ್ಣು ತಿಂದು ನಿದ್ದೆಹೋದನು..' ಅಂತ ಸರಳವಾಗಿ ಮುಕ್ತಾಯವಾಗುವ ಕತೆಯಲ್ಲಿ ಅಷ್ಟೇ 
ಸಹಜವಾಗಿ ಓದುಗನಿಗೆ ದೊರಕುವ unwritten ಸಂದೇಶ ಎಲ್ಲ ಪದಕಸರತ್ತಿಗಿಂತ ಮೀರಿದ್ದು. 
'ಆವತ್ತೊಂದು ದಿನ ಕುಡಿದು ಗಟಾರದಲ್ಲಿ ಬಿದ್ದಿದ್ದೆ' ಅಂತನ್ನುವ ಅನುಭವಾಮೃತ ದಯಪಾಲಿಸುವ ಲೇಖಕ, ಉದ್ದೇಶಪೂರ್ವಕವಾಗಿ ಸಂದೇಶ ಕೊಡದೇ ತನಗರಿವಿಲ್ಲದಂತೆ ಓದುಗರ ಗ್ಯಾಲರಿಗೆಂದು 
ಒಂದು ಸರಳ ಮೆಸೇಜ್ ಬಿಟ್ಟು ಹೋಗಿರುತ್ತಾನೆ. ಇವರ್ಯಾರಿಗೂ ಸಂದೇಶವಾಹಕರಾಗುವ ಹಂಗು ಇದ್ದಂತಿಲ್ಲ. ವ್ಯಾಸನಿಗೂ ಈ ವ್ಯಸನವಿದ್ದಂತಿಲ್ಲ. ಹೀಗಾಗಿ ಮೂರೂ ಮುಕ್ಕಾಲು ಪುಟಕ್ಕೊಂದು ಹಿಡನ್ ಸಂದೇಶ ರವಾನಿಸುತ್ತಲೇ ಹೋಗುವ ಮಹಾಭಾರತ, ಏನಾದರೂ ಮೆಸೇಜು ಕೊಡಲೇಬೇಕು ಅಂತ ಅವುಡುಗಚ್ಚಿ ಉಪಸಂಹಾರ ಮಾಡುವವರಿಗೆ ಒಂದು ಅತಿದೊಡ್ಡ ಬೈಬಲ್ ಅಂತ ಮಾತ್ರ ಹೇಳಬಹುದೇನೋ.         

   ಹೀಗಿರುವಾಗ, ಮೊನ್ನೆ ಸಂಜೆ ಮನೆ ಟೆರೇಸಿನ ಮೇಲೆ ಹೀಗೆಯೇ ಖಾಲಿಪೀಲಿ ಮಾತುಕತೆ ನಡೆದಿತ್ತು. 
ಷೇರುಮಾರುಕಟ್ಟೆಯ ಚಂಚಲತೆ, ಯಾವುದೋ ಹಾಡಿನ ಗಿಟಾರ್ ನೋಟೇಷನ್, ಇಸ್ಪೀಟು ಎಲೆಯಲ್ಲಿನ 
ಟ್ರಿಕ್ಕುಗಳು, ಕಾಣದ ಗುಬ್ಬಿಹಿಂಡು- ಹೀಗೆ ಎಲ್ಲಿಂದ ಎಲ್ಲಿಗೋ ಓತಪ್ರೋತವಾಗಿ ಜಿಗಿಯುತ್ತಿದ್ದ ನಮ್ಮ 
ಗುಂಪಿನ ಮಾತುಕತೆಗೆ ಒಂದು ನಿಶ್ಚಿತ ಉದ್ದೇಶ ಇದ್ದಂತಿರಲಿಲ್ಲ. ಅಷ್ಟರಲ್ಲಿ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸ 
ಹುಡುಕುತ್ತಿರುವ ಹುಡುಗನೊಬ್ಬ ಮಾತಿನ ಮಧ್ಯೆ ಸಟ್ಟಂತ ಹೇಳಿಬಿಟ್ಟ: 
'ಏನೇ ಹೇಳ್ರಿ, ಬದುಕಿನಲ್ಲಿ ದುಡ್ಡೇ ಎಲ್ಲ ಅಲ್ಲ.'

   ನಾವೆಲ್ಲ ಮುಸಿಮುಸಿ ನಕ್ಕಿದ್ದೆವು. ಹಾಗಾದರೆ ಯಾವುದು ಮುಖ್ಯ? ಪ್ರೀತಿಯಾ? ವಿಶ್ವಾಸವಾ? ಗೆಳೆತನವಾ? ಆರೋಗ್ಯವಾ? ವಿದ್ಯೆ? ಧಾಡಸೀತನ? ಚಾಲಾಕಿತನ? ಸೌಂದರ್ಯ? ಒಳ್ಳೆಯತನ? ಅರಿವು? ಯಾರಿಗೆ ಯಾವುದು ಮುಖ್ಯವೋ ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವವರ ಪೈಕಿ ಯಾರಾದರೂ 'ದುಡ್ಡೇ ಮುಖ್ಯ ಅಲ್ಲ' ಅಂದುಬಿಟ್ಟರೆ ನನಗ್ಯಾಕೋ ಅದು ನಗು ತರಿಸುತ್ತದೆ. ಯಾಕೆಂದರೆ ನನ್ನ ನಂಬಿಕೆಯಂತೆ, ಹಾಗೆ ಹೇಳಲು ಅರ್ಹತೆ ಇರುವದು ಕೇವಲ ಮೂರು ಜನರಿಗೆ ಮಾತ್ರ: ಒಂದೋ, ಆತ ಸಂತನಾಗಿರಬೇಕು. ಇಲ್ಲವಾದಲ್ಲಿ ಆತ ಈಗಾಗಲೇ ಸಿಕ್ಕಾಪಟ್ಟೆ ದುಡ್ಡು ಗಳಿಸಿರಬೇಕು. ಇವೆರೆಡೂ ಅಲ್ಲವಾದಲ್ಲಿ ಆತ ಮಾನಸಿಕವಾಗಿ ಅಸ್ವಸ್ಥನಾಗಿರಬೇಕು!
                                  
   ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಹೋಗಿದ್ದೆ. ನನ್ನ ಟೆಕ್ಕಿ ಗೆಳೆಯರು ಅವರವರ ಇಷ್ಟಾನುಸಾರ ಪುಸ್ತಕ, ಸೀಡಿ, ಡಿವಿಡಿ ಖರೀದಿಯಲ್ಲಿ ತೊಡಗಿದ್ದರು. ಕೆಲವೊಂದು ಇಂಗ್ಲಿಷ್ ಪುಸ್ತಕಗಳ ಬೆಲೆಯಂತೂ ಗಾಬರಿಯಾಗುವ ರೀತಿಯಲ್ಲಿದ್ದವು. ಅಷ್ಟರಲ್ಲಿ ಗೆಳೆಯನೊಬ್ಬ ಒಂದು ಪುಸ್ತಕದ ಗಾತ್ರ ಮತ್ತು ಬೆಲೆಯನ್ನು ವಿಚಿತ್ರ ರೀತಿಯಲ್ಲಿ ನೋಡತೊಡಗಿದ್ದ. ಸದರಿ ಪುಸ್ತಕದ ಪುಟಗಳನ್ನು ಅವಸರದಿಂದ ತಿರುಗಿಸುತ್ತ 'ಇಷ್ಟೇನಾ? ಬರೀ ಇಷ್ಟೇನಾ?' ಅಂತ ಪದೇಪದೇ ಗೊಂದಲಕ್ಕೆ ಈಡಾಗುತ್ತಿದ್ದ. ಇನ್ನೂರಕ್ಕೂ ಹೆಚ್ಚಿನ ಪುಟಗಳಿದ್ದ ಸದರಿ ಪುಸ್ತಕದ ಹೆಸರು: 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಬೆಲೆ: ಇಪ್ಪತ್ತು ರೂಪಾಯಿಗಳು. ಹಾಗೆ ನೋಡಿದರೆ, ಸುಮಾರು ವರ್ಷಗಳ ಹಿಂದೆ ಕೇವಲ ಬೆಲೆ ಕಡಿಮೆ ಅಂತನ್ನುವ ಕಾರಣಕ್ಕೇ ನಾನು ಕೂಡ 'ಗಾಂಧೀ ಆತ್ಮಕತೆ' ಖರೀದಿಸಿದ್ದುಂಟು. ಆವತ್ತು ಈ ಪುಸ್ತಕದ ಬೆಲೆ ಕುರಿತಂತೆ ಗೆಳೆಯನ ಉದ್ಗಾರ ನೋಡಿದಾಗ ಸರಳತೆ ಎಂಬ phenomenon ಹೇಗೆ ನಮಗೆಲ್ಲ ಅಗ್ಗದ ವಸ್ತುವಿನಂತೆ ಭಾಸವಾಗುತ್ತಿದೆಯಲ್ಲ ಅಂತೆನಿಸಿ ನಾಚಿಕೆಯಾಯಿತು. 

   ಕವಿತೆಯೂ ಥೇಟ್ ಹೀಗೆಯೇ. ಅದರಲ್ಲೂ ಹಾಯ್ಕು ಪ್ರಾಕಾರದ ಕವಿತೆಗಳು. ಸರಳತೆ ಮತ್ತು ಭವ್ಯತೆ 
ಹಾಯ್ಕುವಿನ ಎರಡು ಮಜಲುಗಳು. ಬಹುತೇಕ ಹಾಯ್ಕುಗಳು ಸರಳಾತಿ ಸರಳ ಪದಗಳಲ್ಲಿ 
ಹುಟ್ಟಿಕೊಂಡಂಥವು. ಹೀಗೆ ಸರಳವಾಗಿ ಓದಿಸಿಕೊಂಡು ಹೋಗಬಲ್ಲ ಹಾಯ್ಕುವೊಂದು ತನ್ನ ಕೊನೆಯ 
ಪದವನ್ನು ಓದಿಸಿಕೊಳ್ಳುತ್ತಿದ್ದಂತೆಯೇ ಓದುಗನಲ್ಲಿ ಒಂದು ಭವ್ಯ ಹೊಳಹನ್ನು ಹುಟ್ಟುಹಾಕಿರುತ್ತದೆ. 
ನನಗೆ ಬಂದಂಥ ಪ್ರತಿಕ್ರಿಯೆಗಳನ್ನು ನಂಬುವದಾದರೆ, ನನ್ನಬಹುತೇಕ ಲೇಖನಗಳಲ್ಲಿ ಓದುಗರಿಗೆ ಅತಿ 
ಹೆಚ್ಚು ಪ್ರಿಯವಾಗಿರುವಂಥದ್ದು ಈ ಹಾಯ್ಕುಗಳೇ. 

   ಇಂಥದೊಂದು ಕಾವ್ಯಜಗತ್ತಿಗೆ ಹೊಸದಾಗಿ ಕಾಲಿಟ್ಟ ಬಹುತೇಕರು ಕೇಳುವ ಮೊದಲ ಪ್ರಶ್ನೆಯೆಂದರೆ, 
ಹಾಯ್ಕು ಹೇಗೆ ಬರೆಯುವದು? ಈ ಆಟದ ನಿಯಮಗಳೇನು? ಈಗಾಗಲೇ ಇದೇ ಅಂಕಣದಲ್ಲಿ ಅನೇಕ ಸಲ 
ಹಾಯ್ಕುಗಳ ವಿವಿಧ ನಿಯಮಾವಳಿಗಳ ಬಗ್ಗೆ ಹೇಳಿರುವದರಿಂದ ಮತ್ತೇ ಅವುಗಳ ಬಗ್ಗೆ ಹೇಳದೇ 
ಹೊಸದಾದ ಮತ್ತು ಸರಳವಾಗಿ ಅಳವಡಿಸಕೊಳ್ಳಬಹುದಾದ ನಿಯಮಗಳ ಬಗ್ಗೆ ಯೋಚಿಸುತ್ತಿದ್ದಾಗ 
ಡೇವಿಡ್ ಎಂಬ ಹಾಯ್ಕು ಕವಿಯ ಒಂದಿಷ್ಟು ಮಾತುಗಳು ಆಸಕ್ತಿಕರ ಅಂತನಿಸಿದವು. 

   ಆತನ ಪ್ರಕಾರ, ಮೊಟ್ಟಮೊದಲನೆಯದಾಗಿ ಹಾಯ್ಕು ಕವಿತೆ ಅತ್ಯಂತ ಚಿಕ್ಕದಾಗಿರಬೇಕು. ಅಂದರೆ, 
ಒಂದು ಉಚ್ವಾಸ ಮತ್ತು ನಿಶ್ವಾಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದೋ, ಇಷ್ಟೇ ಅವಧಿಯಲ್ಲಿ 
ಓದಿ ಮುಗಿಸುವಷ್ಟು ಹಾಯ್ಕು ಚಿಕ್ಕದಿರಬೇಕು. ಎರಡನೆಯದಾಗಿ, ಭೂತವಲ್ಲದ ಭವಿಷ್ಯವಲ್ಲದ ಈ 
ನಮ್ಮ ಹಾಯ್ಕು ಯಾವಾಗಲೂ ವರ್ತಮಾನದಲ್ಲಿ ನಡೆಯುತ್ತಿರುವಂತೆ ಬಿಂಬಿತಗೊಂಡು ಒಂದು 
ನಿಶ್ಚಿತ ಘಟನೆಯ ಚಿತ್ರವನ್ನು ಕಟ್ಟಿಕೊಡುತ್ತಿರಬೇಕು. ಕೊನೆಯದಾಗಿ, ಈ ಚಿತ್ರ ಯಾವುದೋ ಅತ್ಯಂತ 
ಸಾಮಾನ್ಯ ಘಟನೆಯನ್ನು ಬಿಂಬಿಸುತ್ತಿದ್ದರೂ ಅದು ಒಂದು ಒಳನೋಟವನ್ನು ಬೆರಗಿನಿಂದ 
ಬಿಂಬಿಸುತ್ತಿರಬೇಕು ಮತ್ತು ಆ ಬೆರಗು ಗೌರವದಿಂದ ಕೂಡಿರಬೇಕು.

ಇಲ್ಲಿ ಒಂದಿಷ್ಟು ಅಂಥ ಚಿತ್ರಣಗಳಿವೆ. ಸಾಮಾನ್ಯವಾಗಿ ಹಾಯ್ಕುಗಳನ್ನು ವಿವರಿಸಲು ಹೋಗಬಾರದು. ಅದು ಹಾಯ್ಕು ಪರಂಪರೆಯಲ್ಲಿ ನಿಷಿದ್ಧ. ಆದರೆ ನಮ್ಮದಲ್ಲದ ಒಂದು ಹೊಸತನ್ನು ನಮ್ಮದಾಗಿಸಿಕೊಳ್ಳುವಾಗ ಒಂದಿಷ್ಟು ಸಣ್ಣ ಅಪರಾಧಗಳನ್ನು ಮಾಡಿದರೆ ತಪ್ಪಿಲ್ಲವಂತೆ!

   ಈ ಚಿತ್ರಣ ಗಮನಿಸಿ. ಇಲ್ಲಿಬ್ಬರು ಹೊಲದ ಕೆಲಸಕ್ಕೆಂದು ಹೊರಟಿರುವರು. ಮಧ್ಯವಯಸ್ಕ ತಾಯಿ 
ಮತ್ತು ಆಕೆಯ ಜವ್ವನ ಮಗಳು. ಗುಳೇ ಎದ್ದು ಈ ಊರಿಗೆ ಹೊಸದಾಗಿ ಬಂದಿರುವ ಈ ಜೋಡಿಗೆ 
ಇದು ಪರಿಚಿತ ದಾರಿಯಲ್ಲ. ಹೀಗಿರುವಾಗ, ಆಕಸ್ಮಿಕವಾಗಿ ಗುಲಾಬಿ ತೋಟವೊಂದು ಎದುರಿಗೆ 
ಸಿಕ್ಕುಬಿಡುತ್ತದೆ. ಸ್ವಂತ ಊರು ತೊರೆದು ಕಾಣದ ಭಾಗ್ಯವನ್ನರಿಸಿ ಹೊರಟಿರುವ ಈ ಜೋಡಿ ತಮ್ಮ 
ಅಂಥದೊಂದು ಅನಿಶ್ಚಿತ ಘಳಿಗೆಯಲ್ಲೂ ಹಾಯ್ಕು ಹುಟ್ಟಿಗೆ ಕಾರಣರಾಗುತ್ತಾರೆ. ಗುಲಾಬಿ ತೋಟ 
ಕಾಣುತ್ತಲೇ ಮಗಳ ಕೆದರಿದ ಕೂದಲನ್ನು ಒಟ್ಟುಗೂಡಿಸಿ ಲಗುಬಗೆಯಲ್ಲಿ ಜಡೆ ಹೆಣೆಯುತ್ತಿರುವ 
ತಾಯಿಯ ಚಿತ್ರವನ್ನು ಕವಿ ಕಟ್ಟಿಕೊಡುತ್ತಾನೆ.   

   ಮುಂದೊಮ್ಮೆ ಈ ಜೋಡಿ ಹೊಲ ತಲುಪುತ್ತದೆ. ಇಳಿಸಂಜೆಯವರೆಗೂ ಕೆಲಸ ಮಾಡುತ್ತ ಹೈರಾಣಾಗಿರುವ ಅಮ್ಮ ಒಂದೆಡೆ ಕೂತು ಸುಧಾರಿಸಿಕೊಳ್ಳುತ್ತಿದ್ದರೆ, ಜಾಲರಿ ಬಲೆಯಂಥ ರವಿಕೆ ತೊಟ್ಟಿರುವ ಮಗಳು ಉತ್ಸಾಹದಲ್ಲೇ ಮುಂದುವರೆಯುತ್ತಿದ್ದಾಳೆ. ಇಳಿಸಂಜೆಯ ಹೊತ್ತಿನಲ್ಲಿ ಅವಧಿಗೂ ಮುನ್ನವೇ ಮೂಡಿರುವ ಪೂರ್ಣಚಂದಿರ. ಅವನಿಗೂ ಈ ಜಾಲರಿ ರವಿಕೆಯ ಜವ್ವನೆ ಬಗ್ಗೆ ಕುತೂಹಲ. ಬೆವರಿನಿಂದ ಜ್ವಲಿಸುತ್ತಿರುವ ಈ ಶ್ವೇತವರ್ಣೆಯನ್ನು ತಂಪಾಗಿಸಲು ಸ್ವತಃ ತಾನೇ ಕೆಳಗಿಳಿಯುತ್ತಿದ್ದಾನೆ. ಸಾಂತ್ವನಗೈದ ಪೂರ್ಣಚಂದಿರ ಬಲೆಯಿಂದ ಹೊರಬರಲಾಗದೇ ಕೊನೆಗೊಮ್ಮೆ ಜಾಲರಿಯಲ್ಲೇ ಸ್ಥಾಪಿತನಾಗಿ ಹೋದನೆಂಬ ಕತೆ ನಂಬಲು ಬಲು ಮಜವಾಗಿದೆ! 

