![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 24.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, October 24, 2018
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!
Wednesday, October 10, 2018
ಒಂದು ಮೊಟ್ಟೆಯೊಳಗಿನ ದಾರದ ಕತೆ!
ಕೆಲವೊಮ್ಮೆ
ಹೀಗಾಗುತ್ತದೆ. ಅನೇಕ ಸಣ್ಣಸಣ್ಣ ಸಂಗತಿಗಳ ಬಗ್ಗೆ ಕೇಳಿರುತ್ತೇವೆ. ಅವುಗಳ ಪೈಕಿ ಬಹಳಷ್ಟು
ನಮ್ಮೊಳಗೇ ರೂಢಿಗತವಾಗಿರುತ್ತವೆ. ಆದರೆ ಅದರ ಹಿನ್ನೆಲೆ ಬಗ್ಗೆ ನಾವು ಪ್ರಶ್ನೆಗಳ ಮೂಲಕ
ತಡಕಾಡುವದಿಲ್ಲ. ಪರಿಣಾಮವಾಗಿ ಈ ಸಂಗತಿಗಳು ಒಂದೋ ಅಂಧಾನುಕರಣೆಯಾಗಿ ಅಥವಾ ಮೌಢ್ಯವಾಗಿ
ಬಿಂಬಿತಗೊಳ್ಳುತ್ತ ಅದರಲ್ಲಿನ ಮೂಲತತ್ವವೇ ನಮಗೆ ಗೋಚರಿಸಲಿಕ್ಕಿಲ್ಲ.
ಹಿಂದೆ ನೆಲದಡಿಯಲ್ಲಿ ಗುಂಡಿಯಂಥದ್ದು ನಿರ್ಮಿಸಿ ಅದರೊಳಗೆ ದವಸಧಾನ್ಯ
ಶೇಖರಿಸುತ್ತಿದ್ದುದು ನಮಗೆಲ್ಲ ಗೊತ್ತಷ್ಟೇ. ಮನುಷ್ಯನೊಬ್ಬ ನುಸುಳುವಷ್ಟು ಭೂಮಿಯ ಮೇಲೆ ಬಾಯಿ
ತೆರೆದುಕೊಂಡು ನೆಲದಾಳದಲ್ಲಿ ವಿಸ್ತಾರವಾಗಿರುತ್ತಿದ್ದ ಈ ಉಗ್ರಾಣಗಳಲ್ಲಿ
ಯಾರಾದರೂ ಇಳಿಯಬೇಕೆಂದಿದ್ದಲ್ಲಿ ಮೊದಲು ಕಂದೀಲನ್ನು ಇಳಿ ಬಿಡುತ್ತಿದ್ದರು. ಸಣ್ಣದೊಂದು ದೀಪ ಹೊತ್ತ ಈ
ಕಂದೀಲನ್ನು ಗುಂಡಿಯೊಳಕ್ಕೆ ಕೆಲ ಹೊತ್ತು ಇಳಿಬಿಟ್ಟು ಹೊರ ತೆಗೆಯಲಾಗುತ್ತಿತ್ತು. ಹಾಗೆ ಹೊರತೆಗೆದ
ಮೇಲೂ ದೀಪ ಉರಿಯುತ್ತಿದ್ದರೆ ಜನ ಗುಂಡಿಯೊಳಗೆ ಇಳಿಯುತ್ತಿದ್ದರು. ಉಗ್ರಾಣದಲ್ಲಿ ಉಸಿರಾಡಲು
ಸಾಕಷ್ಟು ಆಮ್ಲಜನಕವಿದೆಯೋ ಇಲ್ಲವೋ ಅಂತನ್ನುವದಕ್ಕಾಗಿ ಇಂಥದೊಂದು ಪ್ರಯೋಗ ಆವತ್ತಿನ
ಸಮುದಾಯ ಕಂಡುಕೊಂಡಿತ್ತು ಅಂತ ಗೊತ್ತಾಗಲು ನಮಗೆ ಅದೆಷ್ಟೋ ವರ್ಷ ಬೇಕಾದವು.
ಅಂಥದ್ದೇ ಇನ್ನೊಂದು ಸಂಗತಿ ನದಿಗಳಲ್ಲಿ ಎಸೆಯುವ ನಾಣ್ಯಗಳ ಕುರಿತದ್ದು. ಇವತ್ತಿಗೂ ನಮ್ಮಲ್ಲಿ ನದಿಗಳನ್ನು ಕಂಡರೆ ಸಾಕು, ಅಸಂಖ್ಯಾತರು ತಮ್ಮಲ್ಲಿದ್ದ ನಾಣ್ಯಗಳನ್ನು
ನದಿಗೆ ಎಸೆಯುತ್ತಾರೆ. ತಮಾಷೆಯೆಂದರೆ, ರುಬಾಬಿನ ಜನರು ಹತ್ತು, ನೂರರ ನೋಟುಗಳನ್ನು ನದಿಯಲ್ಲಿ
ತೇಲಿಬಿಟ್ಟಿದ್ದನ್ನೂ ನೋಡಿದ್ದೇನೆ! ಹಾಗಾದರೆ ನದಿಗಳಲ್ಲಿ ನಾಣ್ಯ ಎಸೆಯುವ ರೂಢಿ
ಬಂದಿದ್ದಾದರೂ ಎಲ್ಲಿಂದ? ಅಸಲಿಗೆ ಇದೆಲ್ಲ ಶುರುವಾಗಿದ್ದು ಪುಣ್ಯಕ್ಷೇತ್ರಗಳಲ್ಲಿ.
ಅಲ್ಲಿನ ನೀರಿನ ಮೂಲಗಳಲ್ಲಿ ಜನ ಸ್ನಾನ, ಪೂಜಾ ವಿಧಿವಿಧಾನಗಳನ್ನು ಪೂರೈಸುತ್ತಿದ್ದರು. ಆ
ಮೂಲಕ ಅಲ್ಲಿ ಹರಿಯುತ್ತಿದ್ದ ನದಿಗಳು ಅಷ್ಟರಮಟ್ಟಿಗೆ ಕಲುಷಿತಗೊಳ್ಳುತ್ತಿದ್ದವು. ಹೀಗೆ
ಕಲುಷಿತಗೊಂಡ ನೀರಿನ ಅಪಾಯವನ್ನು ಮನಗಂಡ ಆ ಕಾಲದ ಜನತೆ ತಕ್ಕಮಟ್ಟಿಗೆ ಒಂದು ಪರಿಹಾರವನ್ನೂ
ಕಂಡುಕೊಂಡಿತು. ಅದು ಭಕ್ತಿಯ ಜೊತೆಜೊತೆಗೇ ಒಂದು ತಪ್ಪುದಂಡವನ್ನೂ ಕಟ್ಟಿಸುವ ಪ್ರಕ್ರಿಯೆ.
ಹೀಗಾಗಿ ಆಗ ಚಲಾವಣೆಯಲ್ಲಿದ್ದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ನದಿಗೆ ಎಸೆಯುವದರ
ಮೂಲಕ ಸಾಧ್ಯವಾದ ಮಟ್ಟಿಗೆ ನೀರನ್ನು ಶುದ್ಧೀಕರಿಸುವ ಕ್ರಿಯೆಗೆ ಚಾಲನೆ ಕೊಟ್ಟಿತು. ಶುದ್ಧೀಕರಣದ
ಈ ಮೂಲತತ್ವ ಅರಿಯದೇ ನಾವು ಇವತ್ತು ಸ್ಟೇನ್ ಲೆಸ್ ಸ್ಟೀಲ್ ಅಥವಾ ನಿಕೆಲ್ ನಿಂದ ಮಾಡಿದ
ನಾಣ್ಯಗಳನ್ನು ನದಿಗೆ ಎಸೆಯುತ್ತಿದ್ದೇವೆ!
ಇಂಥದ್ದೇ ಒಂದು ಸಣ್ಣ ಸಂಗತಿ ಮೊನ್ನೆ ನನ್ನಲ್ಲಿ ಪ್ರಶ್ನೆ, ಗುಮಾನಿ
ಮತ್ತು ಕುತೂಹಲಗಳನ್ನು ಹುಟ್ಟುಹಾಕಿ ಒಂದಿಷ್ಟು ಹೊಸತನ್ನು ಕಲಿಸಿತು. ಮನೆಯಲ್ಲಿದ್ದ ಸಾಂಪ್ರದಾಯಿಕ ಕಾರಣಗಳಿಂದಾಗಿ ನಾನು ಮೊಟ್ಟೆಯಿಂದ
ಸಾಕಷ್ಟು ವರ್ಷ
ದೂರವುಳಿಯಬೇಕಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆ/ಆಮ್ಲೆಟ್
ನಂಥದ್ದನ್ನು ಸೇವಿಸುತ್ತಿದ್ದೇನೆ. ಹಾಗೆಯೇ ಕೆಲದಿನಗಳಿಂದ ಮನೆಯಲ್ಲಿಯೇ ಮೆಕ್ಸಿಕನ್ ಆಮ್ಲೆಟ್,
ಜಾಪನೀಸ್ ಆಮ್ಲೆಟ್ ಅಂತೆಲ್ಲ ನಾನೇ ಹೊಸಹೊಸ ಪ್ರಯೋಗ ಮಾಡುವದುಂಟು. ಮೊನ್ನೆ ಅಂಥದೊಂದು ಹೊಸ ಬಗೆಯ
ಆಮ್ಲೆಟ್ ಮಾಡುವದೆಂದು ನಿರ್ಧರಿಸಿ ಮೊಟ್ಟೆಯನ್ನು ಒಡೆದಿದ್ದೆ. ಹಾಗೆ ಒಡೆದ ಮೊಟ್ಟೆಯನ್ನು
ಇನ್ನೇನು ಚಮಚದಿಂದ ಐದಾರು ಸಲ ಕಲೆಸಬೇಕು ಅಂತನ್ನುವ ಹೊತ್ತಿನಲ್ಲಿ ಮೊಟ್ಟೆಯ ರಸದಲ್ಲೇನೋ ಹೊಸತು
ಕಂಡಂತಾಯಿತು. ಸಾಮಾನ್ಯವಾಗಿ ಒಡೆದ ಮೊಟ್ಟೆಯಲ್ಲಿ ಕಾಣಿಸುವದೇನು? ಒಂದು ಚೆಂಡಾಕಾರದ ಹಳದಿಭಾಗ
ಮತ್ತು ಲೋಳೆಯಂತಿರುವ ಬಿಳಿ ದ್ರವ ಅಷ್ಟೇ . ಆದರೆ ಇದೆಲ್ಲದರ ಮಧ್ಯೆ ದಟ್ಟ ಬಿಳಿ ಬಣ್ಣದ
ಚಿಕ್ಕದೊಂದು ದಾರದಂಥ ಎಳೆ ಎಲ್ಲಿಂದ ಬಂತು? ಎಲ್ಲೋ ಏನೋ ಎಡವಟ್ಟಾಗಿದೆ ಅಂತ ಇನ್ನೊಂದು
ಮೊಟ್ಟೆಯನ್ನು ಸೀಳಿದೆ. ಅಲ್ಲೂ ಅದೇ ಪುನರಾವರ್ತನೆ. ಹಳದಿಚೆಂಡು, ಬಿಳಿಯಾದ ನೀರಿನಂತಿರುವ ಲೋಳೆ
ಮತ್ತು ಹಳದಿ ಚೆಂಡಿನ ಎರಡೂ ಬದಿಗೆ ಅಂಟಿಕೊಂಡಿರುವ ದಟ್ಟ ಬಿಳಿ ಬಣ್ಣದ ದಾರ!
ಎಲಾ! ಕೆಟ್ಟು ಹೋದ ಹಳೆಯ ಮೊಟ್ಟೆ ಕೊಟ್ಟಿರುವೆ ಅಂತ ಅಂಗಡಿಯವನ ಹತ್ತಿರ ಅಸಮಾಧಾನ
ವ್ಯಕ್ತಪಡಿಸಿದೆ. ಆ ಅಂಗಡಿಯವನು ಎಂಥಾ ಪುಣ್ಯಾತ್ಮ ಅಂದರೆ ಮೊಟ್ಟೆಯಲ್ಲಿನ ಸಮಸ್ಯೆ
ಅರ್ಥಮಾಡಿಕೊಳ್ಳುವದಿರಲಿ, "ನಾನು ಮೊಟ್ಟೆಯನ್ನೇ ತಿನ್ನೋದಿಲ್ಲ ಸಾರ್" ಅಂತ ಕೈ
ಎತ್ತಿಬಿಟ್ಟ! ಜೊತೆಗೆ ಇನ್ನೆರೆಡು ಹೊಸ ಮೊಟ್ಟೆ ಕೊಟ್ಟು ಕಳಿಸಿದ. ಅಷ್ಟೊತ್ತಿಗೆ ನನಗೂ
ಸಾಕಾಗಿತ್ತು. ಮನೆಗೆ ಬಂದು ಫ್ರಿಡ್ಜ್ ತೆರೆದವನೇ ಮೊಟ್ಟೆಗಳನ್ನಿಟ್ಟೆ. ಮರುದಿನ ಹೊಸದಾಗಿ ತಂದ
ಎರಡೂ ಮೊಟ್ಟೆ ಒಡೆದರೆ ಅಲ್ಲೂ ಅದೇ ಸಮಸ್ಯೆ. ಇಷ್ಟಕ್ಕೂ ನನ್ನಂಥವರಿಗೆ ಮೊಟ್ಟೆಯಲ್ಲಿ ಅದಿನ್ನೆಂಥ ರಾಕೆಟ್ ಸೈನ್ಸ್ ಅಡಗಿರಬಹುದೆಂಬ ಉಡಾಫೆ. ಹಾಗಾಗಿ ನಮ್ಮ
ಪಾಲಿಗೆ ಇಲ್ಲಿರುವದು ಎರಡೇ ಎರಡು: ಹಳದಿಚೆಂಡು ಮತ್ತು ಲೋಳೆ. ಆದರೆ ಇದ್ದಕ್ಕಿದ್ದಂತೆ
ಗೋಚರಿಸತೊಡಗಿದ್ದ ಈ ಹೊಸ ದಾರ ಕಿರಿಕಿರಿ ಮಾಡತೊಡಗಿತ್ತು. ನನಗೆ ಗೊತ್ತಿರುವ ಒಂದಿಷ್ಟು
ಸ್ನೇಹಿತರಲ್ಲಿ ಇದರ ಬಗ್ಗೆ ವಿಚಾರಿಸಿದೆ. ಅವರೆಲ್ಲ ನನ್ನನ್ನು
ವಿಚಿತ್ರವಾಗಿ ನೋಡಿ ನಕ್ಕಂತಾಯಿತು. ಯಾಕೆಂದರೆ ಮೊಟ್ಟೆಯ ಬಗ್ಗೆ ನನಗೆಷ್ಟು ಕಲ್ಪನೆ
ಇತ್ತೋ ಅವರಿಗೂ ಅಷ್ಟೇ ಇದ್ದಿದ್ದು.
