Thursday, February 16, 2012

ನಂಬಿಕೆಯಿದೆ!



                                          Photo:Internet



ಕೊನೆಯಲ್ಲಿ ಅವರಿಬ್ಬರೂ
ಸುಖವಾಗಿದ್ದರು 
ಎನ್ನುವ ಕತೆಗಳಲ್ಲಿ 
ನನಗೆ ನಂಬಿಕೆ 
ಯಾವತ್ತೂ ಹುಟ್ಟುವದಿಲ್ಲ.
-
ಖಂಡವಿದಿಕೋ,ಮಾಂಸವಿದಿಕೋ
ಗುಂಡಿಗೆಯ ಬಿಸಿರಕ್ತವಿದಿಕೋ
ಎನ್ನುವ ಹುಡುಗಿಗೆ,
ಪುಣ್ಯಕೋಟಿಯ ಹಾಡು 
ಕೇಳುತ್ತಿರುವ ಹುಡುಗ 
ಎಂದೂ ಅರ್ಥವಾಗುವದಿಲ್ಲ.
ಅಡಚಣೆಗಾಗಿ 
ದಯವಿಟ್ಟು ಕ್ಷಮಿಸಿ:
ಉತ್ತರಾಯಣವರೆಗೂ
ಸ್ಥಾನಪಲ್ಲಟವಿಲ್ಲ.
ಧರಣಿಮಂಡಲ ಮಧ್ಯದೊಳಗೆ
ಸದ್ಯಕ್ಕೆ ಉತ್ಖನನವಿಲ್ಲ!
-
ಕಲ್ಲು ಕರಗುವ ಸಮಯದಲ್ಲಿ
ಈಗ ಅವಳು ಶುಭನುಡಿಯುವ 
ಶಕುನದ ಹಕ್ಕಿ!
ಏನೇ ಬಂಗಾರದ  
ಪಂಜರ ಕಟ್ಟಿದರೂ,
ಎಷ್ಟೇ ಬೆಳ್ಳಿಬಟ್ಟಲಲ್ಲಿ  
ಹಾಲಿಟ್ಟರೂ ಅಷ್ಟೇ;
ಹಕ್ಕಿ ತತ್ತರಿಸಿ 
ತತ್ತಿಯಿಡುತ್ತದೆ.
ನಿಜವಿರದ ಮಜವಿರದ  
ಸಂಭ್ರಮ ಕೂಡ 
ವಜನಾದ ಸಜೆಯಾಗುತ್ತದೆ.
ಯಾರೋ ಹೇಳಿದರು-
ಅನುಭವ ಮಾನವ ಕಲ್ಪಿತ;
ಅನುಭಾವ ದೇವ ನಿರ್ಮಿತ.
ಹೀಗಾಗಿ-
ಕೊನೆಗೊಮ್ಮೆ ಅವರಿಬ್ಬರೂ 
ಸುಖವಾಗಿದ್ದರು 
ಎಂದು ನಂಬುವದರಲ್ಲೇ 
ನಮಗೆ ನಂಬಿಕೆಯಿದೆ.
ಹಾಳಾದ್ದು,
ನಂಬಿಕೆ ಎನ್ನುವದು 
ಯಾವತ್ತೂ ಸಾಯುವದೇ ಇಲ್ಲ!
-

34 comments:

ವಾಣಿಶ್ರೀ ಭಟ್ said...

tumba chennagide sir :) bareyuttiri

Anonymous said...

adEnu bareeteera Sir.....tumbaa chennaagide. heegE bareetiri ! :-) Anjali

ಜಲನಯನ said...

ರಾಘವೇಂದ್ರ ಸರ್...ಆಫ್ ಬೀಟ್ ಸಿನಿಮಾ ಥರ..ಎಲ್ಲೋ ಅರ್ಥವಾದ ಹಾಗೆ ಮತ್ತೆ ಮಿಸ್ ಆದ ಹಾಗೆ...ಗೊತ್ತಿಲ್ಲ ನಾನು ಬೆಳಿಗ್ಗೆಯಿಂದಾನೆ ಹೀಗಿದ್ದೀನಾ ಅಥವಾ ನಿಮ್ಮ ಕವನ ಓದಿನಾ?? ಅಥವಾ ನನ್ನ ಲೆವಲ್ ಗೆ ನಿಲುಕದ ಎತ್ತರದ ಸಾಲುಗಳಾ...ಹಹಹ

Sukhesh said...

superb...

satish said...

