Thursday, July 7, 2011

ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!






ಸುಯ್ಯಂತ ತೇಲಿ ಬರುತ್ತಿದೆ ತಂಗಾಳಿ.
ಸುತ್ತಲೂ ಕಗ್ಗತ್ತಲು.ದೂರದಲ್ಲೆಲ್ಲೋ ಚಂಚಲಲಕ್ಷ್ಮಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆಯಿಡುತ್ತಿರುವಂತೆ ಕೇಳಿಸುತ್ತಿದೆ.
ನಿಜವಾಗಿಯೂ ಅದು ಗೆಜ್ಜೆಯ ನಾದವಾ?ಅಥವಾ ಇನ್ಯಾವುದೋ ಹುಳದ ಸದ್ದಾ?ಅಥವಾ ನನ್ನದೇ ಭ್ರಮೆಯಾ? 
ಥತ್,ಇದೊಂದು ರೌದ್ರನರಕ! ಈ ಜಿರಳೆಗಳು ಮೈಯಲ್ಲಿರುವ ಮೂಳೆಗಳನ್ನೂ ಬಿಡುವುದಿಲ್ಲವೇನೋ.
ಬೆನ್ನಂಚಿನಲ್ಲಿ ಹರಿದಾಡುತ್ತಿರುವ ಹತ್ತಾರು ಜಿರಳೆಗಳನ್ನು ಓಡಿಸುವ ವ್ಯರ್ಥಪ್ರಯತ್ನ ಮಾಡುತ್ತಿದ್ದ ಆ ವಯೋವೃದ್ಧ 
ತನ್ನಷ್ಟಕ್ಕೆ ತಾನೇ ಗೊಣಗಿಗೊಂಡ:
ಕೃಷ್ಣ ಕೃಷ್ಣ..!

***
ಇಲ್ಲಿ ನೋಡಿರಿ:ವೀರವೃದ್ಧ ಮೆಲ್ಲಗೆ ಕದಲುತ್ತಿದ್ದಾನೆ. ಕಳೆದ ಐವತ್ತೆಂಟು ದಿನಗಳಿಂದ ಶರಮಂಚದ ಮೇಲೆ ಜೀವಶ್ಶವವಾಗಿ 
ಮಲಗಿರುವ ಆ ವೃದ್ಧನ ಕಣ್ಣಲ್ಲಿ ಅದ್ಯಾಕೋ ಇವತ್ತು ಬಿಟ್ಟೂ ಬಿಡದಂತೆ ನೀರಿಳಿಯುತ್ತಿದೆ.ಬದುಕೆಂಬ ಸಾಗರದಿಂದ 
ನೆನಪಿನಲೆ ಉಕ್ಕಿ ಬಂತಾ?ಗತಿಸಿಹೋದ ನೂರಿಪ್ಪತ್ತು ವರುಷಗಳ ಲಾಭ ನಷ್ಟದ ಲೆಕ್ಕ ಚುಕ್ತ ಆಯಿತಾ?
ಛೇ,ಏನೆಲ್ಲ ಗಳಿಸಿದೆ;ಎಷ್ಟೆಲ್ಲ ಕಳೆದುಕೊಂಡೆ!

ಜೀವನವಿಡೀ ನೂರಾರು ಅತಿರಥ ಮಹಾರಥರನ್ನು ಅಡ್ಡಡ್ಡ ಮಲಗಿಸಿದ ನನ್ನಂಥ ನನಗೇ ಇವತ್ತು  ಯಕಶ್ಚಿತ್ ಹತ್ತಾರು 
ಜಿರಳೆಗಳು ಬೆನ್ನಲ್ಲಿ ಹರಿದಾಡಿದ್ದಕ್ಕೆ ಕಣ್ಣೀರು ಬಂತೆ?ಅಥವಾ ತೊಡೆ ಸೀಳಿದ ಬಾಣದ ನೋವು ಹಣ್ಣಣ್ಣು ಮಾಡಿತೆ?
ಇಲ್ಲ.ಹಾಗಾಗಲು ಸಾಧ್ಯವೇ ಇಲ್ಲ.

