ರೈಲಿನಲ್ಲಿ ಕುಳಿತಿರುವ ಮದುಮಗಳಿಗೆ
ಅಂಗೈ
ಮೆಹಂದಿ
ಯಾಕೆ ಕೆಂಪೇರಿಲ್ಲ ಅನ್ನುವ ಚಿಂತೆ.
ವಿಮಾನದಲ್ಲಿ
ಹುರಿದ ಮೀನು ತಿನ್ನುತ್ತಿರುವ ಮದುಮಗನಿಗೆ
ಎಂದೋ
ನೋಡಿದ್ದ ಯಾರದೋ ಮೀನಖಂಡದ ಚಿಂತೆ.
ವರವೋ
ಶಾಪವೋ ಶಪಥವೋ ಅಂತೂ ಇಂತೂ
ಎಲ್ಲರಲ್ಲೂ ವ್ಯಥೆಯೊಂದು ಓಡುತ್ತಲೇ ಇರುತ್ತದಂತೆ;
ತೊಟ್ಟಬಾಣವ ಮರಳಿ ತೊಡಬಾರದಂತೆ!
ಸುಮಾರು ವರ್ಷಗಳ ಹಿಂದೆ ತಮಾಷೆಗೆಂದು ಬರೆದಿದ್ದ ಕವಿತೆಯಿದು. ಅಸಲಿಗೆ ಇಲ್ಲಿ
ಒಬ್ಬೊಬ್ಬರದು ಒಂದೊಂದು ಚಿಂತೆ. ನನಗೋ ಆಫೀಸಿಗೆ ತಡವಾಗುತ್ತಿದೆ ಅಂತನ್ನುವ
ಚಿಂತೆ. ಹಾಗಂದುಕೊಂಡೇ ಮೊನ್ನೆ ಹೋಟೇಲಿನಲ್ಲಿ ತಿಂಡಿ ಮುಗಿಸಿ ಇನ್ನೇನು ಗಾಡಿ
ತೆಗೆಯೋಣ ಅಂತ ಹೊರಗೆ ಬಂದೆ. ನೋಡಿದರೆ
ರಸ್ತೆಯಲ್ಲಿ ಏಳೆಂಟು ಜನರ ಒಂದು ಗುಂಪು. ಬೆಂಗಳೂರಿನ ಮುಖ್ಯರಸ್ತೆಯ ತಿರುವಿನಲ್ಲೊಂದು
ಎಂಥದೋ ಜಗಳ. ಒಂದು ಆಟೋ, ಒಂದು ಕಾರು ಇಡೀ ರಸ್ತೆಗೆ ಅಡ್ಡಹಾಕಿಕೊಂಡು
ನಿಂತುಬಿಟ್ಟಿದ್ದಾರೆ. ನೋಡನೋಡುತ್ತಲೇ ಎರಡು ನಿಮಿಷದಲ್ಲೇ ಟ್ರಾಫಿಕ್ ಜಾಮ್. 'ಪೊಂಪೊಂ'
ಅಂತನ್ನುವ ಹಾರ್ನುಗಳ ಜುಗಲ್ ಬಂದಿ. ಚಾಲಕರಿಬ್ಬರೂ ತಮ್ಮ ಗಾಡಿ ತೆಗೆಯಲೊಲ್ಲರು. ಹಾರ್ನು
ಬಜಾಯಿಸುತ್ತಿರುವ ಯಾರೊಬ್ಬರೂ ತಮ್ಮ ವಾಹನದಿಂದ ಇಳಿದು ಜಗಳ ಬಿಡಿಸಲೊಲ್ಲರು.
ನಾನೂ ಅದೇ ಮಾರ್ಗವಾಗಿ ಹೋಗಬೇಕಿತ್ತು. ಏನಾಗಿದೆ ನೋಡೋಣ ಅಂತ ಗುಂಪಿನ
ಕಡೆಗೆ ಹೋದೆ. ಚಾಲಕರಿಬ್ಬರ ಜಗಳ ನಿರಾತಂಕವಾಗಿ ಸಾಗುತ್ತಲೇ ಇತ್ತು. ಅವರಿಗೋ ಹಿಂದೆ
ಸಾಲುಗಟ್ಟಿ ನಿಂತಿರುವ ವಾಹನಗಳ ಪರಿವೆಯೇ ಇಲ್ಲ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಕಾರು, ಆಟೋ
ಎರಡನ್ನೂ ಗಮನಿಸಿದೆ. ಯಾವ ಅಪಘಾತದ ಕುರುಹೂ ಕಾಣಲಿಲ್ಲ. ಇವರಿಬ್ಬರನ್ನೂ ಗಮನಿಸಿದೆ. ಇಬ್ಬರಿಗೂ
ಏನೂ ಗಾಯದ ಲಕ್ಷಣ ಗೋಚರಿಸಲಿಲ್ಲ. ವಿಷಯದ ತಳಬುಡ ಏನೆಂದು ಗೊತ್ತಾಗದೇ ಅವರಿಬ್ಬರ
ಮಧ್ಯೆ ಹೋಗಿ ನಿಧಾನವಾಗಿ ಕೇಳಿದೆ:
"ಸಾರ್,
ಸಾರ್.. ಏನಾಯ್ತು ಸಾರ್?"
'ಏನೂ ಆಗಿಲ್ಲ..'
"ಗಾಡಿಗೆ
ಏನಾದ್ರೂ ಆಯಿತೇ?"
'ಏನೂ ಆಗಿಲ್ಲ..'
"ನಿಮಗೇನಾದರೂ
ಆಯಿತೇ?"
'ಏನೂ ಆಗಿಲ್ಲ..'
"ಮತ್ಯಾಕೆ
ಜಗಳ ಸಾರ್?"
'ಏನೂ ಆಗಿಲ್ಲ ಕಣ್ರೀ, ಏನಾದ್ರೂ
ಆಗಿದ್ದರೆ..?'
ಇದು ಈ ಲೋಕದ ರೀತಿ. ಬಹುಶಃ ಇವತ್ತೇನೋ ಇವರಿಬ್ಬರೂ ಆರಾಮಾಗಿದ್ದಾರೆ. ಹೀಗಾಗಿ ಇವರಿಬ್ಬರ
ಓತಪ್ರೋತಕ್ಕೆ ಹಿಂದೆ ನಿಂತಿರುವ ಜನಪ್ರವಾಹದ ಹಂಗಿಲ್ಲ. ಕೊನೆಗೆ ಏನು ಮಾಡುವದೆಂದು ಗೊತ್ತಾಗದೇ
ತಲೆಕೆಟ್ಟು ನನ್ನ ಮೊಬೈಲ್ ತೆಗೆದೆ. ಅವರಿಬ್ಬರಿಗೂ ಕಾಣುವಂತೆ ಅವರ ವಾಹನದ
ನಂಬರ್ ಪ್ಲೇಟ್ ಫೋಟೋ ತೆಗೆದೆ. ಅನಂತರ ಅವರಿಬ್ಬರಿಗೂ ಕೊಂಚ ನಿಧಾನವಾಗಿ ಸ್ಪಷ್ಟವಾಗಿ
ಹೇಳಿದೆ:
"ನೋಡಿ, ಎರಡೂ ಗಾಡಿ ಸೈಡಿಗೆ ಹಾಕಿ ಮಾತಾಡ್ಕೊಳ್ಳಿ. ಇಲ್ಲವಾದಲ್ಲಿ ಟ್ರಾಫಿಕ್ಕಿಗೆ ತೊಂದರೆ ಮಾಡ್ತಾ ಇದೀರಂತ ಕಂಟ್ರೋಲ್
ರೂಮಿಗೆ ನಾನೇ ಕಂಪ್ಲೇಂಟ್ ಮಾಡ್ತೀನಿ.."
ಅಷ್ಟೇ! ದಿಢೀರೆಂದು ಮೂಡು ಬದಲಾಗಿತ್ತು. ಇಬ್ಬರೂ ವಾಹನ ಚಾಲಕರು ಕೊಂಚ
ಗಲಿಬಿಲಿಯಾದರು. ನಮ್ಮಷ್ಟಕ್ಕೆ ನಾವು ಜಗಳ ಮಾಡಿಕೊಂಡು ಆರಾಮಾಗಿದ್ದರೆ ಇವನದೇನಯ್ಯ
ಕಿತಾಪತಿ? ಅಂತ ನನ್ನನ್ನು ಅಸಹನೆಯಿಂದ
ನೋಡಿದರು. ಕೊನೆಗೆ ಅಸ್ಪಷ್ಟವಾಗಿ
ಏನೋ ಬೈದುಕೊಂಡು ಗಾಡಿ ತೆಗೆದರು. ಟ್ರಾಫಿಕ್ ಚಲಿಸತೊಡಗಿತು. ಬದುಕಿನಲ್ಲಿ ಇವರಿಬ್ಬರನ್ನು
ಮತ್ತೊಮ್ಮೆ ನಾನು ಭೇಟಿ ಆಗುತ್ತೇನೆಯೋ ಇಲ್ಲವೋ ಅಂತನ್ನುವ ಗ್ಯಾರಂಟಿಯಿಲ್ಲವಾದ್ದರಿಂದ ಅವರ ಅಸಹನೆಯ ನೋಟವನ್ನೂ, ಅಸ್ಪಷ್ಟ
ಗೊಣಕುವಿಕೆಯನ್ನೂ ಅಲ್ಲೇ ರಸ್ತೆ ಬದಿಯಲ್ಲಿ ಝಾಡಿಸಿಕೊಂಡು ಏನೋ ಘನಂದಾರಿ ಮಾಡಿದವನಂತೆ ನನ್ನ
ಗಾಡಿಯತ್ತ ನಡೆದೆ.
ಗಾಡಿ ಓಡಿಸುತ್ತಲೇ ನನ್ನ ಮನದಲ್ಲಿ ಮೂಡುತ್ತಿದ್ದುದು ಒಂದೇ ಪ್ರಶ್ನೆ: ರಸ್ತೆಯಲ್ಲಿನ
ಇಂಥ ಅನಪೇಕ್ಷಿತ ಜಗಳಕ್ಕಿಂತ ಸಾಮಾಜಿಕ ತಾಣಗಳಲ್ಲಿನ ಜಗಳಗಳು ಹೇಗೆ ಭಿನ್ನ? ಆ ಕ್ಷಣದಲ್ಲಿ
ನನಗೇನೂ ಅಷ್ಟೊಂದು ಫರಕು ಕಾಣಲಿಲ್ಲ. ಮೊನ್ನೆ ಅನಾಮಧೇಯರ ಗುಂಡಿಗೆ ಪತ್ರಕರ್ತೆ ಗೌರಿ
ಲಂಕೇಶ್ ಹತ್ಯೆಯಾದರು. ಸದರಿ ಘಟನೆಯ ಬಗ್ಗೆ ಫೇಸ್ ಬುಕ್ಕಿನಲ್ಲಿ ಎಷ್ಟು ತೆರನಾದ
ವಾಗ್ವಾದಗಳು ನಡೆಯಬಹುದೋ ಅಷ್ಟೂ ರೀತಿಯ ಪರ್ಮುಟೇಶನ್ ಮತ್ತು ಕಾಂಬಿನೇಷನ್ ಹೊರಬಂದವು.
ಸದರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ನಾನಾರೀತಿಯ ಹೇಳಿಕೆಗಳು ಫೇಸ್
ಬುಕ್ಕಿನಲ್ಲಿ ಜೀವಪಡೆದುಕೊಳ್ಳತೊಡಗಿದವು. ಇದು ಬಲಪಂಥೀಯರ ಕೆಲಸವೆಂದು ಎಡಪಂಥೀಯರು ಹೇಳಿಕೆ ಕೊಟ್ಟರು.
ಮರುಕ್ಷಣವೇ ಬಲಪಂಥೀಯರ ಬಾಣ ನಕ್ಸಲ್ ವಾದದತ್ತ ತಿರುಗಿತು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ
ರಾಜಕಾರಣದ ಜರೂರತ್ತು ಇರುವದರಿಂದ ಹೀಗೆ ಒಬ್ಬರ ಮೇಲೊಬ್ಬರು ಬೆರಳು ತೋರಿಸುವದು ಸಹಜ. ಆದರೆ ಈ
ಜರೂರತ್ತಿನ ಹಂಗು ನಮ್ಮಂಥ ಜನಸಾಮಾನ್ಯರಿಗೆ ಇರಬೇಕಿಲ್ಲ. ನಮ್ಮೊಳಗಿನ ಮನುಷ್ಯತ್ವ
ಜಾಗೃತವಾಗಲು ಗೌರಿ ಲಂಕೇಶ್ ಒಬ್ಬ ಪತ್ರಕರ್ತೆಯಾಗಿದ್ದರು ಅಂತನ್ನುವ ವಿಶೇಷಣ ಕೂಡ
ನಮಗೆ ಬೇಕಿರಲಿಲ್ಲ. ಅದರ ಬದಲಿಗೆ, ಹತ್ಯೆ ಆಗಿರುವದು ಒಬ್ಬ ಮನುಷ್ಯ ಅನ್ನುವದಷ್ಟೇ
ಸಾಕಿತ್ತು.
ಆದರೆ ಹತ್ಯೆ ಕುರಿತಂತೆ ತಮ್ಮದೇ ರೀತಿಯಲ್ಲಿ ತಹತಹಿಸುತ್ತಿದ್ದ ದೊಡ್ಡದೊಂದು ಗುಂಪಿಗೆ ಇದ್ಯಾವುದೂ ಬೇಕಿರಲಿಲ್ಲ. ಈ ಗುಂಪಿನಲ್ಲಿ
ನಳನಳಿಸುತ್ತಿದ್ದಿದ್ದು ಸಿದ್ಧಾಂತವಷ್ಟೇ. ಈ ಗುಂಪಿನಲ್ಲಿ ಎಡದವರೂ ಇದ್ದರು. ಬಲದವರೂ
ಇದ್ದರು. ಒಂದು ಭಿನ್ನವಿಚಾರವನ್ನು ಹತ್ತಿಕ್ಕುವದಕ್ಕಾಗಿ ಕೊಲೆಯನ್ನೇ ಮಾಡಬಹುದೇ? ಅಂತ
ಪ್ರಶ್ನಿಸುತ್ತಿದ್ದವರೇ ಕೊಲೆಗೆ ಸಂಬಂಧಿಸಿದಂತೆ ಯಾರಾದರೂ ಭಿನ್ನ ಆಲೋಚನೆಯನ್ನು ವ್ಯಕ್ತಪಡಿಸಿದರೆ, ತಕ್ಷಣ ಅಂಥವರ ಮೇಲೆ ಮುಗಿದು ಬೀಳುತ್ತಿದ್ದರು. ಆ ಮೂಲಕ ತಾವು ಅಲ್ಲಿಯವರೆಗೂ ಯಾವುದನ್ನು
ಪ್ರಚುರಪಡಿಸುತ್ತಿದ್ದರೋ, ಅಂಥ ಭಿನ್ನ ಅಭಿಪ್ರಾಯಗಳಿಗೆ ಮನ್ನಣೆ
ಕೊಡುವದನ್ನೇ ಮರೆಯುತ್ತಿದ್ದರು. ಈ ಗುಂಪಿಗೆ ಸ್ಪರ್ಧೆಗೆ ಬಿದ್ದವರಂತೆ ಇನ್ನೊಂದು
ಗುಂಪು ಇನ್ನೊಂದು ರೀತಿಯಲ್ಲಿ ಅಧಃಪತನದತ್ತ ಹೊರಟಿತ್ತು. ಮನುಷ್ಯನ ಸಾವನ್ನೂ ಕೂಡ ಗೇಲಿ
ಮಾಡಿಕೊಂಡು ಸಂಭ್ರಮಿಸುತ್ತ ಮನುಷ್ಯರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಿಕೊಳ್ಳುವತ್ತ
ದಾಪುಗಾಲಿಡುತ್ತಿತ್ತು.
