'ಟ್ರಿಣ್.. ಟ್ರಿಣ್..'
ಜೇಬಿನಲ್ಲಿದ್ದ ನನ್ನ ಮೊಬೈಲ್
ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ ರಿಂಗ್ ಟೋನುಗಳು
ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾಲಿಡುತ್ತಿದ್ದ ಕಾಲ. ನಾವಂತೂ ಬರಪೀಡಿತ
ಪ್ರದೇಶದ ದನಗಳು ಹಸಿರಿನ ಹುಲ್ಲುಗಾವಲು ಪ್ರವೇಶಿಸುವಂತೆ ಶನಿವಾರದ
ಸಂಜೆಯಾಗುತ್ತಿದ್ದಂತೆಯೇ ಎಂಜಿ ರೋಡಿನತ್ತ ಧಾವಿಸುತ್ತಿದ್ದೆವು.
ಸುಳ್ಳುಸುಳ್ಳೇ ಇಲ್ಲಿಂದಲ್ಲಿಗೆ
ಅಲ್ಲಿಂದಿಲ್ಲಿಗೆ ಎಂಬಂತೆ ಬ್ರಿಗೇಡ್ ರೋಡಿನ ಇಕ್ಕಟ್ಟುಗಳಲ್ಲಿ ತಿರುಗಾಡುತ್ತಿದ್ದೆವು. ಹಾಗೆ
ನಡೆಯುವಾಗ ಯಾವುದಾದರೂ ಕ್ಷಣದಲ್ಲಿ ಪಕ್ಕದಲ್ಲೇ ಲಲನೆಯೊಬ್ಬಳಿಂದ ಬಳುಕಿ ಬೀಳಬಹುದಾದ ದಿವ್ಯ
ಪರಿಮಳದ ಪ್ರೋಕ್ಷಣೆಗಾಗಿ ಶತಪಥ ಹಾಕುತ್ತಲಿರುತ್ತಿದ್ದೆವು. ಆವತ್ತು ಸರಿಯಾದ ಅಂಥದೊಂದು
ಸಂಜೆ ವೇಳೆಯಲ್ಲೇ ನನ್ನ ಮೊಬೈಲು ಕರ್ಕಶವಾಗಿ ರಿಂಗಾಗಿತ್ತು.
'ಟ್ರಿಣ್.. ಟ್ರಿಣ್..'
ನೋಕಿಯಾ ಎಂಬ ಒಂಟಿಕೊಂಬಿನ ಮೊಬೈಲು ಹಿಡಿದುಕೊಂಡವನಿಗೆ ಪರದೆಯಲ್ಲಿ ಊರಿನ ಎಸ್ಟೀಡಿ
ಕೋಡಿನ ಯಾವುದೋ ನಂಬರ್ ಗೋಚರಿಸಿತ್ತು. 'ಹಲೋ' ಅನ್ನುತ್ತಿದ್ದಂತೆಯೇ
ಆ ಕಡೆಯ ವ್ಯಕ್ತಿ
ಗಂಭೀರವಾಗಿ ಮಾತನಾಡತೊಡಗಿದ್ದ. ನನಗೋ ಆತನ ಬಗ್ಗೆ ಗೊತ್ತಿರಲಿಲ್ಲ. ಆತ
ಮಾತ್ರ ಲಕ್ಷಣವಾಗಿ ನನ್ನ
ಹೆಸರು, ಕುಲ ಗೋತ್ರ ಹೇಳುತ್ತ, ಒಂದಿಷ್ಟು ಖಾಸಗಿ ವಿವರಗಳನ್ನು
ಜಾಲಾಡಿ, ಅಸಲಿಗೆ
ಮಾತನಾಡುತ್ತಿರುವದು ನಾನೇ ಹೌದೋ ಅಲ್ಲವೋ ಅಂತ ಖಾತ್ರಿ ಪಡಿಸಿಕೊಂಡಿದ್ದ.
ಹಾಗೆ ಅಷ್ಟೊತ್ತೂ
ಮಾತನಾಡಿದ್ದು ನಾನೇ ಅಂತ ಯಾವಾಗ ಆತನಿಗೆ ಖಾತ್ರಿಯಾಯಿತೋ, ಇದ್ದಕ್ಕಿದ್ದಂತೆ
ಆಸಾಮಿಯ ವರಸೆಯೇ
ಬದಲಾಗಿತ್ತು.
"ಲೇ.. ಯಾರು ಅಂತ
ಗೊತ್ತಾತೇನಲೇ?"
'ಸಾರೀ, ಗೊತ್ತಾಗಲಿಲ್ಲ, ಯಾರು ಹೇಳಿ.'
"ಅಲೆಲೆಲೇ ಮಗನ, ಬೆಂಗಳೂರಿಗೆ ಹೋಗಿ
ಭಾಷಾ ಜೊತಿ ನೀನೂ ಹಾಳಾಗಿಯಲ್ಲಲೇ.. ಅಲ್ಲಾ,
ನನ್ನ ದನಿನೂ ಗೊತ್ತಾಗಿಲ್ಲೇನಲೇ, ನೋಡ ನೋಡ.. ಯಾನಮೂನಿ ಗೆಳೆತನಾ ಉಳಿಸಿಕೊಂಡೀ
ನೋಡಲೇ.." ಅಂತೆಲ್ಲ ನನ್ನನ್ನು ಹಿಗ್ಗಾಮುಗ್ಗಾ
ಹಂಗಿಸತೊಡಗಿದ್ದ.
ಒಮ್ಮೊಮ್ಮೆ ಹೀಗೆಲ್ಲ ಆಗುವದುಂಟು. ಬಾಲ್ಯದ ಹೈಸ್ಕೂಲಿನ ಗೆಳೆಯನಿಗೆ ಹೇಗೋ ನಮ್ಮ
ನಂಬರ್ ಸಿಕ್ಕಿರುತ್ತದೆ. ಅಲ್ಲಿಯವರೆಗೂ ಅವರ ಜೊತೆ ಫೋನಿನಲ್ಲಿ ಮಾತನಾಡುವದು ಹಾಗಿರಲಿ,
ಮುಖ ಕೂಡ ನೋಡದೇ ಹದಿನೈದಿಪ್ಪತ್ತು ವರುಷಗಳಾಗಿರುತ್ತವೆ. ಇಲ್ಲಿ ಯಾವುದೋ
ಕ್ಲೈಂಟ್ ಮೀಟಿಂಗ್ ನಲ್ಲಿರುವಾಗ ಫೋನ್ ರಿಂಗಾಗುತ್ತದೆ. 'ನಾನು ಯಾರು ಹೇಳಲೇ
ನೋಡೂನು?' ಅಂತೆಲ್ಲ ಸವಾಲು ಹಾಕುತ್ತಾರೆ. ಅವರಿಗೇನೋ ಸರ್ಪ್ರೈಸ್ ಕೊಡುವ ಉಮೇದಿ.
ಆದರೆ ಈ ಕಡೆ ಕೂತವರ ಪರಿಸ್ಥಿತಿ? ಅದು ದೇವರಿಗೇ ಪ್ರೀತಿ. ಹಾಗಾದಲೆಲ್ಲ ಆ ಕಡೆ ಇದ್ದವರು
ಏನೇ ತಿದಿಯೊತ್ತಿದರೂ, ಅಬ್ಬರಿಸಿ ಬೊಬ್ಬಿಟ್ಟರೂ ಈ ಕಡೆ ಇದ್ದವರು ಪ್ಯಾಲಿಯಂತೆ 'ಹೂಂ, ಹೂಂ'
ಅಂತಿರಬೇಕು. ಅದೇ ಚೆಂದ ಮತ್ತು ಅದೇ ನ್ಯಾಯ!
ಹಾಗಂತ ಆವತ್ತು ಮೀಟಿಂಗ್ ಅಂತೇನೂ ಇರಲಿಲ್ಲ. ಹೇಗೋ ಜಾಲಿಯಾಗಿ
ತಿರುಗಾಡಿಕೊಂಡಿದ್ದ ಬ್ರಿಗೇಡ್ ರೋಡಿನಲ್ಲಿ ಹಾಗೆ ನನ್ನ ಮೊಬೈಲಿಗೆ ಕರೆಮಾಡಿ ತೊಡೆ
ತಟ್ಟಿದವನ ಹೆಸರು ಮಾಡಿಮನಿ ಪಕ್ಯಾ ಅಲಿಯಾಸ್ ಮಹಡಿಮನೆ ಪ್ರಕಾಶ! ಒಂದು
ಕಾಲದಲ್ಲಿ ಬಾಲ್ಯದ ಗೆಳೆಯ. ನಾವಿಬ್ಬರೂ ಒಂದರಿಂದ ಹತ್ತನೇ ಕ್ಲಾಸಿನವರೆಗೂ ಒಟ್ಟಿಗೇ
ಓದಿದವರು. ಹೈಸ್ಕೂಲು ಮುಗಿಸಿದ ಮೇಲೆ ನಮ್ಮಿಬ್ಬರ ದಾರಿಗಳು ಬೇರೆಯಾಗಿದ್ದರಿಂದ ಕಾಲೇಜುಗಳು
ಬೇರೆಯಾಗಿ, ಮುಂದೆ ಆತನ ತಂದೆಗೆ ದಾವಣಗೆರೆಗೆ ವರ್ಗವಾಗಿ ಕ್ರಮೇಣ ನಮ್ಮಿಬ್ಬರ ಭೇಟಿ
ಕೂಡ ಅಪರೂಪವಾಗಿಬಿಟ್ಟಿತ್ತು. ನಾನು ಊರಲ್ಲಿರುವವರೆಗೂ ಆಗೊಮ್ಮೆ ಈಗೊಮ್ಮೆ ಆತನ ಸುದ್ದಿ
ಗೊತ್ತಾಗುತ್ತಿತ್ತು. ಅದು ಬಿಟ್ಟರೆ ಅಸಾಮಿಯ ದರುಶನವೂ ಆಗಿದ್ದು ಕಾಣೆ.
ಇಂತಿಪ್ಪ ಪ್ರಕಾಶ ಅಲಿಯಾಸ್ ಪಕ್ಯಾ ದಿಢೀರ್ ಅಂತ ಬ್ರಿಗೇಡ್ ರೋಡಿನಲ್ಲಿ ಮೊಬೈಲ್ ಮೂಲಕ
ಉದ್ಭವವಾಗಿಬಿಟ್ಟಿದ್ದ. "ಮುಂದಿನ ಶನಿವಾರ
ನನ್ನ ಮದುವಿಲೇಪಾ. ಅದ ಗದುಗಿನ್ಯಾಗ ಮಾಡ್ಕೋಳಾಕ ಹತ್ತೇನಿ. ಮಗನೇ,
ನೀನಂತೂ ಬರಾಕ ಬೇಕು ನೋಡಪಾ.." ಅಂತ
ಹಳೆಯ ಪ್ರೀತಿಯಿಂದ ಆಹ್ವಾನಿಸಿದ್ದ. ತಮಾಷೆಯೆಂದರೆ, ಈತನ ಮದುವೆ ದಿನವೇ ನಾನು ಗದುಗಿನಲ್ಲಿ
ನನ್ನ ಇನ್ನೊಬ್ಬ ಗೆಳೆಯನ ತಂಗಿ ಮದುವೆಗೆ ಹೋಗಲೇಬೇಕಿತ್ತು. ಹೀಗಾಗಿ ಅದರೊಟ್ಟಿಗೇ ಈ
ಪುಣ್ಯಾತ್ಮನ ಮದುವೆಗೂ ಹೋಗಿ ನಾಲ್ಕು ಅಕ್ಕಿಕಾಳು ಉದುರಿಸಿ ಬಂದರಾಯಿತು ಅಂದುಕೊಂಡೆ.