ಈ ಸಾವು,ಈ ನೋವು,ಈ ರಕ್ತ,ಜಿರಳೆ ಬರೀ ನೆಪ.ಇವನ್ನೆಲ್ಲ ನಾನು ಇವತ್ತೇ ಮರೆಯಬಲ್ಲೆ.ಈ ಕ್ಷಣದಿಂದಲೇ ಮಿದುಳ 
ಪುಟದಿಂದ ಅಳಿಸಿ ಹಾಕಬಲ್ಲೆ.ಆದರೆ ನಿನ್ನೆ ಮೊನ್ನೆಯವರೆಗೂ ನನ್ನ ಅಂಗವಸ್ತ್ರದ ಮೇಲೆ ಇನ್ನಿಲ್ಲದ ಮುಗ್ಧತೆಯಿಂದ 
ಉಚ್ಚೆ ಹೊಯ್ಯುತ್ತಿದ್ದ ಪೋರ ದುರ್ಯೋಧನ ಅಷ್ಟೆಲ್ಲ ಜನರೆದುರಿಗೆ ನನ್ನನ್ನು ವಚನ ಭ್ರಷ್ಟನೆಂದು ಜರೆದನಲ್ಲ:
ಅದನ್ನು ಹ್ಯಾಗೆ ಮರೆಯಲಿ?
ಅವನಿಗೇನು ಗೊತ್ತು ಭೀಷ್ಮ ಶಪಥದ ಬಗ್ಗೆ?

ಕುರುಕುಲದ ಉದ್ಧಾರಕ್ಕೆ,ಅದರ ಸುರಕ್ಷತೆಗಾಗಿ ಏನೆಲ್ಲ ನೋಡಬೇಕಾಗಿ ಬಂತು.ಅಪ್ಪನ ಮದುವೆಗಾಗಿ ಹೊಟ್ಟೆಯೊಳಗಿನ 
ಕಾಮ ಬಸಿದಿಟ್ಟೆ.ರಜಸ್ವಲೆಯಾಗಿದ್ದ ಪಾಂಚಾಲಿಯ ವಸ್ತ್ರಾಪಹರಣ ನೋಡಿದೆ;ಕುರುಡನಂತೆ ವರ್ತಿಸಿದೆ.ಇನ್ಯಾರದೋ 
ವಂಶೋದ್ಧಾರಕ್ಕಾಗಿ ಧರ್ಮವನ್ನೇ ಅನೈತಿಕವಾಗಿ ಬಳಸಿದೆ.ಪಾಪದ ಪಾಂಡವರು:ಅವರ ವನವಾಸ,ಅಜ್ಞಾತವಾಸ,ಸಕಲ
ಅವಮಾನಗಳ ಮುಂದೆ ಅಮಾಯಕನಂತೆ ವರ್ತಿಸಿದೆ.
ತಪ್ಪು ತಪ್ಪು.ಘೋರ ತಪ್ಪು!

ಆದರೆ ನಾನು ತಾನೇ ಏನು ಮಾಡಬಲ್ಲವನಾಗಿದ್ದೆ?ಎಲ್ಲವನ್ನೂ ಮರೆತೇನು.ಯಾರೂ ನನ್ನನ್ನು ಹೆದರಿಸಲಾರರು.ಯಾವುದೂ 
ನನ್ನ ಬ್ರಹ್ಮಚರ್ಯದ ಶಪಥಕ್ಕೆ,ಕುರುಕುಲದ ಸುರಕ್ಷತೆಗೆ ಅಡ್ಡಿಯಾಗಲಾರದು.ಆದರೆ ಆ ಕಣ್ಣುಗಳು?
ಅವೆರಡು ಮಿಂಚುನೇತ್ರಗಳನ್ನು ಹ್ಯಾಗೆ ಮರೆಯಲಿ?ಬದುಕಿನ ಮೂರುಮುಕ್ಕಾಲು ಆಯುಸ್ಸನ್ನು ಹಗಲೂ ರಾತ್ರಿ ನನ್ನನ್ನು 
ಭಯಭೀತಗೊಳಿಸಿದ ಆಕೆಯನ್ನು ಮರೆಯೋದುಂಟಾ.ಆಕೆಯ ಕಣ್ಣುಗಳಲ್ಲಿದ್ದ ರೋಷ,ಅವಮಾನ,ಅಭದ್ರತೆಗಳನ್ನು ನನ್ನಂಥ 
ನೂರಾರು ಭೀಷ್ಮರು ಬಂದರೂ ನಿವಾರಿಸಲಾರರು.
ಕ್ಷಮಿಸು ಅಂಬೆ!

