ಚಿತ್ರ:ವಿಕಿಪೀಡಿಯ
ಇವತ್ತಿನ ಬೆಳಗು ತಥಾಗಥಿತ ಬೆಳಗಿನಂತಿಲ್ಲ .
ದೂರದ ದೇವಸ್ಥಾನದಲ್ಲಿ ಸುಬ್ಬಲಕ್ಷ್ಮಿಯ "ಕೌಸಲ್ಯ ಸುಪ್ರಜಾ.." ಇವತ್ಯಾಕೋ ಪುಟ್ಟನಿಗೆ ಸುಮಧುರವಾಗಿ ಕೇಳಿಸುತ್ತಿದೆ.ಎಂದಿನ
ನಿದ್ರಾಭಂಗದ ಅವಸ್ಥೆಯಿಂದ ಎದ್ದ ಪುಟ್ಟನಿಗೆ,ಅಮ್ಮ ಅಂಗಳದಲ್ಲಿ ಥಳಿ ಹೊಡೆದು ರಂಗೋಲಿ ಇಡುತ್ತಿರುವ ದೃಶ್ಯ ಕಂಡುಬಂದಿದೆ.
ಮುಖ ತೊಳೆದವನೇ ಚವ್ಹಾಣ್ ಗಟಾರದಲ್ಲಿ ಸಂಡಾಸಕ್ಕೆಂದು ಕೂತಿದ್ದಾನೆ.(ಈ ಗಟಾರದ ಅಂಚಿನಲ್ಲಿ ಚವ್ಹಾಣ್ ಎಂಬುವವರ
ದೊಡ್ಡ ಮನೆ ಇರುವದರಿಂದ ಮೋರಿಗೆ 'ಚವ್ಹಾಣ್ ಗಟಾರ'ವೆಂದೇ ಹೆಸರು ಬಿದ್ದಿದೆ.) ಕೈಯಲ್ಲಿ ಎರಡು ಬೆಣಚು ಕಲ್ಲುಗಳನ್ನು
ಹಿಡಿದು ಒಂದಕ್ಕೊಂದು ಕುಟ್ಟುತ್ತ ಕಿಡಿಯೆಬ್ಬಿಸುವ ಪ್ರಯತ್ನದಲ್ಲಿರುವ ಪುಟ್ಟನಿಗೆ,ಬಹಿರ್ದಸೆಗೆ ಕುಳಿತಾಗ ಏನಾದರೊಂದು
ಕೆಲಸ ಮಾಡುತ್ತಿದ್ದರೆ ಬಂದ ಕೆಲಸ ಬೇಗ ಆಗುತ್ತದೆ ಅಂತ ಯಾರು ಇವನ ತಲೆಯಲ್ಲಿ ತುಂಬಿರುವರೋ ಗೊತ್ತಿಲ್ಲ!
ನಿಮಿಷಾರ್ಧದಲ್ಲಿ ಕೆಲಸ ಮುಗಿಸಿರುವ ಪುಟ್ಟ ಚೆಡ್ಡಿ ಬಿಟ್ಟುಕೊಂಡೇ ಮನೆಯ ಅಂಗಳಕ್ಕೆ ಬಂದು ಎಂದಿನ ಕೂಗು ಹಾಕಿದ್ದಾನೆ:
"ಕುಂಡೆಗೆ ನೀರೂ..."
***
ಮನೆಯೊಳಗೆ ಎಂದಿನ ಚಟುವಟಿಕೆಗಳು ಭರದಿಂದ ಸಾಗುತ್ತಲಿವೆ.ಕುದಿಯುವ ಬಿಸಿನೀರು ಹಿತ್ತಾಳೆಯ ಹಂಡೆಯಲ್ಲಿ
ಕಾಯುತ್ತಲಿದೆ.ಸೀಗೆಕಾಯಿ ಕೈಯಲ್ಲಿ ಹಿಡಿದ ಅಕ್ಕ ಪುಟ್ಟನಿಗಾಗಿ ಕಾಯುತ್ತಿದ್ದಾಳೆ.ಈತ ಲಗುಬಗೆಯಿಂದ
ಸ್ನಾನಕ್ಕಿಳಿದಿದ್ದಾನೆ.ಯಾವತ್ತಿನಂತೆ ಅಮ್ಮ ಬಿಸಿನೀರನ್ನು ನಿಯಂತ್ರಣಕ್ಕೆ ತರುವ ಕೆಲಸಕ್ಕೆ ಕೈಹಾಕುತ್ತಿದ್ದಂತೆಯೇ
ಪುಟ್ಟ,"ಇಲ್ಲ,ಇಲ್ಲ..ನಾನೇ ಮಾಡ್ತೀನಿ.." ಅಂತ ಎಲ್ಲರನ್ನೂ ಬಚ್ಚಲು ಮನೆಯಿಂದ ಆಚೆ ಕಳಿಸಿದ್ದಾನೆ.ಅಬ್ಬ,ಒಂದು ಕೆಲಸ
ತಪ್ಪಿತು ಅಂತ ಅಕ್ಕ ಖುಷಿಗೊಂಡಿದ್ದರೆ,ಅಮ್ಮನಿಗೆ ಏನೋ ಕಳೆದುಕೊಳ್ಳುತ್ತಿರುವ ಭಾವ ತುಂಬಿ ಬಂದಂತಿದೆ.
ಒಳಗಿನಿಂದ ಚಿಲಕ ಹಾಕಿಕೊಳ್ಳಬೇಡ ಎಂದು ಅವಲತ್ತುಕೊಂಡ ಇವರಿಬ್ಬರೂ ಅಲ್ಲಿಂದ ಹೊರನಡೆದಿದ್ದಾರೆ.ಬಚ್ಚಲು
ಮನೆಯ ತುಂಬೆಲ್ಲ ನೀರಿನ ಉಗಿ ತುಂಬಿಕೊಂಡಂತಾದಾಗ ಸ್ನಾನ ಮುಗಿಸಿದ ಪುಟ್ಟ ಬಾಗಿಲು ತೆಗೆದಿದ್ದಾನೆ.ಅವನೀಗ
ಟಾವೆಲ್ ಸುತ್ತಿಕೊಂಡೇ ದೇವರ ಪಟಗಳಿಗೆ ನಮಸ್ಕರಿಸಬೇಕಿದೆ.
"ಚಿದಂಬರ ನಮಸ್ತೇಸ್ತು ಚಿಂತಿತಾರ್ಥ ಪ್ರದಾಯಿನೇ.."
ಹಾಗಂತ ಇಷ್ಟದೇವತೆಗಳಿಗೆ ಮಂತ್ರಿಸುತ್ತ (?) ಒಂದು ಕೈಯಲ್ಲಿ ಮಂಗಳಾರತಿ,ಇನ್ನೊಂದು ಕೈಯಲ್ಲಿ ಪುಟ್ಟದಾದ ಗಂಟೆ
ಹಿಡಿದುಕೊಂಡಿರುವ ಪುಟ್ಟನಿಗೆ ಇಷ್ಟು ದಿನವಾದರೂ ಆರತಿಯ ಪ್ರಕ್ರಿಯೆ ಒಗ್ಗಿ ಬಂದಂತಿಲ್ಲ.ಇಲ್ಲಿ ಆರತಿ ಚಕ್ರಾಕಾರವಾಗಿ
ಬೆಳಗಿದರೆ,ಗಂಟೆ ಅಡ್ಡಡ್ಡ ಚಲಿಸಬೇಕು.ಆದರೆ ಪುಟ್ಟನ ಕ್ರಿಯೆಯಲ್ಲಿ ಆರತಿ ಚಕ್ರಾಕಾರವಾಗಿ ಬೆಳಗುತ್ತಿರುವಾಗಲೆಲ್ಲ
ಎಡಗೈಯಲ್ಲಿರುವ ಗಂಟೆ ಶ್ರುತಿ ತಪ್ಪಿ ಆರತಿಯೊಂದಿಗೆ ತಾನೂ ಚಕ್ರಾಕಾರವಾಗಿ ತಿರುಗತೊಡಗುತ್ತದೆ!
ಬೆಳಗಿದರೆ,ಗಂಟೆ ಅಡ್ಡಡ್ಡ ಚಲಿಸಬೇಕು.ಆದರೆ ಪುಟ್ಟನ ಕ್ರಿಯೆಯಲ್ಲಿ ಆರತಿ ಚಕ್ರಾಕಾರವಾಗಿ ಬೆಳಗುತ್ತಿರುವಾಗಲೆಲ್ಲ
ಎಡಗೈಯಲ್ಲಿರುವ ಗಂಟೆ ಶ್ರುತಿ ತಪ್ಪಿ ಆರತಿಯೊಂದಿಗೆ ತಾನೂ ಚಕ್ರಾಕಾರವಾಗಿ ತಿರುಗತೊಡಗುತ್ತದೆ!
ಆಗೆಲ್ಲ ಪುಟ್ಟನ ಈ ಸಾಹಸದಿಂದಾಗಿ ಅಲ್ಲಿರುವ ಇಷ್ಟದೇವತೆಗಳೆಲ್ಲ ಗಾಬರಿಬಿದ್ದು,ಹ್ಯಾಗಾದರೂ ಮಾಡಿ ಪುಟ್ಟನನ್ನು
ಈ ಕಷ್ಟದಿಂದ ಪಾರುಮಾಡಬೇಕಲ್ಲ? ಅಂತ ಚಿಂತಿಸತೊಡಗುತ್ತಾರೆ..
ಹಾಗೆ ವರ್ಷಕ್ಕೆ ಮೂರ್ನಾಲ್ಕು ಬಾರಿ ಈ ಘಟಾನುಘಟಿ ದೇವರುಗಳಿಗೆಲ್ಲ ಮುಲಾಜು ಬರಿಸಿ,ಅವರೆಲ್ಲ ಬೆವರಿಳಿಯುವಂತೆ
ಮಾಡುವ ಪುಟ್ಟ,ತಾನು ಮಾತ್ರ 'ಎನ್ನಯ ಪಾಡು ಎನಗೆ..' ಎಂಬಂತೆ ತನ್ನ ವರ್ತುಲದೊಳಗೆ ತನ್ನನ್ನು ತಾನು
ಪ್ರತಿಷ್ಟಾಪಿಸಿಕೊಂಡುಬಿಡುತ್ತಾನೆ.
ಇವತ್ತಂತೂ ಸರಿಯೇ ಸರಿ.ಯಾಕೆಂದರೆ ಇವತ್ತು ಪಂದ್ರ ಅಗಸ್ಟ್! ಪುಟ್ಟನ ಹುಟ್ಟಿದಹಬ್ಬ.ಒಂದರ್ಥದಲ್ಲಿ ಆತನಿಗೆ ಸ್ವಾತಂತ್ರ್ಯ
ಸಿಕ್ಕ ದಿನ.ಹಾಗಾಗಿ ಇವತ್ತು ಮನೆಯಲ್ಲಿ ಪುಟ್ಟ ಹೇಳಿದ್ದೇ ವೇದವಾಕ್ಯ;ಮಾಡಿದ್ದೇ ರಾಜ್ಯಭಾರ.ಅದಕ್ಕಿಂತ ಹೆಚ್ಚಿನ ಮತ್ತು
ಮೌಲಿಕದ ವಿಷಯವೇನೆಂದರೆ,ಇವತ್ತು ಪುಟ್ಟನಿಗೆ ತನ್ನ ಶಾಲೆಯಲ್ಲಿ ತ್ರಿವರ್ಣಧ್ವಜ ಹಾರಿಸಬೇಕಿದೆ.ಅಲ್ಲಿರುವ ಮಾಸ್ತರುಗಳ
ಮುಂದೆ, ತನ್ನ ಸಹಪಾಠಿಗಳ ಎದುರಿಗೆ,ಶಾಲೆಗೆ ಬರಬಹುದಾದ ಅತಿಥಿಗಳಿಗೆ ಎದುರಾಗಿ ನಿಂತುಕೊಂಡು ಈತ ಸ್ಪೇಶಲ್ಲಾಗಿ
ಸೆಲ್ಯೂಟ್ ಒಂದನ್ನು ಬಾರಿಸಬೇಕಾಗಿದೆ.ಹಾಗಂತ ಹೇಳಿ ವಾರದಿಂದೀಚೆಗೆ ಪುಟ್ಟನಿಗೆ ಶಾಲೆಯಲ್ಲಿ ತಯಾರಿ ಹೇಳಿಕೊಡಲಾಗಿದೆ.
***
ಉಪ್ಪಿಟ್ಟಿನ ಕೊನೆಯ ತುತ್ತನ್ನು ಬಾಯಿಗೆ ಇಡುತ್ತಿರುವಾಗಲೇ ಮನೆ ಸಮೀಪದ ಕಾಟನ್ ಮಿಲ್ಲಿನಿಂದ ಎಂಟೂ ಹದಿನೈದರ
"ಭೊಂಗಾ" ಜೋರಾಗಿ ಕೂಗಿಕೊಂಡಿದೆ."ತಡ ಆಯ್ತು,ತಡ ಆಯ್ತು.." ಅಂತ ಪುಟ್ಟ,ಅಮ್ಮ-ಅಕ್ಕನಿಗೆ ಜೋರು
ಮಾಡತೊಡಗಿದ್ದಾನೆ.ಇವನ ಗಡಿಬಿಡಿ ನೋಡಿದ ಅಕ್ಕ ಮಲಗುವ ಕೋಣೆಯತ್ತ ಧಾವಿಸಿದ್ದಾಳೆ.ನಿನ್ನೆ ರಾತ್ರಿ ಅಪ್ಪ ಪುಟ್ಟನ
ಸಮವಸ್ತ್ರಗಳನ್ನು ಹಿತ್ತಾಳೆ ತಂಬಿಗೆಯಲ್ಲಿ ಕೆಂಡ ಹಾಕಿ ಇಸ್ತ್ರಿ ಮಾಡಿ ಗಾದಿಯ ಕೆಳಗೆ ಮಡಿಚಿಟ್ಟಿದ್ದು ಆಕೆಗೆ ಜ್ಞಾಪಕಕ್ಕೆ ಬಂದಿದೆ.
ಹಗೂರಕ್ಕೆ ಗಾದಿ ಎತ್ತಿರುವ ಆಕೆ ಅಚ್ಚಬಿಳಿ ಶರ್ಟು ಮತ್ತು ಕಡುನೀಲಿ ಚೆಡ್ಡಿಯನ್ನು ಮುಟ್ಟಿದರೆ ಮುನಿದುಕೊಂಡಾವು ಎಂಬಂತೆ
ಅಷ್ಟೇ ಹಗೂರಕ್ಕೆ ಎತ್ತಿಕೊಂಡು ಬಂದಿದ್ದಾಳೆ.
ಪುಟ್ಟನೀಗ ಸಮವಸ್ತ್ರಧಾರಿ.ತಲೆಗೆ ಎಣ್ಣೆ ಹಚ್ಚಿದ ಕೈಯಿಂದ ಪುಟ್ಟನ ಕೆನ್ನೆ ಹಿಡಿದು ಬೈತಲೆ ತೆಗೆದ ಅಮ್ಮ,ಕೆನ್ನೆ ಬಿಟ್ಟಾಗ ಪುಟ್ಟನ
ಗಲ್ಲದಲ್ಲಿ ಕೊಬ್ಬರಿ ಎಣ್ಣೆ ಮುಗುಳ್ನಕ್ಕಿದೆ.'ಥೋ..' ಅಂದ ಅಕ್ಕ ಆತನ ಮತ್ತೊಂದು ಸುತ್ತಿನ ಪ್ರಸಾಧನ ಕಾರ್ಯದಲ್ಲಿ
ತೊಡಗಿದ್ದಾಳೆ.ಪುಟ್ಟನ ಕನವರಿಕೆ ಜಾಸ್ತಿಯಾಗುತ್ತಲೇ ಇದೆ: ತಡ ಆಯ್ತು,ತಡ ಆಯ್ತು..
ಈತನಿಗೀಗ ಶೂ ಧರಿಸಬೇಕಾಗಿದೆ.ನಿನ್ನೆತಾನೆ ಒಗೆದು ಒಣಗಿಸಿಟ್ಟ ಬಿಳಿ ಸಾಕ್ಸುಗಳು ಈಗಷ್ಟೇ ತಂತಿಯಿಂದ ಬಿಡುಗಡೆಗೊಂಡು
ಸ್ವಾತಂತ್ರ್ಯದ ಮಜದಲ್ಲಿ ಇದ್ದಂತಿವೆ.ಪುಟ್ಟಪಾದಗಳ ಸೇವೆಗೆಂದು ಸಿದ್ಧವಾಗಿವೆ.ಸ್ಟೂಲಿನ ಮೇಲೆ ಕೂತ ಪುಟ್ಟ ಎರಡೂ
ಸಾಕ್ಸುಗಳನ್ನು ಧರಿಸುತ್ತಿದ್ದಂತೆಯೇ ಆತನ ಮೊಗದಲ್ಲಿ ಇದ್ದಕ್ಕಿದ್ದಂತೆ ಕಳವಳದ ಛಾಯೆ ಮೂಡತೊಡಗಿದೆ.ಹಿತ್ತಲಿನಲ್ಲಿದ್ದ
ತಂತಿಯಲ್ಲಿ ಬೇಗ ಒಣಗಲೆಂದು ಎಳೆದೆಳೆದು ಕಟ್ಟಿದ್ದರಿಂದ ಆ ಎರಡು ಸಾಕ್ಸುಗಳ ಪೈಕಿ ಒಂದು ಸಾಕ್ಸು ಅದು ಹ್ಯಾಗೋ ಏನೋ
ತನ್ನ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿದೆ.ಪರಿಣಾಮವಾಗಿ,ಪುಟ್ಟನ ಮೊಣಕಾಲನ್ನು ಭದ್ರವಾಗಿ ಹಿಡಿಯಬೇಕಾಗಿದ್ದ ಆ ಸಾಕ್ಸಿನ
ಇಲಾಸ್ಟಿಕ್ಕು 'ಇಲ್ಲಿರಲಾರೆ,ಅಲ್ಲಿಗೆ ಹೋಗಲಾರೆ' ಎಂಬಂತೆ ಮೇಲೂ ನಿಲ್ಲದೇ ಕೆಳಗೂ ಇಳಿಯದೇ ಮಧ್ಯದಲ್ಲೇ ತ್ರಿಶಂಕು ಸ್ಥಿತಿ
ಅನುಭವಿಸುತ್ತ ನಿಂತುಬಿಟ್ಟಿದೆ.ವಾರದಲ್ಲಿ ಎರಡು ದಿನ ನಂಬಿಕೆಯ ಹನುಮನಂತೆ ಸಾಥ್ ಕೊಟ್ಟಿದ್ದ ಈ ಸಾಕ್ಸುಗಳ ಪೈಕಿ
ಈ ಒಂದು ಸಾಕ್ಸು ಮಾತ್ರ ಇವತ್ಯಾಕೋ 'ಮೇಲೆತ್ತಲಾರೆಯಾ ಗೆಳೆಯಾ?' ಎಂದು ಪುಟ್ಟನನ್ನೇ ಬೇಡಿಕೊಳ್ಳುತ್ತಿರುವಂತಿದೆ...
ಪುಟ್ಟನಿಗೆ ಒಂದು ಕಡೆ ತಡವಾಗುತ್ತಿದೆಂಬ ಧಾವಂತ.ಇನ್ನೊಂದೆಡೆ ಸಿಟ್ಟು.ಧ್ವಜಾರೋಹಣಕ್ಕೆ ಹದಿನೈದು ನಿಮಿಷವಷ್ಟೇ
ಬಾಕಿಯಿದೆ.ಹತ್ತು ನಿಮಿಷ ಮೊದಲೇ ನೀನಿರಬೇಕು ಅಂತ ಮಾಸ್ತರರು ನಿನ್ನೆಯೇ ಅಜ್ಞಾಪಿಸಿದ್ದಾರೆ.