ಅಷ್ಟಾದಮೇಲೆ ಅಂತರಜಾಲದಲ್ಲಿ ಹುಡುಕಾಡತೊಡಗಿದೆ. ಸಮಸ್ಯೆಯೆಂದರೆ, ಕಂಪ್ಯೂಟರ್ ಗಳು ಬರಿ
ಉತ್ತರ ಮಾತ್ರ ಕೊಡುತ್ತವೆ. ಅವು ಪ್ರಶ್ನಿಸುವದನ್ನು ಹೇಳಿಕೊಡುವದಿಲ್ಲ. ನನಗೆ ಇಲ್ಲಿ ಉತ್ತರ ಸಿಗಬೇಕೆಂದರೆ ಸರಿಯಾಗಿ
ಪ್ರಶ್ನೆ ಕೇಳಬೇಕು. ಆದರೆ ಏನಂತ ಕೇಳುವದು? ಹೀಗಾಗಿ ನನಗಿರುವ ಗೊಂದಲದ ಬಗ್ಗೆ
ಏನೇನೋ 'ಶೋಧಕ ಪದ' (key words)ಗಳನ್ನು ಬರೆದು ಹುಡುಕತೊಡಗಿದೆ. ಎಂಟತ್ತು ಬೇರೆಬೇರೆ ಶೋಧಕ ಪದಗಳನ್ನು
ಹೊಡೆದ ಮೇಲೆ ಕೋಳಿಮೊಟ್ಟೆಯಲ್ಲಿನ ನೈಸರ್ಗಿಕ
ತಂತ್ರಜ್ಞಾನದ ಬಗ್ಗೆ ಮಜದ
ವಿಷಯಗಳು ಗೊತ್ತಾದವು.
ಸುಮ್ಮನೇ ನಮ್ಮಷ್ಟಕ್ಕೆ ನಾವೇ ಒಂದಿಷ್ಟು ಸಿಲ್ಲಿ ಪ್ರಶ್ನೆ ಕೇಳಿಕೊಳ್ಳೋಣ:
ಹೊರಜಗತ್ತಿನಲ್ಲಿ ಸಣ್ಣಪುಟ್ಟ ಘರ್ಷಣೆಗೆ ಒಳಗಾದರೂ ಮೊಟ್ಟೆಯೊಳಗೆ ಅವಿತಿರುವ ಹಳದಿಚೆಂಡು (Yolk) ಯಾಕೆ ಒಡೆಯುವದಿಲ್ಲ? ಈ ಮೊಟ್ಟೆಯನ್ನು ಎಷ್ಟೇ ತಲೆಕೆಳಗು ಮಾಡಿದರೂ
ಮೊಟ್ಟೆಯೊಳಗಿನ ಹಳದಿ ಚೆಂಡು ಚಿಪ್ಪಿನ ಮಧ್ಯದಲ್ಲೇ ಸ್ಥಾಪಿತವಾಗಿರುತ್ತದೆಯೇ ಹೊರತು ಮೊಟ್ಟೆಯ
ಎರಡೂ ತುದಿಗಳಲ್ಲಿ ಯಾಕೆ ಬಂದು ಕುಳಿತುಕೊಳ್ಳುವದಿಲ್ಲ? ಅದು ಹೇಗೆ ಭೂಮಿಯ
ಗುರುತ್ವಬಲವನ್ನು ಮೀರಿ ಈ ಚೆಂಡು ತ್ರಿಶಂಕು ಸ್ಥಿತಿಯಂತೆ ನಟ್ಟನಡುವೆ ಇರಬಲ್ಲದು?
ತೀರಾ ವೈಜ್ಞಾನಿಕ ಪರಿಭಾಷೆಯನ್ನು ಪ್ರಯೋಗಿಸದೇ ಸರಳವಾಗಿ ತಿಳಿದುಕೊಳ್ಳಬಹುದಾದರೆ, ಕೋಳಿ
ಪ್ರತಿದಿನ ಒಂದು ಮೊಟ್ಟೆ ಇಡಬಲ್ಲದು. ಆದರೆ ಈ ಪ್ರಕ್ರಿಯೆ ಮಾತ್ರ ಅದ್ಭುತವಾದದ್ದು. ಮೊಟ್ಟ
ಮೊದಲಿಗೆ ಕೋಳಿಯ ಅಂಡಾಶಯದಲ್ಲಿ ಸಾಸುವೆಕಾಳು ಗಾತ್ರದ ಹಳದಿಚೆಂಡು ಮಾತ್ರ
ಉತ್ಪತ್ತಿಯಾಗುತ್ತದೆ. ಹಾಗೆ ನೋಡಿದರೆ ಕೋಳಿಯ ದೇಹದೊಳಗೆ ಈ ಹಳದಿ ಮುತ್ತುಗಳ ಒಂದು
ಸರವೇ ಸಿದ್ಧವಾಗಿರುತ್ತದೆ. ಈ ಮುತ್ತಿನ ಸರದ ಪೈಕಿ ಯಾವದು ಮರುದಿನ ಮೊಟ್ಟೆಯಾಗುವ
ಸರದಿಯಲ್ಲಿದೆಯೋ ಆ ಹಳದಿಮುತ್ತು ತನ್ನ ಗಾತ್ರ ಹಿಗ್ಗಿಸಿಕೊಳ್ಳುತ್ತ ಅಂಡಾಶಯದಿಂದ
ಬಿಡುಗಡೆಗೊಂಡು ಅಂಡನಾಳವನ್ನು ಪ್ರವೇಶಿಸುತ್ತದೆ.
ಅಷ್ಟು ಚಿಕ್ಕ ಗಾತ್ರದ ಕೋಳಿಯ ಹೊಟ್ಟೆಯಲ್ಲಿರುವ ಅಂಡನಾಳವೆಂಬ
ಪೈಪಿನ ಉದ್ದ ಇಪ್ಪತ್ತಾರು ಇಂಚುಗಳು. ಈ ಪೈಪಿನಲ್ಲಿ ಗಾತ್ರ
ಹಿಗ್ಗಿಸಿಕೊಂಡ ಹಳದಿಚೆಂಡು ತನ್ನ 24 ಗಂಟೆಗಳ ಪಯಣ ಮುಂದುವರೆಸುತ್ತದೆ. ಪೈಪಿನಲ್ಲಿ
ಸೇರಿಕೊಂಡ ಮೂರು ಗಂಟೆಯ ಅವಧಿಯಲ್ಲಿ ಚೆಂಡಿನ ಸುತ್ತಲೂ ಬಿಳಿ ಲೋಳೆಯಂಥ ದ್ರವ (Albumen) ಆವರಿಸಿಕೊಳ್ಳುತ್ತದೆ.
ಯಾವಾಗ ಈ ಬಿಳಿ ಲೋಳೆಯ ಸುರಕ್ಷಾ ಕವಚ ಹಳದಿಚೆಂಡಿಗೆ ದಕ್ಕುತ್ತದೆಯೋ, ಆಗ ಬಂದೂಕಿನ
ನಳಿಕೆಯಲ್ಲಿ ತನ್ನಷ್ಟಕ್ಕೆ ತಾನು ತಿರುಗುತ್ತ ಚಲಿಸುವ ಬುಲೆಟ್ ನಂತೆ ಈ ಹಳದಿಚೆಂಡು ಕೂಡ
ತನ್ನಷ್ಟಕ್ಕೆ ತಾನೇ ತಿರುಗುತ್ತ ಅಂಡನಾಳದ ಪೈಪಿನಲ್ಲಿ ಮುನ್ನುಗ್ಗತೊಡಗುತ್ತದೆ. ಈ
ಪ್ರಕ್ರಿಯೆಯಿಂದ ಚೆಂಡಿನ ಎರಡೂ ಬದಿಗೆ ದಟ್ಟ ಬಿಳಿ ಬಣ್ಣದ ಲೋಳೆಯಂಥ ದಾರವೊಂದು ಸಿದ್ಧವಾಗುತ್ತದೆ.
ಷಲಾಜೆ ಅಥವಾ ಖಲಾಜೆ (Chalazae) ಅಂತ ಕರೆಯಲ್ಪಡುವ ಈ ದಾರ ಹಳದಿಚೆಂಡನ್ನು
ಮೊಟ್ಟೆಯಾಕಾರದ ಸುರಕ್ಷಾಕವಚದ ಮಧ್ಯಭಾಗದಲ್ಲಿರುವಂತೆ ಎಳೆದುಕಟ್ಟುತ್ತದೆ.
(ಉದಾ: ನಿಮ್ಮ ಕೈಯಲ್ಲಿರುವ ವಾಚ್
ನ ವೃತ್ತ ಹಳದಿಚೆಂಡಾದರೆ, ವಾಚಿನ ಎರಡೂ ತುದಿಯ ಬೆಲ್ಟ್ ಮೊಟ್ಟೆಯಲ್ಲಿನ
ದಾರದಂತೆ!)
ಹೀಗೆ ಒಂದೆಡೆ ಎಡಬಲದಲ್ಲಿ ದಾರದಿಂದ ನಿಯಂತ್ರಣಕ್ಕೊಳಗಾಗುತ್ತ ನಟ್ಟನಡುವೆ ಸ್ಥಾಪಿತವಾಗುವ ಹಳದಿಚೆಂಡು
ಎಷ್ಟೇ ಸಣ್ಣಪುಟ್ಟ ಘರ್ಷಣೆಗೆ ಒಳಪಟ್ಟರೂ ಒಡೆಯುವದಿಲ್ಲ. ಯಾಕೆಂದರೆ ಅದರ ಸುತ್ತಲಿನ ಲೋಳೆ
ದ್ರವ ಶಾಕ್ ಆಬ್ಸರ್ವರ್ ನಂತೆ ಅಭಯ ನೀಡುತ್ತಿರುತ್ತದೆ. ಹೀಗೆ ಅಂಡನಾಳದಲ್ಲಿ ತನ್ನಷ್ಟಕ್ಕೆ
ತಾನೇ ಪಕ್ವವಾಗುತ್ತ ಸಾಗುವ ಚೆಂಡಿನ ಸುತ್ತ ಮುಂದಿನ
ಇಪ್ಪತ್ತು ಗಂಟೆಗಳ ಅವಧಿಯಲ್ಲಿ ಅಸಂಖ್ಯಾತ ತ್ರಿಕೋನಾಕಾರದ ಚಿಪ್ಪುಗಳು ಒಂದಕ್ಕೊಂದು ಸೇರಿಕೊಂಡು
ಒಂದು ಗಟ್ಟಿಯಾದ ಕವಚವನ್ನು ಕಟ್ಟಿಕೊಡುತ್ತವೆ. ಇದಿಷ್ಟು ಮೊಟ್ಟೆಯ ಇಪ್ಪತ್ನಾಲ್ಕು ಗಂಟೆಗಳ ಪರಿಭ್ರಮಣ. ಇಂಥ ಮೊಟ್ಟೆಯನ್ನು
ಒಡೆದಾಗ ಹಳದಿಚೆಂಡನ್ನು ಹಿಡಿದುಕಟ್ಟಿರುವ ಗಟ್ಟಿಬಿಳಿ ದ್ರವದ ದಾರವೇ ನನಗೆ ಗೋಚರಿಸಿದ್ದು. ವಿಶೇಷವೆಂದರೆ, ಅದು
ಮೊಟ್ಟೆಯ ತಾಜಾತನವನ್ನೂ ನಿರೂಪಿಸುತ್ತದೆ. ಅಂದರೆ ಮೊಟ್ಟೆ ತಾಜಾ ಅಥವಾ ಆರೋಗ್ಯಯುತವಾಗಿರುವಾಗ ಈ
ದಾರ ಸ್ಪಷ್ಟವಾಗಿ ಕಾಣಿಸುತ್ತದೆ.
ಇದ್ಯಾವುದೂ ಗೊತ್ತಿಲ್ಲದೇ ನಾನು ಕೆಟ್ಟ ಮೊಟ್ಟೆಯ
ಬಗ್ಗೆ ಅಂಗಡಿಯವನಲ್ಲಿ ಜಗಳ ಮಾಡಿದ್ದೆ..
-
![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 10.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, September 26, 2018
ನಿಂತ ನೀರಲ್ಲಿ ನಿಂತಿಹನು ಪೂರ್ಣಚಂದಿರ!
ಕಳಚಿಬಿದ್ದ ಹೂವೊಂದು
ರೆಂಬೆಗೆ ಹಿಂತಿರುಗುತ್ತಿದೆಯೇ?
ಆಹ್, ಚಿಟ್ಟೆ!
ಹಾಗಂತ ಮರುಳನಾಗಿ ಉದ್ಗರಿಸಿದವನು ಅರಕಿಡಾ ಮೊರಿತಾಕೆ. ನಾನು ಗಮನಿಸಿದಂತೆ ಸುಮಾರು
ಕಡೆ ಈ ರಚನೆಯನ್ನು ಹಾಯ್ಕು ಮಾಸ್ಟರ್ ಗಳಾದ ಬಾಶೋ ಅಥವಾ ಶಿಕಿಯದೆಂದು ಬಿಂಬಿಸಲಾಗಿದೆ.
ಆದರೆ ಮೂಲತಃ ಇದನ್ನು ಬರೆದವನು ಅರಕಿಡಾ ಮೊರಿತಾಕೆ. (Arakida Moritake 1473-1549)
ಈತ ಬಾಶೋಗಿಂತ ಇನ್ನೂರು ವರ್ಷ ಮೊದಲೇ ಹುಟ್ಟಿದವನು. ಜಪಾನಿ ಕವಿ. ಅಲ್ಲಿನ ಕಾವ್ಯ ಪ್ರಾಕಾರವಾದ ಹೈಕಾಯ್
ಪದ್ಧತಿಯನ್ನು ಆಯ್ದುಕೊಂಡು ಅದರಲ್ಲೇ ಕಾವ್ಯ ಕೃಷಿ ಮಾಡಿದವನು. ಕೊನೆಗೊಮ್ಮೆ ಜೆನ್ ತತ್ವಕ್ಕೆ ಮನಸೋತು ಜಪಾನಿನ
ದೇವಾಲಯವೊಂದಕ್ಕೆ ಮುಖ್ಯಸ್ಥನಾದವನು.
ಇಷ್ಟಕ್ಕೂ ಜಪಾನಿನ ಸಾಹಿತ್ಯದ ಮೇಲೆ ಜೆನ್
ಪ್ರಭಾವ ಸಾಕಷ್ಟಿದೆಯಷ್ಟೇ. ಅದು ಅಲ್ಲಿನ ಪ್ರಾಕಾರಗಳಾದ ಹಾಯ್ಕು ಇರಬಹುದು, ಹೊಕ್ಕು
ಇರಬಹುದು ಅಥವಾ ಹೈಕಾಯ್, ಹೈಬು, ಟಂಕಾ, ರೆಂಗಾ, ವಾಕಾ, ಸೆನ್ರ್ಯೂ ಇರಬಹುದು. ಎಲ್ಲದರಲ್ಲೂ ಜೆನ್
ಅಷ್ಟಿಷ್ಟು ಜಿನುಗುತ್ತಿರುತ್ತದೆ. ಅಂತೆಯೇ ಎಲ್ಲ ಗಂಭೀರತೆ ಮತ್ತು ಕಡುಕಷ್ಟಗಳ ನಡುವೆಯೂ
ಒಂದು ನಿರಾಳತೆಯ ತುಂಟತನ ಚಿಮ್ಮುತ್ತಿರುತ್ತದೆ.
*
ಒಂದಾನೊಂದು ಕಾಲದಲ್ಲಿ ಜಪಾನಲ್ಲೊಬ್ಬ ಸೇನಾ
ಮುಖ್ಯಸ್ಥನಿದ್ದ. ಜನರಲ್ ಎಂದು ಕರೆಯಲ್ಪಡುತ್ತಿದ್ದ ಆತನೋ ತನ್ನ ಕಾಲದ ಅನೇಕ ಯುದ್ಧಗಳಲ್ಲಿ
ಅಪ್ರತಿಮ ಶೌರ್ಯವನ್ನು ಮೆರೆದಂಥವನು. ಹಲವಾರು ರೀತಿಯ ಯುದ್ಧಕಲೆಗಳಲ್ಲಿ ಪರಿಣತ.