ಒಂದು ಸಹಜ ಮತ್ತು ಅಕಾಲಿಕ ಸಾವಿಗೆ ಎಷ್ಟೊಂದು ಮುಖಗಳು? ಒಂದು ಸಾವಿನ
ಹಿನ್ನೆಲೆಯಲ್ಲಿ ಬೆಳಕನ್ನು ಅರಸಿಕೊಂಡು ಹೋದವರೆಷ್ಟು? ಒಂದು ಹತ್ಯೆಯ ಮುಸುಕಿನಲ್ಲಿ
ಕಳ್ಳನಗೆ ಬೀರಿದವರೆಷ್ಟು? ಇವರಿಬ್ಬರ ಮಧ್ಯೆ ಏನನ್ನೂ ಹೇಳಲಾಗದೇ, 'ಅದ್ಯಾವ ಪಂಥದವನೇ ಆಗಿರಲಿ,
ಆದಷ್ಟು ಬೇಗ ಆತ ನೇಣಿಗೇರುವಂತಾಗಲಿ' ಅಂತ ಮನದಲ್ಲೇ ಮರುಗಿದವರೆಷ್ಟೋ?
ಹಾಗೆ ನೋಡಿದರೆ, ಮನುಷ್ಯತ್ವ ಮತ್ತು ಕಾಮನ್ ಸೆನ್ಸ್ ಇರುವ ಮನುಷ್ಯ ಒಂದು ಸಾವಿಗೆ
ಸಂಬಂಧಪಟ್ಟಂತೆ ಮೌನಕ್ಕೆ ಮೊರೆ ಹೋಗಬೇಕು. ಇನ್ನು ಆ ಸಾವು ಅಸಹಜ ಮತ್ತು ದಾರುಣವಾಗಿದ್ದಲ್ಲಿ
ಸುತ್ತಲಿನ ಸಮಾಜ ಅಂಥದೊಂದು ಘಟನೆಯೆಡೆಗೆ ತನ್ನ ಸಾತ್ವಿಕ ಸಿಟ್ಟು ಪ್ರದರ್ಶಿಸಬೇಕು. ಆ ಸಿಟ್ಟು
ಸಮಾಜಘಾತಕ ಶಕ್ತಿಗಳಿಗೆ ಪ್ರತಿರೋಧ ಮತ್ತು ಎಚ್ಚರಿಕೆ ನೀಡುವಂತಿರಬೇಕೇ ಹೊರತು ಅಲ್ಲಿ
ಸಿದ್ಧಾಂತಗಳ ವಾಸನೆಯೂ ಇರಕೂಡದು. ಯಾಕೆಂದರೆ, ಸಿದ್ಧಾಂತಗಳು ಬದುಕಿಗೆ ಮುಖ್ಯವೇನೋ ಹೌದು. ಆದರೆ
ಇವೇ ಸಿದ್ಧಾಂತಗಳು ಬದುಕಿನ ಸಣ್ಣಪುಟ್ಟ ಖುಷಿ, ಜಗಳ, ನಂಬಿಕೆ ಮತ್ತು ಜೀವನಪ್ರೀತಿಗಳನ್ನು
ಕಸಿದುಕೊಳ್ಳುತ್ತವೆ ಅಂತಾದರೆ ಅಂಥ ತರ್ಕ-ಸಿದ್ಧಾಂತಗಳಿಗೆ ಬೆಲೆಯಿಲ್ಲವೆಂದೇ
ಅರ್ಥ.
ಹೀಗಾಗಿ ವೈಯಕ್ತಿಕವಾಗಿ ನಾನು ಯಾವ ಪಂಥವನ್ನೂ ಅಷ್ಟಾಗಿ ತಲೆಗೆ ಹಚ್ಚಿಕೊಂಡಿಲ್ಲ.
ಇಷ್ಟಕ್ಕೂ ‘ನಾನು ಎಡಪಂಥೀಯ, ನೀನು ಬಲಪಂಥೀಯ’ ಅಂತ ಲೇಬಲ್ ಹಚ್ಚುವ, ಹಚ್ಚಿಕೊಂಡಿರುವ
ಮನುಷ್ಯ ತನ್ನ ದಾರಿಯನ್ನು ಆದಷ್ಟು ನ್ಯಾರೋ ಮಾಡಿಕೊಳ್ಳುತ್ತ ಹೋದರೆ, ಇನ್ನು 'ನಾನು ನಡುಪಂಥೀಯ!'
ಅಂತ ತನ್ನನ್ನು ತಾನೇ ಘಂಟಾಘೋಷವಾಗಿ ಗೇಲಿ ಮಾಡಿಕೊಳ್ಳುತ್ತ ಎಲ್ಲವನ್ನೂ ಗಮನಿಸುತ್ತ ಸಾಗುವ
ಮನುಷ್ಯ ತನ್ನ ದಾರಿಯನ್ನು ಅಗಲವಾಗಿಸಿಕೊಳ್ಳುತ್ತ ಹೋಗುತ್ತಾನೆ-
ಅಂತ ಯೋಚಿಸುತ್ತಿದ್ದಂತೆ ನನ್ನ ಗಾಡಿ
ಆಫೀಸಿನ ಪಾರ್ಕಿಂಗ್ ಜಾಗ ತಲುಪಿತ್ತು. ಗಾಡಿ ನಿಲ್ಲಿಸಿ ಹೊರಡುತ್ತಿದ್ದಾಗ ರಸ್ತೆಯ ಬದಿಯಲ್ಲೊಂದು
ಕೆಂಪು ಸ್ಕರ್ಟಿನ ಚೆಲುವೆ. ಒಂದು ಕ್ಷಣಭಂಗುರದ ಘಟನೆ ಮುಂದಿನ ಎರಡು ಸಾಲುಗಳನ್ನು ಬರೆಯುವಂತೆ
ಒತ್ತಾಯಿಸುತ್ತಿದೆ.
ಮತ್ತೇನಿಲ್ಲ, ಮೇಲಿರುವವನು
ಬಲು ಜಾಣ ಕಣ್ರೀ. ತುಂಟಗಾಳಿ ಸೃಷ್ಟಿಸುವವನೂ ಅವನೇ. ತೊಟ್ಟ ಸ್ಕರ್ಟು ಹಾರಿಸುವವನೂ ಅವನೇ.
ಮತ್ತು, ಇದನ್ನೆಲ್ಲ ನೋಡಬಯಸಿದ ನೂರಾರು ಕಣ್ಣುಗಳಲ್ಲಿ ಧೂಳು ಚಿಮುಕಿಸುವವನೂ ಅವನೇ! ಇಲ್ಲಿ
ಯಾರಿಗೆ ಯಾರು ಬೇಲಿ? ಯಾರಿಗೆ ಯಾರೋ ಪುರಂದರ ವಿಠಲ-ಅಂತ ದಾಸರ ಕ್ಷಮೆ ಕೋರುತ್ತ ನಡೆಯತೊಡಗಿದೆ..
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 13.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
4 comments:
ಒಂದು ಅರ್ಥವತ್ತಾದ ಬದುಕಿಗೆ ಸಿದ್ಧಾಂತಗಳು ಬೇಕು ಆದರೆ ಸಿದ್ಧಾಂತಗಳೇ ಬದುಕಲ್ಲ, ಅದನ್ನು ಮೀರಿದ ಮನುಷ್ಯತ್ವವೊಂದಿದೆ, ಅವೆಲ್ಲವನ್ನು ದಾಟಿದ ಮೇಲೊಬ್ಬನ ಆಟವಿದೆ!... ಪ್ರತಿಭಟನೆ ಅಮಲಿನಲ್ಲಿ ಏನನ್ನು ಪ್ರತಿಭಟಿಸಬೇಕು ಅನ್ನುವ ವಿವೇಚನೆಯನ್ನೇ ಕಳೆದುಕೊಳ್ಳುವ ಪ್ರವೃತ್ತಿಯೆಡೆ ಒಂದು ದಾಸರಂತಹ ನೋಟ! 'ನಡುಪಂಥ'ದಲ್ಲಿರುವ, ಯಾವುದೇ ಸಿದ್ದಾಂತಕ್ಕೆ ಸೀಮಿತಗೊಳ್ಳದ, ಚಿಂತನಾ-ಸ್ವಾತಂತ್ರ್ಯ ಎಷ್ಟು ನಿರಾಳ-ಅಗಾಧ ಎನ್ನುತ್ತಾ ನಿಮ್ಮ signature ಶೈಲಿಯಲ್ಲಿ ಕ್ಷಣಭಂಗುರದ ಲೇಪ ಹಚ್ಚಿ ಮನಸ್ಸು ತಿಳಿಯಾಗಿಸಿದಕ್ಕೆ ತುಂಬ ಧನ್ಯವಾದಗಳು!!!
ಇವತ್ತು ಪೂರ್ವಾಹ್ನ ಹಿಟ್ಟು ಮಾಡಿಸಿಕೊಳ್ಳಲು ಗಿರಣಿಗೆ ಹೋಗಿದ್ದೆ. ಅಲ್ಲಿ ಬೆಂಚಿನ ಮೇಲೆ ‘ವಿಜಯಕರ್ನಾಟಕ’ ಪತ್ರಿಕೆ ಸಿಕ್ಕಿತು. ಗಬಕ್ಕನೆ ತೆಗೆದುಕೊಂಡು, ನಿಮ್ಮ ‘ಮಾಯಾಲಾಂದ್ರ’ವನ್ನು ಹುಡುಕಿದೆ! ಹುಡುಗರಿಗೆ ಐಸ್ಕ್ರೀಮ್ ಸಿಕ್ಕಟ್ಟು ಖುಶಿಯಾಯಿತು. ನಿಮ್ಮ ಬರಹವೂ ಅಷ್ಟೇ ಸವಿಯಾಗಿತ್ತು ಎಂದು ಹೇಳಬೇಕಾಗಿಲ್ಲವಲ್ಲ! ಇನ್ನು ಲೇಖನದ ಬಗೆಗೆ `On the trail of...'ರವರು ನಿಖರವಾಗಿ ವಿವೇಚಿಸಿದ್ದಾರೆ. ನನ್ನದೂ ಅದೇ ಅಭಿಪ್ರಾಯವಾಗಿದೆ.
ಪ್ರಿಯ 'On the trail of..' ಅವರೇ,
ಹೌದು, ಸಿದ್ಧಾಂತಗಳ ಮೀರಿದ ಮನುಷ್ಯತ್ವದ ಬದುಕು ದೊಡ್ಡದು ಅಂತನ್ನುವ ನಿಮ್ಮ ಮಾತು ಹಿಡಿಸಿತು. ಧನ್ಯವಾದಗಳು.
ಸುನಾಥ ಸರ್,
ಹಹಹ.. ನಿಮ್ಮ ಪ್ರೀತಿಯ ಮಾತು ಮತ್ತು ಅದರಲ್ಲಿದ್ದ ಸಂತಸದ ಪ್ರೋತ್ಸಾಹ-
ಇವೆರಡೂ ನನ್ನನ್ನು ಖುಷಿಯಾಗಿಟ್ಟಿವೆ!
ಧನ್ಯವಾದಗಳು.
Post a Comment