ಎಂತ ಮಾಡೋದು?ನಾನಿಲ್ಲದೇ,ನನ್ನ ಸೆಲ್ಯೂಟ್ ಇಲ್ಲದೇ,ಧ್ವಜ ಹಾರದೇ,ಎಲ್ಲ ಸ್ತಬ್ದವಾಗಿ ನಿಂತೇ ಬಿಟ್ಟರೇ...
ಅಯ್ಯೋ ದೇವರೇ,ಈ ಸಾಕ್ಸಿಗೆ ಒಂಚೂರು ಶಕ್ತಿ ಕೊಡು!
ಹಾಗಂತ ಪುಟ್ಟ ತಮ್ಮನ್ನು ಜ್ಞಾಪಿಸಿಕೊಳ್ಳುತ್ತಿರುವದನ್ನು ನೋಡಿದ ಇಷ್ಟದೇವತೆಗಳು ತಾವಿದ್ದ ಜಾಗದಲ್ಲೇ ಗಡಗಡ ನಡುಗಿ
ಮತ್ತೊಮ್ಮೆ ಚಿಂತಾಕ್ರಾಂತರಾಗಿರುವಾಗಲೇ-
ದಿಢೀರಂತ ಪುಟ್ಟನಿಗೆ ಏನೋ ನೆನಪಾಗಿದೆ.ಬಿಟ್ಟ ಬಾಣದಂತೆ ಮಲಗುವ ಕೋಣೆಯತ್ತ ಓಡಿದ್ದಾನೆ.ಅಮ್ಮ,ಅಕ್ಕನಿಗೆ ಏನೂ
ಅರ್ಥವಾಗದೇ ಅವನನ್ನೇ ಹಿಂಬಾಲಿಸಿದ್ದಾರೆ.ಅಲ್ಲೇನು ನಡೆಯುತ್ತಿದೆ?ಅಕ್ಕನ ಪ್ರಸಾಧನ ಸಾಮಗ್ರಿಗಳಿದ್ದ ಮರದ ಪೆಟ್ಟಿಗೆಯನ್ನು
ಆತ ಜಾಲಾಡತೊಡಗಿದ್ದಾನೆ.ಬಾಚಣಿಕೆ,ಟಿಕಳಿ,ಕುಂಕುಮ ಡಬ್ಬಿ,ಪಿನ್ನು,ಟಾಚಣಿ,ರಿಬ್ಬನ್ನು,ಪ್ಲಾಸ್ಟಿಕ್ ಬಳೆಗಳು,ಪೌಡರ್ ಡಬ್ಬಿ...
ತುರ್ತಿನ ಮಥನಕಾರ್ಯದಲ್ಲಿ ಹಾದಿಗೆ ಅಡ್ಡ ಬಂದ ಇವೆಲ್ಲ ವಸ್ತುಗಳು ಒಂದೊಂದಾಗಿ ಹೊರಜಗತ್ತಿಗೆ ಹಾರಿವೆ.ಕ್ಷಣಾರ್ಧದಲ್ಲಿ
ಘಟಿಸಿಹೋದ ಸಮುದ್ರಮಂಥನದಲ್ಲಿ ಕಟ್ಟಕಡೆಗೆ ಅಮೃತವೊಂದು ಸಿಕ್ಕಾಗ ಪುಟ್ಟನ ಬಾಯಿಂದ ನೆಮ್ಮದಿಯ ಉಸಿರೊಂದು
ತಾನೇತಾನಾಗಿ ಬಿಡುಗಡೆಗೊಂಡಿದೆ.
ಡಿಸ್ಕೋ ರಬ್ಬರ್!
ಅಕ್ಕನ ಜಡೆ ಹಿಡಿದಿಡುವ ರಬ್ಬರ್ ಬ್ಯಾಂಡುಗಳ ಪೈಕಿ ಕೊಂಚ stylish ಮತ್ತು ತುಸುಗಟ್ಟಿಯಾಗಿರುವ,ಚಪ್ಪಟೆಯಾಕಾರದ
ಎರಡು ಡಿಸ್ಕೋ ರಬ್ಬರುಗಳನ್ನು ಕೈಯಲ್ಲಿಡಿದು ಹೊರಗೆ ಬಂದಿದ್ದಾನೆ.ನಿಶ್ಯಕ್ತಿಯಿಂದ ಕುಸಿದುಬಿದ್ದಿದ್ದ ಸಾಕ್ಸನ್ನು ಮೇಲಕ್ಕೆತ್ತಿ
ಧೈರ್ಯ ತುಂಬಿದ್ದಾನೆ.ಮತ್ತೇ ಕೆಳಗಿಳಿದೀತು ಎಂಬ ಮುನ್ನೆಚ್ಚರಿಕೆಯಲ್ಲಿ ಸಾಕ್ಸಿನ ಕಂಠಕ್ಕೆ ರಬ್ಬರನ್ನು ಬಿಗಿದು ದಿಗ್ಬಂಧಿಸಿ
ಬಿಟ್ಟಿದ್ದಾನೆ. ಆ ಮೂಲಕ ಡಿಸ್ಕೋ ರಬ್ಬರಿನ ಉಪಸ್ಥಿತಿಯ ಹೊಸ ಆಯಾಮವೊಂದನ್ನು,ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾನೆ.
