Wednesday, July 19, 2017

ವಚನಗಳಲ್ಲಿನ ಸಾಂಗತ್ಯ, ಸಂಪ್ರೀತಿ ಮತ್ತು ಮಧುರಾನುಭೂತಿ!

ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ ಕೃಷ್ಣನ ಬಗ್ಗೆ ಚಿತ್ರಣ ಕಟ್ಟುತ್ತಾರೆ. ಈ ಕೃಷ್ಣನೋ ಕಂಡಕಂಡ ಹುಡುಗಿಯರಿಗೆ ಚುಡಾಯಿಸಿದ್ದಲ್ಲದೇ ಅವರ ಮನಸ್ಸನ್ನೂ ತನ್ನೊಂದಿಗೆ ಕರೆದೊಯ್ದಿರುತ್ತಾನೆ. ಹೀಗಾಗಿ ಆ ಹುಡುಗಿಯರ ಅಮ್ಮಂದಿರರಿಗೆ ಕೃಷ್ಣನ ಮೇಲೆ ಸಿಟ್ಟು. ಆದರೆ ಆ ಸಿಟ್ಟಾದರೂ ಎಂಥದ್ದು? ಆ ಸಿಟ್ಟಿನಲ್ಲೂ ಪ್ರೀತಿಯಿದೆ, ಮಮತೆಯಿದೆ. 'ನನ್ನ ಮಗಳನ್ನಷ್ಟೇ ನೀನು ಕದ್ದೊಯ್ಯಬಾರದೇ' ಅನ್ನುವ ಹಪಾಹಪಿಯಿದೆ. ಈ ಅಮ್ಮಂದಿರೆಲ್ಲ ಕೃಷ್ಣನ ತಾಯಿಯ ಬಳಿಗೆ ಬಂದು  ಆತನ ಘನಕಾರ್ಯಗಳ ಬಗ್ಗೆ ದೂರುತ್ತಾರೆ:

ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ 
ಬಡವರ ಮಗನೇನೆ ಹೊಡೆಯಲಿಕ್ಕೆ?
ಅಳಿಯನ ವೇಷದಿ ಮಗಳ ಕರೆಯ ಬಂದ 
ಕಲಹ ಮಾಡಿ ತಾ ಕಳಿಸೆಂದ 
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ 
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ..

   ಕರ್ನಾಟಕದ ದಾಸಸಾಹಿತ್ಯ ಮೆಲುದನಿಯ ಭಕ್ತಿಪಂಥಕ್ಕೆ ಸೇರುವಂಥದ್ದು. ಅಲ್ಲಿ ಕೃಷ್ಣ, ಶ್ರೀರಂಗ ಮುಂತಾದ ವೈಷ್ಣವ ಭಕ್ತಿಯ ಸಾರವೇ ಹರಿದಿದೆ. ಮುಂದೆ ಅದು ಭಾರತೀಯ ಸಂಗೀತ ಪ್ರಾಕಾರದಲ್ಲಿ ಕರ್ನಾಟಕ ಸಂಗೀತವನ್ನು ಮುಂಚೂಣಿಗೆ ತಂದು ನಿಲ್ಲಿಸುತ್ತದೆ. ಈ ಪರಂಪರೆಯಲ್ಲಿ ಹಾಡು ಕಟ್ಟಿ, ರಾಗ ಸಂಯೋಜಿಸಿ. ಸ್ವತಃ ಕೈಯಲ್ಲೊಂದು ವಾದ್ಯ ಹಿಡಿದು ನೃತ್ಯ ಮಾಡುತ್ತ ಭಗವಂತನ ಸನ್ನಿಧಿಯಲ್ಲಿ ಮೈಮರೆತವರೂ ಇದ್ದಾರೆ. ಹಾಗೆಯೇ ಮೀರಾಳಂಥವರು ಭಗವಂತನನ್ನೇ ತನ್ನ ಗಂಡನೆಂದು ಭಾವಿಸಿ ಮೈಮರೆತವರೂ ಉಂಟು. 

