Monday, October 28, 2013

ನಿಂತ ನೀರಿಗೆ ಸುಖವಿಲ್ಲ!

ಚಿತ್ರ:ಅಂತರ್ಜಾಲ



ಅತ್ತ,
ಮಾತಿಗೆ
ಮಾತು
ಮಥಿಸಿ
ಮಳೆ ತರಿಸಿದೆವು
ಅಂತ
ಎರಡು ಮೋಡಗಳು
ಮಾತನಾಡಿಕೊಳ್ಳುತ್ತಿದ್ದರೆ-

ಇತ್ತ,
ಅಂಗಳದಲ್ಲಿ
ಹರಿಯುತ್ತಿದ್ದ ನೀರಿನಲ್ಲಿ
ಕಾಗದದ ದೋಣಿ
ತಯಾರಿಸುತ್ತಿರುವ
ಪೋರನ
ಅವಸರದ ಬಗ್ಗೆ
ಮಳೆರಾಯನಿಗೆ
ಕೆಟ್ಟ ಕುತೂಹಲವಿದೆ.

ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ
ಅಲ್ಲಿಂದಲೇ ವಿಪ್ಲವ ಶುರು.
 
ನೀರಿನಲ್ಲಿ
ಅಲೆಯ ಉಂಗುರ
ಹುಡುಕಲು ಹೊರಟವನಿಗೆ
ಶಕುಂತಳೆಯ
ಉಂಗುರ ದಕ್ಕಿದರೆ
ನುಂಗಲಾಗದ
ಮೀನಿನ ತಪ್ಪೇ?
ಗುರಿಯಿಡಬಹುದೇ ಕಣ್ಣಿಗೆ?
ಗುರಿಯಿಡಬಹುದೇ ಹೆಣ್ಣಿಗೆ?
   
ಅತ್ತ ಇತ್ತಗಳ
ಮಧ್ಯೆಯೇ
ಈ ಕವಿತೆಗೊಂದು
ಉಪಸಂಹಾರ ಮಾಡಿಬಿಡಿ.
ಸದ್ಯಕ್ಕೆ
ಕಪ್ಪೆಯಾಗಿರುವ
ಶಪಿತ ಸುಂದರಿಗೊಂದು 
ಧ್ವನಿವರ್ಧಕ ಕೊಟ್ಟುಬಿಡಿ:
ಇಲ್ಲೀಗ
ಎಷ್ಟು ಶಾಪಗಳೋ
ಅಷ್ಟೇ ವಿಮುಕ್ತಿಗಳು..
-

8 comments:

Swarna said...
This comment has been removed by the author.
Swarna said...

ವಿಮುಕ್ತಿಯು ಹನಿಯಾಗಿ ಹನಿದಾಯ್ತು..ಕಣ್ತೆರೆ ಸುಂದರಿ
ಸುಂದರವಾದ ಕವಿತೆಯ ಉಪಸಂಹಾರವನ್ನು ಕವಿಯೇ ಕೊಟ್ಟರೆ ಚೆನ್ನ .ಒಂದು crude ಪ್ರಯತ್ನ :
“ಅರುಹಿದಳು
ಕುವರಿ
ಧ್ವನಿವರ್ಧಕದಲಿ
ತನ್ನೊಲವ
ಮಂಡೂಕ ಸುಂದರಿ
ಗೆ ರೆಕ್ಕೆ ಬಂದಿತು
ಕಾಗದದ ದೋಣಿ
ದಡ ಸೇರಿತು
ಮೋಡಗಳಿಗಾಮೋದ ವಾಯಿತು “

Badarinath Palavalli said...

ಅತ್ತ ಇತ್ತಗಳ ನಡುವಿನ ಕಾವ್ಯವೂ
ಕಾರಣವಾದೀತು ವಿಪ್ಲವಕೆ.

sunaath said...

ಮಳೆ ನೀರು ಪುಟ್ಟನ ಕಾಗದದ ದೋಣಿಗಳನ್ನು ತೇಲಿಸಿ, ಶಕುಂತಲೆಯ ಉಂಗುರವನ್ನು ಮೈಗೊಂಡು, ಕಡಲಿಗೆ ಸೇರುವ ಕವನಧಾರೆ ಸ್ವಾರಸ್ಯಕರವಾಗಿದೆ. ಸ್ವರ್ಣಾ ಅವರು ನೀಡಿದ ಉಪಸಂಹಾರವೂ ಸಹ ಅಷ್ಟೇ ಸಮರ್ಪಕವಾಗಿದೆ.

Anonymous said...

Excellent my dear RJ !
Anjali Ramanna

Unknown said...

'ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ.....'
ನದಿಯ ಬಗ್ಗೆ ಮನದಲ್ಲೇ ಗಿರಕಿ ಹೊಡೆಯುತ್ತಿದ್ದ ಕವನದ ಸಾಲುಗಳನ್ನು ಈ ಸಾಲುಗಳು ಕೆಣಕುತ್ತಿವೆ... ನುಡಿಚಿತ್ರಗಳ ಕೊಲಾಜ್ ನಂತೆ ಶುರುವಾದ ಕವನದ ಹನಿಗಳನ್ನು ಕೊನೆಯ ಪ್ಯಾರದಲ್ಲಿ ಪೋಣಿಸಿ, ಚೌಕಟ್ಟು ಹಾಕಿಟ್ಟ ರೀತಿ ತುಂಬಾ ಇಷ್ಟವಾಯಿತು! ಕವಿಯಾಗಿ, ಲೇಖಕನಾಗಿ ನಿಮ್ಮನ್ನು ಭೇಟಿ ಮಾಡಿದಾಗೆಲ್ಲಾ ಖುಷಿಯೇ ಆಗಿದೆ.. - ಸಂಧ್ಯಾ ರಾಣಿ

Manjunatha Kollegala said...

ಕವನ ಸೊಗಸಾಗಿದೆ. ನಿಮ್ಮ facebook account ಕೆಲಸ ಮಾಡುತ್ತಿದ್ದಂತಿಲ್ಲ. ಅಥವಾ ನೀವೇ ಬೇಸರಗೊಂಡು ಹೊರನಡೆದಿರೋ? :)

Anonymous said...

ಅದ್ಭುತ ಕವಿತೆ ಸರ್.ನೀವು ಏನನ್ನೂ ಬರೆಯದೆ ತುಂಬಾ ದಿನಗಳಾದವು.ಎಲ್ಲಿರುವಿರಿ? ನಿಮ್ಮ ಫೇಸ್ಬುಕ್ ಖಾತೆ ಕೆಲಸ ಮಾಡುತ್ತಿಲ್ಲ. :-( ~ Suresh