ತಮ್ಮಂದಿರರಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರಿಗಾಗಿ ಸ್ವತಃ ನಾನೇ ಹೊತ್ತುಕೊಂಡು ಬಂದ ಮೂವರು ಕನ್ಯೆಯರಲ್ಲಿ 
ಈ ಅಂಬೆಯೂ ಒಬ್ಬಳು.ಆದರೆ ನಾನು ಹಾಗೆ ಅಪಹರಿಸುವ ಮೊದಲೇ ಇನ್ನೊಬ್ಬನ್ಯಾವನನ್ನೋ ಪ್ರೀತಿಸಿದ್ದಳು.
ತುಸು ಅವಸರದ ಹುಡುಗಿ! ಅಂಥ ಅಂಬೆ ನನ್ನ ತಮ್ಮಂದಿರ ಮುಖ ಕೂಡ ನೋಡಲಿಲ್ಲ.ತನ್ನದೇ ಹಳೆಯ ಪ್ರೇಮಿಗಾಗಿ 
ರಚ್ಚೆ ಹಿಡಿದಳು.ಹುಚ್ಚಿಯಾದಳು.ಕೊನೆಕೊನೆಗೆ ಹೆದರಿ ಒದ್ದೆಯಾದ ಗುಬ್ಬಚಿಯೇ ಆಗಿ ಹೋದಳು.

ತೀರ ಕೊನೆಗೆ ಹಳೇ ಪ್ರೇಮಿಯ ಮಿಲನಕ್ಕೆಂದು ನಾನೇ ಅವಳನ್ನು ಕಳಿಸಿ ಕೊಡಬೇಕಾಯಿತು.ಆದರೇನು,ಆಕೆ ಕೆಲವೇ 
ದಿನಗಳಲ್ಲಿ ವಾಪಸು ಬಂದಿದ್ದಳು;ಪ್ರಿಯತಮನ ತಿರಸ್ಕಾರಕ್ಕೆ ಒಳಗಾಗಿ.ಹಾಗೆ ಬಂದವಳ ಕಣ್ಣುಗಳಲ್ಲಿ ನೀರಿರಲಿಲ್ಲ:
ರಕ್ತವಿತ್ತು!
ಅಲ್ಲೀಗ ರೋಷ ಮಡುಗಿತ್ತು.ಸೇಡು ಚಿಮ್ಮುತ್ತಿತ್ತು.ಭರಿಸಲಾಗದ ವೇದನೆ ಮತ್ತು ಬದುಕಿನ ಅಭದ್ರತೆ ಪ್ರತಿಫಲಿಸುತ್ತಿತ್ತು.
ಆವತ್ತೇ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಭಯಗೊಂಡಿದ್ದೆ.ನಾಚಿಕೆಯಿಂದ ತಲೆತಗ್ಗಿಸಿದ್ದೆ.ತೀರ ಕೊನೆಗೊಮ್ಮೆ 
ಆಕೆ,ನೀನೇ ನನ್ನ ಮದುವೆಯಾಗು ಅಂದಾಗ ನನ್ನ ಶಪಥ ನನಗೇ ಷಂಡನಾಗಿ ಕಾಡಿತ್ತು!
ಇವತ್ತು ಮತ್ತೇ ಮತ್ತೇ ಕಾಡುತ್ತಿದೆ.

ಯಾಕೆಂದರೆ ಮೊನ್ನೆ ತಾನೇ ನನ್ನೆದುರು ಯುದ್ಧಕ್ಕೆ ನಿಂತ ಶಿಖಂಡಿಯೆಂಬ ಯೋಧನಲ್ಲಿ ಅಂಬೆಯ ಕಣ್ಣುಗಳನ್ನು ಕಂಡೆ. 
ಅದೇ ರೋಷ.ಅದೇ ಸೇಡು.ನಂಗೊತ್ತಿದೆ,ಈ ಸಲ ಮಾತ್ರ ಈಕೆ ನನ್ನ ಪಾಲಿಗೆ ಯಮನಂತೆ ಕಾಡುತ್ತಾಳೆ.
ಆಕೆ ಅರ್ಜುನನ ಮುಂದೆ ನಿಂತಿರುವುದೇ ಅದಕ್ಕಾಗಿ!