ದಿನಗಳು ಉರುಳುತ್ತಿದ್ದವು. ಮುಂದಿನ ಶನಿವಾರವೂ ಬಂತು. ನಿರ್ಧರಿಸಿದಂತೆ ಗದುಗಿಗೆ
ಹೋದೆ.
ಮೊತ್ತಮೊದಲಿಗೆ ಗೆಳೆಯನ ತಂಗಿ ಮದುವೆ ಮಾಡುವ
ಅಂದುಕೊಂಡು ಅಲ್ಲಿನ ಕಲ್ಯಾಣಮಂಟಪಕ್ಕೆ
ಕಾಲಿಟ್ಟಿದ್ದೆ. ಅಲ್ಲಿ ನೋಡಿದರೆ ನನ್ನ ಹಳೆಯ
ಗೆಳೆಯ, ಗೆಳತಿಯರ ದಂಡೇ ಇದ್ದಂತಿತ್ತು. ಖುಷಿಯೆನಿಸಿತ್ತು.
ಎಲ್ಲರಿಗೂ ಹಾಯ್-ಬಾಯ್ ವಿಶ್
ಮಾಡುತ್ತ ಹೋದವನಿಗೆ ಎದುರಿಗೆ ಕಂಡಿದ್ದು ಗೆಳೆಯನ ತಂಗಿ. ಅವಳ
ಪಕ್ಕ ನಮ್ಮ ಪಕ್ಯಾ!
ಹೊಗ್ಗೋ ಶಿವನೇ.. ಅನ್ನುತ್ತ ಇಬ್ಬರ ಮೇಲೂ ಅಕ್ಕಿಕಾಳು ಹಾಕುತ್ತ ಅಭ್ಯಾಸಬಲದಿಂದ
ಕೈಮುಗಿದು
ಬಿಟ್ಟಿದ್ದೆ! ಅದನ್ನು ನೋಡಿದ ನವ ವಧೂವರರು ಮುಸಿಮುಸಿ ನಕ್ಕಿದ್ದರು.
ಅಂತೂ ಇಂತೂ ನಮ್ಮ ಮಾಡಿಮನಿ ಪಕ್ಯಾ ಮದುವೆ ಆಗಿದ್ದ. ದಾವಣಗೆರೆಯಲ್ಲಿ ದೊಡ್ಡದೊಂದು
ಬಟ್ಟೆ ಶೋರೂಮ್ ಇಟ್ಟಿದ್ದಾನಂತೆ. ಅಲ್ಲೂ ಒಂದು ಮಹಡಿಮನೆ ಕಟ್ಟಿಸಿದ್ದಾನಂತೆ. ಹಾಗಂತೆ
ಹೀಗಂತೆ. ಇಂಥವೇ ವಿಷಯಗಳಿಂದ ಕೂಡಿದ ಸಂಜೆಹೊತ್ತಿನ ಮಾತುಕತೆ ನಮ್ಮ ಹಳೆಯ
ನೆನಪುಗಳನ್ನೂ ಬಿತ್ತರಿಸುತ್ತಿತ್ತು. ಕಲ್ಯಾಣಮಂಟಪದ ಮಧ್ಯೆ ಬರೇ ಹಳೆಯ ಗೆಳೆಯರ ಮಧ್ಯೆ
ಪಕ್ಯಾ ಕೂಡ ನವವಧುವಿನೊಂದಿಗೆ ಬಿಡುವು ಮಾಡಿಕೊಂಡು ಕೂತಿದ್ದ. ಈ ಜೋಡಿಗೆ ನಾವೆಲ್ಲ ಬಲು
ಕಾಡಿದ್ದೆವು. ಎರಡು ಸ್ಟ್ರಾಗಳನ್ನು ಗಂಟು ಹಾಕಿ ಪೆಪ್ಸಿ ಕುಡಿಯಿರೆಂದು ಕಾಡಿದೆವು. ಅದು
ಆಗದಿದ್ದಾಗ ಉಪ್ಪು ಸುರಿದಿದ್ದ
ಎಳೆನೀರು ಕುಡಿಸಿ ಕಾಡಿದೆವು. ಅದಾದ ಮೇಲೆ
ಒಂದೇ ಜಿಲೇಬಿಯನ್ನು ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ದಾಟಿಸಿದೆವು. ಅದೇ
ಹುಮ್ಮಸ್ಸಿನಲ್ಲಿ ಸುತ್ತಮುತ್ತ ಹಿರಿಯರು ಯಾರೂ ಇಲ್ಲ ಅಂತ ಒಂದು ಏಲಕ್ಕಿಯನ್ನೂ ಒಬ್ಬರ
ಬಾಯಿಯಿಂದ ಇನ್ನೊಬ್ಬರ ಬಾಯಿಗೆ ದಾಟಿಸಿದೆವು! ವಧುವರರಿಬ್ಬರೂ ರೋಮಾಂಚನದಿಂದ ಆಟವಾಡಿದ್ದರು.
ಇನ್ನೇನು ಮದುವೆ ಸಂಭ್ರಮದ ಹಂತ ಮುಗಿದು ಕಾಲವೆಂಬುದು ಇನ್ನೊಂದು ಮಜಲಿಗೆ ಹೊರಳುತ್ತಿತ್ತು.
