Thursday, April 14, 2011

"ಆಡೂ.. ಆಟ ಆಡೂ.."


Courtesy: ರೋನಿ ಸ್ಯಾನ್ 



ಅಂಥದೊಂದು ಹೆಸರಿನ ಆಟ ಜುಹೂ ಬೀಚಿನಲ್ಲಿ ನಡೆಯುತ್ತದೆಯಂತೆ.
ಹಾಗಂತ ಯಾರೋ ಒಂದಿಬ್ಬರು ಹೇಳಿದ್ದು ಮೊನ್ನೆ ಅಲ್ಲಿಗೆ ಹೋದಾಗ ನೆನಪಿಗೆ ಬಂತು.
ವಿಚಿತ್ರವೆಂದರೆ,ಈಜು ಬಾರದ ನನಗೆ ಜುಹೂ ಬೀಚು ಯಾಕೋ ರುದ್ರವಾದಂತೆ,ದರಿದ್ರದಂತೆ 
ಕಾಣಿಸುತ್ತಿತ್ತು.ಮರಳ ದಂಡೆಯ ಮೇಲೆ ಮೈಚಾಚಿ ಮಲಗಿದ್ದ ನೂರೆಂಟು ವಿದೇಶಿ ಲಲನೆಯರು
ನನ್ನಲ್ಲಿದ್ದ ಪೋಲಿ ಮನಸಿಗೆ ಕೊಂಚ ರಮಣೀಯತೆ ತಂದು ಕೊಟ್ಟಿದ್ದೇನೋ ನಿಜ.
ಅಷ್ಟೇ ಅಲ್ಲ, ಅಬ್ಬರಿಸಿ ಬರುತ್ತಿದ್ದ ಸಮುದ್ರದ ತೆರೆಗಳು ನನ್ನನ್ನು ಇನ್ನಿಲ್ಲದಂತೆ ಭಯ ಬೀಳಿಸಿ ಅಲ್ಲಿಂದ ಓಟ ಕೀಳುವಂತೆ 
ಮಾಡುತ್ತಿದ್ದರೂ ಈ ಲಲನೆಯರು ನನ್ನಲ್ಲಿ  ಸುಳ್ಳು ಸುಳ್ಳೇ ಧೈರ್ಯ ಬರುವಂತೆ ಮಾಡಿ ಅಲೆಗಳ ವಿರುದ್ದ ದಾದಾಗಿರಿ 
ಮಾಡಿಸಿದ್ದೂ ಸುಳ್ಳಲ್ಲ..

ಇಂತಿಪ್ಪ  ಆ ಬೀಚಿನ ಒಂದು ಬಂಡೆಯ ಮೇಲೆ ಕುಳಿತಿದ್ದ ಪೋರನೊಬ್ಬ ಪದೇ ಪದೇ ನನ್ನ ಗಮನ ಸೆಳೆಯುತ್ತಿದ್ದ.
ತುಂಬ ಹಸಿದಿದ್ದರಿಂದಲೋ ಏನೋ, ಆತನ ಕಣ್ಣುಗಳೆಲ್ಲ ಬಾಡಿ ಹೋದಂತಿದ್ದವು.ಸುಮ್ಮನೆ ಕುತೂಹಲಕ್ಕೆಂದು 
ಆತನ ಹತ್ತಿರ ಹೋದೆ.ನನ್ನನ್ನು ನೋಡುತ್ತಲೇ ಬಂಡೆಯಿಂದ ಟಣಕ್ಕೆಂದು ಜಿಗಿದ ಪೋರ ಆಸೆಯಿಂದ,
'ಆಟ ನೋಡ್ತೀರಾ ಸಾಬ್,ಸಾವಿನ ಆಟ! ಬರೀ ಹತ್ತು ರೂಪಾಯಿಗೆ ಆಟ ತೋರಿಸ್ತೇನೆ' ಅಂದ.

ಇದೆಂಥ ಆಟ? ಸಾವಿನ ಆಟ? ನನಗ್ಯಾಕೋ ಒಂಥರಾ ದಿಗಿಲಾಯಿತು.ಹೇಳಿಕೇಳಿ ಮುಂಬೈಗೆ ಬಂದಿರುವದೇ ಮೊದಲ ಬಾರಿಗೆ.
ಅಲ್ಲಿನ ಥಳಕು,ಮೋಸ-ವಂಚನೆಗಳನ್ನು ಕೇಳಿ ತಿಳಿದಿದ್ದ ನನಗೆ ಯಾಕೋ ಹುಡುಗನ ಮೇಲೆ ಅನುಮಾನ ಬಂತು.
ತಕ್ಷಣ, 'ಇಲ್ಲಪ್ಪ,ನನಗೆ ಅಂಥದ್ದನ್ನೆಲ್ಲ ನೋಡೋಕೆ ಇಷ್ಟವಿಲ್ಲ..' ಅನ್ನುತ್ತ ಆ ಪೋರನನ್ನು ಆದಷ್ಟು avoid ಮಾಡಿ 
ಮುನ್ನಡೆಯತೊಡಗಿದೆ.

