Thursday, October 10, 2013

ಮಾಹೆಯಾನ



Photo: Internet


ಬೆಳಗಿನ ಆರೂವರೆ. 
ಗಡಿಯಾರದ 
ಅಲಾರಾಂ
ನಿಲ್ಲಿಸುತ್ತಿದ್ದಂತೆ
ಮೇಲಿನ ಮನೆಯಲ್ಲಿ 
ಕೊಬ್ಬರಿ ಕುಟ್ಟುವ ಸದ್ದು.

ಏಳು ಪಿಳ್ಳೆಗಳೊಂದಿಗೆ
ಠೀವಿಯಿಂದ 
ರಸ್ತೆಗಿಳಿದ
ಕೋಳಿಯ ಪುಕ್ಕ
ಇದ್ದಕ್ಕಿದ್ದಂತೆ
ಬೆದರಿ ನಿಮಿರಿವೆ.

Hold on,
ಶಿಖರದಲ್ಲಿರುವ 
ಕೋಗಿಲೆ 
ಅಳಬುರಕ ಪಕ್ಷಿಯಲ್ಲ;
ಗೊಂದಲವಿರುವದು
ಸಂಶಯದ ಅನುರಣನದಲ್ಲಿ.

ಪರಾಗಸ್ಪರ್ಶ,ಪ್ರಸರಣ
ಮತ್ತು ಪ್ರಜನನ 
ಎಲ್ಲವೂ ಎಷ್ಟು 
ಸ್ಪಷ್ಟ,ಸರಳ,ನೇರ.
ಒಂದು ಮಾತಿಲ್ಲ
ಕತೆಯಿಲ್ಲ
ಮುಖಾಮುಖಿಯಿಲ್ಲ.
ಆದರೂ, 
ತುತ್ತತುದಿ ಎಲೆಗೂ 
ಪಾತಾಳದ ಬೇರಿಗೂ
ವರ್ಣತಂತುಗಳ ಮುಲಾಜಿದೆ.

ಹುಷಾರು,
ಇಲ್ಲಿನ ಬೆಂಕಿಯಿಂದ 
ಏಳುವ ಕಿಡಿಗಳಿಗೆ
ಮಡಿಯಿಲ್ಲ,ಮೈಲಿಗೆಯಿಲ್ಲ.
ವ್ಯರ್ಥ ವಾದದಿಂದ
ದೂರವಿರುವದೂ ಒಂದು ಕಲೆ. 

ತನ್ನ ಸುತ್ತಲೂ 
ಮೋಹದ 
ವರ್ತುಲ ಹೆಣೆಯುವ 
ಹುಡುಗಿಗೆ ಈಗ 
ತಿಂಗಳ ಮಾಹೆಯಾನ. 
ಹುಷಾರು ತಪ್ಪಿ
ನೀರಲ್ಲಿ ನೆನೆಸಿಟ್ಟ 
ಶರಟಿನೊಳಗೆ ಪೆನ್ನಿದೆ 
ಅದರೊಳಗೂ ಕಲೆಯಿದೆ.

ಬಹುಶಃ 
ಇವತ್ತಲ್ಲ ನಾಳೆ  
ಲಿಟ್ಮಸ್ ಟೆಸ್ಟು ಮುಗಿಯಬಹುದು..
-

4 comments:

Badarinath Palavalli said...

ಪರಿಣಾಮಕಾರಿಯಾದ ಕಾವ್ಯ ಪ್ರಯೋಗ.

ಈಶ್ವರ said...

ಒಂದು ಸುತ್ತು ತಿರುಗಿ ಬಂದಂತೆ.. ವರ್ತುಲ. ಒಳ್ಳೆ ಕವನ ರಾಜೋ ಸರ್.

sunaath said...

RJ,
ಬಹಳ ದಿನಗಳ ನಂತರ ಬಂದಿರಿ. ಆದರೂ ಸಂತೋಷ. ತುಂಬ ಸುಂದರವಾದ ಕವನವನ್ನು ಕೊಟ್ಟಿದ್ದೀರಿ.

Swarna said...

ವಾದದ ಬೆಂಕಿ
ಭೇಟಿಯ ಬೇಡದ ಬಂಧಗಳು
ಅವಳ ಮಾಹೆಯಾನಡ ಲಿಟ್ಮಸ್ಸು ...ಚೆನ್ನಾಗಿದೆ