Wednesday, May 10, 2017

ಎಲ್ಲವನ್ನೂ ಪುಕ್ಕಟೆ ಕೊಟ್ಟರೂ ಸರಕಾರಿ ಶಾಲೆಗಳೇಕೆ ಹಿಂದೆ?

ಮೊನ್ನೆ ಮಟಮಟ ಮಧ್ಯಾಹ್ನ ಊಟ ಮುಗಿಸಿ ಆಫೀಸಿನತ್ತ ಹೊರಡುತ್ತಿದ್ದೆ. ದಾರಿಯಲ್ಲಿ ಮರದ ಮೇಲಿನ ಧ್ವನಿವರ್ಧಕದಿಂದ ಯಾವುದೋ ಭಜನೆಯ ಹಾಡು  ಜೋರಾಗಿ ಕೇಳಿಸುತ್ತಿತ್ತು. ಮಧ್ಯೆ ಮಧ್ಯೆ ಹಾಡು ನಿಲ್ಲಿಸಿ ಅನ್ನಸಂತರ್ಪಣೆಯ ಬಗ್ಗೆ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳಲಾಗುತ್ತಿತ್ತು. ಅಲ್ಲೆಲ್ಲೋ ತೇಲಿಬರುವ ತಮಟೆಯ ಸದ್ದು. ತಲೆಯೆತ್ತಿ ಮೇಲಕ್ಕೆ ನೋಡಿದರೆ ಅಲ್ಲೊಂದು ಬ್ಯಾನರ್. ಯಾವುದೋ ದೇವತೆಯ ಹದಿನಾಲ್ಕನೇ ವರ್ಷದ ಉತ್ಸವ. ಸುಡುಗಾಲದ ಬೆವರು ಒರೆಸಿಕೊಳ್ಳುತ್ತ ನಿಧಾನವಾಗಿ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಮೂಡು ಬದಲಿಸಿಕೊಂಡ ಲೌಡ್ ಸ್ಪೀಕರ್ ಮೆಲ್ಲನೇ ಕಿರುಚತೊಡಗಿತು: 
 'ಏನೋ ಮೋಹಾ.. ಏಕೋ ದಾಹಾ..' 
    
   ಧತ್ತೇರಿ ಅಂತ ಗಲಿಬಿಲಿಗೊಂಡೆ. ಈ ಸುಡುಗಾಲದ ಋತುಮಾನಕ್ಕೂ, ಭಕ್ತಶಿಖಾಮಣಿಗಳ ಉತ್ಸಾಹಕ್ಕೂ, ಹಾಡಿನ ಸಂದರ್ಭಕ್ಕೂ ತಾಳೆಹಾಕಲು ಹೋಗಿ ಸೋತು ಹೋದೆ. ಯಾರಿಗೆ ಗೊತ್ತು? ಆ ಹೆಣ್ಣುದೇವತೆಗೂ ಒಂದು ಹೃದಯ ಅಂತ ಇರುತ್ತದಲ್ಲ ಅಂತ ನನ್ನಷ್ಟಕ್ಕೆ ನಾನೇ ನಗಾಡಿಕೊಂಡು ಹೋಗುತ್ತಿರುವಾಗ ಮೊಬೈಲು ರಿಂಗಣಿಸಿತು. ಈ ಹಾಡಿನ ಪರಿಸರದಲ್ಲಿ ಮಾತನಾಡಲಾಗದು ಅಂತ ಜೋರಾಗಿ ಆಫೀಸಿನತ್ತ ಹೆಜ್ಜೆ ಹಾಕತೊಡಗಿದೆ.
*
   ದೂರದ ಹಳ್ಳಿಯೊಂದರಿಂದ ಮಿತ್ರರೊಬ್ಬರು ಕರೆ ಮಾಡಿದ್ದರು. ಸರಕಾರಿ ಪೈಮರಿ ಶಾಲೆಯ ಅಧ್ಯಾಪಕರಾಗಿರುವ ಈ ಮಿತ್ರರು ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಶಾಲೆಯ ಮಕ್ಕಳಿಗಾಗಿ ಏನೇನು ಮಾಡಬಹುದೆಂದು ಉತ್ಸಾಹದಿಂದ ವಿವರಿಸುತ್ತಿದ್ದರು. ಮಕ್ಕಳಿಗಾಗಿ ನೋಟ್ ಬುಕ್, ಬ್ಯಾಗ್, ಜಾಮಿಟ್ರಿ ಬಾಕ್ಸ್, ಶೈಕ್ಷಣಿಕ ಪರಿಕರಗಳು, ಆಟದ ಸಾಮಾನುಗಳ ಬಗ್ಗೆ ನಮ್ಮ ಮಾತುಕತೆ ನಡೆಯುತ್ತಿತ್ತು. 

   ಇದು ನಿಜಕ್ಕೂ ನಂಬಲು ಅಸಾಧ್ಯವಾದ ಸಂಗತಿ. ವಿಷಯವೇನೆಂದರೆ, ನಮ್ಮ ಸರ್ಕಾರಿ ಶಾಲೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ನೇಮಕವಾಗುವ ಶಿಕ್ಷಕರೆಲ್ಲ ಅತ್ಯುತ್ತಮ ಗುಣಮಟ್ಟದ ಕ್ಯಾಂಡಿಡೇಟುಗಳು. ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನೇ ಸರ್ಕಾರಿ ಶಾಲೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ, ಸರ್ಕಾರಿ ನೇಮಕಾತಿಯಲ್ಲಿ ಆಯ್ಕೆಯಾಗದ ಮತ್ತು ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳು ಮಾತ್ರ ಖಾಸಗಿ ಶಾಲೆಗಳತ್ತ ಹೋಗುತ್ತಾರೆ. ಮೇಲಾಗಿ, ನಮ್ಮಲ್ಲಿ ಪುಕ್ಕಟೆ ವಿದ್ಯಾಭ್ಯಾಸ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಚಪ್ಪಲಿ/ಶೂ  ವಿತರಿಸಲಾಗುತ್ತದೆ. ಅಷ್ಟಾದರೂ ನಮ್ಮ ಸರ್ಕಾರಿ ಶಾಲೆಗಳು ಖಾಸಗಿಯವರೊಂದಿಗೆ ಯಾಕೆ ಪೈಪೋಟಿ ಮಾಡಲಾಗುತ್ತಿಲ್ಲ? 

   ಇದೇ ಪ್ರಶ್ನೆಯನ್ನು ನನಗೆ ಫೋನಾಯಿಸಿದ ಆ ಶಿಕ್ಷಕ ಮಿತ್ರರಿಗೆ ಕೇಳಿದೆ. ಹಾಗೆ ನೋಡಿದರೆ, ಈ ಮಿತ್ರರು ಸಜ್ಜನರು. ತಮ್ಮ ಶಾಲೆಯ ಬಡ ಮಕ್ಕಳಿಗೆ ಏನಾದರೂ ಮಾಡಿ ಓದಿನ ಹುಚ್ಚು ಮೂಡಿಸುವ ಹಂಬಲ ಉಳ್ಳವರು. ಅದಕ್ಕಾಗಿ ಎಷ್ಟೋ ಸಲ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ತಮ್ಮದೇ ದುಡ್ಡುಹಾಕಿ ಮಕ್ಕಳಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ತಂದಿದ್ದೂ ಉಂಟು. ಇದೇ ಕಾರಣಕ್ಕಾಗಿ ನಾವು ಒಂದಿಷ್ಟು ಜನ ಸದರಿ ಶಾಲೆಗೆ ಕೆಲವರ್ಷಗಳಿಂದ ಆಟದ ಸಾಮಾನುಗಳಾದ ಫುಟ್ ಬಾಲ್, ವಾಲಿಬಾಲ್, ರಿಂಗ್ ಮುಂತಾದವುಗಳ ಜೊತೆ ಕೆಲ ಶೈಕ್ಷಣಿಕ ಪರಿಕರಗಳನ್ನು ಕೊಡುತ್ತ ಬಂದಿದ್ದೇವೆ. ಜೊತೆಗೆ, ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಗುರಿ ಸಾಧಿಸಿದ ನಾಲ್ಕು ತರಗತಿಯ ಮೂರು ಮೂರು ಮಕ್ಕಳಿಗೆ ಮುಂದಿನ ತರಗತಿಗೆ ಅನುಕೂಲವಾಗುವಂತೆ ಪುರಸ್ಕಾರಗಳನ್ನೂ ನೀಡುತ್ತ ಬಂದಿದ್ದುಂಟು. 

   ವಿಷಯ ಅದಲ್ಲ. ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಸರ್ಕಾರಿ ಶಾಲೆಗಳಿಗೂ ಉಚಿತವಾಗಿ ಪಠ್ಯಪುಸ್ತಕ ವಿತರಿಸುವಂತೆ ನೋಟ್ ಬುಕ್ ಯಾಕೆ ವಿತರಿಸುತ್ತಿಲ್ಲ ಅಂತನ್ನುವ ಪ್ರಶ್ನೆ ಮೂಡಿತು. ಯಾಕೆಂದರೆ ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪಾಲಕರು ಸಿರಿವಂತರೇನಲ್ಲ. ಅವರಲ್ಲಿ ಬಹುಪಾಲು ಜನ BPL ಅಡಿಯಲ್ಲಿ ಬರುವಂಥವರು. ಹೀಗಿರುವಾಗ ಯಾಕೆ ಸರ್ಕಾರ ಫ್ರೀಯಾಗಿ ನೋಟ್ ಬುಕ್ ಕೊಡಬಾರದು ಅಂತನಿಸಿದ್ದು ನಿಜ. ‘ಇಲ್ಲ, ಬ್ಯಾಗ್ ಮತ್ತು ನೋಟ್ ಬುಕ್ ಕೂಡ ನೀಡಲಾಗುತ್ತದೆ’ ಅಂತನ್ನುವ ಉತ್ತರ ಬಂತು. ಮತ್ಯಾಕೆ ನೋಟ್ ಬುಕ್ಕುಗಳ ಬಗ್ಗೆ ಚಿಂತಿಸುತ್ತೀರಿ ಅಂತ ಪ್ರಶ್ನಿಸಿದಾಗ ಅವರು ಸಂಕೋಚದಿಂದ ಹೇಳತೊಡಗಿದರು. ವಿಷಯವೇನೆಂದರೆ, ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯ ಮಕ್ಕಳಿಗೆಂದೇ ಒಂದಿಷ್ಟು ಹಣವನ್ನು ಆಯಾ ಶಾಲೆಯ 'ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ' (SDMC) ಖಾತೆಗೆ ತುಂಬುತ್ತದೆ. ಜೊತೆಗೆ ಒಂದು ಗೈಡ್ ಲೈನ್ ನ್ನೂ! ಆ ಪ್ರಕಾರ, ಸದರಿ ಹಣವನ್ನು ಪರಿಶಿಷ್ಟ ಜಾತಿ/ಪಂಗಡದ ಮಕ್ಕಳಿಗೆ ಮಾತ್ರ ವಿನಿಯೋಗಿಸತಕ್ಕದ್ದು.

   ಅಲ್ಲ ಸ್ವಾಮೀ, ಸದ್ಯಕ್ಕೆ ಈ ಮಕ್ಕಳು ಖಾಲಿ ಜಾಗದಂತೆ. ಮೂರನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ಬರುವ ಹೊತ್ತಿಗೆ ಈ ಮಕ್ಕಳಲ್ಲಿ ನಾವು ಎಷ್ಟೆಲ್ಲ ಭಾವನೆಗಳನ್ನು ತುಂಬಬಹುದು. ಹೀಗಿರುವಾಗ, ಇಷ್ಟವಿದೆಯೋ ಇಲ್ಲವೋ, ಇಲಾಖೆಯ ಆದೇಶಕ್ಕನುಸಾರವಾಗಿ ಮಾಸ್ತರುಗಳು ತಮ್ಮ ಡ್ಯೂಟಿ ಮುಗಿಸಿಬಿಡಬಹುದು. ನಿಯಮಕ್ಕೆ ಒಳಪಡುವ ಹುಡುಗನಿಗೆ ಬ್ಯಾಗು, ನೋಟ್ ಬುಕ್ಕುಗಳನ್ನು ಖರೀದಿಸಿ ಕೊಟ್ಟುಬಿಡಬಹುದು. ಆದರೆ ಅಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳುವ (ಈ ನಿಯಮಕ್ಕೆ ಒಳಪಡದ) ಇನ್ನೊಬ್ಬ ಹುಡುಗನಿಗೆ ಆಗ ಏನನಿಸಬಹುದು? ಮೇಸ್ಟ್ರು ತನಗೇಕೆ ನೋಟ್ ಬುಕ್ ಕೊಡುತ್ತಿಲ್ಲ ಅಂತ ಆತನಿಗೆ ಆ ವಯಸ್ಸಿನಲ್ಲಿ ಗೊತ್ತಾಗುವ ಸಂಭವಗಳು ಎಷ್ಟಿವೆ?
                  
    ಸಮಾಜದ ತುಳಿತಕ್ಕೊಳಗಾದ ಸಮೂಹಕ್ಕೆ ಒಳಿತಾಗಲೆಂದು SCPTSP ಕಾಯ್ದೆ ಅಡಿಯಲ್ಲಿ ತನ್ನ ಬಹುತೇಕ ಯೋಜನೆಗಳಲ್ಲಿ 18% ಹಣವನ್ನು ಪರಿಶಿಷ್ಟ ಜಾತಿ/ಪಂಗಡಗಳಿಗೆ ಎತ್ತಿಡಬೇಕೆಂದು ಸರ್ಕಾರ ಬಯಸುವದರಲ್ಲಿ ತಪ್ಪೇನಿಲ್ಲ. ಅದೇ ಕಾರಣಕ್ಕಾಗಿ ಇವತ್ತು ಕಲೆ, ಕ್ರೀಡೆ, ಸಾಹಿತ್ಯ, ಉದ್ಯೋಗ, ಕಾಮಗಾರಿದಂಥ ಎಲ್ಲ ರಂಗದಲ್ಲೂ ಈ ನಿಯಮ ಅಳವಡಿಕೆಯಾಗಿದೆ. ಹಾಗಂತ ಕರ್ನಾಟಕ ಸರ್ಕಾರ, ಕೇವಲ ಬಡವರಷ್ಟೇ ದಾಖಲಾಗುವ ಸರ್ಕಾರಿ ಶಾಲೆಯ ಅಮಾಯಕ ಮಕ್ಕಳಿಗೂ ಈ ತಾರತಮ್ಯ ಮಾಡುವದನ್ನು ಸಮರ್ಥಿಸಲಾದೀತೆ? 

   ಕೊನೆಯದಾಗಿ,ಇಲ್ಲಿ ಧರ್ಮಸಂಕಟಕ್ಕೆ ಬೀಳುವ ವ್ಯಕ್ತಿಯೆಂದರೆ ಶಿಕ್ಷಕ. ಯಾಕೆಂದರೆ, ಒಂದು ಮಗುವಿಗೆ ಸರ್ಕಾರದ ನೋಟ್ ಬುಕ್ ಕೊಟ್ಟು ಇನ್ನೊಂದು ಮಗುವಿನ ಪ್ರಶ್ನಾರ್ಥಕ ದೃಷ್ಟಿಯನ್ನು ಭರಿಸಬೇಕಾದವನು ಇದೇ ಶಿಕ್ಷಕ. ಹೀಗಾಗಿ, ಇಲ್ಲಿ ಸಹೃದಯದ ಶಿಕ್ಷಕರು ತಳಮಳಗೊಳ್ಳುತ್ತಾರೆ. ಇದೇ ಕಾರಣಕ್ಕೆ ಅನೇಕ ಮೇಷ್ಟ್ರುಗಳು ಸರ್ಕಾರದ ನೀತಿಗೆ ಒಳಪಡುವ ಇಬ್ಬರು ವಿದ್ಯಾರ್ಥಿಗಳಿಗೆ ಹಂಚಬಹುದಾದ ಹತ್ತು ನೋಟ್ ಬುಕ್ಕುಗಳನ್ನು, ನೀತಿಗೆ ಒಳಪಡದ ಇನ್ನೂ ಮೂವರು ವಿದ್ಯಾರ್ಥಿಗಳನ್ನು ಸೇರಿಸಿ, ತಲಾ ಎರಡೆರಡು ನೋಟ್ ಬುಕ್ಕುಗಳನ್ನು ವಿತರಿಸಿ ಎಲ್ಲರಿಗೂ ಸಮಾಧಾನ ಮಾಡುವದುಂಟು! ಆದರೆ ಇದನ್ನೆಲ್ಲ ಎಲ್ಲೂ ಹೇಳಿಕೊಳ್ಳಲಾರರು. ಹೇಳಿದರೆ, ಅದು ನಿಯಮಬಾಹಿರವಾದೀತು.  

   ಮಿಕ್ಕಂತೆ, ಇವತ್ತು ಜಾಗತಿಕ ಶಿಕ್ಷಣ ಕುರಿತಂತೆ ಪುಂಖಾನುಪುಂಖವಾಗಿ ಮಾತನಾಡಬಹುದು. ಸಿಂಗಪುರ್, ಜಪಾನ್, ಅಮೇರಿಕನ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಂಗುರಂಗಿನ ಸ್ಲೈಡ್ ಗಳನ್ನು ಬಿತ್ತರಿಸಬಹುದು. ಯೂರೋಪಿನ ವ್ಯವಸ್ಥೆಯನ್ನು ಕೊಂಡಾಡುತ್ತಲೇ, ಅಲ್ಲಿನ ಸ್ವೀಡನ್ ದೇಶದ ಪ್ರೈಮರಿ ಸ್ಕೂಲುಗಳ ಬಗ್ಗೆ ಭಾಷಣವನ್ನೇ ಬಿಗಿಯಬಹುದು. ಇಡೀ ಜಗತ್ತಿನ ಶೈಕ್ಷಣಿಕ ವ್ಯವಸ್ಥೆಗೇ ಮಾದರಿಯಾಗಿರುವ ಸ್ವೀಡನ್ ತನ್ನ ಪ್ರೈಮರಿ ಶಿಕ್ಷಕರಿಗೆ 'ಪ್ರೊಫೆಸರ್'ಗಳೆಂದು ಡೆಸಿಗ್ನೇಷನ್ ಕೊಟ್ಟು ತನ್ನದೇ ಯೂನಿವರ್ಸಿಟಿ ಮೇಸ್ಟ್ರುಗಳಿಗಿಂತ ಜಾಸ್ತಿ ಸಂಬಳ ಕೊಡುತ್ತದೆ. ಮಾಗಿದ ಮಿದುಳಿಗಿಂತ ಮಾಗದ ಮಿದುಳನ್ನು ಸಂಭಾಳಿಸುವದು ಹೆಚ್ಚಿನ ಶ್ರಮದಾಯಕ ಕೆಲಸ ಅಂತನ್ನುವ ಕಾರಣಕ್ಕಾಗಿ ಶಾಲೆಗೆ ಮೇಸ್ಟ್ರುಗಳಾಗಿ ಬರುವವರ ಪೈಕಿ ಬಹುಪಾಲು ಅಭ್ಯರ್ಥಿಗಳು ಪಿಎಚ್ ಡಿ ಮಾಡಿದವರಾಗಿರಬೇಕೆಂದು ಬಯಸುತ್ತದೆ. ಕೊನೆಗೆ, ಇವೆಲ್ಲ ಮಾನದಂಡದ ಜೊತೆಗೆ ಏನೇ ಡಾಕ್ಟರೇಟ್ ಗಳಿಸಿದ್ದರೂ ನೇಮಕಾತಿಯ ಸಂದರ್ಶನದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸದರಿ ಅಭ್ಯರ್ಥಿಯಲ್ಲಿ ತಾಳ್ಮೆ ಮತ್ತು ಹಂಬಲ ಕೊರತೆಯಿದೆ ಅಂತ ಚಿಕ್ಕ ಸಂದೇಹ ಬಂದರೂ ಆತನನ್ನು ಲಿಸ್ಟಿನಿಂದ ಎತ್ತಿ ಬೀಸಾಕುತ್ತದೆ- ಅಂತೆಲ್ಲ ಹೇಳಿಕೊಂಡು ನಾವು ಸೆಮಿನಾರುಗಳಲ್ಲಿರುವವರನ್ನು ಬೆಚ್ಚಿಬೀಳಿಸಬಹುದು! 

  ಬೇರೇನಿಲ್ಲ, ಸದ್ಯಕ್ಕೆ ನನಗೆ ಅನಿಸುತ್ತಿರುವದು ಒಂದೇ: ಪ್ರೈಮರಿ ಓದುತ್ತಿರುವ ಈ ಬಡ ಹುಡುಗನಿಗೆ ತನ್ನ ವಿದ್ಯಾಭ್ಯಾಸಕ್ಕೆ ಕುರಿತಂತೆ ಸರ್ಕಾರಿ ಪಾಲಸಿಗಳ ಬಗ್ಗೆ ಯಾವ ವಿಷಾದ ಭಾವನೆಯೂ ಬರಕೂಡದು. ಪಕ್ಕದಲ್ಲಿರುವ ಇನ್ನೊಬ್ಬ ಹುಡುಗನ ಜಾತಿಯ ಬಗ್ಗೆ ವಿಕಾರ ಭಾವನೆ ಮೂಡಕೂಡದು. ಮುಂದೊಮ್ಮೆ ಪ್ರೈಮರಿ, ಹೈಸ್ಕೂಲು, ಕಾಲೇಜುಗಳನ್ನೆಲ್ಲ ಮುಗಿಸಿ ಮದುವೆಯೂ ಆಗಿ ಬದುಕಿನ ಯಾವುದೋ ಹಂತದಲ್ಲಿ ತನ್ನ ಹಳೆಯ ಸ್ಕೂಲಿಗೆ ಭೇಟಿಕೊಟ್ಟಾಗ ಈ ಹುಡುಗನಲ್ಲಿ ಕೇವಲ ಮುದವಿರಬೇಕು. ಆ ಮುದ ಹೇಗಿರಬೇಕೆಂದು ಅಂತ ಈ ಅಮೇರಿಕನ್ ಹಾಯ್ಕು ಹೇಳುತ್ತಿರುವಂತಿದೆ:

ಹಳೇ ಸ್ಕೂಲಿಗೆ ಭೇಟಿ. 
ನಲವತ್ತರ ಆಸಾಮಿ ಅವಳ
ಬೆಂಚನ್ನೇರಿ ಮುದಗೊಳ್ಳುತ್ತಿದ್ದಾನೆ.      

-          
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 10.05.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ರಾಜೋ, ವಿಚಾರಪೂರ್ಣ ಲೇಖನ. ಸರಕಾರಿ ಶಾಲೆಗೆ ಹೋಗುವ ಹುಡುಗರು ಹೆಚ್ಚಾಗಿ ಆರ್ಥಿಕವಾಗಿ ಕೆಳಮಧ್ಯಮ ವರ್ಗದವರ ಮಕ್ಕಳೇ ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಿಭೇದವನ್ನು ಹುಟ್ಟಿಸುವ ಸರಕಾರದ ಧೋರಣೆಯು ಸಮರ್ಥನೀಯವಲ್ಲ. ಕೆಲಕಾಲದ ಹಿಂದೆ, ಮೀಸಲು ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ (?) ಪ್ರವಾಸಕ್ಕೆ ಕರೆದೊಯ್ಯುವ ಒಂದು ಆದೇಶವನ್ನು ಸರಕಾರವು ಹೊರಡಿಸಿತ್ತು. ಏಕೊ ಏನೊ, ಈ ಆದೇಶ ಅಲ್ಲಿಗೇ ನಿಂತು ಹೋಯಿತು ಎಂದು ಭಾವಿಸಿದ್ದೇನೆ. ಸ್ವಿಝರ್‍ಲ್ಯಾಂಡಿನಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದವರು ಆಗಿರುತ್ತಾರೆ ಎಂದು ಹೇಳಿದ್ದೀರಿ. ನಮ್ಮ ರಾಷ್ಟ್ರಪತಿಗಳಾಗಿದ್ದ ಡಾ^.ರಾಧಾಕೃಷ್ಣನ್‍ರು, ಪ್ರಾಥಮಿಕ ಶಾಲೆಗಳ ಶಿಕ್ಷಕರ ವೇತನವು ಕಾ^ಲೇಜು ಉಪನ್ಯಾಸಕರ ವೇತನದಷ್ಟೇ ಇರಬೇಕು ಎಂದು ಹೇಳಿದ್ದರು. ನಾನು ಕಲಿತ ಕನ್ನಡ ಶಾಲೆಗಳ ಶಿಕ್ಷಕರನ್ನು ನಾನು ಪ್ರೀತಿಯಿಂದ ನೆನೆಸುವ ಕಾರಣವೆಂದರೆ, ಅವರಿಗೆ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ ಹಾಗು ವಿದ್ಯೆಯನ್ನು ನೀಡುವ ಬಗೆಗೆ ಅವರಿಗಿದ್ದ ಶ್ರದ್ಧೆ. ಈ ಎರಡೂ ಗುಣಗಳು ಇತ್ತೀಚಿನ ಎಲ್ಲ ಶಿಕ್ಷಕರಲ್ಲಿ ಇರಲಿಕ್ಕಿಲ್ಲ!

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು, ಸರಕಾರಿ ಶಾಲೆಯ ಮಕ್ಕಳಲ್ಲಿ ಸರ್ಕಾರವೇ ಈ ರೀತಿಯ ತಾರತಮ್ಯ ಭಾವನೆಯನ್ನು ತುಂಬುತ್ತಲಿರುವದು ಸರ್ವಥಾ ಸಮರ್ಥನೀಯವಲ್ಲ. ಹಳೆಯ ಶಿಕ್ಷಕಗಣದ ಬಗ್ಗೆ ನಿಮ್ಮ ಅನಿಸಿಕೆ ತುಂಬ ಸರಿಯಾಗಿದೆ.
ಧನ್ಯವಾದಗಳು