"ಚುನಾವಣೆಗಳಿಗೂ ಮಠಗಳಿಗೂ ಏನು ಸಂಬಂಧ?"
ಮೊನ್ನೆ ಹಿರಿಯ ಸ್ನೇಹಿತರೊಬ್ಬರು ಕೇಳುತ್ತಿದ್ದರು. ಅವರ ಪ್ರಶ್ನೆಯಲ್ಲಿ
ಅರ್ಧ ಗೇಲಿಯಿತ್ತು, ಅರ್ಧ ಸಿಟ್ಟಿತ್ತು. ನಮಗೆಲ್ಲ ಗೊತ್ತಿದೆ: ಚುನಾವಣೆಗಳು
ಘೋಷಣೆಯಾಗುತ್ತಿದ್ದಂತೆ ಎಲ್ಲ ಪಕ್ಷಗಳ ಧುರೀಣರು ಹತ್ತಾರು ಮಠಗಳತ್ತ ದೌಡಾಯಿಸುವದು,
ಅಲ್ಲಿನ ಹಿರಿ, ಕಿರಿ ಸ್ವಾಮೀಜಿಗಳ ಕಾಲಿಗೆ ಬೀಳುವದು, ಒಂದಿಷ್ಟು ಹಾರ-ಶಾಲುಗಳ ವಿನಿಮಯ ಮತ್ತು
ಇವೆಲ್ಲದರ ಕುರಿತಂತೆ ಮರುದಿನ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿ.
ಸ್ನೇಹಿತರ ಪ್ರಶ್ನೆ ತಾತ್ವಿಕವಾಗಿತ್ತು. ಇಷ್ಟಕ್ಕೂ
ಈ ಹಿರಿಯರೇನೂ ಮುಗ್ಧರಲ್ಲ. ಅವರು ಒಂದು ಸಮತೋಲಿತ ಸಮಾಜದ ನಿರ್ಮಾಣದಲ್ಲಿ ಮಠ, ಮಂದಿರ,
ಮಸೀದಿಗಳ ಅವಶ್ಯಕತೆಗಳನ್ನು ಅರಿತವರು. ದೇಗುಲಗಳಲ್ಲಿರಬಹುದಾದ ‘ಹೀಲಿಂಗ್ ಪವರ್ 'ನ್ನು ಮನಗಂಡವರು. ಲೌಕಿಕವಾದ ಮನುಷ್ಯನ ಶ್ರಮಕ್ಕೆ ಒಮ್ಮೊಮ್ಮೆ ಬೆಲೆ ಸಿಗದೇ ಹೋದಾಗ ಆತ ಅಲೌಕಿಕ
ಪವಾಡಗಳನ್ನು ನಿರೀಕ್ಷಿಸುತ್ತಾನಂತೆ. ಆತನಿಗೆ ಅದೊಂದು ತಾತ್ಕಾಲಿಕ ಶಮನವಷ್ಟೇ.
ಅಷ್ಟಕ್ಕೇ ಅದನ್ನು ಮೂಢನಂಬಿಕೆ ಅಂತ ಕರೆದರೆ ಆ ಮನುಷ್ಯನ ಶ್ರಮವನ್ನು ಅವಮಾನಿಸಿದಂತೆ.
ಹೀಗಿರುವಾಗ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ವಾಮೀಜಿ, ಸಂತರೆನಿಸಿಕೊಂಡವರು
ಇಂತಿಂಥ ಅಭ್ಯರ್ಥಿ ಮತ್ತು ಇಂತಿಂಥ ಪಕ್ಷವನ್ನೇ ಬೆಂಬಲಿಸಬೇಕೆಂದು ಸಮಾಜಕ್ಕೆ ನೇರಾನೇರವಾಗಿ ಕರೆ ಕೊಡತೊಡಗುತ್ತಾರೆ. ಇಲ್ಲಿ ಚುನಾವಣಾ ಅಭ್ಯರ್ಥಿಯನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಆತ
ಗೆಲ್ಲಲೆಂದು ಎಲ್ಲ ದಾರಿಗಳನ್ನೂ ಬಳಸಿಕೊಳ್ಳುತ್ತಾನೆ.
ಆದರೆ ಸಂತರು, ಸ್ವಾಮೀಜಿಗಳು
ಹಾಗಲ್ಲವಲ್ಲ? ಅವರು ಒಂದರ್ಥದಲ್ಲಿ ಎಲ್ಲವನ್ನೂ ತ್ಯಜಿಸಿದವರು. ಇನ್ನೊಂದರ್ಥದಲ್ಲಿ ಎಲ್ಲರನ್ನೂ
ಅಪ್ಪಿಕೊಂಡವರು. ಒಂದು ಸ್ವಾರ್ಥದ್ದು; ಇನ್ನೊಂದು, ನಿರ್ವ್ಯಾಜ ಪ್ರೇಮದ್ದು. ಇದು ಅವರ
ಪರಂಪರೆ. ಹಾಗಂತ ಭಾವಿಸಿಕೊಂಡೇ ಸಂತನ
ಸನ್ನಿಧಿಗೆ ಕಾಲಿಡುವ ಭಕ್ತನಿಗೆ ಭಾರತದಂಥ ದೇಶದಲ್ಲಿ ಚುನಾವಣೆ ಎಂಬುದು ಎಷ್ಟು ಮುಖ್ಯ,
ಅದರಲ್ಲೂ ಓಟು ಮಾರಿಕೊಳ್ಳದೇ ಪ್ರತಿಯೊಬ್ಬರೂ ಮತ ಹಾಕುವಂಥ
ಪ್ರಕ್ರಿಯೆ ಎಷ್ಟು ಮುಖ್ಯ ಅನ್ನುವ ತಿಳುವಳಿಕೆ ಮೂಡಿಸಬೇಕಿದ್ದ ನಮ್ಮ ಮಠ,
ದೇಗುಲಗಳು ನಿರ್ದಿಷ್ಟ ಚುನಾವಣಾ ಅಭ್ಯರ್ಥಿಗಳ ಬೆಂಬಲಿಗರಂತೆ ಹೇಳಿಕೆ ಕೊಡುವದು ಎಂಥ ವಿಪರ್ಯಾಸ.
ಒಟ್ಟಿನಲ್ಲಿ ಸಮಾಜದ ಮನಸ್ಥಿತಿಯನ್ನು ತನ್ನದೇ ಆದ ಒಂದು ಅಲೌಕಿಕ ಸೂತ್ರದಡಿ
ಮುನ್ನಡೆಸಬೇಕಿದ್ದ ಮಠ, ಮಂದಿರಗಳು ಹೀಗೆ ಚುನಾವಣಾ ಭರಾಟೆಯಲ್ಲಿ ತಾವೂ ಒಂದು ಭೌತಿಕ ಪ್ರಚಾರ
ಸಾಮಗ್ರಿಯಂತೆ ಪ್ರಚುರಪಡಿಸಿಕೊಳ್ಳುತ್ತಿರುವಾಗ, ಈ
ನಮ್ಮ ರಾಜಕೀಯ ಪಕ್ಷಗಳು ಅದು ಹೇಗೆ ಗಂಭೀರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಲ್ಲವು?
ಮೊದಲೆಲ್ಲ ರಾಜಕಾರಣಿಗಳಿಗೆ ಸಣ್ಣಸಣ್ಣ ದುರಾಸೆಗಳಿದ್ದವು. ಹೆಚ್ಚೆಂದರೆ, ಒಂದು ಪಕ್ಷದಲ್ಲಿ ನೆಲೆ
ಸಿಗಲಿಲ್ಲವೆಂದರೆ ಆತ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುತ್ತಿದ್ದ. ಹಾಗೆ ಮತ್ತೊಂದು ಪಕ್ಷಕ್ಕೆ
ಕಾಲಿಡುತ್ತಲೇ ವರ್ಷದ ಹಿಂದಷ್ಟೇ ಸಮಾ ಬೈದಾಡಿಕೊಂಡಿದ್ದ ವ್ಯಕ್ತಿಗೇ ಒಂಚೂರೂ ಮುಜುಗರವಿಲ್ಲದೆ ಹಾರ ಹಾಕುತ್ತಿದ್ದ.
ಇವತ್ತು ಕಾಲ ಬದಲಾಗಿದೆ. ಯುದ್ಧವೂ ಬದಲಾಗಿದೆ.
ಹಾಗಾಗಿ ಇಲ್ಲಿ ಹೊಸತೊಂದು ಧರ್ಮ ಹುಟ್ಟಲು ಯಾರಿಗೂ ಸಾಕ್ಷಾತ್ಕಾರವಾಗಬೇಕಿಲ್ಲ. ಪ್ರಾಂತೀಯ
ಅಸ್ಮಿತೆಯನ್ನು ಜಾಗ್ರತಗೊಳಿಸಲು ಯಾವ ಟ್ರಿಗರಿಂಗ್ ಸಂದರ್ಭವೂ ಬೇಕಿಲ್ಲ. ಒಂದೇ ಒಂದು ಚುನಾವಣಾ ಘೋಷಣೆ ಸಾಕು: ಅದು ಇಬ್ಬರ ಮಧ್ಯೆ ನವಿರಾಗಿ ಪಲ್ಲವಿಸುತ್ತಿದ್ದ ಪ್ರೇಮವನ್ನು ಹೊಡೆದುಹಾಕುತ್ತದೆ. ಧರ್ಮವನ್ನು ಒಡೆದುಹಾಕುತ್ತದೆ. ಇದರ
ಮುಂದುವರಿಕೆಯಾಗಿ, ಕನ್ನಡವನ್ನು ಎತ್ತಿ
ಹಿಡಿಯುವೆ ಅಂತೆಲ್ಲ ಒಂದಿಡೀ ಪುಟ ಜಾಹಿರಾತು ಕೊಡುವ ಅಭ್ಯರ್ಥಿಗೆ ಅಲ್ಲೇ ಇಪ್ಪತ್ತೆಂಟು ವ್ಯಾಕರಣ
ದೋಷಗಳಿರುವದು ಕಾಣಿಸುವದೇ ಇಲ್ಲ. ಇದೆಲ್ಲದರ ಮಧ್ಯೆ ಪುಕ್ಕಟೆ ಸಾಮಾನುಗಳ ಜಾತ್ರೆ
ಬೇರೆ!
ಇಷ್ಟಕ್ಕೂ ಉದ್ಯೋಗ, ಶ್ರಮ, ಅನ್ನ ಮತ್ತು ಜೀರ್ಣವಾಗುವಿಕೆ ಅನ್ನುವದೆಲ್ಲ ಮನುಷ್ಯನ
ಜೀವನಚಕ್ರ. ಅದು ಆತನ ಜೀವಂತಿಕೆಯ ಕುರುಹು.
ಅದನ್ನು ಮರೆತವರು ಮಾತ್ರ ಪುಕ್ಕಟೆ ಸಾಮಾನು ಕೊಡುವ ಪ್ರಣಾಳಿಕೆ ಕೊಡಬಲ್ಲರು. ಇಂಥ
ಅಭ್ಯರ್ಥಿಗಳಿಗೆ ಕಳಶವಿಟ್ಟಂತೆ ಮೊನ್ನೆ (ವಿಕ
ವರದಿ: ಏಪ್ರಿಲ್ 7) ಸ್ವತಂತ್ರ ಅಭ್ಯರ್ಥಿಯೊಬ್ಬ 'ನಾನ್ಯಾಕೆ ಎಂಎಲ್ಲೆ ಆಗಬಾರದು?' ಅಂತನ್ನುವ
ಹೆಡ್ಡಿಂಗ್ ಕೊಟ್ಟು ಸಿದ್ಧಪಡಿಸಿದ್ದ ಆತನ ಪ್ರಣಾಳಿಕೆಯಲ್ಲಿದ್ದ ಬಾಣಗಳನ್ನು ಗಮನಿಸಿ: ಕ್ಷೇತ್ರದ
ಮಹಿಳೆಯರಿಗೆ ಪುಕ್ಕಟೆಯಾಗಿ ಹವೀಜ, ಖಾರದಪುಡಿ ಮತ್ತು ಉಪ್ಪಿನಕಾಯಿ. ಎಲ್ಲರಿಗೂ
ವಾರಕ್ಕೆರಡು ಸಲ ಮಾಂಸ ಸೇರಿದಂತೆ ದಿನಕ್ಕೆ ಮೂರೊತ್ತು ಊಟ, ಎರಡೊತ್ತು ಕಾಫಿ/ಟೀ.
