ಹೊಸ್ತಿಲಿಗೆ
ಬಂದ ಮಳೆ
ದಿಟ್ಟಿಸುತ್ತಿರುವ
ಮರಿಬೆಕ್ಕಿನ ಮುಗ್ಧತೆ
ಕವಿಮನದಲ್ಲಿ ಯಾಕೆ
ಮೂಡುವದಿಲ್ಲ?
ಪ್ರಶ್ನೆ
ಸರಳವಾಗಿರುವಂಥದ್ದು. ಬಹುಶಃ ಕಿರಿಕಿರಿಯಾಗುವಂಥದ್ದು. ಇಲ್ಲಿನ ಒಟ್ಟಾರೆ ಚಿತ್ರಣ
ಹೀಗಿದೆ:
ಮಳೆಯಾಗುತ್ತಿದೆ.
ಆಲಿಕಲ್ಲಿನ ಮಳೆ. ಬಾಗಿಲಸಂದಿಯಲ್ಲಿ ನಿಂತುಕೊಂಡು ಮಳೆ ನೋಡುತ್ತಿರುವ ಈ ಬೆಕ್ಕಿನ
ಮರಿಗೋ ಇದೆಲ್ಲ ಹೊಸತು. ಹೀಗಾಗಿ ಅಲ್ಲೊಂದು ಬೆರಗಿದೆ. ಹೊಸ್ತಿಲಾಚೆಯಿಂದ ಪುಟಿದು
ಮನೆಯೊಳಗೆ ಬಂದು ಬೀಳುತ್ತಿರುವ ಆಲಿಕಲ್ಲುಗಳೊಂದಿಗೆ ಈ ಮರಿ ಚಿನ್ನಾಟವಾಡುತ್ತಲಿದೆ. ಏನು
ಮಾಡಿದರೂ ಕೈಗೆ ಸಿಗದೇ ಕೊನೇಪಕ್ಷ ರೂಹೂ ದಕ್ಕದೇ ಬಿದ್ದ ಮರುಘಳಿಗೆಯಲ್ಲೇ ಜೀವ
ಬಿಡುತ್ತಿರುವ ಈ ಆಲಿಕಲ್ಲುಗಳಿಗೆ ತನ್ನ ಚಿನ್ನಾಟದಿಂದಲೇ ಈ ಬೆಕ್ಕಿನಮರಿ ಉಸಿರು ತುಂಬುವ
ಪ್ರಯತ್ನ ಮಾಡುತ್ತಿದೆ. ಅಷ್ಟೇ, ಮರಿಗೆ ಇದೊಂದು ಸೋಜಿಗ ಮತ್ತು ಮೋಜು.
ಆದರೆ ಕವಿಗೆ ಈ
ಅದೃಷ್ಟವಿಲ್ಲ. ಆತ ಈ ಮಳೆಯನ್ನು ಆ ಮರಿಬೆಕ್ಕಿನಂತೆ ನೋಡಲಾರ. ಆತನ ಕವಿತ್ವವೇ ಆತನ ಮೊದಲ ಶತ್ರು.
ಇದು ಶಾಪವೋ ವರದಾನವೋ, ಕವಿಗೆ ಯಾವಾಗಲೂ ದೂರದೃಷ್ಟಿ ಇರಬೇಕಂತೆ! ಹೀಗಾಗಿ, ಆತ
ಈ ಮಳೆಗೊಂದು ಹಿನ್ನೆಲೆ ಸೃಷ್ಟಿಸತೊಡಗುತ್ತಾನೆ. ಬೆಕ್ಕಿನ ಬೆರಗಿಗೆ
ಕಾರಣವಾಗಿದ್ದ ಹೊಸ್ತಿಲ ಆಸುಪಾಸಿಗಷ್ಟೇ ಸೀಮಿತವಾಗಿದ್ದ ಮಳೆಯೊಂದು ಕವಿಯ
ಕ್ಯಾನವಾಸಿನಲ್ಲಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಲಿದೆ. ಅಲ್ಲಿ ಮಿಂಚು ಬರುತ್ತದೆ.
ಗುಡುಗು ಬರುತ್ತದೆ. ಕಾಮನಬಿಲ್ಲಿನ ಸಮೇತ ಮಯೂರದ ನೃತ್ಯಯೂ ಪ್ರೇಯಸಿಯ ವಿರಹವೂ ಎಲ್ಲ ಬಂದು
ಕೊನೆಗೊಮ್ಮೆ ಕಲಸುಮೇಲೋಗರವಾಗುತ್ತದೆ.