ಹುಡುಗ ಜಪ್ಪಯ್ಯ ಅಂದರೂ ಬಿಡುವಂತೆ ಕಾಣಲಿಲ್ಲ.ಆತನದು ಮತ್ತದೇ ಗೋಗರೆತ:
"ಸಾಬ್,ಬೆಳಿಗ್ಗೆಯಿಂದ ಏನೂ ತಿಂದಿಲ್ಲ.ಕತ್ತಲಾಗುತ್ತ ಬಂತು.ಆಟ ನೋಡಿ ಸಾಬ್,ಬರೀ ಹತ್ತು ರೂಪಾಯಿಗೆ ಸಾವಿನ ಆಟ.." ಅಂದ.
ಥೋ,ಇವನ್ಯಾಕೋ ಬಿಡೋ ಆಸಾಮಿಯಲ್ಲ ಅಂದುಕೊಂಡು ಅಲ್ಲೇ ಹತ್ತಿರವಿದ್ದ ರಾತ್ರಿ ಬೀಟ್ ಪೊಲೀಸನಿಗೆ ಸನ್ನೆ ಮಾಡಿ ಕರೆದೆ.
"ನೋಡಿ..ಈ ಹುಡುಗ ಸುಮ್ನೆ ಆಗ್ಲಿಂದ ಕಾಡ್ತಿದಾನೆ.ಬರೀ ಹತ್ತು ರೂಪಾಯಿಗೆ ಅದೇನೋ ಸಾವಿನ ಆಟ ತೋರಿಸ್ತಾನಂತೆ.." 
ಎಂದು ಅಸಹನೆ ವ್ಯಕ್ತಪಡಿಸಿದೆ.

ಪೋಲೀಸಪ್ಪ ಆ ಹುಡುಗನನ್ನು ಮೇಲಿನಿಂದ ಕೆಳಕ್ಕೊಮ್ಮೆ ಕೆಕ್ಕರಿಸಿ ನೋಡಿದ.
"ಥತ್ತೇರಿ..ಬೆಳಿಗ್ಗೆಯಿಂದ ಇವನದು ಬರೀ ಇದೇ ಆಗೋಯ್ತು. ಇಲ್ಲಿಗೆ ಬರೋ ಟೂರಿಸ್ಟುಗಳ ತಲೆಯೆಲ್ಲ ತಿಂತಾನೆ ಸಾರ್..
ಇಂಥೋರನ್ನ ಸುಮ್ನೆ ಬಿಡಬಾರ್ದು.ಹಿಡ್ಕೊಂಡು ನಾಲ್ಕು ಒದೀಬೇಕು.ಏಯ್,ಹರಾಮ್ ಖೋರ್.." ಅನ್ನುತ್ತ ಪೋಲೀಸಪ್ಪ 
ಆ ಹುಡುಗನತ್ತ ತಿರುಗಿದಾಗ ಪೋರ ಅದ್ಯಾವಾಗಲೋ ಅಲ್ಲಿಂದ ಮಾಯವಾಗಿದ್ದ.
'ಭಾಗ್ ಗಯಾ ಸಾಲಾ..' ಅಂದುಕೊಳ್ಳುತ್ತ ಪೋಲಿಸು ಕೂಡ ಅಲ್ಲಿಂದ ಕಣ್ಮರೆಯಾದ.
ನಾನು ಮಾತ್ರ ನಿಶ್ಚಿಂತೆಯಿಂದ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಪೋರ ದಿಢೀರ್ ಅಂತ ಮತ್ತೇ ಹಾಜರ್!

