Thursday, April 14, 2011

ಕೆಟ್ಟತಲೆಯ ನಾಲ್ಕು ಘಟ್ಟಗಳು


ಪಾಠ ಒಂದು:
ಅ-ಅಗಸ
ಆ-ಆನೆ
ಈತ ಗಣಪ ಆತ ಈಶ
ಈಶನ ಮಗ ಗಣಪ
ಕಮಲಳ ಲಂಗ ಥಳಥಳ
ಸೂರ್ಯನ ಬೆಳಕು ಫಳಫಳ..
ವ್ಹಾ! ಎಂಥ ಸರಳರೇಖೆ.
ಪಾಠ ಎರಡು:
ಜಲಜನಕವು
ಆಮ್ಲಜನಕದೊಂದಿಗೆ
ವರ್ತಿಸುತ್ತಿರುವಾಗ-
ಅವನು
ಅವಳ ಹೆಸರನ್ನು
ನೀಲಿ ಹೃದಯದೊಂದಿಗೆ
ಡೆಸ್ಕಿನಲ್ಲಿ ದಟ್ಟವಾಗಿ
ಕೆತ್ತುತ್ತಿದ್ದ.
ಮುಂದಿನ ಪಿರಿಯಡ್ಡು
ಅಭಿಜ್ಞಾನ ಶಾಕುಂತಲ.
ಹುಡುಗನ ಪೆನ್ನಲ್ಲಿ
ಹನಿ ಇಂಕಿಲ್ಲ.
-
ಮುಂಜಾನೆಯ ಕನಸು
ಯಾವತ್ತೂ ನಿಜವಾಗದು.
ಕನಸು ನನಸಾಗುವ
ಅವಸರದಲ್ಲಿ
ಕನಸು
ಕನವರಿಕೆಯಾಗುವ
ಗೊಂದಲವೇ ಹೆಚ್ಚು
ಸುಂದರ ಮತ್ತು
ಅಪೇಕ್ಷಣೀಯ.
ಸದ್ಯ,
ಮುಂಜಾನೆಯ ಕನಸು
ಬರೀ ಸಿಹಿನಿದ್ದೆ
ಮಾತ್ರ ತರಬಲ್ಲದು.
-
ಎಲ್ಲ ಮರೆಯಬೇಕಿದೆ
ಹಿಂದೆ ಸಾಗಬೇಕಿದೆ.
ಕಮಲಳ ಲಂಗವನ್ನು
ಮತ್ತೊಮ್ಮೆ ಥಳಥಳಿಸಬೇಕಾಗಿದೆ
ಶಕುಂತಲೆಯ ಕತೆ
ಸರಿಯಾಗಿ ಬರೆಯಬೇಕಿದೆ
ಅಕಟಕಟಾ,
ಎಷ್ಟು ಬೈದರೂ
ಬರಲಾರ ದೂರ್ವಾಸ
ಕೊಡಲಾರ
ಮರೆವಿನ ಶಾಪ.
-
ಅವರು ಅಂತಾರೆ:
ಮಾನವನಿಗೆ
ಏಳೇ ಜನ್ಮ.
ಮುಗಿಸಿಯಾಗಿದೆ
ಏಳೇಳು ಜನ್ಮ.
ಆದರೂ
ಮತ್ತೊಮ್ಮೆ ಹುಟ್ಟುವಾಸೆ
at least,
ಅವಳ ಮನೆಯ
ಎಮ್ಮೆ ಕಟ್ಟುವ
ಗೂಟವಾಗಿ!
---

No comments: