Thursday, April 14, 2011

ನನಗೊಬ್ಬಳು ಹೆಂಡತಿಯಿದ್ದಳು


ಕಲೆ: ಸುಘೋಷ್ ನಿಗಳೆ

ನನಗೊಬ್ಬಳು ಹೆಂಡತಿಯಿದ್ದಳು
ಎಲ್ಲರಿಗಿರುವಂತೆ.
ನನಗೊಬ್ಬಳು ಮಗಳಿದ್ದಳು
ಎಲ್ಲರಿಗಿರುವಂತೆ.
-
ಮೊದಮೊದಲು
ಭುಜದೊಳಗೆ ತಂಪಿತ್ತಾ
ತಂಪಿದ್ದುದರಿಂದ ಭುಜಬಲವಿತ್ತಾ
ಗೊತ್ತಿಲ್ಲ;
ಮಜವಂತೂ ಗಜವಾಗಿತ್ತು.
ಒಂದೇ ಒಂದು ಕೊಸರಿತ್ತು
ಮಕ್ಕಳಿಲ್ಲದ ಕೊರತೆಯಿತ್ತು
ಮತ್ತು
ನಂಬಿಕೆಯಿತ್ತು;
ತಮಸೋಮ ಜ್ಯೋತಿರ್ಗಮಯದೊಳಗೆ
-
ಎಂಟೂ ಮುಕ್ಕಾಲು ವರ್ಷ
ಬೆಟ್ಟವನೇರಿ ಕಣಿವೆಯಿಳಿದು
ಬೆವರಿಳಿಸಿ ಸುಸ್ತಾಗಿ
ಕೊನೆಗೊಮ್ಮೆ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ
ಜೋಡಿ ನಾಗರಗಳ ಗಂಟು
ನೋಡಿದ ಬಳಿಕ
ಮಗಳು ಸ್ವಯಂಭೂ!
-
ಸಿಟ್ಟಿತ್ತು ಹೆಂಡತಿಗೆ
ನನ್ನ ಹುಚ್ಚಾಟಗಳ ಬಗ್ಗೆ.
ಹೆಂಡತಿಯ ಹೆಸರೂ ಒಂದೇ
ಮಗಳದೂ ಅದೇ.
ಇದೇ ಕಾರಣಕ್ಕೆ
ಅವಳಿಗೆ ಅಸಹನೆಯಿತ್ತು
ಜಗತ್ತಿನ ಕುಹಕದ ಮಾತಿಗೆ,ನೋಟಕ್ಕೆ.
-
ಕಿರಿಕಿರಿಯಿತ್ತು ಅವಳಿಗೆ
ಮಗಳ ಬಗೆಗಿನ ನನ್ನ ಪ್ರೀತಿಗೆ.
ಅನುಮಾನವಿತ್ತು ತನ್ನದೇ
ಸ್ನಿಗ್ಧ ಚೆಲುವಿನ ಬಗ್ಗೆ.
ಆದರೂ ಆಕೆ ಯಾವತ್ತೂ
ಬೊಗಸೆ ಮುಚ್ಚಿಕೊಂಡವಳಲ್ಲ;
ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ.
-
ಮೊನ್ನೆ ವಿಮಾನ ಪತನಗೊಂಡಾಗ
ಸುಟ್ಟು ಹೋದಳು
ಬೊಗಸೆ ಮುಚ್ಚಿತ್ತು
ನನಗೆ ಅಳಲಾಗಲಿಲ್ಲ ಕಿರುಚಲಾಗಲಿಲ್ಲ.
ಕಣ್ಣೆದುರಿಗೆ ನಿಂತ ನಿಜದ
ಚಿತ್ರಪಟ ನೋಡಿ ಸಂಕಟಗೊಂಡೆ.
ಹೌದು,ಇಷ್ಟುದಿನ ಅವಳು ನನಗೆ
ಬರೇ ಹೆಂಡತಿಯಾಗಿರಲಿಲ್ಲ;
ಚೊಕ್ಕಟ ಮಗಳಾಗಿದ್ದಳು..
---
(ಟಿಪ್ಪಣಿ: 'ಅವಧಿ' ಬ್ಲಾಗ್ ನಲ್ಲಿ ಪ್ರಕಟಗೊಂಡಿದೆ.)

1 comment:

siddu said...

Joshi.........Finally you hit the blogspot....keep writing and keep us guessing