ಬದುಕಿನುದ್ದಕ್ಕೂ ಮುಖ ಗಂಟಿಕ್ಕಿಕೊಂಡು ಒಂದಿಲ್ಲ ಒಂದು ಕಡೆ ಯುದ್ಧರಂಗದಲ್ಲಿ
ಭಾಗವಹಿಸುತ್ತಲೇ ಬಂದ ಈ ಜನರಲ್ ಗೆ ತನ್ನ ಶೌರ್ಯದ ಬಗ್ಗೆ ಹೆಮ್ಮೆ ಮತ್ತು ಕಂಡೂ
ಕಾಣದ ಅಹಂಕಾರ. ನಿವೃತ್ತಿಯಾಗುತ್ತಿಯಾಗುವ ಘಳಿಗೆಯಲ್ಲಿ ಇಂಥ ಮಹಾನ್
ಯೋಧನಿಗೂ ಒಂದು ಕೊರತೆ ಕಾಡತೊಡಗುತ್ತದೆ.
ಅದು ಆತನ ಬಿಲ್ಲುಗಾರಿಕೆಗೆ ಸಂಬಂಧಿಸಿದ್ದು.
ಈ ಜನರಲ್ ವಿಭಿನ್ನ ರೀತಿಯ ಆಯುಧಗಳಲ್ಲಿ ಪಳಗಿದ್ದನಾದರೂ ಬಿಲ್ವಿದ್ಯೆಯಲ್ಲಿ ಮಾತ್ರ
ಅಷ್ಟಕ್ಕಷ್ಟೇ. ಆತ ಎಷ್ಟು ಪ್ರಯತ್ನಿಸಿದರೂ ಒಬ್ಬ ಅದ್ಭುತ ಬಿಲ್ಲುಗಾರನಾಗಲು
ಸಾಧ್ಯವಾಗಿರಲಿಲ್ಲ. ಹೀಗಾಗಿ ತನ್ನ ಈ ಕೊರತೆಯನ್ನು ನೀಗಿಸಬಲ್ಲ ಶಾಲೆಯನ್ನು ಹುಡುಕಿಕೊಂಡು
ಹೊರಟ. ಕೊನೆಗೊಮ್ಮೆ ಅಂಥದೊಂದು ಶಾಲೆ ಸಿಕ್ಕಾಗ ಅಲ್ಲಿನ ಗುರು ಈತನಿಗೆ ಧ್ಯಾನದ ಮಹತ್ವವನ್ನು
ಹೇಳಿಕೊಡತೊಡಗಿದ. ಜನರಲ್ ತನ್ನ ಸಹಜ ಗತ್ತಿನಿಂದ, 'ಬಿಲ್ಲು ಬಾಣಗಳಿಗೂ, ಧ್ಯಾನಕ್ಕೂ ಏನು
ಸಂಬಂಧ?' ಅಂತೆಲ್ಲ ಉಡಾಫೆಯಿಂದ ಕೆಣಕಿದ.
ಗುರುವೇನೋ ತಣ್ಣಗಿದ್ದ. ತನ್ನ ಪಾಡಿಗೆ ತಾನು ಪಕ್ಕದಲ್ಲಿದ್ದ ದೊಡ್ಡದೊಂದು ಮಣ್ಣಿನ ಕೊಳಗದಲ್ಲಿ ಸುಮ್ಮನೇ
ವರ್ತುಲಾಕಾರದಲ್ಲಿ ಬೆರಳಾಡಿಸುತ್ತ ಜನರಲ್ ಗೆ ಪ್ರಶ್ನಿಸತೊಡಗಿದ:
" ಈ ಪಾತ್ರೆಯಲ್ಲಿ ನಿನಗೇನು ಕಾಣಿಸುತ್ತಿದೆ?"
'ಪಾತ್ರೆಯಲ್ಲಿ ನೀರಿದೆ'
"ಹೌದು, ಆದರೆ ನೀರಿನಲ್ಲೇನಿದೆ?"
'ನೀವು ಬೆರಳಾಡಿಸಿದ್ದರಿಂದ ಅಲೆಗಳ ಮಧ್ಯೆ ಬೆಳಕಿನ ಪ್ರತಿಫಲನವೊಂದು
ಛಿದ್ರಛಿದ್ರವಾದಂತಿದೆ. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ..'
ಗುರು ಬೆರಳನ್ನು ನೀರಿನಿಂದ ಹೊರತೆಗೆದ.
ಕೆಲಹೊತ್ತಿನಲ್ಲೇ ಪಾತ್ರೆಯಲ್ಲಿನ ಅಲ್ಲೋಲಕಲ್ಲೋಲ ನಿಂತು ನೀರು ಸ್ತಬ್ದವಾಗತೊಡಗಿತ್ತು. ಗುರು
ಸುಮ್ಮನೇ ಕಣ್ಣುಮುಚ್ಚಿಕೊಂಡು ನಿಂತಿದ್ದ. ಎಷ್ಟೋ ಕ್ಷಣಗಳು ಉರುಳಿಹೋದವು. ಅಲ್ಲೊಂದು
ನಿಶ್ಶಬ್ಧತೆ ಆವರಿಸತೊಡಗಿತ್ತು. ಇತ್ತ ಜನರಲ್ ಅಸಹನೆಯಿಂದ ನಿಂತಲ್ಲಿ ನಿಲ್ಲಲಾಗದೇ
ಚಡಪಡಿಸತೊಡಗಿದ್ದ. ಗುರು ಮಾತ್ರ ಕಣ್ಣು ತೆರೆಯದೇ ನಿಧಾನವಾಗಿ, 'ನೀರಿನ
ಪಾತ್ರೆಯಲ್ಲಿ ಈಗೇನು ಕಾಣಿಸುತ್ತಿದೆ?' ಅಂದ. ಜನರಲ್ ಗೆ ಪಾತ್ರೆಯಲ್ಲಿ
ವರ್ತುಲಾಕಾರದ ಅಲೆಗಳು ಕಾಣಿಸಲಿಲ್ಲ. ಛಿದ್ರಗೊಂಡ ಬೆಳಕೂ ಕಾಣಿಸಲಿಲ್ಲ.
ಅಲ್ಲಿದ್ದಿದ್ದು ಒಂದೇ: ಪೂರ್ಣಚಂದ್ರ!
ಹಾಗೆ ಧ್ಯಾನದ ಮಹತ್ವವನ್ನು ಅರಿತ ಜನರಲ್
ಬಿಲ್ಲುಗಾರಿಕೆಯಲ್ಲಿ ಅದ್ಭುತ ಹಿಡಿತವನ್ನು ಸಾಧಿಸುತ್ತಾನೆ. ಅದಕ್ಕಾಗಿ ಆತ ಆ ಶಾಲೆಯಲ್ಲಿ ಸತತ
ಹತ್ತು ವರ್ಷಗಳ ಕಾಲ ಅಭ್ಯಾಸ ಮಾಡುತ್ತಾನೆ. ಕೊನೆಗೊಮ್ಮೆ ತಾನು ಬಿಲ್ವಿದ್ಯೆಯಲ್ಲಿ ಕಲಿಯುವದೇನೂ
ಉಳಿದಿಲ್ಲ ಅಂತ ಅನಿಸಿದಾಗ ಹೊರಡಲೆಂದು ಗುರುವಿನ ಬಳಿ ಅಪ್ಪಣೆ ಕೇಳುತ್ತಾನೆ. ಆಗ ಗುರು
ಯಾವುದೋ ಒಂದು ಊರಿನ ಹೆಸರು ಹೇಳುತ್ತ, ಅಲ್ಲೊಬ್ಬ ಮಹಾನ್
ಬಿಲ್ಲುಗಾರನಿರುವನೆಂದೂ, ಸಾಧ್ಯವಾದರೆ ಆತನನ್ನೊಮ್ಮೆ ಭೇಟಿಯಾಗಿ ಬಿಲ್ಲುಗಾರಿಕೆಯ ಬಗ್ಗೆ
ಸಮಾಲೋಚನೆ ಮಾಡಬೇಕೆಂದೂ ಹೇಳಿ ಜನರಲ್ ನನ್ನು ಬೀಳ್ಕೊಡುತ್ತಾನೆ.
ಅಷ್ಟೊತ್ತೂ ತನ್ನ ಬಾಣದ ಕೌಶಲ್ಯದ ಬಗ್ಗೆ
ಅಪಾರ ಹೆಮ್ಮೆ ಹೊಂದಿದ್ದ ಜನರಲ್ ಗೆ ತನ್ನ ಗುರು ಸೂಚಿಸಿದ ಊರನ್ನು ನೆನೆದು ಕುತೂಹಲ
ಮೂಡುತ್ತದೆ. ಯಾಕೆಂದರೆ ಅದು ತಾನೇ ಹುಟ್ಟಿದ ಊರು. ದಟ್ಟ ಕಾಡಿನ
ಅಂಚಿನಲ್ಲಿದ್ದ ನದಿದಡದ ಪುಟ್ಟ ಹಳ್ಳಿ. ಅಂಥ
ಕುಗ್ರಾಮದಲ್ಲಿ ಇನ್ನೆಂಥ ಬಿಲ್ವಿದ್ಯಾ ಪರಿಣತನಿರಬಹುದೆಂಬ ಉಡಾಫೆಯಲ್ಲಿತನ್ನೂರನ್ನು ಹುಡುಕುತ್ತ ಬಂದ ಜನರಲ್ ಗೆ
ಊರಿಗೆ ಕಾಲಿಡುತ್ತಿದ್ದಂತೆ ವಿಚಿತ್ರ ಅನುಭವವಾಗತೊಡಗುತ್ತದೆ. ಯಾಕೆಂದರೆ ಅಲ್ಲಿ ಇದ್ದಿದ್ದೇ ಒಂದೈವತ್ತು ಮಣ್ಣಿನ ಗುಡಿಸಲು. ಎಲ್ಲ ಗುಡಿಸಲುಗಳ
ಗೋಡೆ, ಕಿಟಕಿಗಳ ಮೇಲೆ ಬಣ್ಣಬಣ್ಣದ ಒಂದೊಂದು ವರ್ತುಲಾಕಾರದ ಟಾರ್ಗೆಟ್. ಅದರ ನಟ್ಟನಡುವೆ ಇರುವಂಥ
'ಬುಲ್ಸ್ ಐ'ಯನ್ನು ಛೇದಿಸಿರುವ ಒಂದು ಬಾಣ! ಅಷ್ಟೇ ಯಾಕೆ, ಅಲ್ಲಿರುವ ನೂರಾರು ಮರದ ಬೊಡ್ಡೆಗಳ
ಮೇಲೂ ಇಂಥದ್ದೇ ಚಿತ್ರಣ. ಎಲ್ಲ ಕಡೆಗಳಲ್ಲೂ ಬಣ್ಣಬಣ್ಣದ ಟಾರ್ಗೆಟ್ ಮತ್ತು ನಟ್ಟನಡುವೆ
ಒಂದು ಬಾಣ ಅಥವಾ ಬಾಣದ ತೂತು.
ಹುಟ್ಟಿದೂರಿಗೆ ಬಂದ ಜನರಲ್ ಗೆ ಇದ್ಯಾರಪ್ಪ
ಪುಣ್ಯಾತ್ಮ ಅಂತೆನಿಸಿಬಿಡುತ್ತದೆ. ಸೈನ್ಯಾಧಿಕಾರಿಯ ಗತ್ತಿನಲ್ಲಿ ಆತ ಊರ ಜನರನ್ನೆಲ್ಲ ನದಿ
ದಡದಲ್ಲಿ ಒಂದೆಡೆ ಸೇರಿಸುತ್ತಾನೆ. ಅಲ್ಲಿದ್ದ ಟಾರ್ಗೆಟ್ಟಿನ ಬಾಣಗಳನ್ನು ತೋರಿಸುತ್ತ,
ಯಾರು ಈ ಗುರಿಕಾರ? ಅಂತೆಲ್ಲ ವಿಚಾರಿಸುತ್ತಾನೆ. ವಿಚಿತ್ರವೆಂದರೆ ಊರಿನವರಿಗೂ ಈ ವಿಷಯ
ಗೊತ್ತಿಲ್ಲ. ಅಸಲಿಗೆ ದೈನಂದಿನ ಕೆಲಸಗಳಲ್ಲಿ ಅವರೆಷ್ಟು ವ್ಯಸ್ತರು ಅಂದರೆ, ಈ ಟಾರ್ಗೆಟ್ ಮತ್ತು
ಬಾಣದಂಥ ವಿಷಯವನ್ನೇ ಅವರು ಗಮನಿಸಿರುವದಿಲ್ಲ. ಆದರೆ ಜನರಲ್ ಊರಿನವರ ಮಾತು ನಂಬುವದಿಲ್ಲ. ಅವರೇನೋ
ಮುಚ್ಚಿಡುತ್ತಿದ್ದಾರೆ ಎಂಬಂತೆ ಭಾವಿಸುತ್ತಾನೆ. ಸಂಜೆಯೊಳಗಾಗಿ ಆ ಬಿಲ್ಲುಗಾರನನ್ನು ತನ್ನೆದುರು ಹಾಜರು
ಮಾಡಿಸುವಂತೆ ಆರ್ಭಟಿಸಿ ಅಲ್ಲಿದ್ದವರನ್ನೆಲ್ಲ ಕಳಿಸುತ್ತಾನೆ.
ಬೆಳಗಿನಿಂದ ಕಂಗೆಟ್ಟಿರುವ
ಜನರಲ್. ಜೊತೆಗೆ ಚಿಂತಾಕ್ರಾಂತ ಕೂಡ. ಹೊಸ ಬಿಲ್ವಿದ್ಯಾ ಚತುರನಿಗಾಗಿ ನದಿ ದಡದ ಕಲ್ಲೊಂದರ
ಮೇಲೆ ಕೂತು ಕೂತು ಸಂಜೆಯಾಗುತ್ತಲಿದೆ. ಯಾರೊಬ್ಬರ ಸುಳಿವಿಲ್ಲ. ಅಷ್ಟೊತ್ತಿಗೆ ಎಲ್ಲಿಂದಲೋ
ದನಿಯೊಂದು ಕೇಳಿಬರುತ್ತಲಿದೆ:
'ನೀವು ಯಾರಿಗೋ ಕಾಯುತ್ತಲಿದ್ದೀರಿ ಅಂತ
ಕಾಣಿಸುತ್ತದೆ.'
ದನಿ ಬಂದ ದಿಕ್ಕಿನಲ್ಲಿ ತಲೆಯೆತ್ತಿ
ನೋಡುತ್ತಾನೆ. ಎದುರಿಗೆ
ಎಂಟರ ಪೋರ! ಅಸಡ್ಡೆಯಿಂದ 'ಹೋಗಾಚೆ'
ಎನ್ನುವಂತೆ ದೂರದಿಂದಲೇ ಕೈ ಜಾಡಿಸುತ್ತಿರುವ ಜನರಲ್ ನ ಆಂಗಿಕಭಾಷೆಯನ್ನು ಅರ್ಥಮಾಡಿಕೊಳ್ಳದ ಈ ಪೋರ ಸೀದಾ ಎದುರಿಗೇ
ಬಂದು ನಿಂತಿದ್ದಾನೆ ಮತ್ತು ವಿನಮ್ರನಾಗಿ ಹೇಳುತ್ತಿದ್ದಾನೆ:
“ಊರಿನ ಗೋಡೆಗಳ ಮೇಲೆ ಬಾಣ ಹೊಡೆದವರಿಗಾಗಿ
ನೀವು ಕಾಯುತ್ತಿದ್ದೀರಂತೆ. ಹಾಗಾಗಿ ನಿಮ್ಮನ್ನು ಕಾಣಬೇಕೆಂದು ನಮ್ಮಪ್ಪ ನನ್ನನ್ನು ಇಲ್ಲಿಗೆ
ಕಳಿಸಿದ..”
ಗಾಬರಿ ಬೀಳುವ ಸರದಿ ಈಗ ಜನರಲ್ ದು. ಎಲಾ!
ಅಷ್ಟೂ ಟಾರ್ಗೆಟ್ಟುಗಳ ಮಧ್ಯೆ ಬಾಣ ಹೊಡೆದಿದ್ದು ಈ ಪೋರನೇ? ಮೊದಮೊದಲಿಗೆ ಅಸಡ್ಡೆಯಿಂದ ಜಬರಿಸುವ ಜನರಲ್ ನಂತರ ಸಾವರಿಸಿಕೊಂಡು ಪೋರನಿಗೆ ದುಂಬಾಲು ಬೀಳುತ್ತಾನೆ. ಹೇಗೆ ಇದೆಲ್ಲ
ಸಾಧ್ಯ ಅಂತೆಲ್ಲ ಅವನನ್ನು ರಮಿಸತೊಡಗುತ್ತಾನೆ. ಜನರಲ್ ನಿತ್ರಾಣನಾಗಿದ್ದನ್ನು ನೋಡಿ ಪೋರ ನಿಧಾನಕ್ಕೆ ತನ್ನ ಚಿಪ್ಪಿನಿಂದ ಹೊರಬಂದು ಅರಳುತ್ತಿದ್ದಾನೆ. ಇಲ್ಲೀಗ ಪವಾಡ ಘಟಿಸುತ್ತಲಿದೆ. ಲೋಕದಲ್ಲಿ ಯಾರಿಗೂ ಗೊತ್ತಿರದ ತನ್ನ ಬಿಲ್ವಿದ್ಯಾ ಚತುರತೆಯನ್ನು ಈ ಪೋರ ತನ್ನ ಅಬೋಧ ನಗುವಿನೊಂದಿಗೆ ವಿವರಿಸುತ್ತಿರುವನು:
"ಇಕೋ ಇಲ್ಲಿ ನೋಡಿ, ಬಿಲ್ಲಿನಲ್ಲಿ ಹೀಗೆ ಬಾಣ
ಇರಿಸಬೇಕು. ಹೀಗೆ ಬಿಲ್ಲಿನ ದಾರ ಬಿಗಿಯಾಗುವವರೆಗೆ ಎಳೆದು ಒಂದೇಟಿಗೆ ಬಾಣ ಚಿಮ್ಮಿಸಬೇಕು. ಆಮೇಲೆ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ ಅಲ್ಲಿ ಹೋಗಿ ಟಾರ್ಗೆಟ್ಟಿನ ಚಿತ್ರ ಬಿಡಿಸಬೇಕು!"
ಮತ್ತೀಗ, ಜನರಲ್ ಮತ್ತೇ ತನ್ನ ಶಾಲೆಗೆ ಹಿಂದಿರುಗಿ
ನಿಜದ ಧ್ಯಾನ ಕಲಿಯತೊಡಗಿದ.
*
ಅರಕಿಡಾ ಮೊರಿತಾಕೆ
ಕಂಡಿದ್ದು ಬರೀ ಚಿಟ್ಟೆಯನ್ನು ಮಾತ್ರ. ಅಸಲಿಗೆ ಹೂವು ಅಲ್ಲಿರಲೇ ಇಲ್ಲ.
ಕಳಚಿದ್ದು ಆತನ ಮನದಲ್ಲಿ ಮಾತ್ರ. ಇಷ್ಟಕ್ಕೂ ಪವಾಡ ಜರಗುವದು ಇಲ್ಲೇ: ಕಳಚಿದ ಹೂವೊಂದು ಮರಳಿ ರೆಂಬೆಯನ್ನೇರಲು ಎಷ್ಟು ಹಗುರಾಗಬೇಕು ಮತ್ತು
ಎಷ್ಟು ಖಾಲಿಯಾಗಬೇಕು?
-
![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 26.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, September 12, 2018
ಕಲೆ, ಕಲಾವಿದ ಮತ್ತು ಗೋಡೆಯಾಚೆಯ ಜಗತ್ತು!
![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 12.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, August 29, 2018
ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಒಂದು ಶೋಕಿ!
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 29.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, August 1, 2018
ಕತೆಯೆಂಬ ಮಂತ್ರವೂ ಕಥನವೆಂಬ ತಂತ್ರವೂ..
ಒಂದು ಕತೆಯ ಆರಂಭಕ್ಕೆ ಹಲವಾರು ದಾರಿಗಳು. ಈ
ದಾರಿಯಲ್ಲಿ ಕತೆಗಾರನಿಗೆ ಕತೆ ಎಂಬುದು ಯಾವಾಗಲೂ
ಒಂದು ಮಂತ್ರ. ಕಥನವೆಂಬುದು ಬರೀ ತಂತ್ರ. ಸಾಮಾನ್ಯವಾಗಿ ಕತೆ ಹೇಳುವ
ಕತೆಗಾರ ಒಂದೊಂದು ರೀತಿಯ ಕಥನತಂತ್ರ ಪ್ರಯೋಗಿಸುತ್ತಾನೆ. ಆದರೆ ಒಮ್ಮೊಮ್ಮೆ ಇದೆಲ್ಲ
ತಿರುವುಮುರುವು ಆಗುವದೂ ಉಂಟು. ಕತೆಗಿಂತ ಕಥನವೇ ಮಂತ್ರವಾಗಿ ಕತೆಯೇ ತಂತ್ರವಾಗುವದೂ
ಉಂಟು. ಸಿಂಪಿ ಲಿಂಗಣ್ಣನವರು 'ಉತ್ತರ ಕರ್ನಾಟಕದ ಜಾನಪದ ಕಥೆಗಳು' (ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಕೃತಿಯಲ್ಲಿ ಒಂದು ಮಜವಾದ ಚಿತ್ರಣ ಕೊಡುತ್ತಾರೆ. ಹೇಗೆ ಒಂದು ಕುಟುಂಬದಲ್ಲಿ ಕತೆಗಿಂತ ಕಥನವೊಂದು ಮುಖ್ಯವಾಗಿ,
ಅದು ಜೀವ-ಜೀವಗಳ ನಡುವೆ ಕೂಡಿಕೆಯ ಮಿಡಿಯಾಗಿ, ಸಹವಾಸದ ಪಾಡಾಗಿ ಕೊನೆಗೊಮ್ಮೆ ಅದು
ಸಖ್ಯದ ಫಲವಾಗಿ ಪರಿಣಮಿಸುತ್ತದೆ ಅಂತ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ.
ಬಹುಶಃ ಅದೊಂದು ಉತ್ತರ ಕರ್ನಾಟಕದ ಯಾವುದೋ ಊರು.
ಈಗಷ್ಟೇ ಮಳೆ ನಿಂತಿರುವ ಇಳಿಸಂಜೆ. ವರಾಂಡದಲ್ಲಿ ಪವಡಿಸಿರುವ ಒಂದು ಜೋಡಿ. ಇಬ್ಬರೂ ಓರಗೆಯವರಲ್ಲ.
ಇಬ್ಬರೂ ಸರೀಕರಲ್ಲ. ಒಬ್ಬರ ಬಾಯಲ್ಲಿ ಹಲ್ಲು ಉಳಿದಿಲ್ಲ, ಇನ್ನೊಬ್ಬರ ಬಾಯಲ್ಲಿ
ಹಲ್ಲೇ ಬೆಳೆದಿಲ್ಲ. ಆದರೂ ಒಡನಾಡಿಗಳು. ಒಂದು ಅಜ್ಜಿ, ಒಂದು ಮೊಮ್ಮಗು.
ಅಜ್ಜಿಯ ಕೈಹಿಡಿದ ಯಜಮಾನ ಯಾವತ್ತೋ ಕೈಬಿಟ್ಟು ಬಹುದೂರ ಸಾಗಿರುವನು. ಸದ್ಯಕ್ಕೆ ಮೊಮ್ಮಗನ
ರೂಪದಲ್ಲೂ ಹೆಸರಿನಲ್ಲೂ ಉದ್ಭವನಾಗಿರುವನು. ಬೊಚ್ಚುಬಾಯಿಯ ಮಗು. ಅದು ಬಾಯನ್ನಗಲಿಸಿ ನಕ್ಕಾಗಲೆಲ್ಲ
ಆ ನಗುವಿನಲ್ಲಿ ಯಜಮಾನನನ್ನೇ ಕಾಣುವ ಅಜ್ಜಿ. ಈ ಹಂತದಲ್ಲಿ ಅಜ್ಜಿಗೆ ಮಗು ಒಡನಾಡಿಯೋ, ಮಗುವಿಗೆ
ಅಜ್ಜಿ ಒಡನಾಡಿಯೋ ಅಂತ ವಿವರಿಸುವದು ಕಷ್ಟ. ಹೀಗಿರುವಾಗ, ಈ ಇಳಿಸಂಜೆಯ ಕಥಾಸಮಯದಲ್ಲಿ ಒಡನಾಡಿಗಳ
ಮಧ್ಯೆ ಅಲ್ಲೊಂದು ಪ್ರಶ್ನೋತ್ತರಮಾಲಿಕೆ ನಡೆಯುತ್ತಿದೆ. ಅಜ್ಜಿ ಕೇಳುತ್ತಿದ್ದಾಳೆ:
"ಕತೆಕತೆ ಕಬ್ಬು,
ಮೈಯೆಲ್ಲ ಜಿಬ್ಬು. ತಿಂದೆಯೋ? ಉಗುಳಿದೆಯೋ?" '
'ಉಗುಳಿದೆ' "ಎಲ್ಲಿ ಉಗುಳಿದೆ?" 'ತಿಪ್ಪೆಯಲ್ಲಿ ಉಗುಳಿದೆ' "ತಿಪ್ಪೆ ಏನು ಕೊಟ್ಟಿತು?" 'ಗೊಬ್ಬರ ಕೊಟ್ಟಿತು' "ಗೊಬ್ಬರ ಏನು ಮಾಡಿದೆ?" 'ತೋಟಕ್ಕೆ ಹಾಕಿದೆ' "ತೋಟ ಏನು ಕೊಟ್ಟಿತು?" 'ಹೂವು ಕೊಟ್ಟಿತು' "ಹೂವು ಏನು ಮಾಡಿದೆ?" 'ದೇವರಿಗೆ ಏರಿಸಿದೆ' "ದೇವರೇನು
ಕೊಟ್ಟ?" 'ಗಳಗಂಟೆ
ಕೊಟ್ಟ!'
ಗಳಗಂಟೆ ಅಂತನ್ನುವಾಗ ಚಡ್ಡಿ
ಹಾಕಿರದ ಮಗುವಿನ ಮುಖದಲ್ಲಿ ಖೊವ್ವೆನ್ನುವ ತುಂಟ ನಗು! ಅದನ್ನು ನಿಸೂರಾಗಿ ತುಂಬಿದ್ದು
ಅಜ್ಜಿ. ಇದು ಕತೆಯೊಂದು ತನ್ನಷ್ಟಕ್ಕೆ ತಾನೇ ಸಿದ್ಧವಾಗುತ್ತಿದ್ದ ರೀತಿ. ಅಥವಾ, ಆಗಷ್ಟೇ
ಹೆಣೆಯುತ್ತಿದ್ದ ಕತೆಯನ್ನು ಆಲಿಸಲೆಂದು ಆಕೆ ಶ್ರೋತೃಗಳನ್ನು ಸಿದ್ಧಪಡಿಸುತ್ತಿದ್ದ
ರೀತಿ. ಇಂಥದೊಂದು ಪ್ರಶ್ನೋತ್ತರಮಾಲಿಕೆ ಸುರಳೀತವಾಗಿ ನಡೆಯಿತೆಂದರೆ ಆ ಸಂಜೆ ಅಲ್ಲೊಂದು
ಹೊಸ ಕತೆ ಹುಟ್ಟಿತೆಂದೇ ಲೆಕ್ಕ. ಮಕ್ಕಳ ಕಥಾಸಮಯದ ಆರಂಭದಲ್ಲಿ ನಡೆಯುತ್ತಿದ್ದ ಈ ರೀತಿಯ
'ಕಥಾವ್ಯಾಯಾಮ' ಇವತ್ತು ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವ್ಯಾಯಾಮ ಜಗತ್ತಿನ
ನಾನಾ ಪ್ರಾಂತ್ಯಗಳಲ್ಲಿ ನಾನಾ ರೀತಿಯಲ್ಲಿವೆ.
ಹೀಗೆ ವರಾಂಡದಲ್ಲಿ ಕತೆಯೊಂದು ತನ್ನಷ್ಟಕ್ಕೆ ತಾನೇ
ತಯಾರಾಗಿ ಜಿನುಗುತ್ತಿರುವಾಗಲೇ ಒಳಮನೆಯ ಜೀವವೊಂದು ಮಂದಹಾಸ ಬೀರುತ್ತಲಿದೆ. ಇಡೀ ದಿನ ಕೆಲಸ
ಮಾಡಿ ದಣಿದಿರುವ ಸೊಸೆ. ಕಾಲು ಚಾಚಿ ವಿಶ್ರಮಿಸುತ್ತಿರುವ ತುಂಬು ಗರ್ಭಿಣಿ. ಅವಳೊಳಗೆ
ಏನೇನು ಕತೆಗಳಿವೆಯೋ?
***
ಆಕೆ ಕಾಲು ಚಾಚಿ ವಿಶ್ರಮಿಸುತ್ತಿದ್ದಂತೆಯೇ
ಹೊಟ್ಟೆಯೊಳಗೆ ಸಣ್ಣಗೆ
ಮಿಸುಕಾಟ. ಇದ್ದಕ್ಕಿದ್ದಂತೆ ಗರ್ಭದೊಳಗಿನ ಎರಡು
ಭ್ರೂಣಗಳು ಸಕ್ರಿಯವಾದಂತೆ. ಹೆಣ್ಣೋ ಗಂಡೋ,
ಆಸ್ತಿಕವೋ ನಾಸ್ತಿಕವೋ, ಫೆಮಿನಿಷ್ಟೋ ಸೋಶಲಿಷ್ಟೋ ಆಗಿರಬಹುದಾದ ಭ್ರೂಣಗಳು. ಎರಡೂ ಭ್ರೂಣಗಳಿಗೆ
ಅಪರಿಮಿತ ಉತ್ಸಾಹವಿದ್ದಂತಿತ್ತು. ಹಾಗಾಗಿ ಅಲ್ಲೊಂದು ವಾಗ್ವಾದ ಶುರುವಾದಂತಿತ್ತು.
"ಅಬ್ಬಾ, ಅಂತೂ ಇಂತೂ ಅವತರಿಸಿಬಿಟ್ಟೆವು. ನಮಗಾಗಿ
ಎಷ್ಟೊಂದು ಜೀವಗಳು ಸತ್ತು ಹೋದವು. ನಾವೇ ಗ್ರೇಟ್ ಅಲ್ವಾ?" ಅಂತ ಭ್ರೂಣವೊಂದು
ಹೇಳುತ್ತಿದ್ದರೆ ಇನ್ನೊಂದು ಸುಮ್ಮನೇ ತಲೆಯಾಡಿಸುತ್ತಿತ್ತು. ಹುಟ್ಟಿದಾಗಿನಿಂದಲೂ ಹೀಗೇ. ಒಂದು
ಭ್ರೂಣ ಸಿಕ್ಕಾಪಟ್ಟೆ ಉತ್ಸಾಹಿ. ಅದಕ್ಕೆ ಎಲ್ಲದರಲ್ಲೂ ಕುತೂಹಲ. ಹೊರಜಗತ್ತಿನ ಎಲ್ಲ
ಚಟುವಟಿಕೆಗಳ ಬಗ್ಗೆ ತನ್ನದೇ ಆದ ಪ್ರತಿಕ್ರಿಯೆಗಳ ಮೂಲಕ ಸ್ಪಂದಿಸುತ್ತಿತ್ತು.
ಎರಡನೇಯದು ಸ್ವಲ್ಪ ನಿಧಾನಿ. ಅದು ಎಲ್ಲವನ್ನೂ ಗ್ರಹಿಸುವತ್ತ ಗಮನ ಹರಿಸುತ್ತಿತ್ತೇ ಹೊರತು
ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
"ನೀನ್ಯಾಕೆ ಮಾತನಾಡುತ್ತಿಲ್ಲ? ಯಾವಾಗ ನೋಡಿದರೂ
ಅದೇನೋ ಯೋಚನೆ ಮಾಡ್ತಾ ಇರ್ತೀಯ.." ಉತ್ಸಾಹಿ ಭ್ರೂಣ ಸಿಟ್ಟಿನಿಂದ ಕಿರುಚಿತು.
ಎರಡನೇಯದು ಶಾಂತವಾಗಿತ್ತು. ಅದು ನಿಧಾನವಾಗಿ, "ನಿಂಗೊತ್ತಿಲ್ಲ, ಇಷ್ಟು ದಿನ
ನೀನು ಖುಷಿಖುಷಿಯಾಗಿದ್ದೆ. ಯಾಕೆಂದರೆ ಇಲ್ಲಿರುವದು ಒಂದೇ ಲೋಕ ಅಂತ ನೀನು ಭಾವಿಸಿದ್ದೆ. ಆದರೆ
ನಾವು ಹೊರಹೋಗುವ ಸಮಯ ಬರುತ್ತಲಿದೆ. ಅದೊಂದು ವಿಚಿತ್ರ ಲೋಕ.." ಅಂತ ಅನ್ನುವಷ್ಟರಲ್ಲಿ
ಉತ್ಸಾಹಿ ಭ್ರೂಣದ ಕುತೂಹಲ ಗರಿಗೆದರತೊಡಗಿತ್ತು. ಏನೂ..? ಇನ್ನೊಂದು ಲೋಕವಾ? ಹೇಗಿದೆ ಆ
ಲೋಕ? ಏನೇನಿದೆ ಅಲ್ಲಿ? ಅಂತೆಲ್ಲ ಪ್ರಶ್ನೆಗಳ ಮಳೆಯನ್ನೇ ಸುರಿಸಿತು. ಇತ್ತ, ನಿಧಾನಿ ಭ್ರೂಣ
ಕೊಂಚ ಚಿಂತಾಕ್ರಾಂತವಾಗಿತ್ತು. ಅದಕ್ಕೆ ತನ್ನ ಒಡನಾಡಿಯ ಭವಿಷ್ಯದ ಬಗ್ಗೆ ಚಿಂತೆ.
"ನೋಡು, ಇಷ್ಟು ದಿನ ಹೇಗೋ ಏನೋ ಬೆಚ್ಚನೆಯ
ಗರ್ಭದಲ್ಲಿದ್ದೆವು. ಹೊರಗೆ ಎಂತೋ ಏನೋ. ನಾವಂತೂ ಮನುಷ್ಯರ ಮುಖವನ್ನೇ ನೋಡಿಲ್ಲ. ಯಾಕೆಂದರೆ ನಮಗೆ ಕಣ್ಣೇ ಇನ್ನೂ ಬಂದಿಲ್ಲ. ಹೀಗಾಗಿ ಯಾರು ಹೇಗೆ ಅಂತ
ಬರೀ ಅವರವರ ಧ್ವನಿಯ ಮೂಲಕ ಗುರುತಿಸುವದನ್ನು ರೂಢಿಸಿಕೊಂಡಿದ್ದೇವೆ. ಆದರೆ ಈ
ಮನುಷ್ಯರೋ ಭಲೇ ಕಿಲಾಡಿಗಳು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕಾಗಿ ಯಾವನೋ ಒಬ್ಬ ಗೆದ್ದ ವ್ಯಕ್ತಿಗೆ ಜೋರಾಗಿ ಅಭಿನಂದನೆ
ಹೇಳುತ್ತಿರುತ್ತಾನೆ. ಆದರೆ ಆ ಜೋರು ಹೇಳಿಕೆಯಲ್ಲಿ ಅಸಹನೆಯ ಸಣ್ಣ ಧ್ವನಿಯೂ
ಮಿಳಿತವಾಗಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಇನ್ನೊಂದೆಡೆ, ಯಾರೋ ಸತ್ತರೆಂದು
ಇನ್ಯಾರೋ ಸಂತಾಪ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಆ ಸಂತಾಪದೊಳಗೇ ಸಣ್ಣದೊಂದು
ಸಂತಸವೂ ಧ್ವನಿಸುತ್ತಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಹೀಗಿರುವಾಗ, ಕೇವಲ
ಧ್ವನಿಯನ್ನು ನಂಬಿರುವ ನಾವು ಮನುಷ್ಯರನ್ನು ಗುರುತಿಸುವದಾದರೂ ಹೇಗೋ?"
ನಿಧಾನಿ ಭ್ರೂಣದ ಮಾತುಗಳನ್ನು ಕೇಳುತ್ತಲೇ ಉತ್ಸಾಹಿ
ಭ್ರೂಣದ ಕೋಪ ನೆತ್ತಿಗೇರತೊಡಗಿತು. ಅದಕ್ಕೀಗ ಹೊರಜಗತ್ತಿನ ನಿಯಮಾವಳಿ ಬಗ್ಗೆ ಗೊಂದಲವಾದಂತಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಒಡನಾಡಿ ಎಂದಿಗೂ ತನ್ನೊಂದಿಗೆ ಒಳಗೊಂದು ಹೊರಗೊಂದು ಎಂಬಂತೆ
ಕಣ್ಣಾಮುಚ್ಚಾಲೆಯಾಡಿಲ್ಲವೆಂದೂ ತಿಳಿದು ಸಂತಸಪಟ್ಟಿತು. ತಕ್ಷಣವೇ ಸಿಟ್ಟಿನಿಂದ, "ಹೌದೋ,
ಅಲ್ಲಿ ಹಾಗೆಲ್ಲ ಉಂಟೋ? ಹಾಗಾದರೆ ನಮ್ಮ ಲೋಕದಿಂದ ಹೊರಗೆ ಹೋದವರ ಪೈಕಿ ಒಬ್ಬರೂ ನಮಗೆ ಇಂಥ
ಸಂಗತಿಗಳ ಬಗ್ಗೆ ಹೊರಗಿನಿಂದ ಎಚ್ಚರಿಸಲಿಲ್ಲವಲ್ಲ.." ಅಂತೆಲ್ಲ ತನ್ನ ಹಿರಿಯರ ಬಗ್ಗೆ
ಕೆಂಡ ಕಾರಿತು.
ನಿಧಾನಿ ಭ್ರೂಣ ಮುಗುಳ್ನಗುತ್ತಿತ್ತು. ಅದಕ್ಕೆ
ಉತ್ಸಾಹಿ ಒಡನಾಡಿಯ ಬಗ್ಗೆ ಇನ್ನಿಲ್ಲದ ಪ್ರೀತಿ. ಕೊನೆಗೂ ಏನು ಹೇಳುವದೆಂದು ಗೊತ್ತಾಗದೇ
ಆದಷ್ಟೂ ಸರಳ ರೀತಿಯಲ್ಲಿ ಹೇಳತೊಡಗಿತು: ನೋಡೋ, ನಮ್ಮದು ಒಂಥರಾ ವಿಚಿತ್ರ ಭಾಷೆ.
ಇಲ್ಲಿ ಮಾತುಕತೆ
ಬರೇ ಧ್ವನಿಯ ಮೂಲಕ
ಆಗುವದಿಲ್ಲ. ನಮ್ಮಮ್ಮ ಹಿಡಿದಿರುವ ಚಾಕು ಈರುಳ್ಳಿಯನ್ನು ಕತ್ತರಿಸಿತೋ ಅಥವಾ ಅವಳ ಬೆರಳನ್ನು
ಕತ್ತರಿಸಿತೋ ಅಂತ ಅವಳು ಹೇಳುವದಕ್ಕಿಂತ ಮೊದಲೇ ನಮಗೆ ಗೊತ್ತಾಗಿರುತ್ತದೆ. ಹೀಗಾಗಿ ನಮಗೆ
ಭಾಷೆಯ ಅಗತ್ಯವೇ ಬೀಳದು. ಹೀಗಿರುವಾಗ, ಇಲ್ಲಿಂದ ಹೊರಗೆ ಹೋದವರು ಅಲ್ಲಿನ ನಿಯಮಾವಳಿ ಬಗ್ಗೆ
ನಮಗ್ಯಾಕೆ ತಿಳಿಸುವದಿಲ್ಲ ಅಂತ ತಕರಾರು ಎತ್ತುತ್ತೀಯಲ್ಲ? ನಿನಗೆ ಗೊತ್ತಾ, ನೀನು ಇಲ್ಲಿಂದ
ಹೊರಬಿದ್ದ ಮೇಲೆ ನಿನಗೆ ಮಾತು ಬರುವವರೆಗೂ ಒಳಗಿರುವ ನನ್ನೊಂದಿಗೆ ಮಾತನಾಡಬಹುದು. ಆದರೆ ಯಾವಾಗ
ನೀನು ಹೊರಗಿನ ಭಾಷೆ ಮಾತನಾಡತೊಡಗುತ್ತೀಯೋ, ಈ ನಮ್ಮ ಒಳಗಿನ ಭಾಷೆ ನಿನಗೆ ಮರೆತು
ಹೋಗಿರುತ್ತದೆ. ಎಲ್ಲ ನಿಯಮಾವಳಿ ಗೊತ್ತಾದ ಬಳಿಕ ನೀನು ಮತ್ತೇ ಒಳಗೆ ಬರಲಾರೆ. ಒಳಗಿನವರೊಂದಿಗೆ
ಮಾತನಾಡಲಾರೆ..
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 01.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, July 18, 2018
ಕಲ್ಲಿನ ಖುಷಿಗೆಂದು ಹೂವ ಕೊಲ್ಲಬಹುದೇ?
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 18.07.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, July 4, 2018
ನಿಮ್ಮ ಹೆಸರಿಗೆ ಇಂಥದೊಂದು ಪತ್ರ ಬಂದಿತ್ತೇ?
ಯಾಕೋ
ನಿರಂಜನಮೂರ್ತಿಗಳು ಕೊಂಚ ಭಾವುಕರಾಗಿದ್ದರು. ದಶಕಗಳ ಕಾಲ ಕೆಲಸ ಮಾಡಿದ್ದ
ಆಫೀಸದು. ಸಣ್ಣ
ಊರಿನ ಸಣ್ಣ ಪೋಸ್ಟಾಫೀಸು. ಅಲ್ಲಿ ಪೋಸ್ಟ್ ಮಾಸ್ಟರೂ ಅವರೇ, ಪೋಸ್ಟ್ ಮ್ಯಾನೂ
ಅವರೇ,
ಜವಾನನೂ ಅವರೇ. ಹೀಗಾಗಿ ಊರಿನ ಜನರೇ ಅವರಿಗೊಂದು ಪುಟ್ಟ ಬೀಳ್ಕೊಡುಗೆ ಸಮಾರಂಭ
ಮಾಡಿದ್ದರು. ಅಲ್ಲಿದ್ದವರೆಲ್ಲ ಮೂರ್ತಿಗಳನ್ನು
ಸನ್ಮಾನಿಸಿ ಕೊಂಡಾಡಿದರು. ಯಾರೋ ಮೂರ್ತಿಗಳ
ಪ್ರಾಮಾಣಿಕತೆಯನ್ನು ಹೊಗಳಿದರು. ಇನ್ಯಾರೋ
ಅವರ ಸಹಾಯಗುಣವನ್ನು ವರ್ಣಿಸಿದರು. ಮತ್ಯಾರೋ
ಮೂರ್ತಿಗಳ
ಸಂತೈಸುವ ಪರಿಯನ್ನು ನೆನಪಿಸಿಕೊಳ್ಳುವಷ್ಟರಲ್ಲಿ ನಿರಂಜನಮೂರ್ತಿಗಳು ಕುಂತ
ಜಾಗದಿಂದ ಎದ್ದು
ನಿಂತರು. ಎದುರಿಗಿದ್ದ ಗುಂಪಿಗೆ ಕೈಜೋಡಿಸುತ್ತ ತಮ್ಮ ಎಂದಿನ ಶೈಲಿಯಲ್ಲಿ
"ನಾನು ಬರೇ ಪತ್ರ ಹಂಚುವವನು ಕಣ್ರಪ್ಪಾ, ನಾನೇ ಪತ್ರ ಅಲ್ಲ" ಅಂತ ಒಂದು ಸಾಲಿನ ಭಾಷಣ ಮುಗಿಸಿ ನಿವೃತ್ತರಾದರು.
ಗೊಂದಲ ಏನಿಲ್ಲ. ಅಲ್ಲಿದ್ದವರಿಗೆಲ್ಲ ನಿರಂಜನಮೂರ್ತಿಗಳ ಈ ಮಾತುಗಳು ಮಾಮೂಲಿಯಾಗಿ
ಹೋಗಿವೆ. ನಾನು ಬರೇ ಪತ್ರ ಹಂಚುವವನು, ನಾನೇ ಪತ್ರ ಅಲ್ಲ ಅಂತನ್ನುವ ಮಾತುಗಳನ್ನು
ಅವರೆಲ್ಲ ವರ್ಷಾನುಗಟ್ಟಲೇ ಕೇಳಿಸಿಕೊಳ್ಳುತ್ತ ಬಂದಿದ್ದಾರೆ. ಆದರೂ ಆ ಮಾತುಗಳ ಅರ್ಥ ಏನು
ಅಂತ ಯಾರಿಗೂ ಗೊತ್ತಾಗಿಲ್ಲ. ಹಾಗಂತ ಯಾರೂ ಮೂರ್ತಿಗಳಿಗೆ ಕೇಳಲೂ ಹೋಗಿಲ್ಲ. ಇಷ್ಟಕ್ಕೂ ಪತ್ರ
ಬಟವಾಡೆ ಮಾಡುವದಕ್ಕೆಂದು ತಮ್ಮ ಇಪ್ಪತ್ತನೇ ವಯಸ್ಸಿಗೆ ಸೈಕಲ್ ಸಮೇತ
ಬಂದ ನಿರಂಜನಮೂರ್ತಿಗಳು ಇದೇ ಊರಿನಲ್ಲೇ ತಮ್ಮ ಇಡೀ
ಬದುಕನ್ನು ಸವೆಸಿಬಿಟ್ಟಿದ್ದಾರೆ. ಹೆಂಡರಿಲ್ಲ, ಮಕ್ಕಳಿಲ್ಲ. ಹಾಗಾಗಿ ವರ್ಷಕ್ಕೊಮ್ಮೆ
ಜಾತ್ರೆ, ಪ್ರವಾಸ ಅಂತೆಲ್ಲ ಎಲ್ಲಿಗೂ ಹೋಗಲಿಲ್ಲ. ಹೀಗಾಗಿ ಊರಿನ ಯಾವ ಮನೆಯಲ್ಲಿ ಎಷ್ಟು
ಜನರಿದ್ದಾರೆ, ಅವರಲ್ಲಿ ಯಾರ್ಯಾರು ಏನೇನು ಕೆಲಸ ಮಾಡಿಕೊಂಡಿದ್ದಾರೆ ಎಂಬುದೆಲ್ಲ
ಮೂರ್ತಿಗಳಿಗೆ ಅಂಗೈ ಗೆರೆಯಷ್ಟೇ ಸ್ಪಷ್ಟ. ಒಟ್ಟಿನಲ್ಲಿ ಊರೊಳಗೆ ಯಾರೇ
ಕಷ್ಟಕ್ಕೆ ಸಿಲುಕಿಕೊಂಡರೂ ಮೂರ್ತಿಗಳ ಸಂತೈಸುವಿಕೆ ಮತ್ತು ಅವರ ಸಹಾಯಹಸ್ತ ಬೇಕೇಬೇಕು
ಎಂಬಂತಾಗಿದೆ. ಹಾಗೆ ಋಣಕ್ಕೆ ಬಿದ್ದವರೆಲ್ಲ ಮೂರ್ತಿಗಳನ್ನು ದೇವಸಮಾನರಾಗಿ ಕಾಣುವಾಗಲೆಲ್ಲ ನಿರಂಜನಮೂರ್ತಿಗಳು
ಯಥಾಪ್ರಕಾರ ಕೈಯೆತ್ತಿಬಿಡುತ್ತಾರೆ: 'ನಾನು ಬರೇ ಪತ್ರ ಹಂಚುವವನು ಕಣಯ್ಯಾ, ನಾನೇ
ಪತ್ರ ಅಲ್ಲ!'
*
ಮನೆಯಲ್ಲಿದ್ದ ಒಂದೇ ಒಂದು ಕಿಟಕಿಯಲ್ಲಿ ಇಣುಕುತ್ತ ನಿರಂಜನಮೂರ್ತಿಗಳು ಹೊರಗಿನ
ದೃಶ್ಯಗಳನ್ನು ವಿವರಿಸುತ್ತಿದ್ದರು. ಇದ್ದೊಂದು ಮಂಚದಲ್ಲಿ ಮಲಗಿದ್ದ ಹುಡುಗ ಮೂರ್ತಿಗಳ
ಮಾತುಗಳನ್ನು ಕೇಳುತ್ತಿದ್ದ. ಮಧ್ಯೆ ಮಧ್ಯೆ ಮಾತುಗಳು ಕೇಳಿಸುತ್ತಿಲ್ಲವೆಂದೂ ಸನ್ನೆ
ಮಾಡುತ್ತಿದ್ದ. ಆಗೆಲ್ಲ ಮೂರ್ತಿಗಳು ಹುಡುಗನ ಕಿವಿ ಬಳಿ ಬಂದು ಮತ್ತೊಮ್ಮೆ ಕಿಟಕಿಯ ದೃಶ್ಯಗಳನ್ನು
ವಿವರಿಸುತ್ತಿದ್ದರು. ಈತ ಮಂದಸ್ಮಿತನಾಗುತ್ತಿದ್ದ.
ಯಾವ ಹುಡುಗನೋ ಎಲ್ಲಿಂದ ಬಂದನೋ ಎಲ್ಲಿಗೆ ಹೊರಟಿದ್ದನೋ ಒಂದೂ ಗೊತ್ತಿಲ್ಲ. ಮೂರ್ತಿಗಳು
ನಿವೃತ್ತರಾಗಿ ಎರಡು ದಿನ
ಕಳೆದಿದ್ದವಷ್ಟೇ. ಊರಿನವನ್ಯಾರೋ ರಾತ್ರಿ ಹೊತ್ತು ಬಂದು ಸುದ್ದಿ ತಲುಪಿಸಿದ್ದರು.
ಊರಾಚೆಯಿದ್ದ ಹೆದ್ದಾರಿಯಲ್ಲಿ ಈ ಹುಡುಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಪ್ರಜ್ಞೆಯಿರಲಿಲ್ಲ.
ನಾಲ್ಕನೇ ದಿನ ಆಸ್ಪತ್ರೆಯಲ್ಲಿ ಎಚ್ಚರವಾಗಿದ್ದ. ಈ ಪರಿಸ್ಥಿತಿಯಲ್ಲಿ ನಡೆದಾಡುವದು
ಹಾಗಿರಲಿ, ಈತನ ನಾಲಿಗೆ ಮತ್ತು ಕಿವಿ ಕೆಲಸ ಮಾಡಿದರೂ ಸಾಕು ಅಂತ ಡಾಕ್ಟರು ಕೈ ಚೆಲ್ಲಿದ್ದರು. ಈ
ಹುಡುಗ ನಿರಂಜನಮೂರ್ತಿಗಳ ಮನೆ ಸೇರಿಕೊಂಡಿದ್ದು ಹಾಗೆ. ಮೊದಮೊದಲಿಗೆ ಮಗ್ಗುಲು ಹೊರಳಿಸಲಾಗದೇ
ಬಿದ್ದಲ್ಲೇ ಬಿದ್ದುಕೊಂಡು ಶೂನ್ಯನೋಟ ಬೀರುತ್ತಿದ್ದ. ಈಗೀಗ ಅಸ್ಪಷ್ಟವಾಗಿ ತೊದಲತೊಡಗಿದ್ದ.
ಸಣ್ಣಗೇ ಕಿವಿ ಕೇಳಿಸತೊಡಗಿತ್ತು. ಮನರಂಜನೆಗೆಂದು ಮೂರ್ತಿಗಳು ಆಗೀಗ ಕಿಟಕಿಯಿಂದ
ಹೊರಜಗತ್ತಿನಲ್ಲಿ ನಡೆಯುತ್ತಿದ್ದ ಕ್ರಿಯೆಗಳನ್ನು ವಿವರಿಸುತ್ತಿದ್ದರು. ಈ ವಿವರಣೆಗಳಲ್ಲಿ
ಯಾವುದ್ಯಾವುದೋ ಗಂಡಹೆಂಡಿರ ಜಗಳಗಳಿರುತ್ತಿದ್ದವು. ರಸ್ತೆ
ತುದಿಯಲ್ಲಿನ ಪಾರ್ಕಿನಲ್ಲಿ ಪಲ್ಲವಿಸುತ್ತಿದ್ದ ಪ್ರೇಮಸಲ್ಲಾಪಗಳಿರುತ್ತಿದ್ದವು.
ಬಲಗಡೆ ದೇವಸ್ಥಾನದಲ್ಲಿನ ಭಜನೆಯಿರುತ್ತಿತ್ತು. ಎಡಗಡೆಯಲ್ಲಿದ್ದ ಅರಳಿಕಟ್ಟೆಯ ಇಸ್ಪೀಟು ಆಟದ
ಹೊಡೆದಾಟಗಳೂ ಇದ್ದವು.
ಹುಡುಗ ಎಲ್ಲವನ್ನೂ ಗ್ರಹಿಸುತ್ತಿದ್ದ. ಮೂರ್ತಿಗಳ ಮೂಲಕ ಹೊರಜಗತ್ತನ್ನು ನೋಡುತ್ತಿದ್ದ.
ಹೀಗಿರುವಾಗ, ಒಮ್ಮೆ ವೀಕ್ಷಕವಿವರಣೆ ಎಂದಿಗಿಂತಲೂ ರಸವತ್ತಾಗಿತ್ತು. ಮೂರ್ತಿಗಳ ಮನೆಯ ಮುಂದೆ
ಒಂದು ಖಾಲಿ ಬಯಲಿತ್ತು. ಸರ್ಕಾರದ ಕೃಪಾಕಟಾಕ್ಷದಿಂದಾಗಿ ಈ ಸಣ್ಣ ಊರಿಗೂ ಒಂದಿಷ್ಟು ಅನುದಾನ
ಬಂತು. ಹೀಗಾಗಿ ಸದರಿ ಬಯಲಿನಲ್ಲಿ ಊರಿನವರ ಅನುಕೂಲಕ್ಕಾಗಿ ಬಾವಿಯೊಂದನ್ನು ಕಟ್ಟುವದಕ್ಕಾಗಿ
ನೆಲ ಅಗೆಯತೊಡಗಿದರು. ಸತತವಾಗಿ ಎರಡು ತಿಂಗಳು ಅಗೆದ ನಂತರ ಹತ್ತಡಿ ವ್ಯಾಸದ ತೆರೆದ ಬಾವಿ
ಸಿದ್ಧವಾಗಿತ್ತು. ಆದರೆ ಐವತ್ತಡಿ ಆಳಕ್ಕೆ ಅಗೆದಿದ್ದರೂ ನೀರು ಬಂದಿರಲಿಲ್ಲ.
ಇನ್ನೊಂದಿಷ್ಟು ಅಗೆಯಬೇಕೆನ್ನುವಷ್ಟರಲ್ಲೇ ಅನುದಾನವೆಲ್ಲ ಮುಗಿದುಹೋಗಿ ಈ ಬಾವಿ ನೀರಿಲ್ಲದೇ
ಪಾಳುಬಾವಿಯಾಗಿ
ಪರಿವರ್ತನೆಗೊಂಡಿತ್ತು. ಇಂತಿಪ್ಪ ಪರಿಸ್ಥಿತಿಯಲ್ಲಿ ಊರಿಗೆ
ಹೊಸದಾಗಿ ಬಂದಿದ್ದ ಯಾರೋ ಒಬ್ಬ ಆಸಾಮಿ ರಾತ್ರಿಹೊತ್ತು ತೆರೆದಬಾವಿ ಕಾಣಿಸದೇ
ಬಿದ್ದುಬಿಟ್ಟಿದ್ದ!
ಮೂರ್ತಿಗಳ ವೀಕ್ಷಕವಿವರಣೆ ಸಾಗುತ್ತಿತ್ತು. ರಾತ್ರಿ ಬಾವಿಯ ಸುತ್ತಲೂ ಜನ
ನೆರೆದಿದ್ದರು. ಹಗ್ಗ ಎಸೆಯಲು ಹೋದವರಿಗೆ ಬಾವಿಯ ಒಳಗಿದ್ದವನು
ಕಾಣಿಸುತ್ತಿರಲಿಲ್ಲ. ಒಳಗಿದ್ದವನಿಗೆ ಹೊರಗಿದ್ದವರ ಚಟುವಟಿಕೆ ಅಸ್ಪಷ್ಟವಾಗಿ ಕಾಣಿಸುತ್ತಿತ್ತಷ್ಟೇ. ಸುತ್ತಲಿದ್ದವರು
ಪೇಚಾಡತೊಡಗಿದ್ದರು. ಕೆಲವರು ಒಳಗಿದ್ದವನಿಗೆ ಧೈರ್ಯ ತುಂಬುತ್ತಿದ್ದರು. ಬಿದ್ದ ವ್ಯಕ್ತಿ ಹತ್ತಡಿ
ಏರುತ್ತಿದ್ದ. ಕಾಲುಜಾರಿ ಮತ್ತೇ ತಳ ಕಾಣುತ್ತಿದ್ದ. ಒಮ್ಮೆಯಂತೂ ಅರ್ಧಕ್ಕಿಂತಲೂ ದೂರ
ಕ್ರಮಿಸಿ ಮತ್ತೇ ತಳ ಸೇರಿದ. ಸಮಯ ಜಾರುತ್ತಿದ್ದಂತೆ ಇದ್ದಕ್ಕಿದ್ದಂತೆ ಜನರಿಗೇನಾಯಿತೋ
ಏನೋ, ಬೆಳಗಾಗುವದರೊಳಗೆ ಈ ಆಸಾಮಿ ಒಂದೋ ಕೈಕಾಲು ಮುರಿದುಕೊಂಡಿರುತ್ತಾನೆಂದೂ
ಅಥವಾ ಸತ್ತೇ ಹೋಗಿರುತ್ತಾನೆಂದೂ ಮಾತನಾಡತೊಡಗಿದರು. ಇನ್ನು ಕೆಲವರಂತೂ ಕೈಸನ್ನೆ ಮಾಡುತ್ತ
ಬೆಳಕು ಹರಿಯುವವರೆಗೂ ಅಲ್ಲೇ ತೆಪ್ಪಗಿರುವಂತೆಯೂ ಕೂಗತೊಡಗತೊಡಗಿದರು. ಗುಂಪಿಗೆ ಗುಂಪೇ ಆತನ ಕತೆ
ಮುಗಿಸಲು ಸಿದ್ಧವಾದಂತಿತ್ತು. ಆದರೆ ಒಳಗಿದ್ದ ಮೊಂಡು ಆಸಾಮಿ ಮಧ್ಯರಾತ್ರಿಯ ವೇಳೆಗೆ ಅದು ಹೇಗೋ ಮೇಲೆ ಹತ್ತಿಕೊಂಡು
ಬಂದುಬಿಟ್ಟಿದ್ದ. ಹೋ.. ಎಂದು ಅರಚಿದ ಜನ ಆತನನ್ನು ಅಭಿನಂದಿಸತೊಡಗಿದ್ದರು. ಆದರೆ ಈ ಆಸಾಮಿ
ಮಾತ್ರ ತಾನು ಕಿವುಡನೆಂದೂ, ಬಾವಿಗೆ ಬಿದ್ದ ತನ್ನಂಥ ಅಬ್ಬೇಪಾರಿಯನ್ನು ಹುರಿದುಂಬಿಸಿದ ಈ
ಊರಿನವರಿಗೆ ನನ್ನ ನಮಸ್ಕಾರಗಳು ಅಂತ ತಣ್ಣಗೇ ಕೈಜೋಡಿಸಿ
ನಡೆದುಬಿಟ್ಟನೆಂದೂ ಮೂರ್ತಿಗಳು ನಗಾಡಿಕೊಂಡು ವಿವರಣೆ ನೀಡುತ್ತಿದ್ದರು.
*
ಇದೆಲ್ಲ ಆಗಿ ಮೂವತ್ತು ವರ್ಷಗಳೇ ಆಗಿವೆ. ನಿರಂಜನಮೂರ್ತಿಗಳ ಮನೆಯಲ್ಲಿ ಅಖಂಡ
ಎಂಟು ತಿಂಗಳು ಮಲಗಿದ್ದ ಆ ಹುಡುಗ ಇವತ್ತು ಮಲ್ಟಿನ್ಯಾಷನಲ್ ಕಂಪೆನಿಯೊಂದರ ವೈಸ್ ಪ್ರೆಸಿಡೆಂಟ್.
ಇದ್ದಕ್ಕಿದ್ದಂತೆ ತನಗೆ ಬಯಾಗ್ರಫಿ ಬರೆಯುವ ತೆವಲು ಯಾಕೆ ಬಂತು ಅಂತ ಯೋಚಿಸುತ್ತ ಡೈರಿಯಲ್ಲಿ
ತನ್ನಷ್ಟಕ್ಕೆ ತಾನೇ ಬರೆದುಕೊಳ್ಳುತ್ತಿದ್ದಾನೆ:
"ಬಹುಶಃ
ಈ ನನ್ನ ಕತೆ ಈ ಪುಟಕ್ಕೇ ಕೊನೆಯಾಗಬಹುದು. ಆವತ್ತು ನಿರಂಜನಮೂರ್ತಿಗಳ ಮನೆಯಲ್ಲಿ ಹಾಗೆ ಮಂಚದ
ಮೇಲೆ ಮಲಗಿದ್ದಾಗ ಒಂದು ಬೆಳಗಿನ ಜಾವ ನನಗೆ ಅತ್ಯಂತ ಖುಷಿಯಾಗಿತ್ತು. ಯಾಕೆಂದರೆ
ನನಗರಿವಿಲ್ಲದಂತೆ ನಾನು ಎದ್ದು ನಡೆಯಬಲ್ಲವನಾಗಿದ್ದೆ. ಅಲ್ಲಿದ್ದ ಕಿಟಕಿಯಾಚೆ ಹಕ್ಕಿಗಳ
ಕೂಗು ಕೇಳಿಸತೊಡಗಿತ್ತು. ಮೂರ್ತಿಗಳು ಪಕ್ಕದಲ್ಲೇ ಮಲಗಿದ್ದರು. ಇಷ್ಟು ದಿನ ಜೀವಜಗತ್ತಿನ ಎಲ್ಲ ನಡೆಗಳನ್ನು
ಚಿತ್ರಿಸಿಕೊಟ್ಟ ಕಿಟಕಿಯದು. ನಿಧಾನಕ್ಕೆ ಕಿಟಕಿಯತ್ತ ಹೋದೆ. ಆದರೆ ಅಲ್ಲೇನಿತ್ತು? ಬರೀ
ಒಂದು ಗೋಡೆ. ಯಾವುದೋ ಗೋದಾಮಿನ ಗೋಡೆ! ಹಾಗಾದರೆ ಇಷ್ಟು ದಿನ ಮೂರ್ತಿಗಳು ವಿವರಿಸುತ್ತಿದ್ದ
ರಸ್ತೆಗಳು, ಅರಳಿಕಟ್ಟೆ, ಪಾರ್ಕು, ದೇವಸ್ಥಾನ, ತೆರೆದಬಾವಿ ಎಲ್ಲಿ ಹೋದವು? ನಿರಂಜನಮೂರ್ತಿಗಳು
ನನಗೆಂದೇ ಒಂದು ಲೋಕ ಸೃಷ್ಟಿಸಿದರೇ? ಎಂಥ ವಿಚಿತ್ರ ನೋಡಿ: ಇವತ್ತೇನೋ ಈ
ಜಗತ್ತು ನನ್ನನ್ನು ಸಕ್ಸೆಸ್ ಫುಲ್ ಮನುಷ್ಯ ಅಂತ ಗುರುತಿಸುತ್ತದೆ. ಆದರೆ ಈ
ಜಗತ್ತಿಗೆ ಸಕ್ಸೆಸ್ ಫುಲ್ ಅಂತನಿಸಿಕೊಳ್ಳುವ ಜನರಿಗಿಂತ ಹೆಚ್ಚಾಗಿ ಗಾರುಡಿಗರ ಅವಶ್ಯಕತೆಯಿದೆ. ಶಮನಕಾರರ,
ಜಾದೂಗಾರರ ಅವಶ್ಯಕತೆಯಿದೆ. ಮುಖ್ಯವಾಗಿ, ಈ ಜಗತ್ತನ್ನು ಸುಂದರವಾಗಿ
ಕಟ್ಟಿಕೊಡಬಲ್ಲ ಕತೆಗಾರರ ಅವಶ್ಯಕತೆಯಿದೆ.
ಸುಳ್ಳಲ್ಲ, ನಿರಂಜನಮೂರ್ತಿಗಳಿಗೆ ನಿಜಕ್ಕೂ ಮರುಳತನವಿತ್ತು. ಊರಿನ ಜನ ಅವರನ್ನು
ಹೊಗಳಿದಾಗಲೆಲ್ಲ, 'ನಾನು ಬರೇ ಪತ್ರ ಹಂಚುವವನು, ನಾನೇ ಪತ್ರವಲ್ಲ' ಅಂತೆಲ್ಲ ವಿಚಿತ್ರವಾಗಿ
ಮಾತನಾಡುತ್ತಿದ್ದರು. ಜನರಿಗೆ ತಲುಪಿಸುತ್ತಿದ್ದ ಪತ್ರಗಳಲ್ಲಿನ ಖುಷಿಯ ಸಂಗತಿಗಳನ್ನು
ಅಸಲಿಗೆ ತಾನು ಸೃಷ್ಟಿಸಿದ್ದಲ್ಲ, ಅದನ್ನು ಇನ್ಯಾರೋ ಬರೆದಿದ್ದು, ತಾನು ಬರೇ ವಾಹಕನೇ
ಹೊರತು ತಾನೇ ಪತ್ರದೊಳಗಿನ ಖುಷಿಯ
ಸಂಗತಿಯಲ್ಲ ಅಂತನ್ನುವ ಮರುಳತನ ಅವರಲ್ಲಿತ್ತು. ಇದೆಲ್ಲ ಇವತ್ತು ನನಗೆ
ಗೊತ್ತಾಗುತ್ತಿದೆ. ಆ ಮರುಳತನವೇ ಅವರನ್ನು ಕತೆಗಾರರನ್ನಾಗಿಸಿದ್ದು. ಹಾಗೆ
ಪ್ರತಿದಿನ ಕಿಟಕಿ ನೋಡುತ್ತ ನನಗೆ ಕತೆ ಕಟ್ಟಿಕೊಟ್ಟ ನಿರಂಜನಮೂರ್ತಿಗಳು ಬರೇ ಪತ್ರ
ಬಟವಾಡೆ ಮಾಡುವ ಪೋಸ್ಟ್ ಮ್ಯಾನ್ ಆಗಿರಲಿಲ್ಲ. ಈ ಲೋಕ ನನ್ನಂಥವರಿಗೆಂದು ಬರೆದು ಕಳಿಸಿದ ಸುಂದರ ಸಂದೇಶವಿದ್ದಂಥ ಒಂದು ಪತ್ರವೇ ಆಗಿದ್ದರು.."
ಬಟವಾಡೆ ಮಾಡುವ ಪೋಸ್ಟ್ ಮ್ಯಾನ್ ಆಗಿರಲಿಲ್ಲ. ಈ ಲೋಕ ನನ್ನಂಥವರಿಗೆಂದು ಬರೆದು ಕಳಿಸಿದ ಸುಂದರ ಸಂದೇಶವಿದ್ದಂಥ ಒಂದು ಪತ್ರವೇ ಆಗಿದ್ದರು.."
![]() |
ತಾಂತ್ರಿಕ ಕಾರಣಗಳಿಂದಾಗಿ ಇ-ಪೇಪರ್ ಲಿಂಕ್ ಕೊಡಲಾಗುತ್ತಿಲ್ಲ, ಮೊಬೈಲ್ ಲಿಂಕ್ ಇಲ್ಲಿದೆ. (ವಿಜಯಕರ್ನಾಟಕದಲ್ಲಿ 04.07.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Wednesday, June 20, 2018
ಕವಿತಾಲೋಕದಲ್ಲಿ ಬದಲಾಗುವ ರೂಪ, ಬದಲಾಗದ ರೂಹು!
ಖರೀದಿಗೆಂದು ಬಂದಿರುವ ಗ್ರಾಹಕನಿಗೆ
ಮೂರು ಕಾಲಿನ ನಾಯಿಯೊಂದು
ಎಂದಿನ ಕಸರತ್ತು ತೋರಿಸಲು
ಎದ್ದು ನಿಲ್ಲುತ್ತಲಿದೆ..
ಕವಿತೆಯ ಮುಂದೆ ಹಾಗೆ ಎರಡು ಟಿಕ್ಕಿಗಳನ್ನು ಇಡುತ್ತ ಭಟ್ಟರು ಕವಿತೆ ನಿಲ್ಲಿಸಿದರು. ಎದುರಿಗೆ ಕುಳಿತಿದ್ದ ತ್ರಿಪಾಠಿಯನ್ನು ನೋಡಿ ಮುಗುಳ್ನಕ್ಕರು. ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಎರಡು ದಶಕಗಳೇ ಕಳೆದಿವೆ. ಆದರೂ ಭಟ್ಟರ ಉತ್ಸಾಹಕ್ಕೆ ಭಂಗ ಬಂದಂತಿಲ್ಲ. ವರ್ಷಕ್ಕೊಂದು ಫಾರಿನ್ ಟ್ರಿಪ್ ಹೊಡೆಯುತ್ತಾರೆ. ತಿಂಗಳಿಗೆರಡು ಅಂತ ಅವರಿವರ ಪುಸ್ತಕ ಬಿಡುಗಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಳೆಯರೊಂದಿಗೆ ಎಳೆಯರಾಗಿಯೂ ವೃದ್ಧರೊಂದಿಗೆ ವೃದ್ಧರಾಗಿಯೂ ಗುರುತಿಸಿಕೊಳ್ಳುವ ಮಲ್ಹಾರಭಟ್ಟರ ಈ ಕಲೆಯನ್ನು ಬದುಕುವ ಕಲೆ ಅಂತ ಅವರನ್ನು ಮೆಚ್ಚುವವರು ಬಣ್ಣಿಸುತ್ತಾರೆ. ಅವರಿಗಾಗದವರು ಮಾತ್ರ ಒಂಚೂರೂ ಗಾಂಭೀರ್ಯವಿಲ್ಲ ಅಂತ ಭಟ್ಟರನ್ನು ಮನಸೋ ಇಚ್ಛೆಯಿಂದ ಬೈದಾಡಿಕೊಳ್ಳುತ್ತಾರೆ.
ನಾರಾಯಣ ತ್ರಿಪಾಠಿ. ಬಯೋಕೆಮಿಸ್ಟ್ ಹುಡುಗ. ವಯೋಸಹಜ ರೆಬೆಲ್ ಮನಸ್ಸು. ಅಂಥ ತ್ರಿಪಾಠಿಗೂ ಭಟ್ಟರಿಗೂ ಸಂಪರ್ಕ ಕುದುರಿಸಿದ್ದು ಯಕಶ್ಚಿತ್ ಕವಿತೆ. ಯಾರದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಡ್ಡೆ ಹುಡುಗರ ಗುಂಪಿನಲ್ಲಿದ್ದ ಭಟ್ಟರ ಮಾತುಗಳನ್ನು ಗಮನಿಸಿ ಅವರ ಸಂಪರ್ಕಕ್ಕೆ ಬಂದಿದ್ದ. ಯಾವುದೋ ಕವಿಯತ್ರಿಯ ಸೌಂದರ್ಯದ ಬಗ್ಗೆ ಗುಂಪಿನಲ್ಲಿದ್ದ ಯುವಕವಿಯೊಬ್ಬ ಸಾಂಗೋಪಾಂಗವಾಗಿ ವರ್ಣಿಸುತ್ತಿದ್ದಾಗ ಭಟ್ಟರು ಎಲ್ಲೋ ನಿಂತಿದ್ದ ಸದರಿ ಕವಿಯತ್ರಿಯನ್ನು ಅಚಾನಕ್ಕಾಗಿ ಕೂಗಿ ಗುಂಪಿಗೆ ಕರೆಸಿಕೊಂಡು 'ಈಗ ಬೇಕಾದರೆ ಹೊಗಳಯ್ಯ, ಚೆಲುವೆಯೂ ಕೊಂಚ ಖುಷಿಪಡಲಿ!' ಅಂತ ಬಾಂಬ್ ಹಾಕಿದ್ದರು. ಹಾಗೆ ಛೇಡಿಸುತ್ತಲೇ ಇಡೀ ಗುಂಪಿಗೆ ನೇರವಂತಿಕೆಯನ್ನೂ ನಮ್ರನಿವೇದನೆಯನ್ನೂ ಏಕಕಾಲಕ್ಕೆ ಕಲಿಸಿದ್ದರು.
ಫಿದಾ ಆಗಿಬಿಟ್ಟಿದ್ದ ತ್ರಿಪಾಠಿ. ಭಟ್ಟರನ್ನು ಭೇಟಿಯಾಗುವ ಯಾವ ಸಂದರ್ಭಗಳನ್ನೂ ತಪ್ಪಿಸಿಕೊಳ್ಳಲಾಗದಷ್ಟು ಅವರನ್ನು ಹಚ್ಚಿಕೊಂಡಿದ್ದ. ಹಾಗೆ ಸುಮಾರು ಭೇಟಿಗಳ ನಂತರ ಇವತ್ತು ಸೀದಾ ಭಟ್ಟರ ಮನೆಗೇ ಬಂದಿದ್ದ. ಕವಿತೆಯನ್ನು ಯಾವಾಗ ನಿಲ್ಲಿಸಬೇಕು? ಕವಿತೆ ಹೇಗೆ ನಿಂತರೆ ಚೆಂದ? ಇವೇ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಬಂದಿದ್ದ. ತ್ರಿಪಾಠಿಯನ್ನು ಹಾಗೆ ಎದುರಿಗೆ ಕೂರಿಸಿಕೊಂಡ ಮಲ್ಹಾರಭಟ್ಟರು ಚಿಕ್ಕದೊಂದು ಹಾಯ್ಕು ಬರೆಯುತ್ತ ಬರೆಯುತ್ತ ಏಕಾಏಕಿ ನಿಲ್ಲಿಸಿದವರೇ ಎರಡು ಟಿಕ್ಕಿ ಇಟ್ಟು ಮುಗುಳ್ನಕ್ಕಿದ್ದರು.
"ನೋಡಯ್ಯ, ಕವಿತೆ ಯಾವಾಗಲೂ ನ್ಯಾಷನಲ್ ಹೈವೇ ಥರ. ಅಲ್ಲಿ ದಾರಿ ತೋರಲೆಂದು ಸೂಚನಾ ಫಲಕಗಳೂ ಇರಬೇಕು. ಪಯಣದ ಗುರಿ ಇನ್ನೂ ಎಷ್ಟು ದೂರವಿದೆ ಅಂತ ತೋರಿಸಬಲ್ಲ ಮೈಲುಗಲ್ಲುಗಳೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಿನ್ನ ಗಾಡಿಯಲ್ಲಿ ಇನ್ನೂ ಪೆಟ್ರೋಲಿದ್ದರೂ 'ಪಯಣ ಇಲ್ಲಿಗೇ ಮುಗಿಯಿತು' ಅಂತ ನಿನ್ನ ಕವಿತೆಯೇ ನಿನಗೆ ನಿರ್ಬಂಧ ಹೇರಿಬಿಡಬೇಕು. ಆದರೆ ಈ ಕಲೆಯೇ ಅಪಾಯದ್ದು. ಸೂಕ್ಷ್ಮದ್ದು. ಈ ನಿರ್ಬಂಧ ಅವಧಿಗೂ ಮುನ್ನವೇ ಬರಕೂಡದು. ಯಾಕೆಂದರೆ ಒಮ್ಮೊಮ್ಮೆ ಹೀಗೂ ಆಗುತ್ತಿರುತ್ತದೆ: ನಿನ್ನ ಗಾಡಿ ಹೈವೇನಲ್ಲಿ ಹೋಗುತ್ತಿರುವಾಗಲೇ ದಾರಿ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಯಾವುದೋ ಕಾಡಿನಲ್ಲಿ ಕಾಲುಜಾರುವ ಅಪಾಯವಿರುತ್ತದೆ. ಹಾಗೆ ಜಾರುತ್ತಜಾರುತ್ತ ಕೈಗೆ ಸಿಕ್ಕ ಮುಳ್ಳುಕಂಟಿಯನ್ನು ಆಸರೆಯಾಗಿ ಹಿಡಿಯುವಾಗಲೇ ಧುತ್ತೆಂದು ಜಲಪಾತ ಎದುರಾಗಿರುತ್ತದೆ. ಅದೃಷ್ಟವಿದ್ದರೆ ಯಾರೂ ಮುಟ್ಟದ ಬಂಡೆಗಲ್ಲನ್ನು ನೀನು ನೋಡಿರುತ್ತೀಯ. ಅದೃಷ್ಟ ಇನ್ನೂ ಜಾಸ್ತಿಯಿದ್ದಲ್ಲಿ ಬಂಡೆಯ ಮೇಲೆ ಚದುರಿರುವ ಚದುರೆಯ ವಸ್ತ್ರಗಳನ್ನೂ ನೋಡಿರುತ್ತೀಯ!"