ಇರಲಿ.ಬದುಕಿನುದ್ದಕ್ಕೂ ಲಕ್ಷಾಂತರ ಯೋಧರೊಂದಿಗೆ ಸೆಣಸಿದೆ.ಗೆದ್ದೆ.ಆದರೆ ಇವತ್ತು ನನ್ನೆಲ್ಲ ಭುಜಕೀರ್ತಿಗಳನ್ನು 
ಬದಿಗಿಟ್ಟು ಅತ್ಯಂತ ವಿನಮ್ರನಾಗಿ ನುಡಿಯುತ್ತಿದ್ದೇನೆ: ಅಂಥ ಅಂಬೆಯೆಂಬ ಹೆಂಗಸಿನ ಪರವಾಗಿ ವಾದಿಸಲು ಬಂದ 
ಸ್ವತಃ ಪರಶುರಾಮನಂಥ ಅಪ್ರತಿಮ ವಿಪ್ರೋತ್ತಮನನ್ನೇ ಸೋಲಿಸಿದ ನನಗೆ ಅಂಬೆಯಂಥ ಎಳಸು ಹುಡುಗಿಯ 
ಮುಂದೆ ತಲೆಬಗ್ಗಿಸಿ ಸೋಲೊಪ್ಪಿಕೊಳ್ಳುವದರಲ್ಲಿ ಯಾವ ನಾಚಿಕೆಯೂ ಇಲ್ಲ.
ಆಕೆಯ ಛಲ,ಸಿಟ್ಟು,ಧರ್ಮ,ಸೇಡುಗಳ ಮುಂದೆ ನಾನು ನೀರ್ವಿರ್ಯನಾಗುತ್ತಿದ್ದೇನೆ.
ಇದೆ ಸತ್ಯ.ಪರಮಸತ್ಯ.

ಆವತ್ತಿಗೂ,ಇವತ್ತಿಗೂ,ಯಾವತ್ತಿಗೂ...

***

24 comments:

sunaath said...

RJ,
ಮಹಾಭಾರತವನ್ನು ಮನೋವಿಶ್ಲೇಷಣಾತ್ಮಕವಾಗಿ ನೋಡುತ್ತ, ಶರಶಯ್ಯೆಯ ಮೇಲೆ ಮಲಗಿದ ಭೀಷ್ಮನ ಅಂತರಂಗವನ್ನು ಎಳೆಎಳೆಯಾಗಿ ಪರೀಕ್ಷಿಸಿದ್ದೀರಿ. ಅಭಿನಂದನೆಗಳು.

ಜಲನಯನ said...

ರಾಘವೇಂದ್ರ ಇಷ್ಟ ಆಯ್ತು...ಮಲಗಿರುವಾಗ ಸುಪ್ತಭಾವನೆಗಳು ಸ್ವಪ್ನಗಳಾಗಿ ಕಾಡುತ್ತವಂತೆ...ಇನ್ನು ಛಲದಂಕ ಭೀಷ್ಮರಿಗೆ ಚುಚ್ಚು ಬಾಣಗಳು ಅವರದೇ ವರ-ಇಚ್ಛಾಮರಣವನ್ನೂ ಹಂಗಿಸಿರಬೇಕು...ಅದಕ್ಕೇ ಅಂಬೆಯ ನೆನಪು...ಬಹಳ ಸುಂದರ ಚಿತ್ರಣ.

V.R.BHAT said...

RJ, idondu parakaaya praveshada anubhava allave? chennaagide!

ರಾಘವೇಂದ್ರ ಜೋಶಿ said...

@ ಸುನಾಥ ಸರ್,
ಭೀಷ್ಮರದೂ ಒಂಥರಾ ಊರ್ಮಿಳೆಯ ಪರಿಸ್ಥಿತಿಯಂತೆ ಕಂಡು ಬಂತು.ಯಾರದೋ ತಪ್ಪಿಗೆ,ತಲುಬಿಗೆ ಬಲಿಪಶು ಆದಂತೆ ಕಂಡುಬಂತು.ಭೀಷ್ಮರ ಘನತೆ ನನಗೆ ಯಾವತ್ತಿಗೂ ಅಚ್ಚರಿಯೇ.

ರಾಘವೇಂದ್ರ ಜೋಶಿ said...

@ಜಲನಯನ ಅವರೇ,
ಒಮ್ಮೊಮ್ಮೆ ನಮಗೆ ಬೇಕಾದದ್ದು ಸಿಕ್ಕರೂ ಅದಕ್ಕೆ ಅದರದೇ ಆದ ನಿರರ್ಥಕತೆ ಇರುತ್ತದೆ.ಭೀಷ್ಮರ ಇಚ್ಛಾಮರಣವೂ ಇದಕ್ಕೆ ಹೊರತಾಗಿಲ್ಲವೇನೋ..
ಬ್ಲಾಗಿಗೆ ಸ್ವಾಗತ ಬಯಸುತ್ತೇನೆ.ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!
:-)

ರಾಘವೇಂದ್ರ ಜೋಶಿ said...

@ವಿ.ಆರ್.ಭಟ್ ಅವರೇ,
ಭೀಷ್ಮರ ಬಗ್ಗೆ ಒಂದು ತೆರನಾದ ಆರಾಧನೆ ಭಾವ ಹೊಂದಿದ ಯಾವುದೇ ವ್ಯಕ್ತಿ ಇದೇ ರೀತಿ ಯೋಚಿಸಬಹುದೇನೋ.ನಾವು ಮಾಡಬಹುದಾದದ್ದು ಇಷ್ಟೇ.
ಬರಹ ಇಷ್ಟಪಟ್ಟಿದ್ದು ನೋಡಿ ಖುಷಿಯಾಯ್ತು.ಧನ್ಯವಾದಗಳು. :-)

Rakesh S Joshi said...

ಪರ್ವ ಓದುವಾಗ ನಂಗೆ ಕೆಲವೊಮ್ಮೆ ಹೀಗೆ ಅನಿಸಿದ್ದುಂಟು. ಈಗ ಈ ಲೇಖನ ಓದಿದ ಮೇಲೆ ಅದು ನಿಜವೇನೋ ಅಂತ ಅನಿಸುತ್ತಿದೆ. :-) ಎಂದಿನಂತೆ ನಿಮ್ಮ ಲೇಖನ ಸೂಪರ್ ಸರ್.

ರಾಘವೇಂದ್ರ ಜೋಶಿ said...

@ ರಾಕೇಶ್ ಜೋಶಿಯವರೇ,
'ಪರ್ವ' ಒಂಥರಾ ಗರುಡಗಂಭ ಇದ್ದಂತೆ.
ಪುರಾಣದ ಸಂಗತಿಗಳನ್ನು,ಪಾತ್ರಗಳನ್ನು ಹೀಗೂ ನೋಡಬಹುದು ಎಂದು ಯೋಚಿಸುವಂತೆ ಮಾಡಿದ ಕೃತಿಯದು.ಅದಕ್ಕಾದರೂ ಭೈರಪ್ಪನವರಿಗೆ ಥ್ಯಾಂಕ್ಸ್ ಹೇಳಲೇಬೇಕು.ಅವರನ್ನು ನೆನಪಿಸಿದ್ದಕ್ಕಾಗಿ ನಿಮಗೂ ಥ್ಯಾಂಕ್ಸ್!

armanikanth said...

ಎಷ್ಟ್ ಚೆಂದ ಬರ್ದಿದ್ದೀರಲ್ಲ ಜೋ...
ನಿಮಗೆ ಪ್ರೀತಿ,ಶುಭಾಷಯ.
ಇಂಥ ಲೇಖನಗಳನ್ನು ಕಂಡಾಗ ಕೆಲವೊಮ್ಮೆ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಆಗೋದೂ ಉಂಟು..
ಮಣಿಕಾಂತ್.

Ashwini Dasare said...

no words, really superb!!

ರಾಘವೇಂದ್ರ ಜೋಶಿ said...