   ಅಕ್ಕಮಹಾದೇವಿ ಕೂಡ ಇದಕ್ಕೆ ಹೊರತಲ್ಲ. ದಾಸಸಾಹಿತ್ಯದೊಂದಿಗೆ ಸಮಾನಾಂತರವಾಗಿ ಬೆಳೆದುಬಂದ ವಚನಸಾಹಿತ್ಯದಲ್ಲಿನ ಅಕ್ಕ ಕೂಡ ಚೆನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದೇ ಭಾವಿಸಿ ಕದಳೀವನದಲ್ಲಿ ಕಳೆದುಹೋದವಳು. ಭಕ್ತಿಮಾರ್ಗದಲ್ಲಿ ಹೆಣ್ಣು ಅಂತನ್ನುವದು ಪುರುಷ ಶಕ್ತಿಯನ್ನು ಹುಡುಕುತ್ತ ಹೋಗುವದೇನೋ ಸಹಜ. ಆದರೆ ಒಂದು ಗಂಡು ಇನ್ನೊಂದು ಗಂಡಿನಲ್ಲಿ ಅನುರಕ್ತನಾಗುವದು? ಇದು ಕುತೂಹಲಕರ. ವಚನ ಪರಂಪರೆಯ ಒಂದು ಚಿಕ್ಕ ಘಟಕವಾಗಿ ಈ ವಚನಕಾರರು ತಮ್ಮದೇ ಒಂದು ಭಾವ ಮೂಡಿಸಿದರು. ಅದು 'ಶರಣಸತಿ-ಲಿಂಗಪತಿ' ಅನ್ನುವ ಭಾವ. ಇಲ್ಲಿ ಕೃತಿಕಾರ ಭಕ್ತಿಯ ಮಾರ್ಗದಲ್ಲಿ ಭಗವಂತನನ್ನು ತನ್ನ ಗಂಡನೆಂದೂ, ತಾನು ಆತನ ಹೆಂಡತಿಯೆಂದೂ ಗುರುತಿಸಿಕೊಳ್ಳುತ್ತಾರೆ. ಸ್ವಾರಸ್ಯವೆಂದರೆ, ಹೀಗೆ ತಮ್ಮನ್ನು ತಾವು ಭಗವಂತನ ಹೆಂಡತಿಯೆಂದು ಘೋಷಿಸಿಕೊಂಡವರು ಗಂಡಸರು!  

   ಇಂಥವರ ಪೈಕಿ ಇಲ್ಲೊಬ್ಬನಿರುವನು. ಈತ 'ನನ್ನ ಗಂಡನು ಅತಿಕಾಮಿ ವಿಪರೀತನು' ಅಂತಲೇ ಜಗತ್ತಿಗೆ ಕೂಗಿ ಹೇಳಿದವನು. ಹೆಸರು ಉರಿಲಿಂಗದೇವ. ಕ್ರಿ.ಶ 1160 ರ ಕಾಲಘಟ್ಟದಲ್ಲಿದ್ದ ಈ ವಚನಕಾರನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸಲೆಂದು ಆ ಕಾಲಘಟ್ಟದ ಅನ್ಯಮತೀಯರು ಈತನ ಗುಡಿಸಲಿಗೆ ಬೆಂಕಿ ಹಚ್ಚಿದರೂ ಈತ ವಿಚಲಿತನಾಗದೇ ಪೂಜಾಕೈಂಕರ್ಯದಲ್ಲಿ ಮಗ್ನನಾಗಿದ್ದ ಅಂತನ್ನುವ ಕತೆಯಿದೆ. ಹೀಗಿದ್ದ ಉರಿಲಿಂಗದೇವ ಹೆಣ್ಣಿನ ಪ್ರತಿಯೊಂದೂ ಭಾವಗಳನ್ನು ತನ್ನೊಳಗೆ ಸ್ಫುರಿಸಿಕೊಂಡು, 'ಉರಿಲಿಂಗದೇವ' ಎಂಬ ಅಂಕಿತದೊಂದಿದೆ ಶಿವನೆಂಬ ಗಂಡನನ್ನು ಕೊಂಡಾಡಿದವನು. ಒಂದು ಹೆಣ್ಣು ತನ್ನ ಸಖಿಯರೊಂದಿಗೆ ದಾಂಪತ್ಯಜೀವನದ ಸರಸ, ಸ್ವಾರಸ್ಯಗಳನ್ನೆಲ್ಲ ಹೇಗೆ ಹೇಳಿಕೊಳ್ಳುತ್ತಾಳೋ, ಅದೇ ಧಾಟಿಯಲ್ಲಿ ಉರಿಲಿಂಗದೇವನೂ ಶಿವನೊಂದಿಗಿನ ದಾಂಪತ್ಯಜೀವನದ ಸ್ವಾರಸ್ಯಗಳನ್ನು ಬರೆದುಕೊಂಡವನು. ಈತನ ವಚನಗಳಲ್ಲಿ ಭಾಷೆಯ ಬಗ್ಗೆ ಭಿಡೆ, ಮುಲಾಜು ಎಂಬುದಿಲ್ಲ. ಆದರೆ ಆ ಮಧುರಭಾವ ಎಷ್ಟು ನೇರವಾಗಿದೆಯೆಂದರೆ,