ಇಷ್ಟಾದರೂ ಪುಟ್ಟನ ಮನಸಿಗೆ ನೆಮ್ಮದಿ ಸಿಕ್ಕಿಲ್ಲ.ಹೊರಜಗತ್ತಿಗೆ ರಬ್ಬರ್ ಬ್ಯಾಂಡು ಎದ್ದು ಕಾಣುತ್ತಿರುವದರಿಂದ ಸಾಕ್ಸಿನ
ಮೇಲಂಚನ್ನು ತುಸುವೇ ಬಾಗಿಸಿ ರಬ್ಬರು ಕಾಣದಿರುವಂತೆ ಕವರು ಮಾಡಿದ್ದಾನೆ.
ಹತ್ತುನಿಮಿಷ ಮಾತ್ರ ಉಳಿದಿದೆ.
ಸ್ವಾತಂತ್ರ್ಯದ ಧ್ವಜ ಹಾರಿಸಲು ಹೊರಟ ಪುಟ್ಟಯೋಧನಿಗೆ ತಿಲಕವಿಟ್ಟ ಮನೆಯ ಸದಸ್ಯರೆಲ್ಲ ಈತನನ್ನು ಬೀಳ್ಕೊಟ್ಟಿದ್ದಾರೆ.
ದಾರಿಯುದ್ದಕ್ಕೂ ಠೀವಿಯಿಂದ ಹೊರಟ ಪುಟ್ಟನಿಗೆ ಅಚಾನಕ್ಕಾಗಿ ಬೇಡದ ಅವಘಡವೊಂದು ಎದುರಾಗಿಬಿಟ್ಟಿದೆ.
ಅದು-ಪರೇಡ್ ಗೆಂದು ಹೊರಟಿರುವ ದಪ್ಪ ಮೀಸೆಯ ದಢೂತಿ ಪೊಲೀಸ್ ಮಾಮ! ಮೊದಲೇ ಇವನೆಂದರೆ ಪುಟ್ಟನಿಗೆ
ವಿಚಿತ್ರ ಭಯವಿದೆ.ಮನೆಯಲ್ಲಿ ಆಗಾಗ ತಂಟೆ ಮಾಡಿದಾಗ ಜೈಲಿಗೆ ಹಾಕಿಸುತ್ತೇನೆಂದು ಹೆದರಿಸುವ ಅಮ್ಮನ
'ನಿಗೂಢ ಆಪತ್ಬಾಂಧವ' ಇವತ್ತು ಸೀದಾ ಎದುರಿಗೇ ಬಂದು ಬಿಟ್ಟಿದ್ದಾನೆ.ಈಗೇನು ಮಾಡುವದು? ಈತನೇನಾದರೂ
ಈಗಲೇ ತನ್ನನ್ನು ಎತ್ತಿಕೊಂಡು ಸೀದಾ ಜೈಲಿಗೇ ಹಾಕಿಬಿಟ್ಟರೆ? ಸ್ಕೂಲು..? ಸೆಲ್ಯೂಟ್ಟು..?
ಹತ್ತಾರು ಯೋಚನೆಗಳ ಮಿಸಾಳ್ ಭಾಜಿಯಲ್ಲಿ ಮಿಂದೆದ್ದ ಪುಟ್ಟ ಅದ್ಯಾವ ಮಾಯದಿಂದಲೋ ಏನೋ,
ರೆಪ್ಪೆ ಮಿಟುಕಿಸುವದರೊಳಗಾಗಿ ತನಗರಿವಿಲ್ಲದೇ ಖಡಕ್ಕಾದ ಸೆಲ್ಯೂಟ್ ಒಂದನ್ನು ಹೊಡೆದುಬಿಟ್ಟಿದ್ದಾನೆ!