@ ಮಣಿಕಾಂತ್,
ಎಂಥ ಮಾತು ಹೇಳಿಬಿಟ್ರಿ ಮಾರಾಯರೇ!
ಇದು ನಿಮ್ಮ ಮುಗ್ಧತೆ ಮತ್ತು ದೊಡ್ಡ ಮನಸ್ಸು-
ಎರಡನ್ನೂ ಬಿಂಬಿಸುತ್ತೆ.. :-)

ರಾಘವೇಂದ್ರ ಜೋಶಿ said...

@ ಅಶ್ವಿನಿಯವರೇ,
ಬರಹ ಮೆಚ್ಚಿ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
ನಿಜ ಹೇಳಬೇಕೆಂದರೆ,ನನಗೇ ನನ್ನ ಬರಹದ ಬಗ್ಗೆ ಅತೃಪ್ತಿಯಿದೆ.ಇನ್ನೂ ಸುಧಾರಿಸಬಹುದಿತ್ತೇನೋ..

Mruthyunjaya Hegde said...

ಬರಹ ಚೆನ್ನಾಗಿದೆ... ಭೀಷ್ಮನ ಮನದ ಹೊಯ್ದಾಟವನ್ನ ಚೆನ್ನಾಗಿ ಚಿತ್ತಿಸಿದ್ದೀರಿ. ಓದುವ ಖುಷಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ ಮೃತ್ಯಂಜಯ ಹೆಗಡೆ ಅವರೇ,
ಪರರಿಗಾಗಿ ಅಷ್ಟೆಲ್ಲ ತ್ಯಾಗ ಮಾಡಿದ ಭೀಷ್ಮ
ಅಂಬೆಗಾಗಿ ಇಷ್ಟೂ ಯೋಚಿಸಬಾರದೇ?
ಖಂಡಿತ ಯೋಚಿಸಿರಬಹುದೆಂದು ನನ್ನ ನಂಬಿಕೆ.
ಕೆಟ್ಟದ್ದಕ್ಕಾಗಿ sorry ಕೇಳುವ ಮನಸ್ಸು ನಮಗೂ ಬರಲಿ
ಮತ್ತು ಅದರಿಂದಾಗುವ ಖುಷಿ ನಮ್ಮನ್ನೂ ತಟ್ಟಲಿ!
:-)
ಧನ್ಯವಾದಗಳು.

channabasaveshwar said...

namasakara ri.... en ri pa, nimma mayyag sakshaat Ambe Haasi Hokka haage barididdiri.. Bahushah... Aa Ambe iddara nimaga thanks kodatiddalu.... nice one. Many of the women in our country and men should learn a lot from this. Respect the women and listen to her heart feelings.. the things which cannot be done by coercion are achieved by Love and patience.

ರಾಘವೇಂದ್ರ ಜೋಶಿ said...

@ ಚನ್ನಬಸವೇಶ್ವರರೇ,
ಬ್ಲಾಗಿಗೆ ಸ್ವಾಗತ.
ಪ್ರೀತಿ,ತಾಳ್ಮೆಯಿಂದ ಎಲ್ಲವನ್ನು ಗೆಲ್ಲಬಹುದು ಎಂಬ
ನಿಮ್ಮ ಮಾತು ಸತ್ಯ.ಬರಹ ಮೆಚ್ಚಿ ಕಮೆಂಟಿಸಿದ್ದಕ್ಕೆ ಖುಷಿ.
:-)

ni said...

IDU TRIAL..SENDING THE COMMENTS SHORTLY

ಬಾಲು said...

ಭೀಷ್ಮನ ಬಗ್ಗೆ ಎಷ್ಟು ಚೆನ್ನಾಗಿ ಮನೋವಿಶ್ಲೇಷಣೆ ಮಾಡಿದ್ದಿರಿ. ನಿಜಕ್ಕೂ ಸೂಪರ್ಬ್. ಮರಣ ಶಯ್ಯೆ ಯಲ್ಲಿ ಇದ್ದಾಗ ಮಾತ್ರ ಇಂತಹ ಆಲೋಚನೆ ಸಾಧ್ಯವೇನೋ.! ತುಂಬಾ ಚೆನ್ನಾಗಿ ಬರೆದಿರುವಿರಿ.

ರಾಘವೇಂದ್ರ ಜೋಶಿ said...