   ಸಮಾಧಾನದ ಸಂಗತಿ ಏನೆಂದರೆ, ಜಗತ್ತಿನ ಯಾವ ಹಾಯ್ಕು ಕೂಡ ಅಂತ್ಯದಲ್ಲಿ ನಮ್ಮನ್ನು ನಿರಾಸೆಗೊಳಿಸುವದಿಲ್ಲ. ಇವಳನ್ನು ನೋಡಿ: ಇವಳೊಬ್ಬಳು ವಿವಾಹಿತ ಕನ್ಯೆ! ಕನ್ಯೆ ಹೇಗೆಂದರೆ, ಮದುವೆಯಾದ ದಿನವೇ ಆಕೆಯ ಧೀರನಿಗೆ ಸೇನೆಯಿಂದ ಕರೆಬಂದು ಯುದ್ಧಕ್ಕೆ ತೆರಳಿದ್ದಾನೆ. ಇಲ್ಲೀಗ ಚಳಿಗಾಲ. ದೂರದಲ್ಲೆಲ್ಲೋ ಧೀರ ತನ್ನ ಶತ್ರುಗಳೊಂದಿಗೆ ಯುದ್ಧ ತಲ್ಲೀನನಾಗಿದ್ದರೆ ಈಕೆ ಇಲ್ಲಿ ನಡುಗುವ ಋತುಮಾನದೊಂದಿಗೆ ಕಾದಾಡುತ್ತಿದ್ದಾಳೆ. ಬೇಸಿಗೆ ಕಳೆದ ಮೇಲೆ ಬಂದೇ ಬರುವೆನೆಂದು ಹೇಳಿಹೋಗಿರುವ ಗಂಡ. ಇಲ್ಲಿಯವರೆಗೂ ಆತನಿಂದ ಒಂದು ಸುದ್ದಿಯಿಲ್ಲ. ಒಂದು ಪತ್ರವಿಲ್ಲ. ವಿರಹದಲ್ಲಿರುವ ಚೆಲುವೆಗೋ ಕಾಲಮಾನದ ಅರಿವೇ ಇದ್ದಂತಿಲ್ಲ. ಪ್ರತಿದಿನ ತನ್ನ ಮನೆಯ ಗೇಟಿಗೆ ಅಳವಡಿಸಲಾದ ಅಂಚೆಡಬ್ಬದಲ್ಲಿ ಪತ್ರಕ್ಕಾಗಿ ತಡಕಾಡುವದು. ಅನ್ಯಮನಸ್ಕಳಾಗಿ ಹಿಂತಿರುಗುವದು. ಇಂತಿಪ್ಪ ಸನ್ನಿವೇಶದಲ್ಲಿ ರೊಮೇನಿಯಾದ ದಾನಾ ಮಾರಿಯಾ ಎಂಬ ಕವಿಯತ್ರಿ ಹೇಗೆ ಅಲ್ಲಿನ ಋತುಮಾನದ ಜೊತೆಗೆ ಅಲ್ಲಿನ ಇಡೀ ಸನ್ನಿವೇಶವನ್ನೂ ಚಕ್ಕಂತ ಬದಲಾಯಿಸುತ್ತಾಳೆ ನೋಡಿರಿ. ಎಂದಿನಂತೆ ಅಂಚೆ ಹುಡುಕಲು ಹೋದ ಕನ್ಯೆಗೆ ಅಲ್ಲೇನು ಕಾಣಿಸುತ್ತಲಿದೆ ನೋಡಿರಿ: 

ಇದ್ಯಾವುದರ ಸೂಚನೆ
ಬಿಸಿಲ ನಿರ್ಗಮನದ್ದೋ?
ಶರತ್ಕಾಲ ಆಗಮನದ್ದೋ?
ಬೇಲಿ ಬಾಗಿಲಕ್ಕೆ ತೂಗುಹಾಕಿದ
ಅಂಚೆಡಬ್ಬದಲ್ಲಿ ಎಲೆಯೊಂದು ಪತ್ರವಾಗಿದೆ.
                                                                                        -             
 
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 27.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)