ಎಮ್ಮ ನಲ್ಲನ ಕೂಡಿದ ಕೂಟವ ಇದಿರಿಗೆ ಹೇಳಬಾರದವ್ವಾ.
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ.
ಉರಿಲಿಂಗದೇವ ಬಂದು ನಿರಿಯ ಸೆರಗ ಸಡಿಲಿಸಲೊಡನೆ
ನಾನೊ ತಾನೊ ಏನೆಂದರಿಯೆನು. 
-ಅಂತ ತನ್ನ 'ಸಂಸಾರ'ದ ಗುಟ್ಟನ್ನು ಬಿಚ್ಚಿಡುತ್ತಾನೆ. ಈತನ ಸ್ವಾಮಿನಿಷ್ಠೆ ಇಷ್ಟಕ್ಕೇ ನಿಲ್ಲುವದಿಲ್ಲ. ತನ್ನ ಗಂಡ(ಶಿವ) ಕಾಮನನ್ನು ಕೊಂದು ಪಟ್ಟಕ್ಕೆ ಬಂದಂಥ ಕಾಮರಾಜ ಅಂತನ್ನುತ್ತಾನೆ. ಆತ ಗಂಡರೆಲ್ಲರನ್ನು ಹೆಂಡಿರನ್ನು ಮಾಡಿಕೊಂಡವನು ಅಂತನ್ನುತ್ತಾನೆ. ಇಂಥ ಕಾಮಿಯು ನನ್ನನ್ನು ಕಾಮಿಸಿ ನನಗೆ ಕಾಮಸಿದ್ಧಿಯನ್ನು ಕರುಣಿಸಿದನು  ಅಂತನ್ನುತ್ತಲೇ, ಈ ನಲ್ಲನ ಬೇಟದ ಕೂಟದ ಪರಿಯನು ಏನೆಂದು ಹೇಳಲಿ? ಈತ ಅತಿಕಾಮಿ ವಿಪರೀತನು- ಅಂತ ಹೇಳಿಬಿಡುತ್ತಾನೆ! 