ಗುರುಗಳೇ .ಈ ನಂಬಿಕೆ ಅತ್ವ ಹೋಪ್ ಮೇಲೆ ತಾನೇ ಜೀವನ ನಡಿಯೋದು ಯಾಕಂದ್ರೆ " Hope is bigger than pope ".ಚಂದ್ ಐಥಿ ನೋಡ್ರಿ ,ಎಲ್ಲೋ ಹೀಗ್ ಬಂದು ಹಾಗ್ ಮನಸಿಗೆ ತಾಕ್ ಹೋಗ್ತಾದ್ .

DVKINI said...

Soopper..........

full Kalasu-melogara .

Sushrutha Dodderi said...

ನೈಚ್! :-)

bharathi said...

ishtavaythu ..

sunaath said...

RJ,
ಸಾಮಾನ್ಯ ಅನುಭವವನ್ನು ಅಸಾಮಾನ್ಯವಾಗಿ ಬಿಡಿಸಿಡುವದಕ್ಕೆ ಕವನ ಎನ್ನಬಹುದು. ಇದನ್ನು ನೀವು ನಿಮ್ಮ ಕವನಗಳಲ್ಲಿ ಸಾಧಿಸುತ್ತಿದ್ದೀರಿ. ನಿಮ್ಮ ಈ ಕವನವೂ ಸಹ ಅಸಾಮಾನ್ಯವಾಗಿದೆ. ನಮ್ಮೆಲ್ಲರ ಅನುಭವವನ್ನು ‘ಹೊಸದಾಗಿ ರಸವಾಗಿ’ ಹಾಡುತ್ತಿದೆ. ಅಭಿನಂದನೆಗಳು.

Manjunatha Kollegala said...

ಸೊಗಸಾದ ಕವನ RJ. ಬದುಕಿನ ದ್ವಂದ್ವಗಳನ್ನ, ಯಾವುದೋ ಮಟ್ಟದ ಪೊಳ್ಳುತನವನ್ನ ಬಹು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದೀರಿ. ನನಗೆ ತುಂಬ ಇಷ್ಟವಾದ ಕವನಗಳಲ್ಲೊಂದು.

"ಉತ್ತರಾಯಣದವರೆಗೂಸ್ಥಾನಪಲ್ಲಟವಿಲ್ಲ.
ಧರಣಿಮಂಡಲ ಮಧ್ಯದೊಳಗೆಸದ್ಯಕ್ಕೆ ಉತ್ಖನನವಿಲ್ಲ!-
ಕಲ್ಲು ಕರಗುವ ಸಮಯದಲ್ಲಿ
ಈಗ ಅವಳು ಶುಭನುಡಿಯುವ ಶಕುನದ ಹಕ್ಕಿ!
ಏನೇ ಬಂಗಾರದ ಪಂಜರ ಕಟ್ಟಿದರೂ,
ಎಷ್ಟೇ ಬೆಳ್ಳಿಬಟ್ಟಲಲ್ಲಿ ಹಾಲಿಟ್ಟರೂ ಅಷ್ಟೇ;
ಹಕ್ಕಿ ತತ್ತರಿಸಿ ತತ್ತಿಯಿಡುತ್ತದೆ"

ಈ ಸಾಲುಗಳು ಅದ್ಭುತವಾಗಿವೆ.

Keshav.Kulkarni said...

ತುಂಡು ತುಂಡು ಬಿಡಿ ಕವನಗಳು
ತುಂಡರಿಸಿದ ಕೊಂಡಿಗಳು
ಉರುಳಿ ಹೋದ ಮುತ್ತುಗಳು
ಎಲ್ಲ ಸಿಗುವುದಿಲ್ಲ
ಸಿಗಬಾರದು ಕೂಡ

ಅಲ್ಲವೇ?

Badarinath Palavalli said...

ಇದು ನನ್ನ ಮನಸ್ಸಿಗೆ ಹಿಡಿಸಿದ ಕವನ ಜೋಷಿ ಸಾರ್. ಏಕೆಂದರೆ ಕಲ್ಪನೆಗಳಿಂದ ಮನುಜನು ಸುಖ ಅಥವ ದುಖದ ಭ್ರಮೆಯಲ್ಲೇ ಉಳಿದು ಬಿಡಬಹುದು. ಖ್ಯಾತ ನಾಟಕಕಾರ ಸಂಸರಿಗೆ ತಮಗೆ ನಿರಂತರ ಪೊಲೀಸ್ ಕಾಟವಿದೆ ಎನ್ನುವ ಬ್ರಮೆಯೇ ದುಖ್ಖಕ್ಕೆ ಈಡು ಮಾಡುತ್ತಿತ್ತು.

ಕವನದ ಹರಿವಿನಲ್ಲಿ ಮತ್ತು ಅದು ಕೊಡುವ ಸಾಂತ್ವನದಲ್ಲಿ ನಿಮ್ಮ ಒಳ್ಳೆಯತನವೂ ಇದೆ.

Ashok.V.Shetty, Kodlady said...

ಸುಂದರ, ಅತೀ ಸುಂದರ.......ಎಲ್ಲಾ ಸಾಲುಗಳು ಇಷ್ಟವಾದವು ಸರ್....ಒಂದು ಹೊಸ ತರಹದ ಕವನ ....ಧನ್ಯವಾದಗಳು....

Anonymous said...

:) nice sir.

Anonymous said...

sir anonymus nane gubbachchi...

Anonymous said...

good one sir - gubbachchi.

Anil Talikoti said...

ಜೋಶಿಯವರೆ,
ಬಹಳ ಚೊಲೋ ಬರದಿರಿ. 'ನಿಜವಿರದ ಮಜವಿರದ ಸಂಭ್ರಮ ಕೂಡ ವಜನಾದ ಸಜೆ' ತುಂಬಾ ಇಷ್ಟವಾಯಿತು!
-ಅನಿಲ ತಾಳಿಕೋಟಿ

Anonymous said...

RJ,
ಅಡಚಣೆಗಾಗಿ
ದಯವಿಟ್ಟು ಕ್ಷಮಿಸಿ:
ಉತ್ತರಾಯಣದವರೆಗೂ
ಸ್ಥಾನಪಲ್ಲಟವಿಲ್ಲ.
ಧರಣಿಮಂಡಲ ಮಧ್ಯದೊಳಗೆ
ಸದ್ಯಕ್ಕೆ ಉತ್ಖನನವಿಲ್ಲ!

------ಹ್ಯಾಟ್ಸಾಫ್! ಮೇಲಿನ ಈ ಸಂಕೇತಗಳು ಎಷ್ಟು ಓದುಗರಿಗೆ ಅರ್ಥವಾಗುತ್ತವೋ ಗೊತ್ತಿಲ್ಲ.ನನಗಂತೂ ನಿಮ್ಮ ಎಲ್ಲ ಕವಿತೆಗಳ ಪೈಕಿ ಇದು ತುಂಬಾ ಲೈಕ್ ಆಯ್ತು. :-)
~Suresh

ರಾಘವೇಂದ್ರ ಜೋಶಿ said...

@ವಾಣಿಶ್ರೀ ಭಟ್ ಅವರೇ, ಧನ್ಯವಾದಗಳು.
@ಅಂಜಲಿಯವರೇ,ನಿಮಗೂ ಧನ್ಯವಾದಗಳು.
@ಜಲನಯನ ಅವರೇ,ಬರೆದಂತೂ ಆಗಿದೆ.ಇನ್ನೂ ವಿವರಿಸಲು ಹೋದರೆ ಪದ್ಯ ಗದ್ಯವಾಗುತ್ತದೆ ಅಂತ ಭಯವಿದೆ..ಹಹಹ.. :-)
@ಸುಕೇಶ್ ಅವರೇ,ಬ್ಲಾಗಿಗೆ ಬಂದು ಅಭಿಪ್ರಾಯ ಹೇಳಿದ್ದಕ್ಕೆ,ನೀವು ಕೊಟ್ಟ ಸಮಯಕ್ಕೆ-ಥ್ಯಾಂಕ್ಸು! :-)
@ಸತೀಶರೇ,ಕರೆಕ್ಟ್ ಮಾತು.. hope is bigger than Pope.and also faith is force of life! :-)

ರಾಘವೇಂದ್ರ ಜೋಶಿ said...

@DV KINI ಅವರೇ,ಬ್ಲಾಗಿಗೆ ಸ್ವಾಗತ.ಒಂಥರಾ ಮಿಸಾಳ್ ಭಾಜಿ ಕವಿತೆ ಅಂತೀರಾ..? ಹಹಹ.. ಥ್ಯಾಂಕ್ಸ್. :-)
@ಸುಶ್ರುತ ಅವರೇ,ಧನ್ಯವಾದಗಳು.
@ಭಾರತಿಯವರೇ,ನಿಮಗೂ ಥ್ಯಾಂಕ್ಸು ಕವಿತೆ ಮೆಚ್ಚಿಕೊಂಡಿದ್ದಕ್ಕೆ.
@ಸುನಾಥ್ ಸರ್,ನಿಮ್ಮ ಕಮೆಂಟು ಮತ್ತು ಆ ಖುಷಿಯ ಮೊಮೆಂಟು-ಎರಡಕ್ಕೂ ಧನ್ಯವಾದಗಳು. :-)
@ಮಂಜುನಾಥರೇ,ಏನೋ ಯೋಚಿಸಿಕೊಂಡು ಬರೆಯಲು ಯತ್ನಿಸಿದಾಗ ಅಕಸ್ಮಾತ್ತಾಗಿ ಹೊಳೆದ ಸಾಲುಗಳು ಇವು..:-)

ರಾಘವೇಂದ್ರ ಜೋಶಿ said...

@ಕೇಶವ ಕುಲಕರ್ಣಿ ಅವರೇ,ಮೆಚ್ಚಿದೆ ಮೆಚ್ಚಿದೆ ನಿಮ್ಮ ಮಾತನ್ನ..ಮುಚ್ಚಿದರೆ ಹಿಡಿಯಷ್ಟು;ಬಿಟ್ಟರೆ ಮನೆತುಂಬ ಸಾಸಿವೆ.. ಥ್ಯಾಂಕ್ಸ್! :-)
@ಬದರಿನಾಥರೇ,ನಿಮ್ಮ ಪ್ರೀತಿಯ ಮಾತುಗಳಿಗೆ ಋಣಿ ಮತ್ತು ಅಭಾರಿ.. :-)
@ಅಶೋಕ ಅವರೇ,ಕವಿತೆ ನಿಮಗಿಷ್ಟವಾಗಿದ್ದಕ್ಕೆ ನನಗೂ ಖುಷಿ..:-)
@ಅನಿಲ್ ತಾಳಿಕೋಟಿಯವರೇ,ಬ್ಲಾಗಿಗೆ ಸ್ವಾಗತ.ನಿಮ್ಮ ಸಮಯಕ್ಕೆ ಮತ್ತು ನಿಮ್ಮ ಅನಿಸಿಕೆಗಳಿಗಾಗಿ ವಿಶೇಷ ಧನ್ಯವಾದ.ಮತ್ತೇ ಸಿಗೋಣ.. :-)
@ಸುರೇಶ ಅವರೇ,ಹಹಹ..ಓದುಗರು ಬರೆಯುವವರಿಗಿಂತ ಜಾಣರು ಅಂತ ನನ್ನ ಭಾವನೆ.ಈ ಕವಿತೆ ನಿಮ್ಮನ್ನು ವಿಶೇಷವಾಗಿ ಸೆಳೆದಿದ್ದರೆ,ಅದಕ್ಕೆ ನಿಮ್ಮ ಸಾಹಿತ್ಯ ಪ್ರೀತಿಯೇ ಕಾರಣ..ಧನ್ಯವಾದ. :-)

ರಾಘವೇಂದ್ರ ಜೋಶಿ said...

@ಗುಬ್ಬಚ್ಚಿ ಸತೀಶರೇ,I am sorry.ನಿಮ್ಮ ಕಮೆಂಟು spam ಅಲ್ಲಿ ಕೂತಿತ್ತು..ಇವಾಗಷ್ಟೇ ನೋಡಿದೆ,ಹೊರಗೆ ತಂದೆ! ಧನ್ಯವಾದಗಳು. :-)

ushakattemane said...

ನಮ್ಮಂತವರ ಕನವರಿಕೆಗಳು ನಿಮಗೆ ಹೇಗೆ ಕೇಳಿಸುತ್ತೆ ಜೋಷಿಯವರೇ..?
ಕವನ ಇಷ್ಟವಾಯ್ತು.

Anonymous said...

hasuvinanta huduga
hasivaada hudugi
hudugane ahaarari
:):) annodu gothaytu

ರಾಘವೇಂದ್ರ ಜೋಶಿ said...