ಭಟ್ಟರು ನಗುತ್ತಲೇ ಇದ್ದರು. ತ್ರಿಪಾಠಿ ಹೈರಾಣಾದಂತಿದ್ದ. ಕವಿತೆಯಿಂದ ಶುರುವಾದ ಮಾತುಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ಭಟ್ಟರು ಇರಾನಿ ಕವಿ ಅಬ್ಬಾಸ್ ಕಿರೊಸ್ತಾಮಿಯನ್ನು ಎಳೆದುತಂದರು. ಆತನ ಪುಟ್ಟ ಕವಿತೆಯಲ್ಲಿ ಎಲೆಯೊಂದು ಮರದಿಂದ ಕಳಚಿಕೊಂಡು ನೆಲದ ಮೇಲಿದ್ದ ತನ್ನದೇ ನೆರಳಿನ ಮೇಲೆ ಸ್ಥಾಪಿತವಾಗುವದನ್ನು ಚಿತ್ರಿಸಿದರು. ಜೀವಂತವಿರುವ ಯಾವ ಎಲೆಯೂ ಹೀಗೆ ನೆಲದ ಮೇಲಿನ ತನ್ನದೇ ನೆರಳನ್ನು ಅಪ್ಪಿಕೊಳ್ಳುವ ಧೈರ್ಯ ತೋರುವದಿಲ್ಲ. ದೇಹ ಯಾವಾಗ ತನ್ನ ಆತ್ಮದೊಂದಿಗೆ ನಿಜದ ರೀತಿಯಲ್ಲಿ ಒಂದಾಗುತ್ತದೆಯೋ ಅದೇ ಮೋಕ್ಷದ ಸಮಯ ಅಂತೆಲ್ಲ ಕಿರೊಸ್ತಾಮಿಯನ್ನು ವಿವರಿಸಿದರು. ತ್ರಿಪಾಠಿಗೆ ಎಲ್ಲ ಅಯೋಮಯ. ಭಟ್ಟರು ಕವಿತಾ ಜಗತ್ತಿನ ಹೊಸ ಲೆಕ್ಕಾಚಾರ ಬಿಡಿಸತೊಡಗಿದ್ದರು. ಈ ಜಗತ್ತಿನ ಲೆಕ್ಕಾಚಾರ ಎಷ್ಟು ಕರಾರುವಾಕ್ಕಾಗಿದೆ ಅಂದರೆ ಇಲ್ಲಿ ಪ್ರತಿದಿನ ಯಾರೋ ಅದೆಲ್ಲವನ್ನೂ ಟ್ಯಾಲಿ ಮಾಡುತ್ತಲೇ ಇರುತ್ತಾರೆಂದೂ, ಹೀಗಾಗಿ ಯಾವುದೂ ಈ ಜಗತ್ತಿನ ಪೊರೆಯಿಂದ ಹೊರಹೋಗಲು ಸಾಧ್ಯವಿಲ್ಲವೆಂದೂ, ಹೆಚ್ಚೆಂದರೆ ಇವತ್ತಿನ ಮನುಷ್ಯ ಸತ್ತ ಮೇಲೆ ನಾಳೆ ಹುಣಸೇಮರವೋ ಅಥವಾ ಗೌಳಿಗನ ಎಮ್ಮೆಯೋ ಆಗಿ, ಆ ಮೂಲಕ ಕೇವಲ ರೂಪ ಮಾತ್ರ ಬದಲಾಗಿ ರೂಹು ಬದಲಾಗದೇ ಅಲ್ಲಲ್ಲೇ ಸ್ಥಾನಪಲ್ಲಟವಾಗಿ..
ಯಾಕೋ ಭಟ್ಟರು ಭಯಾನಕವಾಗಿ ಕೆಮ್ಮತೊಡಗಿದರು. ಗಾಬರಿಗೊಂಡ ತ್ರಿಪಾಠಿ ಭಟ್ಟರ ಕೈಹಿಡಿದು ನೀರು ಕುಡಿಸಿ ಮನೆ ಸೇರಿಕೊಂಡಿದ್ದ. ಆವತ್ತಿಡೀ ರಾತ್ರಿ ಭಟ್ಟರ ಕವಿತಾಶಕ್ತಿಯ ಬಗ್ಗೆ ಗೌರವಭಾವ ಮೂಡಿಸಿಕೊಂಡ. ಹಾಗೆಯೇ ಅವರ ವೈಜ್ಞಾನಿಕ ಅರಿವಿನ ಬಗ್ಗೆ ಕರುಣೆಯನ್ನೂ! ಸ್ವತಃ ಬಯೋಕೆಮಿಸ್ಟ್ ಆಗಿದ್ದ ನಾರಾಯಣ ತ್ರಿಪಾಠಿಗೆ ಮನುಷ್ಯರೂ ಸೇರಿದಂತೆ ಕ್ರಿಮಿಕೀಟಗಳಲ್ಲಿನ ಜೀವತಂತುಗಳ ಬಗ್ಗೆ ಸಾಕಷ್ಟು ಅರಿವಿದ್ದೇ ಇದೆ. ಮರ ಹೇಗೆ ಹುಟ್ಟುತ್ತದೆ, ಮನುಷ್ಯ ಯಾವಾಗ ಸಾಯುತ್ತಾನೆ ಅಂತನ್ನುವ ಜೈವಿಕ ವಿಜ್ಞಾನದ ಬಗ್ಗೆ ತನಗಿರುವ ಅಥೆಂಟಿಸಿಟಿ ಭಟ್ಟರಿಗಿಲ್ಲ. ಆದರೆ ಹಿರಿಯ ಜೀವಕ್ಕೆ ಹೇಗೆ ತಿಳಿಹೇಳುವದು? ಬಹುಶಃ ಭಟ್ಟರಿಗೆ ವಯಸ್ಸು ಹಾಗೆಲ್ಲ ಯೋಚಿಸಲು ಪ್ರೇರೇಪಿಸುತ್ತದಾ? ತಲೆ ಕೊಡವಿದ ತ್ರಿಪಾಠಿ ಗ್ಲಾಸಿಗೆ ಬೀಯರ್ ಸುರುವಿ ಟೀವಿ ಹಚ್ಚಿ ಕುಳಿತ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿದ್ದ ಡಾಕ್ಯೂಮೆಂಟರಿ ಆವತ್ತೇ ಟೀವಿಯಲ್ಲಿ ಬಿತ್ತರವಾಗುತ್ತಿತ್ತು. ಮಳೆ ಹೇಗೆ ಉಂಟಾಗುತ್ತದೆ? ಎಂಬುದೇ ಡಾಕ್ಯೂಮೆಂಟರಿ ವಿಷಯ. ಬೆಟ್ಟದ ಮರಗಳು ಮೋಡಗಳನ್ನು ತಡೆದು ಮಳೆ ಬರಿಸುತ್ತವೆ ಅಂತೆಲ್ಲ ಪ್ರೈಮರಿಯಲ್ಲಿ ಹೇಳಿದ್ದ ಮೇಸ್ಟ್ರು ತ್ರಿಪಾಠಿಗೆ ನೆನಪಾದರು. ಮಳೆಗಾಗಿ ಹೋಮ, ಹವನ, ಪರ್ಜನ್ಯ ಯಜ್ಞಗಳನ್ನು ಮಾಡುತ್ತಿದ್ದರೆಂದು ಹೇಳುತ್ತಿದ್ದ ನೀತಿಕತೆ ಮೇಸ್ಟ್ರು ನೆನಪಾದರು.
ಅಷ್ಟರಲ್ಲಿ ಚಾನಲ್ ನ ನಿರೂಪಕ ಪರದೆಯಲ್ಲಿ ಮಳೆಯನ್ನು ನಿರೂಪಿಸತೊಡಗಿದ್ದ. ಆತನ ಪ್ರಕಾರ, ಭೂಮಿಯ ಮೇಲೆ ನೀರು ಕೋಟ್ಯಂತರ ವರ್ಷಗಳಿಂದ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸೈಕಲ್ ಹೊಡೆಯುತ್ತಲೇ ಇದೆ. ಆವತ್ತಿನಿಂದ ಇವತ್ತಿನವರೆಗೂ ಇಲ್ಲಿ ಒಂದೇ ಒಂದು ಹನಿ ಹೆಚ್ಚೂ ಆಗಿಲ್ಲ ಕಡಿಮೆಯೂ ಆಗಿಲ್ಲ. ಅಶೋಕನ ದೇಹದಲ್ಲಿದ್ದ ನೀರೇ ಅಕ್ಬರನ ದೇಹದಲ್ಲೂ ಇತ್ತು ಮತ್ತು ಅದು ಈಗ ನಮ್ಮ ದೇಹದಲ್ಲೂ ಇದೆ. ಇಂಥ ನೀರಿನ ಬಗ್ಗೆ, ಮಳೆಯ ಬಗ್ಗೆ ನಮಗೆಷ್ಟು ಗೊತ್ತು? ಭೂಮಿಯ ಮೇಲಿರುವ ನೀರಿನ ಒಂದು ಬಿಂದು ವಾತಾವರಣದಲ್ಲಿನ ಶಾಖದಿಂದ ಆವಿಯಾಗಿ ಆಕಾಶಕ್ಕೇನೋ ಹಾರುತ್ತದೆ. ಅಲ್ಲಿ ಶೂನ್ಯವಾತಾವರಣವಿದೆ. ನಮಗೆಲ್ಲ ಗೊತ್ತಿರುವಂತೆ ಅನಿಲರೂಪದ ಈ ನೀರಿನ ಬಿಂದು ಶೂನ್ಯವಾತಾವರಣಕ್ಕೆ ಸೇರುತ್ತಿದ್ದಂತೆಯೇ ಮಂಜುಗಡ್ಡೆಯ ರೂಪ ಪಡೆಯಬೇಕು. ಆದರೆ ಅಲ್ಲಿ ಹಾಗಾಗುವದಿಲ್ಲ. ಯಾಕೆಂದರೆ ಅಂತರಿಕ್ಷದಲ್ಲಿ ಯಾವುದೇ ಕಲ್ಮಶವಿಲ್ಲ. ಆದರೆ ನಿಸರ್ಗವೇ ಇದಕ್ಕೆ ಪರಿಹಾರ ಹುಡುಕಿಕೊಳ್ಳುತ್ತದೆ.
ಸಮುದ್ರದಿಂದ, ಕಾಡಿನ ಕಾಳ್ಗಿಚ್ಚಿನಿಂದ, ಕಾರ್ಖಾನೆಯ ಚಿಮಣಿಗಳಿಂದ, ಮರುಭೂಮಿಯ ಬಿರುಗಾಳಿಗಳಿಂದ ಏಳುವ ಅಸಂಖ್ಯಾತ ಧೂಳಿನ ಕಣಗಳು ಆಕಾಶಕ್ಕೆ ಏರುತ್ತವೆ. ಹಾಗೆ ಏರುತ್ತಲೇ ಅಲ್ಲಿನ ವಾತಾವರಣದಲ್ಲಿ ಮಂಜುಗಡ್ಡೆಯಾಗಲು ತವಕಿಸುತ್ತಿರುವ ಅನಿಲ ಬಿಂದುವಿಗೆ ಆಧಾರವಾಗುತ್ತವೆ. ಆಗ ಅಲ್ಲೊಂದು ನೀರಿನ ಸ್ಪಟಿಕ ತಯಾರಾಗುತ್ತದೆ. ಹೀಗೆ ಧೂಳಿನ ಕಣವನ್ನು ಆಧಾರವಾಗಿಟ್ಟುಕೊಂಡು ಅದರ ಸುತ್ತಲೂ ಮಂಜುಗಡ್ಡೆಯಾಗಿ ಹರಳುಗಟ್ಟುವ ಅನಿಲದ ಬಿಂದು ತನ್ನ ಆಸುಪಾಸಿನಲ್ಲಿರುವ ಮತ್ತೊಂದಿಷ್ಟು ಅನಿಲದ ಬಿಂದುಗಳಿಗೆ ತಾನೇ ಆಧಾರವಾಗುತ್ತದೆ. ಹೀಗೆ ಒಂದಕ್ಕೊಂದು ಸೇರಿಕೊಂಡು ದೊಡ್ಡದಾದ ಮಂಜುಗಡ್ಡೆ ತನ್ನದೇ ಭಾರದಿಂದಾಗಿ ಕೆಳಗೆ ಜಾರತೊಡಗುತ್ತದೆ. ಭೂಮಿಗೆ ಹತ್ತಿರವಾಗುತ್ತಿದ್ದಂತೆಯೇ ವಾತಾವರಣದ ಉಷ್ಣತೆಯಿಂದಾಗಿ ಹರಳು ಕರಗಿ ನೀರಿನ ಹನಿಯಾಗಿ ಮಳೆ ಸುರಿಯುತ್ತದೆ. ಹೀಗೆ ಅನಿಲದ ಬಿಂದುವೊಂದು ಅಂತರಿಕ್ಷದಲ್ಲಿ ಮಂಜುಗಡ್ಡೆಯ ಹರಳಾಗಲು ಧೂಳಿನ ಕಣಗಳಷ್ಟೇ ಆಧಾರಸ್ತಂಭಗಳಾಗುವದಿಲ್ಲ. ಅನೇಕ ಸಲ ಇದೇ ಭೂಮಿಯಿಂದ ಹಾರಿಹೋದ ಕೋಟ್ಯಂತರ ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳೂ ಮಂಜುಗಡ್ಡೆಯ ಸ್ವರೂಪ ತಾಳಲು ಹೆಗಲು ಕೊಡುತ್ತವೆ. ಹೀಗೆ ಈ ಲೋಕದ ಯಾವುದೇ ಜೀವಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಂಡು ಮತ್ತದೇ ಹಳೆಯ ತತ್ವದೊಂದಿಗೆ ಮಣ್ಣಿಗೆ ಹಿಂತಿರುಗುತ್ತದೆ..
ನಾರಾಯಣ ತ್ರಿಪಾಠಿ ದಿಗ್ಗನೇ ಎದ್ದು ಕುಳಿತಿದ್ದ. ಟೀವಿ ನಿರೂಪಕನ ಕೊನೆಯ ಮಾತುಗಳು ಗುಯ್ ಗುಡತೊಡಗಿದ್ದವು. ಯಾಕೋ ಈಗಿಂದೀಗಲೇ ಭಟ್ಟರಿಗೆ ಫೋನು ಮಾಡೋಣ ಅಂದುಕೊಂಡ. ಆದರೆ ಗಡಿಯಾರ ನೋಡಿಕೊಂಡು ಸುಮ್ಮನೇ ಬಿದ್ದುಕೊಂಡ. ಮರುದಿನವೇ ಭಟ್ಟರ ಮರಣವಾರ್ತೆ ಬಂದಿತ್ತು. ಕನಲಿಹೋಗಿದ್ದ ತ್ರಿಪಾಠಿ. ಒಂದಿಡೀ ದಿನ ಯಾರೊಂದಿಗೂ ಮಾತನಾಡಲಿಲ್ಲ. ಕೆಲಸಕ್ಕೂ ಹೋಗಲಿಲ್ಲ. ಸಂಜೆಹೊತ್ತಿಗೆ ಏನೋ ಯೋಚಿಸಿದವನಂತೆ ಮನೆಯ ಮುಂದೆ ಇದ್ದಕ್ಕಿದ್ದಂತೆ ಗುಂಡಿ ತೋಡತೊಡಗಿದ. ಯಾವುದೋ ಬೀಜ ತಂದು ಮಣ್ಣಲ್ಲಿ ಹುಗಿದಿಟ್ಟ. ಇನ್ನೂ ಮೊಳಕೆಯೊಡೆಯದ ಸಸಿಯ ಮುಂದೆ ನಿಂತು 'ಮಲ್ಹಾರ ಮರ' ಅಂತ ಬರೆದಿಟ್ಟ ಬೋರ್ಡು ದಿಟ್ಟಿಸತೊಡಗಿದ! .
-
![]() |
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 20.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
Subscribe to:
Posts (Atom)