ಅಷ್ಟೊತ್ತಿಗೆ ಗಂಡಿನ ಕಡೆಯವರು ಕರೆಯುತ್ತಿದ್ದಾರೆ ಅಂತ ಮಾಡಿಮನಿ ಪಕ್ಯಾ ತನ್ನ
ನವವಧುವಿನೊಂದಿಗೆ ತನ್ನ ಮದುವೆ ದಿರಿಸನ್ನೂ ಸಂಭಾಳಿಸುತ್ತ ಎದ್ದುಹೋದ.
ಇದ್ದಕ್ಕಿದ್ದಂತೆ ನಮ್ಮ ಪಟಾಲಂ ಮಧ್ಯೆ ಸಣ್ಣದಾಗಿ ಗುಸುಗುಸು ಶುರುವಾಗತೊಡಗಿತು. ಅದು
ಮದುವೆ ಮನೆಯಲ್ಲಿ ಮಾಡಬಹುದಾದ ಅಸಲಿ ಛತ್ರಿ ಕೆಲಸದ ಬಗ್ಗೆ ನಡೆಯುತ್ತಿದ್ದ ಗುಸುಗುಸು.
'ಇದ್ದ ನಾಲ್ಕು ಜನರಲ್ಲಿ ಒಬ್ಬ ಹಾಳಾಗಿ ಊರು ಬಿಟ್ಟ' ಎಂಬಂತೆ ಗೆಳೆಯರ ಪೈಕಿ ಮೊದಲಿಗೆ ಊರು
ಬಿಟ್ಟಿದ್ದು ನಾನೇ ಆಗಿದ್ದರಿಂದ ಇಂಥದೊಂದು ಛತ್ರಿ ಕೆಲಸಕ್ಕೆ ನಾನೇ ಅದ್ಭುತ ಐಡಿಯಾ
ಕೊಡಬಹುದೆಂದು ಇಡೀ ಪಟಾಲಂ ನನ್ನ ಕಡೆ ನೋಡತೊಡಗಿತ್ತು.
ಇಷ್ಟಕ್ಕೂ ಮದುವೆ ಗಂಡಿನ ಮೊದಲ ರಾತ್ರಿಗೆ ಆತನ ಗೆಳೆಯರು ಏನೇನೆಲ್ಲ ಭಾನಗಡಿ
ಮಾಡಬಹುದು? ಪ್ರಸ್ತದ ಕೋಣೆಯ ಮಂಚದ ಹಾಸಿಗೆ ಕೆಳಗೆ ಸುಟ್ಟ ಹಪ್ಪಳಗಳನ್ನು ಇರಿಸುವದು ನಮ್ಮ
ಪಾಲಿಗೆ ಹಳಿಸಿಹೋದ ಐಡಿಯಾ ಆಗಿತ್ತು. ಹಿಂದೊಮ್ಮೆ ಮತ್ತೊಬ್ಬ ಗೆಳೆಯನ ಮೊದಲರಾತ್ರಿಗೆ ಮಂಚದ ಮೇಲೆ
ಮೈಗೆಲ್ಲ ಮೆತ್ತಿಕೊಳ್ಳುವ ಮಿಂಚು ಪೌಡರನ್ನು ಸಿಂಪಡಿಸಿ ಆತನ ಮನೆಯವರಿಂದ ಯದ್ವಾತದ್ವಾ
ಬೈಸಿಕೊಂಡಿದ್ದೆವು. ಹೀಗಾಗಿ ಈ ಸಲ ಅಂಥ ಯಾವುದ್ಯಾವುದೋ ಅಸಡ್ಡಾಳ ಐಡಿಯಾಗಳನ್ನು ಉಪಯೋಗಿಸದೇ
ಪಕ್ಯಾನ ಮೊದಲರಾತ್ರಿಯನ್ನು ಲಕ್ಷಣವಾಗಿ ಹಾಳುಮಾಡುವದೆಂದು ನಿರ್ಧರಿಸಿದೆವು. ಆದರೆ ಏನು, ಹೇಗೆ, ಯಾವಾಗ
ಪಕ್ಯಾನನ್ನು ಬಲಿಹಾಕುವದು ಅಂತೆಲ್ಲ ನಮ್ಮ ಟೀಮ್ ನನ್ನೆಡೆಗೆ
ನೋಡತೊಡಗಿತ್ತು.
ದಿಢೀರಂತ ಐಡಿಯಾ ಬಂತು. ಯಾವತ್ತೋ ಏನೋ ಮಾಡಲು ಹೋಗಿ ಇನ್ನೇನೋ ಕಂಡುಕೊಂಡಿದ್ದ ಐಡಿಯಾ ಈಗ ಕೆಲಸಕ್ಕೆ ಬಂತು. ಥಟ್ಟಂತ ನನ್ನ ಮೊಬೈಲು ಹೊರಗೆಳೆದೆ. ಪಕ್ಕದಲ್ಲಿದ್ದ
ಗೆಳೆಯನೊಬ್ಬನಿಗೆ ಯಾವುದಾದರೂ ಒಂದು ಸಾಲು ಹಾಡಲು ಹೇಳಿ ಆತನ ಹಾಡನ್ನು ಮೊಬೈಲ್
ನಲ್ಲಿ ರೆಕಾರ್ಡ್ ಮಾಡತೊಡಗಿದೆ. ನಂತರ ರೆಕಾರ್ಡ್ ಮಾಡಿದ ಆ ಹಾಡಿನ ತುಣುಕನ್ನು ಆತನದೇ
ಮೊಬೈಲ್ ನಂಬರಿಗೆ ರಿಂಗ್ ಟೋನ್ ಆಗುವಂತೆ ನನ್ನ ಮೊಬೈಲಿನಲ್ಲಿ assign ಮಾಡಿ, ಆತನಿಗೆ
ನನ್ನ ಮೊಬೈಲಿಗೆ ಕರೆ ಮಾಡುವಂತೆ ಸೂಚಿಸಿದೆ. ಆತನ ಕರೆ ನನ್ನ ಮೊಬೈಲಿಗೆ ಬರುತ್ತಲೇ ನನ್ನ
ಮೊಬೈಲಿನಿಂದ ಆತನ ಹಾಡೇ ರಿಂಗ್ ಟೋನ್ ಆಗಿ ಮೊಳಗತೊಡಗಿತ್ತು.
'ನಡೀರಲೇ ಕೆಲಸ ಆತು..' ಅಂತ ಕೆಟ್ಟ ಸಮಾಧಾನದಿಂದ ಕಿರುಚಿದೆ. ನಮ್ಮ
ಹುಡುಗರಿಗೆ ತಳಬುಡ ಗೊತ್ತಾಗಿರಲಿಲ್ಲ. ನಿಧಾನಕ್ಕೆ ಎಲ್ಲರನ್ನೂ ಒಂದೆಡೆ ಮೂಲೆಗೆ ಕರೆತಂದೆ.
ಅಲ್ಲಿದ್ದವರ ಪೈಕಿ ಹುಡುಗಿ ಅಣ್ಣನೂ ನನ್ನ ಚೆಡ್ಡಿದೋಸ್ತನೇ. ಆತನ ಮೊಬೈಲಿನಲ್ಲಿ
ಅಲ್ಲಿದ್ದ ನಾಲ್ಕೈದು ಗೆಳೆಯರಿಗೆ ಅವರವರ ಧ್ವನಿಯಲ್ಲೇ ಒಂದೊಂದು ಸಾಲಿನ ನಾಲ್ಕೈದು
ಹಾಡುಗಳನ್ನು ಹಾಡಿಸಿ ಚೆಡ್ಡಿದೋಸ್ತನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದೆ. ಅವೆಲ್ಲ
ಹಾಡಿನ ತುಣುಕುಗಳಿಗೆ ನಮ್ಮೆಲ್ಲರ ಮೊಬೈಲ್ ನಂಬರಿಗೆ ಹೊಂದುವಂತೆ assign ಮಾಡಿಟ್ಟೆ.
ಅಂದರೆ, ಅಲ್ಲಿದ್ದ ಹುಡುಗಿ ಅಣ್ಣನ ಮೊಬೈಲಿಗೆ ನಮ್ಮೆಲ್ಲರ ಮೊಬೈಲ್ ಸಂಖ್ಯೆಯಿಂದ ಕರೆ
ಮಾಡಿದಾಗ ಒಬ್ಬೊಬ್ಬರ ಕರೆಗೂ ಒಂದೊಂದು ಹಾಡು ಹುಡುಗಿ ಅಣ್ಣನ ಮೊಬೈಲಿನಲ್ಲಿ ರಿಂಗ್
ಟೋನಿನಂತೆ ಮೊಳಗಬೇಕಿತ್ತು!
ಇಷ್ಟಾದರೂ ನಮ್ಮ ಪಟಾಲಮ್ಮಿಗೆ ನನ್ನ ತರಲೆ ಐಡಿಯಾ ಗೊತ್ತಾಗಿರಲಿಲ್ಲ. ಕಾಲ ತಿರುಗುತ್ತಲೇ
ಇತ್ತು. ನಾವೀಗ ಪ್ರಸ್ತದ ವ್ಯವಸ್ಥೆ ಮಾಡಿದ್ದ ಹುಡುಗಿ ಮನೆಯಲ್ಲಿದ್ದೆವು. ಅಂದಚೆಂದವಾಗಿ
ಇನ್ನಿಲ್ಲದ ಪ್ರೀತಿಯಿಂದ ಅಲಂಕರಿಸಿದ್ದ ಕೋಣೆ. ಈಗಷ್ಟೇ ಹೊಸ ಕನಸೊಂದರ ನನಸಿಗೆ ಸಾಕ್ಷಿಯಾಗಲಿರುವ
ಕೋಣೆ. ನಾವು ತಡ ಮಾಡಲಿಲ್ಲ. ಲಗುಬಗೆಯಿಂದ ಹುಡುಗಿ ಅಣ್ಣನ ಮೊಬೈಲನ್ನು ಒಂದು ಸೂಟ್
ಕೇಸಿನಲ್ಲಿ ಹಾಕಿ, ಮುಚ್ಚುವಾಗ ಅಡ್ಡವಾಗಿ ಒಂದು ಬಟ್ಟೆಯನ್ನಿಟ್ಟು ಸೂಟ್ ಕೇಸಿನ ಒಂದು ಬದಿ
ಮಾತ್ರ ಲಾಕ್ ಮಾಡಿದೆವು. ಅದರರ್ಥ: ಯಾರಾದರೂ ಅದರಲ್ಲಿರುವ ಮೊಬೈಲಿಗೆ ಕರೆ ಮಾಡಿದಾಗ
ಸೂಟ್ ಕೇಸಿನಿಂದ ರಿಂಗ್ ಟೋನಿನ ಸದ್ದು ಮೊಳಗುವಂತಿರಬೇಕು. ಆದರೆ ಸದ್ದು ಎಲ್ಲಿಂದ
ಬರುತ್ತಿದೆ ಅಂತ ತಕ್ಷಣಕ್ಕೆ ಯಾರಿಗೂ ಗೊತ್ತಾಗುವಂತಿರಬಾರದು! ಅಷ್ಟಾಯಿತಲ್ಲ? ತಡ ಮಾಡದೇ ಸೂಟ್
ಕೇಸ್ ಪ್ರಸ್ತದ ಕೋಣೆಯಲ್ಲಿದ್ದ ಅಟ್ಟಕ್ಕೇರಿಸಿದೆವು. ಆಮೇಲೆ ಏನೂ ಗೊತ್ತಿಲ್ಲದ ಗಾಂಪರಂತೆ
ಅಲ್ಲಿಂದ ಹೊರಬಿದ್ದೆವು ಮತ್ತು ಸೀದಾ ಅಲ್ಲೇ ಹತ್ತಿರವಿದ್ದ ನಮ್ಮ ಪಟಾಲಂ ಪೈಕಿಯೊಬ್ಬನ ಮನೆ ಹೊಕ್ಕು ಕುಳಿತೆವು.
ಇತ್ತ ಹುಡುಗಿ ಮನೆಯಲ್ಲಿ ತಡರಾತ್ರಿಯ ಚಟುವಟಿಕೆಗಳು ಶುರುವಾಗಿದ್ದವು.
ಯಾವುದ್ಯಾವುದೋ ಆಚರಣೆಗಳು, ಪಾರಂಪರಿಕ ವಿಧಿವಿಧಾನಗಳು ಜರುಗುತ್ತಿದ್ದವು. ಇವೆಲ್ಲ ಸುದ್ದಿಗಳೂ
ಅಲ್ಲಿದ್ದ ನಮ್ಮ ಶಿಷ್ಯನೊಬ್ಬನ ಮೂಲಕ ನಮಗೆ ರವಾನೆಯಾಗುತ್ತಲಿದ್ದವು. ಮುಂದಾಗಬಹುದಾದ ಪ್ರಳಯದ
ನಿರೀಕ್ಷೆಯಲ್ಲಿದ್ದ ನಾವೆಲ್ಲ ಯಾವುದ್ಯಾವುದೋ ತಲೆಕೆಟ್ಟ ಜೋಕುಗಳನ್ನು ಹಾರಿಸುತ್ತ
ಒಬ್ಬರನ್ನೊಬ್ಬರನ್ನು ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಲಿದ್ದೆವು. ಹುಡುಗಿ
ಅಣ್ಣನ ಮೊಬೈಲು ಪ್ರಸ್ತದ ಕೋಣೆಯಲ್ಲಿ ಇನ್ನಿಲ್ಲದ ಕಾತುರದಿಂದ ಉಸಿರಾಡುತ್ತಿತ್ತು. ರಾತ್ರಿ
ಹನ್ನೊಂದೂವರೆಯ ಹೊತ್ತಿಗೆ ಹುಡುಗಿ ಮನೆಯವರೆಲ್ಲ ಕೆಳಗಿನ ಪಡಸಾಲೆಯಲ್ಲಿ ಮಲಗಲು ತಯಾರಿ
ನಡೆಸುತ್ತಿದ್ದಾರೆಂದೂ, ಮನೆಯೀಗ ಶಾಂತವಾಗುತ್ತಿದೆಯೆಂದೂ ಅಲ್ಲಿದ್ದ ನಮ್ಮ ಶಿಷ್ಯ ವರ್ತಮಾನ
ಬಿತ್ತರಿಸಿದ್ದ. ಅದಾದ ಹದಿನೈದು ನಿಮಿಷಕ್ಕೇ ನನ್ನ ಮೊಬೈಲಿಗೆ ಶಿಷ್ಯನ ಮೆಸೇಜೂ ಬಂತು:
"ಪಕ್ಯಾ ಒಳಗ ಹೊಂಟಾನಾ. ಏನು ಮಾಡ್ತೀರೋ ನೋಡ್ರಿ!"
ನಾವು ದಿಗ್ಗನೇ ಎದ್ದು ಕುಳಿತಿದ್ದೆವು. ಮುಂದಿನ ಹದಿನೈದು ನಿಮಿಷಗಳು ಯುಗಗಳಂತೆ
ಭಾಸವಾಗತೊಡಗಿದ್ದವು. ಅಷ್ಟರಲ್ಲಿ ಶಿಷ್ಯನಿಂದ ಮತ್ತೊಂದು ಮೆಸೇಜು ಬಂತು: "ಪ್ರಸ್ತದ
ರೂಮಿನ ಕಿಡಿಕ್ಯಾಗ ಲೈಟ್ ಕಾಣವಲ್ತು. ಪಕ್ಯಾ ಲೈಟ್ ಆಫ್ ಮಾಡ್ಯಾನ ಅಂತ ಅನಸತ್ತ.."
ಸರಿಯಾಗಿ ಅಷ್ಟೊತ್ತಿಗೆ ನನ್ನ ಕಡೆಯಿಂದ ಮೊದಲ ಪ್ರಹಾರ ನಡೆದಿತ್ತು.
ಲಗುಬಗೆಯಿಂದ ಸೂಟ್ ಕೇಸಿನಲ್ಲಿದ್ದ ಗೆಳೆಯನ ಮೊಬೈಲಿಗೆ ಕರೆ ಮಾಡಿದ್ದೆ. ತಗಳ್ರಪ, ಸೂಟ್
ಕೇಸ್ ನೊಳಗಿನಿಂದ ನನ್ನದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿ ನನ್ನದೇ ನಂಬರಿಗೆ assign
ಮಾಡಿಟ್ಟಿದ್ದ ಹಾಡೊಂದು ರಿಂಗ್ ಟೋನಾಗಿ ಉಲಿಯತೊಡಗಿತ್ತು.
'ಬಿದ್ದೆ
ಬಿದ್ದೆ ಬಾತರೂಮಲ್ಲಿ.. ಲವ್ವಲ್ಲಿ ಬಿದ್ದೆ!'
ಪಕ್ಯಾ ಟಣ್ಣನೇ ಮಂಚದ ಮೇಲೆ ಎದ್ದು ಕುಳಿತಿದ್ದ! ಪ್ರಸ್ತದ ಕೋಣೆಯಲ್ಲಿ ಎಲ್ಲಿಂದಲೋ ನನ್ನ
ಹಾಡಿನ ಧ್ವನಿ ಕೇಳಿಬರುತ್ತಲೇ ಅರೇ,ಯಾರಿದು? ಯಾರ ಧ್ವನಿ? ಎಲ್ಲೋ ಕೇಳಿದಂತಿದೆಯಲ್ಲ ಅಂತೆಲ್ಲ ಗರಬಡಿದವನಿಗೆ, ಅದು ನನ್ನದೇ ಧ್ವನಿ ಅಂತ ಗೊತ್ತಾಗುವಷ್ಟರಲ್ಲೇ, ಇಲ್ಲಿಂದ ಮತ್ತೊಂದು
ಪ್ರಹಾರ ನಡೆದಿತ್ತು. ನಾನು ನನ್ನ ಕರೆ ಕತ್ತರಿಸುತ್ತಲೇ ಇನ್ನೊಬ್ಬ ಗೆಳೆಯ
ಸೂಟ್ ಕೇಸಿನಲ್ಲಿದ್ದ ಜಂಗಮವಾಣಿಗೆ ಕರೆಮಾಡಿದ್ದ. ಅದಕ್ಕೂ ಈ ಜಂಗಮವಾಣಿ ತನ್ನದೇ ಆದ ರೀತಿಯಲ್ಲಿ
ಸ್ಪಂದಿಸಿತ್ತು. ಪರಿಣಾಮವಾಗಿ, ಕರೆ ಮಾಡಿದ್ದ ಗೆಳೆಯನ ಧ್ವನಿಯಲ್ಲಿದ್ದ ಮತ್ತೊಂದು ಹಾಡು ರಿಂಗ್
ಟೋನಾಗಿ ಪ್ರಸ್ತದ ಕೋಣೆಯ ಅಟ್ಟದಿಂದ ತೇಲಿ ಬಂದಿತ್ತು.
'ಯಮ್ಮಾ
ಯಮಾ, ಯಮ್ಮಾ ಯಮಾ, ಯೇ ಖೂಬಸೂರತ್ ಸಮಾ..'
ಹಾಡು ಕೇಳಿದ ಪಕ್ಯಾ ಗಾಬರಿಯಾಗಿದ್ದ. ನಮ್ಮೆಲ್ಲರ ಹಿಂದಿನ ಹುಡುಗಾಟಗಳು ಆತನ ಕಿವಿಗೂ
ಬಿದ್ದಿದ್ದರಿಂದ ಈ ನನ್ನ ಮಕ್ಕಳು ಇಲ್ಲೇ ಎಲ್ಲೋ ಪ್ರಸ್ತದ ಕೋಣೆಯ ಕಿಡಕಿಯಾಚೆ
ನಿಂತುಕೊಂಡಿರಬಹುದೇ? ಅಂತೆಲ್ಲ ಯೋಚಿಸತೊಡಗಿದ್ದ. ಅಷ್ಟರಲ್ಲಿ ನಮ್ಮ ಕಡೆಯಿಂದ ಮೂರನೇ ಬಾಣ
ಚಲಾಯಿಸಿದ್ದೆವು. ಪ್ರಸ್ತದ ಕೋಣೆಯ ನಿಶ್ಶಬ್ದ ಪರಿಸರದಲ್ಲೂ ಸಣ್ಣದಾದ ದನಿಯೊಂದು
ಅಬ್ಬರಿಸಿದಂತಿತ್ತು:
'ಏನಲೇ
ಪಕ್ಯಾ! ರಾತ್ರಿ ಹೊತ್ತು ಏನು ನಡಸೀಲೇ? ಎಲ್ಲಾ ಆರಾಮನಲೇ..'
ಈ ಸಲವಂತೂ ಪಕ್ಯಾ ಅಕ್ಷರಶಃ ಕುದ್ದು ಹೋಗಿದ್ದ ಅಂತ ಕಾಣುತ್ತದೆ. ಪ್ರಸ್ತದ ಕೋಣೆಯ ಲೈಟು ಹೊತ್ತಿ ಉರಿಯುತ್ತಿರುವದಾಗಿ ಅಲ್ಲಿದ್ದ ಶಿಷ್ಯ
ವರ್ತಮಾನ ಕೊಟ್ಟ. ನಾವು ಬಿಡಲಿಲ್ಲ. ನಮ್ಮ ಅಂತಿಮ ಬ್ರಹ್ಮಾಸ್ತ್ರ ಬಿಟ್ಟೆವು. ಕೊನೆಯದಾಗಿ
ಉಳಿದಿದ್ದ ಮೊಬೈಲೊಂದರಿಂದ ಕರೆ ಮಾಡಿದೆವು. ಈ ಸಲ ಯಾವನೋ ಒಬ್ಬ ನೆಟ್ಟಗೇ ಹಾಡು ಹಾಡದೇ ಪ್ರೈಮರಿಯ ಪಾಠವೊಂದನ್ನು ಸಾಂಗೋಪಾಂಗವಾಗಿ ಮೊಬೈಲಿನ ಮುಂದೆ ಓದಿದ್ದ. ಅಂತೆಯೇ ನಮ್ಮ ಕರೆಗೆ
ಓಗೊಟ್ಟ ಸೂಟ್ ಕೇಸು ಸದರಿ ಪಾಠವನ್ನು ಯಥಾವತ್ತಾಗಿ ತೆರೆದಿಟ್ಟಿತ್ತು:
'ಢಣಢಣ
ಗಂಟೆ ಬಾರಿಸಿತು. ನಮ್ಮಯ ಶಾಲೆ ತೆರೆಯಿತು. ಪಾಠ ಒಂದು:
ಈತ ಗಣಪ. ಆತ ಈಶ. ಕಮಲಳ ಲಂಗ ಥಳಥಳ!’