ಗಾಬರಿಯಾಗುವ ಸರದಿ ಈಗ ಪೊಲೀಸ್ ಮಾಮನದು.ಪ್ರತಿನಿತ್ಯ ಯಾವುದ್ಯಾವುದೋ ಆಫೀಸರುಗಳಿಗೆ,ರಾಜಕಾರಣಿಗಳಿಗೆ,
ಮತ್ತವರ ಬಾಲಂಗೋಚಿಗಳಿಗೆ ಸೆಲ್ಯೂಟ್ ಹೊಡೆದೂ ಹೊಡೆದೂ ಸುಸ್ತಾಗಿರುವ ಪೊಲೀಸ್ ಮಾಮ ಸದ್ಯದ ಅನಿರೀಕ್ಷಿತ,
ಅಕಸ್ಮಾತ್ ಬೆಳವಣಿಗೆಯಿಂದ ವಿಚಲಿತನಾಗಿಹೋಗಿದ್ದಾನೆ.ಖುಷಿಯಿಂದ ರೋಮಾಂಚನಗೊಂಡು ಪುಟ್ಟನ ಸಲಾಮು
ಸ್ವೀಕರಿಸಲಾಗದೇ ಆತ ಕ್ಷಣಕಾಲ ಚಿತ್ತಾಗಿ ಹೋದಂತಿದೆ.ಮರುಕ್ಷಣ ಹ್ಯಾಗೋ ಸಾವರಿಸಿಕೊಂಡು ಮರುಸೆಲ್ಯೂಟ್ ಗಾಗಿ
ಆತ ಕೈ ಎತ್ತಿದಾಗ,ಪುಟ್ಟ ದೂರದಲ್ಲೆಲ್ಲೋ ಓಡುತ್ತಿರುವದು ಪೊಲೀಸ್ ಮಾಮನ ತುಂಬಿಬಂದ ಕಣ್ಣುಗಳಿಗೆ ಮುಸುಕು
ಮುಸುಕಾಗಿ ಕಾಣಿಸುತ್ತಲಿದೆ...
***
ಪುಟ್ಟನ ಸವಾರಿ ಶಾಲೆಯ ಆವರಣ ಪ್ರವೇಶಿಸಿಯಾಗಿದೆ.ಚಿಕ್ಕ ಮೈದಾನದಲ್ಲಿ ಅಲ್ಲಲ್ಲಿ ಬೂದಿಯಿಂದ ಗೆರೆಗಳನ್ನು ಎಳೆಯಲಾಗಿದೆ.
ಅತಿಥಿಗಳಿಗಾಗಿ ಮತ್ತು ಮಾಸ್ತರುಗಳಿಗಾಗಿ ಒಂದು ಸಾಲಿನ ಗೆರೆ,ಮಕ್ಕಳಿಗಾಗಿ ಸಾಲುಸಾಲಿನ ಗೆರೆಗಳು.ಅತಿಥಿಗಳಿಗೆ ಎದುರಾಗಿ
ನಿಂತು ಸೆಲ್ಯೂಟ್ ಹೊಡೆಯಬೇಕಾಗಿರುವ ಪುಟ್ಟನಿಗೆಂದೇ ಒಂದು ವಿಶೇಷವಾದ ಆಯತವೊಂದನ್ನು ಬಿಡಿಸಲಾಗಿದೆ.ಈಗ ಎಲ್ಲ
ಮಕ್ಕಳೂ ಸಾಲುಸಾಲಾಗಿ ಗೆರೆಯಲ್ಲಿ ನಿಂತಿದ್ದಾರೆ.ಹಾಗೆಯೇ ಮಾಸ್ತರುಗಳೊಂದಿಗೆ ಅತಿಥಿಗಳೂ.ಪುಟ್ಟ ಯಾರಿಂದಲೋ
ನಿರ್ದೇಶನಕ್ಕೊಳಪಟ್ಟವನಂತೆ ತನ್ನ ಆಯತದಿಂದ ಹೊರ ಬಂದು ಅತಿಥಿಗಳಿಗೆ ಸೆಲ್ಯೂಟ್ ಹೊಡೆದು ತನ್ನ ಕಾರ್ಯಕ್ರಮ ಮುಗಿಸಿ
ಬಿಟ್ಟಿದ್ದಾನೆ.ಈಗ ಅತಿಥಿಗಳಿಂದ ಧ್ವಜಾರೋಹಣ!
ಅತಿಥಿಗಳು ಸಾವಕಾಶವಾಗಿ ಅವರಿಗೇ ಅಪರಿಚಿತವಾದ ಘನಗಾಂಭೀರ್ಯದಿಂದ ಧ್ವಜಗಂಬದತ್ತ ಮುನ್ನೆಡೆದಿದ್ದಾರೆ.ಕಂಬದ ತುತ್ತ
ತುದಿಯಲ್ಲಿರುವ ಧ್ವಜವನ್ನೊಮ್ಮೆ ನೋಡಿ ಹಗ್ಗ ಎಳೆದಿದ್ದಾರೆ. ಒಂದು..ಎರಡು..ಮೂರು..! ಅರೆರೇ,ಮೂರುಸಲ ಹಗ್ಗ ಜಗ್ಗಿದರೂ
ಧ್ವಜದ ಗಂಟೇ ಬಿಡಿಸಲಾಗುತ್ತಿಲ್ಲ.ಅತಿಥಿಗಳು ಮತ್ತೆರಡು ಸಲ ಪ್ರಯತ್ನಿಸಿದ್ದಾರೆ.ಹಗ್ಗ ಜಗ್ಗಿಯೇ ಜಗ್ಗುತ್ತಿದ್ದಾರೆ.ಅವರ ಮುಖವೀಗ
ಸಿಟ್ಟು,ಅಸಹಾಯಕತೆಗಳ ಮಿಶ್ರಣವಾಗಿ ಮಾರ್ಪಡುತ್ತಲಿದೆ.ಧ್ವಜ ಮಾತ್ರ ಗಂಟುಮೋರೆ ಹಾಕಿಕೊಂಡು ಯಾರಿಗೆ ಬಂತು?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಅಂತ ಪ್ರಶ್ನಿಸುತ್ತಿರುವಂತಿದೆ..