ಯಾಕೆಂದರೆ ಆತ
ಕವಿ. ಯಾವತ್ತಿಗೂ ದಗ್ದ ಮತ್ತು ಪ್ರಕ್ಷುಬ್ದ. ಕವಿತೆ ಮಾತ್ರ ಆತನನ್ನು
ಸಂತೈಸಬಲ್ಲದು. ಪೊರೆಯಬಲ್ಲದು.
*
ಗೊತ್ತಿದ್ದೋ
ಗೊತ್ತಿಲ್ಲದೆಯೋ ನಮ್ಮಲ್ಲಿ ಅನೇಕರು ಒಂದು ತಪ್ಪು ಮಾಡುತ್ತಿರುತ್ತೇವೆ. ನಮ್ಮ ಮಾತುಕತೆಗಳಲ್ಲಿ
ಯಾರ್ಯಾರನ್ನೋ ಎಳೆದು ತರುತ್ತಿರುತ್ತೇವೆ. ಯಾವುದೋ ಒಂದು ವಿಷಯಕ್ಕೆ ಕುರಿತಂತೆ ನಮ್ಮ ನಮ್ಮ
ವಾದಗಳಿಗೆ ಬಲ ತಂದು ಕೊಡುವದಕ್ಕೆಂದು ಅನೇಕ ದಿವ್ಯಚೇತನಗಳ ಲೇಬಲ್ಲುಗಳನ್ನು ಅಂಟಿಸುತ್ತೇವೆ.
ನಮ್ಮ ತರಲೆ ಜೋಕುಗಳಲ್ಲಿ ಗಾಂಧೀ ಬರುತ್ತಿರುತ್ತಾನೆ. ಕವಿತೆಗಳಲ್ಲಿ ಬುದ್ಧ
ಇಣುಕುತ್ತಿರುತ್ತಾನೆ. ಅಂತೆಯೇ ನಮ್ಮ ನಮ್ಮ ವಾದಕ್ಕೆ ಪುಷ್ಟಿ ಕೊಡಬಲ್ಲ ಯೇಸು, ಅಂಬೇಡ್ಕರ್,
ಪರಮಹಂಸ, ರಾಮ. ಕೃಷ್ಣರೂ ಸಂದರ್ಭಾನುಸಾರವಾಗಿ ಯಥೋಚಿತವಾಗಿ ಬರುವದುಂಟು.
ಆದರೆ ಇವರೆಲ್ಲರನ್ನೂ
ಉಚ್ಚರಿಸುವ ಮುನ್ನ ನಾವುಗಳು ಒಂದು ಅರ್ಥ ಮಾಡಿಕೊಳ್ಳಬೇಕಿದೆ. ಮಹಾತ್ಮ, ಬುದ್ಧ, ಪರಮಹಂಸ,
ಮರ್ಯಾದಾ ಪುರುಷೋತ್ತಮ ಅಂತನ್ನುವದೆಲ್ಲ ಅವರವರ ಅಪ್ಪ ಅಮ್ಮಂದಿರು ಇಟ್ಟ ಹೆಸರುಗಳಲ್ಲ. ಹಾಗೆ
ನೋಡಿದರೆ ಅವೆಲ್ಲ ನಾಮಪದಗಳೇ ಅಲ್ಲ. ಅದೊಂದು stage. ಒಂದು ಹಂತ. ಮಾನವೀಯತೆಯಲ್ಲಿಯೋ ಅಥವಾ
ಅರಿವಿನಲ್ಲಿಯೋ ಅಥವಾ ಧ್ಯಾನದಲ್ಲಿಯೋ- ಎಲ್ಲೋ ಒಂದು ಕಡೆ ಅತ್ಯಂತ ಎತ್ತರದ ಜಾಗದಲ್ಲಿ ಕುಳಿತುಕೊಂಡ
ಮೇಲೆ ನಮ್ಮ ಕೈವಶವಾಗಬಹುದಾದ ಒಂದು ಸ್ಥಿತಿಯದು.
ಕವಿತೆ ಅನ್ನುವದೂ ಅಂಥದ್ದೇ
ಜಾಗದ ಆಸುಪಾಸಿನಲ್ಲೇ ಉದ್ಭವಿಸುವಂಥದ್ದು. ಈ ಕವಿತೆ ಓದುಗರೊಂದಿಗೆ ಅನೇಕ ರೀತಿಯಲ್ಲಿ
ಸಂಭಾಷಿಸುತ್ತದೆ. ಒಮ್ಮೊಮ್ಮೆ ಓದುಗನ ಬಳಿಗೆ ನೇರವಾಗಿ ಬಂದು ವಿಷಯ ತಿಳಿಸುತ್ತದೆ.
