ಅದೇಕೋ ಏನೋ ನನಗೆ ನಾಯಿಗಳನ್ನು ಕಂಡರೆ ತುಸು ಭಯ. ಬಹುಶಃ ಬಾಲ್ಯದಲ್ಲಿ ಬೀದಿನಾಯಿಯೊಂದು ಅಂಡಿಗೆ ಕಚ್ಚಿದ್ದು ಕಾರಣವಿರಬೇಕು. ಹೀಗಾಗಿ ರಸ್ತೆಯಲ್ಲಿ ಹೋಗುವಾಗ ಎದುರಿಗೆ ಯಾರಾದರೂ ನಾಯಿ ಹಿಡಿದುಕೊಂಡು ಬಂದಾಗಲೆಲ್ಲ ನಾನು ಅಷ್ಟುದ್ದ ದೂರ ಸರಿದು ಸಾಗುತ್ತಿರುತ್ತೇನೆ. ಆಗೆಲ್ಲ ಆ ನಾಯಿಯ ಮಾಲೀಕರು ನನ್ನನ್ನು ನೋಡಿ ನಸುನಗುತ್ತ, "ಅಯ್ಯೋ, ನನ್ನ ನಾಯಿ ಏನೂ ಮಾಡೋದಿಲ್ಲ, ಅದ್ಯಾಕೆ ಅಷ್ಟೊಂದು ದೂರ ಓಡ್ತೀರಾ.." ಅಂತ ಹೇಳುತ್ತಿರುತ್ತಾರೆ. ಕೆಲವೊಮ್ಮೆ ಯಾರದೋ ಮನೆಗೆ ಹೋದಾಗ ಗೇಟಿನ ಬಳಿ ಈ ನಾಯಿ ಗುರ್ರೆಂದು ಭಯಂಕರವಾಗಿ ಗುರಾಯಿಸುತ್ತಿದ್ದರೂ ಮಾಲೀಕರದು ಮಾತ್ರ ಯಥಾಪ್ರಕಾರ ಶಾಂತಿಮಂತ್ರ. 'ಅದೇನೂ ಮಾಡೋಲ್ಲ, ಅದೇನೂ ಮಾಡೋಲ್ಲ..' ಅಂತ ಧೈರ್ಯ ಕೊಡುತ್ತಿರುತ್ತಾರೆ!
ಆಗೆಲ್ಲ ಮಾಲೀಕರ ಈ ಥರದ ಸುಮಾರು ಡೈಲಾಗುಗಳಿಗೆ ನನ್ನ ಉತ್ತರ ಒಂದೇ: ಹೌದು ಸ್ವಾಮೀ,
ನಿಮ್ಮ ನಾಯಿ ಏನೂ ಮಾಡೋದಿಲ್ಲ ಅಂತ ನಿಮಗೇನೋ ಗೊತ್ತಿದೆ. ಆದರೆ ತಾನೇನೂ ಮಾಡಬಾರದು ಅಂತ ಈ
ನಾಯಿಗೆ ಗೊತ್ತಿರಬೇಕಲ್ಲ?
ತುಂಬ ವರುಷಗಳ ಹಿಂದೆ ಕೇಳಿದ ತಮಾಷೆಯಿದು. ಒಂದೂರಿನಲ್ಲಿ ಒಂದು ನಾಯಿ ಇತ್ತಂತೆ. ಬಲು
ಚೂಟಿ ಮತ್ತು ಚತುರ ನಾಯಿ. ಅದು ತನ್ನ ಯಜಮಾನನ ಬಹುತೇಕ ಕೆಲಸಗಳನ್ನು ಮಾಡುತ್ತಿತ್ತು.
ಮನೆಗೆ ತರಕಾರಿ ತರುವದು, ಬಟ್ಟೆ ಒಗೆದು ಒಣ ಹಾಕುವದು, ಇಸ್ತ್ರೀ ಮಾಡುವದು ಇತ್ಯಾದಿ ಇತ್ಯಾದಿ.
ಹೀಗಿರುವಾಗ, ಒಂದು ದಿನ ಯಜಮಾನ ಕೊಟ್ಟ ಸಾಮಾನುಗಳ ಪಟ್ಟಿ ಇಟ್ಟುಕೊಂಡು, ಕೊರಳಿಗೆ ಒಂದು ಚೀಲ
ನೇತು ಹಾಕಿಕೊಂಡು ಸೂಪರ್ ಮಾರ್ಕೆಟ್ಟಿಗೆ ಹೊರಟಿತ್ತು.
ದಾರಿ ಮಧ್ಯೆ ಟ್ರಾಫಿಕ್ ಸಿಗ್ನಲ್ ಬಂದಾಗ
ನಿಂತುಕೊಂಡು, ಸ್ಟಾಪಿನಲ್ಲಿ ಬಸ್ ಹತ್ತಿಕೊಂಡು, ಪರಿಚಯದ ಕಂಡಕ್ಟರ್ ಹತ್ತಿರ ಟಿಕೆಟ್
ತೆಗೆದುಕೊಂಡು ಸೂಪರ್ ಮಾರ್ಕೆಟ್ ತಲುಪಿತು. ಅಲ್ಲಿದ್ದ ಸೇಲ್ಸ್ ಹುಡುಗನಿಗೆ ಲಿಸ್ಟ್ ತೋರಿಸಿ
ಬ್ರೆಡ್ ಮತ್ತು ಮೊಟ್ಟೆಗಳನ್ನು ಚೀಲಕ್ಕೆ ಹಾಕಿಸಿಕೊಂಡು ಮನೆಯತ್ತ ಹೊರಟಿತು. ಆದರೆ ಆರಂಭದಿಂದಲೂ
ಈ ನಾಯಿಯ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಿಕ್ಕಾಪಟ್ಟೆ ಅಚ್ಚರಿ.
ಧತ್ತೇರಿ, ಇದ್ಯಾವ ನಾಯಿ? ಸಿಗ್ನಲ್ಲಲ್ಲಿ ನಿಂತುಕೊಂಡು, ಸ್ಟಾಪಲ್ಲಿ ಬಸ್ ಹತ್ತಿದ್ದಲ್ಲದೇ
ಮಾರ್ಕೆಟ್ಟಿಗೂ ಹೋಗಿ ಸಾಮಾನು ತರುತ್ತಲ್ಲಪ್ಪ ಅಂತ ಹೆಜ್ಜೆಹೆಜ್ಜೆಗೂ ಅಚ್ಚರಿಗೊಳಗಾಗುತ್ತಿದ್ದ ಆ
ವ್ಯಕ್ತಿ ಈ ನಾಯಿಯನ್ನೇ ಹಿಂಬಾಲಿಸುತ್ತಿದ್ದ.
ಕೊನೆಗೊಮ್ಮೆ ನಾಯಿ ತನ್ನ ಮನೆ ತಲುಪಿ ಕರೆಗಂಟೆ ಒತ್ತತೊಡಗುತ್ತದೆ. ಏಳೆಂಟು ಸಾರಿ
ಒತ್ತಿದರೂ ಯಜಮಾನ ಬಾಗಿಲು ತೆರೆಯದೇ ಹೋದಾಗ ಈ ನಾಯಿ ಕಿಟಕಿ ಬಳಿ ಬಂದು ಜೋರಾಗಿ
ಬೊಗಳತೊಡಗುತ್ತದೆ. ಸ್ವಲ್ಪ ಸಮಯದ ಬಳಿಕ ಬಾಗಿಲು ತೆರೆದ ಯಜಮಾನ ಸಿಟ್ಟಿನಿಂದ ನಾಯಿಗೆ
ಬಾರಿಸತೊಡಗುತ್ತಾನೆ. ಅಷ್ಟೊತ್ತಿಗೆ ಈ ನಾಯಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಗೆ
ಯಜಮಾನನ ವರ್ತನೆ ನೋಡಿ ಸಿಟ್ಟು ಬರುತ್ತದೆ. ಆತ ಯಜಮಾನನ ಬಳಿ ಬಂದು, "ಏನ್ರೀ, ನಿಮ್ಮ ನಾಯಿ
ಎಷ್ಟೆಲ್ಲಾ ಕೆಲಸ ಮಾಡುತ್ತೆ. ಬಸ್ ಹತ್ತುತ್ತೆ, ಟಿಕೆಟ್ ತಗೊಳ್ಳತ್ತೆ, ಸಾಮಾನನ್ನೂ ತರುತ್ತೆ.
ಅಯ್ಯಯ್ಯಪ್ಪ.. ಇಂಥಾ ನಾಯಿಗೆ ಅದೇನು ತಪ್ಪು ಮಾಡಿತು ಅಂತ ಹೊಡಿತಿದೀರಾ?" ಅಂತ ನಾಯಿಯ ಪರ
ವಕಾಲತ್ತು ಮಾಡುತ್ತಾನೆ. ಯಜಮಾನನಿಗೆ ಮೊದಲೇ ತಲೆಕೆಟ್ಟಿತ್ತು ಅಂತ ಕಾಣುತ್ತದೆ. ಆತ ಈ
ವ್ಯಕ್ತಿಯನ್ನು ದುರುಗುಟ್ಟುತ್ತ ಸಿಟ್ಟಿನಿಂದ ಒದರಾಡತೊಡಗಿದ:
"ಯೋವ್, ಹೋಗಯ್ಯ ನಿಂದೊಂದು.. ನಿದ್ದೆ
ಎಲ್ಲ ಹಾಳಾಯಿತು. ಎಷ್ಟು ಸಲ ಹೇಳಿದೀನಿ ಈ ನಾಯಿ ಮುಂಡೇದಕ್ಕೆ. ಹೊರಗೆ ಹೋಗುವಾಗ ಮನೆ ಕೀಲಿಕೈ
ತೆಗೆದುಕೊಂಡು ಹೋಗು ಅಂತ. ಮರೆತು ಸುಮ್ಮನೇ ಕಿಟಕಿ ಹತ್ತಿರ ಬೊಗಳ್ತಾ
ಇರ್ತದೆ.."
ನಿರೀಕ್ಷೆಗಳೇ ಹಾಗೆ. ಒಮ್ಮೊಮ್ಮೆ ಮಿತಿಮೀರುತ್ತವೆ.
ಇಂಥ ಎಡವಟ್ಟು ನಿರೀಕ್ಷೆಗಳ ನಡುವೆಯೂ ಜಗತ್ತಿನಲ್ಲೆಡೆ ಅನೇಕರು ನಾಯಿಯ ಬಗ್ಗೆ ತಮ್ಮದೇ ರೀತಿಯಲ್ಲಿ ಪ್ರೀತಿ,
ಸಿಟ್ಟು ಮತ್ತು ಭಯದಿಂದ ವ್ಯಾಖ್ಯಾನಿಸಿರುವದುಂಟು. ನಮ್ಮಲ್ಲಿನ ಕತೆ, ಕವಿತೆಗಳಲ್ಲೂ ಈ
ನಾಯಿಗೊಂದು ಪಾತ್ರವುಂಟು. ರಾಜರತ್ನಂರವರ ಸುಪ್ರಸಿದ್ಧ 'ನಾಯಿಮರಿ, ನಾಯಿಮರಿ ತಿಂಡಿಬೇಕೇ?'
ಅನ್ನುವ ಶಿಶುಗೀತೆಯನ್ನು ಕೇಳದೆ ನಮ್ಮ ಬಾಲ್ಯ ಮುಂದಕ್ಕೆ ಸಾಗುವದಿಲ್ಲ. ಅಷ್ಟೇ
ಯಾಕೆ? ಮಹಾಭಾರತದ ಯುದ್ಧವೆಲ್ಲ ಮುಗಿದು ಪಾಂಡವರೆಲ್ಲ ಸಶರೀರವಾಗಿ ಸ್ವರ್ಗಕ್ಕೆ ಹೋಗಬೇಕು
ಅಂದುಕೊಂಡಿದ್ದಾಗ ಕೊನೆಗೂ ಧರ್ಮರಾಯನೊಂದಿಗೆ ಸ್ವರ್ಗದ ಬಾಗಿಲು ತಟ್ಟಿದ್ದು ಒಂದು ನಾಯಿ.
ಹೀಗೆ ದೇಶ-ಕಾಲದ ಹಂಗಿಲ್ಲದೇ ನಾಯಿಯೊಂದು ನಿಯತ್ತು,
ನಿಷ್ಠೆ, ಭಯ, ಅಭಯ ಮತ್ತು ಪ್ರೀತಿಗೆ ರೂಪಕವಾಗಬಲ್ಲದು. ಹಾಗಿರುವಾಗ ತನ್ನ ಪಂಥದ
ಪ್ರಸರಣಕ್ಕೆಂದು ಲೋಕದ ಎಲ್ಲ ಚರಾಚರಗಳನ್ನೂ ಒಂದೊಂದು
ಉಪಕರಣವೆಂದೇ ಭಾವಿಸುವ ಝೆನ್, ನಾಯಿಯ ವಿಷಯದಲ್ಲಿ ಹೇಗೆ ತಾನೇ ಹಿಂದೆ ಬೀಳಬಲ್ಲದು? ಹೀಗಾಗಿ
ಝೆನ್ ಎಂಬುದು ಸೀದಾ ಬುದ್ಧನನ್ನೇ ನಾಯಿಯೊಂದಿಗೆ ಸಮೀಕರಿಸುತ್ತದೆ. ಕೇವಲ ಎರಡೇ ಸಾಲುಗಳ ಝೆನ್
ಕತೆಯೊಂದು ಸಾಮಾನ್ಯ ನಾಯಿಯನ್ನು ಎಲ್ಲಿಂದ ಎಲ್ಲಿಗೆ ಜಿಗಿಸಿಬಿಟ್ಟಿದೆ ನೋಡಿ:
"ಬುದ್ಧನೆಂದರೆ
ಯಾರು?"
"ಬುದ್ಧನೆಂದರೆ ಒಂದು ನಾಯಿ!"
ಅಷ್ಟೇ, ಕತೆ ಅಲ್ಲಿಗೇ ಸಮಾಪ್ತಿ. ಎಂಥ
ಸಮಯದಲ್ಲೂ ಸದಾಕಾಲ ಮಹಾನ್ ಎಚ್ಚರದಲ್ಲಿರುವವನೇ ನಿಜವಾದ ಬುದ್ಧ! ತಮಾಷೆ ನೋಡಿ: 'ನಾಯಿ
ಮುಂಡೇದೆ', 'ನಾಯಿ ನನ್ಮಗನೇ' ಅಂತೆಲ್ಲ ನಾಮಪದ ಹಿಡಿದುಕೊಂಡು ಜಗಳಕಾರುವ ನಮಗೆ, ಅದೇ
ನಾಮಪದವನ್ನು ಅದರ ಕ್ರಿಯಾಪದದ ಸಮೇತ ಎತ್ತಿಹಿಡಿಯುವ ಝೆನ್ ಬಗ್ಗೆ ಕೊಂಚ ಗಮನ ಹರಿಸುವದು
ಒಳ್ಳೆಯದೆನಿಸುತ್ತದೆ.