@ಉಷಾ ಕಟ್ಟೆಮನೆಯವರೇ, ನಿಮ್ಮ ಪ್ರತಿಕ್ರಿಯೆಗೆ ಸದಾ ಖುಷಿ..ಧನ್ಯವಾದಗಳು.

@ಸುಜಯೀಂದ್ರ ಅವರೇ, ಕವಿತೆ ಬರೆಯೋದು ಒಬ್ಬರೇ ಆದರೂ ಪ್ರತಿಫಲಿಸುವದು ಹತ್ತಾರು ಬಗೆಯಲ್ಲಿ..ಹೌದಲ್ವ? :-)

ರಾಘವೇಂದ್ರ ಹೆಗಡೆ said...

ಚೆನ್ನಾಗಿದೆ.. :)

ಯಾರೋ ಹೇಳಿದರು-ಅನುಭವ ಮಾನವ ಕಲ್ಪಿತ;ಅನುಭಾವ ದೇವ ನಿರ್ಮಿತ.
..........................
.................
ಹಾಳಾದ್ದು,ನಂಬಿಕೆ ಎನ್ನುವದು ಯಾವತ್ತೂ ಸಾಯುವದೇ ಇಲ್ಲ!-

Superb..

Uma Bhat said...

ಆ ನಂಬಿಕೆಯೇ ನಮ್ಮ ಬಾಳಿನ ಮಂತ್ರ. ಆ ನಂಬಿಕೆ ಸಾಯಬಾರದು ಅಲ್ಲವೇ?

ರಾಘವೇಂದ್ರ ಜೋಶಿ said...

@ರಾಘವೇಂದ್ರ ಹೆಗಡೆ ಅವರೇ, ಬ್ಲಾಗಿಗೆ ಸ್ವಾಗತವಿದೆ.
Thanks for your compliments. :-)

@ಉಮಾ ಭಟ್ ಅವರೇ, ಖಂಡಿತ ಹೌದು.ನಂಬಿಕೆಯ ಮೇಲೆಯೇ ನಮಗೆ ನಂಬಿಕೆಯಿದೆ! :-) ಧನ್ಯವಾದಗಳು.

Swarna said...

ಹೊಸದೇನೂ ಹೇಳಲು ಇಲ್ಲ ಸರ್
ಚಂದದ ಕವಿತೆ.
"ನಿಜವಿರದ ಮಜವಿರದ ಸಂಭ್ರಮ ಕೂಡ ವಜನಾದ ಸಜೆಯಾಗುತ್ತದೆ."
ಅದ್ಭುತ ಸಾಲು. ಇಂಥಾ ನಂಬಿಕೆಗಳ ಮೇಲಿನ ನಂಬಿಕೆ ಉಳಿಯಲಿ ಬೆಳೆಯಲಿ :)
ಸ್ವರ್ಣಾ

ತೇಜಸ್ವಿನಿ ಹೆಗಡೆ said...

ನಿಜವಿರದ ಮಜವಿರದ
ಸಂಭ್ರಮ ಕೂಡ
ವಜನಾದ ಸಜೆಯಾಗುತ್ತದೆ. - Double liked! :)

ರಾಘವೇಂದ್ರ ಜೋಶಿ said...

@ ಸ್ವರ್ಣ ಮತ್ತು ತೇಜಸ್ವಿನಿಯವರೇ, ಇಬ್ಬರಿಗೂ ಕವಿತೆಯ ವಿಶಿಷ್ಟ ಭಾಗವೇ ಹಿಡಿಸಿರುವದು ಮತ್ತೊಂದು ವಿಶೇಷ..ಇಬ್ಬರಿಗೂ ಥ್ಯಾಂಕ್ಸ್. :-)

ಈಶ್ವರ ಪ್ರಸಾದ said...

ಕವನ ತುಂಬಾ ಚೆನ್ನಾಗಿದೆ ಸರ್ ..ಇಷ್ಟವಾಯಿತು

Unknown said...

V-ಭಿನ್ನ ಕವಿತೆ. ತುಂಬಾ ಇಷ್ಟವಾಯ್ತು ಜೋಶಿ ಸಾರ್.

ಕನಸಿನ ಕಡಲು said...

ನಂಬದೇ
ಉಂಬುದೇನನ್ನ?
... ಅಲ್ಲವೆ?