Photo: Internet
ಸರಕಾರಿ ಬಸ್ಸಿಗೆ ವೇಗವಿಲ್ಲ
ಕಿಟಕಿಯಲ್ಲಿ ಗಾಳಿಯಿಲ್ಲ
ಪದಬಂಧದಲ್ಲೂ ಮನಸ್ಸಿಲ್ಲ.
ಸುಂದರಿ ಬಂದು
ಪಕ್ಕದಲ್ಲಿ ಪವಡಿಸಿದ್ದೇ ತಡ;
ಬಸ್ಸಿಗೂ ಮನಸಿಗೂ ನಾಗಾಲೋಟ!
ವೇಗ ಹೆಚ್ಚಿದಂತೆ ಹಾದಿಬದಿಯ
ಕರೆಂಟ್ ತಂತಿಗಳು
ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ:
ಒಂದಕ್ಕೊಂದು ತಬ್ಬಿಕೊಂಡಂತೆ
ಎರಡೂ ಒಂದಾಗಿ ಹೋದಂತೆ.
ವೇಗ ಕಳೆದುಕೊಂಡಾಗ
ಮುಚ್ಚಿಟ್ಟ ಸತ್ಯವೊಂದು ತೋರಿದೆ;
ಮೂರನೇ ತಂತಿಯೊಂದು ಕಂಡಿದೆ!
ರೂಪರೇಖೆಗಳೇ ಬದಲಾಗುವ
ಈ ಹೊತ್ತಿನಲ್ಲಿ ರೂಪಕಗಳ
ರೂಪ ಬದಲಾಗಬೇಕಿದೆ
ರೂಹೂ ಬದಲಾಗಬೇಕಿದೆ.
ಯತಿಗಳು ಒತ್ತುವ ಬಿಸಿಮುದ್ರೆ
ಪೋಸ್ಟ್ ಆಫೀಸಿನ ಕರಿಮುದ್ರೆ
ಭರತನಾಟ್ಯದ ಬೆರಳಮುದ್ರೆ -
ತ್ರಿಭುಜದ ಈ ಮೂರು ಬಿಂದುಗಳಿಗೂ
ಪೈಥಾಗೊರಸ್ ಪ್ರಮೇಯಕ್ಕೂ ಸಂಬಂಧವಿಲ್ಲ
ಆದರೆ ಯಾವತ್ತೋ ಅವಳ
ಹಣೆಗೆ ಒತ್ತಿದ ತುಸುಮುದ್ರೆ
ಮಾತ್ರ ತ್ರಿಭುಜ ಸೀಳಿದ
ರೇಖೆಯಾಗಿ ಮುನ್ನುಗ್ಗಿದೆ;
ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ;
ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ!
ಸದ್ಯ,ಕವಿಯ ಮುಲಾಜಿಗೆ
ಬೀಳುವ ರೂಪಕಗಳನ್ನು
ಇನ್ನೂ ಯಾರೂ ಖರೀದಿಸಿಲ್ಲ.
ಆದರೂ ಒಮ್ಮೊಮ್ಮೆ ರೂಪಕಗಳು
ಹೀಗೂ ಹುಟ್ಟಿ
ಹಾಗೆ ಸತ್ತು ಹೋಗುತ್ತವೆ.
ಕೊನೆಗೆ
ರೂಪ ಅಳಿಯುತ್ತದೆ
ರೇಖೆ ಉಳಿಯುತ್ತದೆ..
***
25 comments:
ಮನಸ್ಸಿಗೆ ಅನಿಸಿದ್ದನ್ನು ಕವಿಯ ಮುಲಾಜಿಗೂ ಬೀಳದೆ, ಕವಿತೆಯ ಹಂಗಿಗೆ ಸೋಲದೆ ಯಥಾವತ್ತು ಬರೆದು ಬಿಡಿಸಿಟ್ಟು ಬಿಡುವ ಒಂಥರಾ ಹೊಸ ಕವಿ ನೀವು! ಇದ್ದದ್ದನ್ನ ಇದ್ದಂತೆ ಹೇಳಿದರೆ ಮುನಿಸು ಬರೊಲ್ಲ, ಬದಲಿಗೆ ಪ್ರೀತಿಸೋಣ ಅನ್ನಿಸುತ್ತೆ ಕವಿಯನ್ನೂ ಮೀರಿ ನಿಂತ ಕವಿತೆಯನ್ನು! :-)......ಹೌದು, ನೀವಂದಂತೆ "ಸದ್ಯ,ಕವಿಯ ಮುಲಾಜಿಗೆ
ಬೀಳುವ ರೂಪಕಗಳನ್ನು ಇನ್ನೂ ಯಾರೂ ಖರೀದಿಸಿಲ್ಲ..." ಕಾರಣವಿಷ್ಟೆ ಅದು ಗುತ್ತಿಗೆಗೆ ಪಡೆದದ್ದು..... :-) Good one....Liked it! Anjali Ramanna
ಸೊಗಸಾದ ಕವನ ರಾಘವೇಂದ್ರ ಅವರೇ. "ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ;ಬಸ್ಸಿಗೂ ಮನಸಿಗೂ ನಾಗಾಲೋಟ!"... ಅಲ್ವೇ ಮತ್ತೆ? :)
ಕವಿತೆ ಹುಟ್ಟೋದೇ ಹಾಗೆ. ತೆವಳುತ್ತ ಶುರುವಾಗಿ ನಾಗಾಲೋಟದಲ್ಲಿ ಅಂತ್ಯವಾಗುತ್ತೆ.
ತುಂಬ ಸರಳವಾಗಿ ಆರಂಭಗೊಂಡು ಸಂಕೀರ್ಣಗೊಳ್ಳುತ್ತ ಐಹಿಕದ ವಿವರಗಳನ್ನು ಹೇಳುತ್ತಲೇ ತಾತ್ವಿಕಗೊಳ್ಳುತ್ತ ಹೋಗುವ ಈ ಪುಟ್ಟ ಕವಿತೆಯು ರೂಪ ಅಳಿದಮೇಲೂ ಉಳಿದ ರೇಖೆಯಂತೆ ಮನಸಿನಲ್ಲಿ ಉಳಿಯುತ್ತದೆ.
@ ಅಂಜಲಿಯವರೇ,
ಧನ್ಯವಾದಗಳು.ಕವಿತೆಯನ್ನು ಇಷ್ಟಪಟ್ಟು ಓದುವ ನಿಮ್ಮ ಪರಿ
ನಿಮಗೇ ಸೊಗಸು.ಹಾಗಾಗಿಯೇ ನಿಮ್ಮ ಕಮೆಂಟುಗಳು
ಅಷ್ಟೊಂದು ಆರ್ದ್ರವಾಗಿರುತ್ತವೆ.ತುಂಬಾ ಖುಷಿಯಾಯ್ತು.
ನನ್ನ ಬರಹಗಳಲ್ಲಿನ ದೋಷಗಳನ್ನೂ ಇಷ್ಟೇ ನೇರವಾಗಿ ಹೇಳಬಲ್ಲಿರಿ ಎಂಬ ವಿಶ್ವಾಸದೊಂದಿಗೆ,
:-)
@ ಚಾಮರಾಜರೆ,
ನಿಜ ಹೇಳಬೇಕೆಂದರೆ,ಈ ಕವಿತೆಯನ್ನು ಪ್ಲಾನ್ ಮಾಡಿ
ಬರೆದಿದ್ದಲ್ಲ.ಏನೋ ಸರಳವಾಗಿ,ತಮಾಷೆಯಾಗಿ ಬರೆಯಲು
ಹೋಗಿ,ಯಾವದ್ಯಾವದೋ ಲಿಂಕ್ ಸಿಕ್ಕು ಬರೆಯುತ್ತ ಹೋಗಿ
ಬರೆದಿದ್ದಿದು..ನಿಮ್ಮ ಅನಿಸಿಕೆಗೆ ಧನ್ಯವಾದಗಳು. :-)
@ ಶೆಟ್ಟರ್ ಸರ್,
ನನ್ನ ಬ್ಲಾಗಿಗೆ ಇದು ನಿಮ್ಮ ಮೊದಲ ಭೇಟಿ ಅನ್ಸುತ್ತೆ.
ಹೌದು,ನೀವು ಹೇಳಿದಂತೆ ಕವಿತೆಯನ್ನು ಸರಳವಾಗಿ
ಪ್ರಾರಂಭಿಸಬೇಕೆನ್ನುವದು ನನ್ನ ಇಚ್ಛೆಯಾಗಿತ್ತು.
ಸುಮ್ಮನೇ ನಾವೆಲ್ಲಾ ಗಮನಿಸುವ ಸಾಮಾನ್ಯ ಸಂಗತಿಗಳನ್ನು
ಗುನುಗುಡುತ್ತಲೇ ಅದರಲ್ಲೊಂದಿಷ್ಟು ಇಹ,ಪರ ಸಂಗತಿಗಳನ್ನು
ಜೋಡಿಸುತ್ತ ಹೋದೆ..ಥ್ಯಾಂಕ್ಸ್ ನಿಮ್ಮ ನುಡಿಗಳಿಗೆ. :-)
ಜೋಶ್ಇ, ಕವಿತೆ ತುಂಬ ಚೆನ್ನಾಗಿದೆ. ನಂಗೆ ಇಷ್ಟ ಆಯ್ತು :)
ಸೊಗಸಾದ ಕವನ ರಾಘವೇಂದ್ರ, ಕವಿಯ ಮುಲಾಜಿಗೆ ಬೀಳುವ ರೂಪಕಗಳು ಕವನದುದ್ದಕ್ಕೂ ಶೋಭಿಸಿವೆ.
@ ಸುರೇಶ ಕೋಟ,
ನಿಮ್ಮ ಅನಿಸಿಕೆಗೆ ಥ್ಯಾಂಕ್ಸುಗಳು!
:-)
@ ಮಂಜುನಾಥರೆ,
ಹ್ಹಹ್ಹಹ್ಹ..ಈ ಆಸಾಮಿಯ ಉಸಾಬರಿಯೇ ಬೇಡ
ಅಂತ ರೂಪಕಗಳು ಮುಲಾಜಿಗೆ ಬಿದ್ದಿರಬಹುದು ಅಂತೀರಾ..??
ತಮಾಷೆಗೆ ಹೇಳಿದೆ. :-)
ಧನ್ಯವಾದಗಳು.
RJ,
ಹೊಸ ಹೊಸ ರೂಪಕಗಳನ್ನು ಸೃಷ್ಟಿಸುತ್ತ ಕಾವ್ಯಕ್ಕೆ ಹೊಸ ರೂಹನ್ನು ಕೊಡುತ್ತಿದ್ದೀರಿ. ನಿಮ್ಮ ಕಾವ್ಯ ಕನ್ನಡದಲ್ಲಿ ಹೊಸದೊಂದು ಆಕೃತಿಯನ್ನು ಸೃಷ್ಟಿಸುತ್ತಿದೆ. ಶುಭಾಶಯಗಳು.
@ ಸುನಾಥ್ ಸರ್,
ನಿಮ್ಮ ಮಾತುಗಳಿಂದ ನನಗೆ ಎಷ್ಟು ಖುಷಿಯಾಗಿದೆ
ಅಂದರೆ,really i mean it..
ಇನ್ನಷ್ಟು,ಮತ್ತಷ್ಟು ಚೆಂದ ಮಾಡಿ ಬರೆಯಲು ಇನ್ನೇನು ಬೇಕು?
ಥ್ಯಾಂಕ್ಯೂ... :-)
ನಿಮ್ಮ ಕವಿತೆಯ ವೇಗವರ್ಧಕವಾದ ಹುಡುಗಿಗೆ ಹಾಗು ಚಿ೦ತನಶೀಲ ಕವನವನ್ನು ಕಟ್ಟಿಕೊಟ್ಟ ನಿಮಗೆ ಧನ್ಯವಾದಗಳು! ನನ್ನ ಬ್ಲಾಗ್ ಗೂ ಬನ್ನಿ.
@ ಪ್ರಭಾಮಣಿಯವರೇ,
ಬ್ಲಾಗಿಗೆ ಬಂದು ಕಮೆಂಟಿಸಿದ್ದಕ್ಕೆ
ಧನ್ಯವಾದ.ಖಂಡಿತ ನಿಮ್ಮ ಬರಹಗಳನ್ನೂ ಓದುವೆ.
ಸುಂದರ ಕವನ.
Joshi........it is high time that you should think about marriage seriously.....That's comments/compliments after reading this poem.
Siddu
ಇವತ್ತಿಂದ ನಿಮ್ಮ ಫ್ಯಾನ್ :) ಕವನ ಸೂಪರ್ ಆಗಿದೆ..
@ ಗುಬ್ಬಚ್ಚಿ ಸತೀಶರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ಸಿದ್ದುಜಿ,
ಹಹಹ..ಏನ್ರಿ ನೀವು..ಏನೋ ಆರಾಮಾಗಿ ಕವಿತೆ ಬರಕೊಂಡು
ಆರಾಮಾಗಿ ಇರೋಣ ಅಂದ್ರೆ ಮದ್ವೆ ಆಗಿ ಕಾದಂಬರಿ ಬರೀರಿ ಅಂತ ಹೇಳ್ತಿರೋ ಹಾಗಿದೆ..
anyways,Thanks for your lovable comment.. :-)
@ಈಶ್ವರ ಭಟ್ರೇ,
ನಿಮ್ಮ ಪ್ರೀತಿಯ ಮಾತುಗಳಿಗೆ ಅಭಾರಿ.ಖುಷಿಯಾಯ್ತು.
ಥ್ಯಾಂಕ್ಸ್. :-)
"ಆದರೆ ಯಾವತ್ತೋ ಅವಳ
ಹಣೆಗೆ ಒತ್ತಿದ ತುಸುಮುದ್ರೆ
ಮಾತ್ರ ತ್ರಿಭುಜ ಸೀಳಿದ
ರೇಖೆಯಾಗಿ ಮುನ್ನುಗ್ಗಿದೆ;
ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ;
ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ"
ವಾಹ್ ಎಂಥಾ ಸಾಲುಗಳು, ಹಿಡಿ ಮಾತಿನಲ್ಲಿ ಬಿಡಿ ಮಾತಿನಲ್ಲಿ ಇಡೀ ಪ್ರಪಂಚ ತೋರಿಸುತ್ತೀರಲ್ಲ, ಇದು ನಿಜಕ್ಕೂ ಕಲಿಯಬೇಕಾದ್ದು. ಸೊಗಸಾದ ಕವನ ರಾಘವೇಂದ್ರರೇ
@ಚಾರ್ವಾಕ ವೆಂಕಟರಮಣ ಭಾಗವತ ಅವರೇ,
ನನ್ನ ಸ್ನೇಹಿತರೊಬ್ಬರು ಹೇಳುವಂತೆ,ಉತ್ತಮೋತ್ತಮರಲ್ಲಿ ನಾನೊಬ್ಬ ಯಕಶ್ಚಿತ್!ಪ್ರತಿಸಲ,ಏನೇ ಬರೆದ ಬಳಿಕ ನನ್ನದೇ ಬರಹ ನನಗೆ ಸಪ್ಪೆ ಅನಿಸತೊಡಗುತ್ತದೆ.ಹೀಗಾಗಿ ಮತ್ತಷ್ಟು ಚೆಂದ ಮಾಡುವ ಪ್ರಯತ್ನ ಜಾರಿಯಲ್ಲಿ ಇದ್ದೇ ಇರುತ್ತದೆ.
ನಿಮ್ಮ ವಿಶ್ವಾಸಕ್ಕೆ ಋಣಿ.ಧನ್ಯವಾದಗಳು. :-)
Wonderful poem sir. liked it :-)
@ ನಾಗರಾಜರೇ,
ಬ್ಲಾಗಿಗೆ ಬಂದು ಕವಿತೆ ಮೆಚ್ಚಿ,
ಕಮೆಂಟಿಸಿದ್ದಕ್ಕೆ ಧನ್ಯಾವಾದಗಳು.
ಮತ್ತೇ ಸಿಗುವ..
Post a Comment