ಕುತೂಹಲದ ವಿಷಯವೆಂದರೆ, ಹೀಗೆ ಸದಾಕಾಲ ಎಚ್ಚರದ ಸ್ಥಿತಿಯಲ್ಲಿರಲೆಂದು ಸ್ವತಃ ತಾನೇ ಒಂದು
ನಾಯಿಯ
ರೂಪಕವಾಗಿ ಮಾರ್ಪಟ್ಟ ಬುದ್ಧ
ತನ್ನನ್ನು ಯಾವತ್ತಿಗೂ ಬುದ್ಧನೆಂದು ಕರೆದುಕೊಳ್ಳಲಿಲ್ಲ. ಆತನಿಗೆ ಆ ಪದವಿ ಬಂದಿದ್ದು ಆತನ
ಅನುಯಾಯಿಗಳಿಂದ. ಪಾಲಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದ ಬುದ್ಧ ತನ್ನನ್ನು ತಾನು
'ತಥಾಗತ'ನೆಂದು ಕರೆದುಕೊಳ್ಳುತ್ತಿದ್ದ. ಇಂಥ 'ತಥಾಗತ'ವನ್ನು ಒಡೆದು
ನೋಡಿದಾಗ ತಥಾ ಮತ್ತು ಗತ ಪದಗಳು ಹೊರಹೊಮ್ಮಬಹುದು. ಇಲ್ಲಿ ಅವುಗಳ ಮೂಲ ಹಿಡಿದು ಹೊರಟರೆ
ಅರ್ಥವೊಂದು ಅನರ್ಥಕ್ಕೊಳಗಾಗುವ ಅಪಾಯವೇ ಹೆಚ್ಚು. ಲೌಕಿಕ ಬದುಕಿನ ಎಲ್ಲ ಮೋಹಗಳನ್ನು ತ್ಯಜಿಸಿ
ನಿರ್ಮೋಹದತ್ತ ವಾಲಿಹೋದ ಬುದ್ಧನ ನಿರ್ವಾಣವನ್ನು ಅವಲೋಕಿಸಿದಾಗ 'ತಥಾಗತ'ಕ್ಕೆ ಒಂದು ಸರಳವಾದ ಅರ್ಥ ಕಲ್ಪಿಸಬಹುದು:
ಅಲ್ಲಿಗೆ,
ಬುದ್ಧನೆಂಬುವನು ತಥಾಗತ. ಅಂದರೆ, (ಎಲ್ಲಿಂದ) ಹೇಗೆ ಬಂದನೋ (ಅಲ್ಲಿಗೆ) ಹಾಗೆಯೇ
ಹೋದವನು..
*
ಇಂಥ ಚಿತ್ರಣಗಳನ್ನು ನೀವೂ
ಗಮನಿಸಿರುತ್ತೀರಿ. ನಾಯಿಯೊಂದು ರಸ್ತೆಯಲ್ಲಿ ಸಾಗುತ್ತಿರುವ ಕಂಡಕಂಡ ಕಾರು, ಬೈಕುಗಳ
ಬೆನ್ನೆತ್ತಿ ಬೊಗಳುವದು ಯಾಕೆ? ಹಾಗೆ ನೋಡಿದರೆ ಈ ವಾಹನ ಸವಾರರು ಈ ನಾಯಿಗೆ ಹಿಂದೆಂದೂ ಅಪಘಾತ
ಮಾಡಿದವರಲ್ಲ. ಅದರ ಮೇಲೆ ದಂಡೆತ್ತಿ ಹೋದವರೂ ಅಲ್ಲ. ಹಾಗಾದರೆ ನಾಯಿಗೇಕೆ ಸವಾರರ ಮೇಲೆ ಈ ಪರಿ ದ್ವೇಷ?
ನಾನು ಅಲ್ಲಲ್ಲಿ ಓದಿದ ವಿಷಯಗಳನ್ನು ನಂಬುವದಾದರೆ, ಈ ಎಲ್ಲ ನಾಯಿ ಅಥವಾ ನಾಯಿಗುಂಪಿಗೆ
ಒಂದೊಂದು ಸೀಮಾರೇಖೆ ಅಂತನ್ನುವದು ಇರುತ್ತದೆ. ಆಯಾ ಸೀಮಿತ ಪ್ರದೇಶದೊಳಗೆ ಆಯಾ ನಾಯಿ
ಅಥವಾ ಅವುಗಳ ಗುಂಪು ಮಾತ್ರ ಆಡಳಿತ ನಡೆಸುತ್ತಿರುತ್ತವೆ. ಸದರಿ ಪ್ರದೇಶದೊಳಗೆ ಇನ್ಯಾವುದೋ
ಅಪರಿಚಿತ ನಾಯಿ ಕಾಲಿಡುವಂತಿಲ್ಲ. ಹಾಗೇನಾದರೂ ಕಾಲಿಟ್ಟರೆ ಸದರಿ ಪ್ರದೇಶದ ನಾಯಿಗಳೆಲ್ಲ ಸೇರಿ ಈ
ಹೊಸ ವಲಸೆ ನಾಯಿಯನ್ನು ಬೆನ್ನಟ್ಟಿ ಬೊಗಳಿ ಹೊರಗೆ ಅಟ್ಟುತ್ತವೆ.