ವಯಸ್ಕರಿಗೆ ತಿಂಗಳ ಲೆಕ್ಕದಲ್ಲಿ ಮದ್ಯ ಫ್ರೀ, ಹಬ್ಬಗಳಿಗೆ ಬಟ್ಟೆ ಫ್ರೀ, ಬಸ್ ಟಿಕೆಟ್ ಫ್ರೀ, ಜೊತೆಗೆ ಮೊಬೈಲ್ ಕರೆಯೊಂದಿಗೆ ಡೇಟಾ
ಫ್ರೀ!
ಇಂಥವೇ ಪುಕ್ಕಟೆಗಳ ಪ್ರಣಾಳಿಕೆ ಹಿಡಿದು ಬರುವ ಪಕ್ಷಗಳಿಗೆ ನಾವು ಪ್ರಶ್ನಿಸಲೇಬೇಕಿದೆ:
ಅಲ್ಲ ಸ್ವಾಮೀ, ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯೇನೋ ಕಟ್ಟಿಸುತ್ತೀರಿ. ಆದರೆ ರೋಗವೇ
ಬರದಂತೆ ಮಾಡಲು ಏನಾದರೂ ಯೋಜನೆ ಇದೆಯಾ? ಒಂದಾದರೂ ಸರ್ಕಾರಿ ಜಿಮ್? ಸರ್ಕಾರಿ
ಗರಡಿಮನೆ? ಒಂದಿಷ್ಟು ಸುಗಮ ಸಂಚಾರ? ಉಸಿರಾಡಲು ಒಂದಿಷ್ಟು ಶುದ್ಧಗಾಳಿ? ನಿಮ್ಮದೇ ಸ್ಕೂಲಿನ
ಮಕ್ಕಳಿಗೆ ಆಟವಾಡಲೆಂದು ಒಂದೆರೆಡು ಚೆಂಡು? ಅಲ್ಲ ಸ್ವಾಮೀ, ಊರಾದರೂ ಅಷ್ಟೇ
ರಬ್ಬರಾದರೂ ಅಷ್ಟೇ, ಹಿಗ್ಗುವಿಕೆಗೆ ಒಂದು ಮಿತಿಯುಂಟಲ್ಲವಾ? ಇರುವ ಒಂದು ಬೆಂಗಳೂರನ್ನೇ ಎಷ್ಟು ಅಂತ ಹಿಗ್ಗಿಸುವದು? ದೂರದ ಗುಲ್ಬರ್ಗ, ರಾಯಚೂರು,
ಹುಬ್ಬಳ್ಳಿಯ ಹುಡುಗನಿಗೆ ತಾನು ಕಲಿತ ವಿದ್ಯೆಗೆ ತಕ್ಕಂತೆ ತನ್ನೂರಿನಲ್ಲೇ ಕೆಲಸ
ಸಿಗುವದಾದರೆ ಬೆಂಗಳೂರಿಗಾದರೂ ಯಾಕೆ ಬಂದಾನು? ನಿಮ್ಮ ಜೋಳಿಗೆಯಲ್ಲಿ ಇದಕ್ಕೇನಾದರೂ ಜಾಗವುಂಟೋ? ಬಹುಶಃ ಇಂಥವೇ
ತಕರಾರುಗಳಿಗೆ ನಮ್ಮ ಪಕ್ಷಗಳಲ್ಲಿ ಉತ್ತರವಿಲ್ಲ. ಅಷ್ಟರಮಟ್ಟಿಗೆ ಅವು ಕೆಟ್ಟು ಹೋದಂತಿವೆ.
