ಸರ್ಕಾರಿ ಶಾಲೆಯ ಮೊದಲ
ದಿನ.
ಒಂದು
ಮಗು ಮಾತ್ರ
ದಿಗಿಲು,
ಧಾವಂತ ಮತ್ತು ಚಿಂತಾಕ್ರಾಂತ.
ಸಮವಸ್ತ್ರ
ಅಳತೆಗೆ ತಕ್ಕಂತಿಲ್ಲ
ಮೊನ್ನೆಯಿಂದ
ಶಾಲೆಗಳು ಮತ್ತೇ ಶುರುವಾಗಿವೆ. ಈ ಚೀನೀ ಹಾಯ್ಕು ಸರ್ಕಾರಿ ಶಾಲೆಯ ಸಂಭ್ರಮ, ಸಡಗರ ಮತ್ತು
ಧಾವಂತಗಳನ್ನು ಬಿಡಿಸಿಡುತ್ತಲಿದೆ. ನಿಜ, ನಾವೆಲ್ಲ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಇದ್ದಂಥ ಪರಿಸ್ಥಿತಿ ಈಗಿಲ್ಲ. ಶಾಲೆ
ಶುರುವಾದ ಮೊದಲ ಎರಡು ದಿನ ನಾವೇ ಪೊರಕೆ ಹಿಡಿದು ಧೂಳು, ಕಸಗಳನ್ನು ಸ್ವಚ್ಛಗೊಳಿಸಬೇಕಿತ್ತು. ಪ್ರತಿದಿನ ಇಬ್ಬರು ಹುಡುಗರು
ಪಾಳಿಪ್ರಕಾರ ವರ್ಷವಿಡೀ ಕಸಗುಡಿಸುತ್ತಿದ್ದರು. ಬಿಸಿ ಊಟ ಇರಲಿಲ್ಲ. ಚಪ್ಪಲಿ,
ಸೈಕಲ್ಲುಗಳಿರಲಿಲ್ಲ. ಇದಕ್ಕೆಲ್ಲ ಕಳಸವಿಟ್ಟಂತೆ ಮಾಸ್ತರುಗಳ ರೂಲು ಕಟ್ಟಿಗೆಯ ಹೊಡೆತಕ್ಕೆ
ಭಿಡೆಯೂ ಇರಲಿಲ್ಲ!
ಇವತ್ತು ಹಾಗೇನಿಲ್ಲ. ಕಸಗುಡಿಸಲು
ಆಯಾಗಳಿದ್ದಾರೆ. ಬಿಸಿಯೂಟಕ್ಕೆ ಆಯಾಗಳಿದ್ದಾರೆ. ತಮ್ಮತಮ್ಮ ಅಕಾಡೆಮಿಕ್
ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಪರಿಣಿತರನ್ನೇ ಶಿಕ್ಷಕವೃತ್ತಿಗೆ ಆಯ್ದುಕೊಳ್ಳಲಾಗುತ್ತದೆ. ಈ ಮಾಸ್ತರುಗಳು
ವಿದ್ಯಾರ್ಥಿಗಳ ಮೇಲೆ ಕೈ ಎತ್ತಲು ಹಿಂದೆಮುಂದೆ ನೋಡುತ್ತಾರೆ. ಸ್ವಲ್ಪ ಹೆಚ್ಚುಕಡಿಮೆ ಆದರೆ
ಎಲ್ಲಿ ನೌಕರಿಗೇ ಕುತ್ತು ಬಂದೀತು ಅಂತ ಗಾಬರಿಗೊಳ್ಳುತ್ತಾರೆ. 'ಗುರುಪೂರ್ಣಿಮೆ' ದಿನ
ಮಕ್ಕಳಲ್ಲಿ ಗುರುವಿನ ಮಹತ್ವ ತಿಳಿಸಲೆಂದು ಈ ಮಕ್ಕಳ ಕೈಲಿ ತಮ್ಮ ಕಾಲು ತೊಳಿಸಿಕೊಳ್ಳುವಂಥ
ಸಾಂಕೇತಿಕ ಆಚರಣೆ ಏನಾದರೂ ಮಾಡಿಬಿಟ್ಟರೆ ಮುಗಿಯಿತು, ಎಲ್ಲಿ ಯಾವ ಹಕ್ಕಿನ ಉಲ್ಲಂಘನೆ ಆಗುತ್ತದೋ
ಎಂಬ ಡುಗುಡುಗು.