   ಹೀಗೆ ತಮ್ಮನ್ನು ತಾವು ಸತಿಯರೆಂದು ಘೋಷಿಸಿಕೊಂಡ ವಚನಕಾರರು ಬೆರಳೆಣಿಕೆಯಷ್ಟು. ಸಿದ್ಧರಾಮೇಶ್ವರ, ಉರಿಲಿಂಗದೇವ, ಗಜೇಶ ಮಸಣಯ್ಯ ಮತ್ತು ಘನಲಿಂಗಿದೇವ ಪ್ರಮುಖರು. ಆದರೆ ವಚನಗಳಲ್ಲಿನ ಈ ಸತಿಪತಿ ಭಾವ ನೇರವಾಗಿ ವಚನ ಪರಂಪರೆಯಲ್ಲಿ ಮೈತಾಳಿದ್ದಲ್ಲ. ಬಹುಶಃ ಅದು ತಮಿಳುನಾಡಿನ ನಾಯನ್ಮಾರರ (ತೇವಾರಂ) ಭಕ್ತಿಗೀತೆ ಮತ್ತು ವೈಷ್ಣವ ಆಳ್ವಾರುಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದು, ಅದು ನಮ್ಮಲ್ಲಿನ ವಚನಕಾರರನ್ನು ಪ್ರೇರೇಪಿಸಿದಂತಿದೆ ಅಂತನ್ನುವ ವಾದ 'ವಚನಾನುಶೀಲನ' ಕೃತಿಯಲ್ಲಿ (ಲೇ। ಡಾ. ಎಸ್ ವಿದ್ಯಾಶಂಕರ್) ಗೋಚರಿಸುತ್ತದೆ. 

   ಹಾಗೆ ನೋಡಿದರೆ ವಚನಸಾಹಿತ್ಯದ ಮೇರುಧ್ವನಿಗಳಾದ ಪ್ರಭುದೇವ ಮತ್ತು ಅಂಬಿಗರ ಚೌಡಯ್ಯರು ಈ ಕಾನ್ಸೆಪ್ಟನ್ನು ಧಿಕ್ಕರಿಸಿದ್ದುಂಟು. ಪ್ರಭುದೇವ ಕೆಲವೊಂದು ವಚನಗಳಲ್ಲಿ ಈ ಸತಿಪತಿಯ ಭಾವದ ಬಗ್ಗೆ ತಕರಾರು, ಆಕ್ಷೇಪಣೆ ತೆಗೆಯುತ್ತಾನೆ. ಚೌಡಯ್ಯನಂತೂ ಈ ಸತಿಪತಿ ಎಂಬುದನ್ನೇ ‘ಮೋಸದ ವೇಷ’ವೆಂದು ಜರಿಯುತ್ತಾನೆ. ಭಗವಂತನೆಡೆಗೆ ನಮ್ಮ ಅನುಸಂಧಾನ ಹೇಗಿರಬೇಕೆನ್ನುವ ಉದಾಹರಣೆ ಕೊಡುವ ಚೌಡಯ್ಯ, 'ನೀರಿಗೆ ನೀರು ಕೂಡಿ ಬೆರೆತಲ್ಲಿ, ಅದನ್ನು ಭೇದಿಸಿ ಬೇರೆ ಹೇಗೆ ಮಾಡುವಿರಿ?ಸತಿಪತಿಯರೆಂದು ಹೇಗೆ ವಿಭಜಿಸುವಿರಿ' ಅಂತನ್ನುವ ಪ್ರಶ್ನೆ ಎಸೆಯುತ್ತಾನೆ.

   ಆದರೆ ಸತಿಪತಿಯ ಭಾವದಲ್ಲಿರುವ ಸಿದ್ಧರಾಮನೆಂಬ ವಚನಕಾರ ಇದಕ್ಕೆಲ್ಲ ಸೊಪ್ಪು ಹಾಕುವದಿಲ್ಲ. 
‘ಕಪಿಲಸಿದ್ಧಮಲ್ಲಿಕಾರ್ಜುನ’ ಅಂತನ್ನುವ ಅಂಕಿತದಲ್ಲಿ ಬರೆದಿರುವ ಈತ, ಸತಿಯ ಎಲ್ಲ ಕೋಮಲ ಗುಣಗಳನ್ನೂ ಅಂಟಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ, ತನ್ನ ಪತಿಯಾದ ಭಗವಂತನೊಂದಿಗೆ ಮಧುರಭಾವದ ಅನುಸಂಧಾನ ನಡೆಸುತ್ತಾನೆ. ಸಿದ್ಧರಾಮನ ಈ ಅನುಸಂಧಾನ ಎಷ್ಟು ಮಜವಾಗಿದೆಯೆಂದರೆ, ತನ್ನನ್ನು ತವರಿಗೆ ಹೊರಟುನಿಂತ ಹೆಣ್ಣಿಗೆ ಹೋಲಿಸಿಕೊಳ್ಳುತ್ತಾನೆ. ತಾನು ತವರಿಗೆ ಹೊರಟುನಿಂತರೂ ಯಾವ ಪ್ರೇಮವಿರಹವನ್ನೂ ತೋರಿಸದೇ 
ತನ್ನಷ್ಟಕ್ಕೆ ತಾನು ಯಾವುದ್ಯಾವುದೋ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಭಂಡಗಂಡನ ಕಟುಹೃದಯದ ಬಗ್ಗೆ ಸಿದ್ಧರಾಮೇಶ್ವರ ಹುಸಿಮುನಿಸಿನಿಂದ ಬೈದುಕೊಳ್ಳುವದು ಹೀಗೆ:

ಗಂಡ ಬಾರೆನೆನ್ನ ತವರೂರಿಗೆ ಹೋಗುವೆನೆನಲು,
ನೋಡೆ ನೋಡೆಲಗವ್ವಾ,
ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು
ತಾ ಬೇರೆ ಬೇಟೆಕಾರನಾದ. 
-ಅಂತ ಏಕಪ್ರಕಾರವಾಗಿ ಬೈದಾಡಿಕೊಂಡು ತನ್ನ ಮತ್ತು ಭಗವಂತನ ಮೇಳೈಸುವಿಕೆಯ ಕುರಿತು, 'ಹುಚ್ಚನ ಸಂಗ ನಿಶ್ಚಯವಾಯಿತು' ಅಂತ ತನ್ನಷ್ಟಕ್ಕೆ ತಾನೇ ಸಂತೈಸಿಕೊಳ್ಳುತ್ತಾನೆ. ಆದರೆ ಸಿದ್ಧರಾಮನ ಮುನಿಸು ಕ್ಷಣಿಕವಾದದ್ದು. ಯಾವುದೋ ಸಿಟ್ಟಿನ ಭರದಲ್ಲಿ ಗಂಡನ ಗುಣಾವಗುಣಗಳನ್ನು ಸಖಿಯರಲ್ಲಿ ದೂರುವ ಕ್ಷಣದಲ್ಲಿಯೇ, ಎದುರಿಗಿರುವವರು ಎಲ್ಲಿ ತನ್ನ ದೊರೆಯನ್ನು ಕೀಳಾಗಿ ಕಾಣುವರೋ ಅಂತ ಕಳವಳಗೊಂಡು ಥಟ್ಟಂತ ತಮ್ಮ ಪತಿಯ ಪಕ್ಷಕ್ಕೆ ನೆಗೆದುಬಿಡುವ ನಾರಿಯರ ಮನಸ್ಸನ್ನು ಸಿದ್ಧರಾಮನೂ ಆಹ್ವಾನಿಸಿಕೊಂಡಂತಿದೆ. ಹಾಗಾಗಿ ಈ ವಚನಕಾರನ ನುಡಿಯೊಂದು ತನ್ನ ಸ್ವಾಮಿಯ ವಿಶೇಷತೆಯನ್ನು ಬಣ್ಣಿಸುವ ಪರಿ ನೋಡಿ:

ಎಲ್ಲರ ಪರಿಯಲ್ಲ ಅವನ ಪರಿ ಹೊಸತು;
ಕಾಲಾರರಲ್ಲಿ ನಡೆವ, ಕಿವಿಯಲಿ ಉಂಬ,
ಮೂಗಿನಲ್ಲಿ ನೋಡುವ, ಬಾಯಲ್ಲಿ ಭಾವಿಸುವ,
ಕಣ್ಣಿನ್ಲ ಮೂರ್ಛೆಹೋಹ,
ಬಂದುದನತಿಗಳೆವ, ಬಾರದುದ ತನ್ನದೆಂಬ;
ಇಂಥಾ ವಿನೋದವಿಚಿತ್ರನವ್ವಾ.. 
-ಅಂತನ್ನುವ ವಚನಗಳನ್ನು ಓದುವಾಗ ನನಗೆ ದಿಢೀರಂತ ನೆನಪಾಗಿದ್ದು ಶಿಶುನಾಳ ಶರೀಫರು ಮತ್ತು ಅವರ 'ಎಲ್ಲರಂಥವನಲ್ಲ ನನಗಂಡ ಬಲ್ಲಿದನು ಪುಂಡ..'