ತಕರಾರುಗಳಿಗೆ ನಮ್ಮ ಪಕ್ಷಗಳಲ್ಲಿ ಉತ್ತರವಿಲ್ಲ. ಅಷ್ಟರಮಟ್ಟಿಗೆ ಅವು ಕೆಟ್ಟು ಹೋದಂತಿವೆ.
ಇಂಥವರ ಮಧ್ಯೆ ಊರಿನ ಚುನಾವಣಾ ತಮಾಷೆ ನೆನಪಾಗುತ್ತಿದೆ. ಊರಲ್ಲಿ ಮುನ್ಸಿಪಾಲ್ಟಿ ಅಥವಾ
ವಿಧಾನಸಭಾ ಚುನಾವಣೆಯಿರಲಿ, ಘೋಷಣೆಯಾಗುತ್ತಿದ್ದಂತೆ ಒಬ್ಬ ಆಸಾಮಿ ತಪ್ಪದೇ
ಸ್ಪರ್ಧೆಗೆ ನಿಲ್ಲುತ್ತಿದ್ದ. ಕೇವಲ ನಾಲ್ಕಡಿ ಎತ್ತರವಿದ್ದ ಆತ ಸ್ವತಂತ್ರ
ಅಭ್ಯರ್ಥಿಯಾಗಿರುತ್ತಿದ್ದ. ಹಿಂದೆಮುಂದೆ ಹಿಂಬಾಲಕರನ್ನು ಕಟ್ಟಿಕೊಂಡು ಓಡಾಡುವ ಶಕ್ತಿ ಇರದ ಈ
ನಮ್ಮ ಆಸಾಮಿ ಧೋತರ ಕಟ್ಟಿಕೊಂಡು ಒಬ್ಬನೇ ಪ್ರಚಾರ ಮಾಡುತ್ತಿದ್ದ. ರಾತ್ರಿಯಾದರೆ ಸಾಕು, ತನ್ನ ಹೆಸರನ್ನು ಕೊರೆಯಲಾಗಿದ್ದ ತಗಡಿನ ಶೀಟ್ ಮತ್ತು ಇದ್ದಿಲಿನ ಪುಡಿಯನ್ನು ಹಾಕಿದ ನೀರಿನ ಬಕೆಟ್
ಹಿಡಿದುಕೊಂಡು ಒಬ್ಬನೇ ಮುಗುಮ್ಮಾಗಿ ತಿರುಗುತ್ತಿದ್ದ.
ಬೆಳಗೆದ್ದು ನೋಡಿದರೆ ಸುಣ್ಣ ಹೊಡೆಸಿಕೊಂಡ ನೂರಾರು ಮನೆಗಳ
ಗೋಡೆ, ಕಾಂಪೌಂಡುಗಳ
ಮೇಲೆಲ್ಲ ಈ ಪುಣ್ಯಾತ್ಮ ಇದ್ದಿಲು ಪುಡಿಯನ್ನೂ ತಗಡಿನ ಶೀಟನ್ನೂ ಬಳಸಿ ತನ್ನ ಮತವನ್ನು
ಯಾಚಿಸಿರುತ್ತಿದ್ದ! ಎರಡು ಸಲ ನೀರು ಹಾಕಿದರೆ ತೊಳೆದುಹೋಗುತ್ತಿದ್ದ ಈತನ ಪ್ರಚಾರಕಾರ್ಯದ ಬಗ್ಗೆ
ಜನ ಬಿದ್ದುಬಿದ್ದು ನಗುತ್ತಿದ್ದರು. ಕುಶಾಲಿಗೆಂದು ತಮ್ಮತಮ್ಮ ಏರಿಯಾಗಳಿಗೆ ಕರೆಸಿ, ಮಲ್ಲಿಗೆಮಾಲೆ
ಹಾಕುತ್ತಿದ್ದರು. ತನಗೆಂದು ಹಾಕಿದ್ದ ಕುರ್ಚಿಯ ಮೇಲೇರಿ ಸಿಕ್ಕಸಿಕ್ಕಂತೆ ಭಾಷಣ ಮಾಡುತ್ತಿದ್ದ. ಗಾಂಧೀ ಟೋಪಿ ಧರಿಸುತ್ತಿದ್ದ ಈ ನಾಲ್ಕಡಿ
ಆಸಾಮಿ ಭಾಷಣ ಮಾಡುತ್ತಿದ್ದಾಗಲೇ ಯಾರೋ ತಲೆಯ ಮೇಲೆ ನೀರು ಸುರಿದಾಗಲೂ ಧೃತಿಗೆಡದೇ ಮುಂದುವರೆಯುತ್ತಿದ್ದ. ಹುಚ್ಛೆದ್ದ ಜನರ ಕರತಾಡನ.