'ತತಃ ಕಿಂ? ತತಃ ಕಿಂ?' ಅಂತ ಪ್ರಶ್ನಿಸುತ್ತಾರೆ
ಶಂಕರಾಚಾರ್ಯರು. ಇವತ್ತು ನೀವೇನೋ ಆಗಿರಬಹುದು. ಮಟ್ಟಸವಾದ
ಶರೀರ, ಸುಂದರ ಹೆಂಡತಿ, ದುಡ್ಡಿನ ಹೊಳೆಯಲ್ಲಿ
ಮೀಯುತ್ತಿರುವ ಮಕ್ಕಳು-ಮೊಮ್ಮಕ್ಕಳು. ನಿಮ್ಮ
ಜಾನಭಂಡಾರವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಯಾರೇನೇ ಮಾಹಿತಿ ಕೇಳಿದರೂ ಅದೆಲ್ಲ ನಿಮ್ಮ
ನಾಲಿಗೆಯ ತುದಿಯಲ್ಲಿದೆ. ಹೀಗೆ ನಿಮ್ಮ ಸುತ್ತಲೂ ಇಂಥದೊಂದು ಪ್ರಭಾವಳಿ ಮೆತ್ತಿಕೊಂಡಿರುವಾಗ
ನಿಮ್ಮ ತಲೆ ನಿಮ್ಮ ಗುರುವಿನ ಪಾದದಡಿಯಲ್ಲಿ ಇಲ್ಲದೇ ಹೋದರೆ ಏನುಪಯೋಗ ಅಂತ ಶಂಕರರು ಝಾಡಿಸುತ್ತಾರೆ. ಬಹುಶಃ ಮನುಷ್ಯನ ಬದುಕಿನಲ್ಲಿ ಗುರುವಿನ
ಸ್ಥಾನ ಎಂಥದ್ದು ಅನ್ನುವದಕ್ಕೆ ಇದಕ್ಕಿಂತ ಅತ್ಯುತ್ತಮ ರೂಪಕ ಇನ್ನೊಂದು ಇರಲಿಕ್ಕಿಲ್ಲ.
*
ಈ ಜಾಪಾನಿನ ಆರು ವರ್ಷದ ಪೋರನಿಗೆ ಜೂಡೋ
ಕಲಿಯಲು ತೀವ್ರ ಆಸಕ್ತಿ. ಆದರೆ ಈತನಿಗೋ ಎಡಗೈ ಇಲ್ಲ. ಹುಟ್ಟಿದ ಎರಡನೇ ವರ್ಷಕ್ಕೇ
ಅಪಘಾತವೊಂದರಲ್ಲಿ ಎಡಗೈ ಕಳೆದುಕೊಂಡಿದ್ದಾನೆ. ಹೀಗಿರುವ ಮಗನ ಆಸಕ್ತಿಯನ್ನು ತಂದೆತಾಯಿಗಳು
ಬೆಂಬಲಿಸುತ್ತಾರಾದರೂ ಅದು ಕೇವಲ ಪ್ರೀತಿ ಅಷ್ಟೇ. ಒಂದು ಕೈ ಇಲ್ಲದ ಈ ಹುಡುಗ ಹೇಗೆ ಜೂಡೋ
ಕಲಿಯಬಲ್ಲ? ಆದರೆ ಪೋರನ ಹಠ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ. ವಿಧಿಯಿಲ್ಲದೇ ಅವರು
ಜಾಪಾನಿನ ಶ್ರೇಷ್ಠ 'ಸೆನ್ಸೇಯ್' ಬಳಿ ಮಗನನ್ನು ತಂದು ಬಿಡುತ್ತಾರೆ. (ಜಾಪಾನಿನಲ್ಲಿ ಮಾರ್ಷಲ್
ಕಲೆಯನ್ನು ಕಲಿಸುವ ಗುರುವಿಗೆ 'ಸೆನ್ಸೇಯ್' ಅನ್ನುತ್ತಾರೆ)
'ಮುಂದೆ ಏನಾಗಬೇಕು ಅಂದುಕೊಂಡಿದ್ದೀಯ?' ಅಂತ