@ ಬಾಲು ಅವರೇ,
ನಿಮ್ಮ ಅಭಿಪ್ರಾಯ ಓದಿ ಸಾಯೋ ಮನುಷ್ಯ
ಸುಳ್ಳು ಹೇಳಲಾರ ಎನ್ನುವ ಮಾತು ಭೀಷ್ಮರ
ವಿಷಯದಲ್ಲಿ ಅಲ್ಲಿಗೆ ಸರಿಹೋದಂತಾಯಿತು.
ಬ್ಲಾಗಿಗೆ ಬಂದಿದ್ದಕ್ಕೆ ಖುಷಿ ಮತ್ತು ಧನ್ಯವಾದ. :-)

Yatheesha G S said...

Joshiavare,

Sorry Kelasada ottadadinda nimma Kanasannu nanninda Kanavarisuvudakke aagiralilla....Eedina biduvu maadikondu odide....Mahaabhaarathada vishleshaneyannu chennagi arthaisiddeeri....Shubhaashayagalu nimage...

Yatish.

shridhar said...

ಜೋಶಿಯವರೇ ..
ಎರಡು ತಿಂಗಳ ಹಿಂದೆ ಊರಿಗೆ ಹೋದಾಗ ಭೀಷ್ಮ್ ಪರ್ವ ಯಕ್ಷಗಾನಕ್ಕೆ ಹೋಗಿದ್ದೆ .. ನಿಮ್ಮ ಲೇಖನವನ್ನು ಓದುತ್ತ ಪರಕಾಯ ಪ್ರವೇಶ ಮಾಡಿದಂತೆ ಅನಿಸತೊಡಗಿತು
ಅಂಬೆಯ ಪಾತ್ರ ಕಣ್ಣ ಮುಂದೆ ಬಂದಿತು.. ಅಂದು ಕೇಳಿದ ಅಂಬೆ , ಭೀಷ್ಮ ಮತ್ತು ಪರಶುರಾಮನ ಮಾತುಗಳು ಮನದಲ್ಲಿ ಮರುಕಳಿಸಿದವು ..
ನಿಜಕ್ಕೂ ಮರಣ ಶಯ್ಯೆಯಲ್ಲಿ ಭೀಷ್ಮರು ಹೀಗೆ ಹೇಳಿಕೊಂಡಿರಬಹುದೇನೋ ... ಅಪೂರ್ವ ಬರಹ ..

ರಾಘವೇಂದ್ರ ಜೋಶಿ said...

@ಯತೀಶ್ ಅವರೇ,
ಧನ್ಯವಾದಗಳು ನಿಮ್ಮ ಪ್ರೀತಿಗೆ.

@ ಶ್ರೀಧರ್ ಅವರಿಗೆ,
ಬ್ಲಾಗಿಗೆ ಭೇಟಿ ಕೊಟ್ಟು ಕಮೆಂಟಿಸಿದ್ದಕ್ಕೆ
ಧನ್ಯವಾದಗಳು.ನನ್ನ ಪುಟ್ಟ ಪ್ರಯತ್ನಕ್ಕೆ
ನಿಮ್ಮ ಅನಿಸಿಕೆ ನೋಡಿ ಖುಷಿಯಾಯ್ತು.
ಮತ್ತೇ ಸಿಗುವ. :-)

Manjunatha Kollegala said...

ಇದು ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ... ಸೊಗಸಾದ ಮನೋಲಹರಿಯನ್ನು ಚಿತ್ರಿಸಿದ್ದೀರಿ

Anonymous said...

@ ಮಂಜುನಾಥರೆ,
ಥ್ಯಾಂಕ್ಸ್. ನಾನೆಲ್ಲೋ ನಿಮಗೆ ಈ ಬರಹ ಇಷ್ಟವಾಗಿರಲಿಕ್ಕಿಲ್ಲ
ಅಂತ ಅಂದುಕೊಂಡಿದ್ದೆ.ಯಾಕಂದರೆ ನನಗೂ ಈ ಲೇಖನದ ಬಗ್ಗೆ ಪೂರ್ತಿಯಾಗಿ ಖುಷಿಯಾಗಿಲ್ಲ. :-)
-ರಾಘವೇಂದ್ರ ಜೋಶಿ