ಎದುರಾಳಿಗಳು ಈ ಭೂಪನನ್ನ ಕಡೆಗಣಿಸುವಂತಿರಲಿಲ್ಲ. ಎಲ್ಲಿ ಮತಗಳನ್ನು ಒಡೆಯುತ್ತಾನೋ ಎಂಬ
ಭಯದಲ್ಲಿ ಅವರಿಂದ ಧಮ್ಕಿಯೋ ವಿನಂತಿಯೋ ಬರುತ್ತಿತ್ತು. ಅಷ್ಟೇ! ಸರಿಯಾಗಿ ನಾಮಪತ್ರ ಹಿಂತೆಗೆಯುವ ದಿನದಂದು
ನಾಮಪತ್ರ ಹಿಂತೆಗೆದುಕೊಳ್ಳುತ್ತಿದ್ದ. ಮರುದಿನ ಯಥಾಪ್ರಕಾರ
ಮಾರ್ಕೆಟ್ಟಿನ ಜನಜಂಗುಳಿಯ ಮಧ್ಯೆ ತನ್ನದೊಂದು ಛತ್ರಿಯನ್ನು
ತಲೆಕೆಳಗಾಗಿ ಹರವಿ, ಅದರಲ್ಲೊಂದಿಷ್ಟು ಪಾಕೀಟುಗಳನ್ನು ಇಟ್ಟುಕೊಂಡು ಎಂದಿನಂತೆ ಕೂಗು
ಹಾಕುತ್ತಿದ್ದ:
'ತಗೋರೀ, ತಗೋರೀ, ತಿಗಣೆಪುಡಿ, ಜಿರಳೆಪುಡಿ, ಇಲಿ ಪಾಶಾಣ..'
ಹೀಗೆ ತನ್ನ ಅಸಡ್ಡಾಳ ವರ್ತನೆಗಳಿಂದ ಕಂಗೊಳಿಸುತ್ತಲೇ ನಮ್ಮಂಥ ಅಬ್ಬೇಪಾರಿಗಳಿಗೆ ಆತ ತೋರಿಸಿಕೊಟ್ಟಿದ್ದು ಪ್ರಜಾಪ್ರಭುತ್ವದ ಸೊಬಗು ಮತ್ತು ಶಕ್ತಿಗಳನ್ನು ಮಾತ್ರ. ಚುನಾವಣೆ ಎಂಬುದು ಇಂಥ ತಮಾಷೆಗಳಿಂದ ಹಿಡಿದು ಇವತ್ತಿನ ಪುಕ್ಕಟೆ
ಜಾತ್ರೆಯವರೆಗೂ ತೇಲಿ ಬಂದಿದೆ. ಇಲ್ಲೀಗ ಬಹುತೇಕರು ತಮ್ಮತಮ್ಮ ಜಾತಿ-ಧರ್ಮದ ಸಮೇತ
ಒಂದಿಲ್ಲೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿರುವಾಗ ದೇಶದ ಜನತೆ ಒಂದು ನದಿಯಂತೆ
ಯೋಚಿಸಬೇಕಿದೆ. ನದಿಯಂತೆ ವರ್ತಿಸಬೇಕಿದೆ. ಹೀಗಿರುವಾಗ, ಸಂದರ್ಭಕ್ಕೆ ಒಪ್ಪುತ್ತದೋ ಬಿಡುತ್ತದೋ, ಹಳೆಯ ಕವಿತೆಯೊಂದನ್ನು ನಿಮಗೆ ತೋರಿಸಬೇಕೆನಿಸುತ್ತಿದೆ:
ಎಲ್ಲೋ ಬೆಟ್ಟದ ನೆಲ್ಲಿಕಾಯಿ ಬುಡದಲ್ಲಿ
ಹುಟ್ಟುವ ನದಿಗೆ ಭಾಷೆ ಬಾರದು.