ಎಂಬ ಓತಪ್ರೋತದ ಗೆಳೆಯನ
ಪಾಠದ ಸಾಲುಗಳಿಗೆ ತಲೆಕೆಡಿಸಿಕೊಂಡ ಪಕ್ಯಾ ಯಾವುದಕ್ಕೂ ಇರಲಿ ಅಂತ ಸೀದಾ ಪ್ರಸ್ತದ
ಕೋಣೆಯ ಬಾಗಿಲು ತೆರೆದು ಅಪರಾತ್ರಿಯಲ್ಲೇ ಬಾಲ್ಕನಿಗೆ ಬಂದು ನಿಂತಿದ್ದು, ಸುತ್ತೆಲ್ಲ
ನಮಗಾಗಿ ಕಣ್ಣಾಡಿಸುತ್ತಿರುವದು
ನಮಗೆಲ್ಲ ಮುಸುಕುಮುಸುಕಾಗಿ
ಕಾಣಿಸುತ್ತಿತ್ತು. ಅಷ್ಟಾದರೂ ನಾವು ಬಿಟ್ಟೂಬಿಡದೇ ರಾತ್ರಿ ಮೂರು ಗಂಟೆಯವರೆಗೂ ಒಂದರ
ಮೇಲೊಂದು ತಿರುಗಿಸಿ ತಿರುಗಿಸಿ ಬಾಣ ಹೂಡುತ್ತಲೇ ಇದ್ದೆವು: ದನಿಗಳು ಸೂಟ್ ಕೇಸಿನೊಳಗಿಂದ
ಉದ್ಭವಿಸುತ್ತಿವೆ ಅಂತ ಮದುವೆ ಗಂಡಿಗೆ ಗೊತ್ತಾಗುವವರೆಗೂ..
*
ಬೆಳಗಿನ ಒಂಭತ್ತಕ್ಕೆ ನಾವೆಲ್ಲ ಕಣ್ಣುಜ್ಜಿಕೊಂಡು ಚಹಾ ಕುಡಿಯುತ್ತಿದ್ದೆವು. ಹುಡುಗಿ
ಮನೆಯಲ್ಲಿದ್ದ ಶಿಷ್ಯ ನಮ್ಮೆಲ್ಲರನ್ನೂ ತಿಂಡಿಗೆಂದು ಕರೆಯಲು ಬಂದಿದ್ದ. ನಾವು ಸ್ನಾನ ಕೂಡ ಮಾಡದೇ
ಮುಖ ತೊಳೆದುಕೊಂಡು ತಿಂಡಿಗೆಂದು ಅಲ್ಲಿಗೆ ಹೋದಾಗ ಪಕ್ಯಾ ನಮ್ಮನ್ನೆಲ್ಲ ದುರುಗುಟ್ಟುತ್ತ
ಅಟ್ಟಿಸಿಕೊಂಡು ಬಂದಿದ್ದ. ರಾತ್ರಿ ಸರಹೊತ್ತಿನವರೆಗೂ ನಾವು ಆತನನ್ನು ಬಿಡದೇ ಸತಾಯಿಸಿದ್ದೆವು.
ಮೇಲಾಗಿ, ಮನೆಯವರು ಬೆಳಗಿನ ಆರಕ್ಕೇ ಪ್ರಸ್ತದ ಕೋಣೆಯ ಬಾಗಿಲು ತಟ್ಟಿದ್ದರು. ಹೀಗಾಗಿ ಆತನ
ಕಣ್ಣುಗಳು ನಿದ್ದೆಯಿಲ್ಲದೇ ಕೆಂಡದುಂಡೆಗಳಾಗಿದ್ದವು. ನಮ್ಮೆಲ್ಲರನ್ನೂ ಒಂದೇಟಿಗೆ
ಗಬಕ್ಕೆಂದು ಹಿಡಿದುಕೊಂಡು ಅಕ್ಷರಶಃ ಹೊರಗೆ ಅಟ್ಟುತ್ತಲೇ ಅರ್ಧ ಸಿಟ್ಟಿನಿಂದ, ಅರ್ಧ ಹತಾಶೆಯಿಂದ
ಬಡಬಡಿಸಿದ:
"ಲೇ.. ಏನು ಹೊಲಸು ಅದೀರಲೇ.. ನೀವು
ಮನಷ್ಯಾರ ಪೈಕಿ ಅಲ್ಲಲೇ.."
*
ಆವತ್ತಿನಿಂದ ಇವತ್ತಿನವರೆಗೂ ಪಕ್ಯಾ ಎಂಬ ಪ್ರಕಾಶ ನನ್ನೊಂದಿಗೆ ಮಾತನಾಡುವಾಗ ಮೊದಲಿಗೆ ಆತ ಶುರು ಮಾಡುವದೂ ಮತ್ತು
ಕೊನೆಗೊಳಿಸುವದೂ ಒಂದೇ ಮಾತಿನೊಂದಿಗೆ,
'ಲೇ, ನೀನು ಮನಷ್ಯಾರ ಪೈಕಿ
ಅಲ್ಲಲೇ..'
-
ವಿಜಯ ಕರ್ನಾಟಕದ 'ಯುಗಾದಿ ವಿಶೇಷಾಂಕ- 2019' ರಲ್ಲಿ ಪ್ರಕಟಿತ. |