   ಇನ್ನು, ಗಜೇಶ ಮಸಣಯ್ಯ ಅಂತನ್ನುವ ವಚನಕಾರ ಧಾಟಿ ಬೇರೆಯಿದೆ. ಈತ ಶಿವನೆಂಬ ಪತಿಯ ಗೈರುಹಾಜರಿಯನ್ನು ಅನುಭವಿಸುತ್ತಿರುವ ವಿರಹಿ. ಗಂಡನನ್ನು ಕಾಣದೇ ವಿರಹದಲ್ಲಿರುವ ತನ್ನ ಪರಿಸ್ಥಿತಿಯನ್ನು ವರ್ಣಿಸಲು ಇತರೇ ವಚನಕಾರರಂತೆ ಲೈಂಗಿಕಪ್ರಧಾನ ಪ್ರತಿಮೆಗಳನ್ನು ಬಳಸಿಕೊಳ್ಳುವದಿಲ್ಲ. ಅದರ ಬದಲಿಗೆ ಆತ ಹಾಯ್ಕುಕವಿಗಳಂತೆ ಪ್ರಕೃತಿಯ ಮೊರೆ ಹೋಗುತ್ತಾನೆ. ತನ್ನ ಈ ಪರಿಸ್ಥಿತಿ ನಲಿದು ಹಾಡಿಕೊಂಡಿದ್ದ ಕೋಗಿಲೆಗಳು ಬಿಟ್ಟುಹೋದ ಬನದಂತಾಗಿದೆ ಅನ್ನುತ್ತಾನೆ. ಪರಿಮಳವಿಲ್ಲದ ಪುಷ್ಪದಂತಾಗಿದ್ದೇನೆ ಅನ್ನುತ್ತಾನೆ. ಚಂದ್ರಮನಿಲ್ಲದ ನಕ್ಷತ್ರಗಳಂತಾಗಿದ್ದೇನೆ ಅಂತ ಹಲುಬುತ್ತಾನೆ. ಈತನದ್ದೂ ಕ್ಷಣಿಕ ಪ್ರಲಾಪವೇ. ಯಾಕೆಂದರೆ ಮರುಕ್ಷಣವೇ ಗಜೇಶ ಮಸಣಯ್ಯನ ರಾಗ ಬದಲಾಗುತ್ತದೆ:

ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ.
ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ.
ಅವ್ವಾ ಅವ್ವಾ ಆತನ ಕೈಯ ಹಿಡಿದಡೆ
ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ.
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ
ನಾನಪ್ಪ ಮರೆದೆನಿನ್ನೆಂತವ್ವಾ.          

   ಈ ಲೋಕವೇ ತೀರ ಮಜದ್ದು. ಇಲ್ಲಿ ಭಗವಂತನನ್ನು ಬೈದರು. ಉರಿದೆದ್ದರು. ಕೊನೆಗೆ ಅವನನ್ನೇ ಕೊಂಡಾಡಿದರು. ರಮಿಸಿದರು. ಕೇವಲ ಒಂದು ಸಾಂಗತ್ಯಕ್ಕಾಗಿ. ಒಂದು ಸಂಪ್ರೀತಿಗಾಗಿ.         
                                                                    -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 19.07.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

5 comments:

Unknown said...

Wounderfull

sunaath said...

ಭಕ್ತಿಸಾಹಿತ್ಯದಲ್ಲಿಯ ಮಧುರಭಾವವನ್ನು ವಿವರವಾಗಿ ವರ್ಣಿಸಿದ್ದಕ್ಕಾಗಿ ಧನ್ಯವಾದಗಳು. ಈ ಭಕ್ತಿಸತಿಯರ ಸರಣಿಯಲ್ಲಿ ಕೊನೆಯದಾಗಿ ನಮ್ಮ ಕಣ್ಣಿಗೆ ಬೀಳುವವರು ಮಧುರಚೆನ್ನ ಎನ್ನುವ ಕಾವ್ಯನಾಮದಲ್ಲಿ ಕಾವ್ಯವನ್ನು ರಚಿಸಿದ ಹಲಸಂಗಿ ಚೆನ್ನಮಲ್ಲಪ್ಪನವರು. ಅವರು ರಚಿಸಿದ ‘ನನ್ನ ನಲ್ಲ’ ಎನ್ನುವ ಕಾವ್ಯದಲ್ಲಿ ಈ ರೀತಿಯಾಗಿ ಬರುತ್ತದೆ:
"ನಿಲ್ಲು ನಿಲ್ಲೆಲೆ ನವಿಲೆ,ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿಹನೆ
ತಾಳಲಾರದು ಜೀವ ಹೇಳಬಾರೆ."
ಆದರೆ, ಸಿದ್ಧಿಯನ್ನು ಪಡೆದ ಕ್ಷಣದಲ್ಲಿ ಅವರ ಭಾವ ‘ತಾನು ಮಗಳು, ಆತ ತಂದೆ’ ಎನ್ನುವ ಭಾವದಲ್ಲಿದೆ. ಅದು ಹೀಗಿದೆ:
"ಕನಸು ಬಿತ್ತು ಬಾಲೆಗೆ
ಮನಸಿಗೊಂದು ದೀವಿಗೆ
ಜಡೆಯ ಮುಡಿಯ ತಂದೆಯು
ನೋಡು ಮಗಳೆ ಎಂದನು".
ಈ ಸಾಲುಗಳು ಅಕ್ಕಮಹಾದೇವಿಯ, "ಅಕ್ಕ ಕೇಳೆ, ನಾನೊಂದು ಕನಸ ಕಂಡೆ" ಎನ್ನುವ ಗೀತೆಯೋದನ್ನು ನೆನಪಿಸುತ್ತವೆ, ಅಲ್ಲವೆ?

ರಾಘವೇಂದ್ರ ಜೋಶಿ said...

ಧನ್ಯವಾದಗಳು ಶ್ರೀನಿವಾಸ ಕುಮಾರರೇ..

ರಾಘವೇಂದ್ರ ಜೋಶಿ said...

ಸುನಾಥ ಸರ್,
ಮಧುರ ಚೆನ್ನರ ಮಾತುಗಳನ್ನು ನೀವು ರೆಫರ್ ಮಾಡಿದ್ದು ನೋಡಿ ಖುಷಿಯಾಯಿತು. ಅವರದೇ ಆದ,
ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ
ಅದು ನಮ್ಮ ಬುದ್ಧಿಯಾಚೆಗಿನ ಮಾತು,

ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು

ಭವದಲ್ಲಿ ಕಾಣೆ ಮನಗಂಡ ಮಾತು.

ಅಂತನ್ನುವ ನುಡಿಗಳ ಬಗ್ಗೆ ಹಿಂದೊಮ್ಮೆ ನೀವು ನನ್ನ ಜೊತೆ ಮಾತನಾಡಿದ್ದು ನೆನಪಾಯಿತು. ಹೌದು, ಮನುಷ್ಯನ ಆಂತರಿಕ ಪ್ರಜ್ಞೆಯ ಬಗ್ಗೆ ಮಾತನಾಡುವ ಅವರ ಕವಿತೆಗಳು ಮನನೀಯವಾಗಿವೆ. ಧನ್ಯವಾದಗಳು.

ದೀಪಾ ಜೋಶಿ said...

ವಾಹ್.. ಅದ್ಭುತ ಲೇಖನ