ಸೆನ್ಸೇಯ್ ಪೋರನನ್ನು ಕೇಳುತ್ತಾನೆ. 'ಜಗತ್ತಿನ ಶ್ರೇಷ್ಠ ಜೂಡೋಪಟು ಆಗಬೇಕು' ಅಂತ ಪೋರ
ಎತ್ತೆತ್ತಲೋ ನೋಡುತ್ತ ಉತ್ತರಿಸುತ್ತಾನೆ. ಹುಡುಗನ ಧ್ವನಿಯಲ್ಲಿ ರೆಬೆಲ್ ಮತ್ತು
ಹಠವನ್ನು ಗಮನಿಸಿದ ಗುರು ಮುಗುಳ್ನಗುತ್ತ ಆಶ್ರಮಕ್ಕೆ
ಸೇರಿಸಿಕೊಳ್ಳುತ್ತಾನೆ. ತಾಲೀಮು ಶುರುವಾಗುತ್ತದೆ. ಪ್ರತಿದಿನ ಒದೆಯುವದೊಂದೇ ಕೆಲಸ. ಆರು ತಿಂಗಳ ಬಳಿಕ
ಹುಡುಗನಿಗೆ ಒಂದು ವಿಷಯದ ಬಗ್ಗೆ ಕಳವಳ ಕಾಡತೊಡಗುತ್ತದೆ. ತನ್ನ ಜೊತೆ ಜೂಡೋ ಕಲಿಯುತ್ತಿರುವ ಇತರೇ
ಮಕ್ಕಳು ಜೂಡೋ ಕಲೆಯ ಐದಾರು ಪಟ್ಟುಗಳಲ್ಲಿ
ಪರಿಣಿತರಾಗುತ್ತಿದ್ದಾರೆ. ಆದರೆ ಈ ಗುರು ನೋಡಿದರೆ ತನಗೆ ಒಂದೇ 'ಕಿಕ್' ಮಾತ್ರ
ಕಲಿಸುತ್ತಿದ್ದಾನಲ್ಲ? ಆ ದಿನ ಅಭ್ಯಾಸ ಮುಗಿಸಿದ ಹುಡುಗ
ಸೆನ್ಸೇಯ್ ಬಳಿ ತನ್ನ ಆತಂಕವನ್ನು ತೋಡಿಕೊಳ್ಳುತ್ತಾನೆ. ಆಗ ಗುರು ನಗುತ್ತ 'ಪರವಾಗಿಲ್ಲ, ಇದೊಂದು
ಕಿಕ್ಕನ್ನೇ ನೀನಿನ್ನೂ ಸರಿಯಾಗಿ ಕಲಿತಿಲ್ಲ' ಅಂತ ಸಾಗ
ಹಾಕುತ್ತಾನೆ.
ಎರಡು ವರ್ಷಗಳ ಬಳಿಕ ಪೋರನಿಗೆ ಮತ್ತದೇ ಬೇಸರ. ತನ್ನ
ಜೊತೆಗಿದ್ದ ಹುಡುಗರು ಹತ್ತಾರು ಪಟ್ಟುಗಳಲ್ಲಿ ಈಗಾಗಲೇ ಪಾರಂಗತರಾಗಿದ್ದಾರೆ. ತಾನಿನ್ನೂ ಒಂದೇ
'ಕಿಕ್'ನಲ್ಲಿ ಒದ್ದಾಡುತ್ತಿದ್ದೇನೆ. ಸೆನ್ಸೇಯ್ ಬಳಿ ಮತ್ತದೇ ಹಳೆಯ ನೋವನ್ನು
ತೋಡಿಕೊಳ್ಳುತ್ತಾನೆ. "ನೀವು ನನ್ನನ್ನು ಜಗತ್ತಿನ ಶ್ರೇಷ್ಠ ಜೂಡೋಪಟು ಮಾಡುವೆ ಅಂತ ಹೇಳಿದ್ದೀರಿ.
ಎರಡು ವರ್ಷಗಳಲ್ಲಿ ಒಂದೇ ಒಂದು ಕಿಕ್ ಬಿಟ್ಟು ಮತ್ತೇನನ್ನೂ ನನಗೆ ಕಲಿಸಿಲ್ಲ.." ಅಂತ ಮೊದಲ
ಬಾರಿಗೆ ಗುರುವಿನ ಮೇಲೆ ಸಿಟ್ಟಾಗುತ್ತಾನೆ. ಗುರು ಮಂದಹಾಸ ಬೀರುತ್ತಾನೆ. ಹೋಗಿ ತಾಲೀಮು ಮಾಡು ಅಂತ ಕಣದಲ್ಲಿ ದೂಡುತ್ತಾನೆ. ಹತ್ತು ವರ್ಷಗಳು ಕಳೆಯುತ್ತವೆ.
ಆಶ್ರಮದ ಎಲ್ಲ ಹುಡುಗರ ವಿದ್ಯಾಭ್ಯಾಸ ಮುಗಿದಿದೆ. ಈಗ ಶ್ರೇಷ್ಠ ವಿದ್ಯಾರ್ಥಿಯನ್ನು ಆಯ್ಕೆ ಮಾಡುವ
ಸಮಯ. ಹಾಗಾಗಿ ಅಲ್ಲಿದ್ದ ಎಂಭತ್ತು ಹುಡುಗರ
ಮಧ್ಯೆ ಜೂಡೋ ಕಾಳಗ ಏರ್ಪಡಿಸಲಾಗುತ್ತದೆ. ನಮ್ಮ ಹುಡುಗನಿಗೋ ತಳಮಳ. ಎಲ್ಲರೂ ಹಲವಾರು
ಪಟ್ಟುಗಳನ್ನು ಅರೆದು ಕುಡಿದವರು. ತಾನೋ ಕಳೆದ ಹತ್ತು ವರ್ಷಗಳಲ್ಲಿ ಒಂದೇ ಕಿಕ್ ಕಲಿತವನು.
ಮೇಲಾಗಿ ಎಡಗೈ ಬೇರೆ ಇಲ್ಲ!
ಸ್ಪರ್ಧೆ ಆರಂಭವಾಗುತ್ತದೆ. ಹುಡುಗ ಮೊದಲ ಇಬ್ಬರನ್ನು
ನಿರಾಯಾಸದಿಂದ ತನ್ನ ಕಿಕ್ ಉಪಯೋಗಿಸಿ ನೆಲಕ್ಕುರುಳಿಸುತ್ತಾನೆ. ಆಮೇಲೆ ತನಗೇ ಅಚ್ಚರಿಯಾಗುವಂತೆ
ಸುಮಾರು ಎದುರಾಳಿಗಳ ಅಸಡ್ಡೆಯನ್ನೋ ಉದಾಸೀನವನ್ನೋ ಅವಕಾಶವನ್ನಾಗಿಸಿ ತನ್ನ ಒಂದೇ ಕಿಕ್
ಕಲೆಯನ್ನು ಉಪಯೋಗಿಸಿ ಗೆಲ್ಲುತ್ತ ಹೋಗುತ್ತಾನೆ. ಆದರೆ ಅಂತಿಮ ಪಂದ್ಯದಲ್ಲಿ ತನ್ನ ಎದುರಾಳಿಯನ್ನು
ಕಂಡು ಕೊಂಚ ಅಧೀರನಾಗುತ್ತಾನೆ. ಎಲ್ಲ ರೀತಿಯಿಂದಲೂ ತನಗಿಂತ ಶ್ರೇಷ್ಠ ಮಟ್ಟದಲ್ಲಿ
ಕಾದಾಡುತ್ತಿರುವ ಎದುರಾಳಿಯನ್ನು ಮಣಿಸಲಾಗದೇ ಹುಡುಗ ಕಂಗೆಡುತ್ತಿರುವಾಗ, ಈತನ ಪ್ರತಿಸ್ಪರ್ಧಿ
ಯಾವುದೋ ಹಂತದಲ್ಲಿ ಒಂದು ತಪ್ಪು ನಡೆಯನ್ನು ಚಲಾಯಿಸಿ ಬಿಡುತ್ತಾನೆ. ಇಂಥ ಸಮಯಕ್ಕಾಗಿಯೇ
ಕಾಯುತ್ತಿದ್ದ ಈ ಹುಡುಗ ತನ್ನೆಲ್ಲ ಶಕ್ತಿಯನ್ನು ಧಾರೆಯೆರೆದು ತನ್ನ ಶ್ರೇಷ್ಠ ಕಿಕ್ಕನ್ನು ಚಲಾಯಿಸುತ್ತಾನೆ.
ಎದುರಾಳಿ ನೆಲಕ್ಕೆ ಬೀಳುತ್ತಿದ್ದಂತೆ, ಈ ಎಡಗೈ ಇಲ್ಲದ ಹುಡುಗ ಶ್ರೇಷ್ಠ ಜೂಡೋ ಪಟುವಾಗಿ ಹೊರಹೊಮ್ಮುತ್ತಾನೆ.
ಹುಡುಗನಿಗೆ ಅಚ್ಚರಿ. ತಾನೇನೋ ಸಣಕಲು
ಸಾಧಾರಣ ವ್ಯಕ್ತಿ. ಅದು ಹೇಗೆ ತಾನು ಶ್ರೇಷ್ಠನಾದೆ ಅಂತ ಚಕಿತನಾಗುತ್ತಾನೆ. ಅದನ್ನೇ ಗುರುವಿನ
ಬಳಿ ಹೇಳಿಕೊಳ್ಳುತ್ತಾನೆ. ಗುರು ಹೇಳುತ್ತಾನೆ: ನೀನು ನನ್ನನ್ನು ನಂಬಿದೆ. ಹೇಳಿದ್ದನ್ನಷ್ಟೇ
ಮಾಡಿದೆ. ನಿನಗೆ ಗೊತ್ತಿಲ್ಲ, ನೀನು ಕಲಿತಿದ್ದು ಜಗತ್ತಿನ ಸರ್ವಶ್ರೇಷ್ಠ ಕಿಕ್. ಅದನ್ನೇ ನೀನು
ಲಕ್ಷ ಬಾರಿ ತಾಲೀಮು ಮಾಡಿದೆ. ನಿಜ ಹೇಳಬೇಕೆಂದರೆ, ನಿನ್ನ ಈ ಕಿಕ್ಕಿಗೆ
ಪ್ರತಿದಾಳಿ ಇಲ್ಲ. ಯಾಕೆಂದರೆ, ಇಂಥ ಪ್ರಹಾರಕ್ಕೆ ತಡೆಯೊಡ್ಡಬೇಕೆಂದರೆ ಎದುರಿಗಿರುವವರು ನಿನ್ನ ಎಡಗೈ ಹಿಡಿದು ನಿನ್ನನ್ನು ಬಗ್ಗಿಸಬೇಕು. ಆದರೆ ನಿನಗೆ ಎಡಗೈಯೇ ಇಲ್ಲ. ಹಾಗಾಗಿ ನಿನಗಿದ್ದ ದೈಹಿಕ
ನ್ಯೂನತೆಯನ್ನೇ ನಿನ್ನ ಅಸ್ತ್ರವಾಗಿಸಬೇಕೆಂದು ನಿನಗೆ ಅದೊಂದೇ ಕಿಕ್ ಕಲಿಸಿದೆ..
*
ಮೊನ್ನೆ ಭಾನುವಾರ ಬೆಳ್ ಬೆಳಿಗ್ಗೆ ಚಹಾಗೆಂದು
ಹತ್ತಿರದ ಹೋಟೆಲಿಗೆ ಹೋಗಿದ್ದೆ. ಪರಿಚಯದ ಹುಡುಗರಿಬ್ಬರು ಬಂದಿದ್ದರು. ನಾಲ್ಕೈದು ವರುಷದವರು. ಅದರಲ್ಲಿ ಒಬ್ಬ ಶ್ರೀಮಂತ. ಇನ್ನೊಬ್ಬ ಅಷ್ಟೇನೂ
ಸ್ಥಿತಿವಂತನಲ್ಲದ ಹುಡುಗನೆಂಬುದು
ನನಗೆ ಗೊತ್ತು. ಸಿರಿವಂತ ಹುಡುಗ ಒಂದು ಹಾಟ್ ಬಾಕ್ಸ್ ಹಿಡಿದುಕೊಂಡು ಇಡ್ಲಿಗೆಂದು
ಬಂದಿದ್ದ. ಇನ್ನೊಬ್ಬ ಸುಮ್ಮನೇ ಆತನ ಜೊತೆಗೆಂದು ಬಂದವನು. ಇಬ್ಬರೂ ಮೊದಲ ಬಾರಿಗೆ ಸ್ವತಂತ್ರವಾಗಿ ತಿಂಡಿ
ಖರೀದಿಗೆ ಬಂದಿದ್ದರೇನೋ ಅಂತ ನನ್ನ ಅಂದಾಜು.
"ಎರಡು
ಇಡ್ಲಿಗೆ ಎಷ್ಟಾಗುತ್ತದೆ?" ಅಂತ ಸಿರಿವಂತ ಹುಡುಗ ಹೋಟೆಲಿನವರಿಗೆ ಕೇಳುತ್ತಿದ್ದ.
'ಹದಿನೈದು ರೂಪಾಯಿ' ಅಂತ ಹೋಟೆಲಿನ ಮಾಲೀಕ ಹೇಳುತ್ತಿದ್ದ. ಸುತ್ತಲಿನ ಜಗತ್ತಿನಲ್ಲಿ ಈ ಹುಡುಗರು ಎಲ್ಲೆಲ್ಲಿ ಏನೇನು
ಗಮನಿಸಿರುತ್ತಾರೋ ಏನೋ, ಸಿರಿವಂತ ಹುಡುಗ ಇನ್ನೇನು ಜೇಬಿನಿಂದ ಹದಿನೈದು ರೂಪಾಯಿ ತೆಗೆಯಬೇಕು
ಅನ್ನುವಷ್ಟರಲ್ಲಿ ಜೊತೆಗಿದ್ದ ಪೋರ ಥಟ್ಟನೇ ಮಾಲೀಕನಿಗೆ ಆವಾಜ್
ಹಾಕಿದ:
"ಹತ್ತು
ರೂಪಾಯಿ ಮಾಡಿಕೊಡಿ ಅಂಕಲ್!"
ಹತ್ತು
ವರ್ಷಗಳ ಬಳಿಕ ಈ ನಮ್ಮ ರೆಬೆಲ್ ಪೋರ ಯಾವುದೋ ‘ಕಿಕ್'ನಲ್ಲಿ ಸಾಮ್ರಾಟನಾಗಬಹುದು.
ಗುರು ಸಿಗಬೇಕಷ್ಟೇ!
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ (ವಿಜಯಕರ್ನಾಟಕದಲ್ಲಿ 07.06.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) |
6 comments:
ಆ ಬಡ ಹುಡುಗನಿಗೆ ಬದುಕೇ ಗುರುವಾಗುತ್ತದೆ. ಪ್ರತಿ ಬಾರಿಯೂ ಹೊಸ ಹೊಸ ವಿಚಾರಗಳನ್ನು ಸುಂದರವಾಗಿ ಹೇಳುತ್ತಿದ್ದೀರಿ. ನಿಮ್ಮ ‘ಮಾಯಾಲಾಂದ್ರ’ದ ಲೇಖನಗಳನ್ನು ಓದುವ ಗಳಿಗೆ ಒಂದು ರಸಗಳಿಗೆಯಾಗಿದೆ.
love your narrative skills Joshi sir. the posts on facebook are equally interesting and informative.
I miss blogs these days, nevertheless - thank you for posting blog links as well. it gets me read some old articles as well.
Keep writing and let you get more and more readers.
~Veena
A trip from govt school to Sri Shankaracharya to Japan, finally at Bangalore. An interesting blog. Well narrated!
ಸುನಾಥ ಸರ್,
ಹೌದು, ನಿಮ್ಮ ಮಾತು ನಿಜ. ನಿರ್ದಿಷ್ಟ ಗುರು ದಕ್ಕದೇ ಹೋದ ಅನೇಕರಿಗೆ ಅವರವರ ಬದುಕೇ ಗುರುವಾಗಿ ಕೈಹಿಡಿದು ನಡೆಸುತ್ತದೆ. ಧನ್ಯವಾದಗಳು.
ವೀಣಾ ಮೇಡಂ,
ನೀವು ಪ್ರತಿಬಾರಿಯೂ ನನ್ನ ಬರೆಹಗಳ ಬಗ್ಗೆ ಎಷ್ಟು ಪ್ರೀತಿಯಿಂದ ಪ್ರತಿಕ್ರಿಯಿಸುತ್ತೀರಿ! ನಿಮ್ಮ ಪ್ರೋತ್ಸಾಹದ ಮಾತುಗಳು ನಿಜಕ್ಕೂ ಖುಷಿ ನೀಡುತ್ತವೆ. ಧನ್ಯವಾದಗಳು
ಶಶಿಕಾಂತ್ ಅವರೇ,
ನನ್ನ ಬ್ಲಾಗಿಗೆ ಸ್ವಾಗತ. ಸಮಯ ಹೊಂದಿಸಿಕೊಂಡು ಅಂಕಣ ಓದಿ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಮತ್ತೇ ಸಿಗುವ,
Post a Comment