ಒಮ್ಮೊಮ್ಮೆ ತೀರಾ ಹತ್ತಿರ ಬಂದರೂ ಕೈಸನ್ನೆ, ಬಾಯಿಸನ್ನೆ ಮಾಡುತ್ತ 'ಇಲ್ಲಿ ಹೇಳಲಾಗದು,
ಅಲ್ಲಿ ಬಾ' ಅಂದು ಹೊರಟು ಹೋಗುತ್ತದೆ. ಅಲ್ಲಿಗೆ ಓದುಗನ ಕತೆ ಮುಗಿದಂತೆ. ಹೀಗಾದಾಗ
ಓದುಗ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೀಗೆ ಕಣ್ಣಿಗೆ ಕಾಣಿಸುವ ಅಕ್ಷರಗಳು
ತಮ್ಮಲ್ಲೊಂದು ಹಿಡನ್ ಸಂಜ್ಞೆಗಳನ್ನೂ ಇಟ್ಟುಕೊಂಡಿರುತ್ತವೆ. ಬೇಕಾದರೆ ಈ ಪುಟ್ಟ ಹಾಯ್ಕು
ನೋಡಿ,
ಮನೆಯತ್ತ ಪಯಣ.
ರಸ್ತೆಯಂಚಿನ
ಗೂಟಕಲ್ಲಿನಲ್ಲಿ
ಕಿಲೋಮೀಟರ್ ಜೊತೆಗಿದೆ
ಒಂದು ಅಗೋಚರ ಸ್ಮೈಲೀ!
ಹೀಗೆ ಈ ಲೋಕದ ಎಲ್ಲ
ಕವಿತೆಗಳೂ ಒಂದಿಷ್ಟು ಬಗೆಯ ಸೂತ್ರಗಳಲ್ಲಿ ಬಂಧಿತವಾಗಿವೆ. ಹಾಗೆ ಬಂಧಿತವಾಗುವ ಸೂತ್ರಗಳ ಪೈಕಿ
ಕೆಲವನ್ನು ಹೆಸರಿಸಬಹುದಾದರೆ ಮೊದಲಿಗೆ ಬಂದು ನಿಲ್ಲುವ ಸೂತ್ರ ಅಲಂಕಾರ. ಒಮ್ಮೊಮ್ಮೆ ಇದು
ಸಾಂಕೇತಿಕವಾಗಿದ್ದರೆ, ಒಮ್ಮೊಮ್ಮೆ ಉತ್ಪ್ರೇಕ್ಷೆಯಿಂದ ಕೂಡಿರುತ್ತದೆ. 'ಅವಳನ್ನು ಮುಟ್ಟಿದ
ಕೂಡಲೇ ಮೈಯಲ್ಲಿ ಮಿಂಚು ಹರಿದಂತಾಯಿತು' ಅಂತನ್ನುವ ಕವಿಗೆ ತಾನು ಸತ್ಯಕ್ಕಿಂತ ಕೊಂಚ
ಹೆಚ್ಚಿನದನ್ನು ಹೇಳುತ್ತಿದ್ದೇನೆ ಅಂತನ್ನುವ ಸ್ಪಷ್ಟ ಅರಿವಿದೆ. ಆದರೆ ಇಲ್ಲಿ ಕೇವಲ ಆತನ
ಎಕ್ಸೈಟ್ ಮೆಂಟ್ ಮಾತ್ರ ನೋಡಬೇಕೇ ಹೊರತು ವಿಜ್ಞಾನವನ್ನಲ್ಲ.
ಇದೇ ರೀತಿ ಕವಿತೆಯ ಒಂದು
ಅತಿ ಮುಖ್ಯ ಭಾಗವೆಂದರೆ ಕವಿ ಬಳಸುವ ನಿರೂಪಣಾ ವಿಧಾನ. ಯಾವುದೇ ಕವಿತೆ ತನ್ನ
ಒಡೆಯ ಕಟ್ಟಿಕೊಡುತ್ತಿರುವ ಚಿತ್ರಣದ ಮೇಲೆಯೇ ತನ್ನ ಭವಿಷ್ಯವನ್ನು
ಕಂಡುಕೊಳ್ಳುತ್ತಿರುತ್ತದೆ. ಹೀಗಾಗಿ ನಿರೂಪಣೆ ಅನ್ನುವದು ಇಡೀ ಕವಿತೆಯ ಅಡಿಪಾಯ. ಕವಿಯ ನೋಟ
ಅಥವಾ ಕವಿಯ ರುಚಿ ಅಥವಾ ಕವಿಯ ಪರಿಮಳ- ಈ ಅಡಿಪಾಯಕ್ಕೆ ಒದಗಿಬರುವ ಸಿಮೆಂಟಿನ ಸರಕುಗಳು.