"ಸಾಬ್ ಸಾಬ್,ಸಾವಿನ ಆಟ..ಬರೀ ಏಳೂವರೆ ರೂಪಾಯಿಗೆ!" ಅಂತ ಕುಂಡೆ ತುರಿಸಿಕೊಳ್ಳುತ್ತಾ ಹಲ್ಕಿರಿದ.       
ನನಗಂತೂ ತಲೆಕೆಟ್ಟುಹೋಯಿತು.
"ತಗೋ ಮಗನೇ..ಅದೇನು ಕಿಸಿತೀಯೋ ಕಿಸಿ!" ಅನ್ನುತ್ತ ಏಳೂವರೆ ಬೀಸಾಕಿದೆ.
ಹುಡುಗನ ಕಣ್ಣಲ್ಲಿ ಸಣ್ಣದೊಂದು ಮಿಂಚು.ಗಬಕ್ಕೆಂದು ಹಣ ಎತ್ತಿಕೊಂಡವನೇ ಅಲ್ಲೇ ದೂರದಲ್ಲಿ ಕುಡಿಯುತ್ತ ಕುಳಿತಿದ್ದ 
ಕುಡುಕನೊಬ್ಬನಿಗೆ ಕೊಟ್ಟುಬಂದ.ಅವನ್ಯಾರು? ಅಂತ ಕೇಳಿದ್ದಕ್ಕೆ 'ಮೇರಾ ಬಾಪ್ ಸಾಬ್,ದಿನವೆಲ್ಲಾ 
ಕುಡೀತಾನೆ..' ಅನ್ನುತ್ತ ಎದುರುಗಡೆಯಿದ್ದ ಬೃಹತ್ ಬಂಡೆಯ ಕಡೆಗೆ ಓಡತೊಡಗಿದ. 
ನನಗಂತೂ ಹುಡುಗನ ವರ್ತನೆ,ಅದರ ತಳಬುಡ ಒಂದೂ ಅರ್ಥವಾಗಲಿಲ್ಲ. ಜೊತೆಗೆ ವಿಪರೀತ 
ಸಿಟ್ಟೂ ಬಂತು. ಹುಡುಗನನ್ನು ಹಿಡಿದು ನಾಲ್ಕು ತದುಕಲಾ ಅಂತ ನೋಡಿದರೆ,ಆತ ಅದ್ಯಾವ ಮಾಯದಲ್ಲೋ 
ಆ ಬೃಹತ್ ಬಂಡೆಯನ್ನೇರಿ ಕುಳಿತುಬಿಟ್ಟಿದ್ದ.

"ಹೊಯ್, ಆಟ ತೋರಿಸ್ತೀನಂತ ಹಣ ತಗೊಂಡು ಅಲ್ಲೇನು ಮಾಡ್ತಿದೀಯಾ ಮಗನೇ.." ಅಂತ ಕೂಗಿದೆ.
ಪೋರ ನನ್ನ ಸಿಟ್ಟಿಗೆ ಕೊಂಚ ದಿಗ್ಭ್ರಮೆಗೊಂಡವನಂತೆ  ಕಂಡುಬಂದ. ತಕ್ಷಣ ಸುಧಾರಿಸಿಕೊಂಡು ಮೈಮೇಲಿದ್ದ 
ಚಿಂದಿ ಬಟ್ಟೆ ಕಳಚಿ ಎಚ್ಚರಿಕೆಯಿಂದ ನಿಧಾನವಾಗಿ ಹೆಜ್ಜೆಯಿಡುತ್ತ ಬಂಡೆ ಅಂಚಿಗೆ ಬಂದು ನಿಂತು ಕೂಗು ಹಾಕಿದ:

"ತೋರಿಸ್ತೀನಿ ಸಾಬ್,ಸಾವಿನ ಆಟ ತೋರಿಸ್ತೀನಿ.ಮೋಸ ಮಾಡಲ್ಲ.ನೀವ್ಯಾವತ್ತೂ ಮರೆಯೋದಿಲ್ಲ.ಅಂಥಾ ಆಟ 
ತೋರಿಸ್ತೀನಿ.ಈಗ ನೋಡಿ,ಮೇಲಿಂದ ಜಿಗೀತೇನೆ.ನಂಗೆ ಈಜು ಬರೋಲ್ಲ ಸಾಬ್,ಆದರೂ ಜಿಗೀತೇನೆ.ನಾನು ಮೂರನೇ 
ಸಲ ಮುಳುಗಿದಾಗ ನಮ್ಮಪ್ಪನ್ನ ಕರೀರಿ.ಪ್ರತಿಸಲ ಅವನೇ ಬರೋದು..ಅವನಿಗೆ ಈಜು ಬರುತ್ತೆ.ನೆನಪಿರಲಿ ಸಾಬ್,
ಮೂರನೇ ಸಲ ಮುಳುಗಿದಾಗ ಮರೀಬೇಡಿ. ತಾಲಿಯಾ..ತಾಲಿಯಾ.." ಅಂದವನೇ ಬಂಡೆಯ ಮೇಲಿಂದ ಜಿಗಿದೇ ಬಿಟ್ಟ!

ನಾನು ನಿಜಕ್ಕೂ ಹುಚ್ಚನಾಗಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಹೇಡಿಯಾಗಿದ್ದೆ. ಕೆಲನಿಮಿಷಗಳ ಹಿಂದಷ್ಟೇ ಕಂಡಿದ್ದ ಫಾರಿನ್  
ಲಲನೆಯರು ಯಾಕೋ ನನ್ನತ್ತ ಕೈತೋರಿಸಿ ತೋರಿಸಿ thumb down ಮಾಡಿದಂತೆ ಭ್ರಮೆ.
ಆ ಪೋರ ಅದೆಷ್ಟು ಸಲ ಸಮುದ್ರದ ನೀರಲ್ಲಿ ಮುಳುಗು ಹಾಕಿದನೋ,ಸೂರ್ಯಾಸ್ತದ ಆ ಕತ್ತಲಲ್ಲಿ ಕಾಣಿಸಲೇ ಇಲ್ಲ!
ಆತನನ್ನು ಅಲ್ಲಿಂದ ಎತ್ತಬೇಕಾಗಿದ್ದ ಅವನಪ್ಪ ಮಾತ್ರ ದೂರದಲ್ಲೆಲ್ಲೋ ಕುಡಿದು ವಾಂತಿ ಮಾಡಿಕೊಳ್ಳುತ್ತಿದ್ದ. 
ಅದೇ ಹಳೇ ಪೋಲೀಸು ಆ ಕುಡುಕನಿಗೆ ರಪರಪ ಬಾರಿಸುತ್ತ ಬಯ್ಯುತ್ತಿದ್ದ:
"ಬೋಳಿಮಕ್ಳಾ..ಕುಡಿದು ಕುಡಿದು ಟೂರಿಷ್ಟು ಜಾಗ ಗಲೀಜು ಮಾಡ್ತಿರಾ.. ನಾಲ್ಕು ಒದೀಬೇಕು ನಿಮಗೆಲ್ಲಾ..."

--  

 (ಟಿಪ್ಪಣಿ: ಬಹುಶಃ ಒಂದೂವರೆ ದಶಕದ ಹಿಂದೆ ದೂರದರ್ಶನದಲ್ಲಿ ನೋಡಿದ ಯಾವುದೋ ಡಾಕ್ಯುಮೆಂಟರಿ ಚಿತ್ರದ 
ಸ್ಪೂರ್ತಿಯಿಂದ ಬರೆದಿದ್ದಿದು.ಸುಮಾರು ವರ್ಷಗಳ ಹಿಂದೆಯೇ 'ಹಾಯ್' tabloid ನಲ್ಲಿ ಪ್ರಕಟಗೊಂಡಿದೆ.)

4 comments:

Anonymous said...

ಅದ್ಭುತವಾಗಿದೆ ಜೋಶಿಯವರೇ, ಎಲ್ಲಿ ಕಳೆದು ಹೋದ್ರಿ ಅಂತ ಅನ್ಕೊಂಡಿದ್ದೆ.
ಆದಷ್ಟು ಬೇಗ ಹೊಸ ಹೊಸ ಕಥೆ,ಕವನ ಬರಲಿ. ಶುಭವಾಗಲಿ
~ಸುರೇಶ

sunaath said...

ಕೊನೆಯಲ್ಲಿ ಬರುವ ಟಿಪ್ಪಣಿಯನ್ನು ಓದುವವರೆಗೂ, ಇದು ಸತ್ಯ ಘಟನೆ ಎಂದು ಭಾವಿಸಿ, ನನ್ನ ಮೈ ಜುಮ್ ಎಂದಿತ್ತು.
ಅಬ್ಬಾ, ಕೊನೆಗೊಮ್ಮೆ ನಿಟ್ಟುಸಿರು ಬಿಟ್ಟೆ.

Anonymous said...

ಕಥೆ ತುಂಬಾ ಚೆನ್ನಾಗಿದೆ.
-ನವ್ಯಾಂತ

ರಾಘವೇಂದ್ರ ಜೋಶಿ said...

ಥ್ಯಾಂಕ್ಯೂ ನವ್ಯಾಂತ.
ಬ್ಲಾಗ್ ಗೆ ಬಂದು ಕಥೆ ಮೆಚ್ಚಿಕೊಂಡಿದ್ದಕ್ಕೆ.ಮತ್ತೇ ಸಿಗೋಣ. :-)