ಈಗ ನೀವು ನಿಮ್ಮ ಕಾರನ್ನು ಎಲ್ಲೋ
ನಿಲ್ಲಿಸಿರುತ್ತೀರಿ. ಅಲ್ಲಿನ ನಾಯಿಯೊಂದು ಬಂದು ನಿಮ್ಮ ಕಾರಿನ ಚಕ್ರದ ಮೇಲೆ ಕಾಲೆತ್ತುತ್ತದೆ.
ಹಾಗೆ ನಾಯಿಯ ಉಚ್ಛೆಯಿಂದ ಪ್ರೋಕ್ಷಣೆಗೊಳಗಾದ ಕಾರು ಇನ್ಯಾವುದೋ ಪ್ರದೇಶದಲ್ಲಿ ಸಾಗುತ್ತಿರುವಾಗ
ಅಲ್ಲಿದ್ದ ನಾಯಿಗಳೆಲ್ಲ ನಿಮ್ಮ ಕಾರನ್ನು ಬೊಗಳುತ್ತ ಬೆನ್ನಟ್ಟುತ್ತವೆ. ಯಾಕೆಂದರೆ ಅವುಗಳ ಘ್ರಾಣ ಶಕ್ತಿ
ಅಷ್ಟು ಮಜಬೂತಾಗಿದೆ. ತಮ್ಮತಮ್ಮ ಗಡಿಪ್ರದೇಶಗಳಲ್ಲಿನ ತಮ್ಮದೇ ಗುಂಪಿನ ನಾಯಿಗಳ ಉಚ್ಛೆ
ವಾಸನೆ ಕೂಡ ಅವಕ್ಕೆ ಗೊತ್ತು. ತಮ್ಮ ಪ್ರದೇಶದೊಳಕ್ಕೆ ಹೊಸದೊಂದು ವಾಸನೆಯನ್ನು ಹೊತ್ತುತಂದ
ವಾಹನವನ್ನು ತಮ್ಮ ಅಸ್ಮಿತೆಗೆ ಒಡ್ಡಿದ್ದ ಸಂಚಕಾರವೆಂದೇ ಅವು ಭಾವಿಸುತ್ತವೆ. ಹೀಗಾಗಿ
ಯಾವುದೋ ಹೊಸ ನಾಯಿಯೊಂದು ತಮ್ಮ ಸೀಮೆಯನ್ನು ಆಕ್ರಮಿಸುತ್ತಿದೆ ಅಂತ ಭಾವಿಸಿ ಸದರಿ
ವಾಹನವನ್ನು ಬೆನ್ನಟ್ಟುತ್ತವೆ.
ಹೀಗೆ ಪೆದ್ದ ನಾಯಿಯಂತೆ ಆಡಬೇಡ ಅಂತ ಝೆನ್ ಗುರು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ.
"ಝೆನ್ ಸಿದ್ಧಾಂತದ ಸೂತ್ರಗಳೆಲ್ಲ ವಿಚಿತ್ರವಾಗಿವೆ. ನನಗೂ ಅವುಗಳಿಗೂ ಒಂದಕ್ಕೊಂದು
ಹೊಂದಿಕೆಯಾಗುತ್ತಿಲ್ಲ.." ಅಂತ ಸಮಸ್ಯೆ ಹೇಳಿಕೊಂಡು ಬಂದ ಶಿಷ್ಯನಿಗೆ ಸೂತ್ರಗಳನ್ನೆಲ್ಲ
ಗಾಳಿಗೆ ತೂರು ಅಂತ ಗುರು ಹೇಳುತ್ತಿದ್ದಾನೆ. ‘ಮತ್ತೇನು ಮಾಡಲಿ?’ ಅಂತ ಶಿಷ್ಯ ಗಂಟು
ಬೀಳುತ್ತಾನೆ. ಸಮುದ್ರದ ದಂಡೆಯಲ್ಲಿ ನಿಂತಿರುವ ಗುರು ತನ್ನ ಊರುಗೋಲಿನಿಂದ ಮರಳಿನ ಮೇಲೆ 'ಧ್ಯಾನ'
ಅಂತ ಬರೆಯುತ್ತಾನೆ. ಶಿಷ್ಯನಿಗೆ ಏನೂ ಅರ್ಥವಾಗುವದಿಲ್ಲ. ತಕ್ಷಣ ಆತ "ಇದೇನು ಇಷ್ಟು
ಚಿಕ್ಕದಾಗಿ ಎರಡೇ ಅಕ್ಷರಗಳಲ್ಲಿ ಪರಿಹಾರವೇ? ಕೊಂಚ
ವಿಸ್ತರಿಸಿ ದೀರ್ಘವಾಗಿ ಹೇಳಬಹುದೇ?" ಅಂತ ಮತ್ತೇ ಗಂಟು ಬೀಳುತ್ತಾನೆ. ಗುರು ಮತ್ತದೇ
ಊರುಗೋಲಿನಿಂದ 'ಧ್ಯಾನ' ಅಂತ ಬರೆಯುತ್ತಾನೆ.