ಕವಿತೆ ಓದಿದ ಬಳಿಕ ಇವೆಲ್ಲವೂ ಓದುಗರ ಮನದಲ್ಲಿ ಪ್ರತಿಫಲಿಸಿದಾಗಲೇ ಆಯಾ ಕವಿತೆ ಸಾರ್ಥಕದ
ಉಸಿರು ಬಿಡುತ್ತದೆ. ಕವಿ ಕಟ್ಟಿಕೊಡುತ್ತಿರುವ ಈ ಕೆಳಗಿನ ದೃಶ್ಯ ನೋಡಿ:
ನೀರಿಗೆಂದು ಬಂದ
ನೀರೆಯರು
ಚಂದಿರನ ಮೇಲೆ ಮೋಹಿತರು;
ಇಲ್ಲೀಗ ನೂರು
ಕೊಡಗಳಲ್ಲೂ
ನೂರು ಪೂರ್ಣ ಚಂದಿರರು!
ಹೌದು, ಒಂದು ಕವಿತೆಯನ್ನು
ಹೇಗೆ ಓದಬೇಕೆಂದು ನಿರ್ದೇಶಿಸುವದು ಅಲ್ಲಿರುವ ಚಿಹ್ನೆಗಳು. ಓದಿನ ಪಯಣದಲ್ಲಿ ಅವು
ಓದುಗರಿಗೆ ಎಲ್ಲಿ ವಿರಮಿಸಬೇಕೆಂದೂ ಎಲ್ಲಿ ವಿಸ್ತರಿಸಗೊಳಿಸಬೇಕೆಂದೂ ಮತ್ತು ಎಲ್ಲಿ ಉನ್ಮಾನದಿಂದ
ಕಂಗೊಳಿಸಬೇಕೆಂದೂ ಸೂಚಿಸಬಲ್ಲವು. ಹೀಗೆ ಹಾಡಿನ ಹಾದಿಯಲ್ಲಿ ಈ ಚಿಹ್ನೆಗಳು
ತೋರುಫಲಕಗಳಂತೆ ಗೋಚರಿಸಬೇಕೆಂದರೆ ಇಡೀ ಹಾಡು ಒಂದು ನಿಗದಿತ ಶಬ್ದ ಹೊರಡಿಸುತ್ತಿರಬೇಕು. ಆ
ಶಬ್ದದಲ್ಲಿ ಒಂದು ಸಂಗೀತದ ಸ್ವರವಿರಬೇಕು. 'ತೂಗಿರೇ ರಾಯರ ತೂಗಿರೇ ಗುರುಗಳ ತೂಗಿರೇ
ಯತಿಕುಲ ತಿಲಕರ..' ಅನ್ನುವಂಥ ಜಗನ್ನಾಥದಾಸರ ಕೀರ್ತನೆಯನ್ನು ಓದುವಾಗ ಹೊರಡಬಹುದಾದ
ಶಬ್ದ ಮತ್ತು ಸ್ವರಗಳನ್ನು ಗಮನಿಸಿ. ದಾಸ ಸಾಹಿತ್ಯದಲ್ಲಿ ಈ ರೀತಿಯ ಅನೇಕ ಸಂಯೋಜನೆಗಳನ್ನು
ಕಾಣಬಹುದು.
ಕೊನೆಯದಾಗಿ, ಯಾವುದೇ ಒಂದು
ಕವಿತೆಯು ಓದುಗನ ಗಮನವನ್ನು ಸೆಳೆಯಲು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಲಯದ ಮೊರೆ
ಹೋಗೇಹೋಗುತ್ತದೆ. ಒಂದು ಲಯ ಅಥವಾ ಮೀಟರ್ ಆಯಾ ಕವಿತೆಯ ಬಗ್ಗೆ ಓದುಗನೆಡೆಗೊಂದು ಅಭಯವನ್ನು
ಕೊಡುವಂಥದ್ದು. ಅಯ್ಯ, ನಿನ್ನ ಓದಿನ ಓಘಕ್ಕೆ ನಾನು ಜೊತೆ ಕೊಡುತ್ತೇನೆ ಅಂತ ಅಭಯ
ನೀಡುತ್ತಿರುತ್ತದೆ. ಹೀಗೆ ಕವಿತೆಯಿಂದ ಗ್ಯಾರಂಟಿ ಪಡೆದುಕೊಂಡ ಓದುಗ ಸದರಿ ಕವಿತೆಯನ್ನು ಓದುವಾಗ
ಪ್ರತಿ ಸಾಲಿನಲ್ಲೂ ಒಂದೊಂದು ರಿದಮ್ ಅನುಭವಿಸುತ್ತಾನೆ. ಈ ರಿದಮ್ ಓದುಗನಲ್ಲಿ ಆಕಸ್ಮಿಕವಾಗಿ
ಘಟಿಸುವಂಥದ್ದಾದರೂ ಕವಿಯೊಳಗೆ ಮಾತ್ರ ಈ ಲಯ ಪೂರ್ವಯೋಜಿತ. ದ್ವಿಪದಿ, ತ್ರಿಪದಿ,
ಷಟ್ಪದಿ, ಸಾನೆಟ್ ಗಳೆಲ್ಲ ನಿರ್ಮಾಣ ಹಂತದ ಮೂಲದಲ್ಲೇ ಒಂದು ಲಯವನ್ನು ಅಳವಡಿಸಿಕೊಂಡಿರುವಂಥವು.
ಇನ್ನು ಕೆಲವರು ಕವಿತೆಯಲ್ಲಿನ ಸಾಲುಗಳಲ್ಲಿ ಇಂಥದೊಂದು ಮೀಟರನ್ನು ಕಲ್ಪಿಸುತ್ತಾರೆ. ಯಾವತ್ತೋ
ಒಮ್ಮೆ ಕುಶಾಲಿಗೆಂದು ಬರೆದಿದ್ದ ಈ ಕವಿತೆಯಲ್ಲಿ ಅಲ್ಲಲ್ಲಿ ಕಾಣುವ ರಿದಂ ಗಮನಿಸಿ:
ಎಷ್ಟು ದರಿದ್ರ
ರಸ್ತೆಯಿದು?
ಕಲ್ಲು ಮುಳ್ಳುಗಳ ಕಡಿದಾದ
ದಾರಿ.
ಒಂದು ಬಸ್ಸಿಲ್ಲ
ಟ್ರೈನಿಲ್ಲ ವಿಮಾನವಿಲ್ಲ;
ಸುಡುವ ನೆತ್ತಿಗೆ
ನೆರಳಿಲ್ಲ, ಕಣ್ಣಕತ್ತಲೆಗೆ ಬೆಳಕಿಲ್ಲ
ಟೈಂಪಾಸಿಗೆ ಪದ್ಯವಿಲ್ಲ
ಮದ್ಯವಿಲ್ಲ ಚುರೂಟವಿಲ್ಲ.
ಇತ್ತ-ಆರು ಬೆಟ್ಟಗಳ ಮಧ್ಯೆ
ಕರೆಂಟು ಕಂಬಗಳಿಲ್ಲ
ಅತ್ತ-ಹೆಗಲಿಗೆ ಕಂಬಹೊರದೇ
ಕರೆಂಟು ಹರಿಯುವದಿಲ್ಲ.
ಇಷ್ಟೆಲ್ಲ ಇಲ್ಲಗಳನ್ನು
ದಾಟಿಕೊಂಡು
ಹೋದಮೇಲೆ ಅಲ್ಲಿ
ಸಿಗುವದಾದರೂ ಏನು?
-ಅಂತ
ಅಲ್ಲಿನ ಬುದ್ಧನಿಗೆ ಕೇಳೋಣವೆಂದರೆ
ಆತನ ಬಾಗಿಲಿಗೆ
ಬರೆಯಲಾಗಿದೆ: ನಾಳೆ ಬಾ!
*
ಇದೆಲ್ಲ ಹೇಳುತ್ತಿರುವಾಗಲೇ ನನಗೆ ಥಟ್ಟಂತ ಹೊಳೆದಿದ್ದೇನು? ಹಾಗೊಂದು
ವೇಳೆ ಇಲ್ಲಿ ಕವಿ 'ಆಲಿಕಲ್ಲಿನ ಮಳೆ' ಎಂಬ ಕವಿತೆ ರಚಿಸುತ್ತಿದ್ದಾನೆ ಅಂದುಕೊಂಡರೆ
ಇಲ್ಲಿ ಓದುಗ ಯಾರು?
ಬಹುಶಃ ಬೆಕ್ಕಿನಮರಿ ಬಳಿ ವಿಚಾರಿಸಿದರೆ ಉತ್ತರ ಸಿಗಬಹುದೇನೋ..
-
![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 16.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |