Wednesday, May 24, 2017

ಮರಣದಂಡನೆಗೊಳಗಾದ ನಾಯಿ ಮತ್ತು ಪಳಗಿಸಲಾಗದ ಹುಲಿ!


ಳೆದ ವಾರದ ಈ ಘಟನೆಯ ಬಗ್ಗೆ ನೀವೂ ಓದಿರಬಹುದು. ಪಾಕಿಸ್ತಾನದ ಪಂಜಾಬಿನ ಭಕ್ಕರ್ ಜಿಲ್ಲೆಯಲ್ಲಿನ ಅಸಿಸ್ಟಂಟ್ ಕಮಿಷನರ್ ರಾಜಾ ಮೊಹಮ್ಮದ್ ಸಲೀಂ ಒಂದು ವಿಚಿತ್ರ ಶಿಕ್ಷೆ ವಿಧಿಸಿದರು. ನ್ಯಾಯದಾನದ ಪ್ರಕ್ರಿಯೆ ಮುಗಿಸುವ ಭರದಲ್ಲಿ ಕೋರ್ಟಿನ ಕಟಕಟೆಯಲ್ಲಿದ್ದ ನಾಯಿಗೆ ಮರಣದಂಡನೆಯನ್ನು ವಿಧಿಸಿಬಿಟ್ಟರು. ವಿಚಿತ್ರವೆಂದರೆ, ಮಗುವೊಂದನ್ನು ಕಚ್ಚಿ ಗಾಯಗೊಳಿಸಿದ ಆರೋಪದಡಿಯಲ್ಲಿ ಈ ನಾಯಿ ಈಗಾಗಲೇ ಒಂದು ವಾರದ ಜೈಲು ಶಿಕ್ಷೆಯನ್ನೂ ಅನುಭವಿಸಿತ್ತು! ಅದಾದ ಮೇಲೆ ಈ ಮರಣದಂಡನೆಯ ಪ್ರಹಾರ. ಈಗ ಈ ನಾಯಿಯ ಮಾಲೀಕ ಜಲೀಲ್ ತನ್ನ ನಾಯಿಯನ್ನು ಉಳಿಸಿಕೊಳ್ಳುವದಕ್ಕಾಗಿ ಪಾಕಿಸ್ತಾನದ ಎಲ್ಲ ಕೋರ್ಟುಗಳ ಬಾಗಿಲು ತಟ್ಟುವದಾಗಿ ಹೇಳಿಕೆ ಕೊಟ್ಟಿದ್ದಾನೆ.

   ವಿಚಿತ್ರ ನೋಡಿ, ನ್ಯಾಯಾಂಗ ವ್ಯವಸ್ಥೆ ಅಂತನ್ನುವದು ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಒಂದು ಶಿಸ್ತು ತರುವದಕ್ಕಾಗಿ ಹುಟ್ಟಿಕೊಂಡಿದ್ದು. ಆದರೆ ಕೋರ್ಟಿನ ಕಟಕಟೆಗಳಲ್ಲಿ ಮನುಷ್ಯನ ಬದಲಿಗೆ ಈ ಥರ ಪ್ರಾಣಿಗಳನ್ನು ಹಿಡಿದು ನಿಲ್ಲಿಸಿದ್ದು ಜಗತ್ತಿನ ಇತಿಹಾಸದಲ್ಲೆಡೆ ಇದ್ದಂತಿದೆ. ಪ್ರಾಣಿಗಳಲ್ಲದೇ ಕ್ರಿಮಿಕೀಟಗಳನ್ನೂ ನೂರಾರು ವರ್ಷಗಳ ಹಿಂದೆಯೇ ಹೀಗೆ ಯೂರೋಪಿನ ಧರ್ಮಾಧಾರಿತ ನ್ಯಾಯಾಲಯದ ಅಂಗಳದಲ್ಲಿ ನಿಲ್ಲಿಸಿ ಶಿಕ್ಷಿಸಲಾಗಿದೆ. ಅತಿ ಕಾಮುಕತೆಗೆ(?)ಒಳಗಾಗಿತೆಂದು ಹೆಣ್ಣುಕತ್ತೆ, ಹಂದಿಗಳನ್ನೆಲ್ಲ ಹೀಗೆ ಮರಣದಂಡನೆಗೆ ಗುರಿಪಡಿಸಲಾಗಿದೆ. ಇಂಥ ಹಲವಾರು ಪ್ರಕರಣಗಳ ಬಗ್ಗೆ (The Criminal Prosecution and Capital Punishment of Animals, 1906)ಬಗ್ಗೆ ವಿಕಿಪೀಡಿಯ ತನ್ನ ಪುಟದಲ್ಲಿ ವಿವರಗಳನ್ನು ದಾಖಲಿಸಿಕೊಂಡಿದೆ. 

   ಇಂಥದ್ದನ್ನೆಲ್ಲ ನೋಡಿದಾಗ ನಗು ಬರುತ್ತದೆ. ಪುರಾತನ ಕಾಲದಲ್ಲಿದ್ದ ಮನುಷ್ಯನ ಮಿದುಳಿಗೂ, ವರ್ತಮಾನದ ನಮ್ಮ ಯೋಚನಾಕ್ರಮಕ್ಕೂ ವ್ಯತ್ಯಾಸ ಬೇಡವೇ? ಒಂದು ತಾಲೂಕಿನ ಆಡಳಿತವನ್ನು ನಿಭಾಯಿಸುವಷ್ಟು ಸಮರ್ಥ ಮಿದುಳನ್ನು ಹೊಂದಿರುವ ಒಬ್ಬ ಅಸಿಸ್ಟಂಟ್ ಕಮಿಷನರ್ ಯಾರನ್ನೋ ಕಚ್ಚಿ ಗಾಯಗೊಳಿಸಿತು ಅಂತನ್ನುವ ಕಾರಣಕ್ಕೆ ಸದರಿ ನಾಯಿಗೆ ಮರಣದಂಡನೆ ವಿಧಿಸುತ್ತಾನೆ ಅಂತಾದರೆ ನಮ್ಮ ಕಾಮನ್ ಸೆನ್ಸ್ ಎಲ್ಲಿ ಸತ್ತುಹೋಗಿದೆ ಅಂತ ಹುಡುಕಬೇಕೆನಿಸುತ್ತದೆ. 

   ಇಲ್ಲೊಂದು ತಮಾಷೆ ನೆನಪಾಗುತ್ತಿದೆ. ಇದನ್ನು ಹೇಳಿದವನು ಯಾರು ಅಂತ ಯಾರಿಗೂ ಸರಿಯಾಗಿ ಗೊತ್ತಿದ್ದಂತಿಲ್ಲ. ಒಬ್ಬರು ಲಾವೋ ತ್ಸು ಹೇಳಿದ್ದು ಅಂದರೆ, ಇನ್ಯಾರೋ ಕನ್ ಫ್ಯೂಶಿಯಸ್ ಹೇಳಿದ್ದು ಅನ್ನುತ್ತಾರೆ. ಮತ್ಯಾರೋ ಇದು ಹಾಯ್ಕು ಮಾಸ್ಟರ್ ಬಾಶೋನ ಮಾತು ಅನ್ನುವದುಂಟು. ಒಟ್ಟಿನಲ್ಲಿ ಒಂದು ತಮಾಷೆ ಮಾತು ನಮ್ಮ ವರ್ತಮಾನದ ಬಹುತೇಕ  ಘಟನೆಗಳಿಗೆ ತಾರ್ಕಿಕ ಪರಿಹಾರ ನೀಡಿರುವದಂತೂ ನಿಜ. ಇಷ್ಟಕ್ಕೂ ಆ ಮಾತಿನ ಅರ್ಥ ಮಜವಾಗಿದೆ: 
“ಸೊಳ್ಳೆಯೊಂದು ಮನುಷ್ಯನ ವೃಷಣದ ಮೇಲೆ ಬಂದು ಕುಳಿತಾಗಲೇ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಹಿಂಸಾರೂಪದ ಶಿಕ್ಷೆಯೊಂದೇ ಪರಿಹಾರವಲ್ಲ ಅಂತನ್ನುವ ಸತ್ಯ ಗೋಚರಿಸತೊಡಗುತ್ತದೆ..”
                                                                        *
   ನಮ್ಮಲ್ಲೀಗ ಹೊಸ ತಮಾಷೆ ಶುರುವಾದಂತಿದೆ. ದಿನಬೆಳಗಾದರೆ ನಮ್ಮ ನಾಯಕರು ದಲಿತರ ಮನೆಗಳಲ್ಲಿ ತಟ್ಟೆ ಹರಡಿಕೊಂಡು ಊಟಕ್ಕೆ ಕೂರುತ್ತಿದ್ದಾರೆ. ಈ ಆಟದಲ್ಲಿ ಯಾವ ನಾಯಕನೂ ಹಿಂದೆ ಬಿದ್ದಂತಿಲ್ಲ. ಅಷ್ಟಕ್ಕೂ ದಲಿತರ ಮನೆಯಲ್ಲಿ ಊಟ ಮಾಡುವದರಿಂದ ಸಾಮಾಜಿಕವಾಗಿ ಹಿಂದುಳಿದವರ ಬದುಕಿಗೆ ಹೇಗೆ ಲಾಭವಾಗುತ್ತದೆ ಅಂತನ್ನುವದು ನನಗಂತೂ ಅರ್ಥವಾಗದ ಸಂಗತಿ. ಅಷ್ಟಾದರೂ ಈ ನಾಯಕರು ಒಬ್ಬರ ಮೇಲೆ ಒಬ್ಬರು ಸ್ಪರ್ಧೆಗೆ ಬಿದ್ದವರಂತೆ ದಲಿತರ ಮನೆಗೆ ದೌಡಾಯಿಸುತ್ತಿದ್ದಾರೆ. ಮನೆಯೊಳಗಿರುವ ನಾಯಕನಿಗೆ ತನ್ನದು ದಲಿತರ ಬಗ್ಗೆ ಪ್ರೀತಿ ಅಂತನಿಸುತ್ತಿದ್ದರೆ, ಹೊರಗೆಲ್ಲೋ ಪತ್ರಿಕಾಗೋಷ್ಠಿ ನಡೆಸುತ್ತಿರುವ ವಿರೋಧಿ ನಾಯಕನಿಗೆ ಅದೊಂದು ನಾಟಕದಂತೆ ತೋರುತ್ತಿರುತ್ತದೆ. ಮರುದಿನ ಈ ಇಬ್ಬರೂ ನಾಯಕರ ಸ್ಥಾನ ಬದಲಾಗುತ್ತದೆ. ಅಲ್ಲಿದ್ದ ನಾಯಕ ಇಲ್ಲಿರುತ್ತಾನೆ. ಇಲ್ಲಿದ್ದ ನಾಯಕ ಅಲ್ಲಿರುತ್ತಾನೆ. ಮಾತುಗಳು ಕೂಡ ಅದಲುಬದಲಾಗಿರುತ್ತವೆ. 

   ಅಚ್ಚರಿಯೇನಿಲ್ಲ. ಊರಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಅಜ್ಜಿಯೊಬ್ಬಳು ಥೇಟ್ ಹೀಗೇ ಇದ್ದಿದ್ದು. ಮನೆಯಲ್ಲಿ ಯಾರಾದರೂ ಓಡಾಡುವಾಗ ಅವರ ಕಾಲು ತಾಕಿ ನೀರು ತುಂಬಿಟ್ಟಿದ್ದ ನೀರಿನ ಲೋಟ ನೆಲದ ಮೇಲೆ ಉರುಳಿಬಿದ್ದರೆ ಮುದುಕಿ ರೌದ್ರಾವತಾರ ತಾಳುತ್ತಿದ್ದಳು. 'ಓಡಾಡುವಾಗ ನಿಮಗೆಲ್ಲ ಕಣ್ಣು ಕಾಣಿಸಲ್ವೇನ್ರೋ?' ಅಂತ ಸಿಕ್ಕಂತೆ ಬಯ್ಯುತ್ತಿದ್ದಳು. ಯಾಕೆಂದರೆ ಅಲ್ಲಿ ಲೋಟ ಇಟ್ಟಿದ್ದು ಇದೇ ಅಜ್ಜಿ. ಆದರೆ ಇದೇ ಮುದುಕಿ ತಾನು ಓಡಾಡುವಾಗ ಹುಷಾರು ತಪ್ಪಿ ಅದೇ ಲೋಟ ಬೀಳಿಸಿದ್ದರೆ ಅವಳ ವರಸೆ ಬೇರೆಯಾಗುತ್ತಿತ್ತು. "ಜನ ಓಡಾಡುವ ಜಾಗದಲ್ಲಿ ನೀರಿನ ಲೋಟ ಇಡ್ತೀರಲ್ಲಪ್ಪ, ಬುದ್ಧಿ ಬ್ಯಾಡವಾ ನಿಮಗೆ?" ಅಂತ ನಮಗೇ ತಿರುಮಂತ್ರ ಹಾಕುತ್ತಿದ್ದಳು! 
ದಲಿತರ ಮನೆಯಲ್ಲಿ ಊಟಕ್ಕೆ ಕುಳಿತವರು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ಕೊಡುತ್ತಿರುವವರು- ಇಬ್ಬರೂ ಊರಲ್ಲಿ ಮುದುಕಿಯಂತೆ ಕಾಣಿಸುತ್ತಿರುವದರಲ್ಲಿ ವ್ಯಂಗ್ಯವೇನೂ ಇಲ್ಲ.

   ನಿಜ, ತಪ್ಪು ಈ ನಾಯಕರದ್ದಲ್ಲ. ತಪ್ಪು ನಮ್ಮದು. ವರ್ತಮಾನದ ಬಹುತೇಕ ಘಟನೆಗಳಿಗೆಲ್ಲ ಒಂದೋ ತೀರ ಭಾವುಕತೆಯಿಂದಲೋ ಅಥವಾ ತೀರ ಅಸಡ್ಡೆಯಿಂದಲೋ ಪ್ರತಿಕ್ರಿಯಿಸುವ ನಮಗೆ ಮುಂದಿನ ಜನಾಂಗಕ್ಕೆಂದು ಒಂದು ಪ್ರಾಕ್ಟಿಕಲ್ಲಾದ benchmark ಸಿದ್ಧಪಡಿಸಿ ಹೋಗಬೇಕೆಂಬ ತಹತಹವೇ ಇದ್ದಂತಿಲ್ಲ. ನಮಗೆ ವರ್ತಮಾನದ ಮಜದಲ್ಲೇ ಎಲ್ಲ ರೀತಿಯ ತೃಪ್ತಿ ದೊರಕಿದಂತಿದೆ. ಸುಮ್ಮನೇ ಒಂದಿಷ್ಟು ಗಮನಿಸುತ್ತ ಬನ್ನಿ. ಮಾಲ್ ಗಳಲ್ಲಿರುವ ರೆಸ್ಟೋರೆಂಟ್ ಗಳ ಊಟ, ತಿಂಡಿಯ ದರ ನೋಡಿದರೆ ತಲೆ ತಿರುಗುತ್ತದೆ. ಅಲ್ಲಿರುವ ಶರ್ಟು-ಪ್ಯಾಂಟುಗಳ ದರ ನನ್ನನ್ನು ದಂಗು ಬಡಿಸುತ್ತಿದೆ. ಇಷ್ಟಾದರೂ ನಾನು ಆಗಾಗ ಕೊಂಡುಕೊಳ್ಳುತ್ತೇನೆ. ಇದು ಬರೀ ಮಾಲ್ ಗಳ ಕತೆಯಲ್ಲ. ಬೆಂಗಳೂರಿನ ಬಹುತೇಕ ದೊಡ್ಡ ಹೋಟೆಲುಗಳ ದರ, ಸಿನೆಮಾಗಳ ದರ ಸಿಕ್ಕಾಪಟ್ಟೆ ಆಗುತ್ತಿದೆ. ಬ್ರಾಂಡೆಡ್ eat out ಗಳ ಪರಿಸ್ಥಿತಿಯೂ ಅಷ್ಟೇ. 

   ನಾನು ಬರೀ ನನ್ನ ಕತೆ ಮಾತ್ರ ಹೇಳುತ್ತಿದ್ದೇನೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ನನ್ನ ಬೆಳಗಿನ ತಿಂಡಿ, ಕಾಫಿ ಏಳೆಂಟು ರೂ.ಗಳಲ್ಲಿ ಮುಗಿಯುತ್ತಿತ್ತು. ಈಗ? ನಿಜ, ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನರಲ್ಲಿ ದುಡ್ಡೂ ಹರಿಯತೊಡಗಿದೆ. ಆದರೆ ಇವೆಲ್ಲವನ್ನೂ ಮೀರಿ ಎಲ್ಲ ವಸ್ತುಗಳ ದರ ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಮಿತಿಮೀರಿ ಹೆಚ್ಚಾಗಿದೆ. 

   ತಪ್ಪು ಯಾರದು? ಮಾಮೂಲಿ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದ ನಾನು ಅಡ್ಡಹೊತ್ತಿನಲ್ಲಿ ಸ್ವಲ್ಪ ದುಡ್ಡು ನೋಡತೊಡಗಿದ ಮೇಲೆ ವಿಚಿತ್ರ ತೆವಲು ಬಂತು. ಮಾಲ್, ಪಿವಿಆರ್, ಕೆಎಫ್ ಸಿ, ಬೌಲಿಂಗ್, ಯುನೈಟೆಡ್ ಕಲರ್ಸ್, ಡ್ಯೂಡ್, ಕೂಲ್ ಮ್ಯಾನ್- ಇವೆಲ್ಲ ಶಬ್ದಗಳು ಕೊಂಚಮಟ್ಟಿಗೆ ನನ್ನ ತಲೆ ಕೆಡಿಸಿದ್ದಂತೂ ನಿಜ. ಒಂದಿಡೀ ಸಮೂಹಕ್ಕೆ ಮೋಡಿ ಮಾಡಿದ್ದೂ ನಿಜ. ಪರಿಣಾಮ ಏನಾಯಿತು ನೋಡಿ: ಜನರಲ್ಲಿ ದುಡ್ಡು ಹೆಚ್ಚಾಗುತ್ತಿದೆ ಮತ್ತು ಅದರಲ್ಲಿ ಬಹುಪಾಲು ಹಣ ಅರ್ಥವಿಲ್ಲದ ಘನಕಾರ್ಯಗಳಿಗೆ ಬಳಸಲ್ಪಡುತ್ತಿದೆ ಅಂತ ಯಾವಾಗ ಎಲ್ಲರಿಗೂ ಗೊತ್ತಾಯಿತೋ, ಮಾಮೂಲಿ ಅಂಗಡಿಗಳ ಬೆಲೆಯೂ ಏರಿ ಕುಳಿತಿತು. ಮನೆಗಳ ಭಾಡಿಗೆ, ತರಕಾರಿ, ಸಿನೆಮಾ ಟಿಕೆಟ್ಟು ಹಾಳಾಗಲಿ- ಒಂದು ಮಾಮೂಲಿ ಶೋರೂಂನಲ್ಲಿ ನೋಡಿದ ಶರ್ಟು, ಮಾಲ್ ಗಳ ಶೋರೂಂಗಳಲ್ಲಿ ತನ್ನ ಬೆಲೆಯನ್ನು ಎರಡು ಮೂರು ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುತ್ತದೆ ಅಂದರೆ ಎಲ್ಲೋ ಏನೋ ಖಂಡಿತ ಎಡವಟ್ಟಾಗುತ್ತಿದೆ.

   ಬೇರೆ ಯಾರೂ ಅಲ್ಲ, ಮುಖ್ಯವಾಗಿ ಇದೆಲ್ಲದರ ತಾಳ ತಪ್ಪಿಸಿದ್ದು ನಾವು. ಹತ್ತು ರೂಪಾಯಿಯ ಇಡ್ಲಿಯನ್ನು ಕುಣಿದಾಡುತ್ತಲೇ ನಲವತ್ತು ತೆತ್ತು ತಿಂದಿದ್ದು ನಾವು. ತೀರ ಕಂಜೂಸ್ ಆಗಬೇಕಿಲ್ಲ, ಆದರೆ ಯಾವುದೇ ವಸ್ತುವಿನ ಅರ್ಹ ಬೆಲೆಗಿಂತ ಜಾಸ್ತಿ ಹಣ ಪಾವತಿ ಮಾಡಲು ಈಗೀಗ ಮನಸ್ಸು ಬರುತ್ತಿಲ್ಲ. ಹಾಗಂತ ಏರಿದ ಹುಲಿಯನ್ನು ಪಳಗಿಸಲೂ ಗೊತ್ತಾಗುತ್ತಿಲ್ಲ. ಹೀಗೆ ಪಳಗಿಸಲಾಗದ ಹುಲಿಯನ್ನೇರಿ ಭವಿಷ್ಯದ ಪ್ರಜ್ಞೆಯನ್ನೇ ಕಳೆದುಕೊಂಡಿರುವ
ಮನುಷ್ಯ ಮತ್ತು ಕಾಮನ್ ಸೆನ್ಸ್ ಇಲ್ಲದೇ ನಾಯಿಗೆ ಮರಣದಂಡನೆ ವಿಧಿಸುವ ಮೂಲಕ ವಾಸ್ತವಿಕ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಮನುಷ್ಯ-

ಇವರಿಬ್ಬರೂ ಬದಲಾಗುವವರೆಗೂ ನಮ್ಮ ನಾಯಕರ ಊಟ ಮತ್ತು ಗೋಷ್ಠಿ ನಡೆಯುತ್ತಲೇ ಇರುತ್ತವೆ..  
                                                                          -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 24.05.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ರಾಜೋ, ಕಾಯದೆಗೆ ಕತ್ತೆ ಎನ್ನುವುದು ತಪ್ಪು; ಆ ಕಾಯದೆಯನ್ನು ಕುರುಡಾಗಿ ಪಾಲಿಸುವವನು ಕತ್ತೆ! ಇನ್ನು ಪಳಗಿಸಲಾಗದ ಹುಲಿಯ ಮೇಲೆ ನಾವೆಲ್ಲರೂ ಕುಳಿತಿರುವುದು ಸರಿಯೇ! ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದಲೇ ಅವರನ್ನು glamorous ಶಾಲೆಗಳಿಗೆ ಸಿಕ್ಕಾಪಟ್ಟು ಡೊನೇಶನ್ ಕೊಡುವುದರಿಂದ ನಮ್ಮ ಹುಲಿಸವಾರಿ ಪ್ರಾರಂಭವಾಗುತ್ತದೆ. ಆನಂತರ ಪಿಝಾ, branded items ಇವೆಲ್ಲ ಇದ್ದರೆ ಮಾತ್ರ ನಾವು gentlemen; ಇಲ್ಲಾ ಅಂದರೆ ಗುಗ್ಗೂಗಳು ಆಗಿಬಿಡುತ್ತೇವೆ. ನಿಮ್ಮ ಲೇಖನಗಳಲ್ಲಿ ಸುನೀತಿ ಹಾಗು ಸುರುಚಿ ಜೊತೆಗೇ ಸಿಗುವುದರಿಂದ ಓದುವಿಕೆ ಆಹ್ಲಾದಕರವಾಗಿರುತ್ತದೆ.

ವಿ.ರಾ.ಹೆ. said...

100% ನಿಜ. ನಿಮ್ಮ ಬರಹ ಓದಿದರೆ ನಮ್ಮ ಹಾಗೇ ಯೋಚಿಸುವ ಜನರು ಈ ಜಗತ್ತಿನಲ್ಲಿ ನಮ್ಮ ಜೊತೆಗಿದ್ದಾರೆ ಅನ್ನುವ ಸಮಾಧಾನ ಸಿಗುತ್ತದೆ. ಆದರೆ...... :(

ರಾಘವೇಂದ್ರ ಜೋಶಿ said...

ಸುನಾಥ ಸರ್,
ಕಾಯದೆಗೆ ಕತ್ತೆ ಎನ್ನುವುದು ತಪ್ಪು; ಆ ಕಾಯದೆಯನ್ನು ಕುರುಡಾಗಿ ಪಾಲಿಸುವವನು ಕತ್ತೆ!

ಹಹಹ.. ಬಿದ್ದುಬಿದ್ದು ನಗುವಂತಾಯಿತು. ನಿಜ, ವರ್ತಮಾನ ಒಂದು ರೀತಿಯಲ್ಲಿ ಹಾಗೆಯೇ ಇದ್ದಂತಿದೆ. ಧನ್ಯವಾದಗಳು

ರಾಘವೇಂದ್ರ ಜೋಶಿ said...

ವಿಕಾಸ ಹೆಗಡೆಯವರೇ,

ಯೆಸ್, ನಮ್ಮನಿಮ್ಮಂತೆ ಯೋಚಿಸುವ ಜನ ಸಾಕಷ್ಟಿದ್ದಾರೆ. ಆದರೆ ಕಣ್ಣುಮುಚ್ಚಿಸಿಕೊಂಡು ಬೆನ್ನುತಟ್ಟಿಸಿಕೊಂಡು ಹೊರಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ ಅಂತನಿಸುತ್ತದೆ. ಬಹುಶಃ ಇದೇ ಸಮಸ್ಯೆಗೆ ಕಾರಣವೇನೋ..

ಧನ್ಯವಾದಗಳು.