ದಿನಬೆಳಗಾದರೆ,ತನ್ನ ದೊಡ್ಡ ದನಿಯಿಂದ ಅವಾಚ್ಯವಾಗಿ ಬಯ್ಯುವ,ಪೌರಕಾರ್ಮಿಕರನ್ನು ಶೋಷಿಸುತ್ತಲೇ ಬಂದಿರುವ ಈ ಧಾಡಸಿ
ಮನುಷ್ಯ,ಶಾಲೆಗೆ ಇವತ್ತು ಅತಿಥಿಯಾಗಿ ಬಂದಿದ್ದಾನೆ ಮತ್ತು ಹಗ್ಗ ಜಗ್ಗುತ್ತಲೇ ಇದ್ದಾನೆ.ಆತನ ಎಂದಿನ ದರ್ಪ,ದೌಲತ್ತುಗಳೆಲ್ಲ
ಧ್ವಜದ ಗಂಟಿನ ಮುಂದೆ,ಸುತ್ತಲಿನ ಭಾವೀ ಸಮಾಜದ ಮುಂದೆ ತೀರ ಅಸಹಾಯಕನಾಗಿರುವಂತೆ,ವಿನೀತನಾಗಿರುವಂತೆ
ಮಾಡಿಬಿಟ್ಟಿರುವ ಸಂದರ್ಭವೊಂದು ವಿಚಿತ್ರವಾಗಿ ಒಡಮೂಡಿಬಿಟ್ಟಿದೆ.ಆತ ನಿಶ್ಯಕ್ತಿಯಿಂದ ಲಜ್ಜಿತಗೊಂಡವನಂತೆ ಕುಬ್ಜನಾಗಿ
ಕೊನೆಯಬಾರಿಗೆ ಎಂಬಂತೆ ಹಗ್ಗ ಎಳೆಯಲಾಗಿ ಧ್ವಜದ ಗಂಟು ಸುಸೂತ್ರವಾಗಿ ಅರಳಿಬಿಟ್ಟಿದೆ!
ಧ್ವಜದೊಳಗೆ ಅಡಗಿಕುಳಿತಿದ್ದ ಹೂಗಳಿಗೆ ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಸಿಕ್ಕು ಅಲ್ಲೊಂದು ಕ್ಷಣಭಂಗುರದ ಪುಷ್ಪವೃಷ್ಟಿ
ಸೃಷ್ಟಿಯಾಗಿಹೋಗಿದೆ.ಅದಕ್ಕೆ ಸರಿಯಾಗಿ ಹಿಮ್ಮೆಳವೊಂದು ತೇಲಿಬಂದಿದೆ:
"ಏರುತಿಹುದು,ಹಾರುತಿಹುದು,ನೋಡು ನಮ್ಮಯ ಬಾವುಟ.."
***
ಶಾಲೆಯ ಅವರಣವೀಗ ಖಾಲಿಖಾಲಿಯಾಗಿದೆ.ಆದರೆ ಸ್ವಾತಂತ್ರ್ಯದ ಮಜ ಈ ಎಲ್ಲ ಪುಟ್ಟ ಹುಡುಗ,ಹುಡುಗಿಯರ
ಉತ್ಸಾಹದೊಂದಿಗೆ ತಾನೇತಾನಾಗಿ ಪರಾಗಸ್ಪರ್ಶಗೊಳ್ಳುತ್ತ ಅವರವರ ಮನೆಯವರೆಗೂ ಹಿಂಬಾಲಿಸಿದೆ.
ಉತ್ಸಾಹದೊಂದಿಗೆ ತಾನೇತಾನಾಗಿ ಪರಾಗಸ್ಪರ್ಶಗೊಳ್ಳುತ್ತ ಅವರವರ ಮನೆಯವರೆಗೂ ಹಿಂಬಾಲಿಸಿದೆ.
ಇದಕ್ಕೆಲ್ಲ ಸಾಕ್ಷಿಯಾಗಿ,ಹಾಡು ಮುಗಿದ ಎಷ್ಟೋ ಹೊತ್ತಿನವರೆಗೂ ಅದರ ಇಂಪು ಶಾಲೆಯ ಆವರಣದೊಳಗೆ
ಅನುರಣಿಸುತ್ತಲೇ ಇದೆ.ಅದಕ್ಕೆ ಸಂಗಾತಿಯಾಗಿ ಧ್ವಜ ಪಟಿಪಟಿಸುತ್ತಲಿದೆ.
ಬಹುಶಃ ನಿಜ ಸ್ವಾತಂತ್ರ್ಯದ ಅಸಲೀ ಮಜ ಇಲ್ಲಿಂದಲೇ ಉದ್ಭವಗೊಂಡಿದೆ..
-