ತೊದಲುತ್ತಲೇ ಇಳಿಜಾರಿನಲ್ಲಿ
ಧುಮುಕುವ
ಜಲಪಾತಕ್ಕೆ ಹದಿಹರೆಯದ ಗುಂಗು.
ಭೋರ್ಗರೆದು ಪ್ರಪಾತಕ್ಕಿಳಿದ ಮೇಲೆ
ಕಂಡಿದ್ದೇನು:
ಯೌವನದ ಶಾಂತ ಮನಸೇ?
ಮಿಥುನ ತಂದಿಟ್ಟ ನಿಷ್ಕ್ರೀಯತೆಯೇ?
ಅಂಕುಡೊಂಕಾಗಿ ಅತ್ತಿಂದಿತ್ತ
ಹರಿದಾಡುವ
ನದಿಗೆ ಗೊತ್ತು ಗುರಿಯಿಲ್ಲ
-ಅಂತ ಹೇಳಿದವರೇ ಇಲ್ಲಿ
ಅವಶೇಷವಾದರು.
ಮುಠ್ಠಾಳರಾ, ನದಿ ಯಾವಾಗಲೂ ಒಂದು
ಅಗೋಚರ ಸೆಳೆತಕ್ಕಾಗಿ ನಡೆಯುತ್ತಲೇ ಇರುತ್ತದೆ;
ಒಂದೋ ಆಕಾಶದಡೆಗೆ ಅಥವಾ ಸಾಗರದೆಡೆಗೆ.-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 11.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
2 comments:
ನಮ್ಮ ಮತದಾರರಿಗೆ ಹಾಗು ಮತಯಾಚಕರಿಗೆ ಎಚ್ಚರಿಕೆಯ ಪಾಠ ಹೇಳಿದ್ದೀರಿ, ರಾಜೋ. ಆದರೆ ರಾಜಕೀಯವೇ ಒಂದು ಉದ್ಯಮವಾಗಿ ಬೆಳೆಯಹತ್ತಿದಾಗ, ಗ್ರಾಹಕರು ಚೌಕಾಶಿ ಮಾಡದೆ ಬಿಟ್ಟಾರೆಯೆ? ನನಗೆ ನೆನಪಿರುವ ಮಟ್ಟಿಗೆ, ವ್ಹಿ.ಪಿ.ಸಿಂಗರು ಚುನಾವಣೆಯ ಸಮಯದಲ್ಲಿ ಉತ್ತರಪ್ರದೇಶದ ಯಾವುದೋ ಒಬ್ಬ ಮೌಲವಿಯ ಹತ್ತಿರ ಓಡಿ ಹೋಗಿ, ಅವನಿಂದ ಒಂದು ಫತ್ವಾ ಹೊರಡಿಸಿದ್ದರು. ಅದು ನಮ್ಮ ಚುನಾವಣೆಗಳ ಮೊದಲ ಜಾಹೀರು communalisation ಇರಬಹುದು.
ಸುನಾಥ ಸರ್,
ರಾಜಕೀಯ ಒಂದು ಉದ್ಯಮವಾಗುತ್ತಿರುವ ಹೊತ್ತಿನಲ್ಲಿ ಮತದಾರ ಗ್ರಾಹಕನಾಗುತ್ತಿರುವ ಮತ್ತು ಚೌಕಾಶಿಗಿಳಿಯುತ್ತಿದ್ದಾನೆ ಅಂತನ್ನುವ ನಿಮ್ಮ ಮಾತು ಸಕಾಲಿಕವಾಗಿದೆ. ಬಹುಶಃ ಈ ರೀತಿಯ ಬೆಳವಣಿಗೆ ಅಪಾಯಕಾರಿ ಮತ್ತು ಅಧೋಗತಿಯ ಸಂಕೇತವೆಂದೇ ನನ್ನ ಭಾವನೆ.
ಧನ್ಯವಾದಗಳು,
Post a Comment