ಈ ಸಲ ದೊಡ್ಡ ಅಕ್ಷರಗಳಲ್ಲಿ
ಬರೆದಿರುತ್ತಾನಷ್ಟೇ!
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 28.03.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
3 comments:
ರಾಜೋ, ನಮ್ಮ ಪೂರ್ವಸೂರಿಗಳನ್ನು ಯಾವುದೇ ಸಂದರ್ಭದಲ್ಲಿಯೇ ಆದರೂ, ಸ್ಮರಿಸಿಕೊಳ್ಳುವುದು ನನಗೆ ಕೃತಜ್ಞತೆಯ ದ್ಯೋತಕವೆನಿಸಿ, ಸುಖವೀಯುತ್ತದೆ. ನೀವು ರಾಜರತ್ನಮ್ ಅವರ ಶಿಶುಗೀತೆಯನ್ನು ನೆನಸಿದ್ದೀರಿ, ಧನ್ಯವಾದಗಳು.
[ಟಿಪ್ಪಣಿ: ಕನ್ನಡದ ಯಾವುದೋ ಒಂದು ಸಿನೆಮಾದಲ್ಲಿ, ಹೀರೋ ಊಟಕ್ಕೆ ಕೂಡುವ ಜಾಗದ ಮೇಲ್ಗಡೆಯಲ್ಲಿ ಗೋಡೆಗೆ, ಅವನ ಅಪ್ಪನ ಹಾಗು ಅಜ್ಜನ ಫೋಟೋ ತೂಗುಹಾಕಿದ್ದನ್ನು ತೋರಿಸಿದ್ದಾರೆ. ಈ ಫೋಟೋಗಳು, ಬಾಲಕೃಷ್ಣ ಹಾಗು ನರಸಿಂಹರಾಜು ಅವರವು. ಈ ಹಾಸ್ಯರತ್ನಗಳು ತಮ್ಮ ವಿನೋದದಿಂದ ಕನ್ನಡ ಚಿತ್ರರಸಿಕರ ಮನಸ್ಸಿಗೆ ಕೊಟ್ಟ ಖುಶಿಯನ್ನು ಚಲನಚಿತ್ರದ ನಿರ್ದೇಶಕರು ಈ ರೀತಿಯಾಗಿ ಸ್ಮರಿಸಿದ್ದಾರೆ, ಅಲ್ಲವೆ?]
ಸುನಾಥ ಸರ್,
ನಿಮ್ಮ ಅನಿಸಿಕೆ ನಿಜ. ಅವಕಾಶ ಸಿಕ್ಕಾಗಲೆಲ್ಲ ಹೀಗೆ ನಮ್ಮ ಪೂರ್ವಸೂರಿಗಳನ್ನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುವದು ನಾವು ಅವರಿಗೆ ನೀಡಬಹುದಾದ ಒಂದು ಗೌರವವೇ ಆಗಿದೆ. ಅಂದಹಾಗೆ, ಸಿನೆಮಾದ ಚಿಕ್ಕ ತುಣುಕಿನ ಬಗ್ಗೆ ನಿಮ್ಮ ಸೂಕ್ಷ್ಮದೃಷ್ಟಿ ಗಮನಿಸಿ ಅಪಾರ ಹೆಮ್ಮೆಯಾಯಿತು. ಧನ್ಯವಾದಗಳು